Logo

VHP PUBLICATIONS

Hindu Vani


expand_more

ಸೂಕ್ತಿಶ್ರೀ

By ಬಿ ಈ ಸುರೇಶ್, ಬೆಂಗಳೂರು

ಉತ್ಸಾಹದಿಂದಲೇ ಕಾರ್ಯಸಾಧನೆ


ಉತ್ಸಾಹೋ ಬಲವಾನಾರ್ಯ ನಾಸ್ತುತ್ಯಾಹಾತ್ ಪರಂ ಬಲಮ್ |

ಸೋತ್ಸಾಹಸ್ಯಾಪ್ತಿ ಲೋಕೇಸಿನ್ ನ ಕಿಂಚಿದಪಿ ದುರ್ಲಭಮ್ ||


ವ್ಯಕ್ತಿಯಲ್ಲಿರುವ ಉತ್ಸಾಹ ಪ್ರವೃತ್ತಿಯಿಂದ ಉತ್ತಮ ಕಾರ್ಯಗಳ ಸಾಧನೆಯು ಸಾಧ್ಯವಾಗುತ್ತದೆ. ಅಸಾಧ್ಯವೆನಿಸುವ ವಿಚಾರಗಳು ಕೂಡಾ ಉತ್ಸಾಹ ಒಂದರಿಂದಲೇ ಕಾರ್ಯಗತವಾಗುತ್ತವೆ.

ದಕ್ಷಿಣ ದಿಕ್ಕಿಗೆ ಹೊರಟ ಸುಗ್ರೀವನ ಕಪಿ ಸೈನ್ಯದ ತಂಡಕ್ಕೆ ಎದುರಾದುದು ವಿಶಾಲವಾದ ಸಮುದ್ರ, ಮುಂದಿನ ದಾರಿ ಕಾಣದ ಕಪಿ ತಂಡವು ಹತಾಶಗೊಂಡಿತು. ಬರಿಗೈಯಲ್ಲೇ ಹಿಂದಿರುಗಿ ಹೋದರೆ ಸುಗ್ರೀವನ ಶಿಕ್ಷೆಯ ಭಯ. ಉಪವಾಸದಿಂದ ಸಾಯುವುದೇ ಲೇಸು ಎನ್ನುವ ಸ್ಥಿತಿಗೆ ತಲುಪಿದ ಗುಂಪಿಗೆ ಆಗ ಮುಂದಿನ ದಾರಿಯನ್ನು ತೋರಿದುದು ಉತ್ಸಾಹವನ್ನು ತುಂಬಿದುದು ಜಟಾಯುವಿನ ಅಣ್ಣ ಸಂಪಾತಿಯ ವಿಶ್ವಾಸದ ಮಾತುಗಳು.

ಅದೇರೀತಿ ಇನ್ನೊಂದು ಪ್ರಸಂಗವೆಂದರೆ ರಾಮ ಲಕ್ಷ್ಮಣರೊಂದಿಗೆ ಹೊರಟ ಸುಗ್ರೀವ ಸೈನ್ಯಕ್ಕೆ ಸಮುದ್ರವು ದಾರಿಬಿಡದೇ ಹೋದ ಸಂದರ್ಭ. ಶ್ರೀ ರಾಮನು ಉಪವಾಸದಲ್ಲಿ ಕೂತು ಸಮುದ್ರವನ್ನು ಪ್ರಾರ್ಥಿಸಿದರೂ ಯಾವುದೇ ಪ್ರತಿಕ್ರಿಯೆಯನ್ನು ಸಮುದ್ರ ರಾಜನು ನೀಡದಿದ್ದಾಗ ಲಕ್ಷ್ಮಣನು ಆಡಿದ ಮಾತುಗಳು ಶ್ರೀರಾಮನಿಗೆ ಯುಕ್ತವೆನಿಸಿತು.

ಜೀವನದಲ್ಲಿ ಕೆಲವೊಮ್ಮೆ ಎದುರಾಗುವ ಸನ್ನಿವೇಶಗಳನ್ನು ದಾಟುವುದೇ ಅಸಾಧ್ಯವೆನಿಸುತ್ತದೆ. ಮುಂದಿನ ದಾರಿಯೇ ಕಾಣದಾಗುತ್ತದೆ. ಅಂತಹ ಪ್ರಸಂಗಗಳಲ್ಲಿ ಉತ್ಸಾಹವೊಂದೇ ದಾರಿ ತೋರಬಲ್ಲುದು. ಆತ್ಮವಿಶ್ವಾಸವೊಂದೇ ಸೋಲಿನ ಭಾವನೆಯ ನಡುವೆ ಬೆಳಕು ತೋರುತ್ತದೆ.

ಹ್ಯಾರಿ ಪಾಟರ್ ಎನ್ನುವ ಅದ್ವಿತೀಯ ಕಾದಂಬರಿಗಳನ್ನು ನೀಡಿದ ಲೇಖಕಿಯ ಹೆಸರು ಜೆ.ಕೆ.ರೋವಿಂಗ್, ಆಕೆಯ ಕೃತಿಗಳನ್ನು ಮೊದಮೊದಲು ಯಾವ ಪ್ರಕಾಶಕರು ಕೂಡಾ ಪ್ರಕಟಿಸಲು ಸಿದ್ಧರಿರಲಿಲ್ಲ. ಆಕೆಯು ಭೇಟಿಯಾದ 12 ಪ್ರಕಾಶನ ಕಂಪನಿಗಳು ಆಕೆಯ ಕಾದಂಬರಿಗಳನ್ನು ಸ್ವೀಕರಿಸಲು ಹಿಂಜರಿದವು. ಆದರೆ ಆಶ್ಚರ್ಯ! ಈ ರೀತಿ ಬೇಡವೆಂದು ಬಿಟ್ಟ ಆ ಸಾಲು ಕಾದಂಬರಿಗಳು ಒಂದೊಮ್ಮೆ ಎಷ್ಟು ಜನಪ್ರಿಯ ಪುಸ್ತಕಗಳಾದುವೆಂದರೆ ಕೆಲವೊಂದು ಕಾದಂಬರಿಗಳ 20 ಕೋಟಿ ಪ್ರತಿಗಳು ಮುದ್ರಣಗೊಂಡವು.

ಅಮಿತಾಬ್ ಬಚ್ಚನ್‌ಗೆ ಯಾವುದೇ ಸಿನಿಮಾ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ, ತಮ್ಮ ಸಿನಿಮಾಗಳಲ್ಲಿ ಪಾತ್ರಗಳನ್ನು ನೀಡಲು ನಿರಾಕರಿಸಿದುದುಂಟು. ಆತನ ಗಡಸು ಧ್ವನಿ ಆಕರ್ಷಕವಿಲ್ಲವೆಂದೂ, ಶಾರೀರಿಕ ಎತ್ತರವು ಅಸಹ್ಯವೆಂದೂ ಹೇಳಿ ಆತನನ್ನು ನಿರಾಕರಿಸಿದ್ದರು. ಆದರೆ ಒಮ್ಮೆ ಅವಕಾಶ ಪಡೆದ ಬಚ್ಚನ್ ನಂತರ ಒಂದರ ಹಿಂದೊಂದು ಉತ್ತಮ ಪ್ರದರ್ಶನದ ಸಿನಿಮಾಗಳನ್ನು ನೀಡಿದರು.

ಅಲ್ವಾ ಎಡಿಸನ್ 1093 ಸಂಶೋಧನೆಗಳ ಪೇಟೆಂಟ್ ಪಡೆದ ವ್ಯಕ್ತಿ. ಆದರೆ ಆತನ ಗೆಲುವು ಸುಲಭದಿಂದ ಪಡೆದುದಲ್ಲ. ಅವನ ಅನ್ವೇಷಕ ಸ್ವಭಾವವೇ ಆತನ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸಿದ್ದಿತು. ಆತನು ಮೊದಲ ತರಗತಿಯಲ್ಲಿರುವಾಗ ಅವನ ಅತಿ ಚಟುವಟಿಕೆಯನ್ನ ಕಂಡು ಅಧ್ಯಾಪಕರು ಅವನನ್ನು ಬುದ್ಧಿಮಾಂದ್ಯನೆಂದು ಹೆಸರಿಸಿದ್ದರು.

ಅವನ ಪರಿಶ್ರಮದ ಜೀವನ ಎಷ್ಟು ಮತ್ತು ಹೇಗಿದ್ದಿತು ಎಂದರೆ ಆತನು ವಿದ್ಯುಚ್ಛಕ್ತಿ ಯಿಂದ ಬೆಳಗುವ ಬಲ್ಬನ್ನು ಸಂಶೋಧಿಸುವ ಮೊದಲು 10ಸಾವಿರ ಬಾರಿ ಸಂಶೋಧನೆಯು ತಪ್ಪಾಗಿದೆಯೆಂದು ಕೊನೆಯ ಹಂತದಲ್ಲಿ ಕಂಡುಕೊಂಡನಂತೆ. ಇಷ್ಟೊಂದು ಬಾರಿ ವಿಫಲನಾದಿಯಾ ಎಂದು ಅವನಿಗೆ ಕೇಳಿದಾಗೆಲ್ಲ ಆತ ಹೇಳುತ್ತಿದ್ದನಂತೆ “ಹಾಗೇನಿಲ್ಲ ಪ್ರತಿ ವೈಫಲ್ಯದಲ್ಲೂ ನನಗೆ ಒಂದು ಹೊಸ ವಿಚಾರ ತಿಳಿದು ಬರುತ್ತಿತ್ತು. ಅದೆಂದರೆ ಆ ಪ್ರಯತ್ನವು ತಪ್ಪು ಎನ್ನುವ ಹೊಸ ಪಾಠ ತಿಳಿಯುತ್ತಿತ್ತು” ಎಂದು. ಅವನನ್ನು ಮುಂದುವರೆಸಿದುದು ಅವನ ಕಾರ್ಯೋತ್ಸಾಹವು ಮಾತ್ರ.

ಜಗತ್ತು ಪರಿಶ್ರಮದಿಂದಲೇ ಮುಂದುವರೆಯಲಿಲ್ಲ. ತನ್ನಲ್ಲಿ ಪುರುಷ ಪ್ರಯತ್ನವನ್ನು, ಕಾರ್ಯೋತ್ಸಾಹವನ್ನು, ಅಪರಿಮಿತ ಆತ್ಮವಿಶ್ವಾಸವನ್ನು ಸೃಷ್ಟಿಸಿದೆ. ಇದೆಲ್ಲವು ಸೇರಿ ಈಗ ನಮ್ಮ ಜಗತ್ತು ಮುಂದುವರಿಯುತ್ತಿದೆ.


ಸೂಕ್ತಿಶ್ರೀ

ಶ್ರದ್ಧಾಂಜಲಿ

ಗ್ರಾಮದ ಹಿರಿಯ ತಾಯಿ ಗುಂಡಮ್ಮನವರು 4-8-2025 ರಂದು ನಿಧನರಾದರು. ದಿವಂಗತರು ವರ್ತೂರು ಗ್ರಾಮ ಪಂಚಾಯಿತಿಯ ಪ್ರಮುಖ ಸದಸ್ಯರಾಗಿದ್ದ ಪಿ.ಸುಬ್ಬಣ್ಣನವರ ಮಾತೃಶ್ರೀಯವರು. ಅವರ ಇನ್ನೊಬ್ಬ ಮಕ್ಕಳಾದ ಎನ್.ಪಿ. ಮುನಿರಾಜರವರು ವಿಶ್ವ ಹಿಂದು ಪರಿಷದ್ ವಿಶೇಷ ಸಂಪರ್ಕ ಆಯಾಮದ ಸಹ ಪ್ರಾಂತ ಪ್ರಮುಖರು ಮತ್ತು ಹಿಂದುವಾಣಿ ಪತ್ರಿಕೆಯ ಪ್ರಕಾಶಕರು. ದಿವಂಗತರಿಗೆ ನಮ್ಮ ವಿನಮ್ರ ನಮನಗಳು.