Hindu Vani
Index
ಕಾನೂನು
ಮದ್ರಾಸ್ ಉಚ್ಚ ನ್ಯಾಯಾಲಯ
ಸಾರ್ವಜನಿಕ ಭೂಮಿ ಕ್ರೈಸ್ತರಿಗೆ ಮೀಸಲಿಡುವಂತಿಲ್ಲ
ಇಲ್ಲಿ ಚರ್ಚೆಗೆ ಒಳಗಾಗುವುದು ಕೆಲವೊಂದು ಸಾಮಾಜಿಕ ಮತ್ತು ರಾಜಕೀಯ ಅಂಶಗಳು.
1) ತಮ್ಮ ಧಾರ್ಮಿಕ ಹಕ್ಕುಗಳನ್ನು ಪ್ರತಿಪಾದಿಸಲು ಹಿಂದುಗಳು ತಮ್ಮದೇ ದೇಶದಲ್ಲಿ ಎಷ್ಟೊಂದು ಪಾಡು ಪಡಬೇಕು ಎಂದು
2) ಮೊನ್ನೆಮೊನ್ನೆವರೆಗೆ ಹಿಂದುಗಳಾಗಿದ್ದವರು ಮತಾಂತರಗೊಂಡ ಕಾರಣದಿಂದ ಈ ನೆಲದ ರೀತಿ ರಿವಾಜುಗಳನ್ನು ದ್ವೇಷಿಸಲು ಎಷ್ಟು ದೂರ ಹೋಗಬಲ್ಲರು ಎನ್ನವುದು
3) ಹಿಂದುಗಳು ಅಲ್ಪಸಂಖ್ಯಾತರಾದ ಪ್ರದೇಶದಲ್ಲಿ ಅವರ ಧಾರ್ಮಿಕ ಹಕ್ಕುಗಳನ್ನು ಆಯಾ ಪ್ರದೇಶಗಳಲ್ಲಿ ಮೊಟಕುಗೊಳಿಸಬಹುದೇ ಎಂದು. ಈ ಎಲ್ಲ ಪ್ರಶ್ನೆಗಳಲ್ಲಿ ಸಂವಿಧಾನದಿಂದ ರಕ್ಷಣೆಯನ್ನು ಕೋರಿ ನ್ಯಾಯಾಲಯಕ್ಕೆ ದೂರು ನೀಡಬೇಕಾಗಿ ಬಂದವರು ಹಿಂದುಗಳು.
ಮದ್ರಾಸ್ ಉಚ್ಚನ್ಯಾಯಾಲಯದ ಮದ್ರಾಸ್ ಪೀಠವು ಸರಕಾರಿ ಒಡೆತನದ ಸಾರ್ವಜನಿಕ ಉಪಯೋಗದಲ್ಲಿದ್ದ ಭೂಮಿಯನ್ನು ಒಂದು ಧರ್ಮದ ಅನುಯಾಯಿಗಳಿಗೆಂದೇ ಮೀಸಲಿಡುವಂತಿಲ್ಲ. ಎಂದು ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್; ಪೀಠದ ತೀರ್ಪು ನೀಡಿದರು.
ಹಿಂದುಗಳು ಕಾಳಿಯಮ್ಮ ದೇವಸ್ಥಾನದ ಕುಂಭಾಭಿಷೇಕ ನಿಮಿತ್ತ ಅನ್ನದಾನದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಆದರೆ ದಿಂಡಿಗಲ್ ಜಿಲ್ಲೆಯಲ್ಲಿರುವ ಸಾರ್ವಜನಿಕ ಮೈದಾನದಲ್ಲಿ ಕ್ರೈಸ್ತರು ತಮ್ಮ ಈಸ್ಟರ್ ಆಚರಣೆಯನ್ನು ಮಾಡುತ್ತಿದ್ದರು ಎನ್ನುವ ಕಾರಣದಿಂದ ಹಿಂದುಗಳಿಗೆ ಅನ್ನದಾನದ ಕಾರ್ಯಕ್ರಮವನ್ನು ಅಲ್ಲಿ ಮಾಡಲು ಅನುಮತಿಯನ್ನು ನಿರಾಕರಿಸಲಾಯಿತು.
ಈ ಕುರಿತು ಎನ್.ಪಂಚಂಪಟ್ಟಿ ಗ್ರಾಮದ ರಾಜಮಣಿ ಎನ್ನುವವರು ಮಾಡಿದ ಮನವಿಯ ಕುರಿತು 31.10.2025 ರಂದು ತೀರ್ಪನ್ನು ನೀಡಲಾಯಿತು. ಮೊದಲು ತಾಲ್ಲೂಕ್ ತಹಸೀಲ್ದಾರರಿಗೆ ಮಾಡಿದ ಮನವಿಯನ್ನು ತಹಸೀಲ್ದಾರರು ತಳ್ಳಿಹಾಕಿ ಬೇಕಾದರೆ ಪಂಚಂಪಟ್ಟಿಯಿಂದ ಮುಲ ಕೊಟ್ಟೆ ರಸ್ತೆಯಲ್ಲಿ ಧಾರ್ಮಿಕ ಆಚರಣೆಯನ್ನು ಮಾಡಿ ಎಂದು ನಿರ್ದೇಶಿಸಿದ್ದರು.
ಇದನ್ನು ವಿರೋಧಿಸಿದ ರಾಜಮಣಿಯವರು ಕಾಳಿಯಮ್ಮ ದೇವಸ್ಥಾನದ ಹತ್ತಿರವಿರುವ ಮೈದಾನವು ಸರ್ಕಾರದ ಭೂಮಿಯಾಗಿದ್ದು ಅಲ್ಲಿ ತಮ್ಮ ಕಾರ್ಯಕ್ರಮವನ್ನು ಮಾಡಲು ಅನುಮತಿ ನೀಡುವಂತೆ ಉಚ್ಚನ್ಯಾಯಾಲಯವನ್ನು ಕೋರಿದ್ದರು. ವಿಚಾರಣೆಯ ಕಾಲದಲ್ಲಿ ಚಿನ್ನಲಪಟ್ಟಿಯ ಪೊಲೀಸ್ ಇನ್ಸಪೆಕ್ಟರ್ ದೇವಸ್ಥಾನದ ಬಳಿಯ ಭೂಮಿಯನ್ನು ಹಿಂದುಗಳು ಉಪಯೋಗಿಸುವುದನ್ನು ವಿರೋಧಿಸಿದರು. ಸ್ವತಃ ಒಂದು ಹೇಳಿಕೆಯನ್ನು ನೀಡಿದ ಪೊಲೀಸ್ ಅಧಿಕಾರಿಯು ಈ ರೀತಿ ನೀಡುವ ಅನುಮತಿಯಿಂದ ಕಾನೂನು ವ್ಯವಸ್ಥೆಯ ಸಮಸ್ಯೆಯು ಉದ್ಭವವಾಗುವುದು ಎಂದು ಹೇಳಿದರು.
ಈ ನಡುವೆ ನಾಲ್ಕನೇ ಪ್ರತಿವಾದಿಯಾಗಿ ಬಂದ ಸುರೇಶ್ ಕ್ರೈಸ್ತ ಸಮೂಹದ ಪರವಾಗಿ ಪ್ರತಿನಿಧಿಸಿದ್ದರು. ಅವರ ಪ್ರಕಾರ ಮೈದಾನದ ಒಂದು ಭಾಗವೂ ಅಲ್ಲಿರುವ ವೇದಿಕೆಯೂ ಸೇರಿದಂತೆ ಅವು ಸಾಂಪ್ರದಾಯಿಕವಾಗಿ ಈಸ್ಟರ್ ಕಾರ್ಯಕ್ರಮಕ್ಕೂ ಧಾರ್ಮಿಕ ನಾಟಕಗಳಿಗೂ ಉಪಯೋಗವಾಗುತ್ತಿದೆ. ಆದುದರಿಂದ ಅಲ್ಲಿ ಅನ್ನದಾನದ ಕಾರ್ಯಕ್ರಮ ನಡೆಯುವಂತಿಲ್ಲ ಎಂದರು.
ನ್ಯಾಯಾಲಯವು ಇವನ್ನು ಗಮನಿಸಿ “ನಾಲ್ಕನೇ ಪ್ರತಿವಾದಿಯ ಹೇಳಿಕೆಯೂ ವಿಶೇಷ ಸರಕಾರಿ ವಕೀಲರ ವಾದವೂ ಭೂಮಿಯು ಖಾಲಿ ನಿವೇಶನವಾಗಿದ್ದು ಯಾವುದೇ ಧಾರ್ಮಿಕ ಗುಂಪಿಗೆ ಸೇರಿರದ ಸರಕಾರಿ ಭೂಮಿಯಾಗಿದೆ, ಎನ್ನುವುದನ್ನು ಸ್ಥಿರ ಪಡಿಸಿದೆ. ಇನ್ನು ಸರಕಾರಿ ಭೂಮಿಯನ್ನು ಒಂದು ಧಾರ್ಮಿಕ ಸಮೂಹಕ್ಕೆಂದೇ ಮೀಸಲಿಡುವಂತಿಲ್ಲ. ಆ ನೆಲವು ಯಾವುದೇ ನಂಬಿಕೆ ಅಥವಾ ಸಮುದಾಯವನ್ನು ಗಣಿಸದೇ ಎಲ್ಲರೂ ಉಪಯೋಗಿಸಬಹುದಾದ ಮೈದಾನವಾಗಬೇಕು. ಬಹಳ ಸಮಯದಿಂದ ಉಪಯೋಗಿಸುತ್ತಿದ್ದೇವೆ ಎಂದ ಮಾತ್ರಕ್ಕೆ ಕ್ರೈಸ್ತರು ಮಾತ್ರ ಅದನ್ನು ಉಪಯೋಗಿಸಬೇಕು ಎನ್ನುವುದನ್ನು ನ್ಯಾಯಾಧೀಶರು ತಳ್ಳಿಹಾಕಿದರು. ಅವರು ಯಾವುದೇ ಅಡೆತಡೆಗಳಿಲ್ಲದೆ ಈಗಲೂ ತಮ್ಮ ಈಸ್ಟರ್ ಹಬ್ಬವನ್ನು ನಡೆಸಲಿ. ಅಷ್ಟು ಮಾತ್ರಕ್ಕೆ ಹಿಂದುಗಳ ಅನ್ನದಾನಕ್ಕೆ ಅನುಮತಿ ಕೊಡಬಾರದು ಎನ್ನುವುದು ಮಾತ್ರ ಸಲ್ಲದು ಎಂದರು.
ಧಾರ್ಮಿಕ ನೆಲೆಯಲ್ಲಿ ಅನುಮತಿಯನ್ನು ನಿರಾಕರಿಸುವುದು ಸಂವಿಧಾನದ 15ನೇ ವಿಧಿಯನ್ನು ಉಲ್ಲಂಘಿಸುತ್ತದೆ ಅನ್ನದಾನವು ಮೋಕ್ಷಕ್ಕೆ ದಾರಿಯೆನ್ನುವ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಕಾನೂನು ವ್ಯವಸ್ಥೆಯ ಪರಿಣಾಮವನ್ನು ಊಹಿಸಿಕೊಂಡು ಮೂಲಭೂತ ಹಕ್ಕುಗಳನ್ನು ಮೊಟಕುಗಳಿಸುವಂತಿಲ್ಲ. ಪಲಚಂಪಟ್ಟ ಗ್ರಾಮದಲ್ಲಿ 2500 ಕ್ರೈಸ್ತಮನೆಗಳಿದ್ದು ಬರೇ 400 ಮನೆಗಳು ಹಿಂದುಗಳಾಗಿರುವುದು ಕಾನೂನು ಸಮಸ್ಯೆಗೆ ಕಾರಣವಾಗಬಹುದು ಎನ್ನುವ ಪೊಲೀಸರ ವಾದವು ಒಪ್ಪತಕ್ಕದಲ್ಲ ಎಂದು ನ್ಯಾಯಾಧೀಶರು ಹೇಳಿದರು.
2025ರ ಅಕ್ಟೋಬರ್ 24ರಂದು ತಹಶೀಲ್ದಾರರು ಮಾಡಿದ ಆಜ್ಞೆಯನ್ನು ನ್ಯಾಯಾಲಯವು ಬದಿಗಿಟ್ಟಿತು. ನವೆಂಬರ್ 9 ರಂದು ಅನ್ನದಾನದ ಕಾರ್ಯಕ್ರಮವನ್ನು ನೇರವೇರಿಸಲು ಅನುಮತಿಯನ್ನು ನೀಡಿತು. ವಿವಾದಿತ ಸ್ಥಳದಲ್ಲೇ ಅದನ್ನು ನೇರವೇರಿಸಬಹುದು. ಡಿಂಡಿಗಲ್ ಪೊಲೀಸ್ ಸುಪರಿಟೆಂಡೆಂಟ್ ಎಲ್ಲವೂ ಶಾಂತಿಯುತವಾಗಿ ನಡೆಸುವುದನ್ನು ನಿರ್ವಹಿಸಲಿ ಎಂದು ತೀರ್ಪನ್ನು ನೀಡಿದರು.