Logo

VHP PUBLICATIONS

Hindu Vani


expand_more

ಸೂಕ್ತಿಶ್ರೀ

By ಬಿ ಈ ಸುರೇಶ್, ಬೆಂಗಳೂರು

ಮಾತು ಮಾಣಿಕ್ಯ


ತಾಸ್ತು ವಾಚಃ ಸಭಾಯೋಗ್ಯಾ ಯಾಶ್ಚಿತ್ತಾಕರ್ಷಣ ಕ್ಷಮಾ: 

ಸ್ವೇಷಾಂ ಪರೇಷಾಂ ವಿದುಷಾಂ ದ್ವಿಷಾಮವಿದು ಪಾಮಪಿ

- ಸುಭಾಷಿತ ರತ್ನಾವಲೀ

ಯಾವ ಮಾತುಗಳು ತನಗೆ ತನ್ನವರಿಗೆ ಮತ್ತು ಉಳಿದವರಿಗೆ; ಇನ್ನು ವಿದ್ವಾಂಸರಿಗೂ ಶತ್ರುಗಳಿಗೂ, ಶಿಕ್ಷಣವಿಲ್ಲದ ಕೇಳುಗರಿಗೂ ಆಕರ್ಷಕವಾಗಿರುತ್ತದೆಯೋ ಅಂತಹ ಮಾತುಗಳು ಮಾತ್ರ ಸಭೆಯಲ್ಲಿ ಸಾರ್ವಜನಿಕವಾಗಿ ಹೇಳಲು ಯೋಗ್ಯವಾಗಿರುತ್ತವೆ.

ಮನುಷ್ಯನನ್ನು ಮೊದಲ ಬಾರಿಗೆ ಅಳೆಯುವುದು ಅವನನ್ನು ನೋಡುವುದರಿಂದ. ನಂತರ ಅವನನ್ನು ತೂಗುವುದು ಅವನ ಮಾತಿನಿಂದ. ಮಾತು ಮನುಷ್ಯನ ವ್ಯಕ್ತಿತ್ವವನ್ನು ಅಲಂಕರಿಸುತ್ತದೆ. ಅಹುದಹುದು ಎಂದು ಕೇಳಿದವರಿಗೆ ಅನಿಸಿದರೆ ಅಂತಹ ಮಾತು ಆಡಿದವನ ವ್ಯಕ್ತಿತ್ವವನ್ನು ಬೆಳಗುತ್ತದೆ. ಅಳೆದೂ ಸುರಿದೂ ಮಾತನಾಡು ಎನ್ನುವ ಎಚ್ಚರಿಕೆಯ ಮಾತುಗಳನ್ನು ಸುಸಂಸ್ಕೃತರು ಸದಾ ಪಾಲಿಸಬೇಕು. ಕೆಲವೇ ಶಬ್ದಗಳು ಸಾಕು ಅವು ಮಾತುಗಳಾದಾಗ ಅಪೂರ್ವ ಪರಿಣಾಮಗಳನ್ನು ಬೀರುತ್ತವೆ.

ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಆಡಿದ ಅಮೇರಿಕಾದ ನನ್ನ ಸಹೋದರ ಸಹೋದರಿಯರೇ' ಎನ್ನುವ ಮೊದಲ ಶಬ್ದಗಳು ಅವರ ಮುಂದಿನ ಭಾಷಣದ ಸಾರಾಂಶವನ್ನೇ ತುಂಬಿಕೊಂಡಿದ್ದವು. ಆ ಮೂಲಕ ಅವರ ವ್ಯಕ್ತಿತ್ವವನ್ನೇ ಆ ಶಬ್ದಗಳು ವರ್ಣಿಸಿದವು. ಅಷ್ಟೇ ಅಲ್ಲ ಭಾರತದ ಮತ್ತು ಹಿಂದೂ ಅಂತರಂಗದ ಶ್ರೀಮಂತಿಕೆಯನ್ನು ಪಾಶ್ಚಾತ್ಯ ದೇಶಗಳ ಧೀಮಂತರಿಗೆ ಮನಗಾಣಸಿದಂತಾಯಿತು. ಮಾತಿನ ಶಕ್ತಿ ಅಂತಹುದು.

ಮಾತು ಬಲ್ಲವನಿಗೆ ಜಗಳವಿಲ್ಲ. ಮಾತನಾಡಿದರೆ ಮುಗಿಯಿತು. ಮುತ್ತು ಒಡೆದರೆ ಹೋಯಿತು. ಎನ್ನುವ ಆಡುಮಾತುಗಳು ಮಾತಿನ ಮಹತ್ವವನ್ನು ಸಾರುತ್ತವೆ. ಏನನ್ನು ಹೇಳಬೇಕೋ ಅದನ್ನು ನಯವಾಗಿ ಹೇಳಲು ಸಾಧ್ಯ. ಅದನ್ನೇ ಕಹಿ ಶಬ್ದಗಳಿಂದ ಕಟು ಮಾತುಗಳಿಂದ ಹೇಳುವುದೂ ಇದೆ. ಇಂದಿನ ರಾಜಕೀಯ ವಠಾರದ ಮಾತುಗಳೇ ಇದಕ್ಕೆ ನಿದರ್ಶನ. ಅಲ್ಲಿ ಸಂವಾದದ ಬದಲು ವಿವಾದವೇ ಭರಪೂರ ತುಂಬಿಕೊಂಡಂತಿದೆ. ವೈಯಕ್ತಿಕ ನಿಂದೆಗಳು, ತನ್ನ ಕುರಿತು ತಾನೇ ಪ್ರಶಂಸಿಸಿಕೊಳ್ಳುವುದು ತನ್ನ ಪಕ್ಷದ ಹೆಚ್ಚುಗಾರಿಕೆಯನ್ನು ಸ್ಥಾಪಿಸಲು ಅಲ್ಲಸಲ್ಲದ ವಿತಂಡವಾದವನ್ನು ಮುಂದಿಡುವುದು ಮಾತನಾಡುವವನ ಬಗ್ಗೆ ಸಾರ್ವಜನಿಕವಾಗಿ ನಿಶ್ಚಿತವಾಗಿ ಕಟು ಅಭಿಪ್ರಾಯವನ್ನು ಸ್ಥಾಪಿಸಿ ಬಿಡುತ್ತದೆ.

ಒಬ್ಬ ರಾಜನಿಗೆ ತನ್ನ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದರಲ್ಲೇ ಒಂದು ಸಂತೋಷ. ಜ್ಯೋತಿಷಿಗಳೆಂದು ಕರೆಸಿಕೊಳ್ಳುವವರನ್ನು ಆಸ್ಥಾನಕ್ಕೆ ಕರೆಸಿ ಅವರಿಂದ ತನ್ನ ಬಗ್ಗೆ ಮಕ್ಕಳ ಬಗ್ಗೆ ಕುತೂಹಲದಿಂದ ಕೇಳುವುದೇ ಅವನ ಹವ್ಯಾಸ ಒಂದೊಮ್ಮೆ ಬಂದ ಜ್ಯೋತಿಷಿಯಿಂದ ರಾಜನು ತನ್ನ ಭವಿಷ್ಯವನ್ನು ಕೇಳಬಯಸಿದನು. ಆತನು ರಾಜನನ್ನು ನೋಡುತ್ತ ತನ್ನ ಮುಖದಲ್ಲಿ ಭಯವನ್ನು ತೋರ್ಪಡಿಸುತ್ತ ರಾಜನ ಮುಂದಿನ ಕರಾಳ ದಿನಗಳನ್ನು ವರ್ಣಿಸ ತೊಡಗಿದನು. “ಇದೇನಿದು ಮಹಾರಾಜಾ ನಿಮ್ಮ ಮಹಾರಾಣಿ ಸದ್ಯದಲ್ಲೇ ಸತ್ತು ಹೋಗುತ್ತಾಳಲ್ಲ! ನಿಮ್ಮ ಮುದ್ದಿನ ಮಗಳು ರಾಜಕುಮಾರಿ ಮತ್ತು ನಿಮ್ಮಿಬ್ಬರು ಯುವರಾಜರು ನಿಮ್ಮ ಕಣ್ಣಮುಂದೆಯೇ ಸಾಯುವುದು ಸ್ಪಷ್ಟವಾಗಿದೆಯಲ್ಲ” ಎಂದನಂತೆ. ಚಿಂತಾಕ್ರಾಂತನಾದ ರಾಜನು ಅದೇ ಚಿಂತೆಯಲ್ಲಿ ಸೊರಗಿ ಹೋಗತೊಡಗಿದನಂತೆ.

ಆಗ ಅವನ ಬುದ್ಧಿವಂತ ಮಂತ್ರಿಯು ತನ್ನ ಸ್ನೇಹಿತನೊಬ್ಬನನ್ನು ರಾಜನ ಬಳಿ ಕರೆತಂದು ಅವನಿಗೆ ಬೇರೆ ಬೇರೆ ರಾಜರಿಂದ ಸಿಕ್ಕಿದ ಬಿರುದುಗಳನ್ನು ಪಾರಿತೋಷಕಗಳನ್ನು ತೋರಿಸಿ ಅವನಿಂದ ರಾಜನ ಭವಿಷ್ಯವನ್ನು ಹೇಳಿಸಿದನು. ಈ ಜ್ಯೋತಿಷಿಯಂತೂ ರಾಜನ ವಂಶವನ್ನು ಉದಾಹರಿಸುತ್ತಾ ಹಿಂದಿನ ರಾಜ್ಯರ ಆಡಳಿತವನ್ನು ಅವರ ಔದಾರ್ಯವನ್ನು ಅವರೆಲ್ಲ ದೀರ್ಘಕಾಲ ರಾಜ್ಯಭಾರದ ಕಾಲದಲ್ಲಿ ಮಾಡಿದ ಉತ್ತಮ ಕಾರ್ಯಗಳನ್ನು ವರ್ಣಿಸುತ್ತಾ ಬಂದನು. ಈಗಿನ ರಾಜನ ಸಾಮರ್ಥ್ಯಗಳನ್ನೂ ಹೊಗಳಿದನು. ರಾಜ ಕುಟುಂಬದಲ್ಲಿ ಅವನ ದೀರ್ಘ ಆಯುಸ್ಸು ಮತ್ತು ಆರೋಗ್ಯವು ಅವನ ರಾಜ್ಯಭಾರ ಕಾಲದಲ್ಲಿ ಪ್ರಜೆಗಳ ಸುಖ ಸೌಲಭ್ಯಗಳಿಗಾಗಿ ವಿನಿಯೋಗಿಸಲ್ಪಡುತ್ತದೆ. ಇದರಿಂದ ಎಲ್ಲರೂ ರಾಜನ ದೀರ್ಘಾಯುವಿಗಾಗಿ ಪ್ರಾರ್ಥಿಸುತ್ತಾರೆ ಎಂದನು.

ಮತ್ತೆ ಹೇಳಬೇಕಾಗಿಲ್ಲ! ರಾಜನು ಅವನಿಗೆ ಪಾರಿತೋಷಕವನ್ನೂ ಬಿರುದು ಬಾವಲಿಗಳನ್ನು ದಯಪಾಲಿಸಿದನು. ಹೇಳಬೇಕಾದುದನ್ನು ನಯವಾಗಿ ಹೇಳಬಹುದಲ್ಲವೇ?