Logo

VHP PUBLICATIONS

Hindu Vani


expand_more

ಹೋರಾಟ

By - ಸಂಜಯ್ - ವಿಭಾಗ ಸಂಘಟನಾ ಕಾರ್ಯದರ್ಶಿ, ತುಮಕೂರು
ಹೋರಾಟ

ಲಾಲಾ ಲಜಪತ ರಾಯ್ ಹುತಾತ್ಮರಾದರು

(ಮುಂದುವರೆದುದು)

ಲಾಲಾ ಲಜಪತ್‌ರಾಯ್ ಗುಂಪಿನಿಂದ ಬೇರೆಯಾಗಿ ಒಂಟಿಯಾದುದನ್ನು ಪೊಲೀಸ್ ಸುಪರಿಟೆಂಡೆಂಟ್ ಜೇಮ್ಸ್ ಸ್ಕಾಟ್ ಕಂಡನು. ಲಾಲಾರನ್ನು ಲಾಲಾರನ್ನು ಮತೆ ಸುತ್ತುವರಿದು ನಿಲ್ಲಲು ಚೆದುರಿದ ಗುಂಪು ಧಾವಿಸಿ ಬರುತ್ತಿರುವುದನ್ನೂ ಅವನು ಗಮನಿಸಿದನು. ನಾಯಕರನ್ನೇ ಗುರಿಯಾಗಿಟ್ಟು ಶಿಕ್ಷಿಸಬೇಕೆಂದುಕೊಂಡ ಸ್ಕಾಟ್, ತನ್ನೊಂದಿಗಿದ್ದ ಪೊಲೀಸರೊಂದಿಗೆ ಲಾಲಾ ಲಜಪತರಾಯ್‌ರನ್ನು ಒಂದೇ ಸಮನೆ ಲಾಠಿಯಿಂದ ಥಳಿಸಲು ಪ್ರಾರಂಭಿಸಿದನು. ಅವರು ಕುಸಿದು ಬೀಳುವವರೆಗೆ ಅವರನ್ನು ಎಲ್ಲಾ ಪೊಲೀಸರು ಗುರಿಯಿಟ್ಟು ತಲೆಗೆ ಏಟುಕೊಡಲು ತೊಡಗಿದರು. ಅವರ ಶರೀರವಿಡೀ ರಕ್ತಸಿಕ್ತವಾಯಿತು. ಹಿಂದೆ ಜಲಿಯಾನ್‌ವಾಲಾಬಾಗ್‌ನಲ್ಲಿ ನಿರ್ದಯೆಯಿಂದ ರಕ್ತಪಾತವು ನಡೆದಂತೆ ಅಂದು ಕೂಡಾ ಜನಸಮೂಹದ ಕಣ್ಣೆದುರಿನಲ್ಲಿ ವಯೋವೃದ್ಧ ನಾಯಕರ ಮೇಲೆ ಪ್ರಹಾರಗಳಾದವು. ಜನರಲ್ಲಿ ಭಯ ಹುಟ್ಟಿಸುವುದಷ್ಟೇ ಪೋಲಿಸರಿಗೆ ಬೇಕಾಗಿದ್ದಿತು.

ಲಜಪತ್‌ರಾಯ್ 18ದಿನಗಳ ಕಾಲ ನೋವು ನರಳಾಟಗಳನ್ನು ಅನುಭವಿಸಿ 17ನವಂಬರ್ 1928ರಂದು ಪ್ರಾಣ ಬಿಟ್ಟರು. ಭಾರತವಿಡೀ ತಲ್ಲಣಗೊಂಡಿತು. ಮೂರು ದಶಕಗಳಿಂದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯ ಸೇನಾನಿಯ ಮೇಲೆ ನಡೆದ ಪಾಶವೀ ಶಕ್ತಿಯ ದಬ್ಬಾಳಿಕೆಯ ವಿರುದ್ಧ ಜನಾಭಿಪ್ರಾಯವು ಎಚ್ಚರಗೊಂಡಿತು. ಬಂಗಾಳದ ಸ್ವಾತಂತ್ರ್ಯ ಸೇನಾನಿ ಚಿತ್ತರಂಜನ ದಾಸರ ಪತ್ನಿ ವಸಂತಿದೇವಿಯವರು ಈ ಸಾವಿನ ವಿರುದ್ಧ ಪ್ರತೀಕಾರ ತೀರಿಸಲು ಯುವಕರಿಗೆ ಕರೆ ನೀಡಿದರು. ಈ ಪ್ರಸಂಗದ ಕುರಿತು “ಭಾರತದ ಯುವಕರೇ ಏನು ಮಾಡುವಿರಿ ಹೇಳಿ ಎಂದು ನಾನೊಬ್ಬ ತಾಯಿಯಾಗಿ ಕೇಳಲು ಇಚ್ಛಿಸುತ್ತೇನೆ.” ಎಂದು ಸಾರ್ವಜನಿಕವಾಗಿ ಗರ್ಜಿಸಿದರು. ಅಕ್ಟೋಬರ್ 10ರಂದು ರಾಜಗುರು ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಚಂದ್ರಶೇಖರ ಆಜಾದ್ ಲಾಹೋರಿನಲ್ಲಿ ಭಗವತಿ ಚರಣ ವೊಹ್ರಾರವರ ಮನೆಯಲ್ಲಿ ಸೇರಿದರು. ಎಲ್ಲರೂ ಒಂದೇ ದನಿಯಲ್ಲಿ ಹಿಂಸೆಗೆ ಪ್ರತಿ ಹಿಂಸೆಯೇ ಉತ್ತರವೆಂದು ನಿರ್ಧರಿಸಿದರು. ಪೊಲೀಸ್‌ ಸುಪರಿಟೆಂಡೆಂಟ್ ಜೇಮ್ಸ್ ಸ್ಕಾಟ್‌ನ ಬಲಿ ಪಡೆಯುವುದೇ ದಾರಿಯೆಂದುಕೊಂಡರು.

ಈ ಪ್ರಸಂಗದ ಪೂರ್ಣಯೋಜನೆ ಸುಖದೇವನದ್ದು ಎಂದು ನಿರ್ಧಾರವಾಯಿತು. ಅವನು ರಾಜಗುರು, ಭಗತ್‌ಸಿಂಗ್, ಜೈಗೋಪಾಲ್ ಮತ್ತು ಚಂದ್ರಶೇಖರ್ ಆಜಾದರ ತಂಡವನ್ನು ತನ್ನೊಂದಿಗೆ ಆರಿಸಿಕೊಂಡನು. ಎಲ್ಲರಿಗೂ ಒಂದೊಂದು ಹೊಣೆಯನ್ನು ಹಂಚಲಾಯಿತು. ದಿನವೂ ನಿಶ್ಚಯಗೊಂಡಿತು. ಅದು 17 ಡಿಸೆಂಬರ್ 1928. ಭಗತ್‌ಸಿಂಗ್ ಜೇಮ್ಸ್ ಸ್ಕಾಟ್‌ನ ಮೇಲೆ ಗುಂಡು ಹಾರಿಸುವುದೆಂದೂ, ರಾಜಗುರು ಅವನ ರಕ್ಷಣೆಯ ಶಸ್ತ್ರ ಧಾರಿಯಾಗಬೇಕೆಂದೂ, ಆಜಾದ್ ಈ ಇಬ್ಬರೂ ತಪ್ಪಿಸಿಕೊಂಡು ಹೋಗಲು ನೆರವಾಗುವುದೆಂದೂ ನಿಶ್ಚಯವಾಯಿತು. ತಂಡದ ಕಿರಿಯ ಸದಸ್ಯ ಜೈ ಗೋಪಾಲ್ ಎಲ್ಲವನ್ನೂ ಗಮನಿಸುತ್ತಿದ್ದು, ಸ್ಕಾಟ್ ಪೊಲೀಸ್ ಠಾಣೆಯನ್ನು ಪ್ರವೇಶಿಸುವುದನ್ನು ಉಳಿದವರಿಗೆ ತಿಳಿಸುವ ಹೊಣೆಯನ್ನು ಹೊತ್ತನು. ಪ್ರಮುಖ ಸಂಚಿನಲ್ಲಿ ಅವನ ಸಕ್ರಿಯಪಾತ್ರ ವಿರಲಿಲ್ಲ.

ಮುಂದಿನ ದಿನಗಳಲ್ಲಿ ಕ್ರಾಂತಿಕಾರಿಗಳು ಸ್ಥಳ ಪರಿಶೀಲನೆಯಲ್ಲಿ ತೊಡಗಿದರು. ಅವರ ಪ್ರಕಾರ ದಯಾನಂದ ಆಂಗ್ಲೋ ವೇದಿಕ್ (ಡಿ.ಎ.ವಿ. ಕಾಲೇಜು. ಅದು ಈಗ ಲಾಹೋರಿನಲ್ಲಿ ಗವರ್ನಮೆಂಟ್ ಇಸ್ಲಾಮಿಯಾ ಕಾಲೇಜು ಆಗಿದೆ)ಕಾಲೇಜು ತಪ್ಪಿಸಿಕೊಳ್ಳಲು ಸುರಕ್ಷಿತ ಕಟ್ಟಡವೆಂದು ಆರಿಸಲಾಯಿತು. ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ಹಂಸರಾಜ ವೋಹ್ರಾ; ಭಗತ್ ಸಿಂಗ್ ಇಚ್ಛೆಯಂತೆ ಕೈಬರಹದ ಫಲಕಗಳನ್ನು ರಚಿಸಿಕೊಟ್ಟನು.

ಕೊಂಡು ಆದರೆ ಸ್ಕಾಟ್ ಡಿಸೆಂಬರ್ 17ರಂದು ರಜೆಯಲ್ಲಿದ್ದು ಠಾಣೆಗೆ ಬರಲಿಲ್ಲ. ಜೈ ಗೋಪಾಲ್ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಜಾನ್‌ ಸ್ಯಾಂಡರ್ಸ್‌ನನ್ನು ಸ್ಕಾಟ್ ಎಂದು ಅವನು ಬರುತ್ತಿದ್ದಂತೆ ಕಾಯುತ್ತಿದ್ದ ತಂಡಕ್ಕೆ ಸಂದೇಶಕೊಟ್ಟನು. ಲಜಪತರಾಯ್‌ರವರ ಮೇಲಾದ ಲಾಠಿಯ ಧಾಳಿಗೆ ಜಾನ್ ಸ್ಟಾಂಡರ್ಸ್ ಕೂಡಾ ಪಾಲುಗಾರನಾಗಿದ್ದನು. ಸಂಜೆ ಠಾಣೆಯಿಂದ ಹೊರಬಂದ ಸ್ಯಾಂಡರ್ಸ್ ಮೋಟರ್ ಸೈಕಲ್‌ನ್ನು ಹತ್ತುವಾಗ ಭಗತ್‌ಸಿಂಗ್ ಅವನನ್ನು ನೋಡುತ್ತಲೇ ಅವನು ಸ್ಕಾಟ್ ಅಲ್ಲವೆಂಬುದನ್ನು ಮನಗಂಡನು. ಆದರೆ ಅಷ್ಟರೊಳಗೆ ರಾಜಗುರು ತನ್ನ ಪಿಸ್ತೂಲಿನಿಂದ ಸ್ಯಾಂಡರ್ಸ್ ಕಡೆ ಗುಂಡು ಹಾರಿಸಿಯಾಗಿತ್ತು. ಅನಿವಾರ್ಯವಾಗಿ ಭಗತ್‌ ಸಿಂಗ್ ಕೂಡ ಸ್ಯಾಂಡರ್ಸ್ ಮೇಲೆ ಗುಂಡು ಹಾರಿಸಿದನು. ಸತ್ತು ಬಿದ್ದ ಸ್ಯಾಂಡರ್ಸ್ ನನ್ನು ನೋಡಿ ಇಬ್ಬರೂ ಕಾಲೇಜ್ ಕಡೆ ಓಡಿದರು. ಇನ್ನೊಬ್ಬ ಆಂಗ್ಲ ಪೊಲೀಸ್ ಅಧಿಕಾರಿ ಡಬ್ಲೂ ಜೆ ಸಿ ಪರ್ಸ್ ಗುಂಡು ಹಾರಿಸಿದ ಸದ್ದನ್ನು ಕೇಳಿ ಏನಾಗುತ್ತಿದೆ ಎಂದು ನೋಡಲು ಹೊರ ಬಂದವನೇ ಚಂದ್ರಶೇಖರ್ ಅಜಾದನು ಗುರಿ ಇಟ್ಟವರ ರಕ್ಷಣೆಕ್ಕಾಗಿ ಹೊಡೆದ ಗುಂಡನ್ನು ತಪ್ಪಿಸಿಕೊಂಡು ಠಾಣೆಯೊಳಗೆ ಓಡಿದನು. ಹೆಡ್ ಕಾನ್‌ಸ್ಟೇಬಲ್ ಚನನ್ಸಿಂಗ್ ತಪ್ಪಿಸಿಕೊಳ್ಳುತ್ತಿರುವವರನ್ನು ಹಿಂಬಾಲಿಸಿದನು. ಅಜಾದ್ ಅವನಿಗೆ ಹಿಂದಿರುಗಲು ಪದೇ ಪದೇ ಎಚ್ಚರಿಸಿದನು. ಅವನಿಗೆ ಭಾರತೀಯನ ಪ್ರಾಣ ತೆಗೆಯುವ ಇಚ್ಚೆಯಿರಲಿಲ್ಲ.

ಆದರೆ ಅವನು ಬಿಡದೆ ಅಟ್ಟಿಸಿಕೊಂಡು ಹೋಗುತ್ತಿದ್ದರೆ; ರಾಜಗುರು ಅವನ ಮೇಲೆ ಗುಂಡು ಹಾರಿಸಬೇಕಾಯಿತು. ಸಾರ್ವಜನಿಕರನೇಕರು ಈ ಗುಂಡಿನ ಧಾಳಿಗೆ ಸಾಕ್ಷಿಗಳಾಗಿದ್ದರು. ಮೂವರು ಕ್ರಾಂತಿಕಾರಿಗಳು ಡಿ.ಎ.ವಿ. ಕಾಲೇಜಿನ ಗೋಡೆಯನ್ನು ಹತ್ತಿ ವಿದ್ಯಾರ್ಥಿ ನಿಲಯದೊಳಗೆ ಹೋದರು. ಅಲ್ಲಿ ತಾವು ಇಟ್ಟಿದ್ದ ಸೈಕಲನ್ನು ಹತ್ತಿಕೊಂಡು ಅಲ್ಲಿಂದ ಪರಾರಿಯಾದರು. ಪೊಲೀಸರು ಹಾಸ್ಟೆಲನ್ನು ಆವರಿಸಿದರು. ಎಲ್ಲವನ್ನು ಚೆಲ್ಲಾಪಿಲ್ಲಿಯಾಗಿಸಿದರು. ಆದರೆ ಗುಂಡು ಹಾರಿಸಿದವರು, ಆದಾಗಲೇ ತಪ್ಪಿಸಿಕೊಂಡಾಗಿದ್ದಿತು. ಭಗತ್ ಸಿಂಗನು ಸ್ಕಾಟನ ಹೆಸರು ಬದಲಿಸಿ ಸ್ಯಾಂಡರ್ಸ್ ಎಂದು ಬರೆದು ಕರಪತ್ರವನ್ನು ಸಿದ್ಧಪಡಿಸಿಬಿಟ್ಟನು. ಅದು ಈ ರೀತಿ ಸಂಕ್ಷಿಪ್ತ ಕರಪತ್ರವಾಗಿದ್ದಿತು.

“ಹಿಂದುಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕ್‌ ಆರ್ಮಿ”ಯ ಎಚ್ಚರಿಕೆ. ಜೆ. ಪಿ. ಸ್ಯಾಂಡರ್ಸ್ ಸಾವು. ಲಾಲಾ ಲಜಪತ್ ರಾಯ್ ಸಾವಿಗೆ ಪ್ರತೀಕಾರ.

-ಬಾಲರಾಜ್, ಕಮಾಂಡರ್ ಇನ್ ಚೀಫ್

ಬಾಲರಾಜ್ ಎನ್ನುವುದು ಅಜಾದನು ಆರಿಸಿಕೊಂಡ ತನ್ನ ಗುಪ್ತನಾಮವಾಗಿದ್ದಿತ್ತು. ಮೋಜಾಂಗ್ ರಸ್ತೆಯ ಅಡಗುತಾಣದಲ್ಲಿ ಅವಿತುಕೊಂಡಿದ್ದ ಕ್ರಾಂತಿಕಾರಿಗಳಿಗೆ ಪೊಲೀಸರು ಮೂಲೆ ಮೂಲೆಗಳಲ್ಲಿ ದಾಳಿ ನಡೆಸುತ್ತಿರುವುದು ವರದಿಯಾಗುತ್ತಿತ್ತು. ತಾವಿದ್ದ ಕಡೆಯೂ ಅವರ ಆಗಮನವು ದೂರವಿಲ್ಲ ಎನ್ನುವುದು ಅರಿವಾಯಿತು. ಲಾಹೋರ್‌ನ್ನು ಬಿಡಲೇ ಬೇಕಾಗಿದ್ದಿತು. ಬೆಳಗಾಗುವುದರೊಳಗೆ ಲಾಹೋರಿನಿಂದ ಕಲ್ಕತ್ತಾಗೆ ಹೋಗಲೇಬೇಕೆಂದು ನಿಶ್ಚಯಿಸಲಾಯಿತು. ಭಗತ್‌ ಸಿಂಗ್ ಮತ್ತು ದುರ್ಗಾದೇವಿಯರು ಶ್ರೀಮಂತ ದಂಪತಿಗಳಂತೆ ವೇಷ ಮರೆಸಿಕೊಂಡರು. ತಮ್ಮ ಹೆಸರುಗಳನ್ನು ರಣಜಿತ್ ಮತ್ತು ಸುಜಾತ ಎಂದು ಬದಲಾಯಿಸಿಕೊಂಡರು ರಾಜಗುರು ಅವರ ಸೇವಕನಾದನು. ಅಜಾದ್ ಪ್ರತ್ಯೇಕ ಸಿದ್ಧತೆಗಳನ್ನು ಮಾಡಿಕೊಂಡನು. ದುರ್ಗಾದೇವಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಹೊರಟಳು.

ಠಾಕುಠೀಕಾದ ಯುರೋಪಿಯನ್ ಉಡುಪಿನೊಂದಿಗೆ ಭಗತ್‌ಸಿಂಗ್ ಹೊರಟಿದ್ದ. ತಲೆಗೆ ಅವನ ಪ್ರಸಿದ್ಧ ಫೆಲ್ಸ್ ಹ್ಯಾಟ್ ಕೂಡ ಇದ್ದಿತ್ತು. ರಣಜಿತ್ ಹೆಸರಲ್ಲಿ ಅವನುಲಾಹೋರ್ ಸ್ಟೇಶನ್ ಪ್ರವೇಶಿಸಿದನು. ಶ್ರೀಮಂತ ಉಡುಪಿನ ದುರ್ಗಾ, ಹಳೆ ಉಡುಪಿನೊಂದಿಗೆ ಸೇವಕ ರಾಜಗುರು ಮಗುವನ್ನು ಎತ್ತಿಕೊಂಡಿದ್ದ. ಎಲ್ಲಾ ಕಡೆ ಪೊಲೀಸರ ಕಣ್ಣು ಹುಡುಕುತ್ತಿತ್ತು. ಆದರೆ ಫಸ್ಟ್ ಕ್ಲಾಸ್ ಗಾಡಿ ಯೊಳಗೆ ಹೋದ ಶ್ರೀಮಂತ ಕುಟುಂಬದ ಬಗ್ಗೆ ಯಾರಿಗೂ ಅನುಮಾನವೇ ಬರಲಿಲ್ಲ. ಅವರನ್ನು ಅಲ್ಲಿ ಇಳಿಸಿದ ಸೇವಕ ರಾಜಗುರು ತನ್ನ ಮೂರನೇ ದರ್ಜೆಯ ಗಾಡಿಯಲ್ಲಿ ಆಸೀನನಾದನು. ಚಂದ್ರಶೇಖರ ಆಜಾದನು ಅದೇ ರೈಲಿನಲ್ಲಿ ಯಾತ್ರಿಕನಾಗಿ ಪ್ರಯಾಣಿಸುತ್ತಿದ್ದನು.

ಭಗತ್ ಸಿಂಗ್ ಮತ್ತು ದುರ್ಗಾದೇವಿಯರು ಲಕ್ಕೋದಲ್ಲಿ ಇಳಿದು ಕಲ್ಕತ್ತಾಗೆ ಹೋಗುತ್ತಿದ್ದ ಇನ್ನೊಂದು ರೈಲಿಗೆ ಬದಲಾಯಿಸಿಕೊಂಡರು. ಏಕೆಂದರೆ ಬಂಗಾಳದ ಪೊಲೀಸರು ಲಾಹೋರ್‌ನಿಂದ ಬರುವ ನೇರ ರೈಲುಗಳನ್ನು ಬಿಡದೆ ತಪಾಸಣೆ ಮಾಡುತ್ತಿದ್ದರು. ಅಲ್ಲಿ ದುರ್ಗಾ ಮತ್ತು ಮಗು ಕೆಲವು ದಿನಗಳ ಹಿಂದೆ ಅಲ್ಲಿ ಬಂದ ತನ್ನ ಪತಿ ಭಗವತಿ ಚರಣ ವೋಹ್ರಾ ಜೊತೆಗೂಡಿದರು. ಭಗತ್ ಸಿಂಗ್ ತನ್ನ ಕುಟುಂಬಕ್ಕೆ ಇದ್ದ ಆರ್ಯ ಸಮಾಜದ ಸಂಪರ್ಕವನ್ನು ಉಪಯೋಗಿಸಿಕೊಂಡು ಆರ್ಯ ಸಮಾಜದ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದನು. ಅಲ್ಲಿ ಇದ್ದ ಶ್ರೀಮಂತ ವ್ಯಾಪಾರಿ ಚಜ್ಜು ರಾಮನಿಂದ ಹಣ ಪಡೆದು ಭಗತ್ ಸಿಂಗ್ ಪಂಜಾಬಿಗೆ ಮರಳಿದನು. ಚಜ್ಜು ರಾಮ್ ಕ್ರಾಂತಿಕಾರಿಗಳಿಗೆ ಸದಾ ಸಹಾಯ ನೀಡುತ್ತಿದ್ದ ಹರ್ಯಾಣದ ವ್ಯಾಪಾರಿಯಾಗಿದ್ದರು. (ಮುಂದುವರೆಯುವುದು)