Logo

VHP PUBLICATIONS

Hindu Vani


expand_more

ಚಾರಿತ್ರಿಕ ಗೊಂದಲ

ನಡುರಾತ್ರಿಯ ಸ್ವಾತಂತ್ರ್ಯ - ವಿಭಜನೆಯ ಪಾಲುಪಟ್ಟಿ


ಭಾರತದ ಸ್ವಾತಂತ್ರ್ಯದೊಂದಿಗೆ ದೇಶ ವಿಭಜನೆಯೂ ಆಗಲಿದೆ ಎನ್ನುವುದು ತಡವಾಗಿ ಖಚಿತವಾಯಿತು. ರಾಕೆಟ್ ಉಡಾವಣೆಗೆ ಅಂಕೆಗಳನ್ನು ಹಿಮ್ಮುಖವಾಗಿ ಗಣಿಸುತ್ತಾ ಬರುವಂತೆ, ದೆಹಲಿಯ ಸರ್ಕಾರಿ ಕಾರ್ಯಾಲಯಗಳು ಅಗಸ್ಟ್ 15ಕ್ಕೆ ಅನುವಾಗುವಂತೆ ಮುಂದೆ ಉಳಿದ ದಿನಗಳನ್ನು ಲೆಕ್ಕ ಹಾಕಲು ಪ್ರಾರಂಭಿಸಿದವು. ಎರಡೂ ದೇಶಗಳಿಗೆ ಪಾಲಾಗುವ ಆಸ್ತಿ ಪಾಸ್ತಿಗಳನ್ನು ಹಂಚಲು ಇಬ್ಬರು ಅಧಿಕಾರಿಗಳು ನೇತೃತ್ವ ವಹಿಸಿದರು. ಒಬ್ಬರು ಹೆಚ್. ಎಮ್. ಪಟೇಲ್ ಮತ್ತೊಬ್ಬರು ಚೌಧರಿ ಮಹಮ್ಮದ್ ಆಲಿ, ಆಗ ಆಗಸ್ಟ್ 15 ಬರಲು ಉಳಿದುದು 73 ದಿನಗಳಷ್ಟೇ.

ಇಂಡಿಯಾ ವೆನ್ನುವ ಹೆಸರು ಯಾರಿಗೆ ಸೇರಬೇಕು ಎನ್ನುವುದರ ಬಗ್ಗೆ ತಗಾದೆ ಇರಲಿಲ್ಲ. ಅವಿಭಾಜಿತ ದೇಶದಿಂದ ಬೇರಾಗುವ ಭಾಗ ಪಾಕಿಸ್ತಾನವೆಂತಲೂ, ಭಾರತದ ಪಾಲಿಗೆ 'ಇಂಡಿಯಾ'ವೆನ್ನುವ ಹೆಸರೂ ಉಳಿದು ಬಿಟ್ಟಿತು. ಕೊನೆಗೂ ಬ್ರಿಟನ್ ದೇಶವು ಭಾರತವನ್ನು ಸುಲಿಯುತ್ತಾ ಬಂದಿರುವುದನ್ನು ಸಾಬೀತು ಪಡಿಸುವಂತೆ ಸರ್ಕಾರದ 500ಕೋಟಿ ಡಾಲರ್ (ಆಗ 43 ಸಾವಿರ ಕೋಟಿ ರೂಪಾಯಿಗಳು)ಗಳ ಸಾಲವನ್ನು ಸ್ವತಂತ್ರವಾಗುವ ಎರಡು ದೇಶಗಳಿಗೆ ಹೇರಿಬಿಟ್ಟಿತು.

ಇದರೊಂದಿಗೆ ದೇಶದ ಸ್ಟೇಟ್ ಬ್ಯಾಂಕುಗಳಲ್ಲಿರುವ ಸರ್ಕಾರಿ ಹಣ, ಬ್ಯಾಂಕ್ ಆಫ್ ಇಂಡಿಯಾ (ಮುಂದಿನ ರಿಜರ್ವ್ ಬ್ಯಾಂಕ್) ದಲ್ಲಿರುವ ಚಿನ್ನದ ಲೆಕ್ಕಾಚಾರದೊಂದಿಗೆ ಅಂಚೆ ಸ್ಟಾಂಪುಗಳ ಮತ್ತು ಚಲಾವಣೆಯು ಸಾಧ್ಯವಿಲ್ಲದ ಹಳೆಯ ಕರೆನ್ಸಿ ನೋಟುಗಳು ಕೂಡಾ ಪಾಲಾಗಿ ಹೋಗಲು ಸಿದ್ಧವಾದವು. ಮೇಲೆ ಹೇಳಿದ ಇಬ್ಬರು ಅಧಿಕಾರಿಗಳು ಇವೆಲ್ಲವುಗಳ ಬಗ್ಗೆ ಒಂದು ಒಪ್ಪಂದಕ್ಕೆ ಬರುವವರೆಗೆ ಕದಲಬಾರದೆನ್ನುವಷ್ಟರ ಮಟ್ಟಿಗೆ ಇಬ್ಬರನ್ನೂ ಒಂದು ಮನೆಯಲ್ಲಿ ಕುಳ್ಳಿರಿಸಲಾಗಿದ್ದಿತು. ಪೇಟೆ ಬೀದಿಯ ಚಿಲ್ಲರೆ ವ್ಯಾಪಾರಿಗಳ ರೀತಿಯಲ್ಲಿ ಚೌಕಾಶಿ ಮಾಡುತ್ತ ಇಬ್ಬರೂ ಕೊನೆಗೆ ಪಾಕಿಸ್ತಾನವು ಬ್ರಿಟನ್ ಬಿಟ್ಟ ರಾಷ್ಟ್ರೀಯ ಸಾಲದಲ್ಲಿ 1772% ಸಾಲವನ್ನೂ ಅದೇ ರೀತಿ ನಗದು ಮತ್ತು ಚಿನ್ನದಲ್ಲೂ ಅದೇ ದಾಮಾಶವನ್ನು ಪಡೆಯುವುದೆಂದೂ ತೀರ್ಮಾನಕ್ಕೆ ಬಂದರು.

ಆ ನಂತರ ಆಡಳಿತಾತ್ಮಕ ಚರಾಸ್ತಿಯಲ್ಲಿ 80% ಭಾರತಕ್ಕೂ 20% ಪಾಕಿಸ್ತಾನಕ್ಕೂ ಸೇರುವುದೆಂದು ಇಬ್ಬರೂ ಶಿಫಾರಸು ಮಾಡಿದರು. ದೇಶಾದ್ಯಂತ ಇರುವ ಸರ್ಕಾರಿ ಕಛೇರಿಗಳಲ್ಲಿರುವ ಕುರ್ಚಿಗಳು ಮೇಜುಗಳು ಮತ್ತು ಟೈಪ್ ರೈಟರ್‌ಗಳ ಲೆಕ್ಕ ಹಾಕಲಾಯಿತು. ಈ ಕಾರ್ಯಾಚರಣೆಯಲ್ಲಂತೂ ಕೆಲವು ಹಾಸ್ಯಾಸ್ಪದ ವಿಚಾರಗಳು ಕಂಡು ಬಂದವು. ಗುಮಾಸ್ತರ 425 ಮೇಜುಗಳು, ದೊಡ್ಡ ಮೇಜುಗಳು 85, ಅಧಿಕಾರಿಗಳ 85 ಕುರ್ಚಿಗಳು, 850 ಸಾಮಾನ್ಯ ಕುರ್ಚಿಗಳು, ಹ್ಯಾಟುಗಳನ್ನು ಸಿಕ್ಕಿಸುವ ಗೂಟಗಳ ಕವಾಟುಗಳು, ಇಂತಹ ಕವಾಟುಗಳಲ್ಲಿ, ಕನ್ನಡಿಗಳಿರುವ 6 ಮತ್ತು 130 ಪುಸ್ತಕಗಳ ಕವಾಟುಗಳು, 4 ಕಬ್ಬಿಣದ ಸಂದೂಕಗಳು, 20 ಮೇಜಿನ ಮೇಲಿಡುವ ಓದುವ ದೀಪಗಳು, 170 ಟೈಪ್‌ರೈಟರ್‌ಗಳು, 120 ಫ್ಯಾನ್‌ಗಳು, 120 ಗಡಿಯಾರಗಳು, 110 ಸೈಕಲುಗಳು, 600 ಬರೆಯುವ ಶಾಯಿ ಸೀಸೆಗಳು, 3 ಕಾರುಗಳು, 2 ಸೋಫಾಗಳು, 40 ಕುಡಿಯುವ ನೀರಿನ ಹೂಜಿಗಳು ಇವಿಷ್ಟು ಬರೇ ಕೃಷಿ ಮತ್ತು ಆಹಾರ ಇಲಾಖೆಯ ಕಾರ್ಯಾಲಯಗಳಲ್ಲಿ ಲೆಕ್ಕಕ್ಕೆ ಬಂದ ವಸ್ತುಗಳು. ಇವನ್ನು ಹಂಚುವಾಗ ಎಷ್ಟೋ ಕಡೆ ಬಿರುಸಾದ ವಾಗ್ವಾದಗಳು, ಕೆಲವೆಡೆ ಸಣ್ಣ ಜಗಳಗಳೇ ನಡೆದವು. ಇಲಾಖೆಗಳ ಮುಖ್ಯಸ್ಥರು ಕೆಲವು ಕಡೆ ಉತ್ತಮ ಟೈಪ್ ರೈಟ್‌‌ಗಳನ್ನು ಅಡಗಿಸಿಟ್ಟರು. ಮುರಿದ ಮೇಜು ಮತ್ತು ಕುರ್ಚಿಗಳನ್ನು ಹೊಸದಾಗಿ ಬಂದ ಪೀಠೋಪಕರಣಗಳೊಂದಿಗೆ ವಿನಿಮಯ ಮಾಡಲು ಪ್ರಯತ್ನಿಸಿದರು. ಶಾಯಿಯ ಸೀಸೆಯನ್ನು ನೀರಿನ ಹೂಜಿಗೂ, ಛತ್ರಿಯನ್ನು ತೂಗು ಹಾಕುವ ಗೂಟವನ್ನು ಹ್ಯಾಟ್ ಇಡುವ ಗೂಟಕ್ಕೆ ಬದಲಾಯಿಸಲು ಮೇಲಿನ ಅಧಿಕಾರಿಗಳು ಪ್ರಭಾವ ಬೀರಿದರು. ಬೆಳ್ಳಿಯ ವಸ್ತುಗಳಿಗೂ, ಉತ್ತಮ ಚಿತ್ರಪಟಗಳಿಗೂ ನಡೆದ ವಾಗ್ವಾದಗಳಂತೂ ಭೀಕರವಾಗಿದ್ದವು. ಮದ್ಯದ ಪಾತ್ರೆಗಳು ಹಿಂದು ಭಾರತಕ್ಕೆ ಸೇರಿದರೆ ಮುಸ್ಲಿಮ್ ಪಾಕಿಸ್ತಾನವು ಅದರಲ್ಲಿರುವುದನ್ನು ಪಡೆದು ಸಂತುಷ್ಟಗೊಂಡಿತು.

ಲಾಹೋರಿಗೆ ಪೊಲೀಸ್ ಸುಪರಿಟೆಂಡೆಂಟ್ ಆಗಿದ್ದ ಪ್ಯಾಟ್ರಿಕ್‌ ರಿಚ್ ಎನ್ನುವ ಆಂಗ್ಲ ಅಧಿಕಾರಿಯು ತನ್ನ ಕಾರ್ಯಾಲಯದ ಎಲ್ಲವನ್ನೂ ತನ್ನ ಜೊತೆಯ ಹಿಂದು ಮತ್ತು ಮುಸ್ಲಿಂ ಅಧಿಕಾರಿಗಳಿಬ್ಬರಿಗೆ ಹಂಚಿದನು. ರುಮಾಲುಗಳು, ಪೊಲೀಸ್ ಚೆಡ್ಡಿಗಳು, ಕೋವಿಗಳು, ಲಾಠಿಗಳೆಲ್ಲವೂ ಹಂಚಿಹೋದವು. ಕೊನೆಗೆ ಪೊಲೀಸ್ ಬ್ಯಾಂಡಿನ ಸಂಗೀತ ಉಪಕರಣಗಳನ್ನು ರಿಚ್ ಹಂಚಿಬಿಟ್ಟನು. ಕೊಳಲುಗಳು ಪಾಕಿಸ್ತಾನಕ್ಕೆ ಸೇರಿದರೆ, ಪಣವಗಳು ಭಾರತಕ್ಕೆ ಬಂದವು. ಶಂಖವು ಪಾಕಿಸ್ತಾನಕ್ಕೆ ಹೋದರೆ ತಾಳ ಭಾರತಕ್ಕೆ ಬಂದವು. ಕೊನೆಗೆ ಉಳಿದ ಕ್ಲಾರಿಯೊನೆಟ್‌ಗಾಗಿ ಹಲವು ವರ್ಷಗಳಿಂದ ಜೊತೆಗಾರರಾಗಿದ್ದವರು ಜಗಳವಾಡುತ್ತಿದ್ದುದ್ದನ್ನು ಪ್ಯಾಟ್ರಿಕ್ ರಿಚ್ ಕಣ್ಣಾರೆ ಕಂಡನು.

ಹೆದ್ದಾರಿಗಳ ಇಲಾಖೆಯ ಬೃಹತ್‌ ಬುಲ್‌ಡೋಜರ್‌ಗಳೊಂದಿಗೆ ಉಳಿದ ಸನಿಕೆಗಳು ಗುದ್ದಲಿಗಳನ್ನು ಹೆದ್ದಾರಿಗಳ ಉದ್ದಕ್ಕೆ ಅನುಸಾರವಾಗಿ ಹಂಚಬೇಕೇ ಅಥವಾ ಒಪ್ಪಿದ 80:20ರ ಅನುಪಾತದಲ್ಲಿ ಹಂಚಬೇಕೇ ಎನ್ನುವುದು ಮಹಾ ಸಂಧಿಮಾತುಕತೆಗೆ ವಸ್ತುವಾಯಿತು. ಗ್ರಂಥ ಭಂಡಾರಗಳ ಪುಸ್ತಕಗಳನ್ನು ಹೇಗೆ ಹಂಚಬೇಕೆಂದು ವಾದ ವಿವಾದಗಳಾದವು. ಎನ್ ಸೈಕ್ಲೋಪಿಡಿಯಾ ಬ್ರಿಟಾನಿಕಾದ ಸಂಪುಟಗಳಲ್ಲಿ ಬೆಸ ಸಂಖ್ಯೆಯ ಸಂಪುಟಗಳು ಭಾರತಕ್ಕೂ ಸಮ ಸಂಖ್ಯೆಯವು ಪಾಕಿಸ್ತಾನಕ್ಕೂ ಸೇರಬೇಕೆಂದು ನಿರ್ಣಯಿಸಲಾಯಿತು. ನಿಘಂಟುಗಳನ್ನು ಎ ಯಿಂದ ಕೆ ವರೆಗಿನ ಶಬ್ದಗಳಿರುವ ಪುಟಗಳನ್ನು ಹರಿದು ಅವನ್ನು ಭಾರತಕ್ಕೂ ನಂತರ ಜಡ್‌ವರಗಿನ ಪುಟಗಳನ್ನು ಪಾಕಿಸ್ತಾನಕ್ಕೂ ಕೊಡಲಾಯಿತು. ಕೆಲವು ಕಡೆ ಯಾವ ವಿಚಾರದ ಬಗ್ಗೆ ಯಾವ ದೇಶಕ್ಕೆ ಆಸಕ್ತಿ ಇದೆಯೆನಿಸುವುದೋ ಅಲ್ಲಿಗೆ ಅದನ್ನು ನೀಡಬೇಕು ಎಂದಾಯಿತು.

ಕರೆನ್ಸಿ ನೋಟುಗಳನ್ನೂ ಅಂಚೆ ಚೀಟಿಗಳನ್ನೂ, ಮುದ್ರಿಸಲು ಇದ್ದುದು ಒಂದೇ ಒಂದು ಮುದ್ರಣಾಲಯ. ಅದನ್ನು ಎರಡೂ ದೇಶಗಳು ಉಪಯೋಗಿಸಲಿ ಎನ್ನುವ ನಿರ್ಣಯವನ್ನು ದೇಶಗಳಿಂದ ಒಪ್ಪಿಸಲು ಸಾಧ್ಯವಾಗಲಿಲ್ಲ. ಮುದ್ರಣಾಲಯವು ಭಾರತದಲ್ಲಿ ಉಳಿಯಿತು. ಪಾಕಿಸ್ತಾನವು ತನ್ನ ಪಾಲಿಗೆ ಬಂದ ಕರೆನ್ಸಿ ನೋಟುಗಳಿಗೆ ರಬ್ಬರ್ ಸ್ಟಾಂಪಿನಿಂದ 'ಪಾಕಿಸ್ತಾನ'ವೆಂದು ಒತ್ತಿ ಮುದ್ರೆ ಹಾಕಿಕೊಂಡು ಉಪಯೋಗಿಸಿತು. ವಿಭಜಿತ ಭಾಗಗಳಿಂದ ಪರಸ್ಪರ ವಿನಿಮಯ ಮಾಡಿದ ಆಹಾರ ಧಾನ್ಯವನ್ನು ಈಗ ಕೊಡುವುದೋ ಅಥವಾ ಪಡೆಯುವುದೋ ಎಂದು ಲೆಕ್ಕ ಹಾಕಲು ಅವಕಾಶವೇ ಆಗಲಿಲ್ಲ ಏಕೆಂದರೆ ಅದನ್ನು ಅದಾಗಲೇ ಅಡುಗೆ ಮಾಡಿ ಉಂಡು ಹೋಗಿಯಾಗಿದ್ದಿತು. ಮೊಗಲರು ಕಟ್ಟಿದ ಕಟ್ಟಡ ತಾಜ ಮಹಲನ್ನು ಪಾಕಿಸ್ತಾನಕ್ಕೆ ರವಾನಿಸಬೇಕೆಂದೂ ಮುಸ್ಲಿಮರು ತಗಾದೆಯಿಟ್ಟಿದ್ದರು.

ವೈಸರಾಯ್ ಪ್ರಯಾಣಿಸುವ ಚಿನ್ನದ ಒಪ್ಪವಿರುವ ಟ್ರೈನ್ ಭಾರತಕ್ಕೆ ಸೇರಿದರೆ, ಸೈನ್ಯದ ಕಮಾಂಡರ್ ಇನ್ ಛೀಫ್‌ನ ಮತ್ತು ಪಂಜಾಬ್ ಗವರ್ನರನ ಖಾಸಗಿ ಕಾರುಗಳು ಪಾಕಿಸ್ತಾನದವಾದವು. ಇನ್ನು ವೈಸರಾಯ್ ಪ್ರಯಾಣಿಸುವ ಚಿನ್ನದ ಮತ್ತು ಬೆಳ್ಳಿಯ ರಾಜೋಪೇತ 12 ಅಶ್ವಗಳು ಎಳೆಯುವ ಸಾರೋಟುಗಳು, ಚಕ್ರವರ್ತಿಯ ವೈಭವವನ್ನು ನೆನಪಿಸುವ ನವಿರು ಕೆತ್ತನೆಗಳು, ಮೃದು ದಿಂಬುಗಳನ್ನು, ಎರಡೂ ದೇಶಗಳು ಬಿಡಲು ಸಿದ್ಧವಿರಲಿಲ್ಲ. ಕೊನೆಗೆ ಚಿನ್ನದ 6 ಸಾರೋಟುಗಳು ಭಾರತಕ್ಕೆ ಸೇರಿದವು. ಉಳಿದ 6 ಪಾಕಿಸ್ತಾನಕ್ಕೆ ದೊರೆತವು. ಇದನ್ನು ನಾಣ್ಯವನ್ನು ಚಿಮ್ಮಿಸಿ ಲಾಟರಿ ಎತ್ತಲಾಯಿತು. ಇದು ಮೌಂಟ್‌ ಬ್ಯಾಟನ್‌ನ ಕಾರ್ಯದರ್ಶಿ ಪೀಟರ್ ಹೂವ್ ಸೂಚಿಸಿದ ರಾಜಮಾರ್ಗವಾಗಿದ್ದಿತು. ಅದಾದ ನಂತರ ಪೀಟರ್ ಹೂವ್ ಸಾರೋಟ್ ಓಡಿಸುವವನ ಬೂಟುಗಳು, ಸಮವಸ್ತ್ರಗಳು, ತಲೆಟೋಪಿಗಳು, ಇವನ್ನು ಆಯಾ ಸಾರೋಟಗಳಿಗೆಂದು ಹಂಚಿಬಿಟ್ಟನು. ಕೊನೆಗೆ ಉಳಿದ ವೈಸರಾಯ್ ಆಗಮಿಸುವ ಮೊದಲು ಊದುವ ಕಹಳೆಯನ್ನು ತಾನೇ ಉಳಿಸಿಕೊಂಡನು.

ಕುರ್ಚಿ ಮೇಜುಗಳು, ಪುಸ್ತಕಗಳು, ಕರೆನ್ಸಿ ನೋಟುಗಳ ನಂತರ ಹಂಚಲು ಉಳಿದುದು ಸಾವಿರಾರು ಮನುಷ್ಯರು-ನೌಕರರು, ಜಾಡಮಾಲಿಗಳು, ಸಹಾಯಕ ಸೇವಕರು. ಅಧಿಕಾರಿಗಳು ಮೊದಲಾದ ಆಡಳಿತ ಯಂತ್ರದ ನಟ್ ಬೋಲ್ಟುಗಳು, ಪ್ರತಿಯೊಬ್ಬರಿಗೂ ನಿಮಗೆ ಯಾವುದು ಬೇಕು ಭಾರತವೇ ಅಥವಾ ಪಾಕಿಸ್ತಾನವೇ ಎಂದು ಕೇಳಲಾಯಿತು. ಅದೇ ರೀತಿ ಅವರವರನ್ನು ಅವರ ಇಚ್ಛೆಯಂತೆ ವರ್ಗಾಯಿಸಲಾಯಿತು.

ಇದಾದ ನಂತರ ಉಳಿದುದು ಹಿಂದು ಮುಸ್ಲಿಮ್ ಮತ್ತು ಆಂಗ್ಲರು ಸೇರಿದ 12 ಲಕ್ಷ ಸೈನಿಕರು. ಒಂದು ವರ್ಷಕಾಲ ಒಬ್ಬ ಆಂಗ್ಲ ಅಧಿಕಾರಿಯ ಕೆಳಗೆ ಇಡೀ ಸೈನ್ಯವು ಒಂದಾಗಿ ಇರಲಿ ಎಂದುಕೊಂಡು ಮೌಂಟ್ ಬ್ಯಾಟನ್ ಮಹಮ್ಮದಾಲಿ ಜಿನ್ನಾನನ್ನು ಕೇಳಿಕೊಂಡನು. ಆದರೆ ಆತ ಸುತರಾಂ ಒಪ್ಪಲಿಲ್ಲ. ಕೊನೆಗೆ 1/3ನೆ ಭಾಗದ ಸೈನ್ಯವು ಪಾಕಿಸ್ತಾನಕ್ಕೆ ವರ್ಗಾಯಿಸಲ್ಪಟ್ಟಿತು.

- (ಫ್ರೀಡಂ ಎಟ್ ಮಿಡ್‌ನೈಟ್ ಲೇಖಕರು ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಮ್ಯಾಪೈರಿ. ಆಂಗ್ಲ ಲೇಖಕರ ಕಲ್ಪನೆಯಲ್ಲಿ ಆ ದಿನಗಳನ್ನು ವರ್ಣಿಸಿದ್ದರೂ ಓದಬೇಕಾದ ಕೃತಿಯಿದು.)