Hindu Vani
Index
ಸಂಪಾದಕೀಯ
ಸೋಮನಾಥ ಮಂದಿರ ನಿರ್ಮಾಣ ಮತ್ತು ನೆಹರೂರವರ ಪತ್ರಲೇಖನದ ಹವ್ಯಾಸ
ವಲ್ಲಭಭಾಯಿ ಪಟೇಲರು 1947ರ ನವಂಬರ್ 12 ರಂದು ಜುನಾಗಡಕ್ಕೆ ಭೇಟಿ ಇತ್ತರು. ಅಲ್ಲಿಯ ನವಾಬ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದನು. ಹಿಂದು ಬಾಹುಳ್ಯದ ಆ ಸಂಸ್ಥಾನವು ಕೊನೆಗೂ ಭಾರತದಲ್ಲಿ ವಿಲೀನಗೊಂಡಿತು. ಅಲ್ಲಿಯ ಪ್ರಭಾಸ ಪಟ್ಟಣದಲ್ಲಿ ಸೋಮನಾಥ ಮಂದಿರದ ಅವಶೇಷಗಳನ್ನು ಕಂಡ ಪಟೇಲರು ಸೋಮನಾಥನ ಪುನರ್‌ಪ್ರತಿಷ್ಠೆಯ ಪ್ರತಿಜ್ಞೆಯನ್ನು ಕೈಗೊಂಡರು.
ಪಟೇಲರ ನಿರ್ಧಾರಕ್ಕೆ ಮೊದಲ ವಿರೋಧ ಬಂದುದು ನೆಹರೂ ಮಂತ್ರಿಮಂಡಲದಲ್ಲಿ ಅವರ ಜೊತೆಗಾರರಾಗಿದ್ದ ಶಿಕ್ಷಣ ಮಂತ್ರಿ ಅಬುಲ್‌ಕಲಾಂ ಆಜಾದರಿಂದ, 'ಸೋಮನಾಥ ಅವಶೇಷದ ಪ್ರದೇಶವನ್ನು ಪುರಾತತ್ವ ಇಲಾಖೆಗೆ ಒಪ್ಪಿಸಿ ಅದನ್ನು ಪ್ರಮುಖ ಐತಿಹಾಸಿಕ ಕುರುಹು ಎಂದು ಘೋಷಿಸಬೇಕು' ಎಂಬುದು ಅವರ ಸಲಹೆಯಾಗಿದ್ದಿತು.
ಅಬುಲ್ ಕಲಾಮರ ಇಚ್ಛೆಯು ನೆಹರೂರವರದ್ದು ಎಂದು ಬೇರೆ ಹೇಳಬೇಕಾಗಿಲ್ಲ. ನೆಹರೂ ಅದನ್ನು ಹಲವು ರೀತಿಯಲ್ಲಿ ಪ್ರತಿಪಾದಿಸುತ್ತಾ ಸೋಮನಾಥ ದೇವಸ್ಥಾನದ ನಿರ್ಮಾಣವನ್ನು ತಡೆಯಲು ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಪಣಕ್ಕಿಟ್ಟರು. ತಮ್ಮ ಪತ್ರ ಲೇಖನದ ಹವ್ಯಾಸವನ್ನು ಸೋಮನಾಥ ಪ್ರಸಂಗದಲ್ಲೂ ವಿಶೇಷವಾಗಿ ಬಳಸಿಕೊಂಡರು.
1951ರ ಏಪ್ರಿಲ್ 21ರಂದು ನೆಹರೂ; ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನರಿಗೆ ಒಂದು ಪತ್ರವನ್ನು ಬರೆದರು. ಸೋಮನಾಥ ಪುನರ್ನಿಮರ್ಾಣದ ತಮ್ಮ ದೇಶದ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಬೇಕಾದ ನೆಹರೂ, ಅವರಿಗೆ ಸಮಜಾಯಿಷಿ ಕೊಡುವ ಹಿಂಜರಿಕೆಯ ಮನೋಭಾವವನ್ನು ಪ್ರದರ್ಶಿಸಿದರು. ಮಹಮ್ಮದನು ಘುಜನಿಗೆ ಕೊಂಡೊಯ್ದ ಸೋಮನಾಥ ಮಂದಿರದ ಪುರಾತನ ಮಹಾದ್ವಾರವನ್ನು ಅಲ್ಲಿಂದ ತರಿಸಿ ಮತ್ತೆ ಅದನ್ನು ಈಗ ನಿರ್ಮಿಸಲಿರುವ ಮಂದಿರಕ್ಕೆ ದ್ವಾರವನ್ನಾಗಿ ಇಡುವ ಯೋಜನೆಯೇ ತಮಗೆ ಇಲ್ಲವೆಂದು ತಮ್ಮ ಪತ್ರದಲ್ಲಿ ನೆಹರೂ ವಿವರಿಸಿದರು. ಈ ಕುರಿತು ಪಾಕಿಸ್ತಾನದ ಪೇಶಾವರ ರೇಡಿಯೋ ಪ್ರಸಾರ ಮಾಡಿದ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ದೈನ್ಯ ಧಾಟಿಯಲ್ಲಿ ವಿವರಣೆಯನ್ನು ನೀಡಿದರು.
ಏಪ್ರಿಲ್ 28 ರಂದು ಅವರು ಪತ್ರವನ್ನು ಬರೆದುದು ಸುದ್ದಿ ಮತ್ತು ಪ್ರಸಾರ ಖಾತೆಯ ಮಂತ್ರಿ ರಂಗನಾಥ ದಿವಾಕರರಿಗೆ ಸೋಮನಾಥ ಜೀರ್ಣೋದ್ಧಾರ ಕಾರ್ಯಕ್ರಮದ ಸಂಭ್ರಮ ವಾರ್ತೆಯು ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರಲಿದೆ ಎನ್ನುವ ತಮ್ಮ ಅಳಲನ್ನು ತೋಡಿಕೊಂಡರು. ಅದರಲ್ಲೂ ರಾಷ್ಟ್ರಾಧ್ಯಕ್ಷರಾದ ರಾಜೇಂದ್ರ ಪ್ರಸಾದರು ಆ ಸಮಾರಂಭದಲ್ಲಿ ಉಪಸ್ಥಿತರಿರುವುದು ಭಾರತದ ಪಾಲಿಗೆ ತಲೆ ತಗ್ಗಿಸುವ ವಿಚಾರವೆಂದರು. ಆಕಾಶವಾಣಿಯು ಕಾರ್ಯಕ್ರಮವನ್ನು ವ್ಯಾಪಕವಾಗಿ ಪ್ರಚಾರ ಮಾಡಬಾರದು ಎನ್ನುವುದು ಪ್ರಧಾನಿಯ ಇಂಗಿತವಾಗಿದ್ದಿತು.
ಮುಂದಿನ ಎರಡು ತಿಂಗಳ ಕಾಲ ದೇಶದ ವಿವಿಧ ಪ್ರಾಂತ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ, ಸೋಮನಾಥ ಪ್ರಸಂಗದ ಕುರಿತು ಪತ್ರಗಳನ್ನು ಬರೆಯುತ್ತ ಬಂದರು. ಸೋಮನಾಥ ಮಂದಿರ ನಿರ್ಮಾಣದಲ್ಲಿ ಭಕ್ತಿಯ ಬಹಿರಂಗ ಪ್ರದರ್ಶನದಿಂದಲೂ ಅಲ್ಲಿ ಕಾಣುವ ಧಾರ್ಮಿಕ ಸಂಕೇತಗಳಿಂದಲೂ ಸರ್ಕಾರವು ಬಹಳ ದೂರವಿರಬೇಕು. ಜಾತ್ಯಾತೀತ ತತ್ವವೆಂದರೆ ಇದೇನೆ ಎಂದು ಪದೇಪದೇ ಒತ್ತಾಯಿಸುತ್ತಾ ಬಂದರು.
ಪಟೇಲರ ನಿರ್ಧಾರವನ್ನು ಕಾರ್ಯರೂಪದಲ್ಲಿ ಇಳಿಸಲು ಹೊರಟ ಕೇಂದ್ರ ಮಂತ್ರಿಗಳೂ ಭಾರತೀಯ ವಿದ್ಯಾಭವನದ ಸ್ಥಾಪಕರೂ ಆದ ಕೆ.ಎಮ್. ಮುನ್ಸಿಯವರಿಗೆ ನೆಹರೂ ಪತ್ರ ಬರೆದರು. ಅದು 1950ರ ಜುಲೈ 20ರಂದು. “ಭಾರತದ ಆರ್ಥಿಕ ಸ್ಥಿತಿಯು ಬಹಳ ನಾಜೂಕು ಸ್ಥಿತಿಯಲ್ಲಿದೆ. ದೇಶ ವಿಭಜನೆಯ ಸವಾಲು ಈಗಲೂ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನದ ನಿರ್ಮಾಣದ ಅಗತ್ಯವಿದೆಯೇ?” ಎಂದು ನೆಹರೂ ಅವರನ್ನು ಪ್ರಶ್ನಿಸಿದರು. ಮಂದಿರ ನಿರ್ಮಾಣವು ಪೂರ್ಣ ಸಾರ್ವಜನಿಕ ದೇಣಿಗೆಯಿಂದಲೇ ನಡೆಯಲಿದೆ ಎಂಬುದರ ಅರಿವಿದ್ದ ನೆಹರೂಗೆ ಸ್ವತಂತ್ರಸಾರ್ವಭೌಮ ಸ್ವಾಭಿಮಾನದ ಕಲ್ಪನೆಯೇ ಇರಲಿಲ್ಲ.
1951ರ ಮಾರ್ಚ್ 2 ರಂದು ರಾಷ್ಟ್ರಾಧ್ಯಕ್ಷರಾದ ರಾಜೇಂದ್ರಪ್ರಸಾದರಿಗೆ ಬರೆದ ಪತ್ರದಲ್ಲಿ ನೆಹರೂ, “ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರುವ ತೀವ್ರ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗಿರುವುದರಿಂದ ದೇವಸ್ಥಾನದ ಪ್ರತಿಷ್ಟಾ ಸಮಾರಂಭವನ್ನು ಮುಂದೂಡುವುದು ಸರಿಯಾಗುವುದು” ಎಂದು ಸಲಹೆಯನ್ನು ನೀಡಿದರು.
ಅದೇ ಸಮಯದಲ್ಲಿ ಮುಖ್ಯಮಂತ್ರಿಗಳಿಗೆ ಎರಡು ಪತ್ರಗಳನ್ನು ನೆಹರೂ ಬರೆದರು. ಅವರೆಲ್ಲರಿಗೂ ಪ್ರಾಣಪ್ರತಿಷ್ಟೆಯ ಸಮಾರಂಭದಲ್ಲಿ ಭಾಗವಹಿಸುವ ಇಚ್ಛೆಯಿದ್ದರೂ ಸರ್ಕಾರದ ಜಾತ್ಯತೀತ ನಿಲುವು ಅಪೇಕ್ಷಿಸುವಂತೆ ಅವರೆಲ್ಲರೂ ಆ ಕಾರ್ಯಕ್ರಮದಿಂದ ದೂರವಿರುವುದು ಸರಿಯಾದ ಕ್ರಮವೆಂದು ನಾನು ಸೂಚಿಸುವೆ ಎಂದು ಆಗ್ರಹಿಸುವುದು ಕೂಡಾ ಅವರಿಂದ ನಡೆಯಿತು.
ಜೂನ್ 13ರಂದು ಅವರು ಉಪರಾಷ್ಟ್ರಾಧ್ಯಕ್ಷರಾದ ಡಾ| ಎಸ್. ರಾಧಾಕೃಷ್ಣನ್‌ರವರಿಗೆ ಪತ್ರಬರೆದು ಸೋಮನಾಥ ದೇವಸ್ಥಾನ ನಿರ್ಮಾಣವನ್ನು ಕೈಗೆತ್ತಿಕೊಂಡುದೇ ಅನಪೇಕ್ಷಣೀಯ ಎಂದ ನೆಹರೂ, ತಮ್ಮ ಮಂತ್ರಿಮಂಡಲದ ಸದಸ್ಯರೆಲ್ಲರಿಗೂ ಈ ಸಮಾರಂಭದಲ್ಲಿ ಭಾಗವಹಿಸದಿರಲು ಆದೇಶ ನೀಡಿದರು. ವಿರೋಧಿಸಲೇ ಬೇಕಾದುದನ್ನು ನೇರವಾಗಿ ವಿರೋಧಿಸುವುದು ಸೂಕ್ತವಾದ ರೀತಿ ಎಂದು ಎಲ್ಲರಿಗೂ ಸೂಕ್ಷ್ಮವಾಗಿ ತಾಕೀತು ಮಾಡಿದರು.
ಚೀನಾದಲ್ಲಿ ರಾಯಭಾರಿಯಾಗಿದ್ದ ಕೆ.ಎಂ. ಪಣಿಕ್ಕರರಿಗೆ ಬರೆದ ಪತ್ರದಲ್ಲಿ ನೆಹರೂ, ರಾಷ್ಟ್ರಾಧ್ಯಕ್ಷರ ಸೋಮನಾಥ ಭೇಟಿಯ ವಾರ್ತೆಗೆ ಚೀನಾದಲ್ಲಿ ಹೆಚ್ಚಿನ ಪ್ರಚಾರ ಸಿಗದಂತೆ ನೋಡಿಕೊಳ್ಳಿ ಎನ್ನುವ ಸೂಚನೆಯನ್ನು ತಲುಪಿಸಿದರು.
ಸೌರಾಷ್ಟ್ರಪ್ರಾಂತದ ಮುಖ್ಯಮಂತ್ರಿ ಯು.ಎನ್.ಧೇಬರ್‌ರವರಿಗೆ ಏಪ್ರಿಲ್ 21ರಂದು ಪತ್ರ ಬರೆದು, ಪ್ರಾಂತ ಸರ್ಕಾರದಿಂದ ಸಮಾರಂಭದ ಪ್ರಯುಕ್ತ ಅನುದಾನವೇನಾದರೂ ನೀಡಿದರೆ ವಿರೋಧಿಗಳಿಗೆ ಸರ್ಕಾರವನ್ನು ಟೀಕಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಮುನ್ನೆಚ್ಚರಿಕೆಯನ್ನೂ ನೀಡಿದರು.
ನವನಗರದ ಮಹಾರಾಜ ಜಾಮ್‌ಸಾಹೇಬ ದಿಗ್ವಿಜಯಸಿಂಗ್ ಜಡೇಜಾರವರು ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದರು. ಅವರಿಗೂ ನೆಹರೂ ಪತ್ರ ತಲುಪಿತು. ವಿವಿಧ ದೇಶಗಳ ರಾಯಭಾರಿ ಕಛೇರಿಗಳಿಗೆ ಅಲ್ಲಿಯ ನದಿಗಳ ನೀರನ್ನು ಅಭಿಷೇಕಕ್ಕಾಗಿ ತರಿಸುವ ಪ್ರಯತ್ನವು ನಡೆಯುತ್ತಿದೆ. ಸರ್ಕಾರವು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವುದು ವಿದೇಶಗಳಲ್ಲಿ ಅದರಲ್ಲೂ ಪಾಕಿಸ್ತಾನದಲ್ಲಿ ವ್ಯತಿರಿಕ್ತ ಅಭಿಪ್ರಾಯವು ನೆಲೆಸಲು ಎಡೆಮಾಡಿದಂತಾಗುತ್ತದೆ ಎಂದು ಬರೆದ ನೆಹರೂ, ಮತ್ತೆರಡು ದಿನಗಳಲ್ಲಿ ಏಪ್ರಿಲ್ 24ರಂದು ಮತ್ತೊಂದು ಪತ್ರವನ್ನು ಬರೆದು ಈ ಪ್ರತಿಷ್ಟಾಪನೆಯ ಘಟನೆಯಂತೂ ಭಾರತದ ಪ್ರತಿಷ್ಠೆಗೆ ಕುಂದು ತರುತ್ತಿದೆ ಎಂದು ಶಂಕಿಸಿದರು.
ಅದೇ ವಾರದಲ್ಲಿ ಭಾರತದ ರಾಯಭಾರ ಕಚೇರಿಗಳು ಸೋಮನಾಥ ಮಂದಿರದ ಕಾರ್ಯಕ್ಕೆ ಯಾವುದೇ ನೆರವು ನೀಡುವಂತಿಲ್ಲವೆನ್ನುವ ಪತ್ರವನ್ನು ಪಡೆದವು. ಮೇ 19ರಂದು ವಿದೇಶಾಂಗ ಇಲಾಖೆಯ ಮುಖ್ಯ ಕಾರ್ಯದರ್ಶಿ ಟಿ.ಎಸ್.ದತ್ತಾರಿಗೆ ನೆಹರೂರವರ ಪತ್ರ ತಲುಪಿತು. ಅದರಲ್ಲಿ 'ಸೋಮನಾಥ ನಿರ್ಮಾಣವು ದೇಶದ ದುರಾದೃಷ್ಟ' ಎಂದರು.
ಮಾರ್ಚ್ 19ರಂದು ಪಾಕಿಸ್ತಾನದಲ್ಲಿನ ಭಾರತ ರಾಯಭಾರಿಗಳಿಗೆ ಅಲ್ಲಿಂದ ಸಿಂಧೂ ನದಿಯ ನೀರನ್ನು ಕಳುಹಿಸಬಾರದು. ನಾವು ಹಿಂದು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ತೋರುತ್ತಿವೆವೆಂದು ಅಲ್ಲಿ ಪ್ರಚಾರವಾಗಬಾರದು ಎಂದು ಸೂಚಿಸಿದ್ದರು.
ರಾಜೇಂದ್ರಪ್ರಸಾದರಿಗೆ ಪ್ರಧಾನಿ ನೇರವಾಗಿ ಬರೆದು ಅವರು ಪ್ರತಿಷ್ಟಾ ಸಮಾರಂಭದಲ್ಲಿ ಭಾಗವಹಿಸುವುದು ತನಗೆ ಸುತಾರಾಂ ಇಷ್ಟವಿಲ್ಲ ಎಂದು ಹೇಳಿದರು. ಆದುದರಿಂದ ಸೋಮನಾಥ ಭೇಟಿಯನ್ನು ರದ್ದುಪಡಿಸಬೇಕೆಂದೂ ಅಲ್ಲಿ ನಡೆಯಬೇಕಾದ ಸಮಾರಂಭವು ಸರಳವಾಗಿ ನಡೆಯಲಿ ಎಂದು ಸೂಚಿಸಿದರು.
ಅದಕ್ಕೆ ಹಿಂದೆ ಮಾರ್ಚ್ 11ರಂದು ಕೇಂದ್ರ ಗೃಹಮಂತ್ರಿಗಳಾದ ರಾಜಾಜಿಯವರಿಗೆ ಪ್ರಧಾನಿಯವರು “ದೇಶದ ಪ್ರಥಮ ಪ್ರಜೆಯು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು” ಎಂದು ಗೋಗರೆದರು. ಏಪ್ರಿಲ್ 17ರಂದು ಇನ್ನೊಂದು ಪತ್ರದಲ್ಲಿ ತನ್ನ ಜೀವನದ ಅತ್ಯಂತ ಖೇದಕರ ಕಾರ್ಯಕ್ರಮವಿದು ಎಂದು ತಿಳಿಸಿದರು.
ಹಿಂದು ಸಾಂಸ್ಕೃತಿಕ ಪುನರುತ್ಥಾನವು ತನಗೆ ಅತ್ಯಂತ ಮುಜುಗರವನ್ನು ಉಂಟುಮಾಡುತ್ತಿದೆ ಎಂದು ಮೃದುಲಾ ಸಾರಾಭಾಯಿಯವರಿಗೆ ಬರೆದ ಪತ್ರದಲ್ಲಿ ತಮ್ಮ ಭಾವನೆಯನ್ನು ನೆಹರೂ ತೋಡಿಕೊಂಡರು.
ಎಲ್ಲಾ ಪತ್ರಗಳಲ್ಲೂ ಇದ್ದುದು ಒಂದೇ ರಾಗ, ಇಷ್ಟಾಗಿ ಸೋಮನಾಥ ಪುನರ್‌ಪ್ರತಿಷ್ಠೆ ನಡೆಯಿತು. ಪಟೇಲ್ ಇರಲಿಲ್ಲ ನೆಹರೂ ಇದ್ದರು, ಚಡಪಡಿಸಿಕೊಂಡರು. ಅವರು ಬರೆದ ಪತ್ರಗಳಿಗೆ ಕಿಂಚಿತ್ತೂ ಬೆಲೆ ಸಿಗಲಿಲ್ಲ.