Hindu Vani
Index
ಸಂಪಾದಕೀಯ
ಬೆಳಗಾಗದಿರಲು ಕೋಳಿಯನ್ನು ಬಚ್ಚಿಟ್ಟ ಕಥೆ
ನೂರು ವರ್ಷಗಳಾದವು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದಾದ್ಯಂತ ಪಸರಿಸಿತು. ಜಗತ್ತಿನಾದ್ಯಂತ ಪ್ರಭಾವ ಬೀರಿತು. ಸಂಘದ ಸ್ವಯಂಸೇವಕರು ಬೆಳೆದರು. ಪ್ರಧಾನಿಗಳೂ ಆದರು. ಜನಪ್ರಿಯರಾದರು. ಯಶಸ್ವೀ ಮುತ್ಸದ್ದಿಗಳೆನಿಸಿದರು. ರಾಷ್ಟ್ರಾಧ್ಯಕ್ಷರು ಸಂಘದ ಕಾರ್ಯಕ್ರಮಕ್ಕೆ ಬಂದರು. ಸಂಘವನ್ನು ಮೆಚ್ಚಿದರು. ಸಂಘದ ಶಾಖೆಗಳೆಂದರೆ ಗರಡಿ ಮನೆಗಳ ವ್ಯಾಯಾಮ, ದೇವಸ್ಥಾನಗಳಲ್ಲಿ ಪಡೆಯುವ ಭಕ್ತಿ ಮತ್ತು ವಿನಯಗಳ ಸಂಸ್ಕಾರ. ಶಾಲೆಗಳು ನೀಡುವ ಶಿಕ್ಷಣ ಮತ್ತು ಸಾಂಘಿಕ ಜೀವನದ ಅನುಭವಗಳು ಮುಪ್ಪುರಿಗೊಂಡ ತಿಳಿವಿನ ಬದುಕು ಎಂದು ಒಂದು ಸಜ್ಜನರೆಲ್ಲರೂ ಒಪ್ಪಿದರು. ಸಂಘದ ಪಥಸಂಚಲನವು ಹಿರಿಕಿರಿಯ ಸ್ವಯಂಸೇವಕರೆಲ್ಲರೂ ಒಂದುಕಡೆ ಸೇರುವ, ಜೊತೆಗೂಡಿ ಮುಂದುವರೆಯುವ ಸಂಕಲ್ಪವನ್ನು ನೆನಪಿಸುವ ಸಾಂಕೇತಿಕ ಸಾಂಸ್ಕೃತಿಕ ಕಾರ್ಯಕ್ರಮವಾಯಿತು.
ನೂರು ಹೀಗೆ ಸಂಘದ ನೂರು ವರ್ಷಗಳನ್ನು ಸ್ಮರಿಸುವ ಪಥಸಂಚಲನಗಳು ಸಾವಿರಾರು ಸ್ಥಾನಗಳಲ್ಲಿ ನಡೆದವು. ಬೆಂಗಳೂರು ನಗರವೊಂದರಲ್ಲೇ ಒಂದೇ ದಿನ ಸ್ಥಾನಗಳಲ್ಲಿ ಸಾವಿರಾರು ಸ್ವಯಂಸೇವಕರ ಪಥ ಸಂಚಲನಗಳು ನಡೆದವು. ಕರ್ನಾಟಕದ ಎಲ್ಲಾ ನಗರಗಳಲ್ಲಿ ಇದು ಮುಂದುವರೆಯುತ್ತಾ ಬಂದಿತು. ಅದು ಈಗಲೂ ಇನ್ನೂ ನಡೆಯುತ್ತಾ ಇದೆ. ಎಲ್ಲೆಲ್ಲೂ ಸಂಭ್ರಮದ ವಾತಾವರಣವೇ ಮನೆ ಮಾಡಿತು. ಈ ನಡುವೆ ಕರ್ನಾಟಕದ ಚಿತ್ತಾಪುರವೆನ್ನುವ ಒಂದು ಊರಿನಲ್ಲಿ ಸಮಚಿತ್ತವಿಲ್ಲದ ವ್ಯಕ್ತಿಯ ನೇತೃತ್ವದಲ್ಲಿ ಸಂಘವನ್ನು ನಿರ್ಬಂಧಿಸಲು ನಿಶ್ಚಯಿಸಲಾಯಿತು. ಅದು ಅಸಾಧ್ಯವೆಂದು ಮನಗಂಡಾಗ ಸಂಘದ ಪಥಸಂಚಲನವನ್ನಾದರೂ ತಡೆದು ಕೈಗೊಂಡ ಪ್ರತಿಜ್ಞೆಯನ್ನು ಈಡೇರಿಸುವೆ ಎಂದುಕೊಂಡಿತು. ಅದು ಕೂಡಾ ಆಗದ ಮಾತು ಎಂದು ತಿಳಿದಾಗ ಅಧಿಕಾರಿಗಳ ನೆರವಿನಿಂದ ನ್ಯಾಯಾಲಯದ ಮೂಲಕವಾದರೂ ಸರಿಯೇ! ಸಂಚಲನವನ್ನು ಮುಂದೂಡಿ ದಿನಾಂಕವನ್ನಾದರೂ ಪ್ರಕಟಿಸಿದ ಮಹತ್ಸಾಧನೆಯನ್ನು ಪ್ರದರ್ಶಿಸೋಣವೆಂದು ನಿಶ್ಚಯಿಸಿತು. ರಾಜ್ಯದೆಲ್ಲೆಡೆ ಕೂಡಾ ಈ ನಿರ್ಬಂಧವು ಕಾಣಬರಲಿಲ್ಲ. ಎಲ್ಲೂ ಕೂಡಾ ಈ ವ್ಯಕ್ತಿಗೆ ಬೆಂಬಲದ ಮಾತು ಕೇಳಿ ಬರಲಿಲ್ಲ. ಸಮಾಜದ ಹಿರಿಯರು ಬಿಡಿ ಅವರ ಪಕ್ಷದಲ್ಲೂ ಕೂಡಾ ಆ ಕುರಿತು ಮಾತನಾಡಿ ಅದಕ್ಕೊಂದು ಮಹತ್ವವನ್ನು ಕಲ್ಪಿಸಲೇ ಇಲ್ಲ. ಶಿಕ್ಷಣವಿಲ್ಲದಿದ್ದರೂ ಸಂಸ್ಕಾರವಿದ್ದರೆ ಸಾಕು ಎಂದುಕೊಳ್ಳುವ ನಮ್ಮ ನಡುವೆ ಶಿಕ್ಷಣವೂ ಸಂಸ್ಕಾರವೂ ಇಲ್ಲದ ಶೂನ್ಯಸಂಪಾದನೆಯ ಈ ವ್ಯಕ್ತಿ ನಗೆಪಾಟಲಾದರು.
ಊರಿಗೆಲ್ಲ ಬೆಳಕಾಗುವುದು ತನ್ನ ಗುಡಿಸಲಿನ ಕೋಳಿ ಕೂಗುವುದರಿಂದ ಎಂದು ಅಂದುಕೊಂಡಳಂತೆ ಆ ಊರಿನ ಮುದುಕಿ. ಕೋಳಿಯನ್ನು ಬಚ್ಚಿಟ್ಟು ಊರನ್ನು ಕತ್ತಲೆಯಲ್ಲಿ ಇಡುವೆ ಎಂದು ಕೊಂಡಳಂತೆ. ಅದಕ್ಕಾಗಿ ಕೋಳಿಯ ಕೊರಳನ್ನು ಕಟ್ಟಿ ಇಟ್ಟಳು. ಇಂತಹ ಮೂರ್ಖರು ಉಡಾಳರು ನಮ್ಮ ನಡುವೆ ಇರುವುದು ನಮ್ಮ ದೌರ್ಭಾಗ್ಯ. ಆದರೆ ಇಂತಹ ಕುಬ್ಬರನ್ನು ಅಲಕ್ಷಿಸುವ ಸಜ್ಜನರಿರುವುದೂ ನಮ್ಮ ಸೌಭಾಗ್ಯವೆ.
ಈ ನೆಪದಲ್ಲಿ ಸಮಾಜದ ನಡುವೆ ಪರಸ್ಪರ ವೈಷಮ್ಯವನ್ನೂ ದ್ವೇಷವನ್ನೂ ಬೆಳೆಸುವುದು ಇಂತಹ ಜನರ ಇನ್ನೊಂದು ಉದ್ದೇಶ. ಎಲ್ಲೂ ಕಂಡಿರದ ಕೇಳಿರದ ಅಣಬೆ ಆರ್ಮಿಗಳು ಚಿತ್ತಾಪುರದಲ್ಲಿ ತಲೆ ಎತ್ತಿದವು. ಪಥಸಂಚಲನದ ದಿನವೇ ತಮಗೂ ಮೆರವಣಿಗೆ ಮಾಡುವ ದರ್ದು ಇದೆ ಎಂದುಕೊಂಡವು. ಯಾವುದೇ ವಿವಾದದಲ್ಲಿ ಸಿಕ್ಕಿಕೊಳ್ಳದ 'ಜಾಣ' ಕ್ರೈಸ್ತರೂ ಪಥಸಂಚಲನದ ವಿರುದ್ಧ ದೂರು ನೀಡಿ ತಮ್ಮ ಶಾಂತಿಪ್ರಿಯತೆಯ ಪರಂಪರೆಗೆ ತಾವೇ ಕಪ್ಪುಚುಕ್ಕೆಯನ್ನು ಬರೆದರು. ಎಲ್ಲರೂ ಮರೆತು ಹೋದ ವ್ಯಕ್ತಿಯು ತನಗೂ ಜೀವಬೆದರಿಕೆಯಿದೆ ಎಂದು ಹೇಳುತ್ತಾ ತಾನು ಜೀವಂತವಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದರು.
ಇವೆಲ್ಲವನ್ನು ಗಮನಿಸಿದಾಗ ರಾಜ್ಯಾದ್ಯಂತ ಗೊಂದಲದ ವಾತಾವರಣವನ್ನು ನಿರ್ಮಿಸಿ ವ್ಯಾಪಕ ಅರಾಜಕ ಭಾವನೆಯನ್ನು ಹಬ್ಬಿಸುವುದೇ ಈ ಕಾರಸ್ತಾನದ ಉದ್ದೇಶವಿದ್ದಂತಿದೆ. ಕಾನೂನು ವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ಅಶಾಂತಿಯನ್ನು ಹಬ್ಬಿಸಬೇಕೆಂದಿರುವುದು; ಮುಖ್ಯಮಂತ್ರಿಯ ಒಪ್ಪಿಗೆಯಿಂದಲೇ ಇದನ್ನು ಕೈಗೊಂಡಿರುವುದು ಸಂಚಿನ ಒಳಸುಳಿಯ ಅರಿವಿದ್ದವರಿಗೂ ಕೆಲವೊಮ್ಮೆ ಧೃತಿಗೆಡಿಸುವ ಘಟನೆ. ಆದರೆ ಇದೇ ಸಮಯಸಾಧಕ ರಾಜಕೀಯದಲ್ಲಿ ಮುಳುಗುವ ಏಳುವ ಆ ಪಕ್ಷಕ್ಕೆ ಇದು ಹೊಸದೇನಲ್ಲ. ಅಸೌಖ್ಯದಿಂದ ಆಸ್ಪತ್ರೆಯಲ್ಲಿದ್ದ ಸಮರ್ಥ ಮುಖ್ಯಮಂತ್ರಿಯೊಬ್ಬರನ್ನು ಅಧಿಕಾರದಿಂದ ಇಳಿಸಲು ಕೋಮು ಗಲಭೆಯನ್ನು ಪ್ರಾರಂಭಿಸಿದ ಆ ಪಕ್ಷದ ಇತಿಹಾಸ ಎಲ್ಲರಿಗೂ ತಿಳಿದಿರುವುದೆ. ಏನು ಮಾಡಿದರೂ ತಮ್ಮ ಮೇಲೆ ಯಾವುದೇ ಕಾನೂನು ಕ್ರಮವು ನಡೆಯದು ಎಂದು ಸಮಾಜ ವಿರೋಧಿ ವ್ಯಕ್ತಿಗಳಿಗೆ ಖಚಿತವಾಗಿಬಿಟ್ಟಿದೆ. ಪ್ರತಿ ವರ್ಷವೂ ಸಮಾಜ ವಿರೋಧಿ ಕೃತ್ಯಗಳನ್ನೂ ಪ್ರಕರಣಗಳನ್ನೂ ಹಿಂಪಡೆಯುವ ಸರ್ಕಾರದ ಕ್ರಮವು ಇಂತಹ ಅಪರಾಧಿಗಳು ಭಯವಿಲ್ಲದೆ ವರ್ತಿಸಲು ಅಸ್ಪದ ನೀಡಿದೆ. ತನಗೆ ಬೇಕೆಂದಾಗ ಗಲಭೆಗಳನ್ನು ಪ್ರಾರಂಭಿಸಲು ಇಂತಹ ವ್ಯಕ್ತಿಗಳನ್ನು ಪಕ್ಷವು ಸಾಕುತ್ತಿರುತ್ತದೆ.
ಇಂಥವರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಇರುತ್ತಾರೆ. ಆಡಳಿತದ ಮೊಗಸಾಲೆ ವಿಧಾನಸೌಧದಲ್ಲಿ “ಪಾಕಿಸ್ತಾನ್ ಜಿಂದಾಬಾದ್' ಎಂದು ಜಯಕಾರ ಹಾಕಿದವರಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ನೂರಾರು ಜನರ ಮುಂದೆ ಕೊಲೆಮಾಡಿರುವವರಿರುವರು. ಧರ್ಮಕ್ಷೇತ್ರಗಳ ವಿರುದ್ಧ ಸಮಯ ಸಾಧಕರನ್ನು ಎತ್ತಿಕಟ್ಟಿ ಹಿಂದು ಶಕ್ತಿ ಕೇಂದ್ರಗಳಿಗೆ ಮಸಿಬಳಿಯುವ ಜಾಲವು ಸದಾಸಿದ್ಧವಾಗಿದೆ. ಇತಿಹಾಸದ ತಥ್ಯಗಳನ್ನು ಸಾಮಾಜಿಕ ಸಂತುಲನವನ್ನೂ ಹದಗೆಡಿಸುವ ಕಥನಗಳ ಮೂಲಕ ಅಧಿಕಾರಿಗಳನ್ನು ತಮಗೆ ಬೇಕಾದಂತೆ ಪಳಗಿಸಿ ನ್ಯಾಯಾಂಗದ ಮೇಲೂ ಒತ್ತಡವನ್ನು ಹೇರಿ ತಮ್ಮ ಸಂಚುಗಳನ್ನು ನಡೆಸಬೇಕೆನ್ನುವ ಕೆಲವರು ಈ ಸರ್ಕಾರದಲ್ಲಿ ಇರುವರು. ಅಹಂಕಾರ, ದರ್ಪಗಳಿಂದಲೇ ಅಧಿಕಾರ ಚಲಾವಣೆ ಎಂದು ಕೊಳ್ಳುವ ಹೆಂಡಕುಡಿದ ಕಪಿಗಳಂತೆ ಇಂದು ಅಲ್ಲಿ ಸಮಾಜ ವಿರೋಧಿಗಳ ತಂಡವೇ ನೆರೆದಿದೆ.
ಆದರೆ ಸಂಘವು ಈ ಎಲ್ಲವನ್ನೂ ಕಂಡೂಕಾಣದಂತೆ ಅರಗಿಸುತ್ತಾ ಬರುತ್ತಿದೆ. ಸಂಘದ್ದು ಸ್ವಾರ್ಥವಿಲ್ಲದ ಸ್ವಹಿತ ಸಾಧನೆಗಲ್ಲದ ವಿಶುದ್ಧ ಮಮಕಾರ, ದೇಶ, ಧರ್ಮ, ಸಮಾಜದ ಕುರಿತು ಅಲ್ಲಿ ಕಾಣುವುದು ಅತೀವ ಕಾಳಜಿ. ಅತ್ಯಂತ ಪ್ರಾಥಮಿಕ ವಿಚಾರದಲ್ಲೂ ಸಂಘವು ಅದನ್ನು ಅಳವಡಿಸುವುದರಲ್ಲಿ ಬಯಸುವುದು ಪೂರ್ಣ ಸಫಲತೆಯನ್ನು,ಪ್ರತಿ ಊರಿನ ದೇವಸ್ಥಾನ, ಸ್ಮಶಾನ, ಮತ್ತು ಊರಿನ ಬಾವಿಯ ನೀರು ಆ ಊರಿನ ಎಲ್ಲರಿಗೂ ಸೇರಿದ್ದು ಎನ್ನುವ ಸಂಘದ ನಿರ್ಣಯವು ಪ್ರತಿ ಸ್ವಯಂಸೇವಕನ ಹೃದಯದ ಭಾವನೆ. ಇದು ಈಡೇರುವವರೆಗೂ ಅವಿರತವಾಗಿ ತುಡಿಯುವುದು ಸಂಘದ್ದೇ ವೈಶಿಷ್ಟ್ಯ. ಈ ಸಾಮಾನ್ಯವೆನಿಸುವ ಪ್ರತಿಜ್ಞೆಯು ನೆರವೇರಿದಾಗ ಸಾವಿರ ವರ್ಷಗಳ ಕಳಂಕವು ತೊಳೆದು ಬಿಡುವುದು. ರಾಜಕಾರಣಿಗಳು ಪ್ರಚಾರ ಪ್ರಿಯರಾದರು. ಆಹಂಕಾರವನ್ನು ದರ್ಪವನ್ನು ಆವರಿಸಿಕೊಂಡರು. ಅಧಿಕಾರದ ಹಿಂದೆ ಬಿದ್ದರು. ತಮ್ಮನ್ನು ತಾವು ಸರ್ವಜ್ಞರೆಂದುಕೊಂಡರು. ಆದರೆ ಸಂಘವು ಬೆಳೆಯುತ್ತಾ ಮುಂದುವರೆಯಿತು. ದೇಶದಲ್ಲಿ ಆತ್ಮವಿಶ್ವಾಸವನ್ನು ನೆಲೆಗೊಳಿಸಿತು. ದೇಶದ ಮಕ್ಕಳಲ್ಲಿ ಸಂಸ್ಕಾರವನ್ನು ಬೇರೂರಿಸಿತು. ಇದನ್ನು ಬೇಡವೆನ್ನುವವರು ತಮ್ಮ ಕೋಳಿ ಇನ್ನು ಕೂಗಲಾರದು ಎಂದು ಕೂಡಾ ಅರಿಯದವರು. ಬೀದಿ ಬೀದಿಯಲ್ಲೂ ನಗೆಪಾಟಲಾಗುವವರು.