Logo

VHP PUBLICATIONS

Hindu Vani


expand_more

ಅಭಿಯಾನ

By ಗೋವರ್ಧನ ಸಿಂಗ್, ಬಜರಂಗದಳ ಸಂಯೋಜಕ, ಕರ್ನಾಟಕ ದಕ್ಷಿಣ ಪ್ರಾಂತ

ಬಜರಂಗದಳ ಮತ್ತು ದುರ್ಗಾವಾಹಿನಿಗಳ 'ನಶಾ ಮುಕ್ತ ಅಭಿಯಾನ'

ಇಪ್ಪತ್ತರಿಂದ ಮೂವತ್ತರ ವಯಸ್ಸಿನಲ್ಲಿ ಮನುಷ್ಯನ ಮಿದುಳು ಪೂರ್ಣ ಬೆಳವಣಿಗೆಯನ್ನು ಹೊಂದುತ್ತದೆ. ಈ ಕಾಲದ ಶಾರೀರಿಕ ಬೆಳವಣಿಗೆಯು ಮಾನಸಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ವೈಚಾರಿಕ ಪ್ರೌಢತೆಯನ್ನು ರೂಪಿಸುವ ಹಂತವನ್ನು ತಲುಪುತ್ತದೆ. ಮಿದುಳಿನ ಮುಂಭಾಗದ ಪ್ರೀಫ್ರಾಂಟಲ್ ಕಾರ್ಟೆಕ್ಸ್ ಎನ್ನುವ ಭಾಗವು ದೈನಂದಿನ ಜೀವನದಲ್ಲಿ ವ್ಯಕ್ತಿಯು ಕೈಗೊಳ್ಳುವ ನಿರ್ಧಾರಗಳ ಮೂಲವಾಗಿರುತ್ತದೆ. ಭಾವನೆಗಳ ನಿಯಂತ್ರಣ, ಸ್ಮರಣಶಕ್ತಿ, ಅಧ್ಯಯನದ ಕ್ರೋಢಿಕರಣ, ಏಕಾಗ್ರತೆ, ಸಮಸ್ಯೆಗಳ ಪರಿಹಾರವನ್ನು ನಿರ್ಧರಿಸುವ ಈ ಭಾಗವು ಮನುಷ್ಯನ ವ್ಯಕ್ತಿತ್ವವನ್ನು ಆಂತರಿಕವಾಗಿ ರಚಿಸುತ್ತದೆ.

ವ್ಯಕ್ತಿಯ ಜೀವನದಲ್ಲಿ ಅತಿ ಪ್ರಮುಖವೆನಿಸುವ ಇವೆಲ್ಲವನ್ನು ಒಂದು ತಪ್ಪು ಹೆಜ್ಜೆಯು ಸಂಪೂರ್ಣವಾಗಿ ನಾಶಗೊಳಿಸಬಹುದು. ಅದು ಇಂದಿನ ನಾಗರಿಕ ಜೀವನದಲ್ಲಿ ಮಾರಕವೆನಿಸುವ ಮಾದಕ ದ್ರವ್ಯದ ವ್ಯಸನ. ಈ ಚಟವು ಶಾರೀರಿಕ ಅಂಗಗಳನ್ನೂ ಒಂದೊಂದಾಗಿ ನಾಶಗೊಳಿಸುತ್ತಿರುತ್ತದೆ. ಹೃದಯ, ಮೂತ್ರ ಪಿಂಡಗಳು, ಪಿತ್ತಕೋಶ, ಶ್ವಾಸಕೋಶಗಳು ಈ ವ್ಯಸನದಿಂದ ಕಾರ್ಯಹೀನವಾಗುವ ಇಂತಹ ಅಂಗಗಳು, ಇಷ್ಟೇ ಅಲ್ಲದೆ ಮಾನಸಿಕ ಖಿನ್ನತೆ, ಕಾತರಸ್ಥಿತಿ, ಸೈಕಾಸಿಸ್‌ಗಳಂತಹ ಭಯಾನಕ ಮಾನಸಿಕ ಏರು ಪೇರುಗಳಿಗೂ ಈ ಮಾದಕ ದ್ರವ್ಯಗಳ ಸೇವನೆಯು ಕಾರಣವಾಗುತ್ತದೆ.

ಕೌಟುಂಬಿಕ ಮತ್ತು ಸಾಮಾಜಿಕ ಏರುಪೇರುಗಳೂ, ಸಮಸ್ಯೆಗಳೂ ಮಾದಕ ದ್ರವ್ಯಗಳ ಸೇವನೆಯ ವ್ಯಸನದಿಂದ ಉದ್ಭವಿಸುತ್ತವೆ. ಈ ವ್ಯಸನದಿಂದ ಪರಸ್ಪರ ಕೌಟುಂಬಿಕ ಸಂಬಂಧಗಳು ಹದಗೆಡುತ್ತವೆ. ಭಾವನೆಗಳ ಅಲ್ಲೋಲ ಕಲ್ಲೋಲ, ಮಾದಕ ವ್ಯಸನಿಯಲ್ಲಾಗುವ ಆಕ್ರಮಣಕಾರಿ ಸ್ವಭಾವ, ದೈನಂದಿನ ಜೀವನದಲ್ಲಿ ಸುಳ್ಳುಗಳ ಸರಮಾಲೆಗಳು, ಸಹಜವಾಗಿ ಸ್ನೇಹ, ನಂಬಿಕೆ, ಪ್ರೀತಿಗಳಂತಹ ಮೃದು ಭಾವನೆಗಳು ಮಾಯವಾಗಲು ಕಾರಣವಾಗುತ್ತವೆ. ಹದಿಹರೆಯದಲ್ಲಿ ಜೀವನದ ಅನುಭವದ ಕೊರತೆಯಿಂದ ಅಪ್ತಾಪ್ತರ ಶೋಷಣೆ, ವ್ಯಾವಹಾರಿಕ ಸಂದಿಗ್ಧಗಳಿಂದ ಅಕಾಲಿಕವಾಗಿ ಗರ್ಭಿಣಿಯರಾಗುವುದು ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿ ಬಿಡಬಹುದು.

ಈ ಸಮಸ್ಯೆಯು ತರುಣ ತರುಣಿಯರ ಶಿಕ್ಷಣದ ಮೇಲೆ ಖಚಿತವಾಗಿ ದುಷ್ಪರಿಣಾಮವನ್ನು ಬೀರುತ್ತದೆ. ತರಗತಿಯಲ್ಲಿ ಹಾಜರಾತಿಯ ಕೊರತೆ, ಈ ಕಾರಣದಿಂದ ಮನೆಯಲ್ಲಿ ಒತ್ತಡ, ತರಗತಿಯಲ್ಲಿ ಕೀಳರಿಮೆಗಳಂತಹ ಗೊಂದಲಗಳು ಉಂಟಾಗುತ್ತವೆ. ವ್ಯಕ್ತಿತ್ವದ ದೇಹ ಸೌಂದರ್ಯ ಕೆಡುತ್ತದೆ. ಬಾಡಿದ ಮುಖ, ಕೆಂಪಾಗಿರುವ, ಭಯ ಕಾತರತೆ ಮತ್ತು ಕೀಳರಿಮೆಯ ಕಣ್ಣನೋಟ, ಊದಿಕೊಂಡ ಮುಖ, ನಡುಗುವ ಕೈಗಳು, ಈ ವ್ಯಸನದಿಂದ ಬದಲಾಗುವ ಶರೀರದ ನೋಟಗಳು. ಕೆಲವೊಮ್ಮೆ ಈ ದ್ರವ್ಯಗಳನ್ನು ಸೂಜಿಯಿಂದ ಶರೀರಕ್ಕೆ ಸೇರಿಸಿಕೊಳ್ಳಬೇಕಾದುದರಿಂದ ಹೆಚ್.ಐ.ವಿ. ಹಿಪಾಟೈಟಿಸ್ ಮತ್ತು ಚರ್ಮಸಂಬಂಧಿ ಸೋಂಕುಗಳು ಆಕ್ರಮಿಸಬಹುದು. ಇವುಗಳಿಂದ ಆಕಸ್ಮಿಕ ಸಾವಿನ ಸಂಭವವೂ ಉಂಟಾಗುವುದು.

ಈ ವರೆಗೆ ಕಂಡುಕೊಂಡ ವರದಿಯ ಪ್ರಕಾರ 15ರಿಂದ 40ರ ವಯಸ್ಸಿನವರು ಈ ದುರ್ವ್ಯಸನಕ್ಕೆ ಪಕ್ಕಾಗುವವರು ಎಂದುಕೊಳ್ಳಲಾಗಿದೆ. ಟಿ.ಬಿ ಮತ್ತು ಕ್ಯಾನ್ಸರ್ ನಂತೆ ಮಾದಕ ದ್ರವ್ಯವೂ ದೇಶವನ್ನು ಕಾಡುವ ರೋಗದಂತೆ ಎಂದು ಪರಿಗಣಿಸಬೇಕಾಗಿದೆ. ಈ ಕಾಲಖಂಡದಲ್ಲಿ ಸಾಮಾನ್ಯವಾಗಿ ಶಾರೀರಿಕ ಶ್ರಮವು ಕಡಿಮೆಯಾದುದರಿಂದ ಇಂತಹ ದುರ್ವ್ಯಸನಗಳಿಗೆ ಮನಸ್ಸನ್ನು ಒಡ್ಡುವುದು ಸಾಮಾನ್ಯವಾಗಿದೆ. ರಾಸಾಯನಿಕ ಗೊಬ್ಬರಗಳ ಉಪಯೋಗದಿಂದ ಬೆಳೆದ ಆಹಾರದಲ್ಲಿನ ವಿಷಕಾರಿ ಅಂಶಗಳು ಶರೀರವನ್ನು ಸೇರುವುದರಿಂದ, ಬೆಳೆದ ಬೆಳೆಯಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗಿ ಶರೀರದ ರೋಗನಿರೋಧಕ ಶಕ್ತಿಯು ಕಡಿಮೆಯಾಗಿ ದುಷ್ಪರಿಣಾಮಗಳು ವೇಗವಾಗಿ ಶರೀರವನ್ನು ರೋಗ ಪೀಡಿತವಾಗಿಸುತ್ತವೆ. ಮೆದುಳು ಹಠಾತ್ತನೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಒಂದು ಹಂತದಲ್ಲಿ ಬೇರೇನೂ ಬೇಡ ಮಾದಕದ್ರವ್ಯ ಸಿಕ್ಕರೆ ಸಾಕು ಎಂದು ಹಣಕ್ಕಾಗಿ ಕಳ್ಳತನ, ಕೊಲೆಯೂ ಸೇರಿದಂತಹ ಅಪರಾಧ ಪ್ರವೃತ್ತಿ ಹೆಚ್ಚುತ್ತದೆ.

ಮಾದಕ ದ್ರವ್ಯಗಳ ಉತ್ಪತ್ತಿ ಮತ್ತು ಅದರ ಸಾಗಾಟವು ಪ್ರಾರಂಭವಾಗುವುದು ಇರಾನ್, ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ, ಅದು ಸಾಗಾಟಗೊಂಡು, ಶೇಖರಿಸಿ ವಿತರಣೆಗೊಳ್ಳುವುದು ನೇಪಾಳ, ಮ್ಯಾನ್ಮಾರ್ ಮತ್ತು ಥಾಯ್‌ಲ್ಯಾಂಡ್‌ನಂತಹ ಆಯಕಟ್ಟಿನ ದೇಶಗಳಲ್ಲಿ, ಭಾರತವಿರುವುದು ಈ ಎರಡು ಗುಂಪಿನ ದೇಶಗಳ ನಡುವೆ. ಭಾರತವೊಂದರಲ್ಲೇ ಈ ವಸ್ತುಗಳ ವ್ಯವಹಾರದ ಮೊತ್ತವು 5 ಲಕ್ಷಕೋಟಿ ರೂಪಾಯಿಗಳನ್ನು ಮೀರುತ್ತದೆ. ಇದು ಅತಿದೊಡ್ಡ ರಾಜ್ಯವೊಂದರ ವಾರ್ಷಿಕ ಬಟ್ಟೆಟ್‌ಗಿಂತ ಹೆಚ್ಚು! ಹಲವು ದೇಶಗಳು ಮಾದಕ ದ್ರವ್ಯದ ವ್ಯವಹಾರದಲ್ಲಿ ತೊಡಗಿದವರಿಗೆ ಮರಣ ದಂಡನೆಯ ಅತಿ ಕಠಿಣ ಶಿಕ್ಷೆಯನ್ನು ನೀಡುತ್ತದೆ. ಹೀಗಿದ್ದರೂ ಈ ಕಳ್ಳ ವ್ಯಾಪಾರದ ಶೇಕಡಾ 10ಕ್ಕಿಂತಲೂ ಕಮ್ಮಿ ವ್ಯವಹಾರವನ್ನು ಮಾತ್ರ ತಡೆಯಲು ಸಾಧ್ಯವಾಗಿದೆ.

ಮಾದಕ ದ್ರವ್ಯಗಳ ನಶೆಯಿಂದ ಶರೀರವು ರೋಗ ಪೀಡಿತವಾಗುವುದು, ಬದುಕು ಅರ್ಧ ವಯಸ್ಸಿಗೆ ಕೊನೆಯಾಗುವಂತಹ ಸಂಭವವು ಸಾಮಾನ್ಯವಾಗಿ ಬಿಡುವುದು. ಒಮ್ಮೆ ಈ ದುರ್ವ್ಯಸನಕ್ಕೆ ಬಲಿಯಾದವರು, ಅದರಿಂದ ಬಿಡುಗಡೆಯಾಗುವುದು ಕಷ್ಟ ಆದರೂ ಅದು ಸಾಧ್ಯವೆಂದು ಸಾಮಾಜಿಕ ಕಾರ್ಯಕರ್ತರು ನಂಬುತ್ತಾರೆ. ಇದೊಂದು ಕಷ್ಟದ ದಾರಿ. ಕೆಲವೊಂದು ರೋಗಗಳಿಗೆ ದೀರ್ಘವಾದ ಆರೈಕೆಯು ಬೇಕು. ನಶೆಯು ಕೂಡಾ ಹಾಗೆಂದೇ ತಿಳಿಯಬೇಕು.

ಮಾದಕ ದ್ರವ್ಯಗಳನ್ನು ಚಟವಾಗಿ ಸೇವಿಸುವವರನ್ನು ಅಪರಾಧಿಯಂತೆ ಕಾಣಬಾರದು. ಉಳಿದಂತೆ ಆತನು ಸಹಜ ವ್ಯಕ್ತಿಯಾಗಿರುತ್ತಾನೆ. ಈ ನಶೆಯು ಅವನನ್ನು ಅಪರಾಧಿಯಾಗಿಸುತ್ತದೆ ಅಷ್ಟೇ. ಆದುದರಿಂದ ನಶೆಯ ಚಟವು ಒಂದು ರೋಗದಂತೆ ಎಂದು ಪರಿಗಣಿಸಬೇಕು. ಮಕ್ಕಳು ಈ ವ್ಯಸನಕ್ಕೆ ಒಳಗಾದಾಗ ಅವರ ಮೇಲೆ ಮನೆಯಲ್ಲಿ ಸಿಟ್ಟು ಬರುವುದು ಸ್ವಾಭಾವಿಕ. ಅಂತಹ ಸಂದರ್ಭದಲ್ಲಿ ಆ ಮಕ್ಕಳ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಗಮನಿಸಬೇಕು. ಮಾದಕ ದ್ರವ್ಯಗಳಿಂದ ದೂರವಾಗಲು ಸಿನಿಮಾ, ಸಂಗೀತ, ಧ್ಯಾನ, ಯೋಗಗಳ ಕಡೆಗೆ ಅವರ ಗಮನವನ್ನು ಸೆಳೆಯುವುದು ಸಾಧ್ಯವೇ ಎಂದು ಪ್ರಯತ್ನಿಸಬೇಕು. ಅವರೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳಬಾರದು. ಏಕಾಂಗಿಯಾಗಿರುವುದನ್ನು ತಪ್ಪಿಸಬೇಕು. ಮುಕ್ತ ಚರ್ಚೆ ಆಪ್ತಸಲಹೆಗಳು ಈ ರೋಗಿಯನ್ನು ಸರಿದಾರಿಗೆ ತರಬಲ್ಲವು.

ಈಗಿರುವ ಮಾಹಿತಿಯಂತೆ ಶಾಲೆ ಮತ್ತು ಕಾಲೇಜುಗಳು ಈ ನಶೆಯ ಮೂಲಗಳು. ಮಕ್ಕಳ ಸಹಜ ಸ್ವಭಾವವಾದ ಕುತೂಹಲ, ಉತ್ಸಾಹಗಳು, ಜೊತೆಗಾರರ ಕುಮ್ಮಕ್ಕು ಅವರನ್ನು ಈ ದುಸ್ಸಾಹಸಕ್ಕೆ ಮೊದಲು ಮಾಡಬಹುದು, ಶಾಲೆಗಳ ಆಡಳಿತವು (ಕೆಲವೊಂದು ಅಪವಾದಗಳನ್ನು ಬಿಟ್ಟರೆ) ಈ ಸಮಸ್ಯೆಯನ್ನು ಪರಿಹರಿಸಲು ಚಿಂತಿಸುತ್ತವೆ. ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳು ಈ ದ್ರವ್ಯಗಳನ್ನು ಒದಗಿಸುವವರನ್ನು ಕಂಡು ಹಿಡಿಯಲು ನೆರವಾಗಬಹುದು.

ಬಜರಂಗದಳ ಮತ್ತು ದುರ್ಗಾವಾಹಿನಿಗಳು 'ನಶಾ ಮುಕ್ತ ಅಭಿಯಾನ'ದ ಅಖಿಲ ಭಾರತ ಆಂದೋಲನದಲ್ಲಿ ಕೈಜೋಡಿಸಿವೆ. ನಮ್ಮ ಬೆಂಬಲಕ್ಕಿರುವ ಸಂತ ಸಮೂಹವನ್ನೂ ಧರ್ಮಾಚಾರ್ಯರನ್ನೂ ನಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಈ ಕುರಿತು ಕ್ರಿಯಾಶೀಲವಾಗಿರುವ ಸರ್ಕಾರದ ಅಧಿಕಾರಿಗಳನ್ನು ಸದಾ ಸಂಪರ್ಕಿಸಿಕೊಳ್ಳಬಹುದು. ಕಾರ್ಯಕರ್ತರ ಪಾಲಿಗೆ ಈ ಆಂದೋಲನವು ಒಂದಷ್ಟು ಅಪಾಯಕಾರಿ ಪ್ರಸಂಗಗಳಿಗೆ ಕಾರಣವಾಗಬಹುದು. ಇಂತಹ ಸಂದರ್ಭಗಳಿಗೆಂದೇ ಸರ್ಕಾರವು ನೋಂದಾಣಿಯಾಗದ ದೂರವಾಣಿ ಸಂಖ್ಯೆಗಳನ್ನು ಮೀಸಲಿಟ್ಟಿದೆ. ಹಲವು ಸಾಮಾಜಿಕ ಜಾಲತಾಣಗಳು ಈ ದಿಕ್ಕಿನಲ್ಲಿ ಸಕ್ರಿಯವಾಗಿವೆ. ಅವುಗಳ ಬೆಂಬಲವೂ ನಮ್ಮ ಅಭಿಯಾನಕ್ಕೆ ದೊರಕುತ್ತವೆ.

ಮನೆಯಲ್ಲಿ ಮಕ್ಕಳ ಚಟುವಟಿಕೆಯನ್ನು ಗಮನಿಸುವುದು ಬಹಳ ಮುಖ್ಯ. ಮಕ್ಕಳ ನಿದ್ರೆಯ ಸಮಯದಲ್ಲಿ ವ್ಯತ್ಯಾಸವಾಗುವುದು, ಮೊದಮೊದಲು ಮುಖದಲ್ಲಿ ಕಾಣುವ ಅಪರಾಧಿ ಭಾವ, ನಂತರ ಕಾಣುವ ಬಂಡಾಯ ಪ್ರವೃತ್ತಿ, ಸ್ನೇಹಿತರ ಗುಂಪು ಬದಲಾಗುವುದು, ಊಟ ತಿಂಡಿಯಲ್ಲಿ ಏರುಪೇರು, ಹಣ ಖರ್ಚು ಮಾಡುವುದರಲ್ಲಿ ಕೇಳುವುದರಲ್ಲಿ ಗಮನಿಸಬಹುದಾದ ವ್ಯತ್ಯಾಸ, ಶಾಲೆಯ ಶೈಕ್ಷಣಿಕ ಸಾಧನೆಯಲ್ಲಿ ಬದಲಾವಣೆ, ಮನೆಯಿಂದ ದೂರವಿರುವುದು, ಮನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವುದು, ಈ ಸಮಸ್ಯೆಯಲ್ಲಿ ಕಾಣುವ ದೈನಂದಿನ ಬೆಳವಣಿಗೆಗಳು. ಎಲ್ಲಕ್ಕೂ ಮೊದಲು ಈ ವ್ಯಸನಕ್ಕೆ ಬಲಿಬಿದ್ದ ಮಗು ಕೆಟ್ಟವನಲ್ಲ ಎನ್ನುವುದು ನಮ್ಮ ಮೊದಲ ಪ್ರತಿಕ್ರಿಯೆಯಾಗಬೇಕು ಮತ್ತು ಅದನ್ನು ಕ್ರಮೇಣ ಸುಧಾರಿಸಬಹುದು ಎನ್ನುವ ಆತ್ಮ ವಿಶ್ವಾಸವಿರಬೇಕು.

ಇದಕ್ಕಾಗಿ ಬೃಹತ್ ಸಾರ್ವಜನಿಕ ಜಾಗೃತಿಯಾಗುವ ಅಗತ್ಯವಿದೆ. ವಿಚಾರ ಸಂಕಿರಣಗಳು, ಚಿಂತನಾ ಕೂಟಗಳು, ಮನ ಮುಟ್ಟುವ ನಾಟಕಗಳು, ಜಾಲತಾಣಗಳ ನಿರಂತರ ಪ್ರಚಾರ ಮಾರ್ಗಗಳು ಈ ದಿಕ್ಕಿನಲ್ಲಿ ಸಕ್ರಿಯವಾಗಬೇಕಾಗಿವೆ. ಸಾರ್ವಜನಿಕ ಪ್ರತಿಜ್ಞಾ ಕಾರ್ಯ ಕ್ರಮಗಳು ವಿಶೇಷವಾಗಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ವ್ಯಸನ ಮುಕ್ತರಾಗುವ ದಿಕ್ಕಿನಲ್ಲಿ ತೊಡಗಿಸುವಂತೆ ಮಾಡುತ್ತವೆ. ಜೀವನದಲ್ಲಿ ಇದೂ ಒಂದು ಬದ್ಧತೆಯನ್ನುವ ಭಾವನೆಯು ಹೊಸದಾಗಿ ಮೂಡಿ ಬರುತ್ತದೆ. ಮಾದಕ ದ್ರವ್ಯಗಳು ಒಂದು ಜಾಗತಿಕ ಪಿಡುಗು, ಜಗತ್ತು ಇದರಿಂದ ದೂರವಾಗಲೇ ಬೇಕಾಗಿದೆ.