Hindu Vani
Index
ಕ್ಷೇತ್ರ ದರ್ಶನ
ಶಕಟಪುರದ ಶ್ರೀ ಸಂತಾನಗೋಪಾಲ ದೇಗುಲ ಮತ್ತು ಶ್ರೀಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ
ಜೀವನದ ಪ್ರತಿಯೊಂದು ಘಟನೆಗೂ ಒಂದು ಕಾರಣವಿರುತ್ತದೆ. ಹಾಗೆಯೇ ಪ್ರತಿಯೊಂದು ಕಾರಣಕ್ಕೂ ಒಂದು ಪ್ರೇರಣೆಯಿರುತ್ತದೆ. ಹೀಗೆ ಕಾರಣ ಹಾಗು ಪ್ರೇರಣೆಗಳಿಂದ ಹೊಸ ವಿಚಾರಗಳು, ಘಟನೆಗಳು ಬದುಕಿನ ಹೊಸ ಮಾರ್ಗಕ್ಕೆ ದಾರಿಯಾಗುತ್ತವೆ. ಇದರಿಂದ ಹೊಸತನದ ಹಾದಿಯಲ್ಲಿ ಬದುಕು ಮತ್ತಷ್ಟು ಸಾರ್ಥಕವಾಗಲು ಹಂಬಲಿಸುತ್ತದೆ. ನಮ್ಮ ಹಿರಿಯರು ತಮ್ಮ ಜೀವನಾನುಭವವನ್ನು ಉತ್ತಮ ಉದಾಹರಣೆಗಳ ಮೂಲಕ ತಮ್ಮ ಮುಂದಿನವರಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಮುಂದಿನವರು ಅವರ ಆ ಅನುಭವಗಳ ನೆರಳಿನಲ್ಲಿ ತಂಪಾದ ಜೀವನವನ್ನು ಕಟ್ಟಿಕೊಳ್ಳುವುದು ಬುದ್ದಿವಂತಿಕೆ.
ಭಂಡಿಗಡಿ ಎಂದು ಕರೆಯಲ್ಪಡುವ ಶ್ರೀ ಲಕ್ಷ್ಮೀ ನಾರಾಯಣ ದೇಗುಲವಿರುವ ಶಕಟಪುರವೆಂಬ ಕ್ಷೇತ್ರವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿದೆ. ಈ ಕ್ಷೇತ್ರವು ಶೃಂಗೇರಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು ಶೃಂಗೇರಿಗೆ ಹತ್ತಿರದಲ್ಲಿದೆ. ಸುಂದರ ಪ್ರಕೃತಿ ಪರಿಸರದಲ್ಲಿನ ಈ ಕ್ಷೇತ್ರವು ಶ್ರೀವಿದ್ಯಾಪೀಠವೆಂದು ಪ್ರಸಿದ್ಧಿಯಾಗಿದೆ. ಬೆಂಗಳೂರಿನಿಂದ ಸುಮಾರು 326 ಕಿ.ಮೀ ದೂರದಲ್ಲಿದೆ.
ಐತಿಹಾಸಿಕ ಹಿನ್ನೆಲೆ
ಈ ಕ್ಷೇತ್ರವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಿಂದೆ ಶ್ರೀ ಆದಿಶಂಕರಾಚಾರ್ಯರು ಭಾರತಾದ್ಯಂತ ತಾವು ಸ್ಥಾಪಿಸಿದ ಪೀಠಗಳಲ್ಲಿ ಬದರೀಕಾಶ್ರಮದ ಜ್ಯೋತಿಷ ಪೀಠಕ್ಕೆ ತಮ್ಮ ಅಚ್ಚುಮೆಚ್ಚಿನ ಅನುಯಾಯಿಯಾದ ಶ್ರೀತೋಟಕಾಚಾರ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿದರು. ನಂತರದ ದಿನಗಳಲ್ಲಿ ಸುಮಾರು 13ನೇ ಶತಮಾನದ ಭಾಗದಲ್ಲಿ ಇಲ್ಲಿನ ಮುಖ್ಯಸ್ಥರಾಗಿದ್ದ ಶ್ರೀ ಸತ್ಯತೀರ್ಥರು ಅಲ್ಲಿ ಉಂಟಾದ ವಿದೇಶಿಯರ ಧಾಳಿಯ ಸಮಸ್ಯೆಯಿಂದ ಬದರಿಯನ್ನು ತೊರೆದು ಧಾರ್ಮಿಕ ಕಾರ್ಯಕ್ಕೆ ಪ್ರಶಸ್ತವಾದ ಪ್ರದೇಶವನ್ನು ಹುಡುಕುತ್ತಾ ದಕ್ಷಿಣಕ್ಕೆ ಬಂದರು. ಬದರಿಯಿಂದ ಹೊರಟು ತುಂಗಾ ತೀರದ ಈ ಶಕಟಪುರದಲ್ಲಿ ನೆಲೆ ನಿಂತರು. ತಾವು ಬದರಿಯಿಂದ ತಂದ ಶ್ರೀಲಕ್ಷ್ಮೀನಾರಾಯಣನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿ ಶ್ರೀ ಜಗದ್ಗುರು ಬದರೀ ಶ್ರೀಶಂಕರಾಚಾರ್ಯ ಮಹಾಸಂಸ್ಥಾನ, ಶ್ರೀಕ್ಷೇತ್ರ ಶಕಟಪುರಂ ಶ್ರೀವಿದ್ಯಾಪೀಠವನ್ನು ಸ್ಥಾಪಿಸಿದರು.
ಮುಂದೆ ಕ್ರಿ.ಶ 14 ಮತ್ತು 15ನೇ ಶತಮಾನದಲ್ಲಿ ವಿಜಯ ನಗರ ಸಾಮ್ರಾಜ್ಯದ ಅರಸರ ಆಸಕ್ತಿಯಿಂದ ದೇಗುಲಕ್ಕೆ ನೀಡಿದ ಭೂಮಿ ಹಾಗು ಧನಸಂಪತ್ತಿನ ದಾನ ದೇಣಿಗೆಗಳಿಂದ ಕ್ಷೇತ್ರವು ಉನ್ನತಿಯನ್ನು ಕಂಡಿದೆ. ಇಲ್ಲಿನ 32ನೇ ಆಚಾರ್ಯರಾಗಿದ್ದ ಶ್ರೀ ಶ್ರೀರಾಮಚಂದ್ರಾನಂದ ತೀರ್ಥರು ಇಲ್ಲಿ ಅನೇಕ ಯಜ್ಞಯಾಗಾದಿಗಳನ್ನು ನಡೆಸಿ ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಪವಿತ್ರ ಕ್ಷೇತ್ರವಾಗಿಸಿದ್ದಾರೆ. ಪ್ರಸ್ತುತ ಈಗಿರುವ ಆಚಾರ್ಯರು ಸಾಕಷ್ಟು ಅಭಿವೃದ್ಧಿಯ ಕಾರ್ಯ ಕೈಗೊಂಡು, ನವೀಕರಣದ ಕಾರ್ಯದಿಂದ ಉತ್ತಮ ಕಟ್ಟಡಗಳ ನಿರ್ಮಾಣವನ್ನು ಮಾಡಿಸಿದ್ದಾರೆ.
ಪೌರಾಣಿಕ ಹಿನ್ನೆಲೆ
ಹಿಂದೆ ಈ ಕ್ಷೇತ್ರವು ಶಕಟ ಮುನಿಯ ಪ್ರಾಯಶ್ಚಿತ್ತದಿಂದ ಪವಿತ್ರ ಕ್ಷೇತ್ರವಾಗಿದೆ ಎಂಬ ಉಲ್ಲೇಖವಿದೆ. ಬ್ರಹ್ಮ ಪುರಾಣದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಈ ಕ್ಷೇತ್ರ ಕುರಿತು ಉಲ್ಲೇಖಿಸಿದ್ದಾನೆ.
ಪ್ರಮುಖ ದೇಗುಲಗಳು
ಸುಂದರ ಪ್ರಕೃತಿಯ ನಡುವೆ ನೆಲೆ ನಿಂತಿರುವ ಈ ದೇಗುಲವು ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ವಿಶಾಲವಾದ ಆವರಣವು ಸುಂದರ ಕಂಬಗಳ ಪ್ರದಕ್ಷಿಣಾ ಪಥವನ್ನು ಹೊಂದಿದೆ. ತುಂಗಾ ನದಿಯ ದಡದಲ್ಲಿರುವ ಈ ದೇಗುಲಕ್ಕೆ ರಾಜ ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಇಕ್ಕೆಲಗಳಲ್ಲೂ ಹರಡಿರುವ ಹಚ್ಚಹಸಿರಿನ ವನಸಿರಿ ಆಕರ್ಷಕವಾಗಿದೆ. ಮುಂದೆ ಸಾಗಿದಂತೆ ಹಂತಹಂತವಾಗಿ ಕೆಳಭಾಗಕ್ಕೆ ಇಳಿದಂತೆ ಸಾಗುವ ದಾರಿಯ ಮುಂದೆ ಭವ್ಯವಾದ ದೇಗುಲವನ್ನು ಕಾಣುತ್ತೇವೆ. ಸುಂದರ ಧ್ವಜಸ್ಥಂಬ, ಪವಿತ್ರ ಗರುಡಕಂಬಗಳು ಕಾಣಸಿಗುತ್ತವೆ. ಅಲ್ಲಿಂದ ಮುಂದೆ ಕೀರ್ತಿಮಂಟಪವನ್ನು ತಲುಪಿದರೆ, ಮುದ್ದಾದ ನಗುಮೊಗದ ಸಂತಾನ ವೇಣುಗೋಪಾಲ ಕೃಷ್ಣನು, ಒಂದು ಕೈಯಲ್ಲಿ ಕೊಳಲನ್ನು ಹಿಡಿದು ಮತ್ತೊಂದರಲ್ಲಿ ಬೆಣ್ಣೆ ಮುದ್ದೆಯನ್ನು ಹಿಡಿದ ಭಂಗಿಯಲ್ಲಿ ಮನಸೂರೆಗೊಳ್ಳುತ್ತಾನೆ. ಎಡಭಾಗಕ್ಕೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದೇಗುಲ ಹಾಗು ಬಲಭಾಗದಲ್ಲಿ ಶ್ರೀವಿದ್ಯಾ ರಾಜರಾಜೇಶ್ವರಿ ದೇಗುಲಗಳು ಕಾಣಸಿಗುತ್ತವೆ. ದೇಗುಲದ ಸುತ್ತಲೂ ಅನೇಕ ಸುಂದರ ಶಿಲ್ಪಾಕೃತಿಗಳನ್ನು ಕೆತ್ತಲಾಗಿದೆ. ಶ್ರೀ ಕೃಷ್ಣಾವತಾರ, ಪರಶಿವನ ತಾಂಡವ ಇತ್ಯಾದಿ ವಿಗ್ರಹಗಳು ಆಕರ್ಷಕವಾಗಿವೆ ಹಿಂಭಾಗದ ಗೋಡೆಗಳಲ್ಲಿ ಶ್ರೀ ಆದಿಶಂಕರರ ಗುರು ಪರಂಪರೆಯ ಶಿಲ್ಪಗಳಿವೆ.
ಮುಖ್ಯ ದೇಗುಲದ ಹಿಂಭಾಗದಲ್ಲಿ ಶ್ರೀ ಶಂಕರರ ದೇವಾಲಯ, ಶ್ರೀಗೋಪಾಲಸ್ವಾಮಿ ಹಾಗು ಶ್ರೀಸೌಭಾಗ್ಯಲಕ್ಷ್ಮಿ ದೇವಾಲಯಗಳಿವೆ. ಇಲ್ಲಿನ ಯಜ್ಞಮಂಟಪದಲ್ಲಿ ವಿಶೇಷ ದಿನಗಳ ಯಜ್ಞಯಾಗಾದಿಗಳು ಜರುಗುತ್ತವೆ. ಪ್ರಸ್ತುತ ಇಲ್ಲಿನ ಆಚಾರ್ಯರು ಧರ್ಮಪ್ರಚಾರದ ಕಾರ್ಯಕ್ಕಾಗಿ ದೇಶಾದ್ಯಂತ ಸಂಚರಿಸಿದ್ದಾರೆ, ಧರ್ಮಶಾಲೆ ಯಜಶಾಲೆ, ಗೋಶಾಲೆ, ವೇದಪಾಠಶಾಲೆಗಳನ್ನು ಸ್ಥಾಪಿಸಿ, ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಯಾತ್ರಿಕರಿಗೆ ಹೆಚ್ಚಿನ ಮಾಹಿತಿ
* ಈ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 326 ಕಿ.ಮೀ ದೂರವಿದೆ.
* ಇಲ್ಲಿಗೆ ಶೃಂಗೇರಿ 40 ಕಿ.ಮೀ, ಹರಿಹರಪುರ ಮಠ 14 ಕಿ.ಮೀ ಇರುವ ಹತ್ತಿರದ ಯಾತ್ರಾ ಸ್ಥಳಗಳು.
* ಹೊರನಾಡು, ಕಳಸ, ಕಿಗ್ಗ, ಬಾಳೆಹೊನ್ನೂರುಗಳು ಭೇಟಿ ನೀಡಬಹುದಾದ ಸ್ಥಳಗಳು. ನವರಾತ್ರಿಯ ವಿಶೇಷ ದಿನಗಳಲ್ಲಿ ಚಂಡಿಕಾಹೋಮ ವಿಶೇಷ ಯಜ್ಞಯಾಗಾದಿಗಳು ನಡೆಯುತ್ತವೆ.
* ಸಂತಾನ ಅಪೇಕ್ಷೆ ಹೊಂದಿರುವವರು ಇಲ್ಲಿನ ಸಂತಾನ ಗೋಪಾಲನಿಗೆ ಬೆಣ್ಣೆ ಸೇವೆ ನಡೆಸುವುದು ವಿಶೇಷ.