Hindu Vani
Index
ಇತಿಹಾಸ
ವೀರ ಬಾಲದಿವಸ
ಭಾರತದಲ್ಲಿ ಡಿಸೆಂಬರ್ 26ರಂದು ಆಚರಿಸುವ ವೀರ ಬಾಲದಿವಸವು ಹತ್ತನೇ ಸಿಖ್ ಗುರುಗಳಾದ ಗುರುಗೋವಿಂದ ಸಿಂಹರ ಕಿರಿಯ ಮಕ್ಕಳಿಬ್ಬರ ಅಸಾಧಾರಣ ಧೈರ್ಯ ಮತ್ತು ತ್ಯಾಗವನ್ನು ನೆನಪಿಸುವ ಬಲಿದಾನದ ದಿನವಾಗಿದೆ. ಅವರ ಅಚಲ ಧರ್ಮನಿಷ್ಠೆಯೂ ಅಸಾಧಾರಣ ಛಲವೂ ಹಿಂದೂ ಪರಂಪರೆಯ ಉಜ್ವಲ ಪ್ರಸಂಗವಾಗಿದೆ.
ಇತಿಹಾಸದ ಸಂದರ್ಭ:
ಸಿಖ್ ಇತಿಹಾಸದ ವೀರೋಚಿತ ದುರಂತ ಅಧ್ಯಾಯಗಳಲ್ಲಿ ವೀರ ಬಾಲದಿವಸದ ಸಂದರ್ಭವೂ ಪ್ರಮುಖವಾದುದು. ಅದು ನಡೆದುದು 1704ರಲ್ಲಿ ಚಮಕೋರ್‌ನಲ್ಲಿ 9 ವರ್ಷದ ಜೋರಾವರ್ ಸಿಂಗ್ ಮತ್ತು 6 ವರ್ಷದ ಫತೇಸಿಂಗರು ತಮ್ಮ ಅಜ್ಜಿ ಅಂದರೆ ಗುರುಗೋವಿಂದ ಸಿಂಗರ ತಾಯಿ ಗುಜರಿ ದೇವಿಯೊಂದಿಗೆ ಸರಹಿಂದದ ಫೌಜುದಾರ ವಝೀರ್ ಖಾನನ ಸೈನ್ಯಕ್ಕೆ ಸೆರೆಸಿಕ್ಕರು. ಇಬ್ಬರು ಮಕ್ಕಳನ್ನು ವಜೀರಖಾನನ ಮುಂದೆ ತಂದಾಗ ಮಕ್ಕಳನ್ನು ಇಸ್ಲಾಂಗೆ ಮತಾಂತರಗೊಳ್ಳಲು ಪುಸಲಾಯಿಸಲಾಯಿತು. ಅದು ವಿಫಲಗೊಂಡಾಗ ಮರಣ ದಂಡನೆಯ ಭಯವನ್ನು ಒಡ್ಡಲಾಯಿತು. ಈ ಎಲ್ಲ ಬೆದರಿಕೆಯ ನಡುವೆ ಮಕ್ಕಳಿಬ್ಬರೂ 'ಸತ್ ಶ್ರೀ ಅಕಾಲ್' ಎಂದು ಘೋಷಣೆಯನ್ನು ಕೂಗುತ್ತಲೇ ನಿರ್ಭಯರಾಗಿ ನಿಂತಿದ್ದರು.
ಅಂದು ಮುಂಜಾನೆ ಮಕ್ಕಳಿಬ್ಬರನ್ನೂ ಸೈನಿಕರು ಕರೆದೊಯ್ಯುವಾಗ ಅವರನ್ನು ಅಪ್ಪಿಕೊಂಡು ಅಜ್ಜಿ ಗುಜರಿದೇವಿಯು; 'ಮಕ್ಕಳೇ ಏನೇ ಶಿಕ್ಷೆ ಬರಲಿ ಯಾವುದೇ ದಂಡನೆಗಳು ಎದುರಾಗಲಿ ಧರ್ಮವನ್ನು ಬಿಡದಿರಿ. ನಿಮ್ಮ ತಂದೆಯ ತಾತನ, ಮುತ್ತಾತರ ಛಲವನ್ನು ಬಿಡದಿರಿ. ಅವರ ತ್ಯಾಗವನ್ನು ಮರೆಯದಿರಿ' ಎಂದಿದ್ದಳು. ಮಕ್ಕಳಿಬ್ಬರನ್ನು ನಿಲ್ಲಿಸಿ ಅವರ ಸುತ್ತ ಗೋಡೆಯನ್ನು ಕಟ್ಟಿ ಜೀವಂತವಾಗಿ ಉಸಿರುಗಟ್ಟಿಸಿ ಕೊಂದು ಬಿಡುವ ಆಜ್ಞೆ ಬಂದರೂ ಭಯವಿಲ್ಲದೆ ನಿಂತರು ಆ ಮರಿ ಸಿಂಹಗಳು! ಮೂರು ವರ್ಷ ಚಿಕ್ಕವನಾದ ಫತೇಸಿಂಹನ ಗೋಡೆಯು ಮುಚ್ಚುತ್ತಿರುವಾಗ ಅಣ್ಣ ಜೋರಾವರ್ ಅತ್ತು ಬಿಟ್ಟನಂತೆ. ತಮ್ಮನು ನಗುತ್ತಾ ಅಣ್ಣ ಅಳಬೇಡ, ಭಯಪಡಬೇಡ, ನಾವು ಸಾಯುತ್ತಿರುವುದು ಧರ್ಮಕ್ಕಾಗಿ ಎಂದನಂತೆ. ಅದಕ್ಕೆ ಅಣ್ಣನು “ನಾನು ಸಾವಿಗೆ ಅಂಜಿ ಅಳುತ್ತಿಲ್ಲ ಫತೇ, ನನ್ನ 3 ವರ್ಷದ ನಂತರ ಭೂಮಿಗೆ ಬಂದ ನೀನು ಈಗ 3 ಕ್ಷಣ ಮೊದಲು ಸಾಯುತ್ತಿಯಲ್ಲಾ? ಆ ಅವಕಾಶ ಮೊದಲು ನನಗೆ ಬರಬೇಕಾಗಿತ್ತು. ಎಂದು ಯೋಚಿಸಿದೆ ಅಷ್ಟೇ ನಿನ್ನನ್ನು ಪ್ರೀತಿಯಿಂದ ಅಪ್ಪಿಕೊಳ್ಳಲು ಆಗುತ್ತಿಲ್ಲ ತಮ್ಮಾ” ಎನ್ನುತ್ತಿರುವಾಗ ಅವನ ಮೇಲೂ ಗೋಡೆ ಕಟ್ಟಿಯಾಗಿತ್ತು. ಇಬ್ಬರೂ ಕೊನೆಯ ಬಾರಿಗೆ 'ಸತ್ ಶ್ರೀ ಅಕಾಲ್' ಎನ್ನುತ್ತಾ ಅಜ್ಜಿಯ ಮಾತನ್ನು ನಡೆಸಿಕೊಟ್ಟರು.
ವೀರ ಬಾಲ ದಿವಸ್:
2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವೀರಬಾಲ ದಿವಸವನ್ನು ಅಧಿಕೃತವಾಗಿ ಘೋಷಿಸಿದರು. ಮಕ್ಕಳಲ್ಲಿ ಅಡಗಿರುವ ಶೌರ್ಯ, ಛಲ ಮತ್ತು ಧರ್ಮ ಸಂಸ್ಕೃತಿಯ ಪ್ರೇಮವನ್ನು ಗೌರವಿಸುವ ರಾಷ್ಟ್ರೀಯ ದಿನವಾಗಿ ವೀರ ಬಾಲ ದಿವಸವಿದೆ. ಈ ದಿನದಂದು ಈ ಗುರುಬಾಲಕರು ದೃಢ ನಿರ್ಧಾರದ ಪ್ರತೀಕವಾಗಿ ಕಾಣುತ್ತಾರೆ. ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯನ್ನು ನೀಡುವ ಪ್ರಖರ ಬೆಳಕಾಗುತ್ತಾರೆ.
ಈ ವೀರ ಬಾಲಕರ ಸರ್ವೋಚ್ಚ ತ್ಯಾಗದ ನಡೆಯು ಕಾಲಾತೀತವಾದ ಸಂಸ್ಕೃತಿಯ ಮೌಲ್ಯಗಳನ್ನು ನೆನಪಿಸುತ್ತದೆ. ದಬ್ಬಾಳಿಕೆಯ ವಿರುದ್ಧ ವೀರೋಚಿತವಾಗಿ ವರ್ತಿಸುವುದೊಂದೇ ಶ್ರೇಷ್ಟವಾದ ದಾರಿ. ಸಾಮಾಜಿಕ ಬದಲಾವಣೆಗೆ ನಾಂದಿಯಾಗುವ ಪ್ರೇರಣೆ ಸಿಗುವುದು ಶ್ರೇಷ್ಟರ ನಡೆಯಿಂದ, ಶಾಂತಿಗಾಗಿ ಸೋಲೊಪ್ಪುವುದು ವಿಹಿತ ರೀತಿಯಲ್ಲ.
ಬಾಲಕರಿಬ್ಬರ ವೀರೋಚಿತ ಸಾವಿನ ವಾರ್ತೆಯನ್ನು ಕೇಳಿದ ಅಜ್ಜಿ ಗುಜರಿ ದೇವಿ ಕುಳಿತಲ್ಲೇ ಧ್ಯಾನಸ್ಥಳಾಗಿ ಪ್ರಾಣ ಬಿಟ್ಟಳು. ಸುದ್ದಿ ಕೇಳಿದ ಗುರು ಗೋವಿಂದ ಸಿಂಗರು ಒರೆಯಿಂದ ಖಡ್ಗವನ್ನು ಹೊರ ಸೆಳೆದರು. ತಾನು ಕೂತ ಕಲ್ಲಿನ ಪಕ್ಕ ಚಿಗುರಿದ ಗರಿಕೆ ಹುಲ್ಲನ್ನು ಖಡ್ಗದ ಮೊನೆಯಿಂದ ಕಿತ್ತು ಆಕಾಶದತ್ತ ಚಿಮ್ಮಿಸಿದರು. ಮತ್ತು ಉದ್ಧಾರವೆತ್ತಿ “ಓ ಪ್ರಭ; ನಮ್ಮ ನಡುವೆ ನೀನೇ ಅರಳಿಸಿದ ಎರಡು ಹೂಗಳನ್ನು ನಿನಗೇನೇ ಅರ್ಪಿಸಿ ಬಿಡುವೆ” ಎಂದರಂತೆ.
ಇದು ಹಿಂದು ಪರಂಪರೆ. ಇದು ನಾವು ಬಾಳಿ ಬಂದ ಜೀವನ ಸ್ವಾತಂತ್ರ್ಯಕ್ಕೆ ಬೆಲೆ ತೆತ್ತಾಗಲೇ ಅದಕ್ಕೆ ಮಾನ್ಯತೆ ಸಿಗುತ್ತದೆ.
.