Logo

VHP PUBLICATIONS

Hindu Vani


expand_more

ಸ್ವಾತಂತ್ರ್ಯ

By - ಸಂಜಯ್, ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ

ಮುಂದುವರೆದುದು...


ಕ್ರಾಂತಿಯ ಕಣ

ಜತಿನ್ ದಾಸ್ ಮರಣ

ಕೇಂದ್ರ ಶಾಸನ ಸಭೆಯಲ್ಲಿ ಬಾಂಬ್ ಸ್ಫೋಟಿಸಿದ ಪ್ರಸಂಗದ ಮೂಲಕ ಭಗತ್‌ಸಿಂಗನು ತಲೆಗೆ ಹಾಕಿಕೊಂಡಿದ್ದ ಹ್ಯಾಟಿನೊಂದಿಗೆ ಇದ್ದ ಭಾವಚಿತ್ರವು ಜನಜನಿತವಾಯಿತು. ಆ ಭಾವಚಿತ್ರವು ನಾಲ್ಕು ದಿನ ಮೊದಲು ಏಪ್ರಿಲ್ 4 ರಂದು ಹಳೆ ದೆಹಲಿಯ ಕಾಶ್ಮೀರಿ ಗೇಟಿನ ಸ್ಟುಡಿಯೋದಲ್ಲಿ ತೆಗೆಸಲಾಗಿದ್ದಿತು. ಸಮಯದಲ್ಲಿ ಬಟುಕೇಶ್ವರ ದತ್ತನೂ ಅಲ್ಲಿಯೇ ಪ್ರತ್ಯೇಕವಾಗಿ ತನ್ನ ಫೋಟೋವನ್ನು ತೆಗೆಸಿಕೊಂಡಿದ್ದನು. ಕ್ರಾಂತಿಕಾರಿಗಳು ಅತಿ ಅಪಾಯಕಾರಿಯಾದ ಕಾರ್ಯಾಚರಣೆಗೆ ಮೊದಲು ತಮ್ಮ ಭಾವಚಿತ್ರವನ್ನು ತೆಗೆಸಿಕೊಳ್ಳುತ್ತಿದ್ದರು. ಅಂತಹ ಪ್ರಸಂಗಗಳಲ್ಲಿ ಪ್ರಾಣಾಪಾಯವಿದ್ದರೆ ನಂತರದ ದಿನಗಳಲ್ಲಿ ಆ ಘಟನೆಯ ಪ್ರಚಾರಕ್ಕಾಗಿ ಈ ಭಾವಚಿತ್ರಗಳು ನೆರವಾಗುತ್ತಿದ್ದವು.



ಸ್ವಾತಂತ್ರ್ಯ

.

ಆದರೆ ಬಾಂಬ್‌ಘಟನೆಯ ದಿನವೂ ಭಾವಚಿತ್ರಗಳು ಸ್ಟುಡಿಯೋದಲ್ಲಿ ಸಿದ್ಧವಾಗಿರಲಿಲ್ಲ. ಜಯದೇವ ಕಪೂರ್ ಮತ್ತು ಶಿವ ವರ್ಮಾ ಎನ್ನುವ ಇಬ್ಬರು ಸಹಕಾರಿಗಳಿಗೆ ಈ ಭಾವಚಿತ್ರಗಳನ್ನು ಸಂಗ್ರಹಿಸುವ ಹೊಣೆಯನ್ನು ಹೊರಿಸಲಾಗಿದ್ದಿತು. ಈ ಸ್ಟುಡಿಯೋದವರು ಪೊಲೀಸ್ ಇಲಾಖೆಗೂ ಫೋಟೋಗ್ರಾಫರ್ ಆಗಿದ್ದವರು.

ಬಂಧನಕೊಳಗಾದ ಮೇಲೆ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರ ಭಾವಚಿತ್ರವನ್ನು ಅದೇ ಸ್ಟುಡಿಯೋದವರಿಂದಲೇ ಪೊಲೀಸರು ತೆಗೆಸಿಕೊಂಡಿದ್ದರು. ಇದನ್ನು ತಿಳಿದಿದ್ದ ಈ ಕಾರ್ಯಕರ್ತರು ಸ್ಟುಡಿಯೋಗೆ ಹೋಗಲು ಮೊದಮೊದಲು ಹಿಂದೆಗೆದಿದ್ದರು.

ಕೊನೆಗೂ ಇಬ್ಬರೂ ಆದಿನ ಸ್ಟುಡಿಯೋಗೆ ಹೋದರು. ಒಬ್ಬರು ಒಳಗೆ ಹೋಗಿ ಭಾವ ಚಿತ್ರಗಳನ್ನು ಕೇಳುತ್ತಿದ್ದರೆ ಇನ್ನೊಬ್ಬರು ಹೊರಗೆ ನಿಂತಿದ್ದರು. ತಮ್ಮ ರಿವಾಲ್ವರನ್ನು ಅವಿತಿಟ್ಟುಕೊಂಡು ಗುಂಡು ಹಾರಿಸಲು ಅದರ ಮೇಲೆ ಬೆರಳಿಟ್ಟು ಸಿದ್ಧವಾಗಿದ್ದರು. ಫೋಟೋ ಗ್ರಾಫರ್ ಯಾವುದೇ ಅಪಾಯವನ್ನು ಆಹ್ವಾನಿಸಲು ಸಿದ್ಧನಿರಲಿಲ್ಲ. ಬಂದವರಲ್ಲಿ ಒಬ್ಬಾತನು ಹೊರಗೆ ನಿಂತಾಗಲೇ ಅವನಿಗೆ ಪರಿಸ್ಥಿತಿಯ ಅರಿವಾಗಿದ್ದಿತು. ಆತನು ಯಾವುದನ್ನೂ ವಿಚಾರಿಸದೆ ಭಾವ ಚಿತ್ರಗಳನ್ನು ಮತ್ತು ಬೇರೆ ಹಣವನ್ನು ಕೇಳದೆ ಆ ಪೋಟೋಗಳ ನೆಗೆಟಿವ ಫಿಲಂಗಳನ್ನು ಕೊಟ್ಟು ಬಿಟ್ಟನು. ಕ್ರಾಂತಿಕಾರಿಗಳ ತಂಡವು ಈ ಭಾವಚಿತ್ರಗಳನ್ನು ತಮ್ಮ ಮೇಲೆ ಸಹಾನು ಭೂತಿಯನ್ನು ತೋರಿಸುತ್ತಿದ್ದ ಪತ್ರಿಕೆಗಳಿಗೆ ತಲುಪಿಸಿದರು. ಟೈಮ್ಸ್ 2

ಮತ್ತು ವಂದೇ ಮಾತರಂ ಪತ್ರಿಕೆಗಳು ಈ ಚಿತ್ರಗಳನ್ನು ಪ್ರಮುಖವಾಗಿ ಮುದ್ರಿಸಿದವು. ಆಂಗ್ಲ ಆಡಳಿತವು ದಿಗ್ಗಾಂತಗೊಂಡಿತು. ಕೆಲವೇ ದಿನಗಳಲ್ಲಿ ಈ ಭಾವಚಿತ್ರಗಳು ಎಲ್ಲಾ ಪತ್ರಿಕೆಗಳಲ್ಲೂ ಕ್ರಾಂತಿಕಾರಿಗಳ ಭೂಗತ ಮಾಧ್ಯಮಗಳಲ್ಲೂ ಯಥೇಚ್ಛವಾಗಿ ಪ್ರಕಟಗೊಂಡು ಜನಪ್ರಿಯವಾದವು. ಭಗತ್‌ಸಿಂಗನ ಹ್ಯಾಟ್ ಅಂತೂ ಜನಪ್ರಿಯ ಸಂಕೇತವಾಗಿ ಬಿಟ್ಟಿತು. ಬಟುಕೇಶ್ವರನ ಆ ಮುಗ್ಧ ಮುಖವೂ ದೇಶಾದ್ಯಂತ ಸಹಾನುಭೂತಿಯನ್ನು ಪಡೆಯಿತು. ಇಬ್ಬರೂ ರಾಷ್ಟ್ರದ ಸೂಪರ್ ಹಿರೋಗಳಾದರು.

ಇತ್ತ ಬ್ರಿಟಷರಿಗೆ ಏಕೋ ಏನೋ ಸ್ಯಾಂಡರ್ಸ್ ಹತ್ಯೆಗೂ ಭಗತಸಿಂಗನಿಗೂ ಏನೋ ಸಂಬಂಧವಿದ್ದಂತೆ ಅನಿಸಲು ಹತ್ತಿತ್ತು. ಅದಕ್ಕಾಗಿ ಲಾಹೋರ್ ಮತ್ತು ದೆಹಲಿಯ ಘಟನೆಗಳ ಸಂಬಂಧದ ವಿಶೇಷ ವಿಚಾರಣೆಯು ಪ್ರಾರಂಭವಾಯಿತು. ಪೂರ್ಣ ಬಿಗಿ ಭದ್ರತೆಯಲ್ಲಿ ದೆಹಲಿ ಬಾಂಬ್ ಪ್ರಕರಣದ ವಿಚಾರಣೆಯು ಪ್ರಾರಂಭವಾಯಿತು. ಇಬ್ಬರೂ ಘೋಷಣೆಗಳನ್ನು ಕೂಗುತ್ತಾ ವಿಚಾರಣೆಯ ಉದ್ದಕ್ಕೂ ನಿರ್ಭೀತ ಹೋರಾಟಗಾರರೆಂದು ಕರೆಸಿಕೊಂಡರು “ನಾವು ಅಹಿಂಸೆಯ ಆದರ್ಶದ ಅನುಪಯೋಗಿ ಯುದ್ಧದ ಅಂತ್ಯವನ್ನು ಸಾರಿರುವೆವು. ಇದನ್ನು ಈ ತಲೆಮಾರು ಅರ್ಥಮಾಡಿಕೊಂಡಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಭಗತ್‌ಸಿಂಗ್, ಗಾಂಧೀಜಿಯವರನ್ನು ಕುರಿತು ಟೀಕಿಸಿದ ಹೇಳಿಕೆಯು ಪತ್ರಿಕೆಗಳಲ್ಲಿ ಪ್ರಕಟಗೊಂಡಿತು. ಇಬ್ಬರೂ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವಾಯಿತು.

ಬ್ರಿಟಿಷ್ ಅಧಿಕಾರಿಗಳಂತೂ ಸ್ಯಾಂಡರ್ಸ್ ಕೊಲೆಯ ರಹಸ್ಯವನ್ನು ಭೇಧಿಸಲು ಮತ್ತು ಕ್ರಾಂತಿಕಾರಿಗಳ ಮೂಲವನ್ನು ನಿರ್ಮೂಲ ಮಾಡಲು ಹಟತೊಟ್ಟಂತಿತ್ತು. ಲಾಹೋರಿನ ಹಲವು ಕಡೆ ಪೊಲೀಸರ ಕಾರ್ಯಾಚರಣೆಗಳು ನಡೆದವು. ಸಂಶಯದಿಂದ ಹಿಂದು ಸ್ಥಾನ್ ರಿವೋಲಿಷನರಿ ಆರ್ಮಿಯ ಹಲವು ಕಾರ್ಯಕರ್ತರು ಬಂಧನಕ್ಕೆ ಒಳಗಾದರು. ಇವರಲ್ಲಿ ಸುಖದೇವ್ ರಾಜಗುರು ಮತ್ತು ಜತಿನ್ ದಾಸರು ಪ್ರಮುಖರು. ಅವರೆಲ್ಲರನ್ನೂ ಲಾಹೋರಿಗೆ ಕರೆತಂದರು.

ಇಂತಹ ಜೈಲುಗಳಲ್ಲಿ ಆಗ ಇದ್ದ ಅಸಹನೀಯ ಸ್ಥಿತಿಗತಿಗಳನ್ನು ಈ ಕ್ರಾಂತಿಕಾರಿಗಳು ಪ್ರಶ್ನಿಸಲು ಪ್ರಾರಂಭಿಸಿದರು. ಸಾಮಾನ್ಯ ಕ್ರಿಮಿನಲ್ ಕೈದಿಗಳಾಗಿದ್ದ ಯುರೋಪಿಯನ್ ಜನರಿಗೆ ಜೈಲುಗಳಲ್ಲಿ ಉಳಿದವರಿಗಿಂತ ಉತ್ತಮ ಸೌಕರ್ಯಗಳು ಲಭಿಸುತ್ತಿದ್ದವು. ದೂರುಗಳು ಹೆಚ್ಚುತ್ತ ಬಂದು ಅದು ಕೈದಿಗಳ ಉಪವಾಸ ಸತ್ಯಾಗ್ರಹಕ್ಕೆ ಮೊದಲಿಟ್ಟಿತು. ಈ ನಿರಶನದ ಸುದ್ದಿ ಹೊರ ಜಗತ್ತಿಗೆ ತಿಳಿಯಿತು. ಪತ್ರಿಕೆಗಳು ಒಬ್ಬೊಬ್ಬ ಕೈದಿಯ ಆರೋಗ್ಯದ ಮಾಹಿತಿಯನ್ನು ಪ್ರಕಟಿಸಲಾರಂಭಿಸಿದವು. ದೇಶದ ಹಲವು ಕಡೆ ವಿರೋಧ ಪ್ರದರ್ಶನಗಳು ನಡೆದವು. ಸೆರಮನೆಯ ಸ್ಥಿತಿಯ ವರದಿಗಳು ಪ್ರಕಟವಾದವು. ಅಮೃತಸರದ ಜಲಿಯಾನಾ ವಾಲಾಬಾಗ್‌ನಲ್ಲಿ ದೊಡ್ಡ ಪ್ರತಿಭಟನೆಯ ಸಭೆಯೊಂದು ನಡೆಯಿತು.

ಇದರಿಂದ ಸರ್ಕಾರವು ವಿಚಾರಣೆಗಾಗಿ ಒಂದು ಸಮಿತಿಯನ್ನು ನೇಮಿಸಿತು. ಹಾಗಾಗಿ ಸತ್ಯಾಗ್ರಹಿಗಳಲ್ಲಿ ಹಲವರು ಉಪವಾಸವನ್ನು ಹಿಂತೆಗೆದುಕೊಂಡರು. ಆದರೆ ಜತಿನ್‌ದಾಸ್ ಮಾತ್ರ ಎಲ್ಲರ ಮನವಿ ಒತ್ತಾಯವನ್ನು ನಿರಾಕರಿಸಿ ತನ್ನ ಉಪವಾಸದ ವಿರೋಧವನ್ನು ಮುಂದುವರಿಸಿದರು. ಇದರ ಪರಿಣಾಮವನ್ನು ಮನಗಂಡು ಅದರಲ್ಲೂ ಪರಿಸ್ಥಿತಿಯು ಕೈಮೀರುತ್ತಿರುವ ವಾತಾವರಣವನ್ನು ಕಂಡು ಸರ್ಕಾರವು ನೇರವಾಗಿ ಭಗತ್‌ಸಿಂಗ್‌ನೇ ಜತಿನ್‌ದಾಸರನ್ನು ಭೇಟಿಯಾಗಿ ಅವರು ನಿರಶನವನ್ನು ಹಿಂತೆಗೆಯಲು ಒಪ್ಪಿಸುವಂತೆ ಮಾಡಲು ಪ್ರಯತ್ನಿಸಿತು. ಆದರೆ ಜತಿನ್‌ದಾಸ್ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರು.

63 ದಿನಗಳ ಉಪವಾಸದಿಂದ ಜತಿನದಾಸ್ ಸೆಪ್ಟೆಂಬರ್ 13ರಂದು ಪ್ರಾಣಬಿಟ್ಟರು.ಅವರ ಮೃತದೇಹವನ್ನು ಲಾಹೋರಿನಿಂದ ಕಲ್ಕತ್ತಾಗೆ ತರಲಾಯಿತು. ಅದಕ್ಕಾಗಿ ಸುಭಾಷ್ ಚಂದ್ರ ಬೋಸ್ 600 ರೂಪಾಯಿಗಳನ್ನು ಕೊಟ್ಟರು. ಶಿರಾ ನಿಲ್ದಾಣಕ್ಕೆ ಜತಿನ್ ಶವವು ಬಂದಾಗ ಅಲ್ಲಿ 6 ಲಕ್ಷ ಜನರು ಕಾದು ಕೂತಿದ್ದರು. ಹೂಗ್ಲಿ ನದಿಯ ದಡದಲ್ಲಿ ಸ್ಮಶಾನವನ್ನು ತಲುಪಿದಾಗ ಮಾರ್ಗದ ಎರಡೂ ಪಕ್ಕಗಳಲ್ಲಿ ನಿಂತ ಜನರು ಶವಕ್ಕೆ ಅಂತಿಮ ಗೌರವವನ್ನು ಸಲ್ಲಿಸುತ್ತಾ ಹೂವನ್ನು ಎರಚುತ್ತಿದ್ದರು. ಇಂತಹ ಕಂಡರಿಯದ ಐಕ್ಯಮತ್ಯವನ್ನು ನೋಡಿದ ಆಂಗ್ಲ ಸರ್ಕಾರಕ್ಕೆ ನಡುಕವುಂಟಾದುದು ಸಹಜವೆ. 1930ರ ಮೇ ತಿಂಗಳಲ್ಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯು ಪ್ರಾರಂಭವಾಯಿತು.

(ಮುಂದುವರೆಯುವುದು)

~~~~~~~~~~~~~~~~~~~~~~~~~~~~~~~~~~~~~~~~~~

ಗೆಲುವೇ ಯಶಸ್ಸು

ನಿಮ್ಮ ಈ ಅಪೂರ್ವ ಯಶಸ್ಸುಗಳು, ನಿಮ್ಮ ಮಾತೃಭೂಮಿಯ ಹೃದಯವನ್ನು ಮುದಗೊಳಿಸಿವೆ. ಪ್ರಜಾಸತ್ತಾತ್ಮಕವಾದ ನಮ್ಮ ರಾಷ್ಟ್ರದಲ್ಲಿ ನಿಮ್ಮ ವಿಜಯದ ಸಂಕೇತವಾಗಿ ಉತ್ಸವಗಳನ್ನು ಆಚರಿಸಲಾಗುತ್ತಿದೆ. ಅಲ್ಲಿ ನಿಮ್ಮ ತಂದೆ, ತಾಯಂದಿರು, ಸಹೋದರಿಯರು, ಹೆಂಡಂದಿರು ಮತ್ತು ಗೆಳತಿಯರು, ನಿಮ್ಮವರಾದುದಕ್ಕಾಗಿ ಅಭಿಮಾನದಿಂದ ಬೀಗುತ್ತಿದ್ದಾರೆ. ಇದು ನಮ್ಮ ಭಾಗ್ಯ ಎಂದು ಹೇಳಿಕೊಳ್ಳುತ್ತಿದ್ದಾರೆ.

ಹೌದು ಯೋಧರೆ, ನೀವು ಬಹಳಷ್ಟನ್ನು ಸಾಧಿಸಿದ್ದೀರಿ, ಆದರೆ ಹಾಗೆಂದ ಮಾತ್ರಕ್ಕೆ ಇನ್ನು ಸಾಧಿಸಲು ಏನೂ ಇಲ್ಲ ಎಂದು ಅರ್ಥವೇ...? ನಾವು ಗೆಲ್ಲಬೇಕಾಗಿದೆ, ಆದರೆ ಗೆಲುವನ್ನು ಉಪಯೋಗಿಸುವ ರೀತಿಯನ್ನೂ ಕಲಿಯಬೇಕಿದೆ ಅಲ್ಲವೇ...? ನನಗೆ ಗೊತ್ತಿದೆ ಆಯುಧಗಳೆಡೆಗೆ ನಿಮ್ಮ ಕೈಗಳು ಮತ್ತೂ ಅವಸರಿಸುತ್ತಿವೆ. ನಿರಂತರವಾದ ಯುದ್ಧದ ಜವಾಬ್ದಾರಿ ನಿಮಗೆ ತೊಂದರೆದಾಯಕವಾಗಿರಬಹುದು. ವಿಜಯಕ್ಕಾಗಿ ನಾವು ಕಳೆದ ದಿನಗಳು ನಿಮ್ಮ ಆನಂದಕ್ಕಾಗಿ ಕಳೆದ ದಿನಗಳೇ. ಆದರೆ ನಾವಿನ್ನೂ ಮುಂದುವರೆಯಬೇಕಿದೆ, ವೈರಿಗಳನ್ನು ಸದೆಬಡಿಯಬೇಕಿದೆ, ಸೇಡಿಗಾಗಿ ಸಂಭಾಷಿಸಬೇಕಿದೆ. ಫ್ರಾನ್ಸ್‌ನಲ್ಲಿ ಶೀತಲ ಸಮರ ಸಾರಿದವರನ್ನು, ನಮ್ಮ ಮಂತ್ರಿ ಮಹೋದಯರನ್ನು ಕೊಂದವರನ್ನು, ಟೌಲಾನ್‌ದಲ್ಲಿ ನಮ್ಮ ಹಡಗುಗಳಿಗೆ ಬೆಂಕಿ ಇಟ್ಟವರನ್ನು, ನಾವಿನ್ನೂ ಶಿಕ್ಷಿಸಬೇಕಿದೆ. - ಜೋಸೆಫ್ ಮ್ಯಾಝಿನಿ