Logo

VHP PUBLICATIONS

Hindu Vani


expand_more

ಸೂಕ್ತಿಶ್ರೀ

By - ಬಿ.ಈ. ಸುರೇಶ

ಕಾಲಗತಿ


ಕಾಲಃ ಪಚತಿ ಭೂತಾನಿ ಕಾಲಃ ಸಂಹರತೇ ಪ್ರಜಾಃ |

ಕಾಲಃ ಸುಪ್ತಷು ಜಾಗರ್ತಿ ಕಾಲೋಹಿ ದುರತಿಕ್ರಮಃ || -- ಚಾಣಕ್ಯ ನೀತಿ


“ಕಾಲವೆನ್ನುವುದು ಜಗತ್ತಿನಲ್ಲಿ ಎಲ್ಲವನ್ನೂ ಜೀರ್ಣಿಸಿ ಬಿಡುವುದು. ಎಲ್ಲ ಜೀವಿಗಳನ್ನು ಅಂತಿಮವಾಗಿ ಕಾಲವು ಸಂಹರಿಸುತ್ತದೆ. ಎಲ್ಲರೂ ನಿದ್ರಿಸುತ್ತಿರುವಾಗ ಕಾಲವು ಮಾತ್ರ ತಾನು ನಿದ್ರಿಸದೆ ಇರುತ್ತದೆ. ಎಲ್ಲವನ್ನೂ ಗಮನಿಸುತ್ತಲೇ ಇರುತ್ತದೆ. ಕಾಲದ ವಿರುದ್ಧ ನಿಂತು ಯಾರೂ ಗೆಲ್ಲಲು ಅಸಾಧ್ಯ”

ಸಾಮಾನ್ಯವಾಗಿ 'ಕಾಲ' ಎಂದರೆ ಸಮಯ ಅಥವಾ ವೇಳೆ ಎಂದು ಭಾವಿಸಿರುತ್ತಾರೆ. ಆದರೆ ಕಾಲದ ಆಳ, ಹರಹು ಮತ್ತು ಪ್ರಭಾವಗಳು ಅಷ್ಟಿಷ್ಟಲ್ಲ. ಈ ಕಾಲವನ್ನು ಅನುಸರಿಸಿ ಜಗತ್ತಿನ ಎಲ್ಲ ಆಗುಹೋಗುಗಳು ನಡೆಯುತ್ತಿರುತ್ತವೆ. ಕಾಲದ ಗತಿಗೆ ತಡೆಯಾಗುವವವರು.

ಯಾರೂ ಇಲ್ಲ. ವರಕವಿ ಬೇಂದ್ರೆಯವರು 1929ರ ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ 'ಹಕ್ಕಿ ಹಾರುತಿದೆ ನೋಡಿದಿರಾ' ಕವನವನ್ನು ವಾಚಿಸಿದರು. ಅದು ಕಾಲದ ನಿಷ್ಟುರ ಗತಿಯನ್ನು ಸೂಚಿಸುತ್ತದೆ.

ಕಾಲವು ಮನುಷ್ಯರ ಹಣೆಯ ಬರಹವನ್ನಷ್ಟೇ ಬದಲಾಯಿಸುವುದಲ್ಲ. ಕವಿಯು ಕಾಣುವಂತೆ ಅದು 'ಯುಗ ಯುಗಗಳ ಹಣೆ ಬರಹವನ್ನು ಒರೆಸುತ್ತದೆ. ಕಾಲವು ಎಲ್ಲರಿಗೂ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಅದು ಹೊಸಗಾಲದ ಹಸು ಮಕ್ಕಳನ್ನು ಹರಸಿ ಹೋಗುತ್ತದೆ ಎನ್ನುತ್ತಾರೆ ವರಕವಿ ಬೇಂದ್ರೆಯವರು. ಅದಿನ್ನೂ ಬ್ರಿಟಿಷರು ಆಳುತ್ತಿದ್ದ ಕಾಲ. ಕರ್ನಾಟಕದ ಬಹುಪಾಲು ಆಂಗ್ಲರ ನೇರ ಆಳ್ವಿಕೆಯಲ್ಲಿದ್ದಿತ್ತು. ಅಥವಾ ಅವರು ಹೇಳಿದಂತೆ ಕೇಳುವ ರಾಜ ಮಹಾರಾಜರ ಕೈಯಲ್ಲಿ ಇದ್ದಿತು. ಯಾರ ಭವಿಷ್ಯವೂ ಭದ್ರವಾಗಿರಲಿಲ್ಲ. ಯಾರೂ ಯಾವಾಗ ಬೇಕಾದರೂ ಸ್ಥಾನ ತ್ಯಜಿಸಬೇಕಾಗಬಹುದಿತ್ತು. ಇದನ್ನೇ ಕವನದಲ್ಲಿ 'ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ' 'ಸಾರ್ವಭೌಮರಾ ನೆತ್ತಿಯ ಕುಕ್ಕಿ ಹಕ್ಕಿ ಹಾರುತಿದೆ' ಎಂದು ಬೇಂದ್ರೆಯವರು ನೆನಪಿಸುತ್ತಾರೆ.

ಕಾಲವೆನ್ನುವುದು ತಂತಾನೇ ಸರಿದು ಹೋಗುತ್ತ ತನ್ನದೇ ರೀತಿಯಲ್ಲಿ ಜಗತ್ತನ್ನು ಬದಲಾಯಿಸುತ್ತ ಹೋಗುತ್ತದೆ. ಜೀವನದ ಮೇಲೆ ಕಾಲವು ಬೀರುವ ಪರಿಣಾಮದಿಂದಾಗಿ ಅದನ್ನು ಅರಿಯುವ ರೀತಿ ಬದಲಾಗುತ್ತದೆ. ಮಡದಿ ಮಕ್ಕಳನ್ನು ಬಿಟ್ಟು ವಿದೇಶದಲ್ಲಿದ್ದವನು ತನ್ನ ಊರಿಗೆ ಹೊರಟಾಗ ವಿಮಾನದಲ್ಲಿ ಇದ್ದಷ್ಟು ಕಾಲ ಸಮಯವು ಬಹು ನಿಧಾನವಾಗಿ ಸರಿಯುತ್ತದೆ. ಅತಿ ವೇಗವಾಗಿ ಹಾರುವ ವಿಮಾನವು ಕೂಡ ಮಂದವಾಗಿ ಹೋಗುತ್ತಿದೆ ಎಂದು ಕಾಣಲು ಸಾಧ್ಯ. ಆದರೆ ಮನೆಯನ್ನು ತಲುಪಿದಾಗ ಮುದ್ದು ಮಗಳು ತೋಳುಗಳಲ್ಲಿ ಆಡುತ್ತಿರುವಾಗ ಸಮಯ ಕಳೆದುದೆ ಅನಿಸುವುದಿಲ್ಲವೇಕೆ? ಇಷ್ಟವಾದ ಕಾದಂಬರಿಯನ್ನು ಓದಿ ಮುಗಿಸಿದುದೇ ಗಮನಕ್ಕೆ ಬರುವುದಿಲ್ಲ. ಆದರೆ ಪರೀಕ್ಷೆಗಾಗಿ ಓದುವ ಪುಸ್ತಕದ ಓದು ಸಾಗುವುದೇ ಇಲ್ಲ ಎಂದು ಅನಿಸುತ್ತದೆ. ಕಾಲವು ಕೆಲವೊಮ್ಮೆ ಕ್ಷಣದಂತೆ ಕಳೆದು ಹೋಗುವುದಾಗಲೀ ಅದು ದೀರ್ಘವೆನ್ನುವಂತೆ ಕಾಣುವುದಾಗಲೀ ಕಾಲವು ಮಾಯೆಯಾಗಿ ವರ್ತಿಸಿದಾಗ ಮನುಷ್ಯನು ಹೊಂದುವ ಅನುಭವ. ಕಾಲವನ್ನು ಭೈರವನನ್ನಾಗಿ ಕಂಡರು ಆಚಾರ್ಯ ಶಂಕರರು. ಸೃಷ್ಟಿಯ ಶಾಶ್ವತನಾದ ಅಧಿಪತಿಯು ಕಾಲಭೈರವನೆಂದೇ ಅವರು ಪರಿಚಯಿಸುತ್ತಾರೆ. ಕಾಲವನ್ನು ಹಾವಿನ ರೂಪದಲ್ಲಿ ಕಾಣುವುದು ಕೂಡಾ ಒಂದು ಕುತೂಹಲಕಾರಿ ರೂಪಕ.

ಜೀವನದಲ್ಲಿ ವಿನಯವು ಒಡಮೂಡುವುದು ಕೂಡಾ ಕಾಲದ ಪ್ರಭಾವದಿಂದಲೇ. ಕಾಲಕ್ರಮೇಣ ವ್ಯಕ್ತಿಗೆ ಅಡರಿದ ಅಹಂಕಾರವು ಅಳಿಸಿ ಹೋಗುವುದು ಕಾಲದ ಪ್ರಭಾವದಿಂದ. ಜೀವನವನ್ನು ತಿದ್ದಿತೀಡಿ, ತಟ್ಟಿ ಕೆತ್ತಿಟ್ಟು ರೂಪಿಸುವುದು ಕಾಲದ ಶಾಶ್ವತ ಶಕ್ತಿಯಿಂದ. ಅದು ತಿದ್ದುವುದು ನಿಧಾನಗತಿಯಿಂದ ಇರಬಹುದು. ಆದರೆ ಅದರಲ್ಲಿ ಖಚಿತತೆ ಇದ್ದೇ ಇರುತ್ತದೆ. ವಿಶೇಷವೆಂದರೆ ಕಾಲವು ತಯಸ್ಥ ಸ್ಥಿತಿಯಲ್ಲಿ ಸಾಕ್ಷಿಯಾಗಿ ವರ್ತಿಸುತ್ತದೆ. ಎಲ್ಲವನ್ನೂ ಅತ್ಯಂತ ತಾಳ್ಮೆಯಿಂದ ನೀರಿಕ್ಷಿಸುತ್ತಿರುತ್ತದೆ. ಅಂತಿಮವಾಗಿ ಮಾತ್ರ ಕಾರ್ಯಮಗ್ನವಾಗಿ ತನ್ನ ತೀರ್ಪನ್ನು ಕೊಡುತ್ತದೆ.