Logo

VHP PUBLICATIONS

Hindu Vani


expand_more

ವ್ಯಕ್ತಿ

By ಬಿ ಈ ಸುರೇಶ್, ಬೆಂಗಳೂರು

ಸೋನಮ್ ವಾಂಗ್‌ಚುಕ್ ಎನ್ನುವ ಮಾರುವೇಷ

ಕಾಶ್ಮೀರದಲ್ಲಿ ಕೇಂದ್ರಾಡಳಿತ ಭಾಗವಾಗಿರುವ ಲಡಾಖ್ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ಆಗ್ರಹಿಸುತ್ತಿರುವ ಸೋನಮ್ ವಾಂಗ್‌ಚುಕ್, ರಾಮೊನ್ ಮೆಗಾಸ್ಸೆಸೆ ಪ್ರಶಸ್ತಿಯನ್ನು ಪಡೆದವರು. ಮದರ್ ಎಂದು ಕರೆಯಲ್ಪಡುವ ಥೆರೆಸಾ, ಅರವಿಂದ ಕ್ರೇಜಿವಾಲ್, ಬೆಜವಾಡ ವಿಲ್ಸನ್, ಮೊದಲಾದ ವಿವಾದಿತ ವ್ಯಕ್ತಿಗಳೂ ಕೂಡಾ ಈ 'ಹೆಗ್ಗಳಿಕೆಗೆ' ಪಾತ್ರರಾದವರು. ಈ ಪ್ರಶಸ್ತಿಯ ಹಿನ್ನೆಲೆಗೂ ಒಂದಷ್ಟು 'ಇತಿಹಾಸ'ವಿರುವುದರಿಂದ ಸೋನಮ್ ವಾಂಗ್‌ಚುಕ್ ಅದನ್ನು ಪಡೆದಾಗ ಕೆಲವರು ಸಹಜವಾಗಿ ಅದೊಂದು ವಿಶೇಷವೆಂದು ಪರಿಗಣಿಸಿದುದು ಉಂಟು.

ವ್ಯಕ್ತಿ

ಸೋನಮ್ ವಾಂಗ್‌ಚುಕ್ 2025ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಲ್ಲಿ ಅವರು ನೆರೆಯ ದೇಶಗಳಾದ ನೇಪಾಳ, ಬಂಗ್ಲಾದೇಶ, ಮತ್ತು ಶ್ರೀಲಂಕಾಗಳಲ್ಲಿ ಸರ್ಕಾರಗಳು ಬದಲಾದುದನ್ನು ಮೆಚ್ಚಿ ಮಾತನಾಡಿದ ವಿಡಿಯೋಗಳು ವಿಶೇಷವಾಗಿ ಕಂಡು ಬಂದಿದ್ದವು.

ಪ್ರವಾಸಿಗರ ಮೆಚ್ಚಿನ ತಾಣವಾಗಿದ್ದ ಲಡಾಖ್ ಪ್ರದೇಶದ ಲೇಹ್ ಈಗ ಅಶಾಂತಿಯ ಬೀಡಾಗಿದೆ. ನಾಲ್ಕು ಮಂದಿ ಬಲಿಯಾಗಿ ನಡೆದ ವಿರೋಧ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಈ ನಡುವೆ ಹವಾಮಾನ ಕಾರ್ಯಕರ್ತ(Climate Activisit) ಎಂದು ಕರೆದುಕೊಳ್ಳುವ ಈ ವಾಂಗ್‌ಚುಕ್ ಕೊಡುತ್ತಿರುವ ಪ್ರಚೋದನಕಾರಿ ಹೇಳಿಕೆಗಳು ಸ್ಥಳೀಯರನ್ನು ಕೇಂದ್ರ ಸರ್ಕಾರದ ವಿರುದ್ಧ ಎತ್ತಿಕಟ್ಟುವಂತೆ ಮಾಡುತ್ತವೆ. ಲಡಾಕಿನ ಪ್ರಕ್ಷುಬ್ಧತೆಗೆ ಕುಮ್ಮಕ್ಕು ನೀಡುವ ಈ ವರದಿಗಳು ಈ ಹಿಂದೆಯೂ ಬಂದಿವೆ. ಆದರೆ ಇವು ಇಂದಿನ ಪರಿಸ್ಥಿತಿಗೆ ನೇರ ಕಾರಣವಾಗಿ ಕಂಡು ಬಂದುದು ಮಾತ್ರ ಇತ್ತೀಚಿಗೆ ಈಚೆಗೆ ಬಂದ ವಿಡಿಯೋ ಒಂದರಲ್ಲಿ ಸೋನಮ್ ವಾಂಗ್‌ಚುಕ್ ತಮ್ಮ ಹಿಂಬಾಲಕ ಪ್ರದರ್ಶನಕಾರರಿಗೆ ಮುಖಗವಸುಗಳನ್ನೂ ಮುಖವಾಡಗಳನ್ನೂ ಧರಿಸಿ ಬರಲು ಕರೆ ನೀಡಿದರು. ಇದು ಕೆಮರಾಗಳಿಂದ ತಮ್ಮ ಮುಖವನ್ನು ಮರೆಮಾಡುವ ಪ್ರಯತ್ನವೆನ್ನುವುದು ನಿಶ್ಚಿತ. ಇಂತಹ ಪ್ರಯತ್ನಗಳು ಹಿಂಸಾತ್ಮಕ ಪ್ರದರ್ಶನಗಳ ಕಾಲದಲ್ಲಿ ಮಾತ್ರ ಕಾಣಬರುತ್ತವೆ. ಈ ಸಂದರ್ಭಗಳಲ್ಲಿ ಸ್ವತಃ ವಾಂಗ್‌ಚುಕ್‌ ಕೂಡಾ ಮುಖವಾಡವನ್ನು ಧರಿಸಿ ಬರುತ್ತಿದ್ದರು. ಇದಕ್ಕೇನು ಕಾರಣವೆನ್ನುವುದನ್ನು ವಾಂಗ್‌ಚುಕ್ ಸೃಷ್ಟಿಕರಣವನ್ನು ಕೊಡಬೇಕಾಗಿದೆ.

ವ್ಯಕ್ತಿ

ಕೆಲವೊಂದು ವಿಡಿಯೋಗಳಲ್ಲಿ ವಾಂಗ್‌ಚುಕ್ ಭಾರತೀಯ ಸೇನೆಯ ಬಗ್ಗೆಯೂ ಅಪಾಯಕಾರಿ ಹೇಳಿಕೆಯನ್ನು ನೀಡುತ್ತಲಿರುವುದು ಕಾಣಬರುತ್ತಿವೆ. 'ಭಾರತದ ಗಡಿ ಪ್ರದೇಶದ ಅತಿ ದುರ್ಬಲ ರಾಜ್ಯಗಳಲ್ಲಿ ಅತಿ ಪ್ರಬಲವಾದ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಲಡಾಕಿನಲ್ಲಿ ಸಿಖ್ ಮತ್ತು ಗುರ್ಖಾ ರೆಜಿಮೆಂಟುಗಳಿವೆ. ಲಡಾಕಿನ ಜನರಿಗೆ ರಕ್ಷಣೆಯಿಲ್ಲ. ಅಲ್ಲಿ ಪ್ರಜಾಪ್ರಭುತ್ವವೆನ್ನುವುದಿಲ್ಲ. ಸಿಖ್ ತುಕಡಿಗಳು ಪಂಜಾಬಿನ ಪರಿಸ್ಥಿತಿಯನ್ನು ಕಂಡು ಚಿಂತಿತವಾಗಿವೆ. ಸೈನ್ಯದಲ್ಲಿ ಅಗ್ನಿವೀರ ಯೋಜನೆಯನ್ನು ಪ್ರಾರಂಭಿಸಿದುದರಿಂದಾಗಿ ಗೂರ್ಖಾ ಸೈನಿಕರು ಕಳವಳ ಗೊಂಡಿರುವರು. ಇನ್ನೂ ಹೇಳಬೇಕೆಂದರೆ ಇವರಲ್ಲಿ ಕೆಲವರು ಚೀನಾದ ಸೈನ್ಯಕ್ಕೆ ಸೇರ್ಪಡೆಯಾಗುತ್ತಿರುವರು. ಗುರ್ಖಾ ಸೈನಿಕರು ನಿರ್ಭಯರೆಂದು ಹೆಸರು ಪಡೆದವರು. ಸಾವಿಗೆ ಬೆದರದ ಸೈನ್ಯವಿದೆ ಎಂದಾಗ ಒಂದೇ ಅದು ಸುಳ್ಳು ವರ್ಣನೆಯಾಗಿರಬೇಕು ಅಥವಾ ಆ ಮಾತು ಗುರ್ಖಾ ಸೈನಿಕರ ಕುರಿತು ಇದ್ದಿರಬಹುದು ಎನ್ನುವ ಮಾತು ಹೊಗಳಿಕೆಯ ಬದಲಾಗಿ ಅಲ್ಲೀಗ ತಳಮಳದ ಪರಿಸ್ಥಿತಿಯು ಕಾಣಬರುತ್ತಿದೆ. ಇದನ್ನು ಪತ್ರಿಕಾ ಮಾಧ್ಯಮಗಳು ಮರೆಮಾಚುತ್ತಿವೆ.” ವಾಂಗ್ ಚುಕ್‌ ಈ ಮಾತುಗಳು ಬರಿಯ ಟೀಕೆ ಮಾತ್ರವಾಗಿರದೆ ಅತಿಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿತವಾದ ಸೈನ್ಯದ ಕುರಿತು ಸಂಶಯಕ್ಕೆ ದಾರಿ ಮಾಡಿಕೊಡುತ್ತಿವೆ. ಲಡಾಕಿನ ತರುಣರಲ್ಲಂತೂ ಅಶಾಂತಿಯನ್ನು ಹಬ್ಬಿಸುತ್ತಿವೆ.

ಇಷ್ಟೇ ಅಲ್ಲದೆ ಮಧ್ಯಪ್ರಾಚ್ಯ ದೇಶಗಳಲ್ಲಿ ಹಬ್ಬಿದ ಅರಬ್ ಸ್ಟಿಂಗ್' ಅರಾಜಕತೆಯನ್ನು ಅವರು ಬೆಂಬಲಿಸಿದುದೂ ಇದೆ. 'ಸರ್ಕಾರವು ನಮ್ಮ ಆಗ್ರಹವನ್ನು ಒಪ್ಪದೆ ಹೋದರೆ ಇಂತಹ ಸರ್ಕಾರವನ್ನು ಉರುಳಿಸಿಬಿಡಲು ನಾನು ನನ್ನ ಜೀವನವನ್ನು ಮುಡಿಪಾಗಿಡುತ್ತೇನೆ. ನೀವು 'ಅರಬ್ ಸ್ಟಿಂಗ್' ಎನ್ನುವ ಮಾತನ್ನು ಕೇಳಿರುವಿರಾ? ಅರಬ್ ದೇಶಗಳಲ್ಲಿ ಈ ಹೆಸರಿನಲ್ಲಿ ಕ್ರಾಂತಿಯು ನಡೆಯಿತು. ಆರು ಸರ್ಕಾರಗಳು ಅದರಿಂದ ಬದಲಾದವು. ಲಿಬಿಯಾದ ಸರ್ಕಾರ ಉರುಳಿತು. ಯೆಮನ್ ಸರ್ಕಾರ ಬದಲಿತು. ಸಿರಿಯಾದಲ್ಲಿ ಅಂತರ್ಯುದ್ಧ ನಡೆಯಿತು. ಇವೆಲ್ಲವು ಮಹಮ್ಮದ್ ಚೌಝಿಝಿ ಎನ್ನುವ ಏಕವ್ಯಕ್ತಿಯಿಂದ ಆದುದು. ಹಾಗಿರುವಾಗ ನಮ್ಮಂತವರಿಂದ ಅದನ್ನು ಮಾಡಲು ಅಶಕ್ಯವೇ? ಎಂದು ಸೋನಮ್ ವಾಂಗ್‌ಚುಕ್ ಎಚ್ಚರಿಕೆ ನೀಡಿದ್ದರು.

ಇದು ನೇರವಾಗಿ ಭಾರತದ ವಿರುದ್ಧ ನೀಡಿದ ಹಿಂಸಾತ್ಮಕ ದಂಗೆಯ ಕರೆ. ಅರಬ್‌ ಸ್ಟಿಂಗ್‌ನ್ನು ವೈಭವೀಕರಿಸಿ ಅಲ್ಲಿ ನಡೆಯುವ ಅಂತರ್ಯುದ್ಧ ಮತ್ತು ಸಾವು ನೋವುಗಳನ್ನು ಮೆಚ್ಚುವುದು ಅರಾಜಕತೆಗೆ ನೀಡುವ ಆಹ್ವಾನ. ಇನ್ನು ನೆರೆಹೊರೆಯ ದೇಶಗಳನ್ನು ಉಲ್ಲೇಖಿಸುತ್ತ ಭಾರತದ ಸ್ಥಿತಿಯನ್ನು ಅಲ್ಲಿಗೆ ಹೋಲಿಸಿ ಹೀಗಳೆಯುವುದೂ ಅವರಿಂದ ನಡೆಯುತ್ತದೆ. “ಪಾಕಿಸ್ತಾನದ ಸ್ಕಾರ್ದು ಮತ್ತು ಬಾಲ್ಟಿಸ್ತಾನಗಳಲ್ಲಿ ಅವರ ಸ್ವಾಯತ್ತ ಶಾಸನ ಸಭೆಗಳಿವೆ. ಚೀನಾದಲ್ಲಿ ಟಿಬೇಟ್ ಸೇರಿದಂತೆ 5 ಸ್ವಾಯತ್ತ ಪ್ರದೇಶಗಳಿವೆ. ವಾಂಗ್‌ಚುಕ್ ವರ್ಣಿಸುವಂತೆ ಅಲ್ಲಿನ ನಾಗರಿಕರು ಲಡಾಕಿಗಿಂತ ಹೆಚ್ಚಿನ ಅಧಿಕಾರಗಳನ್ನು ಅನುಭವಿಸುತ್ತಿರುವರು”. 

ಸೂಕ್ಷ್ಮಾತಿ ಸೂಕ್ಷ್ಮವಾಗಿರುವ ಗಡಿ ಪ್ರದೇಶಗಳಲ್ಲಿ ಇಂತಹ ಹೇಳಿಕೆಗಳು ಅಪಾಯಕಾರಿ ಪರಿಸ್ಥಿತಿಯನ್ನು ಉಂಟುಮಾಡುತ್ತವೆ. ಭಾರತದಲ್ಲಿ ತಾರತಮ್ಯ ಆಡಳಿತವಿದೆ ಎನ್ನುವ ಸುಳ್ಳು ಕಥನದ ಮೂಲಕ ಅತೃಪ್ತಿಯನ್ನು ಹಬ್ಬಿಸುವುದು ಇಂತಹ ಪ್ರಚಾರದ ಉದ್ದೇಶವಾಗಿದೆ. ಸೆಪ್ಟೆಂಬರ್ 10ರಂದು ದುಲೆಹನಲ್ಲಿ ಅವರೊಂದು ಕರೆ ನೀಡಿದರು. 'ನೇಪಾಳ, ಬಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ತಂದ ಬದಲಾವಣೆಯನ್ನು ಜನರು ಇಲ್ಲೂ ತರಬಲ್ಲರೇ?” ಎಂದು ಕೇಳುತ್ತಾ ನೇಪಾಳದ ತರುಣರನ್ನು ಅನುಸರಿಸಿ ಎಂದು ಹೇಳುವ ವಾಂಗ್‌ಚುಕ್ ಲಡಾಕಿನ ತರುಣರಿಗೆ ದೇಶದಲ್ಲಿ ರಕ್ಷಣೆಯನ್ನೂ ಉದ್ಯೋಗವನ್ನೂ ನೀಡುತ್ತಿಲ್ಲ' ಎಂದು ಪದೇ ಪದೇ ಹೇಳುತ್ತಿರುತ್ತಾರೆ.

2020ರಲ್ಲಿ ವಾಂಗ್‌ಚುಕ್ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಬಾಂಗ್ಲಾದೇಶದ ಮಹಮ್ಮದ್ ಯೂನಸ್‌ರನ್ನು ಭೇಟಿಯಾಗಿದ್ದರು. ಅವರಿಬ್ಬರ ಹಾರ್ದಿಕ ಆಲಿಂಗನದ ಚಿತ್ರಗಳು ಆಗ ಪ್ರಮುಖವಾಗಿ ಕಂಡು ಬಂದಿದ್ದವು. ಇಂತಹ ಬೆಳವಣಿಗೆಗಳ ಕ್ರೂರ ಪರಿಣಾಮಗಳು ಸೆಪ್ಟೆಂಬರ್ 24ರ ಬುಧವಾರದಂದು ಸ್ಪಷ್ಟವಾಗಿ ಬೆಳಕಿಗೆ ಬಂದವು. ಲೇಕ್‌ನಲ್ಲಿ ಅಂದು ಹಿಂಸಾತ್ಮಕ ಪ್ರದರ್ಶನಗಳು ನಡೆದವು. ಕಲ್ಲೆಸತದೊಂದಿಗೆ ವಾಹನಗಳು ಬೆಂಕಿಗೆ ಆಹುತಿಯಾದವು. ಪೊಲೀಸರೊಂದಿಗೆ ನೇರ ಕಾದಾಟಗಳೇ ನಡೆದವು. ನಗರವಿಡೀ ಪ್ರಕ್ಷುಬ್ಧವಾಗಿದ್ದಿತು. 4 ಜನರು ಪ್ರಾಣತೆತ್ತರು. 45 ಜನರು ಗಾಯಾಳುಗಳಾದರು. ಅಂಗಡಿಗಳು ಮುಚ್ಚಿದವು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇವು ಯಾವುವೂ ಆಕಸ್ಮಿಕ ಸಂಭವವಲ್ಲ. ಉದ್ದಕ್ಕೂ ಕಂಡ ವಾಂಗ್‌ಚುಕರ ವಿಡಿಯೋಗಳ ಪರಿಣಾಮ, ಹೇಳಿಕೆಗಳ ಕಾರಣ, ಓದಿನಲ್ಲಿ ಮಗ್ನರಾಗಬೇಕಾಗಿದ್ದ ವಿದ್ಯಾರ್ಥಿಗಳು ಬೀದಿಗಿಳಿದುದರ ಫಲಿತಾಂಶ.

ಸೋನಮ್ ವಾಂಗ್‌ಚುಕ್‌ ಹವಾಮಾನ ಕಾರ್ಯಕರ್ತರೆಂದೂ ಶಿಕ್ಷಣ ತಜ್ಞರೆಂದೂ ಮಾಧ್ಯಮಗಳು ವರ್ಣಿಸುತ್ತವೆ. ಆದರೆ ಅವರ ಹಿನ್ನೆಲೆಯು ಬೇರೆಯೇ ಚಿತ್ರವನ್ನು ನೀಡುತ್ತವೆ. ಅವರ ಉದ್ದೇಶವು ಕಾರ್ಯಕರ್ತರೆನ್ನುವುದಕ್ಕಿಂತ, ತಜ್ಞನೆನ್ನುವುದಕ್ಕಿಂತ ಹೆಚ್ಚಿನದನ್ನು ಸೂಚಿಸುತ್ತವೆ. ಸಂತ ಮುಖವಾಡವು ಪಾಪಿಗೆ ಹೆಚ್ಚು ಒಪ್ಪುತ್ತದೆ.

ವ್ಯಕ್ತಿ

.