Hindu Vani
Index
ಕಾನೂನು
ವಕ್ಸ್‌ಬೋರ್ಡ್‌ನಿಂದ ಇಚ್ಛಾನುಸಾರ ಅಧಿಕಾರ ಚಲಾವಣೆ ಭೂಕಬಳಿಕೆ ಯತ್ನ - ಕೇರಳ ಹೈಕೋರ್ಟ್ ತೀರ್ಪ
610 ಕ್ಯಾಥೋಲಿಕ್ ಕ್ರೈಸ್ತ ಮತ್ತು ಹಿಂದುಳಿದ ಬೆಸ್ತ ವರ್ಗಗಳ ಹಿಂದು ಕುಟುಂಬಗಳು ಕಟ್ಟಿಕೊಂಡ ಮನೆಮಾರುಗಳನ್ನು ಬಿಟ್ಟು ಅವರೆಲ್ಲರೂ ನೆಲೆಕಳೆದುಕೊಳ್ಳುವ ದುಃಸ್ಥಿತಿಯಿಂದ ಕೇರಳ ಉಚ್ಚನ್ಯಾಯಾಲಯವು ಅವರನ್ನು ಪಾರು ಮಾಡಿದೆ. ವಕ್ಸ್ ಬೋರ್ಡಿನ ಭೂಮಿ ಬಾಕತನವನ್ನು ತನ್ನ ವಸ್ತುನಿಷ್ಠ ತೀರ್ಪಿನ ಮೂಲಕ ನ್ಯಾಯಾಲಯವು ತಡೆದಿದೆ. 1902ರಲ್ಲಿ ರಾಜ ಸಂಸ್ಥಾನವು ನೀಡಿದ ಆ ಭೂಮಿಯ ಬೆಲೆಯು ಆಗ ನಗಣ್ಯವಾಗಿದ್ದು 123ವರ್ಷಗಳ ಬಳಿಕ ಅದಕ್ಕೆ ಬಂದ ಮೌಲ್ಯವನ್ನು ಗಣಿಸಿ ಆ ಆಸ್ತಿಯನ್ನು ವಕ್ಸ್ ಎಂದು ಘೋಷಿಸುವ ದೇಶಾದ್ಯಂತ ನಡೆಯುವ ಕುತಂತ್ರವನ್ನು ಈ ಪ್ರಕರಣವು ಸಾಂಕೇತಿಕವಾಗಿ ಬೆಳಕಿಗೆ ತಂದಿದೆ. ಸಹಜ ನ್ಯಾಯದ ಉಲ್ಲಂಘನೆ, ಮೂಲಭೂತ ಹಕ್ಕಿನ ನಿರಾಕರಣೆಯಿಂದ ನ್ಯಾಯ ವಂಚಿತರಾದ ಕೇರಳದ ಎರ್ನಾಕುಲಂ ಜಿಲ್ಲೆಯ ಮುನಂಬಮ್ ಗ್ರಾಮದ ಸಂತ್ರಸ್ಥರಿಗೆ ಈಗ ಕೇರಳ ಉಚ್ಚನ್ಯಾಯಾಲಯದ ತೀರ್ಪು ಕಾನೂನಿನ ಅಭಯವನ್ನು ನೀಡಿದೆ.
ಪ್ರಕರಣದ ಹಿನ್ನೆಲೆ:
1902ರಲ್ಲಿ ತಿರುವಾಂಕೂರಿನ ಮಹಾರಾಜರಾದ ರಾಮವರ್ಮಾ ತಮ್ಮ ಸಂಸ್ಥಾನದಲ್ಲಿ ನೆಲೆಯೂರಿದ್ದ ಗುಜರಾಥ್ ಮೂಲದ ಮುಸ್ಲಿಂ ವ್ಯಾಪಾರಿ ಅಬ್ದುಲ್ ಸತ್ತಾರ್ ಮುಸಾಹಾಜಿ ಸೇಟ್ ಎನ್ನುವವರಿಗೆ ಮುನಂಬಮ್ ಗ್ರಾಮದ 40ಎಕ್ರೆ ಭೂಮಿಯನ್ನು ಗುತ್ತಿಗೆಯಾಗಿ ನೀಡಿದರು. 1950ರಲ್ಲಿ ಹಾಜಿ ಸೇಟರ ಅಳಿಯ ಮಹಮ್ಮದ್ ಸಿದ್ದಿಕ್ ಸೇಟ್ ಈ ಭೂಮಿಯನ್ನು 1948ರಲ್ಲಿ ಪ್ರಾರಂಭವಾದ ಫಾರೂಕ್ ಕಾಲೇಜಿಗೆ ದಾನಪತ್ರದ ಮೂಲಕ ಕೊಡಮಾಡಿದರು. ಆ ಭೂಮಿಯನ್ನು ಫಾರೂಕ್ ಕಾಲೇಜು ತನ್ನ ಶೈಕ್ಷಣಿಕ ಅಭಿವೃದ್ಧಿಗಾಗಿ ಉಪಯೋಗಿಸಬೇಕೆಂದೂ; ಅದಕ್ಕೆ ತಪ್ಪಿದರೆ ಭೂಮಿಯನ್ನು ಹಿಂದಿರುಗಿ ಕೊಡಬೇಕೆಂದೂ ದಾನ ಪತ್ರದಲ್ಲಿ ನಮೂದಿಸಿದ್ದರು. 1975ರಲ್ಲಿ ಫಾರೂಕ್ ಕಾಲೇಜು ಈ ಭೂಮಿಯನ್ನು 33ಲಕ್ಷ ರೂಪಾಯಿಗಳಿಗೆ ಆ ಭೂಮಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬಗಳಿಗೆ ಮಾರಿತು. 2019ರಲ್ಲಿ ಕೇರಳ ವಕ್ಸ್‌ಬೋರ್ಡ್ ಈ ಭೂಮಿಯು ವಕ್ಸ್‌ಆಸ್ತಿ ಎಂದು ಘೋಷಿಸಿ ತನ್ನ ಹಕ್ಕನ್ನು ಸ್ಥಾಪಿಸಲು ಪ್ರಯತ್ನಿಸಿತು. ಫರೂಕ್ ಕಾಲೇಜಿನ ಎಲ್ಲಾ ವ್ಯವಹಾರಗಳನ್ನು ವಕ್ಸ್‌ಬೋರ್ಡ್ ನಿರಾಕರಿಸಿತು. 2022ರಲ್ಲಿ ಕೇರಳ ಸರ್ಕಾರವು ಈ ಭೂಮಿಯು ವಕ್ಸ್ ಅಲ್ಲವಾದುದರಿಂದಲೂ ಈ ವ್ಯಾಜ್ಯದಲ್ಲಿ ವಕ್ಸ್ ಸಂರಕ್ಷಣಾ ಸಮಿತಿಯೆನ್ನುವ ಸಂಸ್ಥೆಯೊಂದು 2024ರಲ್ಲಿ ಸೇರಿದುದರಿಂದಲೂ ಈ ತಗಾದೆಯನ್ನು ಪರಿಹರಿಸಲು ಸಿ.ಎನ್.ರಾಮಚಂದ್ರ ನಾಯರ್ ಎನ್ನುವವರ ನೇತೃತ್ವದಲ್ಲಿ ವಿಚಾರಣಾ ಸಮಿತಿಯನ್ನು ನೇಮಿಸಿತು.
ಪ್ರಸ್ತುತ ಪರಿಸ್ಥಿತಿ:
ಈ ಹಂತದಲ್ಲಿ ಕೊಂಡುಕೊಂಡ ಭೂಮಿಯನ್ನು ಕಳೆದುಕೊಳ್ಳಬೇಕಾಗಿ ಬಂದ ಸಂತ್ರಸ್ಥರು ಬೀದಿಗಿಳಿಯಬೇಕಾಯಿತು. ಈ ಕಾಲಘಟ್ಟದಲ್ಲೀಗ ಕೇರಳ ಉಚ್ಚನ್ಯಾಯಾಲಯದ ವಿಭಾಗೀಯ ಪೀಠದ ನ್ಯಾಯಾಧೀಶರಾದ ಎಸ್.ವಿ.ಧರ್ಮಾಧಿಕಾರಿ ಮತ್ತು ಎಂ.ಎಂ. ಶ್ಯಾಮಕುಮಾರ್ ತೀರ್ಪನ್ನು ನೀಡಿರುವರು. ಕಾನೂನಿನ ಆಶಯಕ್ಕೆ ಅನುಗುಣವಾಗಿ ಈಗ ರಾಮಚಂದ್ರ ನಾಯರ್ ಸಮಿತಿಯು ತನ್ನ ನಿರ್ಧಾರವನ್ನು ನೀಡಲಿ ಎಂದು ಅವರು ತೀರ್ಪಿನಲ್ಲಿ ಬರೆದಿರುವರು.
ಪ್ರಕರಣದಲ್ಲಿ ಸೇರಬಯಸಿ ಬಂದ ವಕ್ಸ್ ಸಂರಕ್ಷಣಾ ಸಮಿತಿಗೆ ಈ ದಾವೆಯಲ್ಲಿ ಪ್ರತಿಕ್ರಿಯಿಸುವ ಹಕ್ಕು ಇಲ್ಲ ಎನ್ನುವುದು ಪೀಠದ ತೀರ್ಪು, ಭೂಮಿಯನ್ನು ಕಳೆದುಕೊಂಡ ಸಂತ್ರಸ್ಥರ ಜೀವನ ಮತ್ತು ನೆಲೆಯ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ವಕ್ಸ್ ಬೋರ್ಡ್ ಭೂಕಬಳಿಕೆಯ ಹುನ್ನಾರವನ್ನು ಹೂಡುತ್ತಿದೆ. ಇದರಿಂದ ಭೂಸಂತ್ರಸ್ಥರ ಮೂಲಭೂತ ಹಕ್ಕಿಗೆ ಚ್ಯುತಿಯಾಗಿದೆ. ತನ್ನ ಇಚ್ಛಾನುಸಾರ ನಡೆಯುತ್ತಿರುವ ವಕ್ಷಬೋರ್ಡ್ ಪ್ರಾಮಾಣಿಕವಾಗಿ ಭೂಮಿಯನ್ನು ಕೊಂಡು ಕೊಂಡು ಅನುಭವಿಸುತ್ತಿರುವವರಿಗೆ ಅನ್ಯಾಯವೆಸಗುತ್ತಿದೆ ಎಂದು ತೀರ್ಪು ಸಾರಿದೆ.
1950ರಲ್ಲಿ ಫರೂಕ್ ಕಾಲೇಜಿಗೆ ನೀಡಿದ ಸಿದ್ಧಿಕ್ ಸೇಟರ ದಾನಪತ್ರವು ವಕ್ ಪತ್ರವಾಗಿಲ್ಲ. ಅದೊಂದು ಸಾಮಾನ್ಯವಾದ ದಾನಪತ್ರ, ವಕ್ಸ್ ಎಂದರೆ ಅದು ದೇವರಿಗಾಗಿ ನೀಡುವ ಶಾಶ್ವತ ದಾನ. ಅದರಲ್ಲಿ ಶರತ್ತುಗಳು ಇರುವುದಿಲ್ಲ. ಕಾಲೇಜಿಗೆ ನೀಡಿದ ದಾನವು ಶರತ್ತುಗಳಿಂದ ಸೇರಿದೆ. ಯಾವ ರೀತಿಯಲ್ಲಿ ನೋಡಿದರೂ ಅದು 1954, 1984, ಮತ್ತು 1995ರ ವಕ್ಷಕಾನೂನಿನ ಆಶಯಕ್ಕೆ ಅನುಗುಣವಾಗಿಲ್ಲ. ಇಸ್ಲಾಂನಲ್ಲಿ ಧಾರ್ಮಿಕವಾದ ಶಾಶ್ವತವಾದ ಪವಿತ್ರ ದಾನವು ಮಾತ್ರ ವಕ್ಷಆಗುತ್ತದೆ. ಫರೂಕ್ ಕಾಲೇಜಿನ ಶೈಕ್ಷಣಿಕ ಉದ್ದೇಶಕ್ಕಾಗಿಯೇ ಆಸ್ತಿಯನ್ನು ದಾನಮಾಡಿದಾಗಲೇ ಅದರ ವಕ್ಸ್ ಲಕ್ಷಣಗಳು ಕಳೆದು ಹೋಗುತ್ತವೆ. ನಿಯಮ ಬದ್ಧವಲ್ಲದ ಕಾನೂನು, ಆಚರಣೆಗೆ ಅಸಾಧ್ಯವಾಗುತ್ತದೆ ಎಂದು ಉಚ್ಚನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಈಚೆಗೆ ಅಮೂಲ್ಯವಾಗಿರುವ ಸದರಿ ಭೂಮಿಯನ್ನು ಕಬಳಿಸಲು ವಕ್ಷಬೋರ್ಡ್ ಹೊಂಚುಹಾಕುತ್ತಿದೆ. ಫಾರೂಕ್ ಕಾಲೇಜು ಕಾನೂನು ನೀಡಿದ ಅವಕಾಶದಂತೆ ಮಾರುವುದನ್ನು ವಕ್ಷಬೋರ್ಡು ತಡೆಯುತ್ತಿದೆ. ಅಲ್ಲಿಯ ನಿವಾಸಿಗಳು ಬೆಲೆಕೊಟ್ಟು ಕೊಂಡು ಕೊಂಡ ಭೂಮಿಗೆ ತೆರಿಗೆಯನ್ನೂ ಕಟ್ಟುತ್ತಿರುವರು. ಅದನ್ನು ವಕ್‌ಬೋರ್ಡ್ ತನ್ನದು ಎಂದು ಹೇಳುತ್ತಿದೆ. 1950ರಿಂದ 2019ರ ವರೆಗೆ ಕಡ್ಡಾಯವಾಗಿ ಸರ್ವೆಮಾಡಬೇಕಾಗಿರುವ ಭೂಮಿಯನ್ನು ಹಾಗೆಯೇ ಬಿಟ್ಟು ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿದ ವಕ್ಸ್‌ಬೋರ್ಡಿನ ಬಗ್ಗೆ ಹೈಕೋರ್ಟ್ ತನ್ನ ಅಸಮಾಧಾನವನ್ನು ತೋರಿಸಿದೆ. “ಈ ರೀತಿಯ ಏಕಪಕ್ಷೀಯ ವಿಚಾರಗಳಿಗೆ ನ್ಯಾಯಾಲಯವು ತನ್ನ ಒಪ್ಪಿಗೆಯನ್ನು ನೀಡಿದರೆ ಮುಂದೆ ಯಾವುದೇ ಆಸ್ತಿ. ಕಟ್ಟಡ ಮುಂಗಟ್ಟುಗಳನ್ನು ತನ್ನದು ಎಂದು ಹೇಳಲು ದಾರಿ ತೋರಿಸಿದಂತೆ ಆಗುತ್ತದೆ. ಮುಂದೆ ಕೆಂಪುಕೋಟೆಯನ್ನೋ, ತಾಜ್‌ಮಹಾಲನ್ನೋ ಅಥವಾ ರಾಜ್ಯದ ಶಾಸನ ಸಭೆಯದ್ದೇ ಕಟ್ಟಡವನ್ನೂ ಅಥವಾ ಈ ನ್ಯಾಯಾಲಯದ ಕಟ್ಟಡವವನ್ನೂ ಕೂಡಾ ವಕ್ಸ್ ಎಂದು ಸಾರಿಬಿಡಲು ಸಾಧ್ಯವಾಗಬಹುದು. ಮುಂದೆ ಯಾವುದೋ ದಸ್ತಾವೇಜನ್ನೂ ಮುಂದಿಡಬಹುದು. ಜಾತ್ಯತೀತ ದೇಶದಲ್ಲಿ ಇಂತಹ ಮನಸೋ ಇಚ್ಛೆಯ ಅಧಿಕಾರ ಚಲಾವಣೆಗೆ ಆಸ್ಪದವಿಲ್ಲ” ಎಂದು ಹೈಕೋರ್ಟ್ ಹೇಳಿದೆ.