Logo

VHP PUBLICATIONS

Hindu Vani


expand_more

ಸಂಪಾದಕೀಯ

ಘನತೆ ಕಳೆದುಕೊಂಡ ರಾಜಕೀಯ ಸಂವಾದ


ಇದನ್ನು ಎಲ್ಲೋ ಓದಿದ ನೆನಪು. ಅದು ಹೆಚ್ಚು ಕಮ್ಮಿ ಹೀಗಿತ್ತು! 'ಒಬ್ಬ ನನ್ನ ಬಾಲ್ಯ ಕಾಲದ ವ್ಯಕ್ತಿ, ಅವನ ಹೆಸರೇನೋ ಗೊತ್ತಿಲ್ಲ. ಆದರೆ ಅವನನ್ನು ಎಲ್ಲರೂ ಕರೆಯುತ್ತಿದ್ದುದು “ಪೇರಿ' ಎಂದು, ಅವನಿಗೆ ಇನ್ನೊಂದು ಅಡ್ಡ ಹೆಸರು ಇದ್ದಿತು. ಅದು ಬೋಳ್ ಬೋಳ್ ಕಪ್ಪು ಕಾಗೆ' ಅಂತ. ಈ ಕಪ್ಪು ಕಾಗೆ ಒಂದಿಷ್ಟು ತಿಕ್ಕಲು ಬೇರೆ. ಏಕೋ ಏನೋ ಈ ಹೆಸರು ಬರಲು ಕಾರಣ ಅವನಿಗೂ ತಿಳಿದಿರಲಿಕ್ಕಿಲ್ಲ. ಅವನು ಓಡಾಡುವಾಗ ಬೋಳ್ ಬೋಳ್ ಕಪ್ಪು ಕಾಗೆ' ಎಂದರೆ ಸಾಕು ಅವನಿಗೆ ಪಿತ್ಥ ಕೆರಳುತ್ತಿತ್ತು. ಆಗ ಆತ ಬೈಗುಳಗಳ ಅಕ್ಷಯ ಭಂಡಾರವನ್ನೇ ಚೆಲ್ಲಿ ಬಿಡುತ್ತಿದ್ದ. ಬಾಯಿಗೆ ಬಂದಂತೆ ಕೂಗಾಡುತ್ತಿದ್ದ. ಬೀದಿ ನಾಯಿ ಕೆರಳಿ ಬಿಡುವಂತೆ ರಣರಂಪವನ್ನೇ ಮಾಡಿಬಿಡುತ್ತಿದ್ದ. ನಾಯಿಯನ್ನು ಕೆರಳಿಸುವಂತೆ ಸುಲಭವಾಗಿ 'ಪೇರಿ'ಯನ್ನು ಕೆರಳಿಸಿ ಬಿಡಬಹುದಾಗಿತ್ತು. ಇಷ್ಟೆಲ್ಲಾ ಗೊತ್ತಿದ್ದವರೇ ಅವನನ್ನು ಸಂತೆಯಲ್ಲಿ, ಎಲ್ಲೋ ಗುಂಪಿನ ನಡುವೆ, ಎಲ್ಲೋ ಜಾತ್ರೆ ಮಧ್ಯೆ 'ಬೋಳ್ ಬೋಳ್ ಕಪ್ಪು ಕಾಗೆ' ಎಂದು ಬಿಡುತ್ತಿದ್ದರು. ಅದು 'ಪೇರಿ'ಯ ಕಿವಿಗೆ ತಟ್ಟಿದರೆ ಸಾಕು, ಆತ ಹಾಗೆ ಕೂಗಿದ ಗುಂಪಿನಲ್ಲಿದ್ದ ಆಗೋಚರ ವ್ಯಕ್ತಿಯ 'ಅಮ್ಮ' 'ಅಕ್ಕಂದಿರ ಜನ್ಮ ಜಾಲಾಡಿ ಬಿಡುತ್ತಿದ್ದ, ಕೇಳುಗರ ಕಿವಿ ಒಡೆದು ಹೋಗುವಷ್ಟು, ಕೊನೆಕೊನೆಗೆ ಕೇಳಲಾಗದೆ ಅಸಹ್ಯವಾಗಿ ಕಿವಿ ಮುಚ್ಚಿಕೊಳ್ಳುವಷ್ಟು ಕೂಗಾಡಿ ಕೊನೆಗೆ ಸುಸ್ತಾಗಿ ತಾನೇನೋ ಜಗತ್ತು ಮೆಚ್ಚುವಂತೆ ಆಡಿಕೊಂಡೆ ಎನ್ನುವ ಮುಖಭಾವದಿಂದ ತೆಪ್ಪಗಾಗಿ ಬಿಡುತ್ತಿದ್ದ. ಇಷ್ಟಾಗುವಾಗ ಆ ಕರೆದವನು ತನ್ನ ಪಾಡಿನ ಕೆಲಸಕಾರ್ಯದ ಮೇಲೆ ಮತ್ತೆಲ್ಲೋ ಹೋಗಿಯಾಗಿ ಬಿಡುತ್ತಿತ್ತು. ಕೆಲವರಿಗೆ ಅವನನ್ನು ಈ ರೀತಿ ಕೆರಳಿಸಿ ಮನರಂಜನೆಯನ್ನು ಹೊಂದುವ ವಿಕೃತಿಯೂ ಇತ್ತು ಅನ್ನಿ.

ಈಚಿನ ದಿನಗಳಲ್ಲಿ ಈ 'ಬೋಳ್ ಬೋಳ್ ಕಪ್ಪು ಕಾಗೆಗಳು ಯಾರೇ ಆದರೂ, ಎಲ್ಲೇ ಆಗಲಿ ಏನೇ ಹೇಳಿದರೂ ಅದಕ್ಕೆ ಉತ್ತರಿಸುವುದು ತಮ್ಮ ಕರ್ತವ್ಯವೆಂದು ಕೊಳ್ಳುತ್ತವೆ. ಎಂದೋ ಯಾವುದೋ ಸಂದರ್ಭದಲ್ಲಿ ಹೇಳಿದ ಹೇಳಿಕೆಗಳನ್ನು ತಮಗೆ ಬೇಕಾದಂತೆ ಹರಿದು ಅಥವಾ ಅದಕ್ಕೆ ಇನ್ನೇನನ್ನೋ ಅಂಟಿಸಿ ವೈಭವೀಕರಿಸಿ ಅಥವಾ ವಿಕೃತಿಗೊಳಿಸಿ ಅದನ್ನು ದಾರಿ ತಪ್ಪಿಸಲು ಬಳಸುವುದು ಅದರಿಂದ ಕೃತಕೃತ್ಯರಾದೆವೆಂದುಕೊಳ್ಳುವುದು ದಿನಚರಿಯೇ ಆಗಿಬಿಟ್ಟಿದೆ.

ಹೀಗಾಗಿ ಇಂದಿನ ಸಾಮಾಜಿಕ ಅಥವಾ ರಾಜಕೀಯ ಸಂವಾದಗಳಿಗೆ ಒಂದು ಘನತೆ ಮತ್ತು ಸಂಯಮಗಳು ಇಲ್ಲವಾಗಿವೆ. ಈ ಕೆಸರಾಟಗಳಿಂದ ಒಂದು ಸಿದ್ಧವಾಗಿ ಬಿಡುತ್ತದೆ. ಅದೆಂದರೆ ಈ ಕಪ್ಪು ಕಾಗೆಗಳ ನಿಜ ಬಂಡವಾಳವು ಬಯಲಾಗುತ್ತದೆ.

ಹಲವು ಬಾರಿ ಏಕಪಕ್ಷೀಯವಾಗಿಯೂ ಏಕ ಮುಖಿಯಾಗಿಯೂ ನಡೆಯುವ ಈ ವಿವಾದಗಳಿಂದ ನಾಲಿಗೆಯು ಹೊಲಸಾಗುತ್ತದೆ. ಮನಸ್ಸು ಕಹಿಯಾಗುತ್ತದೆ. ಭಿನ್ನಾಭಿಪ್ರಾಯಗಳು ವಾಸ್ತವದ ಸಂಯಮವನ್ನು ಕಡಿದು ಬಿಡುತ್ತವೆ.

ಸರ್ಕಾರವೇ ಮುಂದೆ ನಿಂತು ತಮ್ಮ ಮುಂದೆ ಅಡರುವ ಪ್ರಾಸಂಗಿಕ ಪೇಚನ್ನು ತಪ್ಪಿಸಿಕೊಳ್ಳಲು ಇಂತಹ ಪ್ರಸಂಗಗಳನ್ನು ವಿಕೃತಗೊಳಿಸಿ ಉಲ್ಲೇಖಿಸುವುದುಂಟು. ಬಿಹಾರದ ಚುನಾವಣೆ ನಡೆಯುವಾಗ ದೇಶಾದ್ಯಂತ ಸರಣಿ ಸ್ಫೋಟಗಳನ್ನು ನಡೆಸುವ ಬಹುದೊಡ್ಡ ಸಂಚು ನಮ್ಮ ಭದ್ರತಾ ವ್ಯವಸ್ಥೆಗಳಿಂದ ವಿಫಲವಾಯಿತು. ಮುಸ್ಲಿಂ ಜನಸಂಖ್ಯೆಯು ಹೆಚ್ಚಿರುವ ಕ್ಷೇತ್ರಗಳ ಅಲ್ಪಸಂಖ್ಯಾತರನ್ನು ಕೆರಳಿಸಿ ಮತದಾನದ ಧ್ರುವೀಕರಣವಾಗಿಸುವ ಪ್ರಯತ್ನವಿದು.

ಅದನ್ನು ಮರೆಮಾಚಿ ವಿವಾದದ ದಿಕ್ಕನ್ನೇ ತಪ್ಪಿಸಿಬಿಡಲು ಬಿಹಾರದ ಚುನಾವಣೆಯ ಒಂದು ದಿನ ಮೊದಲು ಏಕೆ ಈ ಸ್ಫೋಟವು ನಡೆಯಿತು ಎಂದು ಕರ್ನಾಟಕ ಅಲ್ಪಸಂಖ್ಯಾತ ಮಂತ್ರಿ ಕೇಳಿದರು. ಇನ್ನೊಬ್ಬ ಮಂತ್ರಿಯು ಪದೇ ಪದೇ ಸ್ಫೋಟವೇಕೆ ಆಗುತ್ತದೆ. ಇದು ಗುಪ್ತಚರ ವ್ಯವಸ್ಥೆಯ ವೈಫಲ್ಯ ಈಗಿನ ಕೇಂದ್ರ ಗೃಹಮಂತ್ರಿಯು ಭಾರತ ಕಂಡ ಅತಿ ದುರ್ಬಲ ಅಸಮರ್ಥ ಗೃಹಮಂತ್ರಿ ಎಂದರು. ಮುಖ್ಯಮಂತ್ರಿಗಳಂತೂ ತಮ್ಮ ಆಪ್ತ ಪತ್ರಕರ್ತರಿಗೆ; ಕೇಳಬೇಕಾದ ಪ್ರಶ್ನೆಗಳನ್ನು ತಾವೇ ಬರೆದುಕೊಟ್ಟರು. ಅದನ್ನೇ ಎರಡೆರಡು ಸಾರಿ ಕೇಳುವಂತೆ ಮಾಡಿದರು. ಅದು ಬೇರೆಯೇನೂ ಆಗಿರಲಿಲ್ಲ. 'ಚುನಾವಣೆ ಬಂದಾಗಲೇ ಸ್ಫೋಟಗಳೇಕೆ ನಡೆಯುತ್ತದೆ. ಎನ್ನುವ ಪ್ರಶ್ನೆ' ದೇಶದ ಸುರಕ್ಷೆಯ ಬಗ್ಗೆ ಕಾಳಜಿ ಇಲ್ಲದ ಈ ರಾಜಕಾರಣಿಗಳಲ್ಲಿ ಒಬ್ಬರು; ಈ ಸ್ಫೋಟವನ್ನು ನಡೆಸಿದವರು. 'ಸ್ಥಳೀಯವಾಗಿ ಸಾಕಿದ ಭಯೋತ್ಪಾದಕ'ರು ಎನ್ನುವ ದೇಶವಿರೋಧಿ ಹೇಳಿಕೆಯನ್ನು ಕೊಟ್ಟರು. ಅಧಿಕಾರ ರಾಜಕೀಯದಲ್ಲಿ ಮೊದಲು ಹರಾಜಾಗಿ ಬಿಡುವುದು ದೇಶದ ಸಮಗ್ರತೆ!

ನಮ್ಮ ರಾಜಕೀಯವಷ್ಟೇ ಅಲ್ಲ, ಸಾಮಾಜಿಕ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬದಲಾಗಿ ಬಿಡುತ್ತವೆ. ಅವರು ಇವರನ್ನು ಅದಕ್ಕೆ ಉತ್ತರವಾಗಿ ಇವರು ಅವರನ್ನು ಪರಸ್ಪರ ಹೊಲಸು ಹೊಲಸಾಗಿ ನಿಂದಿಸಿಕೊಳ್ಳುತ್ತಾರೆ. ಈ ಭರದಲ್ಲಿ ಸಂಪೂರ್ಣ ವಾತಾವರಣವನ್ನು ಕಲುಷಿತಗೊಳಿಸಿ ಬಿಡುತ್ತಾರೆ. ಮಾಧ್ಯಮಗಳಲ್ಲಿ ಈ ಇಬ್ಬರ ಪ್ರತಿನಿಧಿಗಳಾಗಿ ಇರುವವರು ಅದನ್ನು ಮತ್ತಷ್ಟು ಕೆರಳಿಸುತ್ತಾರೆ. ವಿವಾದವೇ ಅಭಿರುಚಿಯಾಗಿ ಬದಲಾಗಿ ಬಿಟ್ಟಿದೆ. ಹಿಂದೆ ರಾಜಕಾರಣಿಗಳಿಗಷ್ಟೇ ಸೀಮಿತವಾದ ಈ ಪರಿಪಾಠಿಯು ಉಳಿದೆಲ್ಲ ಕಡೆಗೂ ಹಬ್ಬಿ ಬಿಟ್ಟಿದೆ. ಅಸಲಿಗೆ ನಿಜವಾಗಿ ಕಾಡಬೇಕಿರುವ ನಿದ್ದೆಗೆಡಿಸಬೇಕಾಗಿರುವ ನೆಮ್ಮದಿಯ ಪ್ರಶ್ನೆ ಆತ್ಮಗೌರವದ ಪ್ರಶ್ನೆಯನ್ನು ಮುನ್ನಲೆಗೆ ತರುವುದು ಆಗುತ್ತಲೇ ಇಲ್ಲ.


ಅಘಾಯತಾಮಪಿ ನಹ್ಯಾ ಮುಖಾನಿ ಸಪತ್ಯೇಷು ವಜ್ರಮರ್ಪತಮ್ | 

ಇಂದ್ರೇಣ ದತ್ತಾ ಪ್ರಥಮಾ ಶದನಾ ಭ್ರಾತೃವೃಘ್ನಿ ಯಜಮಾನಸ್ಯ ಗಾತುಃ ||

ಹೇ ರಾಜನ್, ಹಿಂಸಾಪ್ರವೃತ್ತರಾದ ಪಾಪಿಗಳು ಬದುಕಲು ಅರ್ಹರಲ್ಲ. ಅವರನ್ನು ನಿನ್ನ ರಾಜ್ಯದಲ್ಲಿರಗೊಡಬೇಡ, ಅವರ ಮುಖದರ್ಶನ ಮಾಡಬೇಡ. ನೂರಾರು ಜನರನ್ನು ಆಹಾರ ಕೊಟ್ಟು ಪೋಷಿಸುವ, ಆರೋಗ್ಯದಾಯಿನಿಯಾದ ಸದಾ ಮನುಕುಲದ ಏಳೆಗಾಗಿ ಮಾನವನಿಗಾಗಿ ದುಡಿಯುವ ಕಾಮಧೇನುವಿನ ಹಿಂಸೆಗೆ ಧಿಕ್ಕಾರವಿರಲಿ. ರಾಜನೇ, ಗೋ ಆದಿಯಾಗಿ ಪ್ರಾಣಿಹಿಂಸೆಯನ್ನು ನೀನು ತಡೆಯದಿದ್ದಲ್ಲಿ ನಿನ್ನ ದೇಶ ಬರಗಾಲ ಮುಕ್ತವಾಗಿರಲು ಸಾಧ್ಯವಿಲ್ಲ. ಶಾಂತಿ, ಸಮಾಧಾನ, ಆರೋಗ್ಯ, ವಿದ್ಯೆ, ರಕ್ಷಣೆ, ಆಹಾರ ಇವು ದೇಶದ ಸಂಪತ್ತು. ಅವು ಉತ್ಪನ್ನವಾಗುವುದು ಗೋ ಸಂರಕ್ಷಣೆಯಿಂದ.