Logo

VHP PUBLICATIONS

Hindu Vani


expand_more

ಪ್ರಸ್ತುತ

By - ಶಾರದಾ. ವಿ. ಮೂರ್ತಿ, ಮೈಕೋಬಡಾವಣೆ, ಬೆಂಗಳೂರು

ಬಿಡದಂತೆ ಕಾಡಿತ್ತು ಗೀಳು

ನಾವು ಯಾವಾಗಲೂ ಓಡಾಡುವ, ನೋಡುವ, ಮುಖ್ಯವಾಗಿ ನಮ್ಮ ಮನೆಯ ಸಮೀಪ ಇರುವ ಪಾರ್ಕ್ ಬಗ್ಗೆ ನಮ್ಮದೆಂಬ ಅಭಿಮಾನ ಸಹಜವಷ್ಟೇ! ಸುತ್ತಮುತ್ತ ಮೂರೋನಾಲ್ಕೂ ಪಾರ್ಕ್‌ಗಳಿದ್ದರೂ ಆ ಒಂದು ಪಾರ್ಕ್‌ ಬಗ್ಗೆ ಅದೇಕೋ ವಿಶೇಷ ಆಕರ್ಷಣೆ, ಒಂದು ದಿನ ಹೋಗದಿದ್ದರೂ ನಾವು ಏನನ್ನೋ ಕಳೆದುಕೊಂಡಂತಹ ಭಾವ...

ಹಾಗೆಯೇ ಪಾರ್ಕ್‌ನಲ್ಲಿ ದಿನವೂ ನೋಡುವ ಪರಿಚಿತ ಮುಖಗಳು. ಒಬ್ಬೊಬ್ಬರದೂ ಒಂದೊಂದು ರೀತಿಯ ಪ್ರತಿಕ್ರಿಯೆ ಕೆಲವರದು ಒಂದು ಮುಗುಳಗೆಗೆ ಸೀಮಿತವಾದರೆ ಮತ್ತೆ ಕೆಲವರದು ಚುಟುಕು ಸಂಭಾಷಣೆ, ಮತ್ತೆ ಕೆಲವರಂತೂ ಒಂದಕ್ಕೊಂದು ಕೊಂಡಿ ಸೇರಿಸುತ್ತಾ ಸ್ವಾರಸ್ಯಕರವಾಗಿ ಮಾತನಾಡುತ್ತಲೇ ಹೆಜ್ಜೆ ಹಾಕುತ್ತಿರುತ್ತಾರೆ. ಎಷ್ಟು ಜನರು ನಡಿಗೆಗೆಂದು ಬರುತ್ತಾರೋ ಅಷ್ಟೂ ಜನರ ನಡೆದಾಡುವ ಶೈಲಿ, ವೇಗ, ಎಲ್ಲವೂ ಬೇರೆ ಬೇರೆಯೇ! ಮಾತನಾಡುವ ರೀತಿಯೂ ಬೇರೆ ಬೇರೆಯೆ!

ಈ ನಮ್ಮ ಪಾರ್ಕಿನಲ್ಲಿ ಸುತ್ತ ನಾಲ್ಕು ಕಡೆಗಳಲ್ಲೂ ದೊಡ್ಡ ದೊಡ್ಡ ಮರಗಳು, ನಡುವಿನ ಸ್ಥಳಗಳಲ್ಲಿ ಅಲ್ಲಲ್ಲಿ ಹೂಗಿಡಗಳು. ಅದನ್ನು ಸುತ್ತುವರೆದಿರುವ ಲಾನ್, ಕ್ರೋಟಾನ್ ಗಿಡಗಳು ನಡಿಗೆಗೆ ಖುಷಿ ಕೊಡುತ್ತವೆ. ನಡಿಗೆಗಾಗಿ ಇರುವ ದಾರಿಯಲ್ಲಿ ಜಾರದಿರುವ ಟೈಲ್ಸ್ ಹಾಕಿಸಿದ್ದಾರೆ.

ನಡಿಗೆ ಸಾಕೆನಿಸಿದಾಗ ತುಸು ಹೊತ್ತು ಅಲ್ಲಿರುವ ಕಲ್ಲುಬೆಂಚುಗಳಲ್ಲಿ ಕುಳಿತು ಅಲ್ಲಿರುವ ಮರಗಿಡಗಳನ್ನು ಅವುಗಳಲ್ಲಿ ಆಟ ಆಡುವ ಅಳಿಲುಗಳನ್ನು ನೋಡುತ್ತಾ ಬೆರಗಾಗುವುದುಂಟು. ಪ್ರತಿದಿನವೂ ನೋಡುವ ಸ್ಥಳವೇ ಆದರೂ ದಿನದಿನವೂ ಏನೋ ಒಂದು ಅಚ್ಚರಿ. ಹಕ್ಕಿಗಳ ಪರಿಪರಿಯ ಕಲರವ, ಹೀಗೇ ನಡೆಯುತ್ತಿರುವಾಗ ಪಾರ್ಕಿನ ವಿದ್ಯಮಾನಗಳಲ್ಲಿ ಒಂದಷ್ಟು ಬದಲಾವಣೆ ಕಾಣತೊಡಗಿತ್ತು.

ಯಾವುದೋ ಒಂದು ವಿಷಯದ ಬಗ್ಗೆ ಅಲ್ಲಲ್ಲಿ ಜನರು ಗಹನವಾಗಿ ಮಾತನಾಡಿಕೊಳ್ಳುತ್ತಿದ್ದುದು ಗಮನಕ್ಕೆ ಬಂದು ನಮ್ಮ ಕುತೂಹಲವನ್ನು ಹೆಚ್ಚಿಸಿತ್ತು. ಉಯ್ಯಾಲೆ, ಮೆರಿಗೋರೌಂಡ್, ಜಾರೋ ಬಂಡೆ ಆಡಿಸುತ್ತಿದ್ದ ಮಕ್ಕಳ ತಾಯಂದಿರು ಅಥವಾ ಅಜ್ಜ ಅಜ್ಜಿಯರು ಈಗ ಗುಸುಗುಸು ಮಾತನಾಡುತ್ತಿದ್ದರು.

ಅಷ್ಟರಲ್ಲಿ ದಿನವೂ ಅಲ್ಲಿಗೆ ಬರುವ ಪರಿಚಿತರೊಬ್ಬರು “ಈ ಪಾರ್ಕಿನ ಹಿತ ರಕ್ಷಣಾ ಸಮಿತಿ ಬೇಕಲ್ಲವಾ? ಅದರ ಬಗ್ಗೆಯೇ ಎಲ್ಲರೂ ಮಾತನಾಡ್ತಿರೋದು”, ಎಂದು ಸುದ್ದಿ ತಿಳಿಸಿದ್ದರು. ಆಗ ನಮಗೆಲ್ಲರಿಗೂ ಬೇಕಾದಂತೆ ಪಾರ್ಕ್‌ನ್ನು ತುಂಬಾ ಚೆನ್ನಾಗಿ ಮಾಡಬಹುದಲ್ಲವೇ? ಎಂಬ ಅವರ ಪ್ರಶ್ನೆಯೇ ಅವರ ಆಸಕ್ತಿಯನ್ನು ತಿಳಿಸಿತ್ತು.

ಬಿ.ಬಿ.ಎಂ.ಪಿ.ಗೆ ಸೇರಿರುವ ಪಾರ್ಕ್ ಇದು. ಪಾರ್ಕ್‌ನ ಶುಚಿತ್ವ ಹಾಗೂ ನಿಗಾ ನೋಡಿಕೊಳ್ಳಲು ವಾಚ್‌ಮ್ಯಾನ್ ಸಂಸಾರವಿದ್ದೇ ಇದೆ. ಪಾರ್ಕ್‌ನ ಒಂದು ಮೂಲೆಯಲ್ಲಿ ಅವರಿಗೊಂದು ಮನೆಯೂ ಇದೆ. ಪಾರ್ಕಿನಲ್ಲಿ ವಿಪರೀತ ಕಳೆ ಬೆಳೆದಾಗ ಅದನ್ನೂ ಕೀಳಲು, ಗಿಡಗಳಿಗೆ ಗೊಬ್ಬರ ಹಾಕಲು ಗಿಡ ಬದಲಾಯಿಸಲು ಬೇರೆ ಕೆಲಸದವರನ್ನು ಇಲ್ಲಿಗೆ ಕರೆಸಿಕೊಳ್ಳುತ್ತಾರೆ.

ಒಮ್ಮೊಮ್ಮೆ ಎಲ್ಲಾ ಚೆನ್ನಾಗಿರುವ ಗೇಟ್, ಕಾಂಪೌಂಡ್, ನಡಿಗೆಯ ಹಾದಿಯ ಟೈಲ್ಸ್ ಎಲ್ಲವನ್ನೂ ಒಡೆದು ಮತ್ತೆ ಬದಲಾಯಿಸುತ್ತಾರೆ. ಇದರಿಂದ ಒಂದಷ್ಟು ಜನರಿಗೆ ಉದ್ಯೋಗವಾಗುವುದನ್ನು ಬಿಟ್ಟರೆ ಮತ್ತೇನು ಪ್ರಯೋಜನವೋ... “ಹೀಗೆ ಒಂದೊಂದು ಪ್ರಾಜೆಕ್ಟ್ ಒಪ್ಪಿಗೆಯಾದಾಗಲೂ ಸಂಬಂಧಪಟ್ಟವರಿಗೆ, ಮೇಲಾಧಿಕಾರಿಗೆ ಬೇಕಾದಷ್ಟು ಲಾಭ ಸಿಗುತ್ತದಂತೆ. ಪಾರ್ಕ್‌ ಅಭಿವೃದ್ಧಿ ಮಾಡಿಸಿದ ಹೆಸರು ಬೇರೆ, ವೈಯಕ್ತಿಕ ಲಾಭದ ಜೊತೆಗೆ ಪ್ರಚಾರವೂ ಚೆನ್ನಾಗಿ ಆಗುತ್ತದೆ. ಆ ಪಾರ್ಕ್‌ಗೆ ಬರುವವರ ಮೇಲೆ ಪ್ರಭಾವವೂ ಬೀರುತ್ತದೆ”. ಇವೆಲ್ಲವೂ ಪಾರ್ಕ್ ಬಂಧುಗಳಿಂದ ನಮಗೆ ಬಂದ ಮಾಹಿತಿ,

ಇಷ್ಟೆಲ್ಲಾ ಮಾಡಿಸುವಾಗ, ಪಾರ್ಕ್‌ನಲ್ಲಿರುವ ಬಹುದೊಡ್ಡ ಬಾವಿಯನ್ನೇಕೆ ಸರಿ ಮಾಡಿಸುವುದಿಲ್ಲ. ಇಷ್ಟು ದೊಡ್ಡ ಪಾರ್ಕಿನ ಗಿಡಗಳಿಗೆ ದಿನವೂ ಹೊರಗಿನಿಂದ ಲಾರಿಯಲ್ಲಿ ನೀರನ್ನು ತಂದು ಪೂರೈಸಲಾದೀತೆ? ಈ ಎಲ್ಲಾ ಪ್ರಶ್ನೆಗಳು ಮನಸ್ಸನ್ನೂ ಕೊರೆಯುತ್ತಿರುವಾಗಲೆ ಅಲ್ಲಲ್ಲಿ ಹಿತರಕ್ಷಣಾ ಸಮಿತಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ನಮಗಂತೂ ಈ ಸಮಿತಿಯ ಬಗ್ಗೆ “ಸುಮ್ಮನೆ ದಂಡ” ಎಂಬ ಭಾವನೆಯಿತ್ತು. ನೋಡನೋಡುತ್ತಿದ್ದಂತೆ ಮುಂದಿನ ನಾಲ್ಕಾರು ದಿನಗಳಲ್ಲಿ ಚಟುವಟಿಕೆಗಳು ಹೆಚ್ಚಾಗತೊಡಗಿದ್ದವು.

“ಸುಂದರವನ ಹಿತರಕ್ಷಣಾ ಸಮಿತಿ” ಎಂಬ ಫಲಕ ಪಾರ್ಕ್‌ನಲ್ಲಿ ವಿರಾಜಿಸತೊಡಗಿತು. ಮೊದಲು ಎಲ್ಲರ ಬಳಿ ವಿಷಯ ಪ್ರಸ್ತಾಪಿಸಿದ ಶ್ರೀ ಚಂದ್ರಪ್ಪನವರು ಉಪಾಧ್ಯಕ್ಷರಾಗಿಯೂ ಇವರ ಮೂಲಕ ಎಲ್ಲರಿಗೂ ಸುದ್ದಿ ಬಿತ್ತರಿಸಿದ ಚಾಣಾಕ್ಷರಾದ ಶ್ರೀಹರೀಶ್ ಅವರು ಅಧ್ಯಕ್ಷರಾಗಿಯೂ ನಿಯುಕ್ತರಾಗಿದ್ದರು.

ಪ್ರಸ್ತುತ

ಓದಿನಲ್ಲಿ ಆಸಕ್ತಿ ತೋರದೆ ಪಾರ್ಕ್‌ನಲ್ಲಿ ಓಡಾಡಿಕೊಂಡಿದ್ದ ಒಂದಿಬ್ಬರು ಯುವಕರಿಗೀಗ ಹೆಚ್ಚಿನ ಆಸಕ್ತಿ ಮೂಡಿತ್ತು. ಸಮಿತಿಯ ಸ್ವಯಂಸೇವಕರಾಗಿ ಕೆಲಸ ಮಾಡತೊಡಗಿದ್ದರು. ನಿಧಾನವಾಗಿ ಹಣದ ಪ್ರಸ್ತಾಪ ಬರತೊಡಗಿತ್ತು.

“ಹಣವಿಲ್ಲದೆ ಯಾವ ಕೆಲಸ ಆಗತ್ತೆ ಹೇಳಿ... ಈ ಪಾರ್ಕ್‌ನ ಹಿತ ಎಲ್ಲರಿಗೂ ಸೇರಿದ್ದಲ್ಲವೆ? ದಯವಿಟ್ಟು ಎಲ್ಲರೂ ಸದಸ್ಯತ್ವದ ಶುಲ್ಕ ಪಾವತಿಸಿ ಸದಸ್ಯರಾಗಿ, ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯ... ನಿಮ್ಮ ಸಲಹೆಗಳಿಗೆ, ಯೋಚನೆಗಳಿಗೆ ನಾವು ಜೀವ ತುಂಬಿ". ಎಂದು ಸಭೆ ಕರೆದು ಅಧ್ಯಕ್ಷರು ಅರಿಕೆ ಮಾಡಿಕೊಂಡಿದ್ದೂ ಆಯಿತು. “ನೀವು ಆಗಿದ್ದೀರಾ? ನಾನೂ ಆಗಿಬಿಡ್ತಿನಿ. ದಿನವೂ ಮುಖ ನೋಡಬೇಕಲ್ಲ” ಎಂಬ ಮಾತಿನೊಂದಿಗೆ ಸಾಕಷ್ಟು ಮಂದಿ ಸದಸ್ಯರಾಗಿದ್ದೂ ಆಯಿತು.

ಚಂದ್ರಪ್ಪ, ಹರೀಶ, ಅವರಿಗಿಂತ ಆ ಯುವಕರು ತುಂಬಾ ಕಾರ್ಯಪ್ರವೃತ್ತರಾಗಿ ಬಿಟ್ಟಿದ್ದರು. ಅಧ್ಯಕ್ಷರು, ಉಪಾಧ್ಯಕ್ಷರ ಅಣತಿ ಪಾಲಿಸುತ್ತಿದ್ದರು. ಪಾರ್ಕ್‌ನ ಮೂಲೆಮೂಲೆಗಳಲ್ಲಿ ವಿಚಾರ ವಿನಿಮಯಕ್ಕೆಂದು ಗುಂಪುಗಳು ಸೇರತೊಡಗಿದ್ದವು. ಸಲಹೆಗಳು ಬರತೊಡಗಿದ್ದವು.

“ನಿವೃತ್ತಿಯಾಗಿ ಒಂದು ವರ್ಷ ಆಗಿದೆಯಂತೆ. ವಾಕಿಂಗ್ ಸಮಯ ಬಿಟ್ಟರೆ ಇಡೀದಿನ ಮನೆಯಲ್ಲಿ ಮಡದಿಗೆ ಇವರ ಉಪದೇಶಾಮೃತ ಕೇಳಿಕೇಳಿ ತಲೆ ಚಿಟ್ಟು ಹಿಡಿದಿದೆಯಂತೆ ಅದಕ್ಕೇ.. ಅವರು ಪತಿಯ ಮನಸ್ಸಿನಲ್ಲಿ ಈ ಹಿತ ರಕ್ಷಣಾ ಸಮಿತಿಯ ಬೀಜ ನೆಟ್ಟಿದ್ದಂತೆ” ಹೀಗೊಂದು ಗಾಳಿಮಾತು ಉಪಾಧ್ಯಕ್ಷರ ಮಡದಿಯ ಕುರಿತಾಗಿ ಮಹಿಳೆಯರ ನಡಿಗೆಯ ವೇಳೆಯಲ್ಲಿ ಹಬ್ಬುತ್ತಾ ಹೋಗಿತ್ತು. ಈಗಂತೂ ಅವರು ಊಟ ಮಾಡಲು ಹಾಗೂ ಮಲಗಲು ಮಾತ್ರ ಮನೆಗೆ ಹೋಗುವುದಂತೆ. ಪಾರ್ಕ್ ಗೇಟ್ ಹಾಕಿದಾಗಲೂ ಸ್ವಚ್ಛತೆಯನ್ನು ಗಮನಿಸಲು ಅಲ್ಲೇ ಇರುತ್ತಾರಂತೆ. ನಾವು ಮನೆಯಲ್ಲಿ ಇರುತ್ತಿದ್ದುದರಿಂದ ನಮಗಂತೂ ಸತ್ಯ ಸಂಗತಿಯ ಅರಿವಿರಲಿಲ್ಲ.

ಅಂತೂ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಲೆಕ್ಚರ್‌ನಂತಹ ದಪ್ಪ ಪುಸ್ತಕ ಹಿಡಿದು ಅಧ್ಯಕ್ಷರು, ಉಪಾಧ್ಯಕ್ಷರು ಗಡಿಬಿಡಿಯಿಂದ ಓಡಾಡುತ್ತಾ, ವಾಚ್‌ಮನ್‌ಗೆ ಕೆಲಸ ಹೇಳುತ್ತಾ.. ಮೂಲೆ ಮೂಲೆಗಳನ್ನು ಗಮನಿಸುತ್ತಾ ನಾಲ್ಕಾರು ಜನರೊಂದಿಗಿರುವುದನ್ನು ನಾವೆಲ್ಲರೂ ನೋಡುತ್ತಿದ್ದೆವು.

ಈಗ ಸದಸ್ಯರೆಲ್ಲರೂ ಸಲಹೆ ಕೊಡುವವರೇ, ಬೇಡಿಕೆ ಮುಂದಿಡುವವರೇ ಆಗಿ ಬಿಟ್ಟಿದ್ದರು. “ನಾವೂ ಹಣಕೊಟ್ಟು ಸದಸ್ಯರಾಗಿಲ್ಲವಾ? ಅವರೀಗ ಪಾರ್ಕ್‌ನ್ನು ನಮಗೆ ಬೇಕಾದ ಹಾಗೆ ಮಾಡಲಿ” ಎಂಬ ಅಭಿಪ್ರಾಯ ಎಲ್ಲರದ್ದೂ ಆಗಿಬಿಟ್ಟಿತ್ತು.

ಕೆಲವರಂತೂ ಅತ್ತೂ ಕರೆದೂ ಹೇಳಿದ ಮೇಲೆ ಬೇಕೋ ಬೇಡವೋ ಎಂದು ಅಂದಾಜಿಸಿ ಸದಸ್ಯತ್ವ ಪಡೆದಿದ್ದರು. ಅವರಿಗೆ ತಾವು ಏನಾದರೂ ಹೇಗಾದರೂ ಸಲಹೆ ಕೊಟ್ಟು ಅದನ್ನು ಕಾರ್ಯರೂಪಕ್ಕೆ ಬರುವಂತೆ ಮಾಡಬೇಕೆಂಬ ಇಚ್ಛೆ,

“ನೀವು ಪಾರ್ಕ್ ತೆರೆದಿಡುವ ಸಮಯವನ್ನು ಹೆಚ್ಚಿಸಬೇಕು. ಮಹಿಳೆಯರಿಗೆ ತಿಂಡಿ, ಮನೆಕೆಲಸ ಅಂತ ಮಾಡಿ ಬರುವಾಗ ಹನ್ನೊಂದು ಗಂಟೆ ಆಗಿಬಿಡತ್ತೆ. ಆಗಲೇ ಬಾಗಿಲು ಮುಚ್ಚಿದ್ರೆ ಅವರಿಗೆ ಅನ್ಯಾಯ ಆಗೋಲ್ಲವಾ?”

“ನಾಗರಕಲ್ಲುಗಳಿಗೆ ಹಾಲು ಅಭಿಷೇಕ ಮಾಡಿದ್ದೇಲೆ ಸ್ವಚ್ಛ ಮಾಡೇಕು. ಇಲ್ಲವಾದರೆ ಹೆಗ್ಗಣಗಳು ಹೆಚ್ಚಾಗುತ್ತವೆ. ಆಮೇಲೆ ಹಾವುಗಳೂ ಹೆಚ್ಚುತ್ತವೆ. ಇದರ ಬಗ್ಗೆ ಗಮನಹರಿಸಿ”

“ಯುವ ಜೋಡಿಗಳು ಇಚ್ಛೆಬಂದಂತೆ ವರ್ತಿಸುತ್ತಾರೆ. ಕಲ್ಲು ಬೆಂಚುಗಳ ಮೇಲೆ ಕುಳಿತು ಚಕ್ಕಂದ ಅಡ್ತಿದ್ದಾರೆ. ಹಿರಿಯ ನಾಗರಿಕರಿಗೆ ವಿಶ್ರಾಂತಿಗೂ ಸ್ಥಳ ಇರೋಲ್ಲ. ಸಾಮಾಜಿಕ ಸ್ಥಳಗಳಲ್ಲಿ ನೀತಿ ನಿಯಮ ಅಂತ ಇರಬೇಕಲ್ಲವಾ?”

“ನೋಡಿ.. ಪ್ಲಾಸ್ಟಿಕ್ ಪೇಪರ್ ಎಲ್ಲಾ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ನೀರಿನ ಬಾಟಲ್‌ಗಳ ರಾಶಿ ನೋಡಿ, ಇಲ್ಲಿ ಬಂದು ತಿಂದು ಎಸೆಯುವವರ ಬಗ್ಗೆ ಗಮನ ಬೇಡ್ವ?”

“ಗೇಟು ತೆಗೆದಿಟ್ಟು ಬಿಡ್ತಾರೆ. ನೋಡಿ.. ನಾಯಿಗಳು ಹೇಗೆ ಅಡ್ಡಾಡ್ತಾ ಇವೆ. ಹೋದ ವಾರ ಅಂತೂ ಆ ಮೂಲೆಯಲ್ಲಿ ಮರಿಗಳನ್ನು ಇಟ್ಟು ಕಾವಲು ಕಾಯ್ತ ಇತ್ತು ನಾಯಿ. ಹತ್ತಿರ ಹೋದ್ರೆ ಗುರ್ ಆಗ್ತಿತ್ತು. ಅಂತೂ ಅದನ್ನು ಇಲ್ಲಿಂದ ಖಾಲಿ ಮಾಡಿಸೋಕೆ ಏನೆಲ್ಲಾ ಪಾಡು ಪಡೇಕಾಯ್ತು. ಅದೇ ನಾಯಿ ಕಾಲೋ, ಕೈಗೋ ಬಾಯಿ ಹಾಕಿಟ್ರೆ ಇಂಜೆಕ್ಷನ್ ತಗೋಬೇಕಲ್ಲ? ಕರ್ಮ.. ಕರ್ಮ.. ಬೇಕಾದ್ರೆ ನಾಯಿಗೇ ಬೇರೆ ಪಾರ್ಕ್ ಮಾಡಿಸಿಬಿಡಿ” ಹೀಗೆ ಎಲುಬಿಲ್ಲದ ನಾಲಿಗೆಗಳು ಎತ್ತೆತ್ತಲ್ಲೋ ಹೊರಳುತ್ತಿದ್ದವು.

“ಎಷ್ಟೋ ಹಿರಿಯ ನಾಗರಿಕರು ಕಾಲುನೋವು, ಬೆನ್ನುನೋವು ಅಂತ ಒದ್ದಾಡ್ತಾ ಇರ್ತಾರೆ. ಡಾಕ್ಟರ್‌ನ್ನು ಕರೆಸ್ಟೇಕು. ನೀವು.. ಹಾಗೇ ಬಿಪಿ, ಶುಗರ್ ನೋಡಿ ಬಿಡಲಿ”.

“ದೊಡ್ಡ ದೊಡ್ಡ ಮರಗಳ ಟೊಂಗೆಗಳು ಈಗಲೋ ಆಗಲೋ ಬೀಳೋ ಹಾಗೆ ಇವೆ. ಅದನ್ನು ಸ್ವಲ್ಪ ಟೀಮ್ ಮಾಡಿಸಿಬಿಡಿ.”

“ಗಣಪತಿ ಹಬ್ಬವನ್ನು ಆಚರಿಸಬೇಕಲ್ಲ. ಚೆನ್ನಾಗಿರೋ ಗಣಪತಿ ಇಟ್ಟು ಚೆನ್ನಾಗಿ ಪೂಜೆ ಮಾಡಿಸಿ, ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥೆ ಮಾಡೋಕು”.

“ಹಾಗೇ ಕೃಷ್ಣನ ಅಷ್ಟಮಿ, ಓಣಂ ಎಲ್ಲಾ ಮಾಡೇಕು. ಎಲ್ಲರೂ ಸೇರಿ ಸಂಭ್ರಮ ಪಡೋಣ.”

“ನಮ್ಮ ಮಕ್ಕಳಿಬ್ಬರೂ ಚೆನ್ನಾಗಿ ಹಾಡ್ತಾರಪ್ಪ. ಹಣ ಏನೂ ಬೇಡ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿ.. ಚೆನ್ನಾಗಿ ಪ್ರಚಾರ ಮಾಡಿ ಅಷ್ಟೇ..

“ನನ್ನ ತಂಗಿ ಮಕ್ಕಳು ಎಷ್ಟು ಚೆನ್ನಾಗಿ ವೀಣೆ ನುಡಿಸ್ತಾರೆ ಗೊತ್ತಾ? ಅವರಿಗೂ ಹೇಳೋಣ” ಹೀಗೆ ಮುಗಿಯಲಾರದ ಬೇಡಿಕೆಗಳು.. ಅಧ್ಯಕ್ಷರು. ಉಪಾಧ್ಯಕ್ಷರದಂತೂ ಪಾಡು ಹೇಳತೀರದು. ಯಾರಿಗೂ ಜೋರಾಗಿ ಮಾತನಾಡುವಂತಿಲ್ಲ.

ಪಾರ್ಕಿನ ಈ ಹಿತರಕ್ಷಣಾ ಸಮಿತಿ. ತನ್ನ ಸಂಸಾರದ ಎಲ್ಲಾ ಹಿತವನ್ನು ಕಿತ್ತು ಕೊಳ್ಳುತ್ತಿರುವಂತೆ ವಾಚ್‌ಮ್ಯಾನ್‌ಗೆ ಭಾಸವಾಗತೊಡಗಿತ್ತು.

“ಏನು ಸಮಿತಿಯೋ ಏನು ಕಥೆಯೋ .. ಮೊದಲು ಪಾರ್ಕ್ ಏನು ಸಂದಾಕಿರಲಿಲ್ಲವಾ? ನಾವೇನು ಕಿಲೀನ್ ಆಗಿ ಮಡಿಕ್ಕಂಡಿರಲಿಲ್ಲವಾ? ಈವಯ್ಯರಿಗೆ ಈಗ್ಯಾಕೆ ಇಂಥಾ ಯೋಚೆ ಬಂತೋ... ನಮ್ಮ ತಲೆ ತಿನ್ನಾಕೆ.” ಹಿಡಿ ಶಾಪ ಹಾಕುತ್ತಿದ್ದನಾತ. ಅವರ ಮನೆಯವರಿಗೆ ತುಸುವೂ ಬಿಡುವಿರುತ್ತಿರಲಿಲ್ಲ.

ನಾಯಿಗಳನ್ನು ಓಡಿಸುವುದೋ. ಯಾರು ಎಲ್ಲಿ ಕಸ ಹಾಕುತ್ತಾರೆಂದು ನೋಡುತ್ತಿರುವುದೋ ಗಿಡಗಳಿಗೆ ನೀರು ಹನಿಸುವುದೋ, ಸುತ್ತ ಗುಡಿಸಿ ಸ್ವಚ್ಛ ಮಾಡುವುದೋ.. ಹೀಗೇ ರಾತ್ರಿಯವರೆಗೂ ಕೆಲಸ ಮುಗಿಯದು.

ಅಧ್ಯಕ್ಷರು, ಉಪಾಧ್ಯಕ್ಷರಿಗೂ ಹೀಗೆಯೇ ಕಾರ್ಯದ ಒತ್ತಡ... ನಮ್ಮ ಮಕ್ಕಳ ಸಂಗೀತ ಕಾರ್ಯಕ್ರಮ ಗಣಪತಿ ಹಬ್ಬದ ಸಂಜೆ ಆಯೋಜಿಸ್ತೀರಲ್ಲವಾ ಸಾರ್, ಪಕ್ಕವಾದ್ಯದವರನ್ನು ನಾವೇ ಕರೆಸ್ತೀವಿ'

“ಹಾಗಾದ್ರೆ ನಾನು ಹೇಳಿದ್ದು ಯಾವಾಗ ವ್ಯವಸ್ಥೆ ಮಾಡ್ತೀರಿ?” ಹೀಗೆ ಸದಸ್ಯರ ಬೇಡಿಕೆ ಯಿಂದ ತಿಕ್ಕಾಟದ ಮುನ್ಸೂಚನೆ ತೋರಿದಾಗ, ಮುಂದೆ ಅವಕಾಶವಾದಾಗ ಯೋಚನೆ ಮಾಡೋಣ. ಎಲ್ಲವನ್ನೂ ಒಟ್ಟಿಗೆ ಹೇಗೆ ಮಾಡೋಕಾಗತ್ತೆ?” ಎಂದು ಸಾಂತ್ವಾನಿಸಲು ಯತ್ನಿಸಿದ್ದರು.

“ನಾವೂ ಸದಸ್ಯರೇ ತಾನೇ? ಹಣ ತಗೊಂಡು ಎಲ್ಲಾ ಮಾಡ್ತೀವಿ ಅಂತ ಈಗ ಹೀಗೆ ಹೇಳಿದ್ರೆ ಹೇಗೆ? ಇಂತಹ ಪ್ರತಿಕ್ರಿಯೆಯನ್ನು ಅಧ್ಯಕ್ಷರು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ಉಪಾಧ್ಯಕ್ಷರಿಗೆ ಉದ್ವೇಗವನ್ನೂ, ಅಸಮಾಧಾನವನ್ನೂ ಹುಟ್ಟುಹಾಕಿತ್ತು.

ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದ ಚಂದ್ರಪ್ಪನವರ ಉಸಿರು ಉಸಿರಿನಲ್ಲೂ ಪಾರ್ಕೇ ಬೆರೆತು ಹೋಗಿತ್ತು. ರಾತ್ರಿ ಕನಸಿನಲ್ಲೂ ಆದರ್ಶ ಉದ್ಯಾನದ ಕನಸು ಕಾಣುತ್ತಿದ್ದರು. ಅವರ ಮಡದಿಗೆ ಇದೀಗ ನಿಜವಾಗಿಯೂ ಯೋಚನೆಗಿಟ್ಟುಕೊಂಡಿತ್ತು. ಹೊಸ ಬೆಳವಣಿಗೆಯೆಂದರೆ ಚಂದ್ರಪ್ಪನವರದು ತುಸು ಮೃದು ಸ್ವಭಾವವಾದ್ದರಿಂದ ಪಾರ್ಕ್ ಬಗ್ಗೆ ದೂರು ಕೊಡಲು.. ಸಲಹೆ, ಸೂಚನೆ ಕೊಡಲು ಜನರು ಹಿಂಡು ಹಿಂದಾಗಿ ರಾತ್ರಿಯಲ್ಲೂ ಮನೆಗೆ ಬರತೊಡಗಿದ್ದರು. ಇದೀಗ ಪತಿ ಮನೆಯಲ್ಲಿರುತ್ತಿದ್ದಾಗಲೇ ಉತ್ತಮ ಎಂದು ಪತ್ನಿಗೆ ಅನ್ನಿಸತೊಡಗಿತ್ತು. ಪಾರ್ಕಿನ ಗೀಳನ್ನು ಬಿಡಿಸುವುದೇ ಮನೆಯವರಿಗೆ ಕಷ್ಟಕರವಾಗಿ ಕಂಡಿತ್ತು. ಅದಕ್ಕಾಗಿಯೇ ಪ್ರವಾಸದ ಯೋಜನೆಯೊಂದನ್ನು ಹಾಕಿಕೊಂಡರು.

ಒಂದೆರಡು ಗಂಟೆಗಳ ಮಟ್ಟಿಗೆ ಅಕ್ಕ ತಂಗಿಯರ ಮನೆಗೆ ಹೋಗದಿದ್ದವರು ಇದೀಗ ವಾರದ ಪ್ರವಾಸಕ್ಕೆ ಒಪ್ಪಿಯಾರೆ? ಈ ಪಾರ್ಕ್ ಗೀಳನ್ನು ಬಿಡಿಸಲು ಚಂದ್ರಪ್ಪನವರ ಶ್ರೀಮತಿಯವರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.

ಹಾಂ! ಆ ಇಬ್ಬರು ಯುವಕರ ಅನುಭವ ದಟ್ಟವಾಗತೊಡಗಿತ್ತು. ಪರಿಶ್ರಮದ ಎಲ್ಲವೂ ಅವರ ಭವಿಷ್ಯಕ್ಕೆ ಅನುಕೂಲವಾಗುವಂತ್ತಿತ್ತು. ಹೆಚ್ಚಿನ ವಿದ್ಯೆ ಇಲ್ಲದಿದ್ದರೂ ವ್ಯವಹಾರ ಜ್ಞಾನ, ತಿಳುವಳಿಕೆಯಿಂದಾಗಿ ಮುಂದೆ ಯಾವುದಾದರೂ ಸ್ವಂತ ಉದ್ಯೋಗ ಮಾಡಬಹುದೆಂಬ ಭರವಸೆ ಅವರ ಪೋಷಕರಿಗಾಗಿತ್ತು. ಮಹತ್ವ ಜನರೊಂದಿಗೆ ಒಡನಾಟ, ಸ್ಥಳೀಯರ ಪರಿಚಯ

ಹಾಗೆಯೇ ವಾಚ್‌ಮನ್‌ಗೆ ಚಿಂತೆ ತಪ್ಪಿಲ್ಲ. ಆದರೂ ಅವರಿಗೂ ಈ ಪಾರ್ಕ್ ಅಭ್ಯಾಸವಾಗಿರುವುದರಿಂದ ಬೇರೆಡೆಗೆ ಹೋಗುವ ಮನಸ್ಸಾಗುತ್ತಿಲ್ಲ.

ಒಟ್ಟಾರೆ ಸುಂದರವನ ಪಾರ್ಕಿನಲ್ಲಿ ಚಟುವಟಿಕೆಗಳು ಹೆಚ್ಚಾಗಿ ಎಲ್ಲರಿಗೂ ಆಪ್ತತೆಯ ಭಾವದೊಂದಿಗೆ ಅಹವಾಲುಗಳೂ ಹೆಚ್ಚುತ್ತಿವೆ.

ಪ್ರಸ್ತುತ

ಭಾರತ ಸರ್ಕಾರದೊಡನೆ 123 ಆಧ್ಯಾತ್ಮಿಕ ಹಾಗೂ ನಾಗರಿಕ ಸಂಘ ಸಂಸ್ಥೆಗಳು ಕೈಜೋಡಿಸಿ 2025 ಜುಲೈ 18ರಿಂದ 20ರವರೆಗೆ ಮೂರು ದಿನಗಳ ಕಾಲ “ಕಾಶಿ ಶೃಂಗ ಸಮ್ಮೇಳನ'ವನ್ನು ಆಯೋಜಿಸಿದ್ದವು. ಅಲ್ಲಿ ವಿಕಸಿತ ಭಾರತಕ್ಕಾಗಿ ರಾಷ್ಟ್ರೀಯ ಅಭಿಯಾನವಾದ “ಮಾದಕ ದ್ರವ್ಯ ಮುಕ್ತ ಯುವಜನದ ಪ್ರಾರಂಭೋತ್ಸವವಾಯಿತು. ಅದರ ಯಶಸ್ಸಿಗಾಗಿ ಪೂರ್ಣ ಬದ್ಧತೆಯಿಂದ ಕಾರ್ಯತತ್ಪರರಾದ ವಿಶ್ವ ಹಿಂದು ಪರಿಷದ್, ಬಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಗಳನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ನಿಮ್ಮ ಸಂಘಟಿತ ನಾಯಕತ್ವವು ಯುವಜನ ಸಮೂಹದೊಂದಿಗೆ ವಿವಿಧ ಸಮುದಾಯಗಳನ್ನು ಮಾದಕ ದ್ರವ್ಯ ಮುಕ್ತ ಭಾರತಕ್ಕಾಗಿ ಜೋಡಿಸಿ ಸಜ್ಜುಗೊಳಿಸಲು ಶ್ರಮಿಸುತ್ತಿದೆ. ನೀವು ತೋರುವ ಈ ಕಾಳಜಿಯು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಿಂದ ಸಾಕಾರಗೊಳ್ಳುವ ವಿಕಸಿತ ಭಾರತ-2047ರಲ್ಲಿ ಕಾಣಬರುವ ನಾಗರಿಕ ಹೊಣೆಗಾರಿಕೆ ಮತ್ತು ರಾಷ್ಟ್ರನಿರ್ಮಾಣದ ಲಕ್ಷವನ್ನು ಒಳಗೊಂಡಿದೆ. ಈ ಪರಿವರ್ತನೆಯ ಕಾಲಖಂಡದಲ್ಲಿ ನಿಮ್ಮ ಭಾಗಿದಾರಿಕೆಯೂ ಆ ಮೂಲಕ ನಿಮ್ಮ ಕೊಡುಗೆಯೂ ಅತ್ಯಂತ ಮೌಲಿಕವಾದುದು ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆಗಳು ಪರಿಗಣಿಸುತ್ತವೆ.

ಈ ಶ್ರೇಷ್ಠ ಕಾರ್ಯದಲ್ಲಿ ನಿಮಗೆ ನಿರಂತರ ಯಶಸ್ಸು ದೊರಕಲೆಂದು ನನ್ನ ಶುಭಾಕಾಂಕ್ಷೆಗಳನ್ನು ಸಲ್ಲಿಸುತ್ತೇನೆ. ಹಾಗೂ ಸ್ವಸ್ಥ, ಸಶಕ್ತ ವಿಕಸಿತ ಭಾರತ ನಿರ್ಮಾಣದಲ್ಲಿ ನಿಮ್ಮ ಅಚಲ ಸಮರ್ಪಣೆಯನ್ನೂ ಶ್ಲಾಘಿಸುತ್ತೇನೆ.


ಡಾ| ಮನಸುಖ್ ಮಾಂಡವೀಯ)

ಪ್ರಸ್ತುತ

ಹಿಂದು ವಾಣಿ ಮಾಸಿಕವನ್ನು ಜಾಲತಾಣದಿಂದ ಓದಲು

1. https://vhppublications.in/es Dea

2. ನೋಂದಣಿ (Register) ಮೇಲೆ ಕ್ಲಿಕ್ ಮಾಡಿ.

3. ಖಾತೆ ರಚಿಸಿ (Create Account)

4. ಖಾತೆಯನ್ನು ರಚಿಸಿದ ನಂತರ, ಲಾಗಿನ್ (Login) ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ನಮೂದಿಸಿ

5. ನೀವು ಲಾಗಿನ್ ಆಗುತ್ತೀರಿ ಮತ್ತು ವಿವಿಧ ಭಾಷೆಗಳಲ್ಲಿ ಎಲ್ಲಾ ಪ್ರಕಟಣೆಗಳನ್ನು ನೀವು ನೋಡಬಹುದು. ಇಲ್ಲಿ ಹಿಂದುವಾಣಿಯನ್ನು ಆಯ್ಕೆಮಾಡಿ

6. ನೀವು ಓದಲು ಬಯಸುವ ಆವೃತ್ತಿಯ ಮೇಲೆ ಕ್ಲಿಕ್ ಮಾಡಿ. ಎಡದಿಂದ 1ನೇ ಆವೃತ್ತಿಯು ಇತ್ತೀಚಿನ ಆವೃತ್ತಿಯಾಗಿರುತ್ತದೆ.

7. ನಮ್ಮ ಆವೃತ್ತಿಗಳನ್ನು ನೀವು ಓದುತ್ತಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ. ಹಿಂದುವಾಣಿ ಮತ್ತು ವಿಶ್ವ ಹಿಂದೂ ಪರಿಷತ್‌ಗೆ ಹೆಚ್ಚು ಹೆಚ್ಚು ಸನಾತನಿಗಳನ್ನು ಕರೆತರುವಲ್ಲಿ ದಯವಿಟ್ಟು ನಮಗೆ ಬೆಂಬಲ ನೀಡಿ.


॥ ಜೈ ಶ್ರೀ ರಾಮ್ ॥


Steps to access HINDU VANI Magazin from website

1. Visit https://vhppublications.in/

2. Click on Register.

3. Create Account

4. Once the account is created, Click on Login and enter details 5. You will be logged in and you can see all the publications across different languages. Select Hindu Vani

6. Click on edition you wish to read. 1st Edition from left will be the latest edition.

7. Happy Reading. Support us in bringing more and more Sanatanis to Hinduvani and Vishwa Hindu Parishad.


|| Jai Sri Ram ||