Logo

VHP PUBLICATIONS

Hindu Vani


expand_more

ಚಿಂತನೆ

ಚಿಂತನೆ

ನೂರು ಕಳೆದು, ನೂರು ನೂರರ ಆಚೆಗೂ ಸಂಘ ಚಿಂತನೆ

(ಪೂಜ್ಯ ಸರ ಸಂಘಚಾಲಕ ಡಾ| ಮೋಹನ ಭಾಗ್ವತರ ವಿಜಯ ದಶಮಿ ಭಾಷಣದ ಸಂಗ್ರಹಾನುವಾದ)


ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಕಾರ್ಯದ 100 ವರ್ಷಗಳನ್ನು ಪೂರೈಸಿದೆ. ಸಂಘದಲ್ಲಿ ವಿಚಾರ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಸ್ವಯಂಸೇವಕರು ಸಾಮಾಜಿಕ ಜೀವನದ ವಿಭಿನ್ನ ಆಯಾಮಗಳಲ್ಲಿ, ವಿವಿಧ ಸಂಘಟನೆಗಳಲ್ಲಿ, ಸಂಸ್ಥೆಗಳಲ್ಲಿ ಹಾಗೂ ಸ್ಥಳೀಯ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿರುವ ಅನೇಕ ಸಜ್ಜನರ ಜೊತೆಗೆ ಸ್ವಯಂಸೇವಕರ ಸಹಕಾರ ಮತ್ತು ಮಾತುಕತೆ ನಡೆಯುತ್ತಿರುತ್ತವೆ. ಅವುಗಳ ಸಂಕಲಿತ ಅನುಭವಗಳ ಆಧಾರದಲ್ಲಿ ಸಂಘವು ಕೆಲವು ಅವಲೋಕನ ಮತ್ತು ನಿಷ್ಕರ್ಷೆಗಳನ್ನು ಹೊಂದಿದೆ.

1) ಭಾರತದ ಪ್ರಗತಿಯ ಪ್ರಕ್ರಿಯೆಯು ವೇಗವನ್ನು ಪಡೆಯುತ್ತಿದೆ. ಆದರೂ ನಾವು ಇನ್ನೂ ಅದೇ ಅಪೂರ್ಣ ನೀತಿಗಳು ಮತ್ತು ವ್ಯವಸ್ಥೆಗಳ ಮಿತಿಯೊಳಗೆ ಯೋಚಿಸುತ್ತಿದ್ದೇವೆ, ಅದರ ಅಪೂರ್ಣತೆಯು ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಂದ ಬಟಾಬಯಲಾಗಿದೆ. ಈಗಾಗಲೇ ಅದೇ ನೀತಿಗಳ ಆಧಾರದಲ್ಲಿ ವಿಶ್ವದೊಂದಿಗೆ ನಾವು ಸಾಕಷ್ಟು ಮುಂದೆ ಬಂದುಬಿಟ್ಟಿದ್ದೇವೆ, ದಿಢೀರನೆ ಅದನ್ನು ಬದಲಿಸಲು ಸಾಧ್ಯವಿಲ್ಲ. ನಾವು ಒಂದು ದೀರ್ಘವೃತ್ತದ ಮೂಲಕ ನಿಧಾನವಾಗಿ ತಿರುಗಬೇಕಾಗುತ್ತದೆ. ನಮ್ಮದೂ ಸೇರಿದಂತೆ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಭವಿಷ್ಯದ ಅಪಾಯಗಳನ್ನು ತಪ್ಪಿಸಲು ಇದನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ. ನಮ್ಮ ಸಮಗ್ರ ಮತ್ತು ಏಕಾತ್ಮ ದೃಷ್ಟಿಕೋನವನ್ನು ಆಧರಿಸಿ ನಮ್ಮದೇ ಆದ ಅಭಿವೃದ್ಧಿಯ ಮಾರ್ಗವನ್ನು ರೂಪಿಸುವ ಮೂಲಕ ಜಗತ್ತಿಗೆ ಉತ್ತಮ ಮಾದರಿಯನ್ನು ಪ್ರಸ್ತುತಪಡಿಸಬೇಕು. ಅರ್ಥ ಮತ್ತು ಕಾಮದ ಅಂಧಾನುಕರಣೆ ಮಾಡುತ್ತಿರುವ ಜಗತ್ತಿಗೆ ಪೂಜಾಪದ್ಧತಿಗಳನ್ನು ಮೀರಿದ, ಎಲ್ಲರನ್ನೂ ಒಂದುಗೂಡಿಸುವ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮತ್ತು ಎಲ್ಲರ ಪ್ರಗತಿಯನ್ನು ಏಕಕಾಲದಲ್ಲಿ ಸಾಧ್ಯವಾಗಿಸುವ ಧರ್ಮದ ಮಾರ್ಗವನ್ನು ತೋರಿಸಬೇಕಿದೆ.

2) ಸಂಪೂರ್ಣ ದೇಶವು ಅಂತಹ ಆದರ್ಶ ಚಿತ್ರಣವನ್ನು ಜಗತ್ತಿಗೆ ಪ್ರಸ್ತುತಪಡಿಸುವ ಕಾರ್ಯವು ಕೇವಲ ದೇಶದ ಆಡಳಿತ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ್ಲ, ಏಕೆಂದರೆ ಆಡಳಿತ ವ್ಯವಸ್ಥೆಗಳು ಪರಿವರ್ತನೆ ಕುರಿತು ಸೀಮಿತ ಇಚ್ಚೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಪರಿವರ್ತನೆಗೆ ಪ್ರೇರಣೆ ಮತ್ತು ನಿಯಂತ್ರಣವು ಸಮಾಜದ ಬಲವಾದ ಇಚ್ಛಾಶಕ್ತಿಯನ್ನು ಆಧರಿಸಿದೆ. ಆದ್ದರಿಂದ ವ್ಯವಸ್ಥೆಯ ಪರಿವರ್ತನೆಗಾಗಿ ಸಮಾಜದ ಜಾಗೃತಿ ಮತ್ತು ಅದರ ನಡವಳಿಕೆಯ ಬದಲಾವಣೆಯು ವ್ಯವಸ್ಥಾಪರಿವರ್ತನೆಯ ಪೂರ್ವಷರತ್ತುಗಳಾಗಿವೆ. ಸಾಮಾಜಿಕ ನಡವಳಿಕೆಯಲ್ಲಿ ಬದಲಾವಣೆಯು ಭಾಷಣಗಳು ಅಥವಾ ಪುಸ್ತಕಗಳಿಂದ ಮಾತ್ರ ಬರಲು ಸಾಧ್ಯವಿಲ್ಲ. ಸಮಾಜಕ್ಕೆ ವ್ಯಾಪಕ ಜಾಗೃತಿಯ ಅಗತ್ಯವಿದೆ ಮತ್ತು ಆ ಜಾಗೃತಿಯನ್ನು ಉಂಟುಮಾಡುವವರು ಸ್ವತಃ ಬದಲಾವಣೆಯ ಮಾದರಿಗಳಾಗಬೇಕು. ತಮ್ಮ ಜೀವನದಲ್ಲಿ ಪಾರದರ್ಶಕತೆ ಮತ್ತು ನಿಸ್ವಾರ್ಥತೆಯನ್ನು ಅನುಭಾವಿಸಿಕೊಂಡಿರುವ ಮತ್ತು ಸಮಾಜದೊಂದಿಗಿನ ದೈನಂದಿನ ಸಂವಹನದಲ್ಲಿ ಇಡೀ ಸಮಾಜವನ್ನು ತಮ್ಮದೇ ಎಂದು ಭಾವಿಸುವ, ತನ್ನದೇ ಆದ ಅನುಕರಣೀಯ ವ್ಯಕ್ತಿಗಳನ್ನು ಸಮಾಜವು ಎಲ್ಲಾ ಸ್ಥಾನಗಳಲ್ಲಿ ಹೊಂದಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರ ಜೊತೆಗಿರುತ್ತಾ ತಮ್ಮ ಮಾದರಿಯಿಂದ ಸಮಾಜಕ್ಕೆ ಪ್ರೇರಣೆ ನೀಡುವ ಸ್ಥಾನೀಯ ಸಾಮಾಜಿಕ ನಾಯಕತ್ವ ನಮಗೆ ಬೇಕು. ಆದ್ದರಿಂದ, ವ್ಯಕ್ತಿ ನಿರ್ಮಾಣದಿಂದ ಸಾಮಾಜಿಕ ಪರಿವರ್ತನೆ ಮತ್ತು ಸಾಮಾಜಿಕ ಪರಿವರ್ತನೆಯ ಮೂಲಕ ವ್ಯವಸ್ಥಾ ಪರಿವರ್ತನೆಯು ದೇಶ ಮತ್ತು ವಿಶ್ವದಲ್ಲಿ ಬದಲಾವಣೆಯನ್ನು ತರುವ ನಿಜವಾದ ಮಾರ್ಗಗಳು ಎನ್ನುವುದು ಸ್ವಯಂಸೇವಕರ ಅನುಭವವಾಗಿದೆ.

3) ಅಂತಹ ವ್ಯಕ್ತಿಗಳನ್ನು ರೂಪಿಸುವ ವ್ಯವಸ್ಥೆಗಳು ಅನೇಕ ಸಮಾಜಗಳಲ್ಲಿ ಸಕ್ರಿಯವಾಗಿರುತ್ತವೆ. ಆದರೆ ದೀರ್ಘಕಾಲದ ಆಕ್ರಮಣದ ಸಮಯದಲ್ಲಿ ನಮ್ಮ ಸಮಾಜದಲ್ಲಿ ಈ ವ್ಯವಸ್ಥೆಗಳು ನಾಶಹೊಂದಿದವು. ಆದ್ದರಿಂದ ಮನೆ, ಶಿಕ್ಷಣ ವ್ಯವಸ್ಥೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಯುಗಾನುಕೂಲ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಬಲ್ಲ ವ್ಯಕ್ತಿಗಳನ್ನು ಸಿದ್ಧಗೊಳಿಸಬೇಕಾಗಿದೆ. ಈ ಕಲ್ಪನೆಯನ್ನು ಮನಸ್ಸು ಮತ್ತು ಬುದ್ಧಿಯಲ್ಲಿ ಸ್ವೀಕರಿಸಿದ ನಂತರವೂ, ಅವುಗಳನ್ನು ಆಚರಣೆಗೆ ತರಲು ಮನಸ್ಸು, ಮಾತು ಮತ್ತು ಕ್ರಿಯೆಗಳಲ್ಲಿನ ಅಭ್ಯಾಸಗಳನ್ನು ಬದಲಾಯಿಸಬೇಕು; ಇದಕ್ಕಾಗಿ ಒಂದು ವ್ಯವಸ್ಥೆಯ ಅಗತ್ಯವಿರುತ್ತದೆ. ಸಂಘದ ಶಾಖೆಯು ಅಂತಹದ್ದೇ ಒಂದು ವ್ಯವಸ್ಥೆ, ನೂರು ವರ್ಷಗಳಿಂದ ಈ ವ್ಯವಸ್ಥೆಯನ್ನು ಎಲ್ಲಾ ರೀತಿಯ ಪರಿಸ್ಥಿತಿಗಳ ನಡುವೆಯೂ ಸಂಘದ ಸ್ವಯಂಸೇವಕರು ಆಗ್ರಹಪೂರ್ವಕವಾಗಿ ನಿರ್ವಹಿಸಿದ್ದಾರೆ ಮತ್ತು ಮುಂದೆಯೂ ಇದೇ ರೀತಿ ಅದನ್ನು ಮುಂದುವರಿಸಬೇಕಾಗಿದೆ. ಆದ್ದರಿಂದ, ಸ್ವಯಂಸೇವಕರು ದೈನಂದಿನ ಶಾಖೆಯ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾ ಅವರ ಸ್ವಭಾವಗಳನ್ನು ಬದಲಾಯಿಸುವ ಸಾಧನೆಯನ್ನು ಮಾಡಬೇಕಾಗುತ್ತದೆ. ವೈಯಕ್ತಿಕ ಸದ್ಗುಣಗಳು ಮತ್ತು ಸಾಮೂಹಿಕತೆಯನ್ನು ವೃದ್ಧಿಸುತ್ತಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮತ್ತು ಸಹಕರಿಸುವ ಮೂಲಕ ಸಮಾಜದಲ್ಲಿ ಸದ್ಗುಣಗಳ ಮತ್ತು ಸಾಮೂಹಿಕತೆಯ ವಾತಾವರಣವನ್ನು ನಿರ್ಮಿಸುವ ಸಲುವಾಗಿಯೇ ಸಂಘದ ಶಾಖೆಯು ಅಸ್ತಿತ್ವದಲ್ಲಿದೆ.

4) ಯಾವುದೇ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವೆಂದರೆ ಅಲ್ಲಿನ ಸಮಾಜದ ಏಕತೆ, ನಮ್ಮ ದೇಶವು ವಿವಿಧತೆಯ ದೇಶವಾಗಿದೆ. ವೈವಿಧ್ಯಮಯ ಭೌಗೋಳಿಕತೆಯಿಂದಾಗಿ ಹಲವು ಭಾಷೆಗಳು, ಹಲವು ಪಂಥಗಳು ಮತ್ತು ಜೀವನಶೈಲಿಗಳು, ವಿಭಿನ್ನ ರೀತಿಯ ಆಹಾರ-ವಿಹಾರ, ಜಾತಿಗಳು ಮತ್ತು ಉಪಜಾತಿಗಳು ಮೊದಲಾದ ವಿವಿಧತೆಗಳು ಈಗಾಗಲೇ ಇವೆ. ಕಳೆದ ಸಾವಿರ ವರ್ಷಗಳಲ್ಲಿ, ಕೆಲವು ವಿದೇಶಿ ಪಂಥಗಳು ಭಾರತಕ್ಕೆ ಗಡಿಯ ಹೊರಗಿನ ದೇಶಗಳಿಂದ ಬಂದಿವೆ. ವಿದೇಶಿಯರು ಈಗ ನಿರ್ಗಮಿಸಿದ್ದರೂ, ಪಂಥಗಳನ್ನು ಸ್ವೀಕರಿಸಿ ವಿವಿಧ ಕಾರಣಗಳಿಗಾಗಿ ಅವುಗಳನ್ನು ಅನುಸರಿಸುತ್ತಿರುವ ನಮ್ಮ ಬಂಧುಗಳು ಭಾರತದಲ್ಲಿ ಅಸ್ತಿತ್ವದಲ್ಲಿದ್ದಾರೆ. ಭಾರತೀಯ ಪರಂಪರೆಯು ಇವರೆಲ್ಲರನ್ನೂ ಸ್ವಾಗತಿಸಿದೆ ಮತ್ತು ಸ್ವೀಕರಿಸಿದೆ. ನಾವು ಅವುಗಳನ್ನು ಪ್ರತ್ಯೇಕ ಎನ್ನುವ ದೃಷ್ಟಿಯಿಂದ ನೋಡುವುದಿಲ್ಲ. ನಮ್ಮ ವಿವಿಧತೆಯನ್ನು ನಮ್ಮದೇ ಆದ ಅನನ್ಯತೆ ಎಂದು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟತೆಯನ್ನು ಗೌರವಿಸುವ ಸ್ವಭಾವವನ್ನೂ ಅರಿತಿದ್ದೇವೆ. ಆದಾಗ್ಯೂ, ಈ ವಿಶಿಷ್ಟತೆಗಳು ವಿಭಜನೆಯ ಕಾರಣವಾಗಬಾರದು. ನಮ್ಮ ಎಲ್ಲಾ ವಿಶಿಷ್ಟತೆಯ ಹೊರತಾಗಿಯೂ, ನಾವೆಲ್ಲರೂ ಒಂದು ಬೃಹತ್ ಸಮಾಜದ ಭಾಗವಾಗಿದ್ದೇವೆ. ಸಮಾಜ, ದೇಶ, ಸಂಸ್ಕೃತಿ ಮತ್ತು ರಾಷ್ಟ್ರವಾಗಿ ನಾವೆಲ್ಲರೂ ಒಂದಾಗಿದ್ದೇವೆ. ಈ ದೊಡ್ಡ ಗುರುತು ನಮಗೆ ಎಲ್ಲಕ್ಕಿಂತಲೂ ಉನ್ನತವಾದದ್ದು ಎನ್ನುವುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದರ ಪರಿಣಾಮವಾಗಿ ಸಮಾಜದಲ್ಲಿ ಪರಸ್ಪರರೊಂದಿಗಿನ ಸಂವಹನವು ಸದ್ಭಾವನಾಪೂರ್ಣ ಮತ್ತು ಸಂಯಮಪೂರ್ಣವಾಗಿರಬೇಕು. ಪ್ರತಿಯೊಬ್ಬರಿಗೂ ತಮ್ಮದೇ ಆದ ನಂಬಿಕೆಗಳು, ಮಹಾಪುರುಷರು ಮತ್ತು ಪೂಜಾಸ್ಥಾನಗಳಿವೆ. ಮನಸ್ಸು, ಮಾತು ಅಥವಾ ಕ್ರಿಯೆಯಲ್ಲಿ ಇವುಗಳನ್ನು ಅಗೌರವಿಸದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿಯ ಅವಶ್ಯಕತೆಯಿದೆ. ಆದ್ದರಿಂದ, ನಿಯಮಗಳನ್ನು ಪಾಲಿಸುವುದು, ವ್ಯವಸ್ಥಾ ಪಾಲನೆ ಮತ್ತು ಸದ್ಭಾವದಿಂದ ವರ್ತಿಸುವುದು ನಮ್ಮ ಸ್ವಭಾವವಾಗಬೇಕು. ಸಣ್ಣ ಅಥವಾ ದೊಡ್ಡ ವಿಷಯಗಳಲ್ಲಿ ಅಥವಾ ನಮ್ಮ ಮನಸ್ಸಿನಲ್ಲಿರುವ ಅನುಮಾನಗಳಿಂದಾಗಿ ಕಾನೂನನ್ನು ನಮ್ಮ ಕೈಗೆತ್ತಿಕೊಳ್ಳುವುದು, ಗೂಂಡಾಗಿರಿ ಮತ್ತು ಹಿಂಸಾಚಾರಕ್ಕೆ ಇಳಿಯುವುದು ಒಳ್ಳೆಯ ಪ್ರವೃತ್ತಿಯಲ್ಲ. ಪೂರ್ವಗ್ರಹಗಳೊಂದಿಗೆ ಅಥವಾ ನಿರ್ದಿಷ್ಟ ಸಮುದಾಯವನ್ನು ಪ್ರಚೋದಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಗಳನ್ನು ಯೋಜಿತವಾಗಿ ಕೆಲವರು ಮಾಡಿಸುತ್ತಿದ್ದಾರೆ. ಅಂಥವರ ಬಲೆಗೆ ಬೀಳುವುದು ತಕ್ಷಣದ ಮತ್ತು ದೀರ್ಘಾವಧಿಯ ? ಎರಡೂ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಪ್ರವೃತ್ತಿಗಳನ್ನು ನಿಗ್ರಹಿಸುವುದು ಅತ್ಯಗತ್ಯ. ಸರ್ಕಾರ ಮತ್ತು ಆಡಳಿತವು ತಮ್ಮ ಕೆಲಸವನ್ನು ಪಕ್ಷಪಾತವಿಲ್ಲದೆ ಮತ್ತು ಒತ್ತಡಕ್ಕೆ ಮಣಿಯದೆ, ನಿಯಮಗಳಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದಾಗ್ಯೂ, ಸಮಾಜದ ಸಜ್ಜನಶಕ್ತಿ ಮತ್ತು ಯುವಪೀಳಿಗೆಯು ಸಹ ಜಾಗರೂಕರಾಗಿರಬೇಕು ಮತ್ತು ಸಂಘಟಿತರಾಗಿರಬೇಕು. ಅಗತ್ಯವಿರುವೆಡೆಯಲ್ಲಿ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶಿಸಬೇಕು. 

5) ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಏಕತೆಯ ಆಧಾರವನ್ನು “Inherent cultural unity” (ಅಂತರ್ಗತ ಸಾಂಸ್ಕೃತಿಕ ಏಕತೆ) ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಹರಿದು ಬಂದಿರುವ ಭಾರತದ ವಿಶೇಷತೆಯಾಗಿದೆ. ಇದು ಸರ್ವಸಮಾವೇಶಕವಾಗಿದೆ. ಎಲ್ಲಾ ವಿವಿಧತೆಯನ್ನು ಗೌರವಿಸಲು ಮತ್ತು ಸ್ವೀಕರಿಸಲು ನಮಗೆ ಕಲಿಸುತ್ತಿದೆ. ಏಕೆಂದರೆ ಅದು ಭಾರತದ ಆಧ್ಯಾತ್ಮಿಕ ಸತ್ಯ ಮತ್ತು ಕರುಣೆ, ಶುದ್ಧತೆ ಮತ್ತು ತಪಸ್ಸಿನ ಸದ್ಗುಣಗಳ ಅಂದರೆ ಧರ್ಮದ ಮೇಲೆ ಆಧಾರಿತವಾಗಿದೆ. ಈ ರಾಷ್ಟ್ರದ ಪುತ್ರರೂಪಿ ಹಿಂದೂ ಸಮಾಜವು ಅನಾದಿಕಾಲದಿಂದಲೂ ಈ ಸಂಸ್ಕೃತಿಯನ್ನು ತಮ್ಮ ನಡವಳಿಕೆಯಲ್ಲಿ ಹೊಂದಿಸಿಕೊಂಡಿದೆ. ಆದ್ದರಿಂದಲೇ ಇದನ್ನು ಹಿಂದೂ ಸಂಸ್ಕೃತಿ ಎಂದೂ ಕರೆಯುತ್ತಾರೆ. ಪ್ರಾಚೀನ ಭಾರತದಲ್ಲಿ ಋಷಿಮುನಿಗಳು ತಮ್ಮ ತಪೋಬಲದಿಂದ ಹಿಂದೂ ಸಂಸ್ಕೃತಿಯನ್ನು ಬೆಳೆಸಿದರು. ಭಾರತದ ಸಮೃದ್ಧ ಮತ್ತು ಸುರಕ್ಷಿತ ವಾತಾವರಣವು ಇದನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ನಮ್ಮ ಪೂರ್ವಜರ ಕಠಿಣ ಪರಿಶ್ರಮ, ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಈ ಸಂಸ್ಕೃತಿಯು ಅರಳಿ ಉಳಿದಿದೆ ಹಾಗೂ ಇಂದಿನವರೆಗೂ ತಲುಪಿದೆ. ಆ ನಮ್ಮ ಸಂಸ್ಕೃತಿಯ ಆಚರಣೆ, ಅದನ್ನು ಆದರ್ಶವನ್ನಾಗಿರಿಸಿಕೊಂಡ ನಮ್ಮ ಪೂರ್ವಜರ ಕುರಿತು ಮನಸ್ಸಿನಲ್ಲಿ ಗೌರವ ಮತ್ತು ಅವರ ವಿವೇಕಪೂರ್ಣ ಅನುಕರಣೆ ಹಾಗೂ ಇದೆಲ್ಲವನ್ನೂ ಸಾಧ್ಯವಾಗಿಸಿದ ನಮ್ಮ ಪವಿತ್ರ ಮಾತೃಭೂಮಿಯ ಮೇಲಿನ ಇವೆಲ್ಲವೂ ಒಟ್ಟಾಗಿ ನಮ್ಮ ರಾಷ್ಟ್ರೀಯತೆಯನ್ನು ರೂಪಿಸಿವೆ. ವಿವಿಧತೆಯನ್ನು ಸಂಪೂರ್ಣವಾಗಿ ಸ್ವೀಕರಿಸಿ ಮತ್ತು ಗೌರವದೊಂದಿಗೆ ನಮ್ಮೆಲ್ಲರನ್ನೂ ಒಂದು ಸೂತ್ರದಲ್ಲಿ ಪೋಣಿಸುವ ಈ ಹಿಂದೂ ರಾಷ್ಟ್ರೀಯತೆಯು ನಮ್ಮನ್ನು ಒಟ್ಟಾಗಿರಿಸಿಕೊಂಡು ಬಂದಿದೆ. ನಮ್ಮದು “Nation State' ಪರಿಕಲ್ಪನೆ ಅಲ್ಲ. ಆಡಳಿತಗಳು ಹೊಸದಾಗಿ ಬರುತ್ತವೆ. ಹೋಗುತ್ತವೆ, ಆದರೆ ರಾಷ್ಟ್ರ ಶಾಶ್ವತವಾಗಿ ಅಸ್ತಿತ್ವದಲ್ಲಿರುತ್ತದೆ. ನಮ್ಮೆಲ್ಲರ ಏಕತೆಯ ಈ ಆಧಾರವನ್ನು ನಾವು ಎಂದಿಗೂ ಮರೆಯಬಾರದೆ. ಭಕ್ತಿ -

6) ಸಂಪೂರ್ಣ ಹಿಂದೂ ಸಮಾಮಾಜದ ಬಲಸಂಪನ್ನ, ಶೀಲಸಂಪನ್ನ ಮತ್ತು ಸಂಘಟಿತ ಸ್ವರೂಪವು ಈ ದೇಶದ ಏಕತೆ, ಏಕಾತ್ಮತೆ, ಅಭಿವೃದ್ಧಿ ಮತ್ತು ಸುರಕ್ಷತೆಯ ಗ್ಯಾರಂಟಿಯಾಗಿದೆ. ಹಿಂದೂ ಸಮಾಜವು ಈ ದೇಶದ ಜವಾಬ್ದಾರಿಯುತ ಸಮಾಜವಾಗಿದೆ ಮತ್ತು ಹಿಂದೂ ಸಮಾಜವು ಸರ್ವಸಮಾವೇಶಕವಾಗಿದೆ. ಮೇಲ್ನೋಟದಲ್ಲಿ ಕಾಣಸಿಗುವ ವಿವಿಧ ಹೆಸರುಗಳು ಮತ್ತು ರೂಪಗಳ ಆಧಾರದಲ್ಲಿ “ನಾವು ಮತ್ತು ಅವರು” ಎಂಬ ಪ್ರತ್ಯೇಕತಾಭಾವದಿಂದ ಮಾನವರಲ್ಲಿ ವಿಭಜನೆ ಮತ್ತು ಪ್ರತ್ಯೇಕತೆಯನ್ನು ಸೃಷ್ಟಿಸುವ ಮಾನಸಿಕತೆಯಿಂದ ಹಿಂದೂ ಸಮಾಜವು ಮುಕ್ತವಾಗಿದೆ ಹಾಗೂ ಮುಕ್ತವಾಗಿರಲಿದೆ. ಹಿಂದೂ ಸಮಾಜವು “ವಸುಧೈವ ಕುಟುಂಬಕಂ” ಎಂಬ ಉದಾರ ನೀತಿಯ ಪ್ರವರ್ತಕ ಮತ್ತು ಸಂರಕ್ಷಕ. ಆದ್ದರಿಂದ, ಭಾರತವನ್ನು ವೈಭವಸಂಪನ್ನ ಹಾಗೂ ಸಂಪೂರ್ಣ ವಿಶ್ವದಲ್ಲಿ ತನ್ನ ಅಪೇಕ್ಷಿತ ಹಾಗೂ ಯಥೋಚಿತ ಕೊಡುಗೆ ನೀಡುವ ದೇಶವಾಗುವುದು ಹಿಂದೂ ಸಮಾಜದ ಕರ್ತವ್ಯವಾಗಿದೆ. ತನ್ನ ಸಂಘಟಿತ ಕಾರ್ಯಶಕ್ತಿಯ ಮೂಲಕ ವಿಶ್ವಕ್ಕೆ ಹೊಸ ದಾರಿ ನೀಡಬಲ್ಲ, ಧರ್ಮವನ್ನು ಸಂರಕ್ಷಿಸುತ್ತಾ ಭಾರತವನ್ನು ವೈಭವಸಂಪನ್ನವಾಗಿ ಈ ಸಂಕಲ್ಪದೊಂದಿಗೆ ಸಂಘವು ಇಡೀ ಹಿಂದೂ ಸಮಾಜವನ್ನು ಮಾಡುವುದು - ಇದು ಸಂಘಟಿಸುವ ಕೆಲಸ ಮಾಡುತ್ತಿದೆ. ಸಂಘಟಿತ ಸಮಾಜವು ತನ್ನ ಎಲ್ಲಾ ಕರ್ತವ್ಯಗಳನ್ನು ತನ್ನದೇ ಆದ ಶಕ್ತಿಯ ಮೇಲೆ ನಿರ್ಧರಿಸುತ್ತದೆ. ಅದಕ್ಕಾಗಿ ಬೇರೆಯವರಾರೂ ಪ್ರತ್ಯೇಕವಾಗಿ ಏನನ್ನೂ ಮಾಡುವ ಅಗತ್ಯವೇ ಇರುವುದಿಲ್ಲ.

7) ಈ ರೀತಿಯ ಸಮಾಜದ ಚಿತ್ರಣವು ವಾಸ್ತವವಾಗಬೇಕಾದರೆ ವ್ಯಕ್ತಿಗಳು ಮತ್ತು ಸಮುದಾಯಗಳಲ್ಲಿ ವೈಯಕ್ತಿಕ ಚಾರಿತ್ರ್ಯ ಮತ್ತು ರಾಷ್ಟ್ರೀಯ ಚಾರಿತ್ರ್ಯಗಳನ್ನು ಸದೃಢಗೊಳಿಸಬೇಕಾದ ಅವಶ್ಯಕತೆಯಿದೆ. ನಮ್ಮ ರಾಷ್ಟ್ರ ಸ್ವರೂಪದ ಸ್ಪಷ್ಟ ಕಲ್ಪನೆ ಹಾಗೂ ಗೌರವ ಭಾವನೆಯು ಸಂಘದ ಶಾಖೆಯಲ್ಲಿ ಲಭಿಸುತ್ತದೆ. ನಿತ್ಯಶಾಖೆಯಲ್ಲಿ ನಡೆಯುವ ದೈನಂದಿನ ಚಟುವಟಿಕೆಗಳು ಸ್ವಯಂಸೇವಕರಲ್ಲಿ ವ್ಯಕ್ತಿತ್ವ, ಕರ್ತೃತ್ವ, ನೇತೃತ್ವ, ಭಕ್ತಿ ಮತ್ತು ತಿಳುವಳಿಕೆಯನ್ನು ಬೆಳೆಸುತ್ತವೆ. ಇದೆಲ್ಲದರ ಹಿನ್ನೆಲೆಯಲ್ಲಿ ಶತಾಬ್ದ ವರ್ಷದಲ್ಲಿ ವ್ಯಕ್ತಿನಿರ್ಮಾಣದ ಕಾರ್ಯವು ದೇಶದಲ್ಲಿ ಭೌಗೋಳಿಕವಾಗಿ ಸರ್ವವ್ಯಾಪಿಯಾಗಬೇಕು ಹಾಗೂ ಸಾಮಾಜಿಕ ನಡವಳಿಕೆಯಲ್ಲಿ ಸಹಜ ಬದಲಾವಣೆಗಳನ್ನು ತರುವ ಪಂಚಪರಿವರ್ತನೆಯ ಕಾರ್ಯಕ್ರಮಗಳನ್ನು ಸ್ವಯಂಸೇವಕರ ಉದಾಹರಣೆಯ ಮೂಲಕ ಸಮಾಜವ್ಯಾಪಿಯಾಗಿಸಲು ಪ್ರಯತ್ನಿಸಬೇಕು. ವ್ಯಕ್ತಿಗಳು ಮತ್ತು ಕುಟುಂಬಗಳು ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವಬೋಧ ಅಥವಾ ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರ ಹಾಗೂ ಸಂವಿಧಾನದ ಪಾಲನೆ ಎಂಬ ಐದು ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉದಾಹರಣೆಗಳ ಮೂಲಕ ಅನುಕರಣೀಯವಾಗಲಿ, ಈ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿರುವ ಚಟುವಟಿಕೆಗಳು ಸರಳ ಮತ್ತು ಅನುಷ್ಠಾನಕ್ಕೆ ಸುಲಭವಾಗಿವೆ. ಈ ಕುರಿತು ಸಂಘದ ಕಾರ್ಯಕ್ರಮಗಳಲ್ಲಿ ಕಾಲಕಾಲಕ್ಕೆ ವಿವರವಾಗಿ ಚರ್ಚಿಸಲಾಗಿದೆ. ಸಂಘದ ಸ್ವಯಂಸೇವಕರ ಜೊತೆಗೆ ಸಮಾಜದಲ್ಲಿನ ಇತರೆ ಅನೇಕ ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಸಂಘದ ಸ್ವಯಂಸೇವಕರು ಅವರೊಂದಿಗೆ ಸಹಯೋಗ ಮತ್ತು ಸಮನ್ವಯ ಸಾಧಿಸುತ್ತಿದ್ದಾರೆ.

ಕಾಲಕಾಲಕ್ಕೆ ಪ್ರಪಂಚದಲ್ಲಿ ಸಂಭವಿಸುವ ಅಸಮತೋಲನವನ್ನು ಸರಿಪಡಿಸುವ ಮತ್ತು ವಿಶ್ವ ಜೀವನದಲ್ಲಿ ಸಂಯಮ ಮತ್ತು ಘನತೆಯ ಪ್ರಜ್ಞೆಯನ್ನು ರೂಪಿಸುವ ವಿಶ್ವಧರ್ಮವನ್ನು ಒದಗಿಸುವುದೇ ಜಗತ್ತಿನ ಇತಿಹಾಸಕ್ಕೆ ಭಾರತದ ಮಹತ್ವದ ಕೊಡುಗೆ, ಭಾರತದಲ್ಲಿ ವಾಸಿಸುವ ವೈವಿಧ್ಯಮಯ ಸಮಾಜವನ್ನು ಸಂಘಟಿಸಿದ ನಮ್ಮ ಪೂರ್ವಜರು, ಒಂದು ರಾಷ್ಟ್ರವಾಗಿ ಈ ಕರ್ತವ್ಯವನ್ನು ಪದೇಪದೇ ನಿರ್ವಹಿಸುವ ಸಾಧನವಾಗಿ ಇಲ್ಲಿನ ಸಮಾಜವನ್ನು ರೂಪಿಸಿದರು.

ಚಿಂತನೆ

.