Logo

VHP PUBLICATIONS

Hindu Vani


expand_more

ಸೂಕ್ತಿಶ್ರೀ

ಹೆಣ್ಣು ಮಕ್ಕಳಿಂದ ಏಳಿಗೆ


ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್ |

ನ ಶೋಚಂತಿ ತು ಯತಾ ವರ್ಧತೇ ತದ್ಧಿ ಸರ್ವದಾ ||

---- ಮನುಸ್ಮೃತಿ


“ಕುಟುಂಬದ ಹೆಣ್ಣು ಮಕ್ಕಳು ಕಷ್ಟಕ್ಕೆ ಸಿಕ್ಕಿ ನೋವನ್ನು ಅನುಭವಿಸುತ್ತಿದ್ದರೆ; ಆ ಕುಟುಂಬವು ಬಹು ಬೇಗನೆ ನಾಶವಾಗುತ್ತದೆ. ಅದೇ ರೀತಿ ಯಾವ ಕುಟುಂಬದಲ್ಲಿ ಹೆಣ್ಣು ಮಕ್ಕಳು ಶೋಕಿಸದೆ ಸಂತೋಷದಲ್ಲಿರುವರೋ ಆ ಕುಟುಂಬವು ಸದಾ ಏಳಿಗೆಯಲ್ಲಿ ಇರುತ್ತದೆ.”

ಕುಟುಂಬದ ಅಸ್ತಿತ್ವವಿರುವುದು ಆ ಮನೆಯ ಹೆಣ್ಣು ಮಕ್ಕಳ ಸಾಮರ್ಥ್ಯದ ಮೇಲೆ. ಮನೆಯು ಮಣ್ಣಿನ ಇಟ್ಟಿಗೆಯಿಂದ ಕಟ್ಟುವುದು ಮಾತ್ರವಲ್ಲ, ಅದು ಮನದ ಭಾವನೆಗಳಿಂದ ಭದ್ರವಾಗುತ್ತದೆ. ಮನೆಯೆಂದರೆ ಅದು ಪ್ರೀತಿ, ಪ್ರೇಮ, ಬಂಧುತ್ವದ ಭವನವಾಗಬೇಕು. ಎಲ್ಲ ಸುಖ ಸಂಪತ್ತುಗಳು ತುಂಬಿದ್ದು ಅಲ್ಲಿ ಬದುಕಿನ ಮೃದು ಭಾವನೆಗಳೇ ಇಲ್ಲದಿದ್ದರೆ ಅದು ಹೇಗೆ ಭವನವೆಂದು ಕರೆದುಕೊಳ್ಳಬಲ್ಲುದು? ಅದು ಬರಿಯ ವನವಾಗಬಲ್ಲುದು ಎನ್ನುವ ಮಾತೊಂದಿದೆ. ಗೃಹಿಣಿಯಿಲ್ಲದ ಗೃಹವು ಬೆಳಕು ಸೂಸದ ದೀಪವಿದ್ದಂತೆ. 'ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹ ಮುಚ್ಯತೇ' ಎನ್ನುವ ಸೂಕ್ತಿಯು ಹೇಳುವುದು ಕೂಡಾ ಗೃಹಿಣಿಯು ಮನೆಯ ಶ್ರೇಯಸ್ಸು' ಎಂದೇ. ವಿಷ್ಣುವು ಲಕ್ಷ್ಮಿಯಿಂದ ಸಂಪೂರ್ಣನಾಗುವನಂತೆ! ಅದೇ ರೀತಿ ಗಂಡನು ತನ್ನ ಪತ್ನಿಯಿಂದ ಮನೆಯ ಯಜಮಾನನಾಗುವನು ಅಷ್ಟೇ. ಮನೆಯ ಶ್ರೇಯಸ್ಸಾಗಿ ಇರುವವಳು ಗೃಹಿಣಿ ಮಾತ್ರಳೇ. 'ಗೃಹಂ ತು ಗೃಹಿಣೀಹೀನಮರಣ್ಯ ಸದೃಶಂ ಭವೇತ್' ಕಟ್ಟಡವೊಂದನ್ನು ಕಟ್ಟಿ ಇಡುವುದರಿಂದ ಅದು ಮನೆಯೆಂದಾಗದು ತಿಳಿದವರು ಹೇಳುವುದು ಗೃಹಿಣಿಯೇ ಗೃಹವೆನಿಸುತ್ತಾಳೆ. ಗೃಹಿಣಿಯಿಲ್ಲದ ಮನೆಯು ಒಣಗಿದ ಕಾಡು ಎನಿಸುತ್ತದೆ. ಗೃಹಿಣಿಯು ಪತ್ನಿಯಾಗಿ, ತಾಯಿಯಾಗಿ, ಒಡತಿಯಾಗಿ, ಸೇವಕಿಯಾಗಿ ಹಲವು ಭಾವನೆಗಳನ್ನು ಮನೆಯೊಳಗೆ ಒಡಮೂಡಿಸುತ್ತಾಳೆ. ಇಂತಹ ಭಾವನೆಗಳಿಗೆ ಜೀವಂತ ರೂಪಕೊಟ್ಟು ಮನೆಯನ್ನು ಆಕೆ ನಲಿವಿನ ತಾಣವಾಗಿಸುತ್ತಾಳೆ.

ಹೆಣ್ಣು ಮಕ್ಕಳು ಅತ್ತರೆ ಆ ಮನೆಯು ಉದ್ಯಾನವನವಾಗದೆ ಸ್ಮಶಾನ ಸದೃಶವಾಗುತ್ತದೆ. ಸೀತಾದೇವಿಯ ಅಳಲು ಲಂಕೆಯ ಸರ್ವನಾಶ ಮಾಡಿತು. ದೌಪದಿಯ ದುಃಖವು ಕೌರವರ ವಂಶವನ್ನೇ ಅಳಿಸಿಬಿಟ್ಟಿತು. ಇಂತಹ ಚಿಂತನೆಯ ಕಾಲದಲ್ಲಿ ಸಮಾಜದಲ್ಲಿ ಪುರುಷನೇ ಪ್ರಧಾನ ಎಂದಿದ್ದಿತು. ಮನೆಯನ್ನು ನಡೆಸುವ ವೆಚ್ಚದ ಸಂಪಾದನೆಯು ಪುರುಷನಿಂದಲೇ ನಡೆಯುತ್ತಿದ್ದಿತು. ಆದರೆ ಮನೆಗಾಗಿ ಅದನ್ನು ವೆಚ್ಚಮಾಡಿ ಖರ್ಚನ್ನು ತೂಗಿಸುವ ಜವಾಬ್ದಾರಿಯು ಮಹಿಳೆಯಿಂದ ನಡೆಯುತ್ತಿದ್ದಿತು.

ಇಂತಹದೊಂದು ಶಿಸ್ತನ್ನು ಕುಟುಂಬದ ಸಮತೋಲನಕ್ಕಾಗಿ ಪಾಲಿಸಬೇಕಾಗಿದ್ದಿತು. ಇಂದು ಪ್ರಜಾಪ್ರಭುತ್ವವಿದೆ. ಆದರೆ ಪ್ರತಿ ಪ್ರಜೆಗೂ ಕೆಲವೊಂದು ನಿಯಂತ್ರಣದ ಕಾನೂನುಗಳಿವೆ. ಸರ್ವ ಸ್ವಾತಂತ್ರ್ಯವೆನ್ನುವುದು ಇರಲು ಸಾಧ್ಯವೇ ಇಲ್ಲ. ಒಂದೊಂದು ಪರಿಮಿತಿಯಲ್ಲಿ; ಅವನು ಸಾಮಾನ್ಯ ಪ್ರಜೆಯಿರಲಿ, ಅಥವಾ ಶಾಸಕನಿರಲಿ ಇನ್ನು ಪ್ರಧಾನಿಯೇ ಇರಲ್ಲಿ ಎಲ್ಲರೂ ಒಂದೊಂದು ಪರಿಮಿತಿಯ ಸ್ವಾತಂತ್ರ್ಯದಲ್ಲಷ್ಟೇ ಇರುತ್ತಾರೆ. ದೇಶದ ಆಡಳಿತವು ಇಂತಹ ಸಂಕೋಲೆಯ ಅನುಶಾಸನದಿಂದ ಸುಸೂತ್ರವಾಗಿ ನಡೆಯುತ್ತದೆ.

ಹೀಗಿರುವಾಗ ಮನೆಯ ಆಗುಹೋಗುಗಳೂ ಇಂತಹ ಶಿಸ್ತಿನ ಪರಿಮಿತಿಯಿಂದ ಹೊರಗಿರುವುದು ಅಸಾಧ್ಯ. ಆದುದರಿಂದ ಪುರುಷರು ಕೂಡಾ ಇಂತಹ ಮಿತಿಯನ್ನು ಪರಿಮಿತಿಯನ್ನು ಅರಿತು ನಡೆದರೆ ಮನೆಯು ಭವನವಾಗುತ್ತದೆ. ಇಲ್ಲದಿದ್ದರೆ ವನವಾಗುತ್ತದೆ.

ಸೂಕ್ತಿಶ್ರೀ

.