Hindu Vani
Index
ಸೂಕ್ತಿಶ್ರೀ
ಯಾರೀಗ ನಮ್ಮವರು?
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚಿವ ಕಿಮಕುರ್ವತ ಸಂಜಯ |
- ಭಗವದ್ಗೀತೆ ಅ.1 ಶ್ಲೋ.11
ಸಂಜಯನೇ; ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡುವ ಇಚ್ಛೆಯಿಂದ ನೆರೆದಿರುವ ನನ್ನವರು ಮತ್ತು ಪಾಂಡವರು ಏನು ಮಾಡಿದರು?
ಹೀಗೆ ಸಂಜಯನನ್ನು ಕೇಳಿದವನು ಧೃತರಾಷ್ಟ್ರನು. ಇಲ್ಲಿ ವಿವರಿಸಲು ಇರುವ ಮಾತುಗಳಲ್ಲಿ ಉಳಿದುದು 'ಮಾಮಕಾಃ' ಎನ್ನುವ ಶಬ್ದ ಮಾತ್ರವೆ. ಅಂದರೆ ನನ್ನವರು' ಎಂಬುವುದು! ಧೃತರಾಷ್ಟ್ರನು ತಾನು ಕುರುಡ ಎನ್ನುವ ಕಾರಣದಿಂದ ಹಲವಾರು ವಿನಾಯಿತಿ ಪಡೆದುಕೊಂಡೇ ಬದುಕಿದವನು. ಎಲ್ಲದರಲ್ಲೂ ಅವನದ್ದು ಕುರುಡು ದೃಷ್ಟಿ. ತನ್ನ ಮಕ್ಕಳ ಕುರಿತು; ಅವರ ವರ್ತನೆಯ ಕುರಿತು ಕೂಡಾ ಅವನು ತೋರಿದುದು ಇದೇ ಕುರುಡನ್ನು ಮುಂದಿನ ಎಲ್ಲಾ ಅನಾಹುತಗಳಿಗೆ ಕಾರಣವಾದುದು ಧೃತರಾಷ್ಟ್ರನ ಅಂಗವೈಕಲ್ಯವಲ್ಲ! ಹೃದಯ ವೈಕಲ್ಯ ಕುರುಕ್ಷೇತ್ರದಲ್ಲಿ ಸೇರಿದ 18 ಅಕ್ಷಹಿಣಿ ಸೈನ್ಯವು ಇನ್ನೇನು ಯುದ್ಧವನ್ನು ಪ್ರಾರಂಭಿಸಬೇಕು ಎನ್ನುವ ಹಂತದಲ್ಲಿ; ಏನಾಗುತ್ತಿದೆ ಎಂದು ಅರಿಯಬೇಕು ಎನ್ನುವ ತವಕ ಧೃತರಾಷ್ಟ್ರನದ್ದು, ಆಗ ಸಂಜಯನನ್ನು ಧೃತರಾಷ್ಟ್ರನು ಕೇಳಿದುದು 'ಕಿಮಕುರ್ವತ' - ಏನು ಮಾಡುತ್ತಿರುವರು ಎಂದು. ಯಾರನ್ನು ಕುರಿತು ನನ್ನವರು ಮತ್ತು ಪಾಂಡವರು ಏನು ಮಾಡುತ್ತಿರುವರು ಎನ್ನುತ್ತಾನೆ ಧೃತರಾಷ್ಟ್ರ! ಅಂದರೆ ದುರ್ಯೋಧನನೇ ಮೊದಲಾದ ಕೌರವರು ಧೃತರಾಷ್ಟ್ರನಿಗೆ ನನ್ನವರಾಗುತ್ತಾರೆ. ತಮ್ಮನ ಮಕ್ಕಳು ಪಾಂಡವರಾಗುತ್ತಾರೆ. ಇಬ್ಬರನ್ನೂ ಸೇರಿಸಿ ನಮ್ಮ ಮಕ್ಕಳು ಏನು ಮಾಡಿದರು ಎಂದು ಕೇಳಿದಿದ್ದರೆ ಸರಿಯಾಗುತ್ತಿತ್ತು.
ಇದು ಕುರುಡ ಧೃತರಾಷ್ಟ್ರನಷ್ಟೇ ಅಲ್ಲ, ವಾಸ್ತವಕ್ಕೆ ಕುರುಡಾದ ಹತ್ತು ಹಲವು ಪ್ರಸಿದ್ಧ ಧೃತರಾಷ್ಟರು ಇತಿಹಾಸದ ಉದ್ದಕ್ಕೂ ನೋಡಸಿಗುವರು. ಮಿರ್ಜಾರಾಜ ಜಯಸಿಂಹನು ಮಹಾಯೋಧ, ದೈವ ಭಕ್ತನು ಕೂಡಾ. ಶಿವಪೂಜೆಯಾಗದೆ ಹೊರಗೆ ಕಾಲಿಡದ ಭಕ್ತಿ. ಆದರೇನು! ಅವನು ಮೊಘಲ ಸಾಮ್ರಾಜ್ಯದ ಕಾವಲು ನಾಯಿ, ಕಾಶಿ ವಿಶ್ವನಾಥನ ದೇವಸ್ಥಾನವನ್ನು ಧ್ವಂಸ ಮಾಡಿದ ಔರಂಗಜೇಬನ ಭಂಟ. ಅವನಿಗೆ ಮಂದಿರಗಳ ರಕ್ಷಣೆಗೆ ಪಣತೊಟ್ಟ ಶಿವಾಜಿ ಮಹಾರಾಜನು 'ಮಾಮಕಾಃ' ಅನಿಸಲಿಲ್ಲ. ಮಂದಿರಗಳ ನಾಶವೇ ಜೀವನ ಧೈಯವಾಗಿಸಿದ ಔರಂಗಜೇಬನು ಅವನಿಗೆ 'ಮಾಮಕಾಃ' ಎನಿಸಿಕೊಂಡನು. ಈ ರೀತಿ ಇತಿಹಾಸದಲ್ಲಿ ನಡೆದುದನ್ನು ಮರೆಯುವುದು ಹೇಗೆ?
ಅಲೆಕ್ಸಾಂಡರನು ಪಂಜಾಬಿನ ಮೇಲೆ ದಾಳಿ ನಡೆಸಿದಾಗ ಅವನನ್ನು ಎದುರಿಸಿದವನು ರಾಜಾ ಪುರೂರವ. ಆಗ ಅಲೆಕ್ಸಾಂಡರನನ್ನು 'ಮಾಮಕಾಃ' ಎಂದು ಅಪ್ಪಿಕೊಂಡವನು ಪಕ್ಕದ ರಾಜ ಅಂಬಿ, ಅಲೆಕ್ಸಾಂಡರನ ಸೈನ್ಯಕ್ಕೆ ಸಟೇಜ್ ನದಿಯನ್ನು ದಾಟಲು ನಾವೆಗಳನ್ನೂ ನಾವಿಕರನ್ನೂ ಒದಗಿಸಿದವನು ಅವನೇ. ಹಲವು ವರ್ಷಗಳಿಂದ ಪಕ್ಕದಲ್ಲೇ ಇದ್ದ ಪುರೂರವನು ಅವನಿಗೆ ಮಾಮಕಾಃ ಎನಿಸಿಕೊಳ್ಳಲೇ ಇಲ್ಲ. ದೆಹಲಿಯ ಕೊನೆಯ ಹಿಂದೂ ರಾಜ ಪೃಥ್ವಿರಾಜನು ಕನೌಜದ ಜಯಚಂದನಿಗೆ ಮಾಮಕಾಃ ನೆನಿಸಲಿಲ್ಲ. ಅಷ್ಟೇಕೆ! ಅವನನ್ನು ಸೋಲಿಸಲೆಂದೇ ಮಹಮ್ಮದ ಘೋರಿಯನ್ನು ಕರೆಸಿ ಪೃಥ್ವಿರಾಜನ ಮೇಲೆ ಆಕ್ರಮಣವನ್ನು ಮಾಡಲು ವಿನಂತಿಸಿದನು. ಅದೇ ಧೃತರಾಷ್ಟ್ರನ ಪರಂಪರೆಯೇ ಮುಂದೆಯೂ ಮುಂದುವರೆಯಿತು.
ನಾವೂ, ನಮ್ಮವರು ಯಾರು ಪರರು ಯಾರು ಎನ್ನುವುದನ್ನು ಗುರುತಿಸಲು ವಿಫಲರಾದೆವು. ವಿಜಯನಗರ ಸಾಮ್ರಾಜ್ಯದ ಮೇಲೆ ಐವರು ಮಹಮ್ಮದೀಯ ಸುಲ್ತಾನರು ಒಂದಾಗಿ ಯುದ್ಧ ಸಾರಿದರು. ಇನ್ನೇನು ವಿಜಯನಗರದ ರಾಮರಾಜನು ಗೆಲುವಿನ ಹಂತದಲ್ಲಿದ್ದಾಗ ಅವನೇ ಕೈಯಾರೆ ಉಣಿಸಿ ಬೆಳೆಸಿದ ನಂಬಿಗೆ'ಯ ಇಬ್ಬರು ಮುಸ್ಲಿಂ ಸರದಾರರಾದ ಗಿಲಾನಿ ಸೋದರರು ದ್ರೋಹ ಬಗೆದು ಸುಲ್ತಾನರ ಪರವಾಗಿ ಹೋರಾಡಲು ರಾಮರಾಯನಿಗೆ ಎರಡು ಬಗೆದರು. ಸಾಮ್ರಾಜ್ಯದ ರಾಜನಾದ ರಾಮರಾಯನಿಗೇನೇ ತನ್ನವರೆನಿಸುವ 'ಮಾಮಕಾಃ' ಯಾರೆಂದು ಗುರುತಿಸಲು ಆಗಲಿಲ್ಲ.
ಈಗಲೂ ಕಣ್ಣಾರೆ ಕಂಡೂ, ಮನಸಾರೆ ಅನುಭವಿಸಿ ಕೂಡಾ ಕತ್ತಲಲ್ಲಿ ಕಂಡ ಬಾವಿಗೆ ನಡುಹಗಲಲ್ಲಿ ಬೀಳುತ್ತಿದ್ದೇವೆ. ಚರಿತ್ರೆಯಲ್ಲಿ ಅನುಭವಿಸಿದ ಕಹಿಯನ್ನು ವಾಸ್ತವದಲ್ಲೂ ಕೈಬೀಸಿ ಆಹ್ವಾನಿಸುತ್ತಿದ್ದೇವೆ. ಪರಕೀಯರನ್ನು 'ನಮ್ಮವರೆಂದು! ಮಾಮಕಾಃ' ಎಂದು!