Hindu Vani
Index
ಕ್ರಾಂತಿಯುಗ
ಕ್ರಾಂತಿಯ ಕಣಕ್ಕೆ ಭಗತ್ ಸಿಂಗ್- ಆಜಾದ್ ಪ್ರವೇಶ
ಕಾಕೋರಿ ರೈಲು ಪ್ರಕರಣದ ನಂತರ ಬಂಗಾಳದ ಅನುಶೀಲನ ಸಮಿತಿಯ ಮೇಲೆ ಸತತ ಪೊಲೀಸ್ ಕಾರ್ಯಾಚರಣೆಯು ನಡೆಯಿತು. 1926ರ ಹೊತ್ತಿಗೆ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯು ಹಿರಿಯ ನಾಯಕರೆಲ್ಲರನ್ನು ಕಳೆದುಕೊಳ್ಳಬೇಕಾಯಿತು. ಉಳಿದ ತಂಡಕ್ಕೆ ಕಿರಿಯರೇ ನೇತೃತ್ವ ವಹಿಸಿಕೊಳ್ಳಬೇಕಾಯಿತು. ಅವರಲ್ಲಿ ಸುಖದೇವ ಥಾಪರ್, ಭಗತ್‌ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಪ್ರಮುಖರಾಗಿದ್ದರು. ಆಗ ಚಂದ್ರಶೇಖರ ಆಜಾದನ ವಯಸ್ಸು 20 ಆಗಿದ್ದರೆ ಉಳಿದಿಬ್ಬರು ಆಗಿನ್ನೂ 19 ವಯಸ್ಸಿನವರು ಅಷ್ಟೇ. ಚಂದ್ರಶೇಖರ ಆಜಾದ್ 1906ರಲ್ಲಿ ಜನಿಸಿದ್ದನು. ಮನೆತನದ ಹೆಸರು ಸೇರಿದರೆ ಅವನು ಚಂದ್ರಶೇಖರ ತಿವಾರಿ. ಈಗಿನ ಮಧ್ಯ ಪ್ರದೇಶದ ಸಣ್ಣ ರಾಜಸಂಸ್ಥಾನ ಅಲಿರಾಜಪುರದ ಭಾಭಾ ಅವನು ಹುಟ್ಟಿದ ಊರು. 1899ರ ಬರಗಾಲದ ಕಾಲದಲ್ಲಿ ಆ ಕುಟುಂಬವು ತನ್ನ ಊರನ್ನು ಬಿಟ್ಟು ಗುಳೆ ಹೊರಟಿತು.
ಆಜಾದ್ 14ನೇ ವಯಸ್ಸಿನಲ್ಲಿ ತಾನೊಬ್ಬನೇ ಮುಂಬಯಿ ರೈಲನ್ನು ಹತ್ತಿ ಹೊರಟವನು ಅಲ್ಲಿ ಹೋಟೆಲೊಂದರಲ್ಲಿ ಪಾತ್ರೆಗಳನ್ನು ತೊಳೆಯುವ ಕೆಲಸಕ್ಕೆ ಸೇರಿದನು. ನಂತರ ಬಂದರಿನಲ್ಲಿ ಹಡಗುಗಳಿಗೆ ಬಣ್ಣ ಹಾಕುವ ಕೆಲಸ ಮಾಡಿದನು. ಈ ಕಠಿಣ ಕೆಲಸಗಳು ಅವನಿಗೆ ಜೀವನದ ಅನುಭವಗಳನ್ನು ಕೊಟ್ಟವು. ಅವನು ಅದೊಂದು ದಿನ ತಾನು ಕೆಲಸ ಮಾಡುತ್ತಿದ ಜಾಗದಿಂದ ಇನ್ನೊಬ್ಬನೊಡನೆ ಕಾಶಿಗೆ ಹೊರಟ ರೈಲನ್ನು ಹತ್ತಿದನು. ಅಲ್ಲಿಯ ಪಾಠಶಾಲೆಗೆ ಸೇರಿ ಸಂಸ್ಕೃತ ಅಭ್ಯಾಸ ಮಾಡಲು ಪ್ರಾರಂಭಿಸಿದನು. ಪಾಠಶಾಲೆಯಲ್ಲಿ ಉಳಿದುಕೊಳ್ಳಲು ಜಾಗ ಮತ್ತು ಊಟ ಸಿಗುತ್ತಿತ್ತು. ಅದರೊಂದಿಗೆ ವಾರಣಾಸಿಯ ಬಿಸಿಬಿಸಿ ಸ್ವಾತಂತ್ರ್ಯ ಚಳುವಳಿಯ ಸಂಪರ್ಕವೂ ಅವನಿಗೆ ಸಿಕ್ಕಿತು.
ಆ ಕಾಲದಲ್ಲಿ ಸಹಜವೆನ್ನುವಂತೆ ಹಲವು ವಿದ್ಯಾರ್ಥಿಗಳಂತೆ ಚಂದ್ರಶೇಖರನೂ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾದನು. ಮ್ಯಾಜಿಸ್ಟ್ರೇಟ ಮುಂದೆ ಅವನನ್ನು ನಿಲ್ಲಿಸಿದಾಗ ಅವನು ತನ್ನ ಹೆಸರನ್ನು ಆಜಾದ್ ಎಂದನು. ಅಂದರೆ ಸ್ವಾತಂತ್ರ್ಯ ಎಂದು ಅರ್ಥ. ಅದುವೆ ಮುಂದೆ ಅವನ ಹೆಸರೇ ಆಗಿ ಬಿಟ್ಟಿತು. ನ್ಯಾಯಾಧೀಶರು ಆಜಾದ್‌ಗೆ 15 ಚಾಟಿ ಏಟುಗಳ ಶಿಕ್ಷೆಯನ್ನು ವಿಧಿಸಿದನು. ಪ್ರತಿ ಚಾಟಿ ಏಟನ್ನು ತಿನ್ನುವಾಗ ಪ್ರತಿ ಏಟಿಗೂ 'ವಂದೇ ಮಾತರಂ' ಎಂದು ಘೋಷಣೆ ಹಾಕುತ್ತಲೇ ಇದ್ದ ಬಾಲಕನ ಕುರಿತು ಪತ್ರಿಕೆಗಳು ಮೆಚ್ಚಿ ಬರೆದವು. ಹೀಗಾಗಿ ಆಗಲೇ ಅವನು ಪ್ರಸಿದ್ಧನಾಗಿ ಬಿಟ್ಟನು.
1923ರಲ್ಲಿ ಹಿರಿಯ ಕ್ರಾಂತಿಕಾರಿ ಸಚಿಂದ್ರನಾಥ ಸನ್ಯಾಲ್ ವಾರಣಾಸಿಯಲ್ಲಿ ತಮ್ಮ ಗುಪ್ತ ಕ್ರಾಂತಿಕಾರಿ ಚಟುವಟಿಕೆಯ ಕೇಂದ್ರವನ್ನು ಪ್ರಾರಂಭಿಸಿದ್ದರು. ಅದು ಕಲ್ಯಾಣ ಆಶ್ರಮವೆನ್ನುವ ಧಾರ್ಮಿಕ ಸಂಸ್ಥೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಿತು. ಕಾಕೋರಿ ಪ್ರಕರಣದಲ್ಲಿ ಮುಂದೆ ಗಲ್ಲಿಗೆ ಏರಿದ ರಾಜೇಂದ್ರ ಲಾಹಿರಿಯವರು ಆಜಾದನನ್ನು ಇಲ್ಲಿಯೇ ಭೇಟಿಯಾಗಿ ತಮ್ಮೊಂದಿಗೆ ಸೇರಿಸಿದ್ದರು. ಮುಂದಿನ 2 ವರ್ಷಕಾಲದಲ್ಲಿ ಈ ಕಿಶೋರನು ಕ್ರಾಂತಿಕಾರಿಯಾಗಿ ಮಾರ್ಪಟ್ಟನು.
ಕಾಕೋರಿಯ ಪ್ರಕರಣದಲ್ಲಿ ಸಂಪರ್ಕದಲ್ಲಿದ್ದ ಆಜಾದ್ ಅಲ್ಲಿಂದ ಝಾನ್ಸಿಗೆ ತಪ್ಪಿಸಿಕೊಂಡರು. ಅಲ್ಲಿ ಸ್ಪಲ್ಪ ಸಮಯ ವಾಹನಗಳ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಂದ ಕಾಡು ಪ್ರದೇಶದಲ್ಲಿದ್ದ ದೇವಸ್ಥಾನವೊಂದರಲ್ಲಿ ಸಂನ್ಯಾಸಿಯಂತೆ ದಿನ ದೂಡಿದರು. ಆಗ ಒಂದು ಘಟನೆ ನಡೆಯಿತು. ಆ ಆರಣ್ಯಕ್ಕೆ ಒಂದು ದಿನ ಚಾರ್ಚ್ ಸಂಸ್ಥಾನದ ರಾಜನು ಬೇಟೆಗಾಗಿ ಬಂದಿದ್ದನು. ಅವನೊಂದಿಗೆ 'ಸಾಧು' ಆಜಾದರೂ ಸೇರಿಕೊಂಡರು. ಕಣ್ಣಿಗೆ ಬಿದ್ದ ಮೃಗದ ಮೇಲೆ ರಾಜನು ಕೋವಿಯ ಗುಂಡು ಹಾರಿಸಿದಾಗ ಆ ಪ್ರಾಣಿಯು ತಪ್ಪಿಸಿಕೊಂಡಿತು. ಜೊತೆಗಿದ್ದ ಇಬ್ಬರು ಬೇಟೆಗಾರರ ಗುರಿಗೂ ಅದು ಸಿಗಲಿಲ್ಲ. ತಮಾಷೆಗೆಂದು ಪಿಸ್ತೂಲನ್ನು ತೆಗೆದುಕೊಂಡು ಈ ಸಾಧುವು ಗುಂಡು ಹಾರಿಸಿದಾಗ ಆ ಮೃಗವು ಸತ್ತು ಬಿದ್ದಿತು. ಈ ಸಾಧುವು ಸಾಮಾನ್ಯನಲ್ಲವೆಂದು ಆ ರಾಜನು ತಿಳಿದುಕೊಂಡರೂ ಅದನ್ನು ಅವನು ಎಲ್ಲೂ ಬಹಿರಂಗ ಪಡಿಸಲಿಲ್ಲ.
1927ರ ಹೊತ್ತಿಗೆ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯ ಹಲವು ಅನುಭವಿ ನಾಯಕರು ಒಂದೇ ಗಲ್ಲಿಗೆ ಏರಿದ್ದರು. ಅಥವಾ ಕಾರ್ಯಾಚರಣೆಯಲ್ಲಿ ಹತರಾಗಿದ್ದರು. ಇನ್ನು ಹಲವರು ದೀರ್ಘಕಾಲದ ಸೆರೆಮನೆಯ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ತಂಡಕ್ಕೆ ನಾಯಕರ ಕೊರತೆಯು ಕಾಡುತ್ತಿದ್ದಿತು. ಆಜಾದ್ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಸೆರೆಮನೆಯಿಂದ ಬಿಡುಗಡೆಯಾಗಿದ್ದರೂ ತೀವ್ರ ನಿರ್ಬಂಧದ ಶರತ್ತುಗಳಿಗೆ ಒಳಪಟ್ಟಿದ್ದ ಸಾವರಕರರನ್ನು ಭೇಟಿಯಾದರು. ಆ ಭೇಟಿಯು ಇಬ್ಬರಿಗೂ ಅತಿ ಅಪಾಯಕಾರಿಯಾದ ಪ್ರಸಂಗವಾಗಿದ್ದಿತು. ಹಿರಿಯ ಕ್ರಾಂತಿಕಾರಿಯಿಂದ ತರುಣ ಆಜಾದ ಪ್ರಭಾವಿತರಾಗಿ ಹಿಂದಿರುಗಿದುದು ಬಹು ದೊಡ್ಡ ಘಟನೆಯಾಗಿ ಅದು ಮುಂದಿನ ವರ್ಷಗಳಲ್ಲಿ ಪರಿಣಾಮ ಬೀರಿತು. ಮುಂದಿನ ಕಾರ್ಯಚರಣೆಗೆ ಬೇಕಾದ ಆರ್ಥಿಕ ಬೆಂಬಲವನ್ನು ಪಡೆದುಕೊಳ್ಳಲು ಆಜಾದ್ ಮೊದಲು ಪ್ರಯತ್ನಿಸಿದರು. ಇದಕ್ಕೆ ಆಗಿನ ದೊಡ್ಡ ದೊಡ್ಡ ನೇತಾರರೂ ಕೈ ಜೋಡಿಸಿದರು. ಪುರುಷೋತ್ತಮ ದಾಸ ಟಂಡನ್, ಮೋತಿಲಾಲ ನೆಹರೂ, ಸಾಹಿತಿ ಶರತ್ ಚಂದ್ರ ಚಟರ್ಜಿ ಯವರೂ ಈ ನೆರವಿನ ಪ್ರಯತ್ನದಲ್ಲಿ ಭಾಗಿಯಾಗಿದ್ದರು.
ಆಜಾದರ ತಂಡದಲ್ಲಿ ಆ ಸಮಯದಲ್ಲಿ ಬಂದವರು ಭಗತ್ ಸಿಂಗ್. ಅವರ ತಂದೆ ಕಿಶನ್ ಸಿಂಗ್. ಕಿಶನ್ ಸಿಂಗ್ ಸ್ವಾತಂತ್ರ್ಯ ಯೋಧ ಅಜಿತಸಿಂಗರ ಸಹೋದರ. ಭಗತ್‌ಸಿಂಗ್ ಜನಿಸಿದ್ದು 1907ರಲ್ಲಿ. ಅವರ ಊರು ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬಿನ ಲ್ಯಾಲ್‌ಪುರದ ಬಂಗಾ. ಇಡೀ ಕುಟುಂಬವು ರಣಜಿತ ಸಿಂಹನ ಸರದಾರ ಮನೆತನಕ್ಕೆ ಸೇರಿದ ಶ್ರೀಮಂತ ಜಮಿನ್ದಾರರಾಗಿದ್ದಿತು. ಸಿಖ್ ಸಂಪ್ರದಾಯಕ್ಕೆ ಸೇರಿದ್ದರೂ ಮನೆಯಲ್ಲಿ ಆರ್ಯ ಸಮಾಜದ ಪ್ರಭಾವವು ಪ್ರಬಲವಾಗಿದ್ದಿತು. ಶ್ರೀಮಂತ ಮನೆಗಳ ಮಕ್ಕಳು ಓದುವ ಖಾಲಾ ಶಾಲೆಗೆ ಭಗತನನ್ನು ಸೇರಿಸದೆ ಅವನನ್ನು ಲಾಹೋರಿನ ದಯಾನಂದ ಆಂಗ್ಲೋ ವೇದಿಕ್ ಶಾಲೆಗೆ ತಂದೆ ಸೇರಿಸಿದ್ದರು. ಖಾಲಾ ಶಾಲೆಯಲ್ಲಿ ಬ್ರಿಟಿಷರಿಗೆ ವಿಧೇಯರಾಗುವ ಶಿಕ್ಷಣ ನೀಡುವರೆಂದು ಕಿಶನ್ ಸಿಂಗ್ ಭಾವಿಸಿದ್ದರು. ನಂತರ ಭಗತ್, ಲಜಪತ್ ರೈ ಮತ್ತು ಭಾಯಿ ಪರಮಾನಂದರು ಸ್ಥಾಪಿಸಿದ ನ್ಯಾಶನಲ್ ಕಾಲೇಜಿಗೆ ಸೇರಿದರು. ಭಗತ್ ಮುಂದಿನ ಕ್ರಾಂತಿಕಾರಿ ಚಟುವಟಿಕೆಯ ಪ್ರಾಥಮಿಕ ಪಾಠಗಳನ್ನು ಪಡೆದುದು ಇದೇ ಸಂಸ್ಥೆಯಲ್ಲಿ. 1922ರಿಂದ ಎರಡು ವರ್ಷಕಾಲ ಸಚೀಂದ್ರ ನಾಥ ಸನ್ಯಾಲ್ ಲಾಹೋರಿಗೆ ಭೇಟಿ ಕೊಡುತ್ತಲ್ಲಿದ್ದರು. ಅದಾಗಲೇ ಅಸಹಕಾರ ಚಳುವಳಿಯು ಕುಸಿದು ಬಿದ್ದಿತ್ತು. ಭ್ರಮ ನಿರಸನಗೊಂಡ ಪಂಜಾಬಿನ ತರುಣರು ಸನ್ಯಾಲರ ವಿಚಾರಗಳಿಗೆ ಮನಗೊಡಲು ಪ್ರಾರಂಭಿಸಿದರು. ಸನ್ಯಾಲರ ಸೆರೆಮನೆವಾಸದ ಅನುಭವಗಳ 'ಬಂದೀ ಜೀವನ' ಪುಸ್ತಕದ ಪ್ರತಿಗಳು ವಿದ್ಯಾರ್ಥಿಗಳ ನಡುವೆ ಬಹಳ ಜನಪ್ರಿಯವಾಗಿದ್ದವು. ಆ ಮೂಲಕ ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿಯು ಲಾಹೋರಿನಲ್ಲಿ ಪ್ರಾರಂಭವಾಯಿತು.
ಹೆಚ್. ಆರ್. ಎ. (ಹಿಂದುಸ್ಥಾನ್ ರಿಪಬ್ಲಿಕನ್ ಆರ್ಮಿ)ಯನ್ನು ಸೇರಿದ ಭಗತ್ ಸಿಂಗ್ ಅಲಹಾಬಾದ್, ಕಾನ್‌ಪುರ, ಆಲೀಫರ್‌ಗಳಿಗೆ ಭೇಟಿ ನೀಡಿದರು. ಕಾಕೋರಿ ಘಟನೆಯ ನಂತರ ಆಜಾದರಂತೆ ಭಗತ್ ಕೂಡಾ ಮುಂದಿನ ದಾರಿಕಾಣದೆ ಪಂಜಾಬಿಗೆ ಹಿಂದಿರುಗಿದರು. 1926ರಲ್ಲಿ ರಾಮಲೀಲಾ ಮೆರವಣಿಗೆಯ ಮೇಲೆ ಒಂದು ಬಾಂಬ್ ಎಸೆಯಲಾಯಿತು. ಪೊಲೀಸರು ಇದೊಂದು ಕ್ರಾಂತಿಕಾರಿಗಳ ಕೃತ್ಯವೆಂದುಕೊಂಡರು. ಭಗತ್ ಸಿಂಗ್ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟರು. ಮುಂದೆ ಸಾಕ್ಷ್ಯಧಾರಗಳಿಲ್ಲದೆ ಬಿಡುಗಡೆಗೊಂಡರೂ ಭಗತ್‌ಸಿಂಗ್ ಪೊಲೀಸ್ ಕಣ್ಣಾವಲಿನಲ್ಲಿ ಇರುವರೆಂದು ಈ ಪ್ರಸಂಗದಿಂದ ತಿಳಿದು ಬಂದಿತು.
(ಮುಂದುವರೆಯುವುದು)
ಗಣೇಶ ಮೂರ್ತಿ ವಿತರಣೆ
-- ಸುನಿಲ್ ಕುಮಾರ್, ಸಾಮಾಜಿಕ ಸಮರಸತಾ ವಿಭಾಗ, ಸಾಮರಸ್ಯ ಪ್ರಮುಖ್, ಯಲಹಂಕ ಜಿಲ್ಲೆ
ಜಿಲ್ಲೆಯ ಸಾಮಾಜಿಕ ಸಮರಸತಾ ವಿಭಾಗದಿಂದ ಜಿಲ್ಲೆಯ ವಿವಿಧ ಉಪೇಕ್ಷಿತ ಬಂಧುಗಳ ಕಾಲೋನಿ (ಸೇವಾ ಬಸ್ತಿ) ಗಳಲ್ಲಿ 108 ಮನೆಗಳಿಗೆ ಗಣೇಶ ಮೂರ್ತಿಯ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಸಮಾಜದ ಎಲ್ಲ ಸದಸ್ಯರಲ್ಲಿ ಉತ್ತಮ ಬಾಂಧವ್ಯ ಮತ್ತು ಒಗ್ಗಟ್ಟಿನ ಭಾವನೆಯನ್ನು ಮೂಡಿಸುವುದು, ಇದರ ಉದ್ದೇಶ. ಗಣೇಶ ಮೂರ್ತಿಯ ವಿತರಣೆಯಿಂದ ಸೇವಾಬಸ್ತಿಗಳಲ್ಲಿ ಸಂಭ್ರಮ, ಸಡಗರ ಮತ್ತು ಸಂತಸ ಉಂಟುಮಾಡಿತು. ಮಕ್ಕಳು ತುಂಬಾ ಉತ್ಸಾಹದಿಂದ ಗಣೇಶ ಮೂರ್ತಿಯನ್ನು ತಮ್ಮ ಮನೆಗೆ ಆಹ್ವಾನಿಸಿದರು. ಇದರಿಂದ ಸಮಾಜದ ಎಲ್ಲಾ ವರ್ಗಗಳಲ್ಲಿ ಅನ್ನೋನ್ಯತೆಯ ಭಾವನೆ ಉಂಟಾಯಿತು. ಇಂತಹ ಕಾರ್ಯಕ್ರಮಗಳು ಹಿಂದೂ ಸಮಾಜವನ್ನು ಸದಾ ಜಾಗೃತವಾಗಿರಿಸುತ್ತವೆ. ಇದರ ಫಲಶ್ರುತಿಯಾಗಿ ಇಡೀ ಯಲಹಂಕ ಜಿಲ್ಲೆಯ ವಿವಿಧ ಸೇವಾ ಬಸ್ತಿ ಗಳು, ಆ ಸೇವಾ ಬಸ್ತಿಯಲ್ಲಿರುವ ಗಣ್ಯರ ಸಂಪರ್ಕವಾಯಿತು. ವಿಶ್ವ ಹಿಂದೂ ಪರಿಷದ್ ಕಾರ್ಯಗಳು ಅದರ ಉದ್ದೇಶ ಮತ್ತು ದೇಶ ಸೇವೆಗೆ ಮಾಡಿದ ಅನೇಕ ಕೆಲಸಗಳನ್ನು ಜನರಿಗೆ ತಿಳಿಸಲಾಯಿತು.