Hindu Vani
Index
ಇತಿಹಾಸ
ಪಟೇಲರು ಸರದಾರರಾದರು
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಭಾರತವು ವಿಭಜನೆಗೊಂಡು ಪಾಕಿಸ್ತಾನವೆನ್ನುವ ಹೊಸ ದೇಶದಷ್ಟು ಪ್ರದೇಶವನ್ನು ಕಳೆದುಕೊಂಡಿದ್ದರೂ, ಆಗಿನ ಆ ಆ ಹೊಸ ಭಾರತದ ಒಟ್ಟು ವಿಸ್ತಾರವು ಇತಿಹಾಸದ ಉದ್ದಕ್ಕೂ ಕಂಡ ಪ್ರಾಚೀನ ರಾಜಕೀಯ ಭಾರತಕ್ಕಿಂತಲೂ ವಿಶಾಲವಾಗಿದ್ದಿತು. ಹೇಳಬೇಕೆಂದರೆ 4ನೇ ಶತಮಾನದ ಸಮುದ್ರ ಗುಪ್ತನ ಸಾಮ್ರಾಜ್ಯಕ್ಕಿಂತಲೂ ಸ್ವತಂತ್ರ ಭಾರತವು ದೊಡ್ಡದಾಗಿದ್ದಿತು. ಕ್ರಿ.ಪೂ. 250ರಲ್ಲಿ ಕಂಡ ಅಶೋಕನ ರಾಜ್ಯವು ವಲ್ಲಭಭಾಯಿ ಪಟೇಲರು ಸಾಧಿಸಿದ ಏಕೀಕೃತ ಭಾರತಕ್ಕಿಂತ ಕಿರಿದಾಗಿದ್ದಿತು. 16ನೇ ಶತಮಾನದಲ್ಲಿ ಅಕ್ಟರನ ವಶದಲ್ಲಿದ್ದ ಭಾರತವು ಸರ್ದಾರ್ ಪಟೇಲರು ಕಟ್ಟಿದ ಸ್ವತಂತ್ರ ಭಾರತದ ಒಟ್ಟು ಪ್ರದೇಶಕ್ಕಿಂತಲೂ ಸಣ್ಣದು. ಈ ಮಹತ್ಸಾಧನೆಗೆ ಕಾರಣರಾದವರು ಸರ್ದಾರ್ ವಲ್ಲಭಭಾಯಿ ಪಟೇಲರು.
'ನಾವೊಂದು ರಾಷ್ಟ್ರವಾಗಿ ಬದುಕುವವರು. ನಾಶವಾಗಲು ಬಂದವರಲ್ಲ' ಏನ್ನುವ ಯೋಗಿ ಅರವಿಂದರ ವಾಣಿಯು ಸರ್ದಾರ್ ಪಟೇಲರ ಸ್ವಾತಂತ್ರೋತ್ತರ ಕಾಲದ ಜೀವನ ಧೈಯವೇ ಆಗಿಬಿಟ್ಟಿತು. “ದೇಶದ ಛಿದ್ರ ರಾಜಕೀಯ ಸ್ಥಿತಿಯೂ, ಒಂದುಗೂಡಿ ಕೈಗೊಳ್ಳಬೇಕಾದ ಒಟ್ಟಭಿಪ್ರಾಯದ ಕೊರತೆಯೂ ದೇಶದ ಮೇಲಿನ ಸತತ ಆಕ್ರಮಣಕ್ಕೆ ದಾರಿ ಮಾಡಿತು. ನಮ್ಮ ಪರಸ್ಪರ ಕಚ್ಚಾಟವೂ, ಆಂತರಿಕ ಜಗಳಗಳೂ, ಪರಸ್ಪರ ವೈಮನಸೂ ಸೇರಿಕೊಂಡು ನಮ್ಮ ಅವನತಿಗೆ ಕಾರಣವಾಯಿತು. ಧಾಳಿಕೋರರ ಮೇಲುಗೈಗೆ ಕಾರಣವಾಯಿತು. ಇಂತಹ ಪ್ರಮಾದಗಳ ಬಲೆಗೆ ಸಿಲುಕದ ಭವಿಷ್ಯದ ನಿಲುವು ನಮ್ಮದಾಗಬೇಕು” ಎಂದು ಹೇಳುತ್ತಿದ್ದ. ಸರ್ದಾರ್ ಪಟೇಲ್ ಆ ಮಾತುಗಳನ್ನು ದೃಢವಾಗಿ ನಂಬಿದ್ದರು. ಸರ್ದಾರರಿಗೆ ದೇಶದ ಭೂಗೋಳವು ಒಂದು ಮಾಹಿತಿಯಷ್ಟೇ ಎನ್ನುವ ಪರಿಕಲ್ಪನೆಯಾಗದೆ; ಅದು ಭಾರತ ಭೂಮಿಯೊಡನಿರುವ ಜೀವಂತ ಸಂಬಂಧವೆನಿಸುತ್ತಿತ್ತು. ಅವರಿಗೆ ಭಾರತ ಭೂಗೋಳವು ಸಂಸ್ಕೃತಿಯೊಡನಿರುವ ಅಭಿನ್ನ ಸಂಬಂಧದ ಸ್ಮರಣೆಯ ಸರಮಾಲೆಯಾಗಿದ್ದಿತು.
ಸ್ವಾತಂತ್ರ್ಯ ಬಂದಂದಿನಿಂದ ಅವರು ತಮ್ಮ ಕೊನೆಯ ದಿನಗಳವರೆಗೆ ಬೆನ್ನಟ್ಟಿದುದು ಭಾರತದ ಏಕತೆಯನ್ನು, ಆವರೆಗೆ ತಾವು ಸಾಧಿಸಿದುದನ್ನು ಅವರೇ 'ರಕ್ತರಹಿತ ಕ್ರಾಂತಿ' ಎಂದು ಕರೆದರು. ಆ ವರ್ಷಗಳಲ್ಲಿ ಭಾರತದ ಭೇಟಿಗೆ ಬಂದ ರಷ್ಯಾದ ಪ್ರಧಾನಿ ಬುಲ್ಯಾನಿನ್ ನೀವು ಭಾರತೀಯರು ಗಮನಾರ್ಹ ಜನರು. ಅದು ಹೇಗೆ ನಿಮಗೆ ರಾಜರನ್ನು ನಿರ್ಮೂಲಮಾಡದೆ ಸಂಸ್ಥಾನಗಳನ್ನು ಅಳಿಸಲು ಸಾಧ್ಯವಾಯಿತು' ಎಂದು ಉದ್ಧರಿಸಿದ್ದರು. ಅವರ ಪ್ರಕಾರ ಸರ್ದಾರರ ಸಾಧನೆಯು ಜರ್ಮನಿಯ ಏಕತೆಯನ್ನು ಸಾಧಿಸಿದ ಬಿಸ್ಮಾರ್ಕನಿಗಿಂತಲೂ ಹೆಚ್ಚಿನದು.
ಭಾರತವು ಸ್ವಾತಂತ್ರ್ಯ ಪಡೆದ ದಿನಗಳಲ್ಲಿ ಇಲ್ಲಿದ್ದ ದೇಶೀಯ ರಾಜ ಮಹಾರಾಜರ ಸಂಖ್ಯೆಯು 565. ಆಗ ಪ್ರಚಲಿತವಿದ್ದಂತೆ ಆಗಿನ ದೊಡ್ಡ ದೇಶೀಯ ಸಂಸ್ಥಾನವೆನಿಸಿದ ಹೈದ್ರಾಬಾದ್ ನಿಜಾಮನ ಸಂಸ್ಥಾನದ ವಿಸ್ತಾರವು 2,14,194 ಚದರ ಕಿ. ಮೀ ಆಗಿದ್ದರೆ ಅತಿ ಸಣ್ಣ ಸಂಸ್ಥಾನವು 49 ಚದರ ಕಿ.ಮೀ. ವಿಸ್ತಾರದ ಲವಾ ಸಂಸ್ಥಾನ. ತಮಗೆ ಬ್ರಿಟಿಷ್ ಸರ್ಕಾರವು ದಯಪಾಲಿಸಿದ ಕುಶಾಲ ತೋಪುಗಳನ್ನು ಹಾರಿಸುವ ಸಂಖ್ಯೆಯ ಮೇಲೆ ತಮ್ಮ ತಮ್ಮ ಹೆಚ್ಚುಗಾರಿಕೆಯನ್ನು ಮೆರೆಸಲು ಈ ರಾಜರು ತಮ್ಮೊಳಗೆ ಪೈಪೋಟಿ ನಡೆಸುತ್ತಿದ್ದರು. ಇನ್ನು ಕುಶಾಲತೋಪುಗಳನ್ನು ಉಡಾಯಿಸುವ ಅಧಿಕಾರದ ಬಗ್ಗೆ ಹೇಳಬೇಕೆಂದರೆ 21 ತೋಪುಗಳನ್ನು ಹೊಡೆದು ಸ್ವಾಗತಿಸುವ ಸಂಭ್ರಮವು ಸಿಕ್ಕಿದರೆ ಆ ರಾಜನು ಪರಮ ವೈಭವದ ಅಧಿಕಾರವುಳ್ಳವನು ಎಂದು ನಂಬಲಾಗುತ್ತಿದ್ದಿತು. 9 ಕುಶಾಲತೋಪುಗಳ ಗೌರವವು ಅತಿ ಕಡಿಮೆ ಗೌರವದ್ದು ಎಂದು ಭಾವಿಸಲಾಗುತ್ತಿದ್ದಿತು. ಕಾಶ್ಮೀರ, ಹೈದ್ರಾಬಾದ್, ಬರೋಡಾ ಮೈಸೂರು ಮತ್ತು ಗ್ವಾಲಿಯರ್‌ಗಳು 21 ತೋಪುಗಳ ಸಲಾಂ ಪಡೆಯಲು ಅರ್ಹವಾದ ಗೌರವಯುತ ಸಂಸ್ಥಾನಗಳು. ಆ ಮೇಲಿನ ಕಮ್ಮಿ ಅರ್ಹತೆಯೆಂದರೆ 19 ತೋಪುಗಳ ಗೌರವ. ಉದಯಪುರ, ಇಂದೋರ್ ಭೋಪಾಲ್, ತಿರುವಾಂಕೂರು ಮತ್ತು ಕೊಲ್ಲಾಪುರಗಳು ಈ ಹಂತದ ರಾಜ್ಯಗಳು, 17 ತೋಪುಗಳ ಮನ್ನಣೆಯಿದ್ದ ಸಂಸ್ಥಾನಗಳೆಂದರೆ ಜೈಪುರ, ಜೋಧಪುರ, ಬಿಕಾನೇರ್, ಪಾಟಿಯಾಲಗಳು, ಗುಜರಾತಿನ ಶಹಾಪುರ ರಾಜನಿಗಿದ್ದುದು 9 ಗನ್‌ಗಳ ಸೆಲ್ಯೂಟ್,
ತಮ್ಮದೇ ಎಂದುಕೊಳ್ಳುತ್ತಿದ್ದ ಸಾಮ್ರಾಜ್ಯದೊಳಗೆ ಈ ರಾಜರಿಗೆ ತಮ್ಮ ದಿವಾನರನ್ನೂ ಮಂತ್ರಿಗಳನ್ನೂ ನೇಮಿಸುವ ಅಧಿಕಾರವಿರಲಿಲ್ಲ. ಮುಂದಿನ ತಮ್ಮ ಉತ್ತರಾಧಿಕಾರಿ ರಾಜನನ್ನು ನೇಮಿಸುವ ಅಧಿಕಾರವಿರಲಿಲ್ಲ. ತಮ್ಮ ಸಂಸ್ಥಾನದಲ್ಲಿ ಎಷ್ಟು ಸೈನಿಕರನ್ನು ಇಟ್ಟುಕೊಳ್ಳಬಹುದೆನ್ನುವ ನಿರ್ಧಾರವನ್ನೂ ಕೈಗೊಳ್ಳುವಂತಿರಲಿಲ್ಲ. ಎಲ್ಲವೂ ಬ್ರಿಟಿಷ್ ಇಚ್ಛೆಯಂತೆ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಇವೆಲ್ಲಕ್ಕೂ ಸಂಸ್ಥಾನದಿಂದ ಹಣ ಸಲ್ಲಿಕೆಯಾಗಬೇಕಾಗಿದ್ದಿತು. ಸ್ವಾತಂತ್ರ್ಯವನ್ನು ನೀಡುವಾಗ ತಮ್ಮ ಈ ಅಧಿಕಾರವನ್ನು ಸ್ವತಂತ್ರ ಭಾರತಕ್ಕೆ ವರ್ಗಾಯಿಸದ ಬ್ರಿಟಿಷ್ ಸರ್ಕಾರವು ದೇಶೀಯ ಸಂಸ್ಥಾನಗಳಿಗೆ ಅವುಗಳೆಲ್ಲವೂ ಸ್ವತಂತ್ರ ರಾಜ್ಯಗಳಾಗಿರುವ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನೂ ಕೊಟ್ಟುಬಿಟ್ಟಿತು. ಆ ಮೂಲಕ ಭಾರತವು ನೂರಾರು ಹೋಳಾಗಲಿ ಎಂದು ಬಯಸಿತು.
ಇಂತಹ ಹಾಸ್ಯಾಸ್ಪದ ಅಧಿಕಾರವನ್ನು ಅನುಭವಿಸುತ್ತಿದ್ದ ರಾಜರು ಭಾರತವು ಸ್ವಾತಂತ್ರ್ಯ ಪಡೆದ ನಿರ್ಣಾಯಕ ಕಾಲ ಘಟ್ಟದಲ್ಲಿ ಮನಸ್ಸು ಮಾಡಿದರೆ ದೇಶಾದ್ಯಂತ ಶಾಂತಿಯನ್ನು ಕದಡಿ ರಾಜಕೀಯ ಅವ್ಯವಸ್ಥೆಯನ್ನು ಉಂಟುಮಾಡುವಷ್ಟು ಸಮರ್ಥರಾಗಿದ್ದರು. ಏಕೆಂದರೆ ಇಂತಹ ಹೆಚ್ಚುಗಾರಿಕೆಯೊಂದಿಗೆ ಅವರವರ ವಂಶದ ಪರಂಪರೆಯ ಇತಿಹಾಸವೂ ಸೇರಿಕೊಂಡಿದ್ದಿತು. ಜೈಪುರದ ಮಹಾರಾಜನ ವಂಶದ ಮೂಲ ಪುರುಷನು ಸೂರ್ಯನಾಗಿದ್ದರೆ, ಮೈಸೂರಿನ ಒಡೆಯರ್ ವಂಶದ ಮೂಲವು ಶ್ರೀಕೃಷ್ಣನೇ ಆಗಿದ್ದನು. ಇಂತಹ ಘಟಾನುಘಟಿಗಳೆಲ್ಲರೂ ಸೇರಿ ತಮ್ಮ ರಾಜ್ಯಗಳನ್ನು ಭಾರತದಲ್ಲಿ ವಿಲೀನಗೊಳಿಸಿ ವಾರ್ಷಿಕವಾಗಿ ಒಂದಷ್ಟು ರಾಜಧನವನ್ನೂ ತಮ್ಮ ತಮ್ಮ ಬಿರುದು ಬಾವಲಿಗಳನ್ನು ಉಳಿಸಿಕೊಳ್ಳುವ ರಿಯಾಯಿತಿಯನ್ನು ಪಡೆಯಲು ಒಪ್ಪಿಕೊಂಡುದು ನವಭಾರತದ ಅತಿ ಮಹತ್ವದ ಸಾಧನೆಯಾಗಿದ್ದಿತು. ಕಾಶ್ಮೀರವೋ ಅಥವಾ ಹೈದ್ರಾಬಾದೋ ಒಂದಷ್ಟು ವಿಷಮ ಸ್ಥಿತಿಯನ್ನು ಉಂಟುಮಾಡಿದುದನ್ನು ಬಿಟ್ಟರೆ ಇಡಿಯ ಸಮಸ್ಯೆಯು ಪರಿಹಾರವಾದುದು ಯಾವುದೇ ಸಂಘರ್ಷವಿಲ್ಲದೆಯೇ, ಸರ್ದಾರ ಪಟೇಲರ ವ್ಯಕ್ತಿತ್ವಕ್ಕೂ ಅವರ ನಿರ್ಧಾರಗಳಿಗೂ ತಲೆಬಾಗಿದ ರಾಜ ಮಹಾರಾಜರು ಭಾರತ ಸ್ವಾತಂತ್ರ್ಯದ ಹೊಸದರಲ್ಲಿ ಇಲ್ಲಿ ರಾಜಕೀಯ ಅವ್ಯವಸ್ಥೆಗೆ ಎಡೆಮಾಡಿ ಕೊಡಲಿಲ್ಲ. ಇಂತಹ ನಿಲುವನ್ನು ಸರ್ಕಾರದ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿ ಪಟೇಲರು ಅಂದು ತಮ್ಮ ವ್ಯಕ್ತಿತ್ವದಿಂದ ಅನುವು ಮಾಡಿಕೊಟ್ಟರು. ಇನ್ನೊಂದು ವಿಚಾರವಿದೆ. ಪಟೇಲರೇನಾದರೂ ಅಂದು ತಮ್ಮ ಕೈಗೆಟಕಿನಲ್ಲಿದ್ದ ಅಧಿಕಾರದ ಹಂಬಲವನ್ನು ಬಯಸಿದ್ದಿದ್ದರೆ ಅವರೇ ಭಾರತದ ಪ್ರಧಾನಿಯಾಗುತ್ತಿದ್ದರೆಂಬುದು ಖಚಿತವೇ ಆಗಿದ್ದಿತು. ಹಿಂದೆ ಹಲವು ಬಾರಿ ಮಹಾತ್ಮಾ ಗಾಂಧಿಯವರ ಮಾತಿಗೆ ತಲೆಬಾಗಿ ತನಗೆ ದಕ್ಕಬೇಕಾಗಿದ್ದ ರಾಜಕೀಯ ಸ್ಥಾನಮಾನಗಳನ್ನು ಚೆಲ್ಲಿ ಬಿಟ್ಟ ಸರ್ದಾರರು ಸ್ವಾತಂತ್ರ್ಯದ ಹೊಸ್ತಿಲಲ್ಲೂ ಅದನ್ನೇ ಮಾದರಿಯಾಗಿಸಿಕೊಂಡರು. 1946ರಲ್ಲಿ ಕಾಂಗ್ರೆಸ್ಸಿನ ಅಧ್ಯಕ್ಷನಾಗುವುದೆಂದರೆ ಮುಂದಿನ ಸ್ವತಂತ್ರ ಭಾರತದ ಪ್ರಧಾನಿಯಾಗುವುದೆಂದು ತಿಳಿದೂ ಇದ್ದ ಪಟೇಲರು ತಮ್ಮ ಸ್ಥಾನವನ್ನು ತ್ಯಜಿಸಿ ನೆಹರೂಗೆ ಆ ಕಿರೀಟವನ್ನು ಒಪ್ಪಿಸಿದರು. ಆ ದಿನಗಳಲ್ಲಿ ಒಂದೇ ಒಂದು ಕಾಂಗ್ರೆಸ್ ಪ್ರಾಂತೀಯ ಸಮಿತಿಯ ಬೆಂಬಲವು ನೆಹರೂಗೆ ಇರಲಿಲ್ಲ. ಪ್ರತಿಬಾರಿಯೂ ಗಾಂಧಿಯವರು ತನ್ನ ಆಯ್ಕೆಯು ನೆಹರೂ ಎಂದಾಗಲೆಲ್ಲ ಸೊಲ್ಲೆತ್ತದೆ ಪಕ್ಕಕ್ಕೆ ಸರಿದವರು ಸರ್ದಾರ್ ಪಟೇಲರು. 1929, 1936 ಮತ್ತು 1946ರಲ್ಲಿ ನಡೆದ ಕಾಂಗ್ರೆಸ್ ಚುನಾವಣೆಯಲ್ಲಿ ಪಟೇಲರೇ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಅರ್ಹರು ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರೆಲ್ಲರ ನಿರ್ಧಾರವೇ ಆಗಿದ್ದಿತು. ಆಗಲೆಲ್ಲ ನೆಹರೂಗಾಗಿ ತಮ್ಮ ವಿಟೋ ಅಧಿಕಾರವನ್ನು ಪ್ರಯೋಗಿಸಿ ಪಟೇಲರ ಅರ್ಹತೆಯನ್ನು ಗಾಂಧೀಜಿ ನಿರಾಕರಿಸುತ್ತಲೇ ಬಂದರು.
ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದುದು 6ಬಾರಿ. ಆಶ್ಚರ್ಯವೆಂದರೆ ಪಟೇಲರು ಸಂಸ್ಥೆಯ ಅಧ್ಯಕ್ಷರಾದುದು ಒಂದೇ ಒಂದುಸಾರಿ. ಮೌಲಾನಾ ಅಬ್ದುಲ್ ಕಲಾಂ ಆಜಾದರಂತಹ ಸಾಮಾನ್ಯರು ಕೂಡಾ ಎರಡೆರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾದರು. 1928ರಲ್ಲಿ ಗುಜರಾತಿನ ಬಾರ್ಡೋಲಿಯಲ್ಲಿ ಪಟೇಲರು ಬೃಹತ್ತಾದ ರೈತ ಸತ್ಯಾಗ್ರಹವನ್ನು ಸಂಘಟಿಸಿದರು. ಅದು ಬ್ರಿಟಿಷರಿಗೆ ತೆರಿಗೆ ನೀಡದ ಕರನಿರಾಕರಣೆಯ ಸತ್ಯಾಗ್ರಹವಾಗಿದ್ದಿತು. ಗಾಂಧೀಜಿ ಪ್ರಾರಂಭಿಸಿದ ಮೊದಲ ಅಸಹಕಾರ ಚಳುವಳಿಯು ಹಿಂಸಾತ್ಮಕವಾಯಿತು. ಉತ್ತರ ಪ್ರದೇಶದ ಚೌರಿಚೌರದಲ್ಲಿ ಉದ್ರೇಕಗೊಂಡ ಚಳುವಳಿಗಾರರು ಪೊಲೀಸ್ ಠಾಣೆಗೆ ಬೀಗ ಹಾಕಿ ಠಾಣೆಗೆ ಬೆಂಕಿಕೊಟ್ಟರು. ಒಳಗಿದ್ದ ಪೊಲೀಸರು ಜೀವಂತ ದಹಿಸಿಹೋದರು. ಅದು 1922. ಗಾಂಧೀಜಿ ಈ ಪ್ರಕಣದಿಂದಾಗಿ ತಮ್ಮ ಸತ್ಯಾಗ್ರಹವನ್ನು ಹಿಂದೆಗೆದುಕೊಂಡರು. ಆಗ ಸ್ಥಗಿತಗೊಂಡ ಹೋರಾಟದ ಹೆಜ್ಜೆಗಳು ಮತ್ತೆ ಗರಿಗೆದರಿದುದು ಪಟೇಲರ ಬಾರ್ದೋಲಿಯ ಬೃಹತ್ ಸತ್ಯಾಗ್ರಹ ಚಳುವಳಿಯಿಂದ.
ಪಟೇಲರ ನಾಯಕತ್ವವನ್ನು ಕಂಡು ಮೆಚ್ಚಿದ ಮೋತಿಲಾಲ ನೆಹರೂ ಅವರನ್ನು “ಈ ದಿನಗಳಲ್ಲಿ ದೇಶದ ಹೀರೋ ಎಂದರೆ ವಲ್ಲಭಭಾಯಿ ಪಟೇಲ್, ಕಾಂಗ್ರೆಸ್ ಅಧ್ಯಕ್ಷರಾಗಲು ಯುಕ್ತ ನಾಯಕನಿದ್ದರೆ ಅದು ಪಟೇಲರೇ ಅವರನ್ನು ಬಿಟ್ಟರೆ ಇನ್ನೊಬ್ಬರಿರುವುದಾದರೆ ಅದು ಜವಹರಲಾಲ” ಎಂದು ತಮ್ಮ ಮಗನನ್ನು ಮೋತಿಲಾಲ್ ಹೆಸರಿಸಿದ್ದರು. ಆದರೆ ಅಧ್ಯಕ್ಷಸ್ಥಾನಕ್ಕೆ ಆಗ ಗಾಂಧೀಜಿ ಹೆಸರಿಸಿದುದು ಮೋತಿಲಾಲ ನೆಹರೂರನ್ನೇ! ಅಕ್ಟೋಬರ್ 31 ಪಟೇಲರ ಜನ್ಮದಿನ. ಅವರು ಜನಿಸಿ ಈಗ 150 ವರ್ಷಗಳಾದವು.