Hindu Vani
Index
ಕಾರ್ಯಕ್ರಮ
ದುರ್ಗಾವಾಹಿನಿ ಪಥ ಸಂಚಲನ
ವಾದ್ಯಘೋಷದಲ್ಲಿ, ನೇತಾಜಿ ಸುಭಾಷರ ಐ.ಎನ್.ಎ ಯ ಸಂಚಲನ ಗೀತೆ 'ಕದಮ್ ಕದಮ್ ಬಡಾಯ ಜಾ ಖುಷಿಕೆ ಗೀತ್ ಗಾಯೆ ಜಾ' ವೀರ ಸಾವರ್ಕರರ 'ಜಯೋಸ್ತುತೇ ಶ್ರೀ ಮಹಾಮಂಗಲೇ' ವಿಜಯನಗರದ ವೀರಪುತ್ರ ಕನ್ನಡ ಚಲನಚಿತ್ರ ಗೀತೆ” “ಅಪಾರ ಕೀರ್ತಿಗಳಿಸಿ ಮೆರೆದ ಭವ್ಯ ನಾಡಿದು” ಇನ್ನು 'ಜನನಿ ಜನ್ಮಭೂಮಿ ಸ್ವರ್ಗಸೇ ಮಹಾನ್ ಹೈ' ಮೊದಲಾದ ಸಂಚಲನ ಗೀತೆಗಳು ಅನುರಣಿಸಿದ ಸುಂದರ ಪಥಸಂಚಲನವೊಂದು ಅಕ್ಟೋಬರ್ 26ರಂದು ನಡೆಯಿತು. ವಿಶ್ವಹಿಂದು ಪರಿಷದ್ ಯುವತಿಯರ ವಿಭಾಗ “ದುರ್ಗಾವಾಹಿನಿ”ಯ ರಾಣಿ ಅಬ್ಬಕ್ಕ 500ನೇ ವರ್ಷದ ಸ್ಮರಣೆಗಾಗಿ ನಡೆದ ಈ ಪಥಸಂಚಲವನ್ನು ನಡೆಸಿದುದು ಬೆಂಗಳೂರು ಮಹಾನಗರದ ಹಲಸೂರು ಜಿಲ್ಲೆಯ ದುರ್ಗಾವಾಹಿನಿ ವಿಭಾಗ, ಪಥ ಸಂಚಲನಕ್ಕೆ ಮೊದಲು ಸಭಾಕಾರ್ಯಕ್ರಮವು ಇಂದಿರಾನಗರದ ನ್ಯೂ ಹೊರೈಝನ್ ಶಾಲೆಯ ಆವರಣದಲ್ಲಿ ನಡೆಯಿತು. ವಾಗ್ಗೇವಿ ವಿಲಾಸ ಶಾಲೆಗಳ ಶೈಕ್ಷಣಿಕ ಸಲಹೆಗಾರರಾದ ಎಸ್. ಪೂರ್ಣಾರವರು ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು. ದುರ್ಗಾವಾಹಿನಿಯ ಪ್ರಮುಖ ವಕ್ತಾರರಾದ ಪರಿಷದ್ ಜಿಲ್ಲಾಧ್ಯಕ್ಷೆ ಡಾ|| ರಾಜೇಶ್ವರಿ ಪ್ರಸಾದರವರು ಮಹಿಳಾ ಕೇಂದ್ರಿತ ವಿಚಾರಗಳನ್ನು ವಿಶ್ಲೇಷಿಸುತ್ತಾ ಪ್ರಸ್ತುತ ದಿನಗಳಲ್ಲಿ ದುರ್ಗಾವಾಹಿನಿಯು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಹಿಂದು ಸಮಾಜದ ಮಹಿಳೆಯರನ್ನು ಸಂಘಟಿಸುವ ಅನಿವಾರ್ಯತೆಯನ್ನು ತಿಳಿಸಿ ಪರಿಷತ್ತಿನ ಮಾತೃಶಕ್ತಿ ವಿಭಾಗವೂ ದುರ್ಗಾ ವಾಹಿನಿಯೂ ಹಲವು ಹಂತಗಳಲ್ಲಿ ಪಡೆಯುತ್ತಿರುವ ಗೆಲುವನ್ನು; ಸಮಾಜವು ಪರಿಷತ್ತಿನ ಕಾರ್ಯಗಳನ್ನು ಸ್ವೀಕರಿಸುವುದನ್ನೂ ವಿವರಿಸಿದರು.
ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಶಕ್ತಿ ಪ್ರಮುಖ್ ಶುಭಾ, ದುರ್ಗಾವಾಹಿನಿ ಪ್ರಮುಖ್ ಪಾರ್ವತಿ ಮತ್ತು ಉಪಾಧ್ಯಕ್ಷರಾದ ಕುಸುಮಾ ನಾರಾಯಣಾಚಾರ್ ವೇದಿಕೆಯಲ್ಲಿ ಇದ್ದರು. ಸಂಘದ ವಿಭಾಗ ಕಾರ್ಯವಾಹರೂ, ಜಿಲ್ಲಾ ಕಾರ್ಯವಾಹರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪರಿಷದ್ ದಕ್ಷಿಣ ಪ್ರಾಂತ ಅಧ್ಯಕ್ಷರಾದ ದೀಪಕ್ ರಾಜಗೋಪಾಲ್ ಹಾಗೂ ಪ್ರಾಂತ ಕಾರ್ಯದರ್ಶಿಗಳಾದ ಬಿ.ಈ.ಸುರೇಶರವರು ಕೂಡಾ ಭಾಗವಹಿಸಿದ್ದರು.
ಪಥಸಂಚಲನವು ಹಾದು ಹೋದ ಇಂದಿರಾನಗರ, ದೊಮ್ಮಲೂರು, ದೂಪನಹಳ್ಳಿಗಳಲ್ಲಿ ಬೃಹದ್ ರಂಗೋಲಿಗಳಿಂದ ಮತ್ತು ಹೂಗಳನ್ನು ಎರಚಿ ಸ್ವಾಗತಿಸಿದುದು ಹೃದಯಂಗಮವಾಗಿದ್ದಿತು. ದಾರಿಯ ಇಕ್ಕೆಲಗಳ ದೇವಸ್ಥಾನಗಳಲ್ಲಿ ಧ್ವಜವನ್ನು ಆರತಿಯೆತ್ತಿ ಸ್ವಾಗತಿಸಿದುದು ವಿಶೇಷವಾಗಿದ್ದಿತು. ದಾರಿಯ ಹಲವು ಬಡಾವಣೆಗಳು ಮತಾಂತರದ ಪ್ರಭಾವಕ್ಕೆ ಒಳಗಾಗಿದ್ದರೂ ಅಲ್ಲೆಲ್ಲಾ ಪಥ ಸಂಚಲನವನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿದುದು ವಿಶೇಷವೆನಿಸಿತು. (ಭಾವಚಿತ್ರಗಳು ಮುಖಪುಟದಲ್ಲಿ)