Logo

VHP PUBLICATIONS

Hindu Vani


expand_more

ಪ್ರಸ್ತುತ

By - ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು

ಕೊನೆ ಮೊದಲಿಲ್ಲದ ಮಾಯಾಮೋಹ

ಭಾರತೀಯ ನಾರಿ ಎಂದ ಮೇಲೆ ಆಕೆಗೆ ಸೀರೆಯ ಬಗ್ಗೆ ಆಕರ್ಷಣೆ ಇರಲೇಬೇಕಲ್ಲವೆ? ಚೂಡಿದಾರ್, ಸೆಲ್ವಾರ್ ಹೀಗೆ ಬೇರೆ ಬೇರೆ ಉಡುಗೆಗಳು ಇದ್ದರೂ ಸಮಾರಂಭಗಳಲ್ಲಿ ಸೀರೆಗೇ ಹೆಚ್ಚಿನ ಪ್ರಾಶಸ್ತ್ರ, ಆರುಗಜದ ಸೀರೆಯನ್ನು ಅಂದವಾಗಿ ಉಡುವುದೂ ಒಂದು ಕಲೆಯೇ. ತರಹೇವಾರಿ ಸೀರೆಗಳನ್ನುಟ್ಟು ನೀರೆಯರು, ಸಂಭ್ರಮದಿಂದ ಓಡಾಡುತ್ತಾ ಸಮಾರಂಭಕ್ಕೆ ಮೆರಗು ತರುತ್ತಾರೆ. ಸೀರೆಗೆ ತಕ್ಕ ರವಿಕೆಯ ಹೊಂದಾಣಿಕೆಯೂ ಪ್ಯಾಷನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಒಮ್ಮೊಮ್ಮೆ ಸೀರೆಯ ಬೆಲೆಗಿಂತ ರವಿಕೆಯನ್ನು ಸಿದ್ಧಗೊಳಿಸುವುದಕ್ಕೇ ಹೆಚ್ಚು ಖರ್ಚಾಗುತ್ತದೆ.

ಈಗಂತೂ ಮೊಬೈಲ್‌ಗಳಿಂದಾಗಿ ಬಟ್ಟೆಯ ವ್ಯಾಪರ ಹೆಚ್ಚಿರುವುದು ಪ್ಯಾಪಾರಸ್ಥರಿಗೆ ಒಂದು ವರವೆಂದೇ ಹೇಳಬೇಕು. ಫೇಸ್‌ಬುಕ್, ಸ್ಟೇಟಸ್, ವಾಟ್ಸಪ್‌ಗಳಲ್ಲಿ ಒಂದು ಸಮಾರಂಭಕ್ಕೆ ತೆಗೆದ ಫೋಟೋಗಳಲ್ಲಿ ಧರಿಸುವ ಉಡುಪು, ಸೀರೆಗಳನ್ನು ಮತ್ತೊಮ್ಮೆ ಹತ್ತಿರದ ಸಭೆಯಲ್ಲಿ ಉಡಲಾದಿತೆ? ಫೋಟೋಗಳಲ್ಲಿ ಆ ಉಡುಪನ್ನೇ ಗಮನಿಸಿದವರು ಇವರ ಹತ್ತಿರ ಹೆಚ್ಚು ಬಟ್ಟೆಯೇ ಇಲ್ಲ. ಎಂದು ವಿಮರ್ಶಿಸದೆ ಇದ್ದಾರೆಯೆ.

ಪ್ರಸ್ತುತ

ಪುರುಷರಲ್ಲಿ ಇಂತಹ ಕ್ರೇಜ್ ಅಷ್ಟಾಗಿ ಇರುವುದಿಲ್ಲವೇನೋ ? ಅವರಿಗೆ ಕಾರ್‌ಗಳ ಬಗ್ಗೆ, ಹೊಸ ಹೊಸ ಮೊಬೈಲ್‌ಗಳ ಬಗ್ಗೆ ಆಸಕ್ತಿ ಹೆಚ್ಚು ಎಂಬುದನ್ನು ಕೇಳಿದ್ದೇನೆ. ಅವರಿಗೆ ಫೋಟೋ ಹುಚ್ಚು ಮಹಿಳೆಯರಿಗಿಂತ ತುಸು ಕಡಿಮೆಯೆಂದೇ ಹೇಳಬಹುದು. ಎಲ್ಲದಕ್ಕೂ ಅಪವಾದಗಳಿದ್ದೇ ಇರುತ್ತವಲ್ಲ.

ಹೀಗೆ ಸೀರೆಯ ವಿಷಯ ಪ್ರಸ್ತಾಪಿಸುವ ಸಂದರ್ಭ ಒದಗಿಬಂದಿದ್ದು ನಮ್ಮ ಮನೆಯಲ್ಲಿ ಶುಭಕಾರ್ಯವೊಂದಕ್ಕೆ ಸೀರೆ ಖರೀದಿಸುವ ವಿಚಾರ ಬಂದಿದ್ದರಿಂದ. ಅಲ್ಲಿ ಧರ್ಮಾವರಂ, ಕಾಂಜೀವರಂ ಬದಲಾಗಿ ಮೈಸೂರು ರೇಷ್ಮೆ ಸೀರೆಯೇ ಸೂಕ್ತ ಎಂಬ ತೀರ್ಮಾನವಾಯಿತು. ಅದರ ನುಣುಪು, ಮೆರುಗು, ಬಾಳಿಕೆ, ನಿರ್ವಹಣೆಗೆ ಹೋಲಿಸಿದರೆ ದರ ತುಸು ಹೆಚ್ಚಾದರೂ ಚಿಂತಿಸಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೂ ಮಹಿಳೆಯರೇ! ಶುದ್ಧರೇಷ್ಮೆ ಜರಿಯಲ್ಲಿರುವ ಬೆಳ್ಳಿ, ಅದರ ಹೊಳಪು ಉಟ್ಟರೆ ಹಗುರವೆನಿಸುವ ಭಾವ... ಒಟ್ಟಾರೆ ಸೀರೆಯ ಬಗ್ಗೆ ಹಲವಾರು ಮೆಚ್ಚುಗೆಯ ಅಂಶಗಳು ಪ್ರಸ್ತಾಪವಾದವು. ಈಗಿನ ದರವನ್ನು ಆನ್‌ಲೈನ್‌ನಲ್ಲಿ ನೋಡಿದಾಗ ನಮ್ಮ ನಿರೀಕ್ಷೆಯನ್ನು ಮೀರಿದ್ದರೂ ನಿರ್ಧಾರ ಮಾಡಿಯಾಗಿತ್ತಲ್ಲ.

ರೇಷ್ಮೆ ಸೀರೆಯ ವಿಷಯ ಬಂದಾಗ ಆತ್ಮೀಯ ಗೆಳತಿಯೊಬ್ಬರ ನೆನಪಾಗುತ್ತದೆ. ಸೀರೆಗಾಗಿ ಕೆ.ಜಿ. ಗಟ್ಟಲೆ ರೇಷ್ಮೆ ಹುಳುಗಳನ್ನು ಬಿಸಿನೀರಿನ ಆವಿಗೆ ಹಾಕಿ ಸಾಯಿಸಬೇಕಾಗುತ್ತದೆ ಎಂಬ ಸತ್ಯಸಂಗತಿ ಅವರಿಗೆ ಬೇಸರ ತಂಬಿತ್ತು. ಹಾಗಾಗಿ ಅವರು ರೇಷ್ಮೆ ಸೀರೆ ಉಡುವುದನ್ನೇ ಬಿಟ್ಟಿದ್ದರು.

ಅವರ ವಿಚಾರ ಸರಣಿಯಿಂದ ಪ್ರಭಾವಿತಳಾಗಿ ಸ್ವಲ್ಪ ಕಾಲ ರೇಷ್ಮೆ ಉಡುವುದನ್ನು ಬಿಟ್ಟಿದ್ದೆ. ಆಮೇಲೆ “ಪೂಜೆಗೆ ಉಡುವುದು ಬೇಡ” ಎಂಬ ಬದಲಾವಣೆ ಮಾಡಿಕೊಂಡೆ. ಕೊನೆಗೆ ತೆಗೆದುಕೊಂಡಿರುವುದು ಇದೆಯಲ್ಲ... ಬೇರೆಯವರು ಕೊಟ್ಟಿರುವುದು ಇದೆ. ಹೇಗೂ ಅದಕ್ಕೆ ರೇಷ್ಮೆ ಉಪಯೋಗಿಸಿ ಆಗಿದೆಯಲ್ಲ. ಉಟ್ಟರೂ ಉಡದಿದ್ದರೂ ಆ ರೇಷ್ಮೆ ಹುಳುಗಳನ್ನು ಸಾಯಿಸಿದ್ದಂತೂ ಆಗಿದೆಯಲ್ಲ ಎಂಬ ಸಮಜಾಯಿಸಿ ನೆರವಿಗೆ ಬಂದಿತ್ತು.

ರೇಷ್ಮೆಯ ನೂಲು ಬಳಕೆಗೆ ಬಂದಿರುವುದು ಅಷ್ಟೇ ಅಚ್ಚರಿಯ ಆಗರವಾಗಿದೆ. ಸುಮಾರು 4800 ವರ್ಷಗಳ ಹಿಂದೆ ಚೀನಾದ ಚಕ್ರವರ್ತಿನಿ, ಹಳದಿ ರಾಣಿ ಲೈಭೋ ಎಂಬಾಕೆ ಕುಡಿಯುತ್ತಿದ್ದ ಬಿಸಿಯ ಚಹಾದಲ್ಲಿ ಹೇಗೋ ಒಂದು ರೇಷ್ಮೆಯ ಗೂಡು ಬಿದ್ದಿತಂತೆ. ಕಂಬಳಿ ಹುಳುವಿನಂತೆಯೇ ರೇಷ್ಮೆಹುಳುವು ಹೊಟ್ಟೆ ತುಂಬಾ ಸೊಪ್ಪು ತಿಂದು ಬೆಚ್ಚನೆಯ ಕೋಶ ತಯಾರಿಸಿಕೊಂಡು ಒಳಗೆ ಇರುತ್ತದೆ. ಅದು ಪತಂಗವಾಗಿ ಬರುವಾಗ ಕೋಶ ಹರಿದು ಹೋಗುತ್ತದೆ.

ಹೀಗೆ ರಾಣಿಯ ಚಹಾದಲ್ಲಿ ಬಿದ್ದ ಕೋಶದಿಂದ ಎಳೆಎಳೆಯಾದ ಚಂದದ ನೂಲು ಬಂದಿದ್ದು ಕಂಡು ಅವಳು ಚಕಿತಳಾಗಿ ಅದರಿಂದ ಬೇರೆ ಬೇರೆಯ ಪರೀಕ್ಷೆಗೆ ಕಾರಣಳಾದಳಂತೆ. ಒಟ್ಟಾರೆ ಪಾಪದ ಹುಳು ಬಿಸಿಪಾನೀಯಕ್ಕೆ ಬಿದ್ದಿದ್ದೇ ಅದರ ಮುಂದಿನ ವಂಶಕ್ಕೆ ಶಾಪವಾಗಿ ಬಿಟ್ಟಿತು. ಅದರ ನೂಲಿನ ಹೊಳಪು, ಮೆರಗು, ಆ ಹುಳುವಿನ ದುರಂತಕ್ಕೆ ಕಾರಣವಾಯಿತು. ಇದೀಗ ರೇಷ್ಮೆ ಸಾಕಾಣಿಕೆಯೇ ದೊಡ್ಡ ಉದ್ಯಮವಾಗಿ ರೇಷ್ಮೆ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆಯಿದೆ.

ಬೇರೆ ಯಾವುದೋ ಒಂದು ರೀತಿಯ ರೇಷ್ಮೆಗೂಡನ್ನು ಬಿಸಿನೀರಿನಲ್ಲಿ ಹಾಕದೆ ಹಾಗೆಯೇ ಮಾಡಬಹುದಂತೆ. ಆದರೆ ಈ ರೇಷ್ಮೆಯಂತಹ ಅಂದ ಅದಕ್ಕೆ ಬಾರದಂತೆ, ಅಂತೂ ಸೀರೆಯ ಗುಂಗಿನಲ್ಲೇ ಇದ್ದ ನಾವು ಒಂದು ಸೋಮವಾರ ಬೆಳಗಿನ ಹತ್ತುಗಂಟೆಯ ವೇಳೆಗೆ ಅಂಗಡಿಗೆ ಹೋದೆವು. ಅಚ್ಚರಿಯೆಂದರೆ ಅಂಗಡಿಯ ನಾಲ್ಕು ಜನರನ್ನು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ. ಅದರಲ್ಲಿ ಇಬ್ಬರು ಫೋನಿನ ಸಂಭಾಷಣೆಯಲ್ಲಿ ಆನಂದವಾಗಿದ್ದರು. ಮತ್ತಿಬ್ಬರು ನಮ್ಮೆಡೆಗೆ ದಿವ್ಯ ನಿರ್ಲಕ್ಷ್ಯದ ನೋಟ ಹರಿಸಿದ್ದರು. ನಾಲ್ಕಾರು ಮಂದಿ ನಾವು ವ್ಯಾಪಾರಕ್ಕೆ ಹೋಗಿರುವುದು ಅವರ ಗಣನೆಗೆ ಬಾರದೇ? ಅಂಗಡಿಯಲ್ಲಿ ಬೇರೆಯವರು ಕೊಳ್ಳುವುದಕ್ಕೆ ಬರುವುದಿಲ್ಲವೇ? ಅದರಲ್ಲೂ ಶ್ರಾವಣಮಾಸ ಹತ್ತಿರ ಬರುತ್ತಿದೆಯಲ್ಲ. ಕೊನೆಗೂ ನಾವೇ, 'ಸೀರೆ ಕೊಳ್ಳೋದಕ್ಕೆ ಬಂದಿದ್ದೀವಿ. ದಯವಿಟ್ಟು ತೋರಿಸ್ತೀರಾ ಎಂದು ಪ್ರಶ್ನಿಸಿದ್ದೆವು.

ಆಗ ಮಹಿಳೆಯರಿಬ್ಬರೂ ಮೇಜುಗಳನ್ನು ಒರೆಸಿಕೊಂಡು ನಂತರ ನಾಲ್ಕೆ ನಾಲ್ಕು ಸೀರೆಗಳನ್ನು ನಮಗೆ ತೋರಿಸಲು ತೆರೆದಿಟ್ಟರು. ಪ್ರಿಂಟೆಡ್‌ ಸೀರೆ ಒಂದು ಮತ್ತೆರಡು ಆಕರ್ಷಕವಲ್ಲದ ಬಣ್ಣದ ದುಬಾರಿ ಸೀರೆಗಳು ಮತ್ತೊಂದು ಜರಿಯ ಗೆರೆಗಳಿರುವ ಒಂದು ಲಕ್ಷಮೌಲ್ಯದ ಕೆಂಪು ಸೀರೆ ಅವುಗಳನ್ನು ನೋಡುತ್ತಿದ್ದಂತೆ ನಮಗೆ ಅಲ್ಲಿ ಸೀರೆ ಕೊಳ್ಳುವ ಉತ್ಸಾಹವೆಲ್ಲಾ ಜರನೆ ಇಳಿದು ಹೋಗಿತ್ತು. ಇಷ್ಟೇ ಸೀರೆಗಳೆ ಎಂಬ ನಮ್ಮ ಪ್ರಶ್ನೆಗೆ ಸೋಮವಾರ ಬಂದ್ರೆ ಇನ್ನೇನಿರತ್ತೇ. ಸದ್ಯ.. ಇಷ್ಟಾದರೂ ಇವೆಯಲ್ಲ ಎಂಬ ಉತ್ತರ ನಮಗೆ ಮತ್ತಷ್ಟು ದಂಗುಬಡಿಸಿತ್ತು.

ಶನಿವಾರ ಬೇಗ ಬಂದವರಿಗೆ ಮಾತ್ರ ಸೀರೆ ಸಿಗಬಹುದಂತೆ, ಬೇಡಿಕೆಗೆ ತಕ್ಕಂತೆ ಸೀರೆಗಳು ಸರಬರಾಜು ಆಗುತ್ತಿಲ್ಲವಂತೆ ಕೊರೋನಾ ಸಮಯದಲ್ಲಿ ಅನುಭವಸ್ಥ ನೇಯುವವರು ತಮ್ಮ ಕೆಲಸ ಬಿಟ್ಟು ಬಿಟ್ಟರಂತೆ, ಹಾಗೆಯೇ ಬೇಡಿಕೆ ಇದ್ದಷ್ಟು ಅವರಿಗೆ ರೇಷ್ಮೆಯೂ ಸಿಗುತ್ತಿಲ್ಲವಂತೆ. ಸಂಪೂರ್ಣ ರೇಷ್ಮೆಯನ್ನೇ ಬಳಸುವುದರಿಂದ ಬಳಸುವ ರೇಷ್ಮೆಯ ಪ್ರಮಾಣವೂ ಹೆಚ್ಚು ಇದರಿಂದಾಗಿ ಗ್ರಾಹಕರಿಗೆ ಬೇಕಾದಷ್ಟು ಸೀರೆಗಳನ್ನು ನಮ್ಮಿಂದ ಒದಗಿಸಲಾಗುತ್ತಿಲ್ಲ. ಮಹಿಳೆಯರಿಗೆ ಸಹಜವಾಗಿಯೇ ನಿರಾಶೆಯಾಗುತ್ತದೆ. ಶ್ರಾವಣ ಭಾದ್ರಪದಗಳಲ್ಲಂತೂ ಸೀರೆಗಳಿಗೆ ಬೇಡಿಕೆಯೇ ಬೇಡಿಕೆ. ಎಂದೆಲ್ಲಾ ಒಂದಷ್ಟು ವಿವರಣೆ ಕೊಟ್ಟರು.

“ಅಂಗಡಿಗೆ ಬಂದು ಸೀರೆಯ ರಾಶಿಯಲ್ಲಿ ನಮಗೆ ಬೇಕಾದದ್ದನ್ನು ಆರಿಸಿಕೊಂಡು ದುಡ್ಡು ಕೊಟ್ಟು ಹೋದರಾಯಿತು. ಎಂಬ ನಮ್ಮ ಭ್ರಮೆ ಕಳಚಿಹೋಗಿತ್ತು. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಗಾದೆ ನೆನಪಾಗಿತ್ತು. ನಮ್ಮ ಆಶೆಯನ್ನು ಬಿಟ್ಟು ಬಿಟ್ಟರೆ ಒಳ್ಳೆಯದೇನೋ ಎನಿಸಿತ್ತಾದರೂ ಇಷ್ಟೊಂದು ಕಷ್ಟವೇ ಸೀರೆ ಕೊಳ್ಳುವುದು ನೋಡಿಯೇ ಬಿಡಬೇಕೆಂಬ ಹಟವೂ ಹೆಚ್ಚಾಗಿತ್ತು. ಆಸೆಯೇ ದುಃಖಕ್ಕೆ ಮೂಲ' ಎನ್ನವುದು ಗೊತ್ತಿದ್ದರೂ; ಬಿಟ್ಟೆನೆಂದರೂ ಬಿಡದೀ ಆಶೆ, ಎಂದೂ ಸೀರೆಗಾಗಿ ಕಾಯುವಂತಾಗಿತ್ತು. ಇದೀಗ ಒಮ್ಮೆ ಹೋಗಿ ಬಂದ ಟ್ಯಾಕ್ಸಿಯ ಛಾರ್ಚ್ ಅನ್ಯಾಯವಾಯಿತಲ್ಲ' ಎಂಬ ಬೇಸರ ಒಳಗೆ ತುಸು ಕಾಡತೊಡಗಿತ್ತು.

ಅಂದು ಶನಿವಾರದ ದಿನ ಏನೋ ಸಾಹಸಕಾರ್ಯಕ್ಕೆ ಹೋಗುತ್ತಿರುವಂತಹ ಸಂಭ್ರಮ. ಅವಲಕ್ಕಿಗೆ ಒಗ್ಗರಣೆ ಹಾಕಿ ತಿಂಡಿತಿಂದು ಗಂಟೆಗಟ್ಟಲೆ ಅಂಗಡಿ ಕಟ್ಟೆ ಕಾಯಲು ಸಜ್ಜಾಗಿಯೇ ಹೊರಟವು. ಬಹುಶಃ ಇಂತಹುದಕ್ಕೆ “ದುಡ್ಡು ಕೊಟ್ಟು ದುಃಖ ಪಡುವುದು” ಎನ್ನುತ್ತಾರೇನೋ? ಇದು ಕೃತಕ ಅಭಾವ ಸೃಷ್ಟಿಸಿದ್ದರ ಪರಿಣಾಮ ಎನ್ನಬಹುದೆ ಎಂದೂ ಮನಸ್ಸು ಶಂಕಿಸಿತು. ಸೀರೆಯ ಬಗೆಗಿನ ನಮ್ಮೆಲ್ಲರ ವರ್ಣನೆ ಕೇಳಿ ಐದುವರ್ಷದ ಮೊಮ್ಮಗಳಿಗೂ ಸೀರೆ ಅಂಗಡಿಗೆ ಬರುವ ಕುತೂಹಲ.. ಸುಮಾರು ಎಂಟೂಕಾಲದ ಹೊತ್ತಿಗೆ ಅಂಗಡಿಯ ಬಳಿ ಬಂದರೆ ಮೈಲುಗಳೆಲ್ಲಾ ಭರ್ತಿಯಾಗಿ ಬಿಟ್ಟಿದ್ದವು.

ಬೇಗ ಬಂದವರ ಕನಿಕರದ ನೋಟಕ್ಕೆ ಪಾತ್ರರಾಗಬೇಕಾಯಿತು. “ನಿಮ್ಮದು ಹದಿನೈದನೆಯ ನಂಬರ್, ಇಲ್ಲಿರುವವರೇ ಸರದಿಯ ಪ್ರಕಾರ ಗುರುತಿಟ್ಟುಕೊಳ್ಳಬೇಕು. ಎಂದಾಗ ಅವರ ಶಿಸ್ತಿಗೆ ತಲೆ ಬಾಗಲೇಬೇಕಾಯಿತು. ಆಗಷ್ಟೇ ಹೊರಗಿನಿಂದ ಬಂದ ನಾಲ್ಕು ಮಂದಿ “ಈಗ ನೀವು ಹೋಗಿ ಬನ್ನಿ” ಎಂದು ಕಳುಹಿಸುವಾಗ, ಸೀರೆ ತೆಗೆದುಕೊಳ್ಳುವವರು ಬೇರೆಡೆಗೆ ಹೋಗಿ ಟೋಕನ್ ತೆಗೆದುಕೊಳ್ಳಬೇಕೆ” ಎಂಬ ಶಂಕೆ ಕಾಡಿತು.

ನನ್ನ ಸಂಶಯದ ನೋಟವನ್ನು ಬೇರೊಂದು ಬಗೆಯಾಗಿ ಭಾವಿಸಿದ ಅಲ್ಲಿದ್ದವರು. “ಇವರು ನಮ್ಮವರೇ! ನಾವೆಲ್ಲರೂ ಬೆಳಗ್ಗೆಯೇ ಬಂದಿದ್ದೇವೆ. ನಾವು ಸರದಿಯ ಪ್ರಕಾರ ಕುಳಿತಿದ್ದೇವೆ. ಅವರು ತಿಂಡಿ ತಿಂದು ಬರಲು ಹೋಟೆಲ್‌ಗೆ ಹೋಗಿ ಬಂದರು. ಇದೀಗ ನಾವು ಹೋಗುತ್ತೇವೆ” ಎಂದು ಸೃಷ್ಟಿಕರಣ ನೀಡಿದಾಗ ಬೆರಗಾಗಿದ್ದೆವು. ನಾವೂ ಹೀಗೆಯೇ ಮಾಡಿದ್ದರೆ ಟೋಕನ್ ನಂಬರ್ ಕಡಿಮೆ ಇರುತ್ತಿತ್ತಲ್ಲ ಎಂದು ಮರುಗುವಂತಾಗಿತ್ತು.

ಇನ್ನು ಹದಿನೈದನೆಯ ನಂಬರ್ ಅಂದರೆ ಸಾಕಷ್ಟು ಹೊತ್ತು ಕಾಯಬೇಕು. ಬಂದವರು ಒಬ್ಬೊಬ್ಬರೂ ಎಷ್ಟೆಷ್ಟು ಸೀರೆ ತೆಗೆದುಕೊಂಡು ಹೋಗುತ್ತಾರೋ? ಬೇಗ ಅಂದುಕೊಂಡರೂ ನಮ್ಮದು ತಡವಾಗಿ ಹೋಯಿತಲ್ಲ. ಎಂದು ಮಿಡುಕುವಂತಾಗಿತ್ತು. ಅಬ್ಬಬ್ಬ ಸಾವಿರಗಟ್ಟಲೆ ಹಣಕೊಟ್ಟು ಸೀರೆಗಾಗಿ ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುತ್ತೇವಲ್ಲ. ಸೀರೆಯ ಮೇಲೆ ಈ ಪರಿಯ ಮೋಹವೇ! ಎಂಬ ಮನಸ್ಸಿನ ಹೊಯ್ದಾಟವನ್ನು ಪಕ್ಕಕ್ಕೆ ತಳ್ಳಿದ್ದೆ.

ನಾನು ಹೊಸ್ತಿಲಲ್ಲಿ ಮುದುರಿ ಕುಳಿತುಕೊಂಡರೆ ಉಳಿದವರೆಲ್ಲಾ ಮುಂದಿನ ರಸ್ತೆಯಲ್ಲಿ ಓಡಾಡಿಕೊಂಡಿದ್ದರು. “ಸೀರೆ ಇನ್ನೂ ಯಾವಾಗ ಕೊಡುತ್ತಾರೆ.. ಯಾವಾಗ ಅಂಗಡಿ ಬಾಗಿಲು ತೆಗೆಯುತ್ತಾರೆ?” ಎನ್ನುವುದು ಮೊಮ್ಮಗಳ ಜಪವಾಗಿತ್ತು. “ಬಾಗಿಲನು ತೆರೆದು ಸೀರೆಯನು ಕೊಡಿ ನಮಗೆ.” ಎಂದು ಹಪಹಪಿಸುತ್ತಾ ಕಾಯುವ ಕರ್ಮದಲ್ಲಿ ತೊಡಗಿಸಿಕೊಂಡಿದ್ದೆವು.

ಒಳ್ಳೆಯ ಹೋಟೆಲ್‌ಗಳು ತಿಂಡಿದರ. ಸೀರೆ, ಒಡವೆ, ಎಲ್ಲಾ ವಿಷಯಗಳೂ ಚರ್ಚೆಯಾಗತೊಡಗಿದವು. ಅಲ್ಲಿ ಬಂದಿದ್ದವರಲ್ಲಿ ಹೆಚ್ಚಿನವರು ಮೈಸೂರು ಸೀರೆಕೊಳ್ಳುವ ಅನುಭವಸ್ಥರು. ಸಲಹೆ, ಮಾರ್ಗದರ್ಶನ ಮಾಡಿಸಿ ಸೀರೆ ಕೊಡಿಸುವವರೂ ಅಲ್ಲಿದ್ದರು. ಅದಕ್ಕಾಗಿ ಅವರು ಹಣವನ್ನೋ, ಉಡುಗೊರೆಯನ್ನೂ ಪಡೆದಾರು!

ನೀವು ಹೇಗೂ ಬೇಗ ಒಳಗೆ ಹೋಗ್ತಿರಲ್ಲ... ನನಗೆ ಆ ಮೆರೂನ್ ಕಲರ್, ಸೆಲ್ಫ್ ಬಾರ್ಡರ್, ಕಡ್ಡಿ ಅಂಚಿನ ಜರಿ ಸೀರೆ ಬಿಲ್ ಹಾಕಿಸಿ. ನನಗೆ ಮೇಸೇಜ್ ಮಾಡಿ.. ನಾನು ಗೂಗಲ್ ಪೇ ಮಾಡ್ತೀನಿ.. ಎಂದು ಇಪ್ಪತ್ತನೆಯ ನಂಬರ್‌ನವರು ಅಡ್ಡ ಮಾರ್ಗ ಹಿಡಿಯುತ್ತಿದ್ದಾಗ ನಮಗೆ ಬಂದ ಕೋಪವನ್ನು ಹೇಗೋ ತಡೆದುಕೊಂಡಿದ್ದೆವು. ಒಂದು ಎರಡು ವರ್ಷದ ಎಳೆಕಂದಮ್ಮಗಳು ಅವುಗಳ ಅಪ್ಪಂದಿರ ಅಪ್ಪುಗೆಯಲ್ಲಿ ಒಡನಾಟದಲ್ಲಿ ಅವರ ಸಹನೆಯನ್ನು ಪರೀಕ್ಷಿಸುತ್ತಿದ್ದವು.

ಹೀಗೆ ಬಂದ ಎಲ್ಲಾ ಗಂಡಸರ ಮುಖಗಳಲ್ಲೂ ಒಂದೇ ರೀತಿಯ ಅಸಹಾಯಕ ಕಳೆ ಮಿಂಚುತ್ತಿದ್ದು ಪರಸ್ಪರ ನೋಟಗಳಲ್ಲೇ ತಮ್ಮ ದಯನೀಯ ಸ್ಥಿತಿಯನ್ನು ಹಂಚಿಕೊಳ್ಳುತ್ತಿದ್ದರು. ಮಕ್ಕಳಿಗೆ ಚಾಕೇಟ್, ಬಿಸ್ಕೆಟ್, ಚಿಪ್ಸ್ ಮುಂತಾದ ಸೇವೆಗಳು ಸಾಂಗವಾಗಿ ನೆರವೇರುತ್ತಿದ್ದವು. ಅಂತೂ ಅಂಗಡಿಯವರು ಬಾಗಿಲು ತೆಗೆಯುವ ಮುನ್ನವೇ ಒಂದೇ ಸಮನೆ ಜನರು ಮುತ್ತಿಕೊಳ್ಳುತ್ತಿದ್ದ ಪರಿಗೆ ಕಾಲ್ತುಳಿತದಂತಹ ಅವಘಡಗಳು ಸಂಭವಿಸಬಹುದೆ ಎಂಬ ದಿಗಿಲುಂಟಾಗುತ್ತಿತ್ತು.

ಅಂತೂ ಅಂಗಡಿಯ ಬಾಗಿಲು ತೆರೆದಾಗ 'ಉಸ್ಸಪ್ಪ' ಎನ್ನುವ ನಿಟ್ಟುಸಿರು “ನೀವೇ ಸರದಿಯ ಪ್ರಕಾರ ನಿಂತುಕೊಳ್ಳಿ... ಇಲ್ಲವಾದರೆ ಅಂಗಡಿ ಮುಚ್ಚಿ ಹೋಗಿ ಬಿಡುತ್ತೇವೆ. ಮೇಲಿನವರು ನಮಗೆ ಹಾಗೆಯೇ ಹೇಳಿದ್ದಾರೆ. ಎಂಬ ಗಡಸು ದನಿಯನ್ನು ಕೇಳಿ ಗಲಾಟೆ ಕಡಿಮೆ ಮಾಡಿ ಸಾಲಾಗಿ ನಿಂತುಕೊಂಡೆವು. ನೀವು ಹಿಂದೆ ಹೋಗಿ, ನಾವು ಮೊದಲು ಬಂದಿದ್ದು. ಎಂಬಂತಹ ಮಾತಿನ ಚಕಮಕಿ ಹಾಗೆಯೇ ಅಡಗಿತ್ತು. ಟೋಕನ್ ಹಂಚಿಕೆಯೂ ಆಯಿತು. ಸೀರೆ ಕೊಳ್ಳುವವರಿಗೆ ಮಾತ್ರವೇ ಟೋಕನ್ ಎಂದಾಗ, “ಹಣ ಕೊಡಲು ಯಜಮಾನರು ಬೇಕಲ್ಲ” ಎಂದು ಗೋಗರೆದು ಟೋಕನ್ ಪಡೆದದ್ದೂ ಆಯಿತು. ನಮ್ಮ ಟೋಕನ್ ನಂಬರ್ ತುಸು ಹೆಚ್ಚಾದರೂ ಅಸಹಾಯಕರಾಗಿ ಸಹಿಸಿಕೊಳ್ಳಬೇಕಾಯಿತು. ಅಂತೂ ನಮ್ಮ ಸರದಿ ಬಂದು ಒಳಗೆ ಹೋದಾಗ ಆದ ಸಂತಸಕ್ಕೆ ಮಿತಿಯುಂಟೆ? ಸಾಕಷ್ಟು ಜನರು ಒಳಗಿದ್ದವರು ಹೊರಗಿನವರಿಗೂ ವ್ಯವಹಾರ ಕುದುರಿಸಿದ್ದು ಆಗಲೇ ಅನೇಕ ಸೀರೆಗಳು ಬಿಕರಿಯಾಗಿದ್ದವು. ಅಲ್ಲಿದ್ದವರು ಮಾಡುತ್ತಿದ್ದಂತೆ ಕೈಗೆ ಸಿಕ್ಕಿದ ಒಂದಷ್ಟು ಬಣ್ಣಗಳ ಸೀರೆಗಳನ್ನು ಕೈಮೇಲೆ ಹಾಕಿಕೊಂಡೆವು.

ಹೀಗೆಯೇ ತಾವೂ ಸೀರೆ ಹಾಕಿಕೊಂಡವರಿಗೂ ನಮ್ಮ ಬಳಿ ಇರುವ ಸೀರೆಗಳ ಮೇಲೆ ಕಣ್ಣು ತಮ್ಮ ಕೈಗಳಲ್ಲಿದ್ದ ಸೀರೆಗಳನ್ನು ಬಿಡಲಾರದೆ ಬೇರೆಯವರು ಸೀರೆಗಳನ್ನು ಕೆಳಗೆ ಇಟ್ಟಾರೆಯೇ ಎಂಬ ನಿರೀಕ್ಷೆಯಲ್ಲೇ ಕಣ್ಣಾಡಿಸುವುದು ಸಾಮಾನ್ಯವಾಗಿತ್ತು.

ಬೇಗ ಆರಿಸಿಕೊಳ್ಳಿ ಹೊರಗೆ ಅಷ್ಟೊಂದು ಜನರು ಕಾಯ್ತಿದ್ದಾರೆ, ಎಂಬ ಅಂಗಡಿಯವರ ಅವಸರ.. ಇಷ್ಟೆಲ್ಲಾ ಕಷ್ಟಪಟ್ಟಿದ್ದೇವಲ್ಲ. ಒಬ್ಬೊಬ್ಬರು ಎರಡು ಸೀರೆಗಳನ್ನಾದರೂ ತೆಗೆದುಕೊಳ್ಳುವುದೆ ಎಂಬ ಆಶೆಗೆ ವಿವೇಚನೆ ಕಡಿವಾಣ ಹಾಕಿತ್ತು. ಹಣದ ಮೊತ್ತವೇನು ಕಡಿಮೆಯೆ.. ಒಬ್ಬೊಬ್ಬರಿಗೆ ಒಂದು ಸೀರೆಯಂತೆ ಆರಿಸಿಕೊಂಡು ನಾವು ಹೊರಗೆ ಬರುತ್ತಿರುವಂತೆ ನಮಗೆಷ್ಟು ಉಳಿಸಿದ್ದೀರಿ. ಎಂಬ ಹೊರಗಿನವರ ಬೇಸರದ ದನಿಯನ್ನು ನಾವು ಗಂಭೀರವಾಗಿ ಪರಿಗಣಿಸಲಿಲ್ಲ.

ಅಂತೂ ಕಡೆಗೂ ಸೀರೆ ತೆಗೆದುಕೊಂಡು ಹೋಗುತ್ತಿದ್ದೇವಲ್ಲ ಎಂಬ ತೃಪ್ತಿಯಲ್ಲಿ ಅದಕ್ಕಾಗಿ ವ್ಯಯಿಸಿದ ಹಣ, ಸಮಯ ತೊಂದರೆ ಗಮನಕ್ಕೆ ಬರಲಿಲ್ಲ. ಇಂತಹ ಪ್ರಸಂಗ ಜೀವಮಾನವಿಡೀ ನೆನಪಿರುತ್ತದೆಯಲ್ಲದೆ, ಹಾಗೇ ಆ ಸೀರೆಯ ಬಗ್ಗೆ ಉಳಿದವುಗಳಿಗಿಂತ ಒಲವು ಹೆಚ್ಚೇ ಇರುತ್ತದಷ್ಟೇ! ಇನ್ನು ಆ ಸೀರೆಗೆ ಮುಂದೆ ಮಾಡಬೇಕಾಗಿರುವ ಷೋಡಶೋಪಚಾರಗಳ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ ಆಗಲೇ ಮನದಲ್ಲಿ ಮಂಥನ ನಡೆದಿತ್ತು. ನಿಮಗೂ ಇಂತಹ ಸುಮಧುರ ಅನುಭವ ಆಗಿರಬೇಕಲ್ಲವೆ.