Logo

VHP PUBLICATIONS

Hindu Vani


expand_more

ವಿಡಂಬನೆ

By ಮೋಹನ ಕೃಷ್ಣರಾವ್, ದಾಂಡೇಲಿ

ತಾಕತ್ತು ಅಂದರೆ ಅದು! ಆ ಗತ್ತೇ ಬೇರೆ. ಮೂಗು ಮಾತ್ರ ಹೊರ ತೂರಿಸಿಕೊಂಡು ಮುಸುಕು ಹಾಕಿಕೊಂಡು ಆತನು ಫಾನರ್ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಪೊಲೀಸ್ ಒಬ್ಬರು ಓಡೋಡಿ ಬಂದು ಛತ್ರಿಯನ್ನು ಅರಳಿಸಿ ಆತನಿಗೆ ಮಳೆ ಹನಿಯು ತಾಗದಂತೆ ನೋಡಿಕೊಳ್ಳುವುದೇನು! ಆತನೋ, ಕುರುಚಲು ಗಿಡಗಂಟೆಗಳ ನಡುವೆ ನಡೆದಾಡುತ್ತಾ ಕ್ಯಾಪ್ಟನ್ ಧೋನಿಯಂತೆ, ಫೀಲ್ಡರ್‌ಗಳು ಎಲ್ಲೆಲ್ಲ ನಿಲ್ಲಬೇಕೆಂದು ಬೊಟ್ಟು ತೋರಿಸಿ ಹೇಳುವಂತೆ ಜೆಸಿಬಿ ವಾಹನಗಳಿಗೂ ಉಳಿದ ಕೆಲಸಗಾರರಿಗೂ ಹೇಗೆಲ್ಲಾ ಸಿದ್ಧರಿರಬೇಕೆಂದು ನಿರ್ದೇಶನ ಕೊಡುವುದೇನು! ನಡುನಡುವೆ ಪಕ್ಕನೆ ಎಡಕ್ಕೆ ತಿರುಗಿ ಸರಕ್ಕನೆ ವೇಗವಾಗಿ ಹೋಗುತ್ತಿದ್ದರೆ ಛತ್ರಿ ಹಿಡಿದು ಅವನ ಪಕ್ಕದಲ್ಲೇ ಬರುತ್ತಿದ್ದ ಪೊಲೀಸ್ ಕಕ್ಕಾಬಿಕ್ಕಿಯಾಗಿ ಎದ್ದೂ ಬಿದ್ದೂ ಅವನನ್ನು ಹಿಂಬಾಲಿಸುವುದೇನು? ಅವರಿಬ್ಬರ ಹಿಂದೆಯೇ ಪೊಲೀಸರೂ ಉಳಿದ ಅಧಿಕಾರಿಗಳೂ ಅನುಸರಿಸಲು ಧಾವಿಸುವುದೇನು? ಅಂತೂ ಕೆಲವೇ ವರ್ಷಗಳ ಹಿಂದೆ ನದಿಯಲ್ಲಿ ತೇಲಿಕೊಂಡು ಬಂದ ಹೆಣವನ್ನು ಎಳೆದು ತಾ ಎಂದಾಗ ತಂದು ಅದನ್ನು ಮರಣೋತ್ತರ ಪರೀಕ್ಷೆಗೆ ಸಿದ್ದ ಪಡಿಸಬೇಕಾದವನು, ಮರಹತ್ತಿ ಕೊಂಬೆಗೆ ನೇಣು ಹಾಕಿದ ಶವವನ್ನು ಇಳಿಸಬೇಕಾದವನು ಈಗ 300 ಮಂದಿ ಹಿರಿಯ ಅಧಿಕಾರಿಗಳೂ ಸೇರಿದಂತೆ ಅವರಿಗೆಲ್ಲ ತನ್ನ ತಾಳಕ್ಕೆ ಕುಣಿಯುವಂತೆ ಮಾಡಿದ ಆ ವಿಧಿಯ ಆಟವನ್ನು ಏನೆನ್ನಬೇಕು?

ವಿಡಂಬನೆ

ಜೆಸಿಬಿಯ ಚಾಲಕನು ಅಗೆಯಲು ವಾಹನವನ್ನು ಚಾಲು ಮಾಡುತ್ತಿರುವಾಗ ದೂರದಿಂದ ಸಿಗ್ನಲ್ ಕೊಡುವ ಈ ಮುಸುಕುಧಾರಿಯು ಅಲ್ಲೇ, ನಿಂತಲ್ಲಿಂದ 9 ಇಂಚು ಎಡಕ್ಕೆ ಸರಿದು ಅಗೆಯಲು ಹೇಳುತ್ತಾನೆ. ನಿಂತ ಜಾಗವು ಮಳೆಬಿದ್ದು ಜವುಗು ಕೆಸರಾಗಿದೆ ಎಂದು ಗೊಣಗುತ್ತಾ ತನಗೆ ಫಾರ್ಮರ್ ಗಮ್ ಬೂಟ್ ತಂದು ಕೊಡಲು ಆರ್ಡರ್ ಮಾಡುತ್ತಾನೆ. ಅವನಂದ ನಿರ್ದಿಷ್ಟ ಬೂಟು ತರಲು ಬೆಳ್ತಂಗಡಿಯ ಪೇಟೆಗೆ ಹೋದವರು ಅಂತಹ ಬೂಟು ಮಂಗಳೂರಿನಲ್ಲಿ ಸಿಗುತ್ತದೆ ಎನ್ನುವ ವರ್ತಮಾನವನ್ನು ತರುತ್ತಾರೆ. ಅಷ್ಟರಲ್ಲಾಗಲೇ ಮುಸುಕುಧಾರಿಯ ಇನ್ನೊಂದು ಆರ್ಡರ್ ಸಿದ್ಧವಾಗಿತ್ತು. ತಾನು ಸಂರಕ್ಷಿತ ಸಾಕ್ಷಿದಾರನಾದುದರಿಂದ ತನ್ನನ್ನು ಯಾರೂ ನೋಡಬಾರದು.

ಅದಕ್ಕಾಗಿ 10ಅಡಿ ಅಗಲ 200ಅಡಿ ಉದ್ದದ ಟಾರ್ಪಾಲಿನ್ ತಂದು ಕುತೂಹಲದಿಂದ ಸೇರಿದ ಜನರ ಕಣ್ಣು ತಾಗದಂತೆ ಅಡ್ಡಕಟ್ಟಬೇಕೆಂದು ಆಜ್ಞಾಪಿಸುತ್ತಾನೆ. ಪೊಲೀಸ್ ವಾಹನಗಳು ಕೂಡಲೇ ಮಂಗಳೂರಿಗೆ ಹೊರಡಲು ಸಿದ್ಧವಾಗುತ್ತವೆ. ಜಿಟಿ ಜಿಟಿ ಮಳೆಯಲ್ಲಿ ಆಗಾಗ ಗುಟುಕರಿಸಲು ಬಿಸಿ ಚಹಾ ತುಂಬಿದ ಪ್ಲಾಸ್ಟ್‌ಗಳು ಕೇಳಿದಾಗೆಲ್ಲ ಬಂದು ಬಿಡುತ್ತಿದ್ದವು. ಜೊತೆಗೆ ನಂಚಿಕೊಳ್ಳಲೆಂಬಂತೆ ಕರಿದ ಗೋಡಂಬಿಯ ಚೂಡಾ ಕೂಡಾ!

ಥೇಟು ಪಂಚತಂತ್ರದಲ್ಲಿ ಬರುವ, ಬಟ್ಟೆಗೆ ಬಣ್ಣ ಬಳಿಯಲು ಇಟ್ಟ ಬಣ್ಣ ತುಂಬಿದ ಕಡಾಯಿಗೆ ಬಿದ್ದ ನರಿಯೊಂದು ಕಾಡಿನ ರಾಜನಾಗಿ ಬಿಟ್ಟ ಕಥೆಯೇ ನಮ್ಮ ನಡುವೆ ನಡೆಯಿತು. ಆ ದಿನ ಮಂತ್ರವಾದಿಯಂತೆ ಈ ಮುಸುಕುಧಾರಿಯು ತಲೆ ಬುರುಡೆ ತಂದು ಮೇಜಿನ ಮೇಲಿಟ್ಟಾಗ ಅದರ ಮುಂದಿನ ಕುರ್ಚಿಯಲ್ಲಿ ಕುಳಿತ ಅಧಿಕಾರಿಯು ಇದನ್ನು ಎಲ್ಲಿಂದ ತಂದೆಯಾ ಎಂದು ಕೇಳುವುದನ್ನು ಬಿಟ್ಟು ಹಾರೆ, ಪಿಕಾಸಿ ಜೆಸಿಬಿ ವಾಹನದೊಂದಿಗೆ ಬಂದು ಗುಂಡಿ ಅಗೆಯಲು ಸುರುಗಟ್ಟಿ ಬಿಡಬೇಕಾದರೆ; ಈ ಬುರುಡೆದಾರನ ಮಾತಿನಲ್ಲಿ, ಧ್ವನಿಯಲ್ಲಿ ಎಂತಹ ಸಂಮೋಹಕ ಶಕ್ತಿ ಇರಬೇಕು? ಮಾತಿನಲ್ಲಿ ನಡೆಯಲ್ಲಿ, ಭರಪೂರ ನಾಟಕೀಯತೆ ತುಂಬಿದರೆ ಮಾತ್ರ ಕರ್ನಾಟಕದ ರಾಜಕಾರಣಿಗಳನ್ನು ಸೆಳೆಯಬಹುದು ಎಂಬ ಮಾರ್ಕೇಟಿಂಗ್ ಸೂತ್ರವು ಆ ನಾಲ್ಕನೆ ತರಗತಿಯವರೆಗೆ ಓದಿದ ನೈರ್ಮಲ್ಯ ಕಾರ್ಮಿಕನಿಗೆ ಹೇಗೆ ಕರಗತವಾಯಿತು? ಯಾವುದೇ ಸರ್ಕಾರಿ ಇಲಾಖೆಯಲ್ಲಿ ಕಾಣಸಿಗದ ದಕ್ಷತೆಯಿಂದ ಚಳಿಮಳೆಯ ಅರಿವೇ ಇಲ್ಲದೆ ಕರ್ತವ್ಯ ನಿರತನಾಗುವುದೆಂದರೆ ಏನು ಎಂಬುದನ್ನು ಈ ಬುರುಡೆ ಚಿನ್ನಯ್ಯನು ದೇಶಕ್ಕೆ ಮನಗಾಣಿಸಿ ಬಿಟ್ಟನು.

ದಶಕಗಳ ಪಶ್ಚಾತ್ತಾಪದಿಂದ ಪರಿತಪಿಸಿ ಅಪರಂಜಿಯಾದ ಚಿನ್ನಯ್ಯನು ಕ್ರೈಸ್ತನಾಗಿ ಮತಾಂತರಗೊಂಡು ಚೊಕ್ಕಚಿನ್ನವಾದುದೂ ಗೃಹ ಮಂತ್ರಿಗಳ ಮನಸ್ಸನ್ನು ಕರಗಿಸಿರಬೇಕು. ಈ ಕರಗಿಸುವ ಶಕ್ತಿಯು ಅವರ ಪ್ರಕಾರ ಹೆಣಗಳ ಎಲುಬುಗಳನ್ನೂ ಕರಗಿಸಿ ಮಣ್ಣಿನೊಂದಿಗೆ ಬೆರೆಸಿಬಿಟ್ಟಿದೆ. ಪರುಶದ ಕಲ್ಲು ಎಲ್ಲವನ್ನೂ ಚಿನ್ನವಾಗಿಸುತ್ತದಂತೆ. ದೆಹಲಿಯಲ್ಲಿ ಇಂತಹದೊಂದು ಕಲ್ಲಿನ ಭಂಡಾರವಿದೆ. ತಮಿಳುನಾಡಿನಲ್ಲೂ ಇದರದ್ದೇ ಉದ್ಯಮವಿದೆ. ಇವಲ್ಲದಿದ್ದರೆ ಕರ್ನಾಟಕದ ಕಲ್ಲುಬಂಡೆಯನ್ನು ಕರಗಿಸುವುದು ಸಾಧ್ಯವಾಗುತ್ತಿರಲಿಲ್ಲ. ದಕ್ಷ ಕರ್ನಾಟಕದ ಪೊಲೀಸ್ ಇಲಾಖೆಯನ್ನು ಶವವೆತ್ತಲು ಉಪಯೋಗಿಸುತ್ತಿರಲಿಲ್ಲ. ಯಾರಿಗೇನಾಯಿತೋ ಗೊತ್ತಿಲ್ಲ. ಆದರೆ ಮುಸುಕು ಧಾರಿ ಬುರುಡೆಗೆ ತಿಂಗಳಿಡೀ ರಾಜಾತಿಥ್ಯ ದೊರಕಿತು.

ವಿಡಂಬನೆ

.