Hindu Vani
Index
ತಾರತಮ್ಯ
ಹಿಂದು ಮೌಲ್ಯ ಮತ್ತು ಸಂವಿಧಾನದ ವಿಧಿ
ಸ್ವಾತಂತ್ರ್ಯದ ಹೊಸದರಲ್ಲಿ ಹಿಂದೂ ವೈಯಕ್ತಿಕ ಕಾನೂನುಗಳನ್ನು ಕಾಲಕ್ಕೆ ಅನುಗುಣವಾಗಿ ವ್ಯತ್ಯಾಸವಾಗಬೇಕು ಎನ್ನುವ ನೆಪದಿಂದ ಬದಲಾಯಿಸಲಾಯಿತು. ಭಾವನೆಗಳಿಗೆ ಧಕ್ಕೆ ಬರಬಾರದೆಂದು ಕಾಲಬಾಹಿರವೆನಿಸಿದರೂ ಮುಸ್ಲಿಂ ಕಾನೂನುಗಳನ್ನು ಉಳಿಸಲಾಯಿತು. ಸಂವಿಧಾನದಲ್ಲಿ ಉಲ್ಲೇಖಿಸಿರುವ ಉಲ್ಲೇಖಿಸಿರುವ ಧಾರ್ಮಿಕ ಪ್ರಚಾರದ ಹಕ್ಕು ಮೇಲ್ನೋಟಕ್ಕೆ ಅಪಾಯಕಾರಿಯಲ್ಲವೆಂದು ಕಂಡರೂ ಅದರಲ್ಲಿರುವ ಕಾನೂನಿನ ಒಳಲೋಪಗಳ ಲಾಭವನ್ನು ಕ್ರೈಸ್ತ ಮಿಷನರಿಗಳು ಚೆನ್ನಾಗಿ ಬಳಸಿಕೊಂಡರು. ತಮಗೆ ಬರುವ ದೇಣಿಗೆಯ ಹಣಬಲದಿಂದ ದುರ್ಬಲ ಬಡ ಹಿಂದುಗಳ ಮತಾಂತರವನ್ನು ಮಾಡುತ್ತ ಬಂದರು.
ಬ್ರಿಟಿಷರ ಕಾಲದ ಕಾನೂನುಗಳಾಗಲೀ ನಂತರ ಬರೆದ ಕಾನೂನುಗಳಾಗಲೀ ಹಿಂದು ಹಕ್ಕುಗಳನ್ನೂ ಅವರ ಸ್ವಾಯತ್ತತೆಯನ್ನೂ ಹೇಗೆ ಹತ್ತಿಕ್ಕಿದವು ಎನ್ನುವುದು ಈಗಲೂ ಹಲವರಿಗೆ ಅರ್ಥವಾಗದೇ ಉಳಿದಿದೆ. ಜಾತ್ಯತೀತತೆಯ ಮುಖವಾಡದಲ್ಲಿ ಸರ್ಕಾರಗಳು ಸಮಾನತೆಯ ಸದ್ಭಾವನೆಗಳನ್ನು ಹಿಂದುಗಳ ಪಾಲಿಗೆ ನಿರಾಕರಿಸಿದವು. ಹಿಂದು ಸಮಾಜವನ್ನು ಸಂಶಯಾಸ್ಪದ ಸಮೂಹದಂತೆ ಕಾಣಲಾಯಿತು.
ಸಂವಿಧಾನದ 25ನೇ ವಿಧಿ-ಧರ್ಮ ಪ್ರಚಾರದ ಹಕ್ಕು-ಮತಾಂತರಿಸುವ ಹಕ್ಕು ಎಂದು ಬದಲಾದುದು:
ಆತ್ಮ ಸಾಕ್ಷಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನವು ಕೊಡ ಮಾಡಿದೆ. ಅದನ್ನು ಪಾಲಿಸುವ ಮತ್ತು ಪ್ರಚಾರಮಾಡುವ ಸ್ವಾತಂತ್ರ್ಯವನ್ನೂ ನೀಡಿದೆ. ನೋಡಲೇನೋ ಇದು ವಿಭಿನ್ನ ಸಾಮಾಜಿಕ ಪರಿಸರದಲ್ಲಿ ಕೊಟ್ಟಿರುವ ವಾಗ್ದಾನದಂತೆ ಕಂಡರೂ ಅದರ ಮೂಲಕ ಆದ ಅಪಾಯಗಳು ಮಾತ್ರ ಶಬ್ದಗಳಿಗೆ ಮೀರಿದುದು. ಬಹುದೊಡ್ಡ ಸಂಖ್ಯೆಯ ಬಡವರಿರುವ, ಶಿಕ್ಷಣ ಸೌಲಭ್ಯದ ಕೊರತೆಯಿರುವ ದುರ್ಬಲ ಸಾಮಾಜಿಕ ಪರಿಸರದಲ್ಲಿ ಈ ಪ್ರಚಾರದ ಸ್ವಾತಂತ್ರ್ಯವು ವ್ಯವಸ್ಥಿತವಾದ ಮತಾಂತರಕ್ಕೆ ಆಸ್ಪದವನ್ನು ನೀಡಿತು.
1940ರ ದಶಕದ ಅಂತ್ಯ ಭಾಗದಲ್ಲಿ ನಡೆದ ಸಂವಿಧಾನ ರಚನೆಯ ಚರ್ಚೆಯಲ್ಲಿ ಹಲವು ಸದಸ್ಯರು ಈ Propagate ಶಬ್ದವು ಅವ್ಯಾಹತವಾದ ಮತಾಂತರಕ್ಕೆ ಕಾರಣವಾಗಬಹುದೆಂದು ಎಚ್ಚರಿಸಿದರು ಕೂಡಾ. ಆದರೆ ಇನ್ನು ಕೆಲವರು ಅದು ತನ್ನ ಮತದ ಉದಾತ್ತ ತತ್ವಗಳನ್ನು ಉಳಿದವರೊಂದಿಗೆ ಹಂಚಿಕೊಳ್ಳುವುದಷ್ಟೇ! ವಂಚನೆಯಿಂದಲೋ ಒತ್ತಡದಿಂದಲೋ ಮತಾಂತರಿಸುವ ಹಕ್ಕು ಎನ್ನುವುದೇ ಅಲ್ಲಿ ಇಲ್ಲ! ಎಂದು ಪ್ರತಿಪಾದಿಸಿದರು.
ವಸ್ತುಸ್ಥಿತಿಯು ಮಾತ್ರ ಭಯಾನಕವಾಯಿತು. ಸರ್ಕಾರಿ ದಾಖಲೆಗಳೇ ಹೇಳುವಂತೆ ವಿದೇಶಿ ದೇಣಿಗೆ (FERA) ಕಾನೂನಿನ್ವಯವೇ ಬಂದ ಹಣದ ಅತಿ ಹೆಚ್ಚಿನ ಪಾಲು ಕ್ರೈಸ್ತ ಮಿಷನರಿಗಳ ಸಂಸ್ಥೆಗಳಿಗೆ ತಲುಪಿತು. ಅಂದರೆ ಶೇಕಡಾ 70ಕ್ಕೂ ಹೆಚ್ಚು ದೇಣಿಗೆಯು ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ದೊರಕಿತು. ಇದು ವನವಾಸಿ ಕ್ಷೇತ್ರದಲ್ಲೆಲ್ಲಾ ಸಾಮಾಜಿಕ ಸೇವೆ ಎಂದು ಕರೆಸಿಕೊಳ್ಳುತ್ತಾ ಕ್ರೈಸ್ತ ಮತಾಂತರದ ಕಾರ್ಯಗಳಿಗೆ ವಿನಿಯೋಗವಾಗುತ್ತಾ ಬಂದಿತು.
ಇದರಿಂದ ಭಾರತದ ಈಶಾನ್ಯ ಪ್ರದೇಶಗಳ ಧಾರ್ಮಿಕ ಚಿತ್ರಣವೇ ಬದಲಾಯಿತು. ಒರಿಸ್ಸಾ ಮತ್ತು ಛತ್ತಿಸ್‌ಗಡಗಳೂ ಇದಕ್ಕೆ ಬಲಿಯಾದವು. 1950ರಲ್ಲಿ 0.7% ರಷ್ಟಿದ್ದ ಕ್ರೈಸ್ತರು ಅಲ್ಲಿ ಶೇಕಡಾ 30ನ್ನು ತಲುಪಿದವು. ಇದೇನೂ ಆಕಸ್ಮಿಕವಾಗಿ ನಡೆದುದೇನಲ್ಲ. ನೆಹರೂ ನೇತೃತ್ವದಲ್ಲಿ ಈಶಾನ್ಯ ರಾಜ್ಯಗಳನ್ನು ಭಾರತದಲ್ಲಿ ಭಾವನಾತ್ಮಕವಾಗಿ ವಿಲೀನವಾಗಿಸುವುದನ್ನು ಬಿಟ್ಟು ಅಲ್ಲಿಗೆ ವಿದೇಶಿ ಮಿಷನರಿಗಳು ಅನಿರ್ಬಂಧಿತ ಪ್ರವಾಸ ಮಾಡಲು ಪರವಾನಿಗೆ ನೀಡಿದುದರಿಂದ ಆದ ಬೆಳವಣಿಗೆ
ಈ ಮಿಷನರಿಗಳು ಅಲ್ಲಿ ತಮ್ಮ ಮೂಲಭೂತ ಸ್ವಾತಂತ್ರ್ಯವೆಂದು ಹೆಸರಿಸುತ್ತಾ ಸಾಂಸ್ಕೃತಿಕ ಬುಡಮೇಲು ಕೃತ್ಯವನ್ನೇ ನಡೆಸಿದರು. ಜಾತ್ಯತೀತ ನಿಲುವು ಸರ್ಕಾರದ ನಿಷ್ಕ್ರಿಯತೆಗೆ ನೆಪವಾಗಿ ಬಿಟ್ಟಿತು. 'ಫ್ರೀಡಂ ಆಫ್ ರಿಲೀಜಿಯನ್ ಆ್ಯಕ್ಟ್' ಎನ್ನುವ ಮತಾಂತರ ತಡೆಯ ಕಾನೂನು ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಪ್ರಾಂತ್ಯಗಳಲ್ಲೇನೋ ಇದೆ. ಆದರೆ ಅದರ ಸಮಗ್ರ ಅಳವಡಿಕೆಯಲ್ಲಿ ಲೋಪದೋಷಗಳಿವೆ. ಇನ್ನು ನ್ಯಾಯಾಂಗದ ಸ್ಥಿರ ನಿಲುವಿನಲ್ಲೂ ಕೊರತೆ ಇದ್ದಂತಿದೆ.
1977ರ ರೆವರೆಂಡ್ ಸ್ಪಾನಿಸ್‌ಲಾಸ್ ಮತ್ತು ಮಧ್ಯಪ್ರದೇಶ ಸರ್ಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮತಾಂತರ ವಿರೋಧ ಕಾನೂನಿನ ಸಂವಿಧಾನಾತ್ಮಕತೆಯನ್ನು ಎತ್ತಿ ಹಿಡಿಯಿತು. ಧಾರ್ಮಿಕ ಪ್ರಸಾರವೆಂದರೆ ಮತಾಂತರದ ಹಕ್ಕು ಅಲ್ಲ ಎಂದು ಹೇಳಿತು. ಹೀಗೆ ಸ್ಪಷ್ಟ ಕಾನೂನು ಇದ್ದರೂ, ಸರ್ಕಾರದಿಂದ ಅನ್ಯಾಯದ ಮತಾಂತರ ಕ್ರಮಗಳ ವಿರುದ್ಧ ಮುನ್ನೆಚ್ಚರಿಕೆಯ ಕ್ರಮಗಳು ನಡೆಯುತ್ತಿಲ್ಲ. ಶಿಕ್ಷಣ, ಆರೋಗ್ಯ ನೆರವು ಮತ್ತು ಆರ್ಥಿಕ ಸಹಾಯ ನೀಡುವ ಮತಾಂತರ ಶಕ್ತಿಗಳ ಕಾರ್ಯಕ್ರಮಗಳು ಸಾಮಾಜಿಕ ಅಭದ್ರತೆಗೆ ವಿಪುಲ ಅವಕಾಶವನ್ನು ಕೊಡುತ್ತಲೇ ಇವೆ.
ಸಂವಿಧಾನದ 28 ಮತ್ತು 30 ವಿಧಿಗಳು:
ಈ ಮೂಲಕ ಹಿಂದುವಲ್ಲದ ಧಾರ್ಮಿಕ ವಿಚಾರಗಳಿಗೆ ಮಾತ್ರ ತರಗತಿಯಲ್ಲಿ ಅವಕಾಶ. ಆದರೆ ಇಂತಹ ಸೌಲಭ್ಯ ಹಿಂದುಗಳಿಗಿಲ್ಲ. ಸರ್ಕಾರದ ಅನುದಾನದಿಂದ ನಡೆಯುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣದ ಅವಕಾಶವಿಲ್ಲ. ಇದು ಸರ್ಕಾರದ ನೀತಿಯ ನಿಷ್ಪಕ್ಷಪಾತವನ್ನು ಬಿಂಬಿಸುತ್ತದೆ. ಆದರೆ ಇದನ್ನು 30(1) ನೇ ವಿಧಿಯೊಂದಿಗೆ ಓದಿದಾಗ ಅದು ಪಕ್ಷಪಾತದ ಅವಕಾಶವೆಂದು ತೋರಿಸುತ್ತದೆ. ಈ ವಿಧಿಯಂತೆ ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರು ಅವರ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಬಹುದು, ಹಾಗೂ ಅಲ್ಲಿ ಸಮಗ್ರ ಆಡಳಿತದ ನಿರ್ಧಾರದ ಆಯ್ಕೆಯು ಅವರ ಹಕ್ಕಾಗಿದೆ. ಇದರಿಂದ ದೇಶದ ಬಹುಸಂಖ್ಯಾತ ಹಿಂದುಗಳು ತಮ್ಮ ಮಕ್ಕಳಿಗೆ ಧರ್ಮದ ಅಪೂರ್ವ ಗ್ರಂಥಗಳಾದ ಗೀತೆ, ಉಪನಿಷತ್ತುಗಳನ್ನು ಬಿಡಿ; ಉಳಿದ ಧಾರ್ಮಿಕ ಪ್ರಾಥಮಿಕ ಮಾಹಿತಿಯನ್ನು ಕೂಡಾ ಪಡೆಯದಂತಹ ಸ್ಥಿತಿಯು ಉಂಟಾಗಿದೆ.
ಕ್ರೈಸ್ತ ಗುಂಪುಗಳಾದ ಜೆಸುಯಿಸ್ಟ್‌ಗಳು, ಸಾಲೇಸಿಯನ್ಸ್, ಕ್ಯಾಥೋಲಿಕ್ ಮಿಷನರಿಗಳು ಸರ್ಕಾರದಿಂದ ಭೂಮಿ, ಅಲ್ಲಿಂದ ತೆರಿಗೆ ವಿನಾಯಿತಿ ಮತ್ತು ಆರ್ಥಿಕ ನೆರವುಗಳನ್ನು ಪಡೆಯುತ್ತಲೇ ಜೊತೆಗೆ ತಮ್ಮ ಧಾರ್ಮಿಕ ಶಿಕ್ಷಣದ ಅವಕಾಶವನ್ನೂ ಉಳಿಸಿಕೊಳ್ಳುವರು. ಕ್ರೈಸ್ತ ಶಿಲುಬೆಗಳು, ಕ್ರೈಸ್ತ ಹಬ್ಬಗಳು, ಬೈಬಲ್ ಉಪದೇಶಗಳೆಲ್ಲವೂ ಸಂವಿಧಾನದ 30ನೇ ವಿಧಿಯ ಆಶ್ರಯದಲ್ಲೇ ನಡೆಯುತ್ತವೆ.
ನ್ಯಾಯಾಲಯಗಳ ತೀರ್ಪುಗಳೆಲ್ಲವು ಅವರ ಈ ಮೂಲಭೂತ ರಕ್ಷಣೆಯನ್ನೇ ಎತ್ತಿ ಹಿಡಿಯುತ್ತವೆ. ಸಮಾನಾಂತರವಾಗಿ ಹಿಂದು ಸಂಸ್ಥೆಗಳ ಶಾಲೆಗಳಲ್ಲಿ ಮಾತ್ರ ಇವೆಲ್ಲವೂ ಸಂವಿಧಾನದ ಉಲ್ಲೇಖಗಳ ಹೆಸರಲ್ಲಿ ಎಲ್ಲಕ್ಕೂ ನಿಷೇಧವಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯು ಮದ್ರಸಾಗಳ ಪಠ್ಯಕ್ರಮವನ್ನು ಉನ್ನತೀಕರಿಸುವ ಕಾರಣದಿಂದ ಸರ್ಕಾರಿ ಕಾರ್ಯಕ್ರಮಗಳನ್ನು ಅಳವಡಿಸಲು ಅಪಾರ ಆರ್ಥಿಕ ಅನುದಾನವನ್ನು ಕೊಡುತ್ತದೆ. ಹೀಗೆ ಹಿಂದು ವಿದ್ಯಾರ್ಥಿಗಳು ತಮಗೆ ಅರಿವಿಲ್ಲದೆಯೇ ತಮ್ಮ ಧಾರ್ಮಿಕ ನೆಲೆಯಿಂದ ದೂರವಾಗುತ್ತ ಹೋಗುವರು.
ದೇವಸ್ಥಾನಗಳ ಸರ್ಕಾರೀಕರಣ-ಮಸೀದಿ ಮತ್ತು ಚರ್ಚ್‌ಗಳಿಗೆ ಸ್ಪಚ್ಛಂದ: ಜಾತ್ಯತೀತವೆನ್ನುವ ತತ್ವಗಳು ಈ ತಾರತಮ್ಯಗಳನ್ನು ಸಾಂಸ್ಥಿಕವಾಗಿಸಿವೆ. ಹಿಂದು ಧಾರ್ಮಿಕ ಮತ್ತು ದತ್ತಿ ಕಾನೂನುಗಳು ಜಾರಿಯಲ್ಲಿರುವ ತಮಿಳುನಾಡು, ಆಂಧ್ರ, ಕರ್ನಾಟಕ ಮತ್ತು ಕೇರಳಗಳಲ್ಲಿ ಹಿಂದು ದೇವಸ್ಥಾನಗಳು ಪೂರ್ತಿಯಾಗಿ ಸರಕಾರದ ಹಿಡಿತದಲ್ಲಿ ಉಳಿದು ಬಿಟ್ಟಿವೆ. ಇದೇನೂ ಸ್ವಾತಂತ್ರೋತ್ತರ ಬೆಳವಣಿಗೆಯಲ್ಲ. ಬ್ರಿಟಿಷ್ ವಸಹಾತು ಕಾಲದ ಶೋಷಣೆಯ ಮುಂದುವರಿದ ರೂಪವಾಗಿದೆ. ದೇವಸ್ಥಾನಗಳ ಸುಧಾರಣೆ ಮತ್ತು ನಿಯಮಾವಳಿಗಳ ನೆವದಲ್ಲಿ ಅವರು ಹುಟ್ಟು ಹಾಕಿದ ಮದ್ರಾಸ್ ರೆಗ್ಯುಲೇಶನ್ ಆಕ್ಟ್ 7-1817 ಸ್ವಾತಂತ್ರ್ಯದ ನಂತರ ಸಾರಾಸಗಟು ಕಿತ್ತು ಹೋಗುವ ಬದಲು ದಿ ಮದ್ರಾಸ್ HRCE ACT OF 1951 ರೂಪ ತಳೆದು ದೇವಸ್ಥಾನಗಳ ಆಸ್ತಿ ಪಾಸ್ತಿಗಳನ್ನು ವಶಕ್ಕೆ ಪಡೆದಿದೆ. ಹಿಂದು ಪರಂಪರೆಯ ಗಂಧಗಾಳಿಗಳಿಲ್ಲದ ಅಧಿಕಾರಿಗಳೀಗ ದೇವಸ್ಥಾನಗಳ ಆಸ್ತಿಯ ಸ್ವಾಧೀನ, ಅರ್ಚಕರ ನೇಮಕಾತಿ, ಉತ್ಸವಗಳ ನಡಾವಳಿ, ಧಾರ್ಮಿಕ ಕಟ್ಟಳೆಗಳ ಪದ್ಧತಿಗಳನ್ನು ನಿರ್ದೇಶಿಸುವರು. ಕೆಲವೊಮ್ಮೆ ಈ ಸ್ಥಾನಗಳಲ್ಲಿ ಹಿಂದುಗಳಲ್ಲದವರೂ ನೇಮಕಗೊಂಡಿರುವರು.
ಇದು ಎಲ್ಲಿಗೆ ಮುಂದುವರಿಯತೆಂದರೆ ಈ ದತ್ತಿ ಕಾನೂನನ್ನು ವಿಮರ್ಶಿಸಿದ ಮದ್ರಾಸ್ ಉಚ್ಚನ್ಯಾಯಾಲಯವು 1955ರಲ್ಲಿ ಸುಂದರರಾಜ ಅಯ್ಯಂಗಾರ್ ಮತ್ತು ಮದ್ರಾಸ್ ಸರ್ಕಾರ ಪ್ರಕರಣದಲ್ಲಿ ದೇವಸ್ಥಾನದ ಆಡಳಿತವು ಸೆಕ್ಯುಲರ್ ಚಟುವಟಿಕೆಯಾಗಬೇಕೆಂದು ವಿಚಿತ್ರವಾದ ತೀರ್ಪು ನೀಡಿತು.
ಹಿಂದು ಜೀವನ ಮೌಲ್ಯಗಳು ಕ್ಷೀಣಿಸುತ್ತಿದ್ದರೆ ತಂದೆ, ತಾಯಿಯರ ಮತ್ತು ಮಕ್ಕಳ ಅನುಬಂಧಲ್ಲೂ ಪತಿ ಪತ್ನಿಯರ ಸಂಬಂಧದಲ್ಲೂ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಬಂಧದಲ್ಲೂ ಹಿರಿಯರ ಮತ್ತು ಕಿರಿಯರ ಅಂತರದಲ್ಲೂ ಮಾನವೀಯ ಮೌಲ್ಯಗಳ ಕೊರತೆಯು ಎದ್ದು ಕಾಣುತ್ತಿರುತ್ತದೆ. ಇದು ಅಂತಿಮವಾಗಿ ನೈತಿಕ ಅಧಃಪತನಕ್ಕೆ ಕಾರಣವಾಗುತ್ತದೆ. ಮಾನವ ಜಗತ್ತಿನ ನಾಶಕ್ಕೆ ದಾರಿಯಾಗುತ್ತದೆ.