Logo

VHP PUBLICATIONS

Hindu Vani


expand_more

ಸಂಪಾದಕೀಯ

ಇಂತಹ ಕಾನೂನು ಸಾಧ್ಯವೇ?

ಸಾಂವಿಧಾನಿಕ ಮಾನ್ಯತೆಯಿಲ್ಲದ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮೂಲಕ ತಮ್ಮ ಸ್ಟೇಚ್ಛೆಯ ಆಡಳಿತವನ್ನು ನಡೆಸುವುದು ಸರ್ವಾಧಿಕಾರಿ ಮನೋಭಾವದ ವ್ಯಕ್ತಿಗಳ ರೀತಿ, ತಮ್ಮ ನಿರ್ಧಾರಗಳಿಂದ ಉಂಟಾಗುವ ದುಷ್ಪರಿಣಾಮಗಳಿಂದ ನುಣುಚಿಕೊಳ್ಳಲು ಇಂತಹದೊಂದು ವ್ಯವಸ್ಥೆಯನ್ನು ಅವರು ರಚಿಸಿಕೊಳ್ಳುವರು. 1975ರಲ್ಲಿ ಇಂದಿರಾಗಾಂಧಿಯವರು ಘೋಷಿಸಿದ ತುರ್ತು ಪರಿಸ್ಥಿತಿಯು ಇದಕ್ಕೊಂದು ಉದಾಹರಣೆ.

ಪ್ರಧಾನಿಯವರಿಗೆ; ಸಾಮಾಜಿಕ ಯೋಜನೆಗಳಿಗೂ ಮತ್ತು ಪ್ರಮುಖ ಕಾನೂನುಗಳ ರಚನೆಯಲ್ಲೂ ಸಲಹೆಗಳನ್ನು ನೀಡುವ ನೆಪವನ್ನು ನೀಡುತ್ತ 2004ರಲ್ಲಿ ಒಂದು ಸಮಿತಿಯ ನೇಮಕಗೊಂಡಿತು. ಎನ್‌.ಎ.ಸಿ (ನ್ಯಾಶನಲ್ ಅಡ್ಡೆಸರಿ ಕೌನ್ಸಿಲ್) ಎನ್ನುವ ಈ ಸಮಿತಿಯು ಸೋನಿಯಾ ಗಾಂಧಿ ಎನ್ನುವವರು ತಮ್ಮ ಕೈ ತಪ್ಪಿದ ಪ್ರಧಾನಿ ಪಟ್ಟದಿಂದ ಸಾಧಿಸಬೇಕೆಂದಿದ್ದ ಆಕಾಂಕ್ಷೆಗಳನ್ನು ತೆರೆಯ ಹಿಂದಿನಲ್ಲಿದ್ದು ಸಾಧಿಸಲು ರಚಿಸಿದ ವೈಯಕ್ತಿಕ ಬಂಟರ ಗುಂಪು. ಆ ಮೂಲಕ ತನ್ನ ಹಿತಾಸಕ್ತಿಗಳನ್ನು ಕರಗತ ಮಾಡಲು ಮತ್ತು ಕೆಡುಕುಗಳೆಲ್ಲವನ್ನು ಪ್ರಧಾನಿ ಗೊಂಬೆಯೆನಿಸಿದ ಮನಮೋಹನ ಸಿಂಗರ ಮೇಲೆ ಹೇರಲು ಮಾಡಿದ ಜಾಣ ನಿರ್ಧಾರವಿದು.

ಈ ನಿಯೋಗಸಮಾಗಮದಲ್ಲಿ ಆಗ ಒಂದು ಒಂದು ಭಯಾನಕ ಕಾನೂನಿನ ಕರಡು ರಚಿತವಾಯಿತು. ಅದುವೆ ಹಿಂದುಗಳನ್ನು ಹಿಂದು ದೇಶದಲ್ಲಿ ಮಟ್ಟ ಹಾಕಲೆಂದು ರಚಿಸಿದ ಪ್ರಿವೆನ್ಸನ್ ಆಫ್ ಕಮ್ಯೂನಲ್ ವಯಲೆನ್ಸ್ ಬಿಲ್ 2011 (ಕೋಮು ಹಿಂಸಾ ಪ್ರತಿಬಂಧಕ ವಿದಾಯಕ 2011).

ಅದರ ಒಟ್ಟು ಸಾರಾಂಶವು ಇಷ್ಟೇ! ಕೋಮುಗಲಭೆಗಳಿಗೆ ಕಾರಣರು ಮತ್ತು ಅದರಲ್ಲಿ ಅಪರಾಧಿಗಳೆಂದು ಗುರುತಿಸಿಕೊಳ್ಳುವವರು ಹಿಂದುಗಳು. ಇನ್ನು ಕೋಮುದಂಗೆಗಳಲ್ಲಿ ಹಾನಿಗೀಡಾಗುವವರು ಮುಸ್ಲಿಮರು. ಇದರ ಆರಂಭಿಕ ತರ್ಕ (premise) ಹೇಗೆಂದರೆ ಭಾರತದಲ್ಲಿ ಬಹುಸಂಖ್ಯಾತರಾಗಿರುವವರು ಹಿಂದುಗಳು. ಹಾಗಾಗಿ ಹಿಂಸೆಗೆ ಕಾರಣರು ಹಿಂದುಗಳೇ!. ಮುಸ್ಲಿಮರು ಅಲ್ಪಸಂಖ್ಯಾತರು ಆದುದರಿಂದ ಎಲ್ಲಾ ಕಡೆಯೂ ಹಾನಿಗೀಡಾಗುವವರು ಅವರು ಮಾತ್ರ. ಇಂತಹ ಅತಾರ್ಕಿಕ ಅವೈಜ್ಞಾನಿಕ, ಅಸಂವಿಧಾನಿಕ ವಾದದ ನೆಲೆಯಲ್ಲಿ ಕೋಮು ಸಮಸ್ಯೆಯನ್ನು ಪರಿಹರಿಸಲು ಹೊರಟ ಈ ಕಾನೂನು ಹಿಂದುಗಳನ್ನು ಅವರ ಭೂಮಿಯಲ್ಲೇ ಅತಂತ್ರರನ್ನಾಗಿ ಮಾಡಲು ಸೋನಿಯಾ ಸನ್ನಾಹ ಮಾಡಿದ್ದರು. ಹಿಂದುಗಳನ್ನು ಅನಾಥರನ್ನಾಗಿಸಿ, ಮುಸ್ಲಿಮರನ್ನು ಎತ್ತಿಕಟ್ಟಿ ನಡುವಿನಲ್ಲಿ ಕ್ರೈಸ್ತ ಅಜೆಂಡಾವನ್ನು ಕೈಗೂಡಿಸುವ ಅಂತಾರಾಷ್ಟ್ರೀಯ ಕಾರಸ್ತಾನವು ಅವರದ್ದಾಗಿದ್ದಿತು. ಸಂವಿಧಾನೇತರ ಶಕ್ತಿಗಳ ಏಕಸ್ವಾಮಿತ್ವದ ವಿರುದ್ಧ ರೂಪುಗೊಂಡ ಜನಾಭಿಪ್ರಾಯವನ್ನು ಎದುರಿಸಲಾಗದ ಈ ಮಸೂದೆಯು ನಂತರ ಕಾಲದ ಕಸದ ಬುಟ್ಟಿಯನ್ನು ಸೇರಿತು.

ಈಗ ಅದರದ್ದೇ ಇನ್ನೊಂದು ಅವತಾರವು ಅದೇ ಸೋನಿಯಾರ ಕರ್ನಾಟಕದ ಹಿಂಬಾಲಕರಿಂದ ರೂಪುಗೊಂಡಿದೆ. ದ್ವೇಷಭಾಷಣ ಮತ್ತು ಅಪರಾಧ ತಡೆ ಕಾನೂನು 2025(ಕರ್ನಾಟಕ ಹೇಟ್ ಸ್ಪೀಚ್ ಆ್ಯಂಡ್ ಹೇಟ್ ಕ್ರೈಮ್ ಪ್ರಿವೆನ್ಸನ್ ಬಿಲ್ 2025 ಎನ್ನುವ ಹೆಸರಿನಲ್ಲಿ ಕರ್ನಾಟಕ ವಿಧಾನ ಮಂಡಲಗಳಲ್ಲಿ ಅಂಗೀಕಾರಗೊಂಡ ಈ ಮಸೂದೆಯು ಈಗ ರಾಜಭವನದ ಅಂಗಳವನ್ನು ಸೇರಿದೆ. ಬರವಣಿಗೆಯಲ್ಲೋ ಸಂಕೇತ ಸಂಜ್ಞೆಗಳ ಮೂಲಕವೇ ಆಗಲಿ, ಕಣ್ಣಿಗೆ ಕಾಣುವ ದೃಶ್ಯ, ಕೇಳುವ ಮಾತುಗಳ ಮೂಲಕವೋ ಮಾನಸಿಕವಾಗಿ, ದೈಹಿಕವಾಗಿ ಅಷ್ಟೇ ಅಲ್ಲ ಭಾವನಾತ್ಮಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಾನಿ ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು ಈ ಮಸೂದೆಯ ಪ್ರಕಾರ ವಾರಂಟ್ ಇಲ್ಲದೆ ಬಂಧಿಸಲ್ಪಡುವ, ಜಾಮೀನು ನೀಡದೆ ಇರಬಲ್ಲ ಅಪರಾಧವಾಗಿ ಬಿಡುತ್ತದೆ. 7 ವರ್ಷದವರೆಗೆ ಮತ್ತು ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾದ ಹೀನಾಯ ಅಪರಾಧವದು.

ಇದು 1975ರ ತುರ್ತು ಪರಿಸ್ಥಿತಿಯ ಕಾಲದ ಅನಾಗರಿಕ ಕಾನೂನುಗಳ ಪ್ರತಿಕೃತಿಯಾಗಿದೆ. 2011ರ ಕೋಮುಹಿಂಸೆ ಪ್ರತಿಬಂಧ ವಿಧಾಯಕವನ್ನು ಈಗ ಕರ್ನಾಟಕದಲ್ಲಿ ಪ್ರಯೋಗಿಸಿ ಪರೀಕ್ಷಿಸುವ ಪ್ರಯತ್ನವಾಗಿದೆ. ಇಲ್ಲಿ ಆ ಕಾನೂನು ಅಭಾಧಿತವಾಗಿ ಜಾರಿಗೆ ಬರುವುದಾದರೆ ಇದು ಕಾಂಗ್ರೆಸ್ ಅಧಿಕಾರದಲ್ಲಿರುವ ಏಕೈಕ ದಕ್ಷಿಣ ರಾಜ್ಯವಾದ ತೆಲಂಗಾಣದಲ್ಲೂ ಜಾರಿಗೆ ಬರುತ್ತದೆ. ಧರ್ಮ, ಜಾತಿ, ಸಾಮಾಜಿಕ ನೋವು, ಸಾಮರಸ್ಯಗಳೆಂಬ ಮೌಲಿಕ ಶಬ್ದಗಳನ್ನು ಎದುರಲ್ಲಿಟ್ಟು ರಚಿಸಿದ ಈ ಮಸೂದೆಯು ಪ್ರಸ್ತುತ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಪಕ್ಷದ ಆಂತರಿಕ ಕಲಹವನ್ನು ಮರೆ ಮಾಚಲು ಮಂಡಿಸಲಾಗಿದೆಯೇ ಎನ್ನುವ ಅನುಮಾನವೂ ಪ್ರಸಾರದಲ್ಲಿದೆ.

ಇಂತಹ ಅಮಾನವೀಯ, ಆನಾಗರಿಕ, ಆತಾರ್ಕಿಕ ಮಸೂದೆಯು ಕಾನೂನಾಗಿ ಬರಬಹುದೇ? ರಾಜ್ಯದ ನಾಗರಿಕರು ಮಹಾಪ್ರಾಜ್ಞರು. ಸಾಂವಿಧಾನಿಕ ಆಶಯಗಳನ್ನು ಸಾವಿರ ವರ್ಷಗಳ ಹಿಂದೆಯೇ ಅರ್ಥೈಸಿಕೊಂಡು ಪ್ರಯೋಗದಲ್ಲಿ ತಂದ ಧೀಮಂತರು. ಇಂತಹ ಬಹುಸಂಖ್ಯಾತರನ್ನು ಎದುರಿಸಿ ಈಗಲೂ ಆಗಲೋ ಉರುಳಿ ಬೀಳಲಿರುವ ಸರ್ಕಾರವೊಂದು ನಿಲ್ಲುವುದೇ? ಗೋಹತ್ಯಾ ನಿಷೇಧ ಕಾನೂನನ್ನು ತಾವು ಅಧಿಕಾರಕ್ಕೆ ಬಂದೊಡನೆ ಸಾರಾಸಗಟು ಬದಲಾಯಿಸಿ ಬಿಡುತ್ತೇವೆ ಎಂದು ಬಡಾಯಿ ಕೊಚ್ಚಿದ ಮುಖ್ಯಮಂತ್ರಿಗಳಿಗೆ ಅದರಿಂದ ಉದ್ಭವಿಸುವ ಸಮಸ್ಯೆಯ ಅರಿವಾಗಿ ಆ ಕುರಿತು ಮೌನವಹಿಸಿದುದು ನಮ್ಮ ಮುಂದೆಯೇ ಇದೆ. ಹಿಂದು ಅಂದರೆ ಅನಾಗರಿಕ ಹಿಂದು ಅಂದರೆ ಡೆಂಗ್ಯೂ ಕಾಲರಾ ಎಂದವರು ದ್ವೇಷಭಾಷಣದ ವಿರುದ್ಧ ಏನು ಹೇಳಬಹುದು? ಮೋದಿಗೆ ಗುಂಡಿ ತೋಡಿ ಇಟ್ಟಿರುವೆವು ಎಂದ ಪಕ್ಷದ ಸರ್ಕಾರವು ಇಂತಹ ಅನಾಗರಿಕ ಘೋಷಣೆಗಳನ್ನು ಹಾಕಿದುದಕ್ಕಿಂತಲೂ ಹೆಚ್ಚಿನ ದ್ವೇಷ ಎಂದು ಬೇರೆ ಇದೆಯೇ? ಕರಾವಳಿಗೆ ಬೆಂಕಿ ಹಚ್ಚಿದವರೆಂದು ಒಂದು ಪ್ರದೇಶದ ನಾಗರಿಕರ ಬಗ್ಗೆ ಬೆರಳು ತೋರಿಸಿದವರ ಮಾದರಿ ಎಂತಹುದು? ಭಾರತ ಮಾತಾಕಿ ಜೈ ಎನ್ನುವುದು ಅಪರಾಧವೆಂದು ನ್ಯಾಯಾಲಯದಲ್ಲಿ ಹೇಳಿದ ಸರ್ಕಾರದ ಮಟ್ಟ ಹೇಗಿದೆ?

ರಾಜ್ಯಪಾಲರು ಎಲ್ಲವನ್ನು ಕಂಡು ನಿರ್ಧಾರ ಮಾಡುವವರು ಅವರು ಇಂತಹ ಮೂರ್ಖ ಅನಾಗರಿಕ ಮಸೂದೆಯನ್ನು ಕಾನೂನಾಗಿಸಲಾರರು.