Logo

VHP PUBLICATIONS

Hindu Vani


expand_more

ಪ್ರಸ್ತುತ

By - ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು

ವೈದ್ಯೋ ನಾರಾಯಣೋ ಹರಿಃ

ಯಾವುದೇ ಚಿಕಿತ್ಸೆಗಾಗಿ ನಾವು ವೈದ್ಯರ ಬಳಿ ಹೋಗೇ ಇಲ್ಲ ಎಂದು ಹೇಳುವವರು ಈಗ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಿಗಬಹುದು. ನಮ್ಮ ಮನೆಯ ಹತ್ತಿರ ಡಾಕ್ಟರ್‌ ಇದ್ದಾರೆ ಎಂದರೆ ನಮಗೇನೋ ಸುರಕ್ಷಿತೆಯ ಭಾವ. ಯಾವುದೇ ಪ್ರವಾಸಕ್ಕೆ ಹೋಗುವಾಗಲೂ ನಮ್ಮ ಗುಂಪಿನಲ್ಲಿ ವೈದ್ಯರಿದ್ದರೆ ನಿರಾಳ ಭಾವ.

ಅನಿರೀಕ್ಷಿತ ಆಪತ್ತಿನ ಸಂದರ್ಭಗಳಲ್ಲಿ ವೈದ್ಯರು ತಮ್ಮ ವೈಯಕ್ತಿಕ ತೊಂದರೆಗಳನ್ನು ಲೆಕ್ಕಿಸದೆ ಚಿಕಿತ್ಸೆ ಮಾಡಿ ರೋಗಿಗಳ ಪ್ರಾಣರಕ್ಷಣೆ ಮಾಡಿರುವ ಘಟನೆಗಳಂತೂ ಮೆಚ್ಚಲೇಬೇಕಾದುದು.


ಪ್ರಸ್ತುತ

ಕೆಲದಿನಗಳ ಹಿಂದಷ್ಟೇ ಗೋವಾದಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವಿದೇಶೀ ಯುವತಿಯೊಬ್ಬಳಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆಗ ಆ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಖಾನಾಪುರದ ಮಾಜಿ ಶಾಸಕಿ ಡಾ| ಅಂಜಲಿ ನಿಂಬಾಳ‌ ಅವರು ಸುಮಾರು ಒಂದುವರೆ ಗಂಟೆಯ ಹೊತ್ತು. ಆ ಯುವತಿಯ ಚಿಕಿತ್ಸೆ ಮಾಡುತ್ತಾ ತೀವ್ರಗಮನ ವಹಿಸಿದ್ದರು. ಡಾ| ಅಂಜಲಿಯವರು ಮೊದಲು ಚಿಕಿತ್ಸೆ ಮಾಡಿದಾಗ ಚೇತರಿಸಿಕೊಂಡಿದ್ದ ಅರ್ಧಗಂಟೆಯಲ್ಲಿ ಕುಸಿದು ಯುವತಿ ಮುಂದಿನ ಬಿದ್ದಿದ್ದರು. ಹೀಗೆಯೇ ಮತ್ತೊಮ್ಮೆ ಆದಾಗ ಅಂಜಲಿಯವರು ರೋಗಿಯ ಹತ್ತಿರವೇ ನಿಂತು ತಾವೇ ಗಮನಿಸುತ್ತಾ ಚಿಕಿತ್ಸೆ ಮುಂದುವರಿಸಿದರು. ಹಾಗೂ ಮುಂದಿನ ವಿಮಾನದಲ್ಲಿ ಯುವತಿಯ ಚಿಕಿತ್ಸೆಗೆ ತುರ್ತಾಗಿ ಎಲ್ಲಾ ಕ್ರಮ ತೆಗೆದುಕೊಳ್ಳಬೇಕೆಂದು ಫೋನಿನಲ್ಲಿ ಎಲ್ಲಾ ಮಾಹಿತಿ ಕೊಟ್ಟರು. ಇದರಿಂದಾಗಿ ಆ ಯುವತಿಗೆ ಶೀಘ್ರವಾಗಿ ಸರಿಯಾದ ಚಿಕಿತ್ಸೆ ದೊರೆತು. ಆಕೆ ಗುಣಮುಖರಾಗುವಂತಾಯಿತು. ಡಾ|| ಅಂಜಲಿಯವರ ಸಮಯ ಪ್ರಜ್ಞೆ ಸಮಯೋಚಿತ ಚಿಕಿತ್ಸೆಯಿಂದಾಗಿ ಒಬ್ಬರ ಪ್ರಾಣ ರಕ್ಷಣೆಯಾಯಿತು. ವಿಮಾನದಲ್ಲಿ ಸಿಗಬಹುದಾದ ಚಿಕಿತ್ಸಾ ಸಾಧನೆಗಳನ್ನೇ ಉಪಯೋಗಿಸಿಕೊಂಡು ಪ್ರಾಣ ರಕ್ಷಣೆ ಮಾಡಿದ್ದ ವೈದ್ಯೆ ಸಹಜವಾಗಿ ಎಲ್ಲರ ಮೆಚ್ಚುಗೆ ಪಾತ್ರರಾದರು.

ಇನ್ನೊಮ್ಮೆ ಇಂಗ್ಲೆಂಡಿನಿಂದ ಅಮೇರಿಕಾಗೆ ಹೊರಟಿದ್ದ ವಿಮಾನದಲ್ಲಿ 15 ಮಂದಿ ಹೃದಯ ತಜ್ಞರು ಒಂದು ಕಾನ್ಸರೆನ್ಸ್‌ಗಾಗಿ ಪ್ರಯಾಣಿಸುತ್ತಿದ್ದರು. ಅದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಇದ್ದಕ್ಕಿದ್ದಂತೆ ಹೃದಯದ ತೊಂದರೆ ಎದುರಾಗಿತ್ತು. ಆಗ ತಂಡವೇ ಇದ್ದುದ್ದರಿಂದ ಚಿಕಿತ್ಸೆ ಮಾಡಿ ಆ ವ್ಯಕ್ತಿಯನ್ನು ಅಪಾಯದಿಂದ ಪಾರು ಮಾಡಿದ್ದರು.

ಹಿಂದೆ ಗರ್ಭಿಣಿ ಒಬ್ಬಾಕೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಹೆರಿಗೆ ನೋವು ಉಂಟಾಗಿ ವೈದ್ಯರೊಬ್ಬರು ಅಲ್ಲೇ ಹೆರಿಗೆ ಮಾಡಿಸಿದ್ದ ಘಟನೆಯು ವರದಿಯಾಗಿತ್ತು. ಅಂತರಿಕ್ಷದಲ್ಲಿ ಹುಟ್ಟಿದ ಮಗುವಿನ ಬಗ್ಗೆ ಸಾಕಷ್ಟು ಹೇಳಿಕೆಗಳು ಹಾಗೂ ವೈದ್ಯರ ಬಗ್ಗೆ ಮೆಚ್ಚುಗೆಯ ನುಡಿಗಳು ಕೇಳಿ ಬಂದಿದ್ದವು.

ಹೀಗೆ ಅನೇಕ ವೈದ್ಯರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಕೇಳುತ್ತಿರುತ್ತೇವೆ. ದೀನದಲಿತರ ಸೇವೆಗೆಂದೇ ವೈದ್ಯಕೀಯ ಅಭ್ಯಾಸವನ್ನು ಮಾಡಲಿಚ್ಚಿಸಿದ ಶ್ರೀ ರಮಣರಾವ್ ವೈದ್ಯರಾಗಿ ಪದವಿ ಪಡೆದಂದಿನಿಂದಲೇ ತಮ್ಮ ಆಶಯವನ್ನು ಸಾಕಾರಗೊಳಿಸಿಕೊಳ್ಳತೊಡಗಿದರು. 1973ರಿಂದ ಡಾ. ರಾವ್ ಪ್ರತಿ ಭಾನುವಾರ ತಮ್ಮ ಹಳ್ಳಿ ಟಿ. ಬೆಗೂರಿನ ಚಿಕಿತ್ಸಾಲಯದಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರನ್ನು ಅನುಸರಿಸಿ ಸೇವೆ ಸಲ್ಲಿಸಲು ಇನ್ನು ಅನೇಕ ನುರಿತ ವೈದ್ಯರು ಇವರೊಂದಿಗೆ ಇದ್ದಾರೆ. ಇವರು ಪ್ರಕೃತಿ, ಪರಿಸರಕ್ಕೂ ಸಲ್ಲಿಸುತ್ತಿರುವ ಸೇವೆಯೂ ಅಮೋಘವಾದದ್ದು. ಮೂವತ್ತೈದು ಸಾವಿರ ಸಸಿಗಳನ್ನು ನೆಟ್ಟಿರುವ ಡಾ. ರಾವ್, ಬಡವರಿಗಾಗಿ ಏಳೂ ನೂರಕ್ಕೂ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಹಾಗೆಯೇ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿ ಅವರನ್ನು ಅರಸಿ ಬಂದಿದೆ.

ನಮ್ಮ ಕುಟುಂಬದ ವೈದ್ಯರೆಂದೇ ಭಾವಿಸಿರುವ ವೈದ್ಯರು ಮೊದಲು ಮಿಲಿಟರಿ ವೈದ್ಯರಾಗಿದ್ದು ನಿವೃತ್ತರಾಗಿರುವವರು.

ಅಂದು ರಾತ್ರಿ ನಮ್ಮವರಿಗೆ ಕೆಮ್ಮು ವಿಪರೀತ ಬಾಧಿಸತೊಡಗಿದ್ದಾಗ ನೊಬೆಲೈ ಜೇಷನ್‌ಗಾಗಿ ಹತ್ತಿರದ ನರ್ಸಿಂಗ್ ಹೋಮ್‌ಗೆ ಹೋಗುವಂತೆ ಹೇಳಿದರು. ನಾವು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬರುವಾಗ ರಾತ್ರಿ 11ರ ಸಮಯ. ಅಷ್ಟೊತ್ತಿಗೆ ನಮ್ಮ ವೈದ್ಯರಿಗೆ ತಿಳಿಸಿದರೆ ತೊಂದರೆಯಾಗಬಹುದೆಂದು ಮರುದಿನ ಬೆಳಗ್ಗೆ ವಿಷಯ ತಿಳಿಸಲು ನಿರ್ಧರಿಸಿದ್ದೆವು. ಆದರೆ ತಮ್ಮ ರೋಗಿಗಳ ಬಗ್ಗೆ ಅತೀವ ಕಾಳಜಿ ವಹಿಸಿದ್ದ ವೈದ್ಯರು ತಾವೇ ಫೋನ್ ಮಾಡಿ ವಿಷಯವನ್ನೆಲ್ಲ ತಿಳಿದುಕೊಂಡರು. ಅವರು ಬಡವರಿಗೆ ಅತಿ ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಾರೆ. ಬೇರೆ ರೋಗಿಗಳಿಗೆ ತೆಗೆದುಕೊಳ್ಳುವ ಶುಲ್ಕವೂ ಕಡಿಮೆಯೇ! ತಮ್ಮ ನಿವೃತ್ತ ಜೀವನವನ್ನು ಹೀಗೆ ಜನರ ಸೇವೆಯಲ್ಲಿ ಕಳೆಯುತ್ತಿದ್ದಾರೆ. ರೋಗಿಗಳಿಗೆ ಅರ್ಥವಾಗುವಂತೆ ಎಲ್ಲವನ್ನು ತಿಳಿಸಿ ಹೇಳುತ್ತಾರೆ. ಇವರು ಒಂದು ವಾರ ರಜೆ ಹಾಕಿಬಿಟ್ಟರೆ ಎಲ್ಲರೂ ಅವರನ್ನು ವಿಚಾರಿಸುವವರೇ! ಇಂತಹ ವೈದ್ಯರು ಈಗಲೂ ಇದ್ದಾರಲ್ಲ ಎಂಬುದೇ ನಮಗೆ ಹೆಮ್ಮೆ.

ಆಗ ಮಗನಿಗೆ ದ್ವಿತೀಯ ಪಿ.ಯು.ಸಿ.ಯ ಗಣಿತದ ಪರೀಕ್ಷೆ, ಹಿಂದಿನ ದಿನ ಅಜೀರ್ಣದ ತೊಂದರೆ ಉಂಟಾಗಿತ್ತು. ಮನೆಯ ಔಷಧಿಗಳಿಂದ ಗುಣ ಕಾಣಲಿಲ್ಲ. ವಿಪರೀತ ಆಯಾಸವಾಗಿತ್ತು. ಪಿ.ಯು.ಸಿ.ಯ ಅಂಕಗಳು ಎಂದರೆ ಈಗಂತು ಮುಂದಿನ ಬದುಕಿನ ಪ್ರಶ್ನೆ ಎಂಬಂತೆ.

ಅವನಿಗೆ ಕುಡಿದಿದ್ದು, ತಿಂದಿದ್ದು ಏನು ದಕ್ಕದಂತಾಯಿತು. ವಿಪರೀತ ಆಯಾಸ ಬೇರೆ, ಫೋನ್ ಮೂಲಕ ವೈದ್ಯರಿಗೆ ತಿಳಿಸಿ ತುರ್ತು ಆವಕಾಶಕ್ಕಾಗಿ ಕೇಳಿಕೊಂಡವು. ಆ ದಿನದ ಔಷಧ ಬರೆದು ಕೊಟ್ಟು ತೆಗೆದುಕೊಳ್ಳುವಂತೆ ಹೇಳಿದರು. ಮರುದಿನ ಪರೀಕ್ಷೆಗೆ ಹೋಗುವ ಮೊದಲು ಬಂದು ಚುಚ್ಚುಮದ್ದು ತೆಗೆದುಕೊಂಡು ಹೋಗುವಂತೆ ತಿಳಿಸಿದರು ಅವರು ಹೇಳಿದಂತೆ ಔಷಧ ಕೊಟ್ಟರು. ಅವನ ಸ್ಥಿತಿ ತುಸು ಸುಧಾರಿಸಿದರೂ ಪೂರ್ಣ ಗುಣವಾಗಿರಲಿಲ್ಲ. ಮರುದಿನ ವೈದ್ಯರು ಹೇಳಿದಂತೆ ಕರೆದುಕೊಂಡು ಹೋಗಿ ಅವನಿಗೆ ಚುಚ್ಚುಮದ್ದು ಕೊಡಿಸಿ ಪರೀಕ್ಷೆಗೆ ಅವನೊಂದಿಗೆ ನಾವೂ ಹೊರಟೆವು. ಪರೀಕ್ಷೆ ಹೇಗೆ ಬರೆಯುತ್ತಾನೋ ಎಂಬ ದಿಗಿಲು. ಪ್ರಾಂಶುಪಾಲರನ್ನು ಕೇಳಿಕೊಂಡು ಎಳನೀರು, ಎಲೆಕ್ಟ್ರಾನ್‌ನೀರು ಎಲ್ಲವನ್ನು ಇಟ್ಟುಕೊಂಡು ಕಾಲೇಜಿನ ಆವರಣದಲ್ಲಿ ಕಾತರದಿಂದ ಕಾಯುತ್ತಾ ಕುಳಿತಿದ್ದೆವು. ಎಷ್ಟು ಹೊತ್ತು ಅವನಿಗೆ ಕುಳಿತುಕೊಳ್ಳಲು ಆಗುತ್ತದೋ... ಚುಚ್ಚುಮದ್ದಿನ ಪ್ರಭಾವದಿಂದ ಕಣ್ಣಿಗೆ ಮಂಪರು ಬಂದು ನಿದ್ದೆ ಬರುವಂತಾದರೆ... ಮೂರು ಗಂಟೆಗಳನ್ನು ಕಳೆಯುವುದು ಮೂರು ಯುಗದಂತೆ ಅನಿಸುತ್ತಿತ್ತು. ಕೊನೆಗೂ ಪರೀಕ್ಷೆ ಮುಗಿಸಿಕೊಂಡು ಮಗ ಹೊರಗೆ ಬಂದಾಗ ನಮಗೋ ಕೇಳಲು ಹಲವಾರು ಪ್ರಶ್ನೆಗಳು 'ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತಾ ಎಲ್ಲವನ್ನು ಮಾಡಿದ್ದೇನೆ. ಪ್ರಶ್ನೆ ಪತ್ರಿಕೆ ಸುಲಭವಿತ್ತು. ಎಂದು ಅವನು ಹೇಳಿದಾಗ ನಮಗಾದ ಸಮಾಧಾನಕ್ಕೆ ಎಣೆಯುಂಟೆ! ಒಂದು ರೀತಿಯಲ್ಲಿ ಆ ವೈದ್ಯರು ನಮ್ಮ ಮಗನಿಗೆ ಅತ್ಯಂತ ಪ್ರಮುಖ ಘಟ್ಟದಲ್ಲಿ ಎಂದೆಂದಿಗೂ ಮರೆಯಲಾರದಂತಹ, ಮರೆಯಬಾರದಂತಹ ಪಾತ್ರವಹಿಸಿದ್ದರು.

ಪದ್ಮಶ್ರೀ ಪಶಸ್ತಿ ಪಡೆದಿರುವ ಡಾ|| ವಿಜಯಲಕ್ಷ್ಮೀ ದೇಶಮಾನೆಯವರಿಗೆ ರೋಗಿಗಳ ಬಗ್ಗೆ ಅತಿ ಹೆಚ್ಚು ಕಾಳಜಿ, ಅವರ ಬಳಿ ಮಾತನಾಡಿಬಿಟ್ಟರೆ ರೋಗಿಗಳಿಗೆ ಅತ್ಯಂತ ಸಮಾಧಾನ. ರೋಗಿಗಳ ಮನೆಯವರಿಗೆ ಭರವಸೆಯ ಬೆಳಕು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿಗಳು ಗುಣಮುಖರಾಗಿ ಮನೆಗೆ ಹೋಗುವಾಗ ಅವರ ಮನೆಯವರ ಮುಖದಲ್ಲಿ ಮೂಡುವ ಸಂತೃಪ್ತಿಯ ಕಿರುನಗೆಯನ್ನು ಕಂಡಾಗ ವೈದ್ಯರಿಗಾಗುವ ಸಂತೋಷಕ್ಕೆ ಎಣೆಯುಂಟೆ!

ಪ್ರಸ್ತುತ

ಕ್ಯಾನ್ಸರ್ ತಜ್ಞೆಯಾದ ಆ ವೈದ್ಯೆ ಹೀಗೆ ನುಡಿಯುವಾಗ ರೋಗಿಗಳ ಅವರ ಮನೆಯವರ ಬಗ್ಗೆ ಇರುವ ಕಳಕಳಿ ನಿಚ್ಚಳವಾಗುತ್ತದೆ.

ಡಾ. ವಿಜಯಲಕ್ಷ್ಮಿ ಅವರು ಹೇಳಿಕೊಂಡ ಆ ಘಟನೆಯಂತೂ ಅವರ ಸಹೃದಯತೆಗೆ ಸಹಾನುಭೂತಿಗೆ ಮಾದರಿಯಾಗಿದೆ.

ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಕ್ಕನನ್ನು ನೋಡಿಕೊಳ್ಳುತ್ತಿದ್ದ ತಮ್ಮನಿಗೆ ಅತೀವ ಕಾಳಜಿ. ಅಕ್ಕನ ಆರೋಗ್ಯ ಸುಧಾರಿಸಿತೆ ಎಂಬ ಆತಂಕ, ಚಡಪಡಿಕೆ. ಹೇಗಾದರೂ ಉಳಿಸಿಕೊಳ್ಳಲೇಬೇಕೆಂಬ ಹೃದಯದ ತುಡಿತ. ಸರ್ಜರಿಯಿಂದ ಸರಿಹೋಗಬಹುದೆಂಬ ಒಂದೇ ಒಂದು ಆಶಾಕಿರಣ. ಆದರೆ ವಿಜಯಲಕ್ಷ್ಮಿಯವರಿಗೆ ಪೂರ್ಣ ಭರವಸೆಯಿಲ್ಲ. ರೋಗಿಯನ್ನು ಉಳಿಸಿಕೊಳ್ಳಲು ಅದೊಂದು ಪ್ರಯತ್ನ ಮಾಡಬೇಕಿತ್ತು, ಮನೆಯವರೆಲ್ಲ ಒಪ್ಪಿಗೆ ಕೊಟ್ಟಿದ್ದರು. ಶಸ್ತ್ರ ಚಿಕಿತ್ಸೆಯನ್ನು ಮಾಡಿದ ವೈದ್ಯೆ ನೆಮ್ಮದಿಯ ಉಸಿರು ಬಿಡುವಾಗಲೇ ಇದ್ದಕ್ಕಿದಂತೆ ರಕ್ತ ಸೋರಿಕೆ ತೀವ್ರವಾಗಿ ಸುತ್ತೆಲ್ಲಾ ವ್ಯಾಪಿಸಿತು.

ರೋಗಿಯನ್ನು ಉಳಿಸಲಾಗದ ದುಃಖ, ಚಿಂತೆ ವೈದ್ಯರಿಗೆ ಅಷ್ಟು ಹೊತ್ತು ಅಕ್ಕ ಚೇತರಿಸಿಕೊಂಡಾರೆಂಬ ನಿರೀಕ್ಷೆಯಿಂದ ಊಟ-ತಿಂಡಿ ಇರಲಿ ಪ್ರಕೃತಿಯ ಕರೆಗೂ ಓಗೊಟ್ಟಿರಲಿಲ್ಲ. ಇದೀಗ ಭರವಸೆ ಹುಸಿಯಾಯಿತೆಂಬ ದುಃಖ. ಏನೂ ಮಾಡಲಾಗದ ಅಸಹಾಯಕತೆ. ಜೊತೆ ಜೊತೆಗೇ ರಣ ಹಸಿವು... ಆಕ್ಷಣವೇ ಕುಸಿದುಬೀಳುವ ಹಾಗೆ... ಡಾಕ್ಟರ್‌ಗೆ ಅವರ ಸ್ಥಿತಿಯ ಅರಿವಾಗಿತ್ತು.

ಎಷ್ಟು ಕಷ್ಟಪಟ್ಟರೂ ನಮ್ಮಿಂದ ಆ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ. ಧೈರ್ಯ ತಂದುಕೊ.. ನಿನ್ನ ಪ್ರಯತ್ನ ಬಹಳ ದೊಡ್ಡದಪ್ಪ.. ನಿನ್ನ ಹಸಿವನ್ನಾದರೂ ನೀಗಿಸಿಕೋ ಎಂದು ತನಗೆಂದು ತಂದಿದ್ದ ಊಟದ ಡಬ್ಬಿಯನ್ನೇ ಆತನಿಗೆ ಕೊಟ್ಟುಬಿಟ್ಟಿದ್ದರು. ವೈದ್ಯೆಯೇ ಅಕ್ಕನ ರೂಪದಲ್ಲಿ ಬಂದ ಹಾಗೆನಿಸಿರಬೇಕು ಆತನಿಗೆ. ಕಣ್ಣೀರು ಸುರಿಸುತ್ತಲೇ ಅನ್ನಪೂರ್ಣೆಯಾಗಿ ವೈದ್ಯೆ ಕೊಟ್ಟ ಆಹಾರವನ್ನು ಸೇವಿಸಿದ್ದರು.

ಗಂಟೆಗಳ ಕಾಲ ನಿಂತು ಸರ್ಜರಿ ಮಾಡಿದ ವೈದ್ಯೆಯೂ ಸಾಕಷ್ಟು ಬಳಲಿದ್ದರು. ಅವರು ಕೈಗೊಂಡ ಕೊನೆಯ ಪ್ರಯತ್ನವೂ ಫಲಿಸದ ನಿರಾಶೆಯನ್ನು ನುಂಗಿಕೊಂಡು ಆ ತಮ್ಮನನ್ನು ಸಂತೈಸಿದ್ದರು. “ನಿಮ್ಮ ಊಟ?” ಎನ್ನುವಂತೆ ದಿಟ್ಟಿಸಿದ ಆ ಸೋದರನಿಗೆ ತೊಂದರೆಯಿಲ್ಲ ಎಂಬಂತೆ ತಲೆಯಾಡಿಸುತ್ತಾ ನೊಂದ ಹೃದಯವನ್ನು ಸಾಂತ್ವನಗೊಳಿಸುವ ಪ್ರಯತ್ನ ಮಾಡಿದ್ದರು.

ಕ್ಯಾನ್ಸರ್ ತಜ್ಞೆಯಾಗಿ, ರೋಗಿಗಳ ಹತ್ತಿರದ ಬಂಧುವಾಗಿ, ಬಡವರಿಗೆ ಭಾಗ್ಯವಾಗಿ ಈ ವೈದ್ಯೆ ಅಕ್ಕ ಈಗಲೂ ಸಮಾಜ ಸೇವೆ ಮಾಡುತ್ತಲೇ ಇದ್ದಾರೆ.

ನಮ್ಮ ಪರಿಚಿತ ಯುವ ವೈದ್ಯರೊಬ್ಬರು ಒಂದು ದಿನ ಸಂಜೆ ಪ್ರಜ್ಞಾಹೀನರಾಗಿದ್ದರು. ತುರ್ತಾಗಿ ನರ್ಸಿಂಗ್ ಹೋಂಗೆ ಕರೆದೊಯ್ದಾಗ ಕಾರಣ ತಿಳಿದಿತ್ತು. ಅಂದು ಬೆಳಗಿನಿಂದ ಬಿಡುವಿಲ್ಲದೆ ಹತ್ತು ಗಂಟೆಯಷ್ಟು ಹೊತ್ತು ನಿಂತೇ ಸರ್ಜರಿಯಲ್ಲಿ ತೊಡಗಿದ್ದರಂತೆ. ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದ ಪರಿಣಾಮವಾಗಿ ತಲೆಸುತ್ತು ಬಂದು ಹಾಗಾಗಿತ್ತು.

ಹೀಗೇ ವೈದ್ಯರು ಹಸಿವು, ನಿದ್ದೆ, ವಿಶ್ರಾಂತಿಗಳ ಪರಿವಿಲ್ಲದೆ, ದಣಿವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಲೇ ಇರುತ್ತಾರೆ. ಎಷ್ಟೋ ಜೀವಿಗಳನ್ನು ಉಳಿಸಲು ತಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಮಾಡಿರುತ್ತಾರೆ.

ಹಾಗೆಂದು ವೈದ್ಯರಾದ ಮಾತ್ರಕ್ಕೆ ಎಲ್ಲರನ್ನು ಉಳಿಸಲಾಗುವುದಿಲ್ಲ. ಆದರೆ ರೋಗಿಯ ಮನೆಯವರು ವೈದ್ಯರ ಬಗ್ಗೆ ವಿಪರೀತ ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಕೆಲವರಂತೂ ಮನಸ್ಸಿಗೆ ಬಂದಂತೆ ಶಿಕ್ಷಿಸುವ ಹಂತಕ್ಕೂ ಹೋಗಿಬಿಡುತ್ತಾರೆ.

ಪ್ರಾಮಾಣಿಕವಾಗಿ ವೈದ್ಯವೃತ್ತಿ ಮಾಡುತ್ತಿರುವವರ ಧೈಯ ಆದಷ್ಟು ಪ್ರಾಣಗಳನ್ನು ಉಳಿಸುವುದು ಹಾಗೂ ಜನರನ್ನು ನಿರೋಗಿಗಳನ್ನಾಗಿ ಮಾಡುವುದು. ಹಾಗೆ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸಿದವರ ಮೇಲೆಯೂ ಆರೋಪ ಹೊರಿಸಿದಾಗ ವೈದ್ಯರಿಗೆ ತಮ್ಮ ಮುಂದಿನ ದಾರಿಯ ಬಗ್ಗೆ ಗೊಂದಲವುಂಟಾಗುತ್ತದೆ.

ಹಾಗೆಯೇ ಕೆಲವು ವೈದ್ಯರ ಬಗ್ಗೆ ನರ್ಸಿಂಗ್ ಹೋಂಗಳ ಬಗ್ಗೆ ಅತ್ಯಂತ ಕೆಟ್ಟ ಅಭಿಪ್ರಾಯಗಳಿರುವುದನ್ನು ಪೂರ್ಣವಾಗಿ ಅಲ್ಲಗಳೆಯಲಾರದು. ಕೋಟಿಗಟ್ಟಲೆ ಸಾಲ ಮಾಡಿ ಓದಿ ಅನುಭವ ಪಡೆದು. ನರ್ಸಿಂಗ್ ಹೋಂ ತೆರೆದ ನಂತರ ಹಣಗಳಿಸುವ ಹುನ್ನಾರದಲ್ಲಿ ಮಾಡಬಾರದನ್ನು ಮಾಡಿದ ಉದಾಹರಣೆಗಳನ್ನು ಕೇಳುತ್ತಲೇ ಇರುತ್ತೇವೆ.

ಅನಗತ್ಯ ವಿಶೇಷ ಪರೀಕ್ಷೆಗಳು, ಅನಗತ್ಯ ಶಸ್ತ್ರ ಚಿಕಿತ್ಸೆ, ಅಂಗಾಂಗಗಳ ಮಾರಾಟ ನಕಲಿ ಚಿಕಿತ್ಸೆ, ಹೀಗೆ ನಾನಾ ವಿಧಗಳಲ್ಲಿ ರೋಗಿಗಳ ಹಣ ಕೊಳ್ಳೆಹೊಡೆಯುತ್ತಾರಂತೆ.

ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ

ಯಮಸ್ತು ಹರತಿ ಪ್ರಾಣಂ ವೈದ್ಯಃ ಪ್ರಾಣಾನ್ ಧನಾನಿ ಚ।

ಮೇಲಿನ ಶ್ಲೋಕ ಸತ್ಯವಾಗದಿರಲಿ. ಅನೇಕ ಬಾರಿ ಸತ್ಯಸಂಗತಿಗಳಿಗೆ ಮತ್ತಷ್ಟು ಊಹಾಪೋಹಗಳು, ರೆಕ್ಕೆಪುಕ್ಕಗಳು ಸೇರಿ ಜನಸಾಮಾನ್ಯರನ್ನು ಕಂಗೆಡಿಸುವುದಂತೂ ನಿಜ.

ಅನೇಕ ಆದರ್ಶ ವೈದ್ಯರ ಕಾಳಜಿಯನ್ನು ಪರಿಶ್ರಮವನ್ನು, ನಿಸ್ವಾರ್ಥ ಸೇವೆಯನ್ನು ರೋಗಿಗಳ ಬಗೆಗಿನ ಕಳಕಳಿಯನ್ನು ಮರೆಯದಿರೋಣ. ಅತಿ ಕಷ್ಟದ ಸಂದರ್ಭಗಳಲ್ಲಿ ತಮ್ಮ ಚಿಕಿತ್ಸಾ ನೈಮಣ್ಯದಿಂದ ರೋಗಿಗಳನ್ನು ಕಾಪಾಡುತ್ತಿರುವ ಅವರೆಲ್ಲರೂ ನರರೂಪಿ ನಾರಾಯಣರೇ ಅಲ್ಲವೇ?

ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತ ಕಲೇಬರೇ

ಔಷಧಂ ಜಾಹ್ನವೀ ತೋಯಂ ವೈದ್ಯೋ ನಾರಾಯಣೋ ಹರಿಃ ||


ಪ್ರಸ್ತುತ

.