Logo

VHP PUBLICATIONS

Hindu Vani


expand_more

ಕ್ಷೇತ್ರದರ್ಶನ

By - ಪಾರಿಜಾತ ಬಿ.ಎಸ್., ಬೆಂಗಳೂರು

ವಿದ್ಯಾಧಿದೇವತೆ ಹಯಗ್ರೀವ ಸ್ವಾಮಿ ಕ್ಷೇತ್ರ


“ಜ್ಞಾನಾನಂದಂ ಮಯಂ ದೇವಂ ನಿರ್ಮಲ ಸ್ಪಟಿಕಾಕೃತಿಂ 

ಆಧಾರಂ ಸರ್ವ ವಿದ್ಯಾನಾಂ ಹಯಗ್ರೀವಂ ಉಪಾಸ್ಮಹೇ”

ಈ ಜಗತ್ತಿನಲ್ಲಿ ಪ್ರತಿಯೊಂದು ವಿಷಯಕ್ಕೂ ಘಟನೆಗೂ ಒಂದು ಕಾರಣವುಂಟು ಎಂಬುದನ್ನು ಅರಿತ ಮನಜ ಕುಲ ಅದರ ಆಗು ಹೋಗುಗಳನ್ನು ತನ್ನ ಜೀವನದ ಪ್ರತಿ ಹೆಜ್ಜೆಯಲ್ಲೂ ಅನುಭವಿಸುತ್ತಾ ಸಾಗುತ್ತಿದೆ. ಕಾರ್ಯಕ್ಕೊಂದು ಕಾರಣ, ಕಾರಣಕ್ಕೊಂದು ಸಮಸ್ಯೆ, ಸಮಸ್ಯೆಗೊಂದು ಪರಿಹಾರವೆಂಬುದನ್ನು ಬಲ್ಲ ಮನುಜ ಈ ಕಾರ್ಯ, ಕಾರಣ ಸಮಸ್ಯೆ ಪರಿಹಾರಗಳಲ್ಲಿ ಭಗವಂತನ ಕೈಚಳಕವನ್ನು ಹುಡುಕುತ್ತಾನೆ. ಹೊಣೆ ಮಾಡುತ್ತಾನೆ. ಅಂತೆಯೇ ವಿದ್ಯೆ, ಬುದ್ದಿ, ಅರೋಗ್ಯ ಸಿರಿಸಂಪತ್ತುಗಳಿಗಾಗಿ ಕೊನೆಯವರೆಗೂ ಹೋರಾಟದ ಬದುಕು ಮನುಕುಲದ್ದು. ಈ ಹೋರಾಟದ ಸೂತ್ರದಾರ ಆ ಭಗವಂತನೆಂದು ಆತನನ್ನು ತನ್ನೊಡನೇ ಅನೇಕ ಕ್ಷೇತ್ರಗಳಲ್ಲಿ ವಿವಿಧ ರೂಪಗಳಲ್ಲಿ ಬಗೆಬಗೆಯ ರೀತಿಯಲ್ಲಿ ಆರಾಧಿಸಿ ಪೂಜಿಸಿ ಒಲಿಸಿ, ತನ್ನೆಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನೆರವೇರೆಸಿಕೊಳ್ಳುವಲ್ಲಿ ಮನುಜ ತನ್ನದೇ ಆದ ದಾರಿ ಕಂಡುಕೊಂಡಿದ್ದಾನೆ. ಇಂತಹ ದೈವ ಸಾನ್ನಿಧ್ಯವಿರುವ ಪವಿತ್ರ ಕ್ಷೇತ್ರಗಳಲ್ಲಿ ವಿದ್ಯೆಗೆ ಅಧಿದೇವತೆಯಾಗಿ ಹಯಗ್ರೀವ ಸ್ವಾಮಿ ನೆಲೆಸಿರುವ ಬೆಂಗಳೂರಿನ ಹೃದಯ ಭಾಗದ ಶ್ರೀ ಹಯಗ್ರೀವ ದೇವಾಲಯ ಕ್ಷೇತ್ರ ಒಂದು.


ಕ್ಷೇತ್ರದರ್ಶನ

ಈ ಕ್ಷೇತ್ರವು ಬೆಂಗಳೂರಿನ ಮೆಜಸ್ಟಿಕ್‌ ಪ್ರದೇಶದಲ್ಲಿದೆ. ಸದಾ ಜನಜಂಗುಳಿಯ ಪ್ರದೇಶದಲ್ಲಿದ್ದರೂ ಸುಂದರ ಆವರಣದೊಳಗೆ ಪ್ರಶಾಂತ ವಾತಾವರಣದಲ್ಲಿ ದೇಗುಲದ ಒಳಹೊಕ್ಕಂತೆ ನಿರ್ಮಲ ಮನಸ್ಸು ನಮ್ಮದಾಗುತ್ತದೆ. ವಿದ್ಯೆಗೆ ಅಧಿದೈವವಾಗಿ ಸಹಸ್ರಾರು ಭಕ್ತರ ಅದರಲ್ಲೂ ವಿದ್ಯಾರ್ಥಿಗಳ ಆರಾಧ್ಯ ದೈವವಾಗಿ ಹಯಗ್ರೀವ ಸ್ವಾಮಿ ಆರಾಧಿಸಲ್ಪಡುತ್ತಿದೆ.

ಹಯಗ್ರೀವ ಅವತಾರ ಪೌರಾಣಿಕ ಹಿನ್ನೆಲೆ: ಹಿಂದೆ ಹಯಗ್ರೀವನೆಂಬ ಅಸುರನು ದೇವತೆಯನ್ನು ಒಲಿಸಿಕೊಂಡು ವರ ಪಡೆದು ತನಗೆ ಅಂತ್ಯವೇ ಇಲ್ಲವೆಂಬ ಅಹಂನಿಂದ ಮೂರು ಲೋಕಗಳಲ್ಲೂ ದರ್ಪದಿಂದ ಮೆರೆಯುತ್ತಿರಲು ಈತನ ಉಪಟಳ ತಾಳಲಾರದೆ ದೇವಾನು ದೇವತೆಗಳು ಒಂದಾಗಿ ಶ್ರೀಮನ್ನಾರಾಯಣನನ್ನು ಮೊರೆಹೋಗಲು ಮಹಾವಿಷ್ಣುವು ಅಸುರನ ಸಂಹಾರಕ್ಕಾಗಿ ಆತನೊಂದಿಗೆ ಹೋರಾಡಲು ಮುಂದಾದ. ಆದರೆ ಹೋರಾಟದಲ್ಲಿ ಫಲಕಾಣದೆ ಬಳಲಿ ತನ್ನ ಧನುಸನ್ನೇ ತಲೆದಿಂಬಾಗಿಸಿ ಯೋಗನಿದ್ರೆಗೆ ಜಾರಿಬಿಟ್ಟನಂತೆ. ಇದನ್ನು ಕಂಡ ಹಯಗ್ರೀವ ಅಸುರನು ಮಹಾವಿಷ್ಣುವೇ ತನ್ನನ್ನು ಸೋಲಿಸಲಾಗದೇ ಹಿಂದಿರುಗಿದನಲ್ಲಾ ಎಂದು ಇನ್ನು ತನ್ನನ್ನು ನಿಗ್ರಹಿಸುವವರಾರು ಇಲ್ಲವೆಂಬ ಅಹಂಕಾರದಿಂದ ತನ್ನ ಉಪಟಳವನ್ನು ಮತ್ತಷ್ಟು ಹೆಚ್ಚಿಸಿದನು. ದಾರಿ ಕಾಣದೆ ದೇವಾನು ದೇವತೆಗಳು ವಿಷ್ಣುವನ್ನು ಮತ್ತೆ ಮೊರೆಹೋದರು. ಆಗ ಅಲ್ಲಿಗೆ ಆಗಮಿಸಿದ ಬ್ರಹ್ಮ ಮಹೇಶ್ವರರು ವಿಷ್ಣುವನ್ನು ಯೋಗ ನಿದ್ರೆಯಿಂದ ಎದ್ದೇಳಿಸಲು ಪ್ರಯತ್ನಿಸಿ ಸೋತು ಕೊನೆಗೆ ಧನುಸ್ಸಿನ ಜೋರಾದ ಝೇಂಕಾರವನ್ನು ಮಾಡಲು ಆ ರಭಸದಲ್ಲಿ ಧನಸ್ಸಿನ ತಂತಿಯು ಅಚಾತುರ್ಯದಿಂದ ಯೋಗನಿದ್ರೆಯಲ್ಲಿದ್ದ ವಿಷ್ಣುವಿನ ತಲೆಯನ್ನು ಕೊಯ್ದಿತಂತೆ, ತಲೆ ಇಲ್ಲದ ವಿಷ್ಣುವನ್ನು ಕಂಡು ಬ್ರಹ್ಮ ಮಹೇಶ್ವರರು ನೊಂದು ದಿಗ್ದಾಂತರಾಗಿ ತಾಯಿ ಜಗನ್ಮಾತೆಯ ಮೊರೆಯಿಟ್ಟರು. ಮಹಾಮಾಯೆ ದುರ್ಗೆಯು ಇದು ಅಸುರನಿಗೆ ನೀಡಿದ್ದ ವರವನ್ನು ಪಾಲಿಸಲೆಂದು ತಾನು ಮಾಡಿದ ಮಾಯೆ ಎಂದು ಹೇಳಿ ಒಂದು ಶ್ವೇತ ಹಯದ ಮುಖವನ್ನು ಬ್ರಹ್ಮನಿಗೆ ನೀಡಿ ಆ ಮುಖವನ್ನು ವಿಷ್ಣುವಿನ ದೇಹಕ್ಕೆ ಜೋಡಿಸಲು ಅಣತಿ ಮಾಡಿದಳಂತೆ. ಹೀಗೆ ಹಯದ ಮುಖವನ್ನು ಹೊಂದಿದ ವಿಷ್ಣುವು ಯೋಗ ನಿದ್ರೆಯಿಂದೆದ್ದು ಹಯಗ್ರೀವ ಅಸುರನನ್ನು ಸಂಹರಿಸಿ ಹಯಗ್ರೀವನೆನಿಸಿದನು.

ವಿದ್ಯಾಧಿದೇವತೆ ಹಿನ್ನೆಲೆ: ಒಮ್ಮೆ ವಿಶಿಷ್ಟಾದೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರು ಬ್ರಹ್ಮ ಸೂತ್ರ ಭಾಷ್ಯ'ವನ್ನು ತಾಯಿ ಸರಸ್ವತಿದೇವಿಯ ಮಂದಿರದಲ್ಲಿ ದೇವರ ಮುಂದೆ ಮಂಡಿಸಿದರಂತೆ. ಮಹಾಭಾಷ್ಯವನ್ನು ಕೇಳಿ ಸಂಪ್ರೀತಳಾದ ತಾಯಿ ಸರಸ್ವತಿಯು ಅದಕ್ಕೆ “ಶ್ರೀಭಾಷ್ಯಂ” ಎಂದು ಹೆಸರಿಸಿದಳು. ಅಲ್ಲದೆ ಯತಿರಾಜರಿಗೆ ಚತುರ್ಭುಜ ಭೂಷಿತನಾದ, ಶ್ವೇತವಸ್ತ್ರಧಾರಿಯಾದ, ಶ್ವೇತಾಶ್ವಮುಖಿ, ಬಿಳಿಯ ಕಮಲ ಪುಷ್ಪದಲ್ಲಿ ತನ್ನೆರಡೂ ಕೈಗಳಲ್ಲಿ ಶಂಖ ಚಕ್ರ, ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದರಲ್ಲಿ ಜಪಮಾಲೆ ಹೊಂದಿ ಕಾಲಿಗೆ ಗೆಜ್ಜೆ ಕಟ್ಟಿ ಪತ್ನಿ ಲಕ್ಷ್ಮಿಯೊಡನೆ ಆಸೀನನಾದ ಹಯಗ್ರೀವ ಸ್ವಾಮಿಯ ಮೂರ್ತಿಯನ್ನಿತ್ತಳಂತೆ. ಹೀಗೆ ವಿದ್ಯೆಗೆ ಅದಿದೇವತೆಯಾದನು ಆ ಭಗವಂತ.

ಮತ್ತೊಂದು ಘಟನೆಯಂತೆ ಒಮ್ಮೆ ಶ್ರೀ ವೈಷ್ಣವಾಚಾರ್ಯರಾದ ವೇದಾಂತ ದೇಶಿಕರು ಯಾತ್ರೆ ಮುಗಿಸಿಕೊಂಡು ಕಂಚಿಗೆ ಹಿಂದಿರುಗುವ ಮಾರ್ಗ ಮಧ್ಯೆ ಕತ್ತಲಾಗಲು ರಾತ್ರಿ ಪ್ರಯಾಣ ಬೇಡವೆಂದು ಹತ್ತಿರದ ಶ್ರೀಮಂತ ಧಾನ್ಯ ವ್ಯಾಪಾರಿಯ ಮನೆಯಲ್ಲಿ ಆಶ್ರಯ ಪಡೆದರಂತೆ. ಅಂದು ಹಯಗ್ರೀವನಿಗೆ ನೈವೇದ್ಯ ನೀಡಲು ಏನೂ ದೊರೆಯದೇ ಬರಿ ನೀರನ್ನು ನೈವೇದ್ಯ ಮಾಡಿ ಬೇಸರದಿಂದ ಮಲಗಿದರಂತೆ. ಮಧ್ಯ ರಾತ್ರಿ ವ್ಯಾಪಾರಿಯು ದೇಶಿಕರ ಬಳಿ ಬಂದು ಎಚ್ಚರಗೊಳಿಸಿ ನಿಮ್ಮ ಶ್ವೇತಾಶ್ವವು ನಮ್ಮ ಉಗ್ರಾಣದಲ್ಲಿದ್ದ ಕಡಲೆ, ಹೆಸರು ಹುರುಳಿಯನ್ನು ತಿಂದು ಹಾಕುತ್ತಿದೆ ದಯಮಾಡಿ ಬಂದು ಕಟ್ಟಿ ಹಾಕಿ ಎಂದನು. ಆಶ್ಚರ್ಯಗೊಂಡ ಅವರು ಉಗ್ರಾಣಕ್ಕೆ ಹೋಗಿ ನೋಡಲು ದಿವ್ಯ ತೇಜಸ್ಸಿನಿಂದ ದಿವ್ಯ ಜೋತಿಯೊಂದು ಕಂಡು ಬಂದಿತಂತೆ. ಕುದುರೆ ತಿಂದ ಧಾನ್ಯದ ಚೀಲವು ಚಿನ್ನದಿಂದ ತುಂಬಿತ್ತಂತೆ. ಅಂದಿನಿಂದ ಹಯಗ್ರೀವನಿಗೆ ಕಡಲೆ ಹುರುಳಿ ಬೆಲ್ಲದ ನೈವೇದ್ಯ ಪ್ರತೀತಿಯಾಯಿತು.


ಕ್ಷೇತ್ರದರ್ಶನ

ಮತ್ತೊಂದು ಸಂದರ್ಭದಲ್ಲಿ ಉಡುಪಿಯ ಅಕ್ಕಸಾಲಿಗನೊಮ್ಮೆ ಗಣಪತಿಯ ವಿಗ್ರಹವನ್ನು ಮಾಡಲು ಮುಂದಾಗಿ ಎಷ್ಟೇ ಪ್ರಯತ್ನಿಸಿದರೂ ಆ ವಿಗ್ರಹದ ಮುಖವು ಆನೆಯ ಮುಖದಂತಾಗದೆ ಅಶ್ವದ ಮುಖವಾಗಿಯೇ ರೂಪುಗೊಳ್ಳತ್ತಿತ್ತು. ಬೇಸತ್ತ ಅಕ್ಕ ಸಾಲಿಗನು ಆ ವಿಗ್ರಹವನ್ನು ಕಸದ ಬುಟ್ಟಿಗೆ ಹಾಕಿ ಬಿಟ್ಟನಂತೆ. ಅಂದೇ ರಾತ್ರಿ ಉಡುಪಿಯ ಶ್ರೀವಾದಿರಾಜಸ್ವಾಮಿಗಳ ಕನಸಿನಲ್ಲಿ ಮಹಾವಿಷ್ಣು ಕಾಣಸಿಕೊಂಡು ಅಶ್ವ ಮುಖದ ರೂಪದಲ್ಲಿರುವ ನನ್ನ ವಿಗ್ರಹವನ್ನು ಅಕ್ಕಸಾಲಿಗನು ಧೂಳಿನಲ್ಲಿಟ್ಟಿರುವನು. ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡು ಎಂದು ಆದೇಶಿಸಿದಂತಾಯಿತಂತೆ. ಭಗವಂತನ ಆಜ್ಞಾನುಸಾರ ವಾದಿರಾಜರು ಬಂದು ನೋಡಲು ಹಯಗ್ರೀವ ಸ್ವಾಮಿಯ ವಿಗ್ರಹವು ಗೋಚರಿಸಿತು. ಆನಂದ ಭರಿತರಾದ ಸ್ವಾಮಿಗಳು ಆ ವಿಗ್ರಹವನ್ನು ತಂದು ಮಠದಲ್ಲಿ ಆರಾಧಿಸಲು ಪ್ರಾರಂಬಿಸಿದರು. ಹಯಗ್ರೀವ ಸ್ವಾಮಿಗೆ ಪ್ರತಿನಿತ್ಯ ಒಂದು ಹರಿವಾಣದಲ್ಲಿ ಬೆಲ್ಲ ಕಡಲೆ ತೆಂಗಿನ ಕಾಯಿಯನ್ನಿಟ್ಟು ಹರಿವಾಣವನ್ನು ತಮ್ಮ ತಲೆಯ ಮೇಲಿಟ್ಟು ನೈವೇದ್ಯ ನೀಡಲು ಪ್ರಾರಂಭಿಸಿದರು. ಸಾಕ್ಷಾತ್ ಹಯಗ್ರೀವ ಸ್ವಾಮಿಯೇ ಶ್ವೇತಾಶ್ವ ರೂಪದಲ್ಲಿ ಬಂದು ತನ್ನೆರಡೂ ಮುಂಗಾಲುಗಳನ್ನು ವಾದಿರಾಜರ ಭುಜದ ಮೇಲಿಟ್ಟು ನೈವೇದ್ಯವನ್ನು ಸ್ವೀಕರಿಸುತ್ತಿದ್ದಿತು. ಹೀಗೆ ಜ್ಞಾನ ಹಾಗು ವಿದ್ಯೆಗೆ ಅಧಿ ದೇವತೆಯಾಗಿ ಹಯಗ್ರೀವ ಸ್ವಾಮಿಯನ್ನು ಪೂಜಿಸಲಾಗುತ್ತದೆ.

ಶ್ರೀ ವೈಷ್ಣವರಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಮುನ್ನ ಸ್ವಾಮಿ ಹಯಗ್ರೀವನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಅಕ್ಷರಾಭ್ಯಾಸ ಮಾಡಿಸುವ ಸಂಪ್ರದಾಯವಿದೆ. ತಮಿಳು ನಾಡಿನ ಶ್ರೀರಂಗದ ದೇವಾಲಯದ ಆವರಣದಲ್ಲಿರುವ ಹಯಗ್ರೀವ ದೇವಾಲಯ, ವೇದಾಂತದೇಶಿಕ ಸ್ವಾಮಿಗಳ ಶಿಷ್ಯರಾಗಿದ್ದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಜೀಯರ್ ಸ್ವಾಮಿಗಳಿಂದ ಮೈಸೂರಿನಲ್ಲಿ ಸ್ಥಾಪಿಸಲ್ಪಟ್ಟ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಶ್ರೀ ಲಕ್ಷ್ಮೀ ಹಯಗ್ರೀವ ಸ್ವಾಮಿ ದೇವಾಲಯಗಳು ಪ್ರಸಿದ್ಧವಾದವು. ಈ ಪರಕಾಲ ಮಠದ ಒಂದು ಭಾಗವಾಗಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿನ ಹಯಗ್ರೀವ ಸ್ವಾಮಿ ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು ಇಲ್ಲಿನ ಮೂಲ ವಿಗ್ರಹವು ನಯನ ಮನೋಹರವಾಗಿ ಧನಾತ್ಮಕ ಶಕ್ತಿಭರಿತವಾಗಿ ವಿದ್ಯೆಗೆ ಅಧಿದೇವತೆ ಎಂಬ ಮಾತಿಗೆ ಸಂಕೇತವಾಗಿ ನಂಬಿ ಬರುವ ಭಕ್ತರನ್ನು ಸಲಹುತ್ತಿದೆ. ಒಳಿತನ್ನು ಕಂಡ ಎಷ್ಟೋ ಭಕ್ತರ ಆರಾಧ್ಯದೈವವಾಗಿ ನೆಲೆನಿಂತಿದೆ.

“ಹಯಗ್ರೀವನಿಗಿಂತ ಮಂಗಳವಾದ್ದದ್ದು ಮತ್ತೊಂದಿಲ್ಲ, ಹಯಗ್ರೀವನಿಗಿಂತ ಪಾಪಗಳಿಂದ ಮುಕ್ತಿ ಹೊಂದುವ ಪಾವನತ್ವ ಮತ್ತೊಂದಿಲ್ಲ, ಹಯಗ್ರೀವನಿಗಿಂತ ಹಿರಿದಾದ ದೈವವಿಲ್ಲ, ಅವನಲ್ಲಿ ಶರಣಾದರೆ ದುಃಖವೇ ಇಲ್ಲ”. ಎಂದು ವಾದಿರಾಜ ಸ್ವಾಮಿಗಳು ತಮ್ಮ ಹಯಗ್ರೀವ ಸ್ತೋತ್ರದಲ್ಲಿ ಹಾಡಿ ಹೊಗಳಿದ್ದಾರೆ. ಇಂತಹ ಹಯಗ್ರೀವ ಸ್ವಾಮಿಯ ಸ್ಪಟಿಕಾಕೃತಿ ಭಕ್ತರ ಮನದಲ್ಲಿ ಜ್ಞಾನದ ದಿವ್ಯ ಜ್ಯೋತಿಯನ್ನು ಬೆಳಗಲು ಈ ಕ್ಷೇತ್ರಗಳಲ್ಲಿ ಸ್ವಾಮಿ ನೆಲೆನಿಂತಿದ್ದಾರೆ.

ವಿಶಾಲ ಈ ದೇವಾಲಯವು ನೋಡಲು ಪ್ರಾಂಗಣ ಹೊಂದಿದ್ದು, ಹೊರ ನೋಟಕ್ಕೆ ಚಿಕ್ಕದೆನಿಸಿದರೂ ಒಳಹೊಕ್ಕಂತೆ ದೇವಾಲಯದ ಒಳ ಆವರಣದಲ್ಲಿ ಗುರು ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಆಕರ್ಷಕ ಚಿತ್ರ ಪಟಗಳು ಸುಂದರ ಕಂಬಗಳು ಮನೋಹರವಾಗಿವೆ. ಗರ್ಭ ಗುಡಿಯಲ್ಲಿ ವಿಶೇಷ ಸಂಪ್ರದಾಯ ಆಚಾರಗಳಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಭಕ್ತರನ್ನು ಉದ್ಧರಿಸುತ್ತ ಹಯಗ್ರೀವ ಸ್ವಾಮಿಯು ಸುಂದರ ವಿಗ್ರಹರೂಪದಲ್ಲಿ ನೆಲೆಸಿದ್ದಾನೆ..

ಈ ಸ್ವಾಮಿಗೆ ಜೇನು ತುಪ್ಪದ ಅಭಿಷೇಕ ನೆರವೇರಿಸಿ ವ್ರತಾಚರಿಸಿದರೆ ವಿದ್ಯೆಯಲ್ಲಿ ಯಾವುದೇ ಅಡಚಣೆ ಉಂಟಾಗದು, ಯಶಸ್ಸು ದೊರೆಯುವುದೆಂಬ ಅಚಲವಾದ ನಂಬಿಕೆ ಭಕ್ತರಲ್ಲಿದೆ. ಹಾಗೆಂದೇ ಈ ದೇಗುಲಕ್ಕೆ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಆರಾಧಿಸುತ್ತಾರೆ ರೇಷ್ಮೆ ದಾರದಲ್ಲಿ ಪೋಣಿಸಿದ ಏಲಕ್ಕಿ ಮಾಲೆ ಅರ್ಪಣೆ ಈ ಸ್ವಾಮಿಗೆ ವಿಶೇಷ ಸೇವೆ, ಕಡಲೆ ಬೇಳೆ ಬೆಲ್ಲದ ನೈವೇದ್ಯ ವಿಶೇಷ. ಪ್ರತಿನಿತ್ಯವೂ ಸ್ವಾಮಿಗೆ ವಿಶೇಷ ಪೂಜಾಕೈಂಕರ್ಯ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಈ ದೇಗುಲದಲ್ಲಿ ಸಂಕಲ್ಪ ಮಾಡಿ ಸ್ವಾಮಿಗೆ ಜೇನುತುಪ್ಪ ಅಭಿಷೇಕ ಮಾಡಿಸಿ ಪ್ರಸಾದ ರೂಪದಲ್ಲಿ ಜೇನುತುಪ್ಪ ಪಡೆದು ಪ್ರತಿನಿತ್ಯ ಸರಸ್ವತಿ ಮತ್ತು ಹಯಗ್ರೀವ ಸ್ತೋತ್ರ ಪಠಿಸಿ ಖಾಲಿ ಹೊಟ್ಟೆಯಲ್ಲಿ ಪ್ರಸಾದ ಜೇನುತುಪ್ಪ ಸವಿಯುವುದರಿಂದ ವಿದ್ಯೆಯಲ್ಲಿ ಬುದ್ದಿಯಲ್ಲಿ ಜ್ಞಾನದಲ್ಲಿ ಯಶಸ್ಸನ್ನು ಹೊಂದುವರು.

ಯಾತ್ರಿಕರಿಗೆ ವಿಶೇಷ ಮಾಹಿತಿ:

* ಈ ದೇವಾಲಯವು ಬೆಂಗಳೂರಿನ ಹೃದಯ ಭಾಗವಾದ ಕೆಂಪೇಗೌಡ ಬಸ್‌ ನಿಲ್ದಾಣದ ಎದುರಿಗೆ ಇದೆ.

* ಇಲ್ಲಿಗೆ ಕರ್ನಾಟಕದ ಎಲ್ಲಾ ಪ್ರದೇಶಗಳಿಂದಲೂ ಬಸ್ ವ್ಯವಸ್ಥೆ ಇದೆ,

* ಪ್ರತಿ ಗುರುವಾರದಂದು ಜೇನುತುಪ್ಪ ಅಭಿಷೇಕ ನೆರವೇರಿಸಲಾಗುತ್ತದೆ.

* ಸುತ್ತಮುತ್ತಲಲ್ಲಿ ಉತ್ತಮ ವಸತಿ ಸೌಕರ್ಯವಿದೆ.

* ಪ್ರತಿನಿತ್ಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 .20 ರವರೆಗೂ ಮತ್ತು ಸಂಜೆ 6 ರಿಂದ 8.30 ರವರೆಗೂ ತೆರೆದಿರುತ್ತದೆ.

* ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ.

ಸಮಾಜ ಮತ್ತು ಅದರ ಗುರಿ

ಯಾವುದೇ ನಿಜವಾದ ಸಮಾಜ ಒಂದು ಸಾಮಾನ್ಯ ನಂಬಿಕೆ ಮತ್ತು ಗುರಿಯಿಲ್ಲದೇ ಅಸ್ತಿತ್ವಕ್ಕೆ ಬರಲಾರದು. ಆ ಮೂಲಕ ಧಾರ್ಮಿಕ ನಂಬಿಕೆ ಮತ್ತು ಗುರಿಗಳನ್ನು ಘೋಷಿಸುತ್ತದೆ. ರಾಜಕಾರಣಿಗಳು ಸಮಾಜವನ್ನು ವ್ಯಾವಹಾರಿಕ ನಂಬುಗೆಯಿಂದ ಚಲಿಸುವಂತೆ ಮಾಡುತ್ತಾರೆ. ಅಲ್ಲದೇ ದೇವರ ಆ ಗುರಿಯನ್ನು ಸಾಧಿಸುವುದರಲ್ಲಿ ಸಲಕರಣೆಯಂತೆ ಅವರು ಕೆಲಸ ಮಾಡುತ್ತಾರೆ. ಅವರು ಧರ್ಮ ಮೌಲ್ಯಗಳನ್ನು ಪ್ರತಿನಿಧಿಸಿದರೆ, ರಾಜಕಾರಣ ಅನುಸರಿಸಬೇಕಾದ ಮಾರ್ಗ, ರೀತಿಯನ್ನು ಪ್ರತಿನಿಧಿಸುತ್ತದೆ.

ಜೋಸೆಫ್ ಮ್ಯಾಝಿನಿ