Hindu Vani
Index
ಪ್ರಸ್ತುತ
ನೀವೂ ಸಾಲ ಮಾಡಿದ್ದೀರಾ...?
ಕೊಟ್ಟು ಕೆಟ್ಟವರಾಗುವುದಕ್ಕಿಂತ ಕೊಡದೆ ಕೆಟ್ಟವರಾಗುವುದೇ ಒಳ್ಳೆಯದು; ಎಂಬ ಅನುಭವಿಗಳ ಮಾತನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ತುಂಬಾ ಆತ್ಮೀಯರಲ್ಲಿ ಹಣಕಾಸಿನ ವ್ಯವಹಾರ ಒಳ್ಳೆಯದಲ್ಲ ಎಂಬುದು ಸತ್ಯವೂ ಹೌದು. ಈ ವ್ಯವಹಾರ ಆತ್ಮೀಯತೆಗೆ ಹುಳಿಹಿಂಡಿಬಿಡುತ್ತದೆ.
“ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ಹಿಂದೆ ಹಿರಿಯರು ಮಕ್ಕಳಿಗೆ ತಿಳಿಸಿಕೊಡುತ್ತಾ, ಮಿತವ್ಯಯದ ಹಾದಿಯನ್ನು ಬೋಧಿಸುವುದಲ್ಲದೆ ತಾವೂ ಪ್ರತ್ಯಕ್ಷವಾಗಿ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಈ ಮಾತಿಗೆ ವ್ಯತಿರಿಕ್ತವಾದ ಉದಾಹರಣೆಗಳೂ ವಿರಳವಾಗಿ ಸಿಗುತ್ತಿದ್ದುದುಂಟು.
“ಸಾಲ ಮಾಡಿ ತುಪ್ಪ ತಿನ್ನು” ಎನ್ನುವ ಚಾರ್ವಾಕರ ಹೇಳಿಕೆ ಕೆಲವರಿಗೆ ಮೊದಲು ಹಿತವೆನಿಸಿದರೂ ಪರಿಣಾಮ ಬಹಳ ಕೆಟ್ಟದ್ದು ಎಂದು ಅರಿಯುವಾಗ ಕಾಲ ಮಿಂಚಿರುತ್ತದೆ. ಬದುಕಿರುವಾಗ ಖುಷಿಯಾಗಿರುವುದು ಮುಖ್ಯ. ನಮ್ಮ ಆರ್ಥಿಕ ಪರಿಸ್ಥಿತಿ ಅದಕ್ಕೆ ಅಡ್ಡಿಯಾದರೆ ಸಾಲ ಮಾಡಿದರಾಯಿತು. ಒಟ್ಟಾರೆ ಬೇಕೆನಿಸಿದ್ದನ್ನು ತಿಂದುಂಡು ಜೀವನವನ್ನು ಚೆನ್ನಾಗಿ ಅನುಭವಿಸಬೇಕು; ಎಂಬ ಈ ಧೋರಣೆ ಬಲು ಅಪಾಯಕಾರಿಯೇ ಅನಿಸುತ್ತದೆ.
ತುಪ್ಪ ಬಳಸಿ ಮಾಡಿದ ಸಿಹಿ, ಅಡುಗೆ ಬಹಳ ರುಚಿ, ನಾಲಿಗೆಗೆ ಹಿತ, ಆದರೆ ಅದಕ್ಕೆ ಹೆಚ್ಚು ಹಣ ಬೇಕು. ತುಪ್ಪ ಇಲ್ಲದಿದ್ದರೂ ಹಸಿವು ಇಂಗಿಸಿಕೊಳ್ಳಲು ದಿನ ನಿತ್ಯದ ಊಟತಿಂಡಿ ಮಾಡಲು ತೊಂದರೆಯಾಗದು. ಆದರೆ ಕೆಲವರ ಆರ್ಥಿಕ ಸ್ಥಿತಿ ಹೇಗೇ ಇರಲಿ, ಅವರಿಗೆ ಬೇಕು ಎನಿಸಿದ್ದು ಆ ಕ್ಷಣಕ್ಕೆ ಆಗಲೇಬೇಕು. ಸಾಲ ಮಾಡಿ ಹೊಂದಿಸಿದ ಹಣವನ್ನು ಖರ್ಚು ಮಾಡಿಬಿಡುತ್ತಾರೆ. ಆಮೇಲೆ ಸಾಲ ತೀರಿಸುವಾಗಿನ ಪರದಾಟ ಪಶ್ಚಾತ್ತಾಪ ಪಡುವಂತಾಗಬಹುದು. ಇಂದು ಇಂದಿಗೆ ನಾಳೆ ನಾಳೆಗೆ' ಎಂಬ ತತ್ತ್ವದಲ್ಲಿ ಹಣ ಖರ್ಚು ಮಾಡಿದರೆ ಮುಂದಿನ ಪಾಡು ಊಹಿಸಲಾಗದು.
“ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು” ಎಂಬ ಗಾದೆಯು ತುಸು ವಿಭಿನ್ನವಾದ ಅರ್ಥವನ್ನು ಧ್ವನಿಸುತ್ತದೆ. ತಮ್ಮ ದಿನ ನಿತ್ಯದ ಅಗತ್ಯದ ಖರ್ಚುಗಳನ್ನು ನಿಭಾಯಿಸುವುದೇ ಕಷ್ಟವಾಗಿರುವಾಗಲೂ ಒಣ ಪ್ರತಿಷ್ಠೆ, ಪ್ರದರ್ಶನ, ಆಡಂಬರ, ಹೊರಗಿನ ಸಿಂಗಾರ ಮುಖ್ಯವೆಂದು ಭಾವಿಸುವವರು ಹಲವರು. ಊಟವಿಲ್ಲದಿದ್ದರೂ ಚಿಂತೆಯಿಲ್ಲ. ಸಮಾಜದ ಕಣ್ಣಿನಲ್ಲಿ ಶ್ರೀಮಂತರೆಂದು ಕಾಣಬೇಕು ಎಂಬ ಇರಾದೆ.
ಕೆಲವರು ಶ್ರೀಮಂತರಾಗಿದ್ದವರು ತಮ್ಮ ದುಂದುವೆಚ್ಚದಿಂದಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಶೇರ್‌ಗಳ ವ್ಯವಹಾರದಲ್ಲಿ ತಮ್ಮಲ್ಲಿದ್ದುದನ್ನು ಹಾಕಿ, ತೊಡಗಿಸಿ ಮತ್ತಷ್ಟು ಸಾಲ ಮಾಡಿಯೂ ಹಾಕುತ್ತಾರೆ. ಶೇರ್‌ಗಳ ಬೆಲೆ ಕುಸಿದಾಗ ಎಲ್ಲವೂ ಅಯೋಮಯವಾಗಿ ಸಂಸಾರದ ಗತಿ ಬೀದಿಗೆ ಬೀಳುವಂತಾಗುತ್ತದೆ.
“ಸಾಲವನು ಕೊಂಡಾಗ ಹಾಲೋಗರುಂಡಂತೆ,
ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ” ಎಂಬುದು ಅನೇಕರಿಗೆ
ಅನುಭವವೇದ್ಯವಾಗಿರುತ್ತದೆ.
ಅವಶ್ಯಕತೆ ಅತ್ಯಗತ್ಯವಾಗಿ ಕೆಲವೊಮ್ಮೆ ವಿಷಮ ಪರಿಸ್ಥಿತಿಯಿಂದಾಗಿ ಹಣದ ಅವಶ್ಯಕತೆ ಸಾಲ ಅನಿವಾರ್ಯವಾಗುತ್ತದೆ. ಗಡುವು ಮೀರಿದರೂ ಸಾಲ ತೀರಿಸಲಾಗದೆ ಪರದಾಡಬೇಕಾಗುತ್ತದೆ. ಮನೆಯ ಒಳಗಿದ್ದೂ, ಇಲ್ಲ ಎಂದು ಅವಿತುಕೊಳ್ಳಬೇಕಾದ ಸ್ಥಿತಿ ಅಸಹನೀಯವೆನಿಸುತ್ತದೆ. ಲೇವಾದೇವಿ ವ್ಯವಹಾರ ಮಾಡುವವರು ಚಕ್ರಬಡ್ಡಿ ಸಮೇತ ಹಣ ವಸೂಲು ಮಾಡುವುದರಲ್ಲಿ ನಿಸ್ಸಿಮರು. ಅದಕ್ಕಾಗಿ ಅವರು ಗೂಂಡಾಗಳ ನೆರವನ್ನೂ ಪಡೆಯುತ್ತಾರೆ. ಎಷ್ಟೋ ವೇಳೆ ಹೀಗೆ ಸಾಲದ ವಿಷಯದಲ್ಲಿ ಮಾರಾಮಾರಿಯಾಗಿ, ಕೊಲೆಯಲ್ಲಿ ಪರ್ಯಾವಸಾನವಾಗುವುದೂ ಉಂಟು.
ಚಿನ್ನ, ಬೆಳ್ಳಿಯನ್ನು ಗಿರವಿ ಅಂಗಡಿಗಳಲ್ಲಿಟ್ಟು ಸಾಲ ತಂದಾಗ, ಬಡ್ಡಿಯೇ ಬೆಳೆದು ಕೊನೆಗೆ ಇಟ್ಟ ಒಡವೆಗಳು ಕೈ ಬಿಟ್ಟು ಹೋಗುತ್ತವೆ.
“ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ” ಎಂಬ ಗಾದೆ ಎಲ್ಲಾ ವೇಳೆ ಸರಿಯಾಗದು. ಸಾಲ ಕೊಟ್ಟವರು ಅಮಾಯಕರಾಗಿದ್ದರೆ ಆಗ ಸಾಲ ಪಡೆದವರು ಜಾಣ ಮರೆವು ತೋರಿಯಾರು.
ಬಾವಿಯ ಹೆಸರಲ್ಲಿ ಸಾಲ ಮಾಡಿ ಬಾವಿಯೇ ಕಳುವಾದ ಪ್ರಸಂಗವನ್ನು ಪ್ರಹಸನದ ಮೂಲಕ ನಾವೆಲ್ಲಾ ನೋಡಿರುತ್ತೇವೆ.
ಸಾಲಗಾರರ ಕಾಟ ತಾಳಲಾರದೆ ಯಾರ ಅರಿವಿಗೂ ಬಾರದಂತೆ ಏಕಾಏಕಿ ಕಣ್ಮರೆಯಾಗುವ ಅನೇಕ ಘಟನೆಗಳನ್ನು ನಾವು ಕೇಳಿರುತ್ತೇವೆ. ಎರಡು ತಿಂಗಳುಗಳ ಕೆಳಗೆ ಬಂದ ಸುದ್ದಿಯೊಂದು ಸಾಲಗಾರನ ಬಗ್ಗೆ ಅಚ್ಚರಿ ಹುಟ್ಟಿಸುವಂತಿದೆ.
ಅಶುತೋಷ್ ಎಂಬುವರು ಪುಣೆಯಲ್ಲಿ ಖಾಸಗಿ ಕಂಪನಿಯೊಂದರ ನಿರ್ದೇಶಕರಾಗಿದ್ದರು, 2013ರಲ್ಲಿ ಪುಣೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್‌ನಿಂದ ಹದಿನೇಳು ಕೋಟಿ ವಂಚನೆಯ ಆರೋಪಕ್ಕೊಳಗಾದಾಗ ಕಣ್ಮರೆಯಾಗಿಬಿಟ್ಟರು. ಆ ವ್ಯಕ್ತಿಯನ್ನು ಆರ್ಥಿಕ ಅಪರಾಧ ವಿಭಾಗದಿಂದ ಅಪರಾಧಿ ಎಂದು ಘೋಷಿಸಲಾಯಿತು. ಅಷ್ಟರಲ್ಲಾಗಲೆ ಪ್ರಕರಣ ತಣ್ಣಗಾಗಿ ಅಶುತೋಷ್‌ರನ್ನು ಬಹುತೇಕರು ಮರೆತೇಬಿಟ್ಟಿದ್ದರು.
ಅಚ್ಚರಿಯೆಂದರೆ ಆ ವ್ಯಕ್ತಿ ತನ್ನ ಮೊದಲ ವ್ಯಕ್ತಿತ್ವವನ್ನೇ ಮರೆಮಾಚಿ ಗೋವಾದಲ್ಲಿ ಬೇರೆ ಅವತಾರವನ್ನೇ ಎತ್ತಿಬಿಟ್ಟಿದ್ದರು. ಯತಿನ್ ಶರ್ಮ ಆಗಿ ಬದಲಾದ ಅವರು ಆಧಾರ್ ಕಾರ್ಡ್, ಪಾನ್ ಕಾರ್ಡ್‌ಗಳಲ್ಲದೆ ದೆಹಲಿಯಿಂದ ಪಾಸ್‌ಪೋರ್ಟ್‌ನ್ನೂ ಪಡೆದುಕೊಂಡಿದ್ದರು.
ಆ ಪಾಸ್‌ಪೋರ್ಟ್‌ಗೆ ಅವಧಿ ಮುಗಿದಾಗ ಗೋವಾದ ಪಾಸ್‌ಪೋರ್ಟ್‌ನ್ನು ಪಡೆದುಕೊಂಡರು. ಆದರೆ ಪ್ರಕರಣ ತಣ್ಣಗಾದರೂ ತನಿಖೆ ನಡೆಯುತ್ತಲೇ ಇತ್ತು. ಕೊನೆಗೂ ಡಿಜಿಟಲ್ ಪುರಾವೆಗಳಿಂದ ಅಶುತೋಷ್ ಅಥವಾ ಯತಿನ್ ಶರ್ಮನನ್ನು ಬಂಧಿಸುವಲ್ಲಿ ಸಿಬಿಐ ಯಶಸ್ವಿಯಾಯಿತು.
ಹೀಗೆ ಸಾಲಗಾರನೊಬ್ಬ ಹತ್ತು ವರ್ಷಗಳ ಕಾಲ ವಂಚಿಸಿ, ವೇಷ ಮರೆಸಿ ಮತ್ತೊಬ್ಬ ವ್ಯಕ್ತಿಯಾಗಿ ಬದುಕಿದ ಘಟನೆ 'ಹೀಗೂ ಸಾಧ್ಯವೆ' ಎಂಬ ವಿಸ್ಮಯ ಹುಟ್ಟಿಸುತ್ತದೆ.
ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಹೋಗಿ ವೈಭವದ ಜೀವನ ನಡೆಸುತ್ತಾ ಇಲ್ಲಿಯ ಸರ್ಕಾರಕ್ಕೆ ತಲೆನೋವಾಗಿರುವವರ ಪಟ್ಟಿ ಗಾಬರಿ ಹುಟ್ಟಿಸುತ್ತದೆ.
ಸಾಲಗಾರರಲ್ಲೂ ಅನೇಕ ಮನೋಭಾವದವರಿರುತ್ತಾರೆ. ಮರ್ಯಾದೆಗೆ ಅಂಜುವ ಅನೇಕರಿಗೆ ಸಾಲ ತೀರಿಸಲು ಆಗದಾಗ ಚಡಪಡಿಕೆ, ಖಿನ್ನತೆ ಕಾಡುತ್ತದೆ. ಬಡ್ಡಿ ಹೆಚ್ಚಾಗಿ, ಬಂಗಾರ, ಬೆಳ್ಳಿ, ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡವರಿದ್ದಾರೆ.
ಕೃಷಿಕರು ಅದರಲ್ಲೂ ಸಣ್ಣ ಸಣ್ಣ ಹಿಡುವಳಿದಾರರ ಬದುಕಂತೂ ತೂಗುಯ್ಯಾಲೆಯಾಗಿರುತ್ತದೆ. ಸಕಾಲಕ್ಕೆ ಮಳೆಯಾದರೆ ಬೆಳೆಯೂ ಆದೀತು! ಹಾಗಾಗದಿದ್ದಾಗ ರೈತರಿಗೆ ಮಾಡಿದ್ದ ಸಾಲವನ್ನು ತೀರಿಸಲಾಗದು. ಹಾಗಾಗಿ ಸಾಲಬಾಧೆಗೆ ಬೇಸತ್ತು ಅಂತ್ಯ ಕಂಡುಕೊಳ್ಳುವವರ ಸುದ್ದಿ ಪತ್ರಿಕೆಗಳಲ್ಲಿ ನೋಡಿದಾಗ ಖೇದವಾಗುತ್ತದೆ. ಅಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳದೆ ಆದಷ್ಟೂ ಸಂದರ್ಭಕ್ಕೆ ವಿಚಲಿತರಾಗದೆ, ತುಸು ತಾಳ್ಮೆಯಿಂದ ಯೋಚಿಸಿದರೆ ಪರಿಹಾರ ಸಿಕ್ಕೇ ಸಿಗುತ್ತದೆ. ಆತ್ಮವಿಶ್ವಾಸ, ನಂಬಿಕೆಯಿದ್ದರೆ ಅಸಾಧ್ಯವಾದುದು ಸಾಧ್ಯವೆನಿಸುತ್ತದೆ.
ನಮ್ಮ ಆತ್ಮೀಯ ಹಿರಿಯರೊಬ್ಬರದು ತುಂಬಾ ಸೌಜನ್ಯದ ಸ್ವಭಾವ. ಅವರು ಯಾರೊಂದಿಗೂ ಗಟ್ಟಿಯಾಗಿ ಮಾತನಾಡದಷ್ಟು ಸೌಮ್ಯ ನಡೆ-ನುಡಿಯವರು. ಅವರಿಂದ ಸಾಲ ಪಡೆದವರೊಬ್ಬರು ವರ್ಷಗಳವರೆಗೂ ಸಾಲ ತೀರಿಸಲಿಲ್ಲ. ಆದರೆ ಸಾಲ ಕೊಟ್ಟ ಆ ಮಹಾನುಭಾವರು ಆ ಬಗ್ಗೆ ಅವರನ್ನೆಂದೂ ಕೇಳಿರಲಿಲ್ಲ. ಒಮ್ಮೆ ಅವರು ಎದುರಾಗುವ ಸಂದರ್ಭ ಬಂದಾಗಲೂ ಸ್ವತಃ ಹಣ ಮರಳಿ ಕೇಳದಿದ್ದರೂ ಸಾಲ ಪಡೆದವರಿಗೇ ಇರಿಸುಮುರಿಸಾಗಿ ಏನೋ ನೆವ ಹೇಳಿ ಅಲ್ಲಿಂದ ಜಾರಿಕೊಂಡರಂತೆ. ಮುಂದೆ ಹೀಗೆ ಮುಜುಗರವಾಗದಿರಲೆಂದು ಸಾಲ ಪಡೆದವರು ದೂರ ದಾರಿಯಲ್ಲಿ ಕಂಡರೆ ಸಾಲ ಕೊಟ್ಟ ಮಹನೀಯರೇ ಪಕ್ಕದ ರಸ್ತೆಗೆ ತಿರುಗಿಬಿಡುತ್ತಿದ್ದರಂತೆ. ಇಂತಹವರ ವಿಶಾಲ ಮನೋಭಾವ ದುರುಪಯೋಗವಾಗಬಾರದಷ್ಟೆ!
ಕೆಲವಾರು ವರ್ಷಗಳ ಹಿಂದೆ ವಠಾರಗಳಲ್ಲಿ ಅಕ್ಕಪಕ್ಕದ ಮನೆಯವರೊಂದಿಗೆ ಗೃಹಿಣಿಯರು ಮಾಡುತ್ತಿದ್ದ ಸಾಲಗಳಂತೂ ವೈವಿಧ್ಯಮಯ. ಒಂದು ಲೋಟ ಹಾಲು, ಆರು ಚಮಚೆ ಸಕ್ಕರೆ, ಆರು ಚಮಚೆ ಕಾಫಿ ಪುಡಿ, ಒಂದು ಲೋಟ ಅಕ್ಕಿ ಹಿಟ್ಟು ಹೀಗೆ ಮುಂದುವರೆಯುತ್ತದೆ. ಆಗ ಬೇಕೆಂದಾಗ ಅಂಗಡಿಗಳಿಗೆ ಹೋಗಿಬರುವಂತಿರಲಿಲ್ಲವಲ್ಲ. ಆನ್‌ಲೈನ್ ಖರೀದಿಯಂತೂ ಇರಲೇ ಇಲ್ಲ.
ಅತಿಥಿಗಳು ಮನೆಯಲ್ಲಿ ಕುಳಿತಿದ್ದರೆ ಆ ಮನೆಯ ಗೃಹಿಣಿ ಹಿಂಬಾಗಿಲಿನಿಂದ ಹೋಗಿ ಪಕ್ಕದ ಮನೆಯವರ ಹತ್ತಿರ ಅವಸರವಸರವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದು, “ಅಪರೂಪದ ನೆಂಟರು ಬಂದಿದ್ದಾರೆ ನೋಡಿ.. ಈಗಲೇ ಹೀಗೆ ಆಗೋಕಾ.. ಹಾಲೇ ಖರ್ಚಾಗಿ ಹೋಗಿದೆ.... ಒಂದು ಲೋಟ ಹಾಲು ಕೊಡ್ತೀರಾ... ನಾಳೆ ಹಾಲಿನವರು ಬಂದ ಕೂಡ್ಲೆ ತಂದುಕೊಟ್ಟುಬಿಡ್ತೀನಿ...”
ಇವರ ಬೇಡಿಕೆಗೆ ಮನ್ನಣೆ ಕೊಟ್ಟೋ, ತಮಗೂ ಮುಂದೆ ಅಂತ ಸಂದರ್ಭ ಬರಬಹುದೆಂದೋ ಅಥವಾ ಅಕ್ಕಪಕ್ಕದವರೊಂದಿಗೆ ನಿಷ್ಟುರ ಮಾಡಿಕೊಳ್ಳಬಾರದೆಂದೋ ಆ ಮನೆಯಾಕೆ ಆಗ ಹಾಲನ್ನು ಕೊಟ್ಟುಬಿಡುತ್ತಾರೆ. ಒಂದು ವೇಳೆ ಪಕ್ಕದ ಮನೆಯವರ ಬಳಿಯೂ ಹಾಲು ಇಲ್ಲವಾಗಿ ಅವರು ಅದನ್ನೇ ಹೇಳಿಬಿಟ್ಟಿದ್ದರೆ ಸುಳ್ಳು ಹೇಳಿ ಸಾಗ ಹಾಕುತ್ತಿದ್ದಾರೆಯೇ ಎಂಬ ಅನುಮಾನದೊಂದಿಗೆ, ಸಾಲಕ್ಕೆ ಬಂದಾಕೆ ಮುಖ ದಪ್ಪ ಮಾಡಿಕೊಂಡು ಹೋಗುವ ಸಂಭವವಂತೂ ಇದ್ದೇ ಇರುತ್ತದೆ.
ಇಂತಹ ಎಷ್ಟೋ ಸಾಲಗಳು ಮರಳಿ ಬಾರದಿರಬಹುದು. ಮತ್ತೆ ಮತ್ತೆ ಆ ಕ್ರಮ ಪುನರಾವರ್ತನೆಯಾದರೆ ಕೇಳಿ ಕೆಟ್ಟವರಾಗುವ ಸಂದರ್ಭ ಬಂದುಬಿಡುತ್ತದೆ. ಕೆಲವೊಮ್ಮೆ ಕೊಡುವ ಪ್ರಮಾಣದಲ್ಲಿ ಕಡಿಮೆಯಾಗಬಹುದು. ಆಗ ಅಷ್ಟಾದರೂ ಬಂದಿದ್ದಕ್ಕಾಗಿ ಖುಷಿಪಡಬೇಕು. ಸಕ್ಕರೆ ಸಾಲ ತೀರಿಸಿ, ಕಾಫಿ ಪುಡಿ ತೆಗೆದುಕೊಂಡು ಹೋಗುವವರೂ ಇರುತ್ತಿದ್ದರು.
ಕೊಟ್ಟಿದ್ದನ್ನು ಹಿಂತಿರುಗಿಸದೆ ಮತ್ತೆ ಲೋಟ ಹಿಡಿದು ಬಂದಾಗ, “ನೀವು ಹಿಂದೆ ತೆಗೆದುಕೊಂಡು ಹೋಗಿದ್ದು ಕೊಡುವುದಕ್ಕೆ ಮರೆತಿದ್ದೀರ..' ಎಂದು ನಗುತ್ತಲೇ ನಿಧಾನವಾಗಿ ಎಚ್ಚರಿಸುವವರೂ ಇದ್ದಾರೆ.
ಹಿಂದೆಲ್ಲಾ ಮೊಬೈಲ್ ಎಲ್ಲರ ಕೈ ಆಭರಣ ಆಗುವ ಮೊದಲು ಪುಸ್ತಕಗಳನ್ನು ಹೆಚ್ಚು ಮಂದಿ ಓದುತ್ತಿದ್ದರು. ಒಳ್ಳೆಯ ಪುಸ್ತಕಗಳನ್ನು ಓದಲು ತೆಗೆದುಕೊಂಡು ಹೋದವರು ಹಿಂತಿರುಗಿಸಲು ಮರೆಯುವುದೂ ಉಂಟು. “ದಯವಿಟ್ಟು ಓದಿ ನಂತರ ಹಿಂತಿರುಗಿಸಿ” ಎಂದು ಪುಸ್ತಕ ಧಣಿ ಮುಂದಿನ ಪುಟದಲ್ಲಿ ಹಾಕುವುದೂ ಇರುತ್ತಿತ್ತು.
'ಪುಸ್ತಕಂ ವನಿತಾ ವಿತ್ತಂ ಪರಹಸ್ತಂ ಗತಂ ಗತಂ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ' ಎಂಬಂತೆ ಪುಸ್ತಕದ ಪುಟಗಳು ಮುದುರಿ ಹರಿದು ಹಾಳಾಗಿ ರಕ್ಷಾಪುಟ ಹಾಗೂ ಒಳಗಿನ ಪುಟಗಳಲ್ಲಿ ಏನೇನೋ ಕೊಳೆಯಾಗಿ, ಕಲೆಗಳಾಗಿ ಮರಳಿ ಬರುವುದೂ ಉಂಟು.
ಸಾಲದ ಹಣದಿಂದ ಎಷ್ಟೋ ಬಾರಿ ಕಂಟಕ ಒದಗಿದರೂ ಹಲವರ ಜೀವನೋಪಾಯಕ್ಕೆ ಅದು ಅತ್ಯಗತ್ಯವೆನಿಸಿಬಿಟ್ಟಿದೆ. ಇಂತಿಷ್ಟು ಎಂದು ನಿಶ್ಚಿತವಾದ ತರಕಾರಿ ಗಾಡಿಯವರಿಗೆ ಬೆಳಿಗ್ಗೆ ಒಬ್ಬ ವ್ಯಕ್ತಿ ಬಂದು ಗೊತ್ತಾದ ಹಣ ಸಾಲ ಕೊಡುತ್ತಾನೆ. ಸಂಜೆ ಆ ಹಣಕ್ಕೆ ಎರಡರಷ್ಟು ಮೊತ್ತವನ್ನು ಕೊಟ್ಟ ವ್ಯಕ್ತಿಗೆ ಹಿಂತಿರುಗಿಸಬೇಕು. ಇದರಲ್ಲಿ ಚೌಕಾಶಿಗೂ ಅವಕಾಶವಿರುವುದಿಲ್ಲ. ಅಷ್ಟು ಸಾಲ ಸಿಗದಿದ್ದರೆ ಅವರಿಗೆ ಅಂದಿನ ವ್ಯಾಪಾರ ಮಾಡಲಾಗುವುದಿಲ್ಲ. ಇಲ್ಲಿ ಕೊಟ್ಟ ಮಾತಿಗೆ ತಪ್ಪಿ ನಡೆದರೆ ಪರಿಣಾಮ ಅತಿ ಘೋರವಾಗಿರುತ್ತದೆ.
ಇದೆಲ್ಲಾ ಸಾಮಾನ್ಯ ಮನುಷ್ಯರು ಸಣ್ಣ ಪ್ರಮಾಣದಲ್ಲಿ ಮಾಡುವ ಸಾಲದ ವಿಷಯವಾದರೆ ರಾಜ್ಯಗಳ ಸಾಲ, ಕೇಂದ್ರ ಸರ್ಕಾರ ವಿದೇಶಗಳೊಂದಿಗೆ ಮಾಡುವ ಸಾಲ ವರ್ಷವರ್ಷಕ್ಕೂ ಏರುತ್ತಲೇ ಇರುತ್ತದೆ. ಈ ಸಾಲದ ಪ್ರಮಾಣ ಕೆಳಕ್ಕಿಳಿಯುವುದು ಬಲು ಅಪರೂಪ.
ಭಂಡ ಧೈರ್ಯ, ಚಾಲಾಕಿತನ, ಕಪಟತನದಿಂದ ಮತ್ತೊಬ್ಬರ ಹಣ ಪಡೆದು ಅದನ್ನು ಮರಳಿಸದೆ ಶ್ರೀಮಂತರಾಗಿರುವವರ ಉದಾಹರಣೆಗಳೂ ಇವೆ.
ಹಿಂದೆ ಅತಿಯಾದ ಸಾಲ ಮಾಡಿ 'ದಿವಾಳಿ' ಎಂದು ಘೋಷಿಸಿಕೊಳ್ಳುವವರೂ ಇರುತ್ತಿದ್ದರು. ಆದರೆ ತಮ್ಮ ಮುಂದಿನ ಜೀವನಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಂಡು ಬಿಡುವ ಜಾಣತನ ಹೆಚ್ಚಿನವರದ್ದು.
ಈಗಿನ ರೀತಿಯೇ ಬೇರೆ, ಹಣ ಕೊಡಿಸಿ, ಆಸ್ತಿ, ಮನೆ ಮಾಡುವುದಂತೂ ಆಗದ ಮಾತು. ಅದಕ್ಕೇ ಹೆಚ್ಚಿನವರು ಕಂತುಗಳನ್ನು ಕಟ್ಟುತ್ತಾ ಕಂತುಪಿತರಾಗಿ ಆಸ್ತಿ ಮಾಡುತ್ತಾರೆ. ಬಡ್ಡಿ ಅಸಲಿಗಿಂತ ಹೆಚ್ಚಾದರೂ, ಅತಿ ದೀರ್ಘಾವಧಿಯವರೆಗೂ ಸಾಲ ಪಾವತಿ ಮುಗಿಯದಿದ್ದರೂ ಕಂತು ಕಂತುಗಳಾಗಿ ಪಾವತಿಸುವುದರಿಂದ ಹೇಗೋ ಹೊಂದಿಸಿಕೊಳ್ಳುತ್ತಾರೆ. ಆ ಸಾಲ ಮುಗಿಯುತ್ತಿದ್ದಂತೆ ಮತ್ತೊಂದಕ್ಕೆ ಕಂತು, ಆ ಋಣಭಾರ ತೀರಿಸಲು ಪತಿ-ಪತ್ನಿಯರ ಹಗ್ಗ ಜಗ್ಗಾಟ ನಡೆಯುತ್ತಲೇ ಇರುತ್ತದೆ. ಇಷ್ಟವಿಲ್ಲದಿದ್ದರೂ ಮಹಿಳೆಯರಂತೂ ಅನಿವಾರ್ಯವಾಗಿ ದುಡಿಯಬೇಕಾದ ಸ್ಥಿತಿಯಲ್ಲಿ ತೊಳಲಾಡುವುದೂ ಉಂಟು.
ಸಾಲ ಅನೇಕ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಜನಸಾಮಾನ್ಯರಿಗೆ ಹಣ ಕೊಡುವುದಾಗಿ ವಿವಿಧ ರೀತಿಯಲ್ಲಿ ಆಮಿಷ ಒಡ್ಡುತ್ತಾರೆ. ಅವರಿಗೆ ಸಾಲ ಹೆಚ್ಚು ಪಡೆದಷ್ಟೂ ಅವರ ವ್ಯವಹಾರ ಚೆನ್ನಾಗಿ ಆಗುತ್ತದೆ. ಒಟ್ಟಾರೆ ಯಾರೂ ಸಾಲದ ಉರುಳಿಗೆ ಸಿಲುಕದೆ ತಮ್ಮ ದುಡಿಮೆಯಲ್ಲೇ ಚಂದದ ಬಾಳು ಬಾಳುವಂತಾಗಲಿ.
ನಶಾಮುಕ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿಜಯನಗರದ ನಮ್ಮ ಹಿರಿಯ ಕಾರ್ಯಕರ್ತೆ ಶ್ರೀಮತಿ ಮಧುರಾ ಬಸವರಾಜ್ ಅವರಿಗೆ ದೊರಕಿದ ಮೆಚ್ಚುಗೆಯ ಪತ್ರ