Logo

VHP PUBLICATIONS

Hindu Vani


expand_more

ಕತೆಕತೆ ಕಾರಣ

ಮಹಾದಾನಿ ರಾಣಿ ರಾಸಮಣಿ ದೇವಿ

ಬಡಕುಟುಂಬವೊಂದರಿಂದ ಆಗರ್ಭ ಶ್ರೀಮಂತರ ಮನೆಗೆ ರಾಣಿ ರಾಸಮಣಿದೇವಿಯು ಸೊಸೆಯಾಗಿ ಬಂದಳು. ಅದು 18200 ದಶಕದ ಕಾಲವಾಗಿದ್ದಿತು. ಆಕೆಯ ಪತಿ ರಾಜಚಂದ್ರನು ಹೊಸದಾಗಿ ಕಟ್ಟಿದ ಬಂಗಲೆಗೆ “ರಾಸಮಣೀ ಕುಠಿ”ಯೆಂದು ಹೆಸರಿಟ್ಟಿದ್ದನು. ಆ ಬಂಗ್ಲೆಯಲ್ಲಿ 700 ಕೋಣೆಗಳಿದ್ದವು. ಅದಕ್ಕೆ ಆಗಲೇ ಆದ ಖರ್ಚು 25 ಲಕ್ಷ ರೂಪಾಯಿಗಳು. ಸ್ವಲ್ಪ ಸಮಯದಲ್ಲಿ ಅವಳ ಪತಿ ರಾಜಚಂದ್ರನು ಕಾಲವಾದನು. ಆಗ ಅವನು ಬಿಟ್ಟು ಹೋದ ಸಂಪತ್ತಿನ ಮೌಲ್ಯವು ಆಗಿನ 80 ಲಕ್ಷ ರೂಪಾಯಿಗಳು.


ಕತೆಕತೆ ಕಾರಣ

ತನ್ನ ಶ್ರೀಮಂತಿಕೆಯೆಲ್ಲವೂ ಜನರ ಒಳಿತಿಗಾಗಿ ಎನ್ನುವುದು ರಾಸಮಣಿಯ ಭಾವನೆಯಾಗಿದ್ದಿತು. ಹಾಗಾಗಿ ಆಕೆ ಬಂಗಾಳದ ಭೀಕರ ಪ್ರವಾಹದ ಸಂದರ್ಭದಲ್ಲಿ ಸಂಕಟಕ್ಕೆ ಒಳಗಾದ ಜನರ ಪುನರ್ವಸತಿಗಾಗಿ ದುಡಿದಳು. ಗಂಗಾನದಿಯ ದಡದ ಸ್ನಾನಘಟ್ಟಗಳ ವ್ಯವಸ್ಥೆಯನ್ನು ಮಾಡಿದಳು. ಓದುವ ಅಭ್ಯಾಸ ಹೆಚ್ಚಾಗಬೇಕೆಂದು ಸರಕಾರಿ ಗ್ರಂಥಾಲಯದ ಅಭಿವೃದ್ಧಿಗಾಗಿ ತಾನೇ ಅನುದಾನವನ್ನು ನೀಡಿದಳು. ಸ್ವಂತ ಭೂಮಿಯನ್ನು ಕೊಟ್ಟು ಬೇಲಿಯಾ ಘಾಟ್‌ನಲ್ಲಿ ಬೇಸಾಯದ ನೀರಿನ ಕಾಲುವೆಗಳನ್ನು ನಿರ್ಮಿಸಿದಳು.

ರಾಣಿ ರಾಸಮಣಿ ದೇವಿಯು ತಪಸ್ವಿಯಂತೆ ಕಠೋರ ಜೀವನ ನಿಯಮಗಳನ್ನು ಪಾಲಿಸುತ್ತಿದ್ದಳು. ಆಹಾರ ಪಾನೀಯಗಳಲ್ಲೂ ಅದೇ ಸಂಯಮ. ಪೂಜೆ, ಪುರಾಣ ಶ್ರವಣದಲ್ಲಿ ಸಮಯ ಕಳೆಯುತ್ತಿದ್ದ ರಾಸಮಣಿದೇವಿಗೆ ಒಮ್ಮೆ ಮನೆ ದೇವರಾದ ರಘುನಾಥಸ್ವಾಮಿಗೆ ಬೆಳ್ಳಿಯ ರಥವನ್ನು ನಿರ್ಮಿಸಬೇಕೆಂದು ಪ್ರೇರಣೆಯಾಯಿತು. ಅಳಿಯನಾದ ಮಥುರಾನಾಥನಿಗೆ ಆ ಕೆಲಸವನ್ನು ಒಪ್ಪಿಸಿದಳು. ಅವನು ಅದನ್ನು ರಚಿಸಲು ಇಂಗ್ಲೆಂಡಿನ ಒಂದು ಕಂಪೆನಿಗೆ ಕೆಲಸವನ್ನು ಕೊಟ್ಟನು. ರಾಣಿಗೆ ಅದು ತಿಳಿಯಿತು. ದೇವರ ಕೆಲಸವು ಅವನ ಭಕ್ತರಿಂದಲೇ ನಡೆಯಬೇಕು ಎಂದುಕೊಂಡ ಆಕೆ ರಥವನ್ನು ಸ್ಥಳೀಯ ಕುಸುರಿಗಾರರಿಂದಲೇ ಮಾಡಿಸಿಕೊ ಎಂದು ಹೇಳಿದಳು.

ಒಂದು ದಿನ ರಾಸಮಣಿಯ ಬಂಗಲೆಯ ಸಮೀಪವಿದ್ದ ಬಿಳಿಯರ ಸೈನ್ಯದ ಠಾಣೆಯಿಂದ ಮದ್ಯಪಾನ ಮಾಡಿದ ಸೈನಿಕರು ಬಂದು ಭವನದ ದ್ವಾರಪಾಲಕರನ್ನು ಅಟ್ಟಾಡಿಸಿ ಒಳ ನುಗ್ಗಿದರು. ಅಲ್ಲಿದ್ದ ಎಲ್ಲವನ್ನೂ ದೋಚಿಕೊಂಡರು. ಆಗ ರಾಣಿಯೇ ಖಡ್ಗವನ್ನು ಝಳಪಿಸುತ್ತ ಹೊರಗೆ ಬಂದಳು. ಅಷ್ಟರಲ್ಲಿ ಅಲ್ಲಿಗೆ ಧಾವಿಸಿದ ಸೈನ್ಯದ ಅಧಿಕಾರಿಗಳು ಮುಂದಾಗುವ ಅಪಾಯವನ್ನು ತಪ್ಪಿಸಿದರು.

ಗಂಗಾ ನದಿಯಲ್ಲಿ ಮೀನು ಹಿಡಿಯುವ ಬೆಸ್ತರಿಗೆ ಆಂಗ್ಲ ಸರ್ಕಾರವು ಆವರೆಗೆ ಇರದ ಹೊಸ ಸುಂಕವನ್ನು ವಿಧಿಸಿತು. ಆ ಮೊತ್ತವನ್ನು ಕೇಳಿ ಕಂಗಾಲಾದ ಮೀನುಗಾರರು ರಾಸಮಣಿಯ ಬಳಿ ಬಂದರು. ರಾಣಿಯು ಅವರೆಲ್ಲರಿಗೂ ಅಭಯವನ್ನು ನೀಡಿದಳು. ತಾನೇ 10 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡಿ ಮೀನು ಹಿಡಿಯುವ ಹಕ್ಕನ್ನು ಪಡೆದಳು. ಆಂಗ್ಲ ಸರ್ಕಾರಕ್ಕೆ ಬುದ್ದಿ ಕಲಿಸಲು ಒಂದು ಕ್ರಮವನ್ನು ಕೈಗೊಂಡಳು. ನದಿಗೆ ಅಡ್ಡಡ್ಡಲಾಗಿ ಮರದ ದಿಮ್ಮಿಗಳನ್ನು ತೇಲಿಸಿ ಅವನ್ನು ಸರಪಳಿಗಳಿಂದ ಕಟ್ಟಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿಟ್ಟಳು. ಸರ್ಕಾರವು ದಿಕ್ಕು ತೋಚದೆ ಅದನ್ನು ಪ್ರಶ್ನಿಸಿತು. ಅದಕ್ಕೆ ರಾಣಿಯು “ಹಡಗುಗಳ ಸಂಚಾರದಿಂದ ನಮ್ಮ ಮೀನು ಹಿಡಿಯುವ ಹಕ್ಕಿಗೆ ಅಡ್ಡಿಯಾಗುತ್ತಿದೆ. ಮೀನುಗಳು ಬೇರೆ ಕಡೆ ವಲಸೆ ಹೋಗುತ್ತಿವೆ. ಸರ್ಕಾರವು ಆ ನಷ್ಟವನ್ನು ಭರಿಸಬೇಕು” ಎಂದು ಆಕೆ ಮರು ತಗಾದೆಯನ್ನು ಎತ್ತಿದಳು. ಸರ್ಕಾರವೇ ಬಗ್ಗಬೇಕಾಯಿತು. ಹಿಂದಿನಂತೆ ಬೆಸ್ತರಿಗೆ ಮೀನು ಹಿಡಿಯುವ ಹಕ್ಕನ್ನು ಮುಕ್ತವಾಗಿಸಿತು.

ಅದು ದುರ್ಗಾಪೂಜೆಯ ಕಾಲ. ಬೆಳಗಿನ ಮೆರವಣಿಗೆಯಿಂದ ನಿದ್ರಾಭಂಗವಾಗುವುದೆಂದು ಒಬ್ಬ ಬಿಳಿಯ ಅಧಿಕಾರಿಯು ಮೆರವಣಿಗೆಯನ್ನೇ ನಿಲ್ಲಿಸಿಬಿಟ್ಟನು. ಅದಕ್ಕೆ ರಾಣಿಯ ಉತ್ತರ ಸಿದ್ಧವಾಗಿದ್ದಿತು. ಇಲ್ಲಿಯ ಸುತ್ತಲಿನ ಭೂಮಿಯೆಲ್ಲವೂ ತನಗೆ ಸೇರಿದುದು. ಅಲ್ಲಿ ಯಾವುದೇ ನಿರ್ಬಂಧವನ್ನು ತಾನು ಹಾಕಲೂಬಹುದು. ಯಾವುದೇ ಸೌಲಭ್ಯವನ್ನು ಕಲ್ಪಿಸಲೂ ತನಗೆ ಅಧಿಕಾರವಿದೆ. ಆದುದರಿಂದ ಇನ್ನು ಮುಂದೆ ಸುತ್ತಮುತ್ತಲಿನ ರಸ್ತೆಗಳ ಉಪಯೋಗವನ್ನು ಯಾರೂ ಮಾಡಲಾಗದು ಎಂದು ಘೋಷಿಸಿದಳು. ಆಕೆಯ ಭೂಮಿಯಲ್ಲಿ ವಾಸಿಸುತ್ತಿದ್ದ ಆಂಗ್ಲರು ತೆಪ್ಪಗಾದರು. ಇದೆಲ್ಲವೂ ಆಂಗ್ಲರು ಆಳುತ್ತಿದ್ದ ಕಾಲದಲ್ಲಿ ನಡೆದುದು.

ಗಂಗೆಯ ಉಪನದಿಗಳನ್ನು ಜೋಡಿಸಿ ಕಾಲುವೆಗಳನ್ನು ನಿರ್ಮಿಸಿದರೆ, ಸುತ್ತಲಿನ ಸಾವಿರಾರು ಬೇಸಾಯಗಾರರಿಗೆ ನೀರು ಒದಗಿ ಅನುಕೂಲವಾಗುವುದೆಂದು ರಾಣಿಯು ಅಲೋಚಿಸಿದಳು. ಒಂದು ಲಕ್ಷ ರೂಪಾಯಿಗಳನ್ನು ವೆಚ್ಚಮಾಡಿದ ರಾಣಿಯು ಈ ನೀರಾವರಿಯ ಕಾರ್ಯವನ್ನೂ ಪೂರೈಸಿದಳು. ಅಲ್ಲಲ್ಲಿ ಕೃಷಿ ಮಾರುಕಟ್ಟೆಗಳನ್ನು ನಿರ್ಮಿಸಿದಳು. ಅಷ್ಟೇ ಅಲ್ಲ; ದೂರದ ಪುರಿಯ ಜಗನ್ನಾಥ ಕ್ಷೇತ್ರದಲ್ಲಿ ದೇವಸ್ಥಾನದ ಸುತ್ತಲಿನ ರಸ್ತೆಗಳನ್ನು ತನ್ನ ಸ್ವಂತ ಖರ್ಚಿನಿಂದಲೇ ನಿರ್ಮಿಸಿ ಭಕ್ತರ ಶುಭಹಾರೈಕೆಗೆ ಕಾರಣಳಾದಳು.

ರಾಮಕೃಷ್ಣ ಪರಮಹಂಸರು ಪೂಜಿಸುತ್ತಿದ್ದ ಭವತಾರಿಣಿ ಮಂದಿರವನ್ನು ರಾಣಿ ರಾಸಮಣಿ ದೇವಿಯೇ ಕಟ್ಟಿಸಿದುದು. ಬಿಳಿಯನೊಬ್ಬನ ಭೂಮಿಯನ್ನು ಇದಕ್ಕಾಗಿ 50 ಸಾವಿರ ರೂಪಾಯಿಗಳಿಗೆ ಆಕೆ ಖರೀದಿಸಿದಳು. ಪರಮಹಂಸರ ಸಾಧನೆಯ ಪರಿಚಯವಾದುದು ಅವರು ಅಲ್ಲಿ ಅರ್ಚಕರಾದ ಮೇಲೆಯೇ. ಆ ಮೂಲಕ ಸ್ವಾಮಿ ವಿವೇಕಾನಂದರಂತಹ ಅದ್ಭುತ ಹಿಂದು ಸಂನ್ಯಾಸಿಯೊಬ್ಬರು ಜಗತ್ತಿಗೆ ದೊರೆತರು.

ಒಂದು ದಿನ ರಾಮಕೃಷ್ಣ ಪರಮಹಂಸರು ತನ್ಮಯತೆಯಿಂದ ದೇವಿಯ ಕುರಿತು ಕೀರ್ತಿಸುತ್ತಿದ್ದರು. ರಾಸಮಣಿಯು ಕೂಡಾ ಸುಂದರ ಭಜನೆಯನ್ನು ಕೇಳುತ್ತಾ ಅದರಲ್ಲಿ ತಲ್ಲೀನಳಾಗಿದ್ದಳು. ಆದರೆ ಅದು ಸ್ವಲ್ಪ ಹೊತ್ತು ಮಾತ್ರ. ನಡುವೆ ಆಕೆಗೆ ಆ ದಿನ ನ್ಯಾಯಾಲಯದಲ್ಲಿದ್ದ ತನ್ನ ಖಜ್ಜೆಯ ನೆನಪಾಯಿತು. ಆಕೆ ಆ ಬಗ್ಗೆ ಯೋಚನೆಗೆ ತೊಡಗಿದಳು. ಥಟ್ಟನೆ ಹಾಡುವುದನ್ನು ನಿಲ್ಲಿಸಿದ ರಾಮಕೃಷ್ಣರು ರಾಣಿಯ ಕೆನ್ನೆಗೆ ಬಾರಿಸಿಬಿಟ್ಟು “ಛೇ ಇಲ್ಲೂ ಕೂಡಾ ಅದೇ ವಿಚಾರವೇ” ಎಂದರು. ರಾಣಿ ರಾಸಮಣಿದೇವಿ ಚಕಾರ ಎತ್ತಲಿಲ್ಲ. “ಅಯ್ಯೋ ನಾನೇ ತಪ್ಪಿಬಿಟ್ಟೆ” ಎಂದು ಕಸಿವಿಸಿಪಟ್ಟಳು. ಹೀಗೆ ಸುತ್ತಲಿನ ಜಗತ್ತಿನ ಎಲ್ಲವನ್ನೂ ಅನುಭವಿಸುತ್ತಿದ್ದ ಮಹಾ ಸಂತ ರಾಮಕೃಷ್ಣ ಪರಮಹಂಸರು ರಾಣಿ ರಾಸಮಣಿ ದೇವಿಯ ಆಶ್ರಯದಲ್ಲಿ ಇದ್ದುದು ಭಾರತದ ಭಾಗ್ಯ.