Hindu Vani
Index
ಸ್ವಾತಂತ್ರ್ಯ
ಮುಂದುವರೆದುದು...
ಕ್ರಾಂತಿಯ ಕಣ
ಬಲಿದಾನಕ್ಕೂ ಇದ್ದಿತ್ತು ಸ್ಪರ್ಧೆ
1930ರ ಮೇ ತಿಂಗಳಲ್ಲಿ ಎರಡನೆಯ ಲಾಹೋರ್ ಸಂಚಿನ ಪ್ರಕರಣವೆಂಬ ಹೆಸರಿನಲ್ಲಿ ಭಗತಸಿಂಗ್ ಮತ್ತು ಸಂಗಡಿಗರ ವಿಚಾರಣೆಯು ಪ್ರಾರಂಭವಾಯಿತು. ನ್ಯಾಯಾಲಯದಲ್ಲಿ ಭಗತ್‌ಸಿಂಗನ ತಂದೆ ಕಿಶನ್‌ಸಿಂಗರು ಕೂಡಾ ವೀಕ್ಷಕರ ಗುಂಪಿನಲ್ಲಿ ಒಬ್ಬರಾಗಿ ಕೂತಿದ್ದರು. ತಮ್ಮ ಮಗನ ಒಪ್ಪಿಗೆ ಇಲ್ಲದಿದ್ದರೂ ಅವರು ಅವನ (ಭಗತ್‌ಸಿಂಗನ) ಪರವಾಗಿ ವಾದಿಸಲೆಂದು ಕೆಲವು ವಕೀಲರನ್ನು ಜೊತೆಗೂಡಿಸಿದ್ದರು. ಆರೋಪಿಗಳು ನ್ಯಾಯಾಲಯವನ್ನು ಪ್ರವೇಶಿಸುತ್ತಿದ್ದಂತೆ 'ಸರಫರೋಶೀ ಕೀ ತಮನ್ನಾ ಅಬ ಹಮಾರೇ ದಿಲ್ ಮೆ ಹೈ' ಬಲಿದಾನದ ಕನಸು ತುಂಬಿದೆ ಈ ಹೃದಯದಲಿ - ಎನ್ನುವ ಹಾಡನ್ನು ಹಾಡುತ್ತ ಬಂದರು. ರಾಮಪ್ರಸಾದ್ ಬಿಸ್ಮಿಲ್ ಮೈಮರೆತು ಹಾಡುತ್ತಿದ್ದ ಗೀತೆಯದು.
ನ್ಯಾಯಾಧೀಶರು ಗೊಂದಲಮಯವಾಗಿದ್ದ ವಾತಾವರಣವನ್ನು ತಿಳಿಗೊಳಿಸುತ್ತಿದ್ದಂತೆ ರಾಜಗುರು ಎದ್ದು ನಿಂತು ತಮ್ಮ ಹೇಳಿಕೆಯನ್ನು ಗಟ್ಟಿಯಾಗಿ ಹೇಳಿದರು. 'ಈ ನ್ಯಾಯಾಲಯಕ್ಕೆ ನಮ್ಮನ್ನು ವಿಚಾರಿಸುವ ಅಧಿಕಾರವಿಲ್ಲ. ಏಕೆಂದರೆ ವೈಸರಾಯ್ ಈ ವಿಶೇಷ ನ್ಯಾಯಾಲಯವನ್ನು ರಚಿಸಲು ನಿರ್ಧರಿಸುವಂತಿಲ್ಲ, ಆದುದರಿಂದ ಈ ವಿಚಾರಣೆಯ ನಡಾವಳಿಯು ಅಮಾನ್ಯಕರ ಎಂದರು. ಬಂಧಿತರ ಪರವಾಗಿ ಜಿತೇಂದ್ರನಾಥ ಸನ್ಯಾಲ್ ಕೂಡಾ ತಮ್ಮ ಹೇಳಿಕೆಯನ್ನು ಓದಿದರು. ಅದರ ಜೊತೆ ಹೇಳಿಕೆದಾರನಾಗಿ ಭಗತಸಿಂಗರ ಹೆಸರೂ ಇದ್ದಿತು. “ಭಾರತದ ಗೌರವವನ್ನೂ ಸ್ವಾತಂತ್ರ್ಯವನ್ನೂ ರಕ್ಷಿಸಲು ಹೋರಾಡುವ ನಮ್ಮನ್ನು ಸಾಮಾನ್ಯ ಅಪರಾಧಿಯಂತೆ ವಿಚಾರಿಸುವಂತಿಲ್ಲ. ಬ್ರಿಟಿಷರು ಮಾನವರ ವಿರುದ್ಧ ನಡೆಸುತ್ತಿರುವ ಅಪರಾಧಗಳನ್ನು ಗಣಿಸಿದರೆ; ಈ ವಸಾಹತು ಆಡಳಿತವನ್ನೇ ವಿಚಾರಣೆಗೆ ಒಳಪಡಿಸಬೇಕು” ಎಂದು ಭಗತ್‌ಸಿಂಗ್ ಹೇಳಿಕೆ ನೀಡಿದರು.
ನ್ಯಾಯಾಧೀಶ ಕೋಲ್ಡ್ ಸ್ಟೀಮ್, ಸನ್ಯಾಲರ ಹೇಳಿಕೆಯನ್ನು ತಡೆಯಲು ಪದೇ ಪದೇ ಪ್ರಯತ್ನಿಸುತ್ತಿದ್ದರೂ ಅವರು ತಮ್ಮ ಮಾತುಗಳನ್ನು ಪೂರ್ಣಗೊಳಿಸಿದರು. ಕೊನೆಯಲ್ಲಿ “ಈ ವಿಚಾರಣೆಯ ನಾಟಕದಲ್ಲಿ ನಾವು ಭಾಗವಹಿಸುವುದಿಲ್ಲ. ಮುಂದಿನ ನಡಾವಳಿಯಲ್ಲಿ ನಾವು ಭಾಗಿಯಾಗುವುದಿಲ್ಲ” ಎಂದರು. ಇದನ್ನು ನಿರೀಕ್ಷಿಸದಿದ್ದ ನ್ಯಾಯಾಲಯವು ಗೊಂದಲದಲ್ಲಿ ಸಿಲುಕಿತು. ಕೊನೆಗೆ ಆದಿನ ವಿಚಾರಣೆಯನ್ನು ಮುಂದೂಡಿತು.
ಮುಂದಿನ ದಿನಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ತರುತ್ತಿದ್ದುದೇನೋ ನಿಜ. ಆದರೆ ಅವರು ಯಾರೂ ವಿಚಾರಣೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಘೋಷಣೆಯನ್ನು ಕೂಗುತ್ತಾ ಮತ್ತು ಗೀತೆಗಳನ್ನು ಹಾಡುತ್ತಾ ಇರುತ್ತಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರನ್ನು ಕರೆದ ನ್ಯಾಯಾಧೀಶರಾದ ಕೋಲ್ಡ್ ಸ್ಟ್ರೀಮ್ ಮತ್ತು ಹಿಲ್ಟನರು ಆರೋಪಿಗಳನ್ನು ಅವರಿಗೆ ಒಪ್ಪಿಸಿದರು. ಒಪ್ಪಿಸಿದರು. ಪೊಲೀಸರು ಪೊಲೀಸರು ಕಟಕಟೆಯಲ್ಲಿ ನಿಂತಿದ್ದ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದರು. ಅವರನ್ನು ಅನಾಗರಿಕವಾಗಿ ಎಳೆದೊಯ್ಯುತ್ತಿದ್ದಂತೆ ನ್ಯಾಯಾಲಯದಲ್ಲಿ ಕೋಲಾಹಲವೆದ್ದಿತು. ವಿಚಾರಣೆಯಲ್ಲಿ ಇದ್ದ ಭಾರತೀಯ ಸದಸ್ಯರು ಪೊಲೀಸರ ಈ ಕ್ರಮವನ್ನು ಪ್ರತಿಭಟಿಸಿ ಪತ್ರ ಬರೆದರು. ಕ್ರಾಂತಿಕಾರಿಗಳು ವಿಚಾರಣೆಯನ್ನೇ ಬಹಿಷ್ಕರಿಸಿದರು. ಅವರನ್ನು ಹೊರಗಿಟ್ಟೆ ವಿಚಾರಣೆಯನ್ನು ಮುಂದುವರೆಸುವುದೆಂದು ನ್ಯಾಯಾಲಯವು ನಿರ್ಧರಿಸಿತು. ಪತ್ರಿಕೆಗಳಲ್ಲಿ ಈ ಎಲ್ಲಾ ವಿಚಾರಗಳು ಸವಿವರವಾಗಿ ಪ್ರಕಟಗೊಂಡವು. ಇಡೀ ದೇಶವು ಆಡಳಿತದ ಕ್ರಮವನ್ನು ಟೀಕಿಸಿತು.
ನ್ಯಾಯಾಲಯದಲ್ಲಿ ಈ ಗೊಂದಲವು ಮುಂದುವರೆಯುತ್ತಿದ್ದರೆ, ಚಂದ್ರಶೇಖರ ಆಜಾದ್ ಮತ್ತು ಭಗವತಿ ಚರಣರು ಸೆರೆಮನೆಯ ಹೊರಗೆ ಸಕ್ರಿಯರಾಗಿದ್ದರು. ವಸಾಹತು ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಹೇರಬೇಕೆಂಬುದು ಅವರಿಬ್ಬರ ನಿರ್ಧಾರವಾಗಿದ್ದಿತು. ಅದು ದಶಂಬರ್ ತಿಂಗಳ ಮಧ್ಯಭಾಗ, ಭಗವತಿ ಚರಣ್ ತಮ್ಮ ಸಂಗಡಿಗರೊಡನೆ ಸೇರಿ ದಕ್ಷಿಣದಿಂದ ದೆಹಲಿಯನ್ನು ಪ್ರವೇಶಿಸುವ ರೈಲುಗಳಿಗೆ ಬಾಂಬ್ ಎಸೆಯಬೇಕು ಎಂದು ನಿರ್ಧರಿಸಿದರು. ಅದಕ್ಕಾಗಿ ವೈಸರಾಯ್ ಬರುವ ವಿಶೇಷ ರೈಲನ್ನು ಗುರಿಯಾಗಿಸಿಕೊಂಡರು. ದಶಂಬರ್ 23ರಂದು ಆತನು ದೆಹಲಿಗೆ ಇದೇ ಮಾರ್ಗವಾಗಿ ಬರುವುದಿದ್ದಿತು. ಅದಕ್ಕಾಗಿ ಹಿಂದುಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಮಧ್ಯಮ ಕಾರ್ಯಕರ್ತನಾದ ಯಶಪಾಲನಿಗೆ ಆ ದಿನ ಬಾಂಬ್ ಸ್ಫೋಟಿಸುವ ಹೊಣೆಗಾರಿಕೆಯನ್ನು ನೀಡಲಾಯಿತು. ದುರದೃಷ್ಟವಶಾತ್ ಸ್ಫೋಟದ ಸಮಯವು ತಾಳೆ ಬೀಳದೆ ಅದು ರೈಲು ದಾಟಿಹೋದ ಕೆಲವು ಸೆಕೆಂಡುಗಳ ನಂತರ ಸ್ಪೋಟಿಸಿತು. ವೈಸರಾಯ್ ಅಪಾಯದಿಂದ ಪಾರಾದನು. ಆದರೆ ಸ್ಫೋಟದಿಂದ ಹತ್ತಿರದ ಹಲವು ಡಬ್ಬಿಗಳು ನಾಶ ಹೊಂದಿದವು.
ಈ ಪ್ರಕರಣದಿಂದ ಸರ್ಕಾರವೇನೋ ಕಸಿವಿಸಿಕೊಂಡುದು ಸಹಜವಾದುದೇ. ಆದರೆ ಕಾಂಗ್ರೆಸ್ಸಿನ ಮಂದಗಾಮಿಗಳೆನಿಸಿಕೊಂಡ ಹಲವು ನಾಯಕರು ಕೆರಳಿದರು. ಗಾಂಧಿಯವರು ಈ ಬಗ್ಗೆ ಕಲ್ಟರ್ ಆಫ್ ಬಾಂಬ್ (ಬಾಂಬಿನ ಪಂಥ) ಎನ್ನುವ ಲೇಖನವನ್ನು ಬರೆದು ಕ್ರಾಂತಿಕಾರಿಗಳನ್ನು ದಾರಿತಪ್ಪಿದವರು' ಎಂದು ಜರಿದರು. ಇದು ಅವರ ಇಂಡಿಯಾ' ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದನ್ನು ಖಂಡಿಸಿದ ಭಗವತಿ ಚರಣ್ ವೋಹ್ರಾ 'ಬಾಂಬ್ ತತ್ವ' ದಿ ಫಿಲಾಸಫಿ ಆಫ್ ಬಾಂಬ್ ಎನ್ನುವ ಕರಪತ್ರವನ್ನು ಬರೆದು ಹಂಚಿದರು.
“ಕಾಂಗ್ರೆಸ್ ಈಗ ಸ್ವರಾಜ್ಯದ ಕಲ್ಪನೆಯಿಂದ ಪೂರ್ಣ ಸ್ವಾತಂತ್ರ್ಯದ ಕಡೆಗೆ ತನ್ನ ಮನವನ್ನು ಹರಿಸಿದೆ. ಇದನ್ನು ತಾರ್ಕಿಕವಾಗಿ ವಿಮರ್ಶಿಸುವಾಗ ಕಂಡುಬರುವುದೇನೆಂದರೆ ಈಗ ಬ್ರಿಟಿಷ್ ಸರ್ಕಾರದ ವಿರುದ್ಧ ಯುದ್ಧವನ್ನೇ ಹೂಡಬೇಕಾಗಿದೆ. ಆದರೆ ಆಶ್ಚರ್ಯವೆಂದರೆ ಕಾಂಗ್ರೆಸ್ ಅದಕ್ಕೆ ಬದಲಾಗಿ ಕ್ರಾಂತಿಕಾರಿಗಳ ವಿರುದ್ಧ ಯುದ್ಧ ಸಾರುತ್ತಿದೆ. ಗಾಂಧಿಯವರ ಪ್ರಕಾರ ಹಿಂಸೆಯು ಅಭಿವೃದ್ಧಿಯನ್ನು ಸ್ಥಗಿತಗೊಳಿಸುತ್ತದೆ ಮತ್ತು ಅದರಿಂದಾಗಿ ಸ್ವಾತಂತ್ರ್ಯಗಳಿಕೆಯು ವಿಳಂಬಗೊಳ್ಳುತ್ತದೆ. ಆದರೆ ಹಲವು ಸಮಕಾಲೀನ ಬೆಳವಣಿಗೆಯನ್ನು ಗಾಂಧಿಯವರು ಗಮನಿಸಿದರೆ ಅವರಿಗೆ ಉತ್ತಮ ಫಲಿತಾಂಶವನ್ನು ನೀಡಿದ ಹಿಂಸಾತ್ಮಕ ಹೋರಾಟವನ್ನು ಕಾಣಬಹುದಾಗಿತ್ತು. ಹಿಂಸೆಯು ಕೂಡಾ ಸಾಮಾಜಿಕ ಪ್ರಗತಿ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಪಡೆದುದು ಇದೆ. ಅಹಿಂಸೆಯೆನ್ನುವ ಹುಚ್ಚು ಹತ್ತಿಸಿಕೊಂಡ ಗಾಂಧಿಮಾತ್ರವೇ ಈ ರಾಜಿ ಮನೋಭಾವವನ್ನು ಹೊಂದಬಲ್ಲರು. ಇಂತಹ ವರ್ತನೆಯಿಂದಲೇ ಸಮಾಜವೇ ಎದ್ದು ನಿಂತು ಹೋರಾಡಿದ ವಿದ್ಯಮಾನಗಳೂ ಕೆಲವೊಮ್ಮೆ ವಿಫಲವಾಗುತ್ತವೆ” - ಎಂದು ಆ ಕರಪತ್ರವು ವಿವರಿಸಿದ್ದಿತು.
ಭಗವತೀ ಚರಣ ಮತ್ತು ಆಜಾದರು ವೈಸ್‌ರಾಯ್ ಇರ್ವಿನ್ನರ ಮೇಲೆ ನಡೆದ ದಾಳಿಯ ವಿಫಲತೆಯಿಂದ ಒಂದಿಷ್ಟು ನಿರಾಶರಾದುದು ನಿಜ. ಆದರೆ ಅವರಿಬ್ಬರೂ ಈ ಘಟನೆಯಿಂದ ಕಂಗೆಡಲಿಲ್ಲ. ಈಗ ಮತ್ತೆ ಅವರು ಹೊಸ ಸಾಹಸವೊಂದಕ್ಕೆ ಕೈ ಹಾಕಿದರು. ತಮ್ಮ ಜೊತೆಗಾರ ಕ್ರಾಂತಿಕಾರಿಗಳನ್ನು ಸೆರೆಮನೆಯಿಂದ ಬಿಡಿಸಿಕೊಳ್ಳುವ ಹೊಸ ಯೋಜನೆಯೊಂದನ್ನು ಅವರು ಸಿದ್ಧಪಡಿಸಿದರು. ಅಂದು 1930ರ ಜೂನ್ 1ನೇ ತಾರೀಕು. ಆ ದಿನ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರನ್ನು ಕೇಂದ್ರ ಸೆರೆಮನೆಯಿಂದ ಬೊರ್‌ಸ್ಥಳ ಸೆರೆಮನೆಗೆ ವರ್ಗಾಯಿಸಲು ನಿರ್ಧರಿಸಲಾಗಿದ್ದಿತು. ಈ ಕಾರ್ಯಾಚರಣೆಯನ್ನು ಕರಗತ ಮಾಡಲು ಎರಡು ತಂಡಗಳನ್ನು ರಚಿಸಲಾಯಿತು. ಬೊರ್‌ಸ್ಥಳ ಜೈಲಿನ ಮುಖ್ಯದ್ವಾರದಲ್ಲಿ ಈ ಸಾಹಸವು ನಡೆಯಬೇಕಾಗಿದ್ದಿತು. ಆದರೆ ದುರದೃಷ್ಟವಶಾತ್ ಅದು ಪ್ರಮಾದವೊಂದರಿಂದ ವಿಫಲಗೊಂಡಿತು. ಈ ಕಾರ್ಯಾಚರಣೆಗಾಗಿ ತಯಾರಿಸುತ್ತಿದ್ದ ಬಾಂಬ್ ಸ್ಪೋಟಗೊಂಡು ಭಗವತೀ ಚರಣ ವೋಹ್ರಾ ಅಲ್ಲಿ ಪ್ರಾಣ ತೆತ್ತರು.
(ಮುಂದುವರೆಯುವುದು)
ಸೋಮನಾಥದ ಪಾಠ
“ನಮ್ಮ ರಾಷ್ಟ್ರದ ಪ್ರಾಣವೇ ಧರ್ಮ. ಅದನ್ನೇ ಬಲಪಡಿಸಬೇಕು. ಶತಶತಮಾನಗಳ ಆಘಾತಗಳನ್ನು ನೀವು ಎದುರಿಸಿ ಬದುಕಿ ಬಂದಿರುವುದೂ ಸಹ, ನಮ್ಮ ಧರ್ಮವನ್ನು ಪ್ರಾಣಪಣದಿಂದ ನೀವು ಕಾಯ್ದುಕೊಂಡಿರುವುದರಿಂದ. ಅದಕ್ಕಾಗಿ ಮಿಕ್ಕೆಲ್ಲವನ್ನೂ ಬಲಿಗೊಟ್ಟಿರಿ ಎಂಬ ಕಾರಣದಿಂದಲೇ, ನಿಮ್ಮ ಪೂರ್ವಜರು ಎಲ್ಲ ಸಂಕಟಗಳನ್ನೂ ಸಹಿಸಿದರು, ಸಾವನ್ನೂ ಅಪ್ಪಿದರು. ಆದರೆ ತಮ್ಮ ಧರ್ಮವನ್ನು ಮಾತ್ರ ಅಳಿಯಗೊಡಲಿಲ್ಲ. ಪರಕೀಯ ಆಕ್ರಮಕರು ಒಂದರ ನಂತರ ಒಂದರಂತೆ ದೇಗುಲಗಳನ್ನು ಕೆಡವಿದರು.
ಆದರೆ ಆಕ್ರಮಣದ ಅಲೆ ಹಿಂದೆ ಸರಿಯುತ್ತಿದ್ದಂತೆಯೇ ದೇಗುಲದ ಗೋಪುರಗಳು ಮತ್ತೆ ಮೇಲೇರಿದವು. ದಕ್ಷಿಣ ಭಾರತದಲ್ಲಿ ಕೆಲವು ಪ್ರಾಚೀನ ದೇವಸ್ಥಾನಗಳು ಹಾಗೂ ಗುಜರಾತಿನಲ್ಲಿನ ಸೋಮನಾಥದಂತಹ ದೇವಮಂದಿರಗಳು ನಮ್ಮ ಜನಾಂಗದ ಇತಿಹಾಸದ ಬಗ್ಗೆ ಯಾವ ಗ್ರಂಥಗಳಲ್ಲೂ ಸಿಗದಂಥ ದೃಷ್ಟಿಯನ್ನು ನಿಮಗೆ ನೀಡಬಲ್ಲದು. ನೂರಾರು ಆಕ್ರಮಣಗಳ ಹಾಗೂ ನೂರಾರು ಪುನರ್ನಿಮರ್ಾಣಗಳ ಗುರುತುಳ್ಳ ದೇವಮಂದಿರಗಳನ್ನು ಕಣ್ಣಿಟ್ಟು ನೋಡಿ, ಧ್ವಂಸಗೊಂಡಂತೆಲ್ಲ ಅದೇ ಧೂಳು ಧ್ವಂಸಗಳಿಂದ ಮತ್ತೆ ಮತ್ತೆ ಮೇಲೆದ್ದ ಮುಂಚಿನಂತೆಯೇ ಶಕ್ತಿ ಚೈತನ್ಯ ತುಂಬಿಕೊಂಡು ಮೈತಾಳಿದ ಆ ದೇಗುಲಗಳನ್ನು ನೋಡಿ. ಅಲ್ಲಿದೆ ನಮ್ಮ ರಾಷ್ಟ್ರದ ಹೃದಯ, ನಮ್ಮ ರಾಷ್ಟ್ರದ ಜೀವನಾಡಿ, ಆ ಗುರುತು ಹಿಡಿದು ಹೊರಟಾಗಲೇ ವೈಭವದ ಗುರಿ ಮುಟ್ಟುವಿರಿ. ಅದನ್ನು ಬಿಟ್ಟಲ್ಲಿ ಸಾವೇ ನಿಮಗೆ ಗತಿ. ಆ ಜೀವರಸ ಝರಿಯಿಂದ ಹೊರಗೆ ಹೆಜ್ಜೆ ಇದ್ದೊಡನೆ ಮೃತ್ಯು ಕಾದಿದೆ, ಸರ್ವನಾಶ ಕಾದಿದೆ”.
- ಸ್ವಾಮಿ ವಿವೇಕಾನಂದರು