Hindu Vani
Index
ಕ್ಷೇತ್ರದರ್ಶನ
ಹಾನಗಲ್ ಶಿವಯೋಗ ಮಂದಿರ ಮತ್ತು ಗುರುಕುಲ
ಮಠಗಳು ತಮ್ಮದೇ ಆದ ವಿಶಿಷ್ಟ ಪರಂಪರೆಗಳನ್ನು ಹೊಂದಿದ್ದು, ಶಿಕ್ಷಣ, ಧರ್ಮ ಮತ್ತು ಸಾಮಾಜಿಕ ಸೇವೆಗಳನ್ನು ಒದಗಿಸುತ್ತವೆ. ಈ ಪರಂಪರೆಗಳು ಮಠಾಧೀಶರ ಮೂಲಕ ಮುಂದುವರೆಯುತ್ತವೆ ಮತ್ತು ಮಠದ ತತ್ವಗಳನ್ನು ಪಾಲಿಸುತ್ತಾ, ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ.
ಭವ್ಯಶಕ್ತಿ ಮತ್ತು ದಿವ್ಯ ಪರಂಪರೆಯನ್ನು ಹೊಂದಿರುವ ನಾಡಿನ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಶ್ರೀ ಶಿವಯೋಗ ಮಂದಿರವು ಹಾನಗಲ್ ಗುರುಕುಮಾರ ಶಿವಯೋಗಿಗಳು ಮತ್ತು ಇಲಕಲ್ಲದ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಮಲಪ್ರಭಾ ನದಿ ದಂಡೆಯ ಮೇಲೆ ಶಾಲಿವಾಹನ ಶಕೆ 1830 ಮಾಘ ಶುದ್ಧ ರಥಸಪ್ತಮಿ ದಿನದಂದು ಅಂದರೆ 1909ರಲ್ಲಿ ಸ್ಥಾಪನೆ ಗೊಂಡಿತು. ಅಂದಿನಿಂದ ಇಂದಿನವರೆಗೂ ನಿರಂತರ ದಾಸೋಹ ಸೇವೆ. ಗುರುಕುಲ ಶಿಕ್ಷಣ ಪದ್ಧತಿ. ಹೀಗೆ ಹಲವಾರು ಸಾಮಾಜಿಕ ಸೇವೆಗಳಲ್ಲಿ ಗುರುತಿಸಿಕೊಂಡಿದೆ.
ನಾಡಿನ ಹಲವಾರು ಗಣ್ಯ ಮಠಾಧೀಶರು ಸಹ ಇದೇ ಸಂಸ್ಥೆಯಲ್ಲಿ ಕಲಿತು ದೊಡ್ಡ ಮಠಾಧೀಶರಾಗಿದ್ದಾರೆ. ಅದರಲ್ಲಿ ಗದುಗಿನ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಹಾನಗಲ್ ಕುಮಾರ ಶಿವಯೋಗಿಗಳ ಶಿಷ್ಯರಾಗಿದ್ದು, ಶಿವಯೋಗ ಮಂದಿರವೇ ಇವರ ಮೂಲ ನೆಲೆಯಾಗಿತ್ತು. ನಾಡಿನ ಹಿರಿಯ ಮಠಾಧೀಶರ ತವರು ಎಂದೇ ಶಿವಯೋಗ ಮಂದಿರ ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಶಿವಯೋಗಮಂದಿರವನ್ನು “ಕಾವಿಕುಲದ ಆದ್ಯಾತ್ಮಿಕ ಲೋಕ” ಎನ್ನುವರು. ಇತ್ತೀಚಿಗೆ ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನದ ಕುರಿತ “ವಿರಾಟಪುರ ವಿರಾಗಿ” ಎಂಬ ಚಲನಚಿತ್ರ ತೆರೆಕಂಡಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ; ಕರ್ನಾಟಕದ ಎಲ್ಲ ಮಠಗಳಿಗೆ ಮಠಾಧೀಶರನ್ನು ಸಿದ್ಧ ಮಾಡುವುದು. ಮಠಾಧೀಶರಾಗುವ ವಟುಗಳು ಶಿಕ್ಷಣ, ಕೈವಲ್ಯ ಪದ್ಧತಿ, ಸಂಸ್ಕೃತ ಬೋಧನೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಹೀಗೆ ಹಲವಾರು ರೀತಿಯ ತರಬೇತಿಯನ್ನು ಪಡೆದುಕೊಂಡು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ಶಿವಯೋಗಮಂದಿರದ ಗುರುಕುಲ ಶಿಕ್ಷಣ ಪದ್ಧತಿ:
ಶಿವಯೋಗಮಂದಿರವು ಪ್ರಶಾಂತ ವಾತಾವರಣ ಹಾಗೂ ಮಲಪ್ರಭಾ ನದಿ ತೀರದಲ್ಲಿ ಇರುವುದರಿಂದ ಧ್ಯಾನಾಸಕ್ತರ ಕೇಂದ್ರ ಬಿಂದುವಾಗಿದೆ. ಶಿವಯೋಗ ಮಂದಿರದಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ತರಬೇತಿ ವಟುಗಳಿಗೆ ಲಿಂಗ ದೀಕ್ಷೆ ಕೊಟ್ಟು ಸನ್ಯಾಸ ಜೀವನಕ್ಕೆ ತಯಾರು ಮಾಡುತ್ತಾರೆ. ಯೋಗ, ಧ್ಯಾನ. ವ್ಯಾಯಾಮ, ಪ್ರಾರ್ಥನೆ. ಪ್ರವಚನ. ಹೀಗೆ ತರಬೇತಿ ಪೂರ್ಣಗೊಳಿಸಿದ ವಟುಗಳು ಮುಂದೆ ಮಠಾಧೀಶರಾಗಿ ವಿವಿಧ ಮಠಗಳಿಗೆ ಪೀಠಾಧಿಕಾರಿಗಳಾಗುತ್ತಾರೆ.
ಹೀಗೆ ಗುರು ಶಿಷ್ಯರ ಪರಂಪರೆಯು ಶಿವ ಗ ಮ೦ದಿರ ದಲ್ಲಿ ನಡೆಯುತ್ತಿದೆ. ನಿರಂತರವಾಗಿ
ಶೈಕಣಿಕ ಇತಿಹಾಸದ ದಾಖಲೆಗಳಲ್ಲಿ, ಇಲ್ಲಿಯ ಕಲಿಕೆಯು ಕಾಲಾತೀತ ದಾರಿದೀಪವಾಗಿ ಹೊರಹೊಮ್ಮುತ್ತದೆ - ಗುರುಕುಲ ವ್ಯವಸ್ಥೆಯು, ಕಾಲದ ಗಡಿಗಳನ್ನು ಮೀರಿದ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ಪ್ರಾಚೀನ ಭಾರತೀಯ ಶಿಕ್ಷಣ ಮಾದರಿ, ಪ್ರಾಚೀನ
ಭಾರತೀಯ ಸಂಸ್ಕೃತಿಯ ಆಳವಾದ ವಿದ್ವತ್ತಿನಲ್ಲಿ ಬೇರೂರಿರುವ ಗುರುಕುಲ ವ್ಯವಸ್ಥೆಯು ಶಿಕ್ಷಣದ ಬಲವಾದ ದೃಷ್ಟಿಕೋನವನ್ನು ನೀಡುತ್ತದೆ. ಇದು ಕೇವಲ ಶೈಕ್ಷಣಿಕ ಜ್ಞಾನವನ್ನು ಮಾತ್ರವಲ್ಲದೆ ಮನಸ್ಸು, ದೇಹ ಮತ್ತು ಆತ್ಮದ ಸಮಗ್ರ ವಿಕಾಸವನ್ನು ಒಳಗೊಳ್ಳುತ್ತದೆ.
“ಗುರು” (ಶಿಕ್ಷಕ) ಮತ್ತು “ಕುಲ” (ಕುಟುಂಬ) ಎಂಬ ಸಂಸ್ಕೃತ ಪದಗಳಿಂದ ಹುಟ್ಟಿಕೊಂಡ ಗುರುಕುಲ ವ್ಯವಸ್ಥೆಯು, ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಕೌಟುಂಬಿಕ ನೆಲೆಯಲ್ಲಿ ವಾಸಿಸುವ, ನಿಕಟ, ವಸತಿ ಶಿಕ್ಷಣದ ರೂಪವಾಗಿತ್ತು. ಶೈಕ್ಷಣಿಕ ಪಾಠಗಳನ್ನು ಮಾತ್ರವಲ್ಲದೆ ಜೀವನ ಕೌಶಲ್ಯ ಮತ್ತು ಮೌಲ್ಯಗಳನ್ನು ಸಹ ಅಳವಡಿಸಿಕೊಂಡಿತು. ಶಿಕ್ಷಣದ ಈ ಸಮಗ್ರ ವಿಧಾನವು ಕಾಲದ ಕಾರಿಡಾರ್‌ಗಳಲ್ಲಿ ಪ್ರತಿಧ್ವನಿಸುವ ಏಕತೆ, ನಮ್ರತೆ ಮತ್ತು ಜ್ಞಾನದ ಬಗ್ಗೆ ಗೌರವದ ಭಾವನೆಯನ್ನು ಬೆಳೆಸಿತು.
ಗೋ ಸಂರಕ್ಷಣೆ ಹಾಗೂ ವಿಭೂತಿ ತಯಾರಿಕೆ:
ಗೋವಿಗೆ ಹಿಂದೂ ಧರ್ಮದಲ್ಲಿ ತಾಯಿ ಸ್ಥಾನವಿದೆ, ಏಕೆಂದರೆ ಅದು ಹಾಲು ಕೊಡುತ್ತದೆ. ಸಗಣಿ, ಗಂಜಲದಂತಹ ಉಪಯುಕ್ತ ಉತ್ಪನ್ನಗಳನ್ನು ನೀಡುತ್ತದೆ, ಕೃಷಿ ಮತ್ತು ಆರ್ಥಿಕತೆಗೆ ಬೆನ್ನೆಲುಬಾಗಿದೆ. ವೇದಗಳ ಪ್ರಕಾರ ಗೋವು 33 ಕೋಟಿ ದೇವತೆಗಳ ನೆಲೆಯಾಗಿದೆ, ಗೋಪೂಜೆಯು ಸಮೃದ್ಧಿ ಮತ್ತು ರೋಗ ನಿವಾರಣೆಗೆ ಸಹಕಾರಿ ಎಂದು ನಂಬಲಾಗಿದೆ, ಶ್ರೀಕೃಷ್ಣನೂ ಗೋಪಾಲನೆ ಮಾಡಿದ್ದರಿಂದ ಗೋವು ಪವಿತ್ರ ಜೀವಿ ಎಂದು ಪರಿಗಣಿಸಲ್ಪಟ್ಟಿದೆ.
ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಕಾಲದಿಂದಲೂ ಅಂದಿನಿಂದ ಇಂದಿನವರೆಗೂ ಸಾವಿರಕ್ಕಿಂತಲೂ ಅಧಿಕ ಗೋವುಗಳನ್ನು ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ ಗೋವಿನ ಸಗಣಿಯಿಂದ ವಿಭೂತಿಯನ್ನು ತಯಾರಿಸಲು ವಿಭೂತಿ ತಯಾರಿಕಾ ಘಟಕವನ್ನು ಸಹ ತೆರೆಯಲಾಗಿದೆ ಇದನ್ನು ಕಂಡಾಗ ನಮಗೆ ಗೋವಿನ ಹಾಡು ನೆನಪಾಗದೆ ಇರಲಾರದು..
“ಇಟ್ಟರೆ ಸಗಣಿಯಾದೆ. ತಟ್ಟಿದರೆ ಕುರುಳಾದೆ. ಸುಟ್ಟರೇ ನೊಸಲಿಗೆ ವಿಭೂತಿಯಾದೆ. ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ.ನೀನಾರಿಗಾದಿಯೋ ಎಲೆ ಮಾನವ? ಹರಿಹರಿ ಗೋವು ನಾನು!!. ಶಿವಯೋಗ ಮಂದಿರದ ವಿಭೂತಿಯು ರಾಜ್ಯ ಅಂತ ರಾಜ್ಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ರಥ:
ಶ್ರೀ ಶಿವಯೋಗ ಮಂದಿರವು ಏಷ್ಯಾ ಖಂಡದಲ್ಲಿ ಅತಿ ಎತ್ತರದ ರಥವನ್ನು ಹೊಂದಿರುವುದು ಮತ್ತೊಂದು ವಿಶೇಷ. ರಥವು ಸರಿ ಸುಮಾರು 68 ಅಡಿ (ಸುಮಾರು 20. 5 ಮೀಟರ್) ಎತ್ತರವಾಗಿದೆ ಇದು ನಮ್ಮ ಕರ್ನಾಟಕದ ಹೆಮ್ಮೆಯೂ ಹೌದು. ಈ ರಥೋತ್ಸವ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯ ಶಿವಯೋಗದ ದಿನ ವಿಜೃಂಭಣೆಯಿಂದ ಜರಗುವುದು. ಹಿಂದಿನ ಪೀಠಾಧಿಕಾರಿಗಳಾಗಿದ್ದ. ಡಾ|| ಸಂಗನಬಸವ ಮಹಾಸ್ವಾಮಿಗಳ ಪರಿಶ್ರಮ ಹಾಗೂ ದೂರದೃಷ್ಟಿಯ ಫಲದಿಂದಲೇ ಈ ರಥ ನಿರ್ಮಾಣವಾಗಿದೆ.
ದಾಸೋಹ ಹಾಗೂ ಶಿಕ್ಷಣ ಕ್ರಾಂತಿ:
ಮಠಗಳ ದಾಸೋಹ ಶಿಕ್ಷಣವೆಂದರೆ, ಶಿಕ್ಷಣ ಮತ್ತು ಅನ್ನದಾನವನ್ನು ಜಾತಿ, ವರ್ಗಭೇದವಿಲ್ಲದೆ ಒದಗಿಸುವ ಮೂಲಕ ಸಂಸ್ಕಾರಯುಕ್ತ ಮತ್ತು ಸಮುದಾಯ ಕೇಂದ್ರಿತ ಜ್ಞಾನದಾಸೋಹವನ್ನು ನೀಡುವುದು. ಬಡವರ ಆರ್ಥಿಕ ಹೊರೆಯನ್ನು ತಗ್ಗಿಸಿ, ಸಮಾಜದಲ್ಲಿ ಶಿಕ್ಷಣ ಕ್ರಾಂತಿ ತರುವಲ್ಲಿ ಮಹತ್ವದ ಪಾತ್ರವಹಿಸುವುದು, ಮಠಗಳ ಪರಂಪರಾಗತ ಸೇವೆಯಾಗಿದೆ. ಶಿವ ಯೋಗ ಮಂದಿರವು ಹಲವಾರು ಶಾಖಾ ಮಠಗಳನ್ನು ಹೊಂದಿದ್ದು ಅವುಗಳು ಶಿಕ್ಷಣ ಸಂಸ್ಥೆಗಳನ್ನು ಸಹ ಹೊಂದಿದ್ದು, ಉಚಿತ - ದಾಸೋಹ ಮತ್ತು ಶಿಕ್ಷಣ ನೀಡುವಲ್ಲಿ ತಮ್ಮದೇ ಆದಂತ ಕೊಡುಗೆಯನ್ನು ನೀಡುತ್ತಿವೆ. ಹಾನಗಲ್ ಕುಮಾರ ಶಿವಯೋಗಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಶಿರಸಂಗಿ ಲಿಂಗರಾಜ ವಡೆಯರ ಮೂಲಕ ಕೆ.ಎಲ್.ಇ (ಕರ್ನಾಟಕ ಲಿಂಗಾಯತ ಎಜುಕೇಶನ್) ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಇದರ ಮೂಲಕ ಶಿಕ್ಷಣವು ಎಲ್ಲರಿಗೂ ತಲುಪುವಂತೆ ಮಾಡಿದ ಕೀರ್ತಿ ಹಾನಗಲ್ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.
.
ಯಾತ್ರಿಕರಿಗೆ ಹೆಚ್ಚಿನ ಮಾಹಿತಿ
* ಶಿವಯೋಗ ಮಂದಿರವು ಜಿಲ್ಲಾ ಕೇಂದ್ರವಾದ ಬಾಗಲಕೋಟದಿಂದ 52 ಕಿ.ಮೀ. ದೂರದಲ್ಲಿದೆ. ತಾಲೂಕ ಕೇಂದ್ರ ಬಾದಾಮಿಯಿಂದ 12 ಕಿ.ಮೀ. ದೂರದಲ್ಲಿದೆ.
* ಶಿವಯೋಗ ಮಂದಿರಕ್ಕೆ ಬಸ್ಸುಗಳ ವ್ಯವಸ್ಥೆ ಇದೆ. ಬದಾಮಿ ರೈಲ್ವೆ ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವಾಗಿದೆ.
* ತಂಗಲು ಯಾತ್ರಿ ನಿವಾಸ ವ್ಯವಸ್ಥೆ ಇದೆ ಮತ್ತು ಉಚಿತ ಊಟದ ವ್ಯವಸ್ಥೆಯು ಇದೆ. ಇಲ್ಲಿಗೆ ಹತ್ತಿರದ ಕ್ಷೇತ್ರಗಳೆಂದರೆ: ಬದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ ಮತ್ತು ಕೂಡಲಸಂಗಮ.
* ದೇಗುಲವು ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ತೆರೆದಿರುತ್ತದೆ.
.