Hindu Vani
Index
ಕತೆಕತೆ ಕಾರಣ
ಸಣ್ಣ ತಪ್ಪು ದೊಡ್ಡ ಅನಾಹುತ
ಹಿಂದೊಮ್ಮೆ ಇಂಗ್ಲೆಂಡಿಗೂ ಜರ್ಮನಿಗೂ ದೊಡ್ಡ ಯುದ್ದವೊಂದು ನಡೆಯಿತು. ಎರಡೂ ದೇಶಗಳ ಸೈನ್ಯಗಳು ಒಂದಕ್ಕೊಂದು ಸಮವೇ ಆಗಿದ್ದವು. ಇಬ್ಬರೂ ಚೆನ್ನಾಗಿಯೇ ಯುದ್ಧದ ಸಿದ್ಧತೆ ಮಾಡಿದ್ದರು. ಆ ದಿನ ಮಧ್ಯಾಹ್ನ ಎರಡೂ ಸೈನ್ಯಗಳು ಮುಖಾಮುಖಿಯಾದವು. ಎರಡು ಪಕ್ಷಗಳ ನಡುವೆ ಇದ್ದುದು ಒಂದು ನದಿ ಮತ್ತು ನದಿ ದಾಟಲು ಇರುವ ಕಿರಿದಾದ ಸೇತುವೆ. ಯಾರು ಅತಿ ಶೀಘ್ರವಾಗಿ ಸೇತುವೆಯನ್ನು ದಾಟುವರೋ ಮತ್ತು ಸೇತುವೆಯನ್ನು ದಾಟಿದ ಮೇಲೆ ಎದುರು ಸೈನ್ಯವನ್ನು ಎದುರಿಸುವರೋ ಅವರು ಗೆಲ್ಲುವುದು ಖಚಿತವಾಗಿದ್ದಿತು. ಹಾಗಾಗಿ ಎರಡೂ ಸೈನ್ಯಗಳು ಸೇತುವೆ ದಾಟಬೇಕೆನ್ನುವ ಅವಸರದಲ್ಲಿದ್ದವು.
ಸೇತುವೆಯು ಸಮೀಪಿಸುತ್ತಿದ್ದಂತೆ ಇಂಗ್ಲೆಂಡಿನ ಸೇನಾಪತಿ ರಿಚರ್ಡ್ ಸೈನ್ಯದ ಮುಂಭಾಗಕ್ಕೆ ಹೋಗಿ ಒಂದು ದಿಬ್ಬದ ಮೇಲೆ ನಿಂತನು. ಬರುತ್ತಿರುವ ತನ್ನ ಸೈನ್ಯವನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದನು. ಆಗ ಅವನಿಗೆ ಸೈನ್ಯದ ನಡುವಿನಲ್ಲಿ ಒಂದು ಕುದುರೆಯು ಒಂದಿಷ್ಟು ಕುಂಟುತ್ತಾ ಬರುತ್ತಿದ್ದಂತೆ ಅನಿಸಿತು. ರಿಚರ್ಡ್ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡ ಬಹಳ ಅನುಭವವಿರುವ ಸೇನಾಪತಿ. ಅವನಿಗೆ ಕೂಡಲೇ ಅರ್ಥವಾಯಿತು. ಆ ಕುದುರೆಯ ಎಡಗಾಲಿನ ಲಾಳದ ಮೊಳೆಯೊಂದು ಸಡಿಲವಾದುದರಿಂದ ಲಾಳವು ಜೋತುಹೋಗಿದೆಯೆಂದೂ, ಅದರಿಂದಾಗಿ ಕುದುರೆಯು ಕುಂಟುತ್ತಿದೆಯೆಂದೂ ತಿಳಿಯಿತು.
ಒಂದು ಕ್ಷಣ ಮುಂದುವರಿಯುತ್ತಿರುವ ಸೈನ್ಯವನ್ನು ನಿಲ್ಲಿಸಿ ಆ ಕುದುರೆ ಮತ್ತು ಸವಾರನನ್ನು ಸೈನ್ಯದಿಂದ ಬೇರ್ಪಡಿಸಬೇಕೆಂದು ಅವನು ಅಂದುಕೊಂಡನು. ಆದರೆ ಅಷ್ಟರೊಳಗಾಗಿ ಜರ್ಮನ್ ಸೈನ್ಯವು ಸೇತುವೆಯನ್ನು ದಾಟಿ ಬಂದರೆ? ರಿಚರ್ಡನಿಗೆ ನಿರ್ಧಾರವನ್ನು ಕೈಗೊಳ್ಳಲು ಕೆಲವೇ ಕೆಲವು ಕ್ಷಣಗಳಿದ್ದವು.
ರಿಚರ್ಡನ ಮನಸ್ಸಿನಲ್ಲಿ ಎಲ್ಲವೂ ಸಿನೆಮಾದಲ್ಲಿ ನಡೆಯುವ ದೃಶ್ಯದಂತೆ ಕಂಡು ಬಂದಿತು. ಒಂದು ಮೊಳೆಯು ಸಡಿಲವಾದುದರಿಂದ ಲಾಳವೇನೂ ಬೀಳುವುದಿಲ್ಲ. ಸಡಿಲವಾದ ಮೊಳೆ ಕಿತ್ತು ಬಂದರೆ ಆನಂತರ ಉಳಿದ ಮೊಳೆಗಳೂ ಸಡಿಲವಾದರೆ, ಅವುಗಳೂ ಬಿದ್ದು ಹೋದರೆ ಮಾತ್ರ ಲಾಳವು ಬಿಚ್ಚಿ ಹೋಗುತ್ತದೆ. ಆಗಲೂ ಕುದುರೆಯು ಕುಂಟಬಹುದಲ್ಲದೆ, ಬಿದ್ದುಬಿಡುವುದಿಲ್ಲ. ಅಷ್ಟರೊಳಗೆ ಸೇತುವೆಯನ್ನು ದಾಟಬಹುದಲ್ಲವೇ? ಇಷ್ಟೆಲ್ಲಾ ವಿಚಾರಗಳು ರಿಚರ್ಡನ ಮನಸ್ಸಿನಲ್ಲಿ ಬಂದು ಹೋದುವು. ಆದುದರಿಂದ ಅವನು ಆ ಕುದುರೆ ಸವಾರನನ್ನು ಸೈನ್ಯದಿಂದ ಬೇರ್ಪಡಿಸುವ ವಿಚಾರವನ್ನು ಕೈಬಿಟ್ಟನು.
ಆದರೆ ಆದ ಪರಿಣಾಮ ಮಾತ್ರ ಭಯಂಕರವಾಯಿತು. ಇಂಗ್ಲೆಂಡ್ ಸೈನ್ಯದ ಮೊದಲ ಸಾಲು ಸೇತುವೆಯ ನಡುವನ್ನು ಮುಟ್ಟಿತು. ಇನ್ನೇನು! ಇನ್ನಿರುವುದು ಅರ್ಧ ಸೇತುವೆ ಮಾತ್ರವೆ. ಆದರೆ ಆಗಲೇ ಈ ಕುಂಟುವ ಕುದುರೆಯ ಸಾಲು ಸೇತುವೆಯ ಪ್ರಾರಂಭಕ್ಕೆ ಬಂದು ಮುಟ್ಟಿತು. ಇನ್ನೂ ಅರ್ಧಸೈನ್ಯವು ಹಿಂದಿನಿಂದ ಹಿಂಬಾಲಿಸುತ್ತಲೇ ಇದ್ದಿತು.
ಕುಂಟುವ ಕುದುರೆಯು ಮುಂದೆ ಬರುತ್ತಿದ್ದಂತೆ ಅದರ ಲಾಳದ ಇನ್ನೆರಡು ಮೊಳೆಗಳು ಕಳಚಿ ಬಿದ್ದವು. ಇರುವ ಇನ್ನೆರಡು ಮೊಳೆಗಳಿಂದ ಮಾತ್ರ ಲಾಳವು ಕುದುರೆಯ ಕಾಲಿಗೆ ಅಂಟಿಕೊಂಡಿದ್ದಿತು. ಆದರೆ ಜೋತಾಡುವ ಲಾಳದಿಂದಾಗಿ ನಡೆಯಲಾಗದೆ ಕುದುರೆಯು ಮುಗ್ಗರಿಸಿಬಿಟ್ಟಿತು. ಆ ಕುದುರೆಯ ಹಿಂದೆ ರಭಸವಾಗಿ ಬರುತ್ತಿದ್ದ ಹಿಂದಿನ ಸೈನಿಕರ ಸಾಲು ಮುಗ್ಗರಿಸಿ ಬಿದ್ದ ಕುದುರೆಯಿಂದಾಗಿ ಕಾಲಿಗೆ ಅಡ್ಡವಾಗಿ ಆ ಕುದುರೆಗಳೂ ಬಿದ್ದವು. ಈ ಗೊಂದಲ ಮುಂದುವರಿಯುತ್ತಲೇ ಹೋಯಿತು. ಒಂದರ ಹಿಂದೆ ಮತ್ತೊಂದು ಸೈನ್ಯದ ಸಾಲುಗಳು ಬೀಳುತ್ತಲೇ ಹೋದವು. ಹಿಂದಿನಿಂದ ಮುನ್ನುಗ್ಗಬೇಕಾದ ಸೈನ್ಯವು ಮುಂದೆ ಹೋಗುವ ದಾರಿಯಿಡೀ ಮುಚ್ಚಿ ಹೋದುದರಿಂದ ತನ್ನ ಮುನ್ನಡೆಯನ್ನು ನಿಲ್ಲಿಸಿತು.
ಕಡೆಯಿಂದ ಜರ್ಮನ್ ಸೈನ್ಯವು ಇಂಗ್ಲೆಂಡ್ ಸೈನ್ಯದ ಚಲನವಲನವನ್ನು ಗಮನಿಸುತ್ತಲೇ ಇದ್ದಿತು. ಈಗಿನ್ನು ಇಂಗ್ಲೆಂಡ್ ಸೈನ್ಯವು ಮುಂದುವರಿಯದು ಎಂದು ಜರ್ಮನಿಗೆ ಅರಿವಾಯಿತು. ಜರ್ಮನ್ ಸೇನಾಪತಿಯು ಕೂಡಲೇ ತನ್ನ ಸೈನ್ಯಕ್ಕೆ ಸೇತುವೆಯನ್ನು ದಾಟಲು ಆಜ್ಞೆಯನ್ನು ನೀಡಿದನು. ಮುಗ್ಗರಿಸಿ ಬಿದ್ದ ಸೈನ್ಯದ ಮುಂದೆ ಇರುವ ಸೈನ್ಯವನ್ನು ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕಿದನು. ಗಾಬರಿಯಿಂದ ನೋಡುತ್ತ ನಿಂತ ಉಳಿದ ಸೈನ್ಯವನ್ನು ಮುಗಿಸಿಬಿಟ್ಟನು.
ಒಂದು ಮೊಳೆ ಸಡಲಿತು ಲಾಳ ಬಿಚ್ಚಿತು |
ಲಾಳ ಬಿಚ್ಚಿಹೋಯಿತು ಕುದುರೆ ಬಿದ್ದಿತು ||
ಕುದುರೆ ಬಿದ್ದ ಪೆಟ್ಟಿಗೆ ಸವಾರ ಉರುಳಿಬಿಟ್ಟನು |
ಸವಾರ ಉರುಳಿ ಹೋದಾಗ ಸೈನ್ಯ ಸೋತಿತು ||
ಸೈನ್ಯ ಸೋತುಹೋಯಿತು ಯುದ್ಧ ಮುಗಿಯಿತು |
ಕಾರಣವೊಂದೆ ಒಂದು ಲಾಳದ ಮೊಳೆಯು ||