Hindu Vani
Index
ವಿಮರ್ಶೆ
ಧರ್ಮಸ್ಥಳವು ನಮಗೆ ಹೊಳೆಯಾಚೆಯ ಕ್ಷೇತ್ರವಾಗಿತ್ತು
ಅದು 19500 ದಶಕದ ಕೊನೆಯ ವರ್ಷಗಳಾಗಿದ್ದಿರಬೇಕು. ಉಡುಪಿಯ ಮಂಜುನಾಥ ಮೋಟಾರ್ ಸರ್ವಿಸ್ ಎನ್ನುವ ಖಾಸಗಿ ಬಸ್ ಕಂಪೆನಿಯು ಉಡುಪಿಯಿಂದ ಧರ್ಮಸ್ಥಳಕ್ಕೆ ತನ್ನ ಸಾರಿಗೆಯ ಸೇವೆಯನ್ನು ಪ್ರಾರಂಭಿಸಿತ್ತು. ಅದು ಉಡುಪಿಯಿಂದ ಕಾರ್ಕಳ ಗುರುವಾಯನ ಕೆರೆ ದಾರಿಯಿಂದ ಧರ್ಮಸ್ಥಳವನ್ನು ತಲುಪುವ ಪ್ರಯಾಣ. ಉಡುಪಿಯ ಕಲ್ಸಂಕದಲ್ಲಿ ಅದು ಐದು ನಿಮಿಷ ಕಾಲ ಪ್ರಯಾಣಿಕರಿಗಾಗಿ ಕಾದು ನಿಲ್ಲುತ್ತಿತ್ತು. ಆಗ ಅಲ್ಲಿ ಪ್ರಯಾಣಿಕರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಉಳಿದವರು ಆ ಬಸ್ಸಿಗಾಗಿ ಕಾಯುತ್ತಿದ್ದರು. ಬಸ್ಸು ಬಂದು ನಿಲ್ಲುತ್ತಿದ್ದಂತೆ ಬಸ್ಸು ಹತ್ತದವರು ತಮ್ಮ ಚಪ್ಪಲಿಯನ್ನು ಕಳಚಿಟ್ಟು ವಾಹನವನ್ನು ಮುಟ್ಟಿ ನಮಸ್ಕರಿಸಿ ನಂತರ ತಮ್ಮ ದಾರಿಹಿಡಿದು ಹೋಗುತ್ತಿದ್ದರು.
ಬಸ್ಸು ಧರ್ಮಸ್ಥಳಕ್ಕೆ ಹೋಗಿ ಬರುತ್ತದೆ ಎನ್ನುವ ಕಾರಣದಿಂದ ದಾರಿಯ ರಸ್ತೆಯಲ್ಲಿ ಎದುರಾಗುತ್ತಿದ್ದವರೂ ತಮ್ಮ ಚಪ್ಪಲಿ ಕಳಚಿ ನಿಂತು ಬಸ್ಸಿಗೆ ನಮಸ್ಕರಿಸಿ ಅದು ದಾಟಿ ಹೋದ ಮೇಲೆ ಮುಂದುವರೆಯುತ್ತಿದ್ದರು. ಇನ್ನು ಧರ್ಮಸ್ಥಳ ಕ್ಷೇತ್ರವು ಪೋಷಿಸುತ್ತಿದ್ದ ಯಕ್ಷಗಾನ ಮೇಳದ ಪ್ರದರ್ಶನಗಳು ಬಹಳ ಜನಪ್ರಿಯವಾಗಿದ್ದವು. ಹೆಸರಾಂತ ಪಾತ್ರಧಾರಿಗಳ ತರ್ಕಭರಿತ ಆಶುಸಂಭಾಷಣೆಗಳು, ಕಂಚಿನ ಕಂಠದ ಭಾಗವತರ ಹಾಡುಗಾರಿಕೆಗಳು ಸೇರಿದ ಯಕ್ಷಗಾನದ ಪ್ರಸಂಗಗಳಿಗೆ ಮಂಜುನಾಥನ ಮಹಿಮೆಯ ಸೊಗಡೂ ಸೇರಿ, ಪ್ರದರ್ಶನಗಳನ್ನು ಎರಡು ಮೂರು ವರ್ಷಗಳ ಮೊದಲೇ ಮುಂಗಡ ಹಣಕೊಟ್ಟು ಕಾದಿರಿಸಲಾಗುತ್ತಿತ್ತು. ಅವೆಲ್ಲಕ್ಕೂ ಸುಮ್ಮನೆ ಮನರಂಜನೆಯು ಮಾತ್ರ ಕಾರಣವಾಗಿರದೆ ಧರ್ಮಸ್ಥಳ ಮಂಜುನಾಥನಿಗೆ ಹರಕೆ ಹೊತ್ತ ಆಸ್ತಿಕರ ಶ್ರದ್ಧಾ ಭಕ್ತಿಗಳೂ ಸೇರಿರುತ್ತಿದ್ದವು.
ನಮ್ಮ ಅಮ್ಮ ನನ್ನನ್ನು ಕರೆದುಕೊಂಡು ಅಂತಹ ಬಯಲಾಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಜೊತೆಗೆ ದೇವಸ್ಥಾನಗಳಿಗೆ ಹೋಗುವಂತೆ, ಹಣ್ಣು ಕಾಯಿಗಳ ಹರಿವಾಣವನ್ನು ಹಿಡಿದುಕೊಳ್ಳುತ್ತಿದ್ದರು. ಅದು ಯಕ್ಷಗಾನದ ತಂಡದೊಂದಿಗೆ ಬರುತ್ತಿದ್ದ ವಿನಾಯಕನ ಸಂಕೇತವಾದ ಅವನ ಕಿರೀಟಕ್ಕೆ ಒಪ್ಪಿಸಲು. ಅದು ಚೌಕಿಯಲ್ಲಿ ಇರುತ್ತಿತ್ತು. ಯಕ್ಷಗಾನದ ಪ್ರತಿಯೊಬ್ಬ ವೇಷಧಾರಿಯೂ ತನ್ನ ವೇಷಭೂಷಣ ಮತ್ತು ಮುಖದ ವರ್ಣ ಪ್ರಸಾಧನವನ್ನು ತಾನೇ ಮಾಡುವುದು ಪದ್ಧತಿ. ಇದಕ್ಕಾಗಿ ಒಂದು ಪೀಠದ ಮೇಲೆ ವಿನಾಯಕನ ಕಿರೀಟವಿದ್ದು ಅದರ ಮುಂದೆ ಕೂತ ವೇಷಧಾರಿಗಳು ಈ ಅಲಂಕಾರವನ್ನು ಸಿದ್ಧಪಡಿಸಿಕೊಳ್ಳುತ್ತಿರುತ್ತಾರೆ. ಒಳಾಂಗಣವನ್ನು ಚೌಕಿ ಎನ್ನುತ್ತಾರೆ. ಆ ವಿನಾಯಕ, ವೇಷಧಾರಿಗಳ ಗಡಿಬಿಡಿ, ಬಣ್ಣಗಳ ಘಮ್ಮು, ಪೆಟ್ರೋಮ್ಯಾಕ್ಸ್ ದೀಪದ ಬೆಳಕು ಮತ್ತು ಅದರ 'ಸೋ' ಎನ್ನುವ ಸದ್ದು. ಸುತ್ತ ಹೊರಗೆ ಕತ್ತಲು ಇವೆಲ್ಲ ಸೇರಿ ಧರ್ಮಸ್ಥಳವೇ ಮನಸ್ಸಿನಲ್ಲಿ ತುಂಬಿರುತ್ತಿದ್ದ ಆ ಬಾಲ್ಯವು ಈಗಲೂ ಮೈಮರೆಸುವ ಮೋಹನ ಮುರಳಿಯಾಗಿದೆ.
ಧರ್ಮಸ್ಥಳದ ಹೆಸರನ್ನು ಗೌರವದಿಂದ ಉಲ್ಲೇಖಿಸುವ ದಿನಗಳವು. ಶ್ರೀ ಕ್ಷೇತ್ರವನ್ನು “ಸನ್ನಿಧಿ” ಎಂದೋ 'ಕ್ಷೇತ್ರವೆಂದೋ ಕರೆಯುವುದೇ ರೀತಿಯಾಗಿದ್ದಿತು, ಇನ್ನೂ ಹಲವರು ಹಾಗೆಯೂ ಹೇಳದೆ 'ಹೊಳೆಯಾಚೆಯ ದೇವಸ್ಥಾನ' 'ದೊಡ್ಡಜಾಗ' ವೆಂದು ಹೆಸರಿಸುತ್ತಿದ್ದರು. ಈಗಲೂ ಅಂತಹ ಭಕ್ತರು ಕಾಣಸಿಗುತ್ತಾರೆ.
ಡಾ| ಸೂರ್ಯನಾಥ ಕಾಮತರು ತಮ್ಮ ಒಂದು ಕಾದಂಬರಿಯಲ್ಲಿ ಆ ಕಾಲದ ಸಮಾಜವು ಜಾತಿ ಮತಗಳ ವ್ಯತ್ಯಾಸವಿಲ್ಲದೆ ಮಂಜುನಾಥನಿಗೆ ಮೊರೆ ಹೋಗುವುದನ್ನು ಒಂದು ಪ್ರಸಂಗದಲ್ಲಿ ಚಿತ್ರಿಸಿದ್ದಾರೆ. ಮನೆ ತುಂಬ ತಂದೆ ತಾಯಿ ತಮ್ಮಂದಿರೊಂದಿಗಿದ್ದ ತರುಣ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬಡತನವನ್ನು ಎದುರಿಸುವ ಚಿತ್ರಣ ಅಲ್ಲಿದೆ. ದಾರಿಕಾಣದ ಆ ಸಾರಸ್ವತ ತರುಣನು ಆತ್ಮಹತ್ಯೆಯೊಂದೇ ದಾರಿಯೆಂದುಕೊಂಡು ಮಂಜುನಾಥನ ದರ್ಶನಕ್ಕೆ ಹೋಗುತ್ತಾನೆ. ಅಲ್ಲಿ ಭೇಟಿಯಾದ ಮಾತನಾಡುವ ಮಂಜುನಾಥ ಎಂದು ನಂಬಿದ ಹೆಗ್ಗಡೆಯವರಲ್ಲಿ ತನ್ನ ಸಂಕಟವನ್ನು ತೋಡಿಕೊಳ್ಳುತ್ತಾನೆ. ಅಭಯ ನೀಡಿದ ಹೆಗ್ಗಡೆಯವರು ಒಂದಷ್ಟು ಹಣವನ್ನು ಕೊಟ್ಟು ವ್ಯಾಪಾರ ಮಾಡು ಎನ್ನುತ್ತಾರೆ. ಅದನ್ನು ನಂಬಿ ಬಂದವನು ಊರಲ್ಲಿ ಮುಂದೆ ಪ್ರತಿಷ್ಟಿತ ಸಾಹುಕಾರನಾಗಿ ಬಿಡುತ್ತಾನೆ. ಹೀಗೆ ಹೊಳೆಯಾಚೆ ಹೋಗಿ ಮಂಜುನಾಥನನ್ನು ಕಂಡರೆ ಅವನೇ ಎಲ್ಲವನ್ನು ನಡೆಸಿಕೊಡುತ್ತಾನೆ ಎನ್ನುವುದು ಎಲ್ಲರ ದೃಢ ನಂಬಿಕೆಯಾಗಿದ್ದಿತು.
ಉದ್ಯೋಗದಲ್ಲಿದ್ದು ಭಾರತ ದೇಶದ ಹತ್ತಾರು ನಗರಗಳಲ್ಲಿ ಸುತ್ತಾಡಿ ಬಂದಾಗ 'ಹೊಳೆಯಾಚೆಯ' ಧರ್ಮಸ್ಥಳವು ಆಗಾಗ್ಗೆ ಅರಿವು ಮರೆವಿನ ನಡುವಿನ ಅನಿರ್ವಚನೀಯ ಸಂವೇದನೆಯನ್ನು ಉಂಟುಮಾಡುತ್ತಿರುತ್ತದೆ. ಹತ್ತೊಂಭತ್ತು ವರ್ಷ ವಯಸ್ಸಿನ ಕಿಶೋರನೊಬ್ಬ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದರೂ ಹಿಂದುತ್ವದ ಪ್ರೌಢ ಚಿಂತನೆಯನ್ನು ಅರಗಿಸಿಕೊಂಡು 'ಹೊಳೆಯಾಚೆಯ' 'ದೊಡ್ಡಜಾಗವನ್ನು ದೇಶವಿಡೀ ಸ್ಮರಿಸುವಂತೆ ಹಿರಿದಾಗಿಸಿದುದು ಮೆಚ್ಚುವಂತೆ ಮಾಡಿದೆ. ಆದಿಕವಿ ಪಂಪನು 'ಬೆಳಗುವನಿಲ್ಲಿ ಲೌಕಿಕಂ, ಅಲ್ಲಿ ಜಿನಾಗಮಂ. ಅರಿವುದು ಧರ್ಮಮುಂ' ಎಂದಿದ್ದನು. ಪರದ ಚಿಂತೆಯೊಂದಿಗೆ ಲೌಕಿಕದ ಬೆಳಗು ಒಂದು ಗೂಡಿದಾಗ ಈ ಜಗತ್ತು ಸುಂದರವಾಗಬಲ್ಲುದು ಎನ್ನುವುದನ್ನು 55 ವರ್ಷಗಳ ಹಿಂದಿನ 19 ವಯಸ್ಸಿನ ತರುಣ ಶ್ರೀ ವೀರೇಂದ್ರ ಹೆಗ್ಗಡೆಯವರು ಅರ್ಥೈಸಿಕೊಂಡುದನ್ನು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತೇನೆ. ಶಿವರಾಮ ಕಾರಂತರೊಮ್ಮೆ ವೈಚಾರಿಕ ಕಾರಣದಿಂದ ಮುಂದೆಂದೂ ಧರ್ಮಸ್ಥಳಕ್ಕೆ ಹೋಗಲಾರೆ ಎಂದುಕೊಂಡವರು ವಿರೇಂದ್ರ ಹೆಗ್ಗಡೆಯವರ ಪುರೋಗಾಮಿ ನಿಲುವುಗಳನ್ನು ಕಂಡು ಮತ್ತೆ ಧರ್ಮಸ್ಥಳಕ್ಕೆ ಭೇಟಿ ನೀಡುವ ನಿರ್ಧಾರವನ್ನು ಕೈಗೊಂಡಿದ್ದರು.
ಎಲ್ಲೋ ಧರ್ಮಾಧಿಕಾರಿಗಳು ಭಗವಂತನ ಅಣು ರೂಪೀ ಸಾಕ್ಷಾತ್ಕಾರವನ್ನು ಉಲ್ಲೇಖಿಸಿದುದನ್ನು ಓದಿದ್ದೆ. ಧಾರ್ಮಿಕತೆಯನ್ನು ಸಾಮಾಜಿಕತೆ ಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಅನುಭವಿಸುವ ಧರ್ಮದ ಅಣುರೂಪೀ ಶಕ್ತಿಯು ಮಾನವ ಜೀವನದ ಕಲ್ಯಾಣಕ್ಕೆ ಸಂವಾಹಕವಾಗಬಲ್ಲುದು. ಧರ್ಮವು ಒಂದುಕಡೆ ಸಮಾಜದ ಉಸಿರಾಗಬಲ್ಲುದು. ಆಗಲೇ ವೈಯಕ್ತಿಕ ಭಕ್ತಿಯು ಸಾಮಾಜಿಕ ಆಯಾಮವನ್ನು ಪಡೆಯಬಲ್ಲುದು. ಸಮಾಜದಲ್ಲಿ ಪರಿವರ್ತನೆಯು ಅತಿ ಅತಿ ಸಹಜವಾಗಿ ಒಡಮೂಡಿ ಬರಬೇಕಾದರೆ ಇಂತಹ ಮನೋಧರ್ಮವನ್ನು ಆವಾಹಿಸಿಕೊಳ್ಳಬೇಕು. ಎಂದು ಅವರು ಹಾರೈಸಿದುದು ನೆನಪಾಗುತ್ತದೆ.
15ಸಾವಿರ ಯಾತ್ರಿಕರು ಜನಜಂಗುಳಿಯಾಗಿ ಜನಜಂಗುಳಿಯಾಗಿ ಬಿಸಿಲಿನಲ್ಲಿ ಬೆವರುತ್ತ ಸಾಲಿನಲ್ಲಿ ಬರುವುದನ್ನು ತಪ್ಪಿಸಿ ನೆರಳಲ್ಲಿ ಬಂದು ಮಂಜುನಾಥನ ಸನ್ನಿಧಿಯನ್ನು ತಲುಪುವ 'ಶ್ರೀಸಾನ್ನಿಧ್ಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದುದನ್ನು ಓದಿದಾಗ ಏಳು ದಶಕಗಳ ಹಿಂದೆ ಕಂಡ ಮತ್ತು ಅನುಭವಿಸಿದ ಆನಂದಾನುಭವಗಳ ನೆನಪಾಯಿತು. ಸರದಿಯಲ್ಲಿ ನಿಲ್ಲಬೇಕು. ಅದು ಲೌಕಿಕ ಲಾಭಕ್ಕೂ ಸರಿಯೇ ಅಥವಾ ಧರ್ಮದ ಅರಿವಿನ ಅನುಭವಕ್ಕೂ ಸರಿಯೆ. ಸರದಿಯಲ್ಲಿ ನಿಂತು ಮುಂದುವರಿಯುವಾಗ ಮುಂದೆ ಇದ್ದವರು ಸರಿದರೆ ಮಾತ್ರವೇ ಹಿಂದಿನವರ ಸರದಿ ಎನ್ನುವುದು ನಿಜವೆ. ಆದರೆ ಮುಗ್ಧ ಭಕ್ತಿಯ ಪ್ರಹ್ಲಾದನೂ, ಧ್ರುವನೂ ಭಗವಂತನನ್ನು ಕಂಡುದು ಸರದಿಯಿಂದಲ್ಲ. ಈಗಿರುವ ವಿಶೇಷ ದರ್ಶನದ ಸೌಲಭ್ಯದಿಂದಲೂ ಅಲ್ಲ. ಭಕ್ತಿಯ ಉತ್ಕಟತೆಯಿಂದ, ಧರ್ಮಸ್ಥಳವು ಇಂತಹ ಅನುಭವವನ್ನು ನೀಡುತ್ತ ಬಂದಿದೆ.
ಆದರೆ ದಿನಗಳು ಬದಲಾಗಿವೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹಾಡಿದ ದಾಸರನ್ನು ಧಿಕ್ಕರಿಸಿ ಗುರುವನ್ನು ಮೀರುವವನಾಗುವ ತನಕ ದೊರೆಯದಣ್ಣ ಮುಕುತಿ' ಎಂದು ತಿದ್ದಿ ಬರೆಯುವ ಜನರು ಹೆಚ್ಚುತ್ತಿರುವರು.