Logo

VHP PUBLICATIONS

Hindu Vani


expand_more

ಮುಖಪುಟ ಲೇಖನ

By ಕಿರಣ್ ಕುಮಾರ್ ವಿವೇಕವಂಶಿ

ವಿಕಸಿತ ಭಾರತ 2047


ಪ್ರಸ್ತುತ ಭಾರತ ಅಮೃತಕಾಲದಲ್ಲಿದೆ. ವಿಕಸಿತ ಭಾರತದ ಗುರಿಯನ್ನು ಹೊತ್ತು ಸ್ವಾತಂತ್ರ್ಯಪ್ರಾಪ್ತಿಯ ನೂರರ ವಸಂತದ ಸಂದರ್ಭ ಎಂದರೆ 2047ರ ಹೊತ್ತಿಗೆ ಜಾಗತಿಕ ನಾಯಕನಾಗುವುದರೆಡೆಗೆ ದಾಪುಗಾಲನ್ನಿರಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಹೊಸ್ತಿಲಲ್ಲಿ ಅನೇಕರು ವಿಕಸಿತ ಭಾರತದ ಕನಸ್ಸು ಕಂಡಿದ್ದರು, ಮುಂದೆ ಸ್ವಾತಂತ್ರ್ಯಾ ನಂತರದಲ್ಲಿ ಬಂದ ಸರ್ಕಾರಗಳು ಇದರ ಸಾಕಾರಕ್ಕಾಗಿ ಅತಿಯಾಗಿ ಶ್ರಮಿಸಿವೆಯಾದರೂ ಬದ್ಧತೆಯ ಕೊರತೆಯೋ, ವೈಯಕ್ತಿಕ ಲಾಲಾಸೆಯೋ ಗುರಿಯೆಡೆಗಿನ ಕಾರ್ಯ ಆಮೆಗತಿಯಲ್ಲಿ ಸಾಗಿತ್ತು. ಕಳೆದ ಒಂದು ದಶಕದಿಂದ ಇದಕ್ಕೆ ಚಿರತೆಯ ವೇಗ ದೊರೆತಿದೆ. 2047ರವರೆಗಿನ ಗುರಿಯನ್ನು ಯಾವೆಡೆಗೆ ಇಡಬೇಕಿದೆ ಎನ್ನುವುದರ ಮಾರ್ಗಸೂಚಿ ತಯಾರಿದೆಯಾದರೂ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಾಗುವ ಹಾದಿಯ ಅವಲೋಕನ ಈ ಕ್ಷಣದ ಅಗತ್ಯತೆ.

ನಾರಿಶಕ್ತಿ: ಭಾರತದಲ್ಲಿ ಮೊದಲ ಬಾರಿಗೆ ಪ್ರತಿ ಸಾವಿರ ಪುರುಷರಿಗೆ 1,020 ಮಹಿಳೆಯರ ಲಿಂಗಾನುಪಾತ (ಓಈಊಖ-5) ಬಂದಿದೆ. ಹೆರಿಗೆಯ ವೇಳೆ ತಾಯಂದಿರ ಮರಣ ಕಡಿಮೆಯಾಗಿದೆ. ದೇಶದಲ್ಲಿ 90 ಲಕ್ಷಕ್ಕೂ ಅಧಿಕ ಗುಂಪುಗಳಲ್ಲಿ 10 ಕೋಟಿ ಮಹಿಳೆಯರನ್ನು ಸಂಘಟಿಸಲಾಗಿದೆ. ನಾಯಕತ್ವದಲ್ಲೂ 33% ಮಹಿಳೆಯರ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಶಸ್ತ್ರ ಪಡೆಗಳಲ್ಲಿ, ರಕ್ಷಣಾ ಸೇವೆಗಳಲ್ಲಿ, ಸೈನಿಕ ಶಾಲೆಗಳಲ್ಲಿ ಈಗ ಹೆಣ್ಣುಮಕ್ಕಳಿಗೂ ಪ್ರವೇಶ ದೊರೆತಿದೆ. ಆಪರೇಷನ್ ಸಿಂಧೂರದೆಂತಹ ಕ್ಲಿಷ್ಟಕರ ಆಪರೇಷನ್ ಅನ್ನು ಮಹಿಳೆಯರೇ ನಿಭಾಯಿಸುವ ಮಟ್ಟಿಗೆ ಬದಲಾವಣೆಯಾಗಿದೆ. ಪೈಲಟ್‌ಗಳಾಗಿ, ಚಂದ್ರಯಾನ ಮಿಷನ್‌ನ ಮುಖ್ಯಸ್ಥರಾಗಿ, ಉದ್ಯಮಿಗಳಾಗಿ ಎಲ್ಲೆಡೆಯೂ ಮಹಿಳೆ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುವ ಮಟ್ಟಿಗೆ ಭಾರತ ಬದಲಾಗಿದೆ.

ಆದಾಗ್ಯೂ ನಿರೀಕ್ಷಿತ ಮಟ್ಟದಲ್ಲಿ ಮಹಿಳೆಯ ತೊಡಗಿಸಿಕೊಳ್ಳುವಿಕೆ ಸಾಧ್ಯವಾಗಿಲ್ಲ. ಮಹಿಳಾ ಸಬಲೀಕರಣಕ್ಕೆ ಸರ್ಕಾರದ ಈಗಿನ ಪ್ರಯತ್ನಗಳ ಜೊತೆಗೆ, ಹೊಸ ಯೋಚನೆಗಳು ಸೇರಬೇಕಿದೆ. ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗದ ಪ್ರೋತ್ಸಾಹದ ಜೊತೆಗೆ ಜಾಗತಿಕ ಮಾರುಕಟ್ಟೆಯ ಸಂಪರ್ಕ ಅಗತ್ಯವಾಗಿದೆ. ಮಹಿಳೆಯರೇ ನಡೆಸುವ ಉದ್ಯಮಗಳಿಗೆ ಸ್ವಾವಲಂಬಿ ಉದ್ಯೋಗಗಳಿಗೆ ವಿನೂತನತೆಯನ್ನು ನೀಡಬೇಕಿದ್ದು, ಬಲವರ್ಧನೆಯೂ ಆಗಬೇಕು. ಮಹಿಳಾ ನೇತೃತ್ವ ಕೆಳಹಂತದಲ್ಲಿ ಕೇವಲ ದಾಖಲೆಗಳಲ್ಲಿ ಮಾತ್ರ ಸಾಧ್ಯವಾಗುತ್ತಿದ್ದು, ವಾಸ್ತವದಲ್ಲಿ ತರಲು ಕಠಿಣ ನಿಯಮ ಮತ್ತು ಜಾಗೃತಿಯ ಅಗತ್ಯವಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ: ಭಾರತವು ನಡೆಸಿದ ಚಂದ್ರಯಾನ, ಮಂಗಳಯಾನ, ಒಂದೇ ರಾಕೆಟ್‌ನಲ್ಲಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ತನ್ನ ವೈಜ್ಞಾನಿಕ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದೆ. ಇಂದು ಇಸ್ರೋ ಭಾರತವನ್ನು ಅಂತರಿಕ್ಷದ ಅತ್ಯಂತ ಸಮರ್ಥ ರಾಷ್ಟ್ರವನ್ನಾಗಿಸುತ್ತಿದೆ. 4 ಲಕ್ಷ ಕೋಟಿ ಮೌಲ್ಯದ ಯುಪಿಐ ವಹಿವಾಟು

ಭಾರತ ನಡೆಸುತ್ತಿದ್ದು, ವಿಶ್ವದ ವಹಿವಾಟುಗಳಲ್ಲಿ ಶೇ.49ರಷ್ಟು ಪಾಲು ನಮ್ಮದ್ದೇ ಇದೆ. ಇಡೀ ದೇಶದಲ್ಲಿ 116ಕೋಟಿ ಮೊಬೈಲ್ ಬಳಕೆದಾರರಿದ್ದಾರೆ. 2.14 ಲಕ್ಷ ಪಂಚಾಯಿತಿಗಳು ಆಪ್ಟಿಕಲ್ ಫೈಬರ್‌ ಸಂಪರ್ಕ ಹೊಂದಿವೆ. ಜಗತ್ತಿನಲ್ಲಿಯೇ ಅತೀ ಕಡಿಮೆ ದರದಲ್ಲಿ ಡೇಟಾ ಭಾರತದಲ್ಲಿ ಮಾತ್ರ ಲಭ್ಯ! ಕಳೆದ 10 ವರ್ಷಗಳಲ್ಲಿ ಭಾರತದ ಇಂಟರ್ನೆಟ್ ಬಳಕೆದಾರರ ಸಂಖ್ಯೆ 285% ಹೆಚ್ಚಳವಾಗಿದೆ. ಭಾರತದಲ್ಲಿ ಡಿಬಿಟಿ ಸುಲಭವಾಗಿದ್ದರಿಂದ ಸೋರಿಕೆ ತಡೆಯಲು ಸಾಧ್ಯವಾಗಿದೆ. ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಸಾಗಬೇಕಿರುವ ಮೈಲಿ ತುಂಬಾ ದೂರ. ಇಂದು ಮೊಬೈಲ್‌ನಿಂದ ಹಿಡಿದು, ಯುದ್ಧ ವಿಮಾನಗಳವರೆಗೆ ಬೇರೆ ರಾಷ್ಟ್ರಗಳನ್ನು ಭಾರತ ಅವಲಂಬಿಸಿದೆ. ಈಗ ಆತ್ಮನಿರ್ಭರತೆಯ ಹಾದಿಯಲ್ಲಿದ್ದೇವೆ. ಈ ವೇಗ ಹೆಚ್ಚಬೇಕು. ನ್ಯಾನೋ ತಂತ್ರಜ್ಞಾನ, ಮೊಬೈಲ್ ತಯಾರಿಕೆ, ಸಾಫ್ಟ್‌ವೇರ್ ಅಭಿವೃದ್ಧಿ, ಸೈಬರ್ ಸೆಕ್ಯೂರಿಟಿ, ಸರ್ಚ್‌ ಇಂಜಿನ್‌ಗಳ ಬಗ್ಗೆ ನಮ್ಮ ಲಕ್ಷ್ಯ ಮುಖ್ಯವಾಗಿದೆ. ಬಾಹ್ಯಾಕಾಶದಲ್ಲಿ ಗುರುತಿಸಬಲ್ಲ ಸಾಧನೆ ಮಾಡುತ್ತಿದ್ದರೂ, ಮತ್ತೊಂದು ಎತ್ತರದ ಅಗತ್ಯವಿದೆ.

ಆರೋಗ್ಯ ಕ್ಷೇತ್ರ: ಭಾರತವು ಆರೋಗ್ಯ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಕಂಡ ಬದಲಾವಣೆಗೆ ಜಗತ್ತೇ ನಿಬ್ಬೆರಗಾಗಿದೆ. ಕೋವಿಡ್ ಕಾಲದಲ್ಲಿ ನಾವು ಕಳಿಸಿದ ವ್ಯಾಕ್ಸಿನ್‌ಗೆ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಆಯುಷ್ಮಾನ್ ಯೋಜನೆ ಆರೋಗ್ಯ ಕ್ಷೇತ್ರದ ಕ್ರಾಂತಿಯಾಗಿದ್ದು, ಜನೌಷಧಿ ಕೇಂದ್ರಗಳ ಸ್ಥಾಪನೆ ಸಾಮಾನ್ಯರ ಪಾಲಿನ ಸಂಜೀವಿನಿ ಕೇಂದ್ರಗಳಾಗಿವೆ. ವೈದ್ಯಕೀಯ ಅಧ್ಯಯನದ ಸೀಟು ಹೆಚ್ಚಳ ಮಾಡಿದ್ದು, ಜಗತ್ತಿನಾದ್ಯಂತ ಭಾರತದ ವೈದ್ಯರಿಗೆ ವಿಶೇಷ ಬೇಡಿಕೆ ಇದೆ. ದೇಶದಲ್ಲಿ ನಡೆದ ಪ್ರಯತ್ನಗಳ ಹೊರತಾಗಿಯೂ ಆರೋಗ್ಯ ದುಬಾರಿ ಎಂಬ ಅಳಲಿದೆ. ಜನಸಮಾನ್ಯರಿಗೆ ಕಡಿಮೆ ದರದಲ್ಲಿ ಆರೋಗ್ಯ ಒದಗಿಸುವ ಪ್ರಯತ್ನವನ್ನು ಸರ್ಕಾರ ಅವಿರತವಾಗಿ ಮಾಡುತ್ತಿದ್ದರೂ, ಆರೋಗ್ಯ ವಿಮೆ ದೊರಕಿಸಿ ಕೊಟ್ಟಿದ್ದರೂ ಬಳಸಿಕೊಳ್ಳುವವರ ಅಜ್ಞಾನದ ಕಾರಣಕ್ಕೆ ಸಾಕಾರ ಸಾಧ್ಯವಾಗಿಲ್ಲ. ಆರೋಗ್ಯ ಹಾಗೂ ಶಿಕ್ಷಣಗಳೆರಡು ಸುಲಭ ಸಾಧ್ಯವಾಗಿ, ಉಚಿತವಾಗಿ ದೊರೆಯುವಂತಾಗಬೇಕು.

ರಕ್ಷಣಾ ಕ್ಷೇತ್ರ: ಭಾರತವು ರಕ್ಷಣಾ ಸ್ವದೇಶೀಕರಣಕ್ಕೆ ಮುನ್ನುಡಿ ಬರೆದಿದ್ದು, 5000ಕ್ಕೂ ಅಧಿಕ ವಸ್ತುಗಳು ಈ ಪಟ್ಟಿಯಲ್ಲಿವೆ. ಭಾರತದ ರಕ್ಷಣಾ ರಫ್ತು 23,622 ಕೋಟಿಯಷ್ಟಿದ್ದು, ಹಿಂದೆಂದಿಗಿಂತಲೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ಕಳಿಸುತ್ತಿದೆ. ಯುದ್ಧ ಹೆಲಿಕಾಪ್ಟರ್, ಲಘು ವಿಮಾನಗಳು, ಮಿಸೈಲ್‌ಗಳ ತಯಾರಿಕೆಯಲ್ಲಿ ಭಾರತ ಏರುಗತಿಯಲ್ಲಿದೆ. ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ಬಲಿಷ್ಠ ರಾಷ್ಟ್ರಗಳ ಪೈಕಿ ಭಾರತವೂ ಅಗ್ರಸ್ಥಾನದಲ್ಲಿದ್ದರೂ, ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ನಡುವೆ ಭಾರತ ಮತ್ತಷ್ಟು ಬಲಿಷ್ಠವಾಗಬೇಕಿದೆ. ಈ ದೃಷ್ಟಿಯಲ್ಲಿ ಹೆಚ್ಚು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಮಿಸೈಲ್‌ಗಳು, ಸೈನಿಕ ವಾಹನಗಳು, ಸೇನಾ ಸಾಮಗ್ರಿಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ಕಾರ್ಯ ತ್ವರಿತವಾಗಿ ಮತ್ತು ಅಧಿಕವಾಗಿ ಮಾಡಬೇಕಿದೆ.

ಭಾರತ ಶಿಕ್ಷಣ ರಂಗದಲ್ಲೂ ತನ್ನದೇ ಪ್ರಗತಿ ಸಾಧಿಸಿದ್ದು, ಸಾಕ್ಷರತಾ ಪ್ರಮಾಣ 77.77% ಆಗಿದೆ. ಜಾಗತಿಕ ಸ್ಥಿತ್ಯಂತರಕ್ಕೆ ಅನುಗುಣವಾಗಿ ತನ್ನತನವನ್ನು ಬದಲಿಸದೇ, ಸ್ವತ್ವದ ಅಡಿಯಲ್ಲಿ ಭಾರತ ಮತ್ತಷ್ಟು ಬೆಳಗಲಿ, ವಿಶೇಷವಾಗಿ ವಸಾಹತುಶಾಹಿ ಮನಸ್ಥಿತಿಯ ನಿವಾರಣೆ ದೇಶದಲ್ಲಾಗಬೇಕಿರುವ ಬಹುದೊಡ್ಡ ಪರಿವರ್ತನೆಯಾಗಿದೆ.