Logo

VHP PUBLICATIONS

Hindu Vani


expand_more

ಪ್ರಸ್ತುತ

By - ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು

ಬದಲಾಗದಿರಿ ನೀವೆಲ್ಲಾ

ಪಿ.ಯು.ಸಿ.ಯಲ್ಲಿ ವಿಪರೀತ ಟ್ಯೂಶನ್, ಒತ್ತಡ ಹಾಗೂ ಎಲ್ಲರ ಹಿತೋಪದೇಶಗಳಿಂದ ಬಳಲಿರುವ ವಿದ್ಯಾರ್ಥಿಗಳು ಕೆಲವರಾದರೆ ಕೆಲವರಂತೂ ರೋಸಿಯೇ ಹೋಗಿರುತ್ತಾರೆ.

ವಿದ್ಯಾರ್ಥಿಗಳು ಅಥವಾ ಅವರ ಮನೆಯವರು ಬಯಸಿದ ಮುಂದಿನ ಓದಿಗೆ ಸೀಟು ಸಿಗುವುದು ಕೆಲವರಿಗೆ ಮಾತ್ರ ಪ್ರತಿಭೆ, ಪ್ರಯತ್ನ ಎಲ್ಲವೂ ವಿಪರೀತ ಮಾನಸಿಕ ಒತ್ತಡದಿಂದಾಗಿ ಅನೇಕರಿಗೆ ತಪ್ಪಿ ಹೋಗಬಹುದು. ಅವರು ಶ್ರಮ ವಹಿಸಿ ಓದಿದ ಪಾಠಗಳ ಬಗ್ಗೆ ಕೇಳದೆ ಇರಬಹುದು. ಆಗ ಅವರಿಗಾಗುವ ನಿರಾಶೆ ಹೇಳತೀರದು. ಹೀಗಾದಾಗ ಕೆಲವು ವಿದ್ಯಾರ್ಥಿಗಳು ಮತ್ತೊಂದು ವರ್ಷ ಅದನ್ನೇ ಬಯಸಿದ್ದು ಸಿಗುವ ನಿರೀಕ್ಷೆಯಲ್ಲಿರುತ್ತಾರೆ.

ಹೆಚ್ಚಿನವರು ಸಿಕ್ಕಿದ್ದರಲ್ಲಿ ಆಯ್ಕೆ ಮಾಡಿಕೊಂಡು ಮುಂದಿನ ಓದಿಗೆ ಸಿದ್ಧರಾಗುತ್ತಾರೆ. ಆ ಪರಿಸ್ಥಿತಿಗೆ ಹೊಂದಿಕೊಂಡ ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗರಿ ಬಿಚ್ಚಿದ ಹಕ್ಕಿಗಳು. ಒಂದು ರೀತಿಯಲ್ಲಿ ಅವರಿಗೀಗ ಪೂರ್ಣ ಸ್ವಾತಂತ್ರ್ಯ ಅವರಾಗಿಯೇ ತೆಗೆದುಕೊಳ್ಳುವ ಸ್ವಾತಂತ್ರ್ಯ ದೊಡ್ಡ ಯುದ್ಧದಲ್ಲಿ ಸಾಹಸದಿಂದ ಗೆದ್ದಂತಹ ಭಾವ, ಇದೀಗ ಮನೆಯವರು ಅಂತವರಿಗೆ ಓದುವಂತೆ ಹೇಳುವಂತೆಯೂ ಇಲ್ಲ. “ಇಷ್ಟು ವರ್ಷ ಹಗಲು-ರಾತ್ರಿ ಓದಿದ್ದೇ ಸಾಕಾಗಿದೆ. ಈಗ ಮತ್ತೇನೂ ಹೇಳಬೇಡಿ. ನಾವೀಗ ದೊಡ್ಡವರಾಗಿದ್ದೇವೆ” ಎಂದು ಗಡಸು ಕಂಠದಲ್ಲಿ ತೀಕ್ಷ್ಯ ಪ್ರತಿಕ್ರಿಯೆ. ಎಣ

ಪೋಷಕರಿಗೆ ತಮ್ಮ ಮಕ್ಕಳು ಹದಿಹರೆಯಕ್ಕೆ ಬಂದಿದ್ದಾರೆ ಎಂಬ ಅರಿವು ಮಾಡಿಕೊಡುತ್ತಾರೆ. ತಮ್ಮ ಮಕ್ಕಳು ಹೀಗೆ ಬದಲಾಗುವ ಪರಿಗೆ ಅಚ್ಚರಿಯ ಜೊತೆ ತಾಯಂದಿರಿಗಂತೂ ಸಣ್ಣ ಅಳುಕು ಭಯದ ಮುಸುಕು ಯಾರಲ್ಲೂ ಬಿಚ್ಚಿಡಲಾಗದ ಆಘಾತ ಯಾಕೋ ಎಲ್ಲವನ್ನು ಅರಿತವರಂತೆ ಮಕ್ಕಳು ಮಾತನಾಡುವ ರೀತಿ ಅವರಿಗೆ ಹಿತವಾಗದು. ಇದೀಗ ಹೈಸ್ಕೂಲ್ ಪಿ.ಯು.ಗಳಂತೆ ಇಡೀ ದಿನ ಪಾಠ, ನೋಟ್ಸ್, ಟೀಚಿಂಗ್ ಎಂದು ಇರುವುದಿಲ್ಲವಲ್ಲ.

ಅಲ್ಲಿ ಇಲ್ಲಿ ಸುತ್ತಾಡಲು ಎಂಜಾಯ್ ಮಾಡಲು ಕೆಲವರಿಗೆ ಅವಕಾಶ. ತಾವು ಕೇಳಿದಷ್ಟು ಹಣ ಕೊಡುವುದು ಪೋಷಕರ ಹೊಣೆ ಎಂದು ಭಾವಿಸುವ ಮಕ್ಕಳು... ಆದರೆ ಎಲ್ಲರೂ ಹೀಗೇ ಎಂದು ಹೇಳಲಾಗದು.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ರಾತ್ರಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾಗ ಆದ ಅನುಭವವಿದು. ಆ ದಿನ ರೈಲಿನಲ್ಲಿ ಅಷ್ಟೊಂದು ಜನಸಂದಣಿ ಇರಲಿಲ್ಲ. ನಮ್ಮ ಸೀಟಿನ ತುದಿಯಲ್ಲಿ ಕುಳಿತಿದ್ದ ತಂದೆಯೊಬ್ಬರು ತಮ್ಮ ಮಗನ ಬಗ್ಗೆ ಮಡದಿಯೊಂದಿಗೆ ಪೋನ್‌ನಲ್ಲಿ ಮಾತನಾಡುತ್ತಿದ್ದರು.ಯಾಕೆ ಹಾಗೆ ಮಾಡಿ ಅವನು ಹೊಟ್ಟೆ ಉರಿಸ್ತಾನೆ; ಯಾರು ಅವನಿಗೆ ಹಣ ಕೊಟ್ಟಿದ್ದು. ಆ ಕಡೆಯ ಪ್ರತ್ಯುತ್ತರದ ನಂತರ; “ಓಹ್.. ಹಾಗಾದ್ರೆ ಫೀಜ್ ಕಟ್ಟೆ ಇಲ್ಲವೇ ಅವನು? ಇರಲಿ ಹಾಗೇ ಚಳಿಯಲ್ಲಿ ಹಾಗೇ ಬಿದ್ದಿರಲಿ ಬಿಡು ಬುದ್ಧಿ ಬರತ್ತೇ”.

ಚಡಪಡಿಸುತ್ತಲೇ ಇದ್ದವರು ಒಂದೆರಡು ನಿಮಿಷದ ನಂತರ, “ಬಾಗಿಲು ತೆಗೆದು ಒಳಗೆ ಕಳ್ಳಿ... ಚಳಿಗೇನಾದ್ರು ಶೀತ, ಜ್ವರ ಬಂದೀತು. ಓಹ್ ಆಗ್ಲೆ ಒಳಗೆ ಬಿಟ್ಟಿದ್ದೀರಾ.. ಊಟ ಏನೂ ಕೊಡೇಡ.. ನಾನು ಬಂದೇಲೆ ವಿಚಾರಕ್ಕೋತೀನಿ.. ಏನು ವಾಂತಿ ಮಾಡಿಕೊಂಡನಾ.. ಏನಾಯ್ತು ಅವನಿಗೆ ಸಹವಾಸ ದೋಷ ಇದ್ದೇಕು.. ಸರಿಯಾಗಿ ಎಚ್ಚರ ಆಗಿದೆಯಾ? ಹಸಿವಂತಾ ಹೇಳಿದರೆ ಸ್ವಲ್ಪ ಹೊತ್ತು ಬಿಟ್ಟು ಊಟ ಕೊಡು... ಬಂದೇಲೆ ಎಲ್ಲಾ ಕೇಳ್ತಿನಿ ಅವನಿಗೆ, ಏನಂದುಕೊಂಡಿದ್ದಾನೆ? ಇನ್ನರ್ಧ ಗಂಟೆಯಲ್ಲಿ ಮನೆಯಲ್ಲಿದ್ದೀನಿ”.

ಆ ತಂದೆಯ ಸಂಕಟ ಮಾತುಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಪೋಷಕರ ತುಡಿತ ಅಂತಃಕರಣ ಮಕ್ಕಳಿಗೆ ಅರ್ಥವಾಗುವುದೇ ಇಲ್ಲವೇನೋ...

ಕಾರಣ ಪೋಷಕರ ಗಮನ ಪದವಿ ಓದುವಾಗ ಹೆಚ್ಚಿನವರು ಹೀಗಾಗಲು ಕಡಿಮೆಯಾಗುವುದರಿಂದ ಇರಬಹುದು ಅಥವಾ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ಟೇಚ್ಛೆಯೇ ವಿಜೃಂಭಿಸಿದಾಗ ಹೀಗಾಗುತ್ತದೆಯೇ?

ಹೀಗೆಯೇ ಕೆಲವು ವಿದ್ಯಾರ್ಥಿನಿಯರಿಗೆ ಇಷ್ಟವಿಲ್ಲದಿದ್ದರೂ ಜೊತೆಯವರ ತಾಳಕ್ಕೆ ಕುಣಿಯಬೇಕಾದ ಪರಿಸ್ಥಿತಿ. ಬೇರೆಯವರೆಲ್ಲರೂ ಖರ್ಚು ಮಾಡುವಾಗ ಇವರಿಗೂ ಖರ್ಚು ಮಾಡಲೇಬೇಕಾದ ಅನಿವಾರ್ಯತೆ, ಹೀಗೆ ಹಣ ವ್ಯರ್ಥವಾಗಿ ಖರ್ಚು ಮಾಡುತ್ತಿರುವ ಬಗ್ಗೆ ಮನಸ್ಸಿಗೆ ಬೇಸರ. ಅಂದು ಪಲ್ಲವಿಯ ಹುಟ್ಟು ಹಬ್ಬವಾದ್ದರಿಂದ ಅಮ್ಮ ಮಾಡಿಕೊಟ್ಟ ಚಂದದ ಬಾದಾಮಿ ಬರ್ಪಿಯನ್ನು ತರಗತಿಯಲ್ಲಿ ಆದಷ್ಟು ಮಂದಿಗೆ ಹಂಚಿದ್ದಳು.

ಪ್ರಸ್ತುತ

“ಚೆನ್ನಾಗಿದೆ” ಎಂದು ಎಲ್ಲರೂ ಕಿತ್ತುಕೊಂಡು ತಿಂದಿದ್ದೂ ಆಯಿತು.

“ಪಾರ್ಟಿಯಾವಾಗ” ಎಂದು ಕೆಲವರು ರೇಗಿಸಿದಾಗ ಬೆಚ್ಚಿಬಿದ್ದಿದ್ದಳು.

“ಈಗ ನಾವೇ ಹೋಟೆಲ್ ಆಯ್ಕೆ ಮಾಡಿ ತಿಳಿಸ್ತೀವಿ. ನೀವು ಬಂದ್ರೆ ಆಯ್ತು. ಮುಂದೊಮ್ಮೆ ನೀವು ಕೊಡಿಸಿದ್ರಾಯ್ತು” ಇಂತಹ ಆಯ್ಕೆ ಹೋಟೆಲೊಂದಿಗೆ “ನನಗೆ ಹಾಗೆಲ್ಲಾ ಅಭ್ಯಾಸ ಇಲ್ಲ. ಬೇಕಾದ್ರೇ ಅಮ್ಮನ ಹತ್ತಿರ ಇನ್ನೊಂದು ಸಲ ಸಿಹಿ ಮಾಡಿಕೊಂಡು ಬರ್ತೀನಿ” ಅವಳ ಮಾತಿಗೆ ಎಲ್ಲರೂ ಪಕಪಕನೆ ನಕ್ಕುಬಿಟ್ಟಿದ್ದರು.

“ನಾವು ಅಭ್ಯಾಸ ಮಾಡಿಸ್ತೀವಿ. ಬೇಕಾದಾಗ ಹಣ ತಂದರೆ ಆಯ್ತು, ಹೋಟೆಲ್‌ಗೆ ಹೋದ್ರೆ ಆಯ್ತು”.

“ಹಾಗೆಲ್ಲಾ ಮನೆಯಲ್ಲಿ ಕೇಳೊಕಾಗೋಲ್ಲ”. ಹುಡುಗಿಯದ್ದು ದೀನ ಧ್ವನಿ.

“ಅದೂ ಆಗಲ್ಲವಾ? ನಾವು ಕರೆದಾಗ ಬಂದು ರೂಢಿ ಮಾಡಿಕೋ, ಮತ್ತೇನೋ ತೊಂದ್ರೆ ತಕೋಬೇಡಾ, ಸದ್ಯ.. ಇಷ್ಟಕ್ಕೇ ಮುಗಿಯಿತಲ್ಲ ಎಂದು ಪಲ್ಲವಿ ನಿರಾಳವಾದರೂ ಮುಂದೆ ಏನೆಲ್ಲಾ ಸಮಸ್ಯೆ ಮಾಡುತ್ತಾರೋ ಎಂಬ ದಿಗಿಲು ಕಾಡುತ್ತಲೇ ಇತ್ತು.

“ಕಾಲೇಜು ಲೈಫಲ್ಲಿ ಇನ್ನೂ ಎಂಜಾಯ್‌ಮೆಂಟ್ ಇಲ್ಲದಿದ್ದರೆ ಹೇಗೆ? ಅವರೆಲ್ಲರ ಮಾತುಗಳೇ ರಿಂಗಣಗುಟ್ಟುತ್ತಿದ್ದವು.

'ನಮ್ಮ ಪಾಡಿಗೆ ನಾವಿರಲು ಸಾಧ್ಯವಿಲ್ಲವೆ' ಎಂಬ ಯೋಚನೆಯಲ್ಲಿ ಹೆಚ್ಚಾಗಿದ್ದ ಮಗಳನ್ನು ತಾಯಿ ವಿಚಾರಿಸಿದಾಗಲೂ ಬಾಯಿಬಿಡಲಿಲ್ಲ ಅವಳು.

ಮರುದಿನ ಪಲ್ಲವಿಗೆ ನಿಕಟಳಾಗಿದ್ದ ರೇಷ್ಮಾ ಸಾಂತ್ವನಿಸುವ ಪ್ರಯತ್ನ ಮಾಡಿದ್ದಳು. “ಹೆದರೋಬೇಡ ಪಲ್ಲವಿ... ಇದೆಲ್ಲಾ ನಿಧಾನವಾಗಿ ಅಭ್ಯಾಸವಾಗುತ್ತೆ. ಅವೆಲ್ಲಾ ಹೋಗೋದು ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ, ನಿನ್ನ ಜೊತೆಯಲ್ಲಿ ನಾನಿದ್ದೀನಿ. ನಮಗೆ ಬೇಕಾಗಿದ್ದು ನಾವು ತಗೊಂಡ್ರೆ ಆಯ್ತು. ಯಾಕೆ ಸುಮ್ಮೆ ಎದುರು ಹಾಕಿಕೊಳ್ಳೋದು. ಮುಂದೆ ಬದುಕಿನಲ್ಲಿ ಏನೆಲ್ಲಾ ಎದುರಿಸಬೇಕೋ ನಿಮ್ಮ ಅಮ್ಮನ ಹತ್ತಿರ ಎಲ್ಲಾ ಮಾತನಾಡು... ಅವರೂ ಅರ್ಥಮಾಡಿಕೊಳ್ತಾರೆ. ಈಗ ನಮ್ಮ ಅಮ್ಮ ಕಾಲಕ್ಕೆ ತಕ್ಕಂತೆ ಬದಲಾಗಿದ್ದಾರೆ. ಅಪರೂಪಕ್ಕೆ ಕ್ಯಾಕ್‌ಟೈಲ್ ತಗೋತೀನಿ. ಅಂತಹ ಸಂದರ್ಭ ಬಂದಾಗ ಮಾತ್ರ ಎಲ್ಲರ ಜೊತೆ ಚೆನ್ನಾಗಿ ಮಾತನಾಡ್ತೀನಿ. ಇನ್ನೆಲ್ಲೋ ಚಾಟಿಂಗ್, ಪಿಕ್ಚರ್, ಟೂರ್ ಅಂತ ಕರೆದರೆ ಖಂಡಿತ ಹೊಗೋಲ್ಲಾ ಸಬೂಬು ಹೇಳ್ತಿನಿ. ನಾನೂ ಅಪರೂಪಕ್ಕೆ ಪಾರ್ಟಿ ಕೊಡಿಸೋದ್ರಾದ್ರೆ ಆದಷ್ಟೂ ಸೇಫ್ ಆಗಿರೋ ಹೋಟೆಲ್ಲನ್ನೇ ಆರಿಸ್ತಿನಿ. ಅವರವರಿಗೆ ಬೇಕಾಗಿದ್ದು ಅವರವರು ತಗೋತಾರೆ. ಲಿಮಿಟ್ ಮೀರದ ಹಾಗೆ ಅಂತ ಎಚ್ಚರಿಸ್ತೀನಿ. ಇದೀಗ ನಮ್ಮಂತಹ ಯುವತಿಯರ ಪಾಡೇ ಹಾಗೆ. ಏಕಾಂಗಿಯಾಗಿ ಒಬ್ಬರೇ ಇರೋದು ಆಗಿದೆ. ಆ ಕಡೆ ಸೇರಿಕೊಳ್ಳೋಕು ಆಗದ ಎಡಬಿಡಂಗಿತನ. ನಾವೂ ಗುಂಪಿನಲ್ಲಿ ಗೋವಿಂದ ಆಸ್ಟೇಕು. ಅನ್ನೋದೇನೋ ಸರಿ ಆದ್ರೆ ನಮ್ಮ ಪಾಡಿಗೆ ನಾವು ಅಂತ ರೆಸ್ಟೋರೆಂಟ್‌ಗೆ ಹೋಗಬೇಕೆ? ಅನ್ನೋ ವಿಷಯವೇ ತಲೆ ತುಂಬಾ ತುಂಬಿಕೊಂಡಿದೆ.”

ಇದೀಗ ಪಲ್ಲವಿಗೆ ತುಸು ಹಗುರಾಯಿತು. ಅಮ್ಮನಿಗೆ ಎಲ್ಲವನ್ನು ಹೇಳೆ ಬಿಡಬೇಕು. ಎಂಬ ನಿರ್ಧಾರ ಗಟ್ಟಿಯಾಯಿತು. ಅಮ್ಮ ಅಪ್ಪ ತನ್ನ ಒಳತಿಗಾಗಿ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂಬುದನ್ನು ಅವಳು ಬಲ್ಲಳು. ಅಪ್ಪ ಅಮ್ಮ, ಅಜ್ಜ, ಅಜ್ಜಿ, ಎಲ್ಲರೂ ಸುಸಂಸ್ಕೃತರೂ. ಎಲ್ಲರದೂ ಸಾತ್ವಿಕ ಸ್ವಭಾವ. ಇಂತಹವರ ಮನೆಯ ಯುವತಿ ಬಾರ್‌ಗೆ ಹೋಗುವುದು ಸರಿಯಾದೀತೆ? ಪಲ್ಲವಿಗೆ ಅಮ್ಮನೇ ಸರ್ವಸ್ವ ತನ್ನ ದಿನಚರಿ ಅಮ್ಮನಿಗೆ ತೆರೆದ ಪುಸ್ತಕದಂತೆ. ಎಲ್ಲವನ್ನೂ ಹೇಳಿ ಬಿಡಬೇಕು ಎಂಬ ನಿರ್ಧಾರ ಗಟ್ಟಿಯಾಯಿತು.

ಕಾಲೇಜಿಗೆ ಹೋಗುವುದೇ ಬೇಡ ಎಂದು ನಿಲ್ಲಿಸಿಬಿಟ್ಟರೆ ಎಂಬ ಅಳುಕು ತರಗತಿಯ ಮತ್ತೊಬ್ಬ ಸಹಪಾಠಿ ರಮ್ಯಾ ತನ್ನನ್ನು ಛೇಧಿಸಿದ್ದು ನೆನಪಾಗಿತ್ತು.

“ನಾನು ಕಾಲೇಜಿನಲ್ಲಿ ಕೂತ್ಕಂಡಿದ್ದು ನಿಂತ್ಕಂಡಿದ್ದು, ಅಲ್ಲಿ ಇಲ್ಲಿ ತಿರುಗಾಡಿದ್ದು,ತಿಂದುದ್ದು ಎಲ್ಲವನ್ನೂ ಅಪ್ಪ ಅಮ್ಮನಿಗೆ ಹೇಳೋಕೇ ಹೋಗೋಲ್ಲ. ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಕೇಳೋ ಅಷ್ಟು ಅಪ್ಪ ಅಮ್ಮನಿಗೆ ತಾಳ್ಮೆಯೂ ಇಲ್ಲ. ಸಮಯವೂ ಇಲ್ಲ. ಅಷ್ಟಕ್ಕೂ ನಾವೇನು ಚಿಕ್ಕ ಮಕ್ಕಳಾ? ನಿನ್ನ ಮಿತಿ ನೀನು ನೋಡಿಕೋ ಅಂತ ಅಮ್ಮ ಹೇಳಿಬಿಟ್ಟಿದ್ದಾರೆ. ನಾನಂತೂ ಏನೂ ಚಿಂತೆ ಇಲ್ಲದೆ ನಿರಾಳವಾಗಿದ್ದೀನಿ. ಈಗಲ್ಲದೆ ಇನ್ನು ಯಾವಾಗ ಎಂಜಾಯ್ ಮಾಡೋದು?

ಅಪ್ಪ ಅಮ್ಮನಿಗೆ ಮಕ್ಕಳ ಹತ್ತಿರ ಮಾತನಾಡಲೂ ಸಮಯವಿಲ್ಲವೆಂದರೆ ಅಮ್ಮನ ಹತ್ತಿರ ಎಲ್ಲವನ್ನೂ ಹೇಳಿಕೊಳ್ಳಲು ಸಂಕೋಚ ಏಕೆ! ಅಮ್ಮ ತನ್ನ ವಿಷಯವನ್ನೆಲ್ಲಾ ಕೇಳಿಕೊಳ್ಳುವುದು ಸ್ಪಂದಿಸುವುದು ತುಂಬಾ ಸಮಾಧಾನದ ಸಂಗತಿ ಎನ್ನಿಸಿತು ಪಲ್ಲವಿಗೆ ಎಲ್ಲವನ್ನೂ ಹೇಳಿಕೊಂಡಾಗ ಕಂಗಳು ತುಂಬಿ ಬಂದಿದ್ದವು. ಅಮ್ಮನಿಗೂ ಇವಳ ಕಷ್ಟದ ಅರಿವಾಗಿತ್ತು.

“ನನಗೆ ನಿನ್ನ ಬಗ್ಗೆ ಪೂರ್ತಿ ನಂಬಿಕೆಯಿದೆ ಪಲ್ಲವಿ. ನೀನು ಮುಂದೆ ಸಾಧಿಸಬೇಕಾಗಿರುವುದೂ ಬಹಳವೇ ಇದೆ. ನಿನ್ನಲ್ಲಿ ನಿನಗೆ ಆತ್ಮವಿಶ್ವಾಸವಿರಲಿ. ಪರಿಸ್ಥಿತಿ ನೋಡಿಕೊಂಡು ನಿಭಾಯಿಸು ಅಷ್ಟೇ! ಹೇಗೂ ಎಲ್ಲವನ್ನೂ ಮನಸ್ಸು ಬಿಚ್ಚಿ ನಾವು ಮಾತನಾಡಿಕೊಳ್ಳುತ್ತೇವಲ್ಲ”.

ಪ್ರಸ್ತುತ

ಅಮ್ಮ ತನ್ನ ಮೇಲಿಟ್ಟ ನಂಬಿಕೆಯ ಅರಿವಾಗಿ ಅಭಿಮಾನವೆನ್ನಿಸಿತು. ಹೌದು ಕಾಲೇಜಿನಲ್ಲಿ ತಾನೊಬ್ಬಳೇ ಒಂಟಿಯಾಗಿ ಇರಲಾಗುವುದಿಲ್ಲ. ಆದರೆ ತನ್ನಂತಹುದೇ ಪರಿಸ್ಥಿತಿಯಲ್ಲಿ ಎಷ್ಟೋ ಮಂದಿ ಇದ್ದಾರು. ತನ್ನ ನಿಲುವು ತಿಳಿದಾಗ ಅವರೂ ತನ್ನೊಂದಿಗೆ ಸಖ್ಯ ಬೆಳೆಸಬಹುದು. ಸುಮ್ಮನೆ ಯಾರನ್ನೂ ಎದುರು ಹಾಕಿಕೊಳ್ಳದಂತೆ ನಾಜೂಕಾಗಿರಬೇಕು. ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ನಿಧಾನವಾಗಿ ತೆಗೆದುಕೊಳ್ಳುವಂತೆ ಪರಿಸ್ಥಿತಿಯನ್ನು ನಿಭಾಯಿಸಿದರಾಯಿತು. ಮೊದಲು ಪಾಠ, ಓದೂ, ವಿದ್ಯೆಯನ್ನು ಗಮನ ಕೊಡಬೇಕು. ಮತ್ತೆಲ್ಲವನ್ನೂ ನಗಣ್ಯವೆಂದು ನಿರ್ಲಕ್ಷಿಸಬೇಕು. ಹಿಗೊಂದು ನಿರ್ಧಾರ ಅವಳ ಮನಸ್ಸಿಗೆ ನೆಮ್ಮದಿಯನ್ನು ತಂದಿತ್ತು.

ಕಾಲೇಜುಗಳಲ್ಲಿನ ಅನೇಕ ಪಲ್ಲವಿಯರ ಕಥೆಯಿದು. ಕಾಲೇಜುಗಳ ಬಳಿಯೇ ಇರುವ ಹತ್ತಾರು ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ನೋಡಿದಾಗ ಕಸಿವಿಸಿಯಾಗುತ್ತದೆ. ಅಲ್ಲಿ ಇನ್ನೇನೋ ಕೊಂಡಿ ಸಿಕ್ಕಿಬಿಟ್ಟರೆ ಎಂಬ ಭಯವಾಗುತ್ತದೆ. ಅಂತಹವರಿಗಾಗಿಯೇ ಕಾಯುತ್ತಿರುವ ಹಲವಾರು ಮಂದಿ ಸುತ್ತಲೂ ಕಣ್ಣಿಟ್ಟಿರುತ್ತಾರೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಆತ್ಮ ಸ್ಥೆರ್ಯ, ವಿಶ್ವಾಸ, ಧೈರ್ಯ, ನೈತಿಕತೆ ಹೆಚ್ಚಿದರೆ ಆಗ ಛೇಡಿಸುವವರ ಅಪಹಾಸ್ಯ ಮಾಡುವವರ ಸೊಲ್ಲು ಅಡಗುತ್ತದೆ. ಅವರೆಲ್ಲರೂ ತಾವೇ ಪರಾಮರ್ಶೆ ಮಾಡುವಂತಾದರೆ ಭಾವೀ ಪ್ರಜೆಗಳ ಭವಿಷ್ಯದೊಂದಿಗೆ ದೇಶಕ್ಕೂ ಉತ್ತಮ ಭವಿಷ್ಯ ಇರುತ್ತದಲ್ಲವೇ.