Hindu Vani
Index
ಸಂಪಾದಕೀಯ
ಕತ್ತಲು ಕಳೆದ ಧರ್ಮಸ್ಥಳ
ಭಾರತದ ಸಮಸ್ಯೆಗಳಿಗೆ ಧರ್ಮವೇ ಕಾರಣವೆಂಬ ಕಾರ್ಲ್‌ಮಾರ್ಕ್ಸ್‌ನ ಮೂಢ ನಂಬಿಕೆಯನ್ನು ಪ್ರಚಾರಮಾಡುವ ಗುತ್ತಿಗೆಯನ್ನು ಕೆಲವು ವಿಚಾರವ್ಯಾಧಿಗಸ್ಥರು, ನಿವೃತ್ತ ನ್ಯಾಯಾಧೀಶರಂತವರಷ್ಟೇ ಅಲ್ಲದೆ ಕೆಲವು ರಾಜ್ಯ ಸರ್ಕಾರಗಳೂ ಕೂಡಾ ಪಡೆದುಕೊಂಡಿವೆ. ಇಷ್ಟಲ್ಲದೆ ಇವರೊಂದಿಗೆ ಸಮಯಸಾಧಕ ಹಿತಾಸಕ್ತ ವ್ಯಕ್ತಿಗಳೂ ಸೇರುತ್ತವೆ. ಎಂಟುನೂರು ವರ್ಷಗಳ ವರ್ಚಸ್ವೀ ಇತಿಹಾಸವಿರುವ ಧರ್ಮಸ್ಥಳ ಕ್ಷೇತ್ರವನ್ನು ಈ ರೀತಿಯ ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸವನ್ನು ಕದಡಿಸುವ ಪ್ರಯೋಗ ಶಾಲೆಯಾಗಿ ಆರಿಸುವಲ್ಲಿ ಮಾತ್ರ ಈ ಅರಾಜಕ ಶಕ್ತಿಗಳು ಎಡವಿಬಿಟ್ಟವು. ಮೊದಲ ಬಾರಿಗೆ ದೇವಸ್ಥಾನವೊಂದನ್ನು ಸಮಾಜದ ಖಳನಾಯಕನನ್ನಾಗಿ ಬಿಂಬಿಸುವ ಪ್ರಯತ್ನವು ನಡೆಯಿತು. ಈ ವಿಚಾರವನ್ನು ಜಗತ್ತಿನಾದ್ಯಂತ ಹಬ್ಬಿಸಲು ಮತ್ತು ಅದನ್ನು ನಂಬಿಸಲು ಬೇಕಾದ ಊಹಾಪೋಹಗಳನ್ನೂ ಕಪೋಲಕಲ್ಪಿತ ಕತೆಗಳನ್ನೂ ಅದಕ್ಕೆ ಜೋಡಿಸಲಾಯಿತು.
 
                                                    ಇಂತಹ ಬೆಳವಣಿಗೆಗಾಗಿಯೇ ಕಾದು ಕುಳಿತ ಕ್ರೈಸ್ತ ಮತಪ್ರಚಾರಕ ಮಾರೀಚರೊಂದಿಗೆ ಜೆಹಾದಿ ಶಕ್ತಿಗಳು ಕೈಜೋಡಿಸಿದವು. ಬಿ.ಬಿ.ಸಿ, ಅಲ್ ಜಜಿರಾಗಳಂತಹ ವಾರ್ತಾಸಂಸ್ಥೆಗಳ ಪ್ರತಿನಿಧಿಗಳು ಧರ್ಮಸ್ಥಳದಲ್ಲಿ ತಮ್ಮ ಡೇರೆಯನ್ನು ನೆಟ್ಟರು. ದೇಶದ ಇಂಗ್ಲಿಷ್ ಮಾಧ್ಯಮಗಳ ಪ್ರತಿನಿಧಿಗಳು ಬಂದು ತುಂಬಿದರು. ಕ್ಷೇತ್ರದ ವಿರುದ್ಧ ಗೆಲುವಿನ ಮೊದಲ ಸುದ್ಧಿ ತಮ್ಮ ಮೂಲಕವೇ ಎನ್ನುವ ರಣೋತ್ಸಾಹವೇ ಎಲ್ಲೆಲ್ಲೂ ತುಂಬಿತುಳುಕಾಡುವಂತಿದ್ದಿತು.
ಕೇರಳ ಮತ್ತು ತಮಿಳುನಾಡಿನಲ್ಲಿ ಧರ್ಮಸ್ಥಳ ಆಕ್ಷನ್ ಕಮಿಟಿಗಳು ಹುಟ್ಟು ಹಾಕಿದವು. ಕರ್ನಾಟಕದ ಧಾರ್ಮಿಕ ಕ್ಷೇತ್ರದ ಆಗುಹೋಗುಗಳು ಅಲ್ಲಿಯ ವಿಧಾನ ಸಭೆಗಳಲ್ಲಿ ಚರ್ಚಿಸುವ ಮಟ್ಟದ ಅತಿರೇಕಕ್ಕೆ ಏರಿತು. ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ಕಲ್ಲುತೂರುವುದರೊಂದಿಗೆ ದೇವಸ್ಥಾನದೊಳಗೆ ನುಗ್ಗಲು, ಮತ್ತು ದಂಗೆ ಏಳಲು ಕರೆಕೊಡುವ ಜಾಲತಾಣಗಳ ವ್ಯವಸ್ಥಿತ ಪ್ರಚಾರಗಳು ಪ್ರಾರಂಭವಾದವು. ಮಹಿಳೆಯರ ಮೇಲಿನ ಲೈಂಗಿಕ ಅತ್ಯಾಚಾರಗಳೂ ಕೊಲೆ ಪಾತಕ ಕೃತ್ಯಗಳು ಮತ್ತು ಆರ್ಥಿಕ ದುರ್ವ್ಯವಹಾರಗಳಲ್ಲಿ ತೊಡಗಿ ಜಾಮೀನು ಪಡೆದು ಓಡಾಡುವ ಹಿಂದು ವಿರೋಧಿ ಧರ್ಮಗುರುಗಳ ಕೃತ್ಯಗಳನ್ನು ಮರೆಮಾಚುವ ಸುದ್ದಿ ಮಾಧ್ಯಮಗಳು ಧರ್ಮಸ್ಥಳವನ್ನು ಅತಿರಂಜಿತವಾಗಿ ವರ್ಣಿಸಲು ತೊಡಗಿದವು.
ನೂರಾರು ಆರೋಪಿತ ಕೊಲೆ ಕೃತ್ಯಗಳಿಗೆ ಭಾರತದ ದೇವಸ್ಥಾನವೊಂದು ಕೇಂದ್ರವಾದುದು ಹೇಗೆ' ಎಂದು ತನ್ನ ದುಷ್ಟಪ್ರಚಾರವನ್ನು ಪ್ರಾರಂಭಿಸಿದ ಅಲ್‌ಜಝೀರಾ ವಾರ್ತಾ ಸಂಸ್ಥೆಯು ಮುಂದಿನ ಅಂಕಣಗಳಲ್ಲಿ ಧರ್ಮಸ್ಥಳದ ಹೆಸರನ್ನು ಉಲ್ಲೇಖಿಸುವ ದುಸ್ಸಾಹಸವನ್ನು ಪ್ರಾರಂಭಿಸಿತು. 'ಸಾಮೂಹಿಕ ಕೊಲೆ ಪ್ರಕರಣಗಳಿಗೆ ಧರ್ಮಸ್ಥಳವು ಕೇಂದ್ರವಾದುದು ಏಕೆ? ಎನ್ನುತ್ತಾ ತನ್ನ ಗ್ಯಾಂಗ್ ನಿರ್ಮಿಸಿದ ವಿಡಿಯೋಗಳನ್ನು ತೋರಿಸಲು ಪ್ರಾರಂಭಿಸಿತು. ಮುಂದುವರಿದ ಆಲ್‌ಜಝೀರಾ “ಭಾರತದಲ್ಲಿ ಕರ್ನಾಟಕದ ಧರ್ಮಸ್ಥಳ ದೇವಸ್ಥಾನದ ಮಾಜಿ ಕೆಲಸಗಾರನೊಬ್ಬನ ಹೇಳಿಕೆಯಂತೆ; ಮಕ್ಕಳ ಶವಗಳನ್ನು ಸೇರಿದಂತೆ ನೂರಾರು ಹೆಣಗಳನ್ನು ಹೂತುಬಿಡಲು ಅವನನ್ನು ಬಲಾತ್ಕಾರಿಸಲಾಯಿತು”. ಎಂದು ಬರೆಯಿತು. ಅಲ್‌ಜಝೀರಾ ಮುಂದುವರಿದು “ನಾನೇನಾದರೂ ಪ್ರತಿಭಟಿಸಿದರೆ ಶವಗಳೊಂದಿಗೆ ನನ್ನನ್ನೂ ಹುಗಿದುಬಿಡುವೆವು ಎಂದು ಹೇಳಿ ಥಳಿಸಿದ ಆ ನೋವು ಇನ್ನೂ ನೆನಪಿದೆ” ಎಂದು ಆತನು ಹೇಳಿದನೆಂದು ಬರೆಯುತ್ತದೆ. “ಈ ದೂರುದಾರನು ದಲಿತ ಸಮಾಜಕ್ಕೆ ಸೇರಿದ್ದು ಅದು ಭಾರತದಲ್ಲಿ ಶೋಷಣೆಗೆ ಒಳಗಾದ ಸಮಾಜವಾಗಿದೆ” ಎನ್ನುವ ಪ್ರಚೋದಕ ಷರಾವನ್ನು ಕೂಡಾ ಅಲ್‌ಜಝೀರಾ ಬರೆಯುತ್ತದೆ.
'ಸತ್ಯ ಮತ್ತು ಪಾರದರ್ಶಕತೆಗಾಗಿ ನೀವು ಅಲ್‌ಜಝೀರಾವನ್ನು ವಿಶ್ವಸನೀಯವೆಂದುಕೊಳ್ಳಿರಿ' ಎಂದು ಸಾರುವ ಈ ಸಂಸ್ಥೆಯು ಜುಲೈ25ರಂದು “ನೂರಾರು ಮಹಿಳೆಯರ ಮತ್ತು ಹುಡುಗಿಯರ ಶವಗಳನ್ನು ದಫನ್ ಮಾಡಲಾಯಿತು” ಎನ್ನುತ್ತದೆ. ಮೂರು ದಶಕಗಳಿಂದ ಮರೆಮಾಡಿದ ಈ ಪ್ರಕರಣದಿಂದ ದೇಶವು ಆಘಾತಗೊಂಡಿದೆ. ಎಂದು ಕೂಡಾ ಅದು ಹೇಳುತ್ತದೆ. ಧರ್ಮಸ್ಥಳದಲ್ಲಿ “ಸರಣಿ ಕೊಲೆಗಳು” ಎನ್ನುವ ಅರ್ಥದ ಶೀರ್ಷಿಕೆಗಳನ್ನು ಧಾರಾಳವಾಗಿ ಅಲ್‌ಜಝೀರಾ ಉಪಯೋಗಿಸಿದೆ.
'ಮುಸುಕುಧಾರಿ'ಯೆಂದು ಒಬ್ಬ ಹಸ್ತಕನೂ, ಮಾನವಹಕ್ಕು ಆಯೋಗದ ಅಧಿಕಾರಿಗಳೆಂದು ಬಂದು ಪೋಜುಕೊಡುವ ರೌಡಿಗಳನ್ನು, ವೇಷಮರಸಿ ಬಂದ ಪಾದ್ರಿಗಳನ್ನು, ನೂರಾರು ಕಾನೂನು ವಿರೋಧಿ ಕೃತ್ಯಗಳಲ್ಲಿ ತೊಡಗಿದ ಪಾತಕಿಗಳನ್ನು ಈ 20 ವರ್ಷಗಳಲ್ಲಿ ಧರ್ಮಸ್ಥಳವನ್ನು ಕಳಂಕಿತಗೊಳಿಸುವ ಯೋಜನೆಯಲ್ಲಿ ಉಪಯೋಗಿಸಲಾಗಿದೆ. ಹಿಂದು ವ್ಯಕ್ತಿಗಳನ್ನು ಮತಾಂತರಿಸಿ ಎಂತಹ ಸಮಾಜದ್ರೋಹಿ ಕೃತ್ಯಗಳಿಗೆ ಪ್ರೆರೇಪಿಸಬಹುದು ಎನ್ನುವುದಕ್ಕೆ ಧರ್ಮಸ್ಥಳವು ಈಗ ಸಾಕ್ಷಿಯಾಗಿದೆ. ಚರ್ಚಿಗೆ ಕಲ್ಲೆಸೆದರೆಂದೂ ಮಸೀದಿ ಪಕ್ಕದಲ್ಲಿ ನಿಂತು ಜೈಶ್ರೀರಾಮ್ ಎಂದು ಕೂಗಿದರೆಂದೂ ನ್ಯಾಯಾಲಯಕ್ಕೆ ಹೋದವರು ಈಗ ಬಹಳ ಮುಂದುವರೆದಿರುವರು. ಹಿಂದು ವಿರೋಧಿಗಳೀಗ ಭಾರತ ವಿರೋಧಿಗಳಾಗಿ ಉತ್ತೀರ್ಣರಾಗಿರುವರು. ಉತ್ತಮ ಪ್ರಹಸನ ಕರ್ತರಾಗಿರುವ ಈ ಗ್ಯಾಂಗ್, ಸರ್ಕಾರವನ್ನೂ ಪೊಲೀಸ್ ಇಲಾಖೆಯನ್ನು ನಿರ್ದೇಶಿಸುವ ಶಕ್ತಿಯನ್ನು ಪಡೆದಿದೆ.
 
                                                        ಇಷ್ಟೆಲ್ಲ ಅನಾಹುತಗಳು ಧರ್ಮಸ್ಥಳದ ವಿರುದ್ಧ ನಡೆದರೂ ಧರ್ಮಾಧಿಕಾರಗಳು ಸಾಂತ್ವನದ ದನಿಯಲ್ಲೇ ಆರೋಪಗಳು ಆಧಾರರಹಿತ, ಸಂಪೂರ್ಣ ಸುಳ್ಳು, ಕ್ಷೇತ್ರಕ್ಕೆ ಭಕ್ತರು ಬರುತ್ತಲೇ ಇರುವರು, ಪೂಜೆ ಆಚರಣೆಗಳು ಎಂದಿನಂತೆ ನಡೆಯುತ್ತಿರುವುದು ಸಮಾಧಾನ ಕೊಡುತ್ತದೆ. ತನಿಖೆಯು ಬೇಗ ಮುಗಿದು ಸತ್ಯವು ನಿಚ್ಚಳವಾಗುತ್ತದೆ. ಎಂದಿರುವರು. ಎಲ್ಲವನ್ನೂ ನೋಡುತ್ತಿರುವ ತ್ರಯಸ್ಥರಿಗೆ ಕ್ಷೇತ್ರದ ಬೆಳವಣಿಗೆಗಳು ಕುತೂಹಲಕಾರಿ ಅಂಶಗಳನ್ನು ಹೊರಗೆಡಹುತ್ತಿವೆ. ಸರ್ಕಾರದ ನುರಿತ ಆಡಳಿತವೂ, ದಕ್ಷ ಪೊಲೀಸ್ ವ್ಯವಸ್ಥೆಯೂ ತನ್ನ ದುರುದ್ದೇಶಪೂರಿತ ನಿರ್ಧಾರದಿಂದಾಗಿ ಅಂತಿಮವಾಗಿ ಇಂಗು ತಿಂದ ಮಂಗನಾಗಬಲ್ಲುದು ಎಂದು ಧರ್ಮಸ್ಥಳದ ಬೆಳವಣಿಗೆಗಳು ತೋರಿಸುತ್ತವೆ.
ಉತ್ತಮ ಆಡಳಿತ ವ್ಯವಸ್ಥೆಯ ಸಂಸ್ಥೆಯೊಂದು ಕೂಡಾ ಕೆಲವೊಮ್ಮೆ ಪುಡಿರೌಡಿಗಳ ಮರ್ಜಿಯಿಂದ ತೊಂದರೆಗೊಳಗಾಗುವುದು ಪ್ರಚಲಿತ ವ್ಯವಸ್ಥೆಯ ವಿಪರ್ಯಾಸವಾಗಿ ಕಾಣುತ್ತಿದೆ. ಹೆಣ್ಣುಮಕ್ಕಳ ಅಸಹಾಯಕತೆಯೂ ದಲಿತರ ಸಾಮಾಜಿಕ ಪರಿಸರವೂ ಸ್ವಹಿತಾಸಕ್ತರ ಮಹತ್ವಾಕಾಂಕ್ಷೆಗೆ ಪೂರಕವಾಗುವ ಸಂಭವವಿರುತ್ತದೆ. ಸುಳ್ಳುಗಳ ಸರಮಾಲೆಯಿಂದಲೇ ಹೆಣೆದ ಪ್ರಹಸನವು ಕೂಡಾ ಗಣನೀಯ ಅನಾಹುತಕ್ಕೆ ಎಡೆ ಕೊಡಬಲ್ಲದು ಎಂದು ಕೂಡಾ ಈ ಪ್ರಸಂಗವು ಹೇಳುತ್ತದೆ. ಅರಾಜಕತೆಯು ಚಿಗುರಲು ಯಾವುದೇ ಕ್ಷುಲ್ಲಕ ಕಾರಣವೂ ಸಾಕಾಗಬಲ್ಲುದು ಎನ್ನುವ ಕಟು ಸತ್ಯವು ಕಂಡುಬರುತ್ತಿದೆ. ಇಷ್ಟಾದ ಮೇಲೆ ಒಂದಂತೂ ಖಚಿತ. ಸುಳ್ಳು ಅಂತಿಮವಾಗಿ ಸೋಲುವುದು ಉಳಿದೆಲ್ಲ ಧನಾತ್ಮಕ ಪರಿಸರದ ಶಕ್ತಿಯಿಂದಲೇ.
ಧರ್ಮಸ್ಥಳದಲ್ಲಿ ತಲೆ ಎತ್ತಿದ ಧರ್ಮ ವಿರೋಧಿ ಮತ್ತು ಭಾರತ ವಿರೋಧಿ ದುಷ್ಟಶಕ್ತಿಗಳ ಸೋಲು ದೇಶದ ದೇವಸ್ಥಾನಗಳು ನಿರಾತಂಕವಾಗಿ ಧರ್ಮಕಾರ್ಯವನ್ನು ಮುಂದುವರಿಸಲು ಎಡೆಮಾಡಿಕೊಡಲಿದೆ. ದೇಶದ ಸಜ್ಜನ ಹಿಂದುಗಳೆಲ್ಲರೂ ಇದನ್ನು ಅರ್ಥಮಾಡಿಕೊಳ್ಳುವ ಕಾಲವಿದು.
