Logo

VHP PUBLICATIONS

Hindu Vani


expand_more

ಕ್ರಾಂತಿ

By ವಿಶ್ವಾಸ್ ರಾವ್, ಹಾವೇರಿ
ಕ್ರಾಂತಿ

ಆಂಗ್ಲ ಆಡಳಿತಕ್ಕೆ ಸವಾಲು - ನೌಕಾ ಕ್ರಾಂತಿ

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿದ್ದ ನೌಕಾಸೇನೆಗೆ ಇದ್ದ ಹೆಸರು ದಿ.ರಾಯಲ್ ಇಂಡಿಯನ್ ನೇವಿ ಎಂದು. 18ನೆಯ ಶತಮಾನದ ಮರಾಠಾ ಆಡಳಿತದ ಯುದ್ಧ ನೌಕೆಗಳನ್ನು ಎದುರಿಸಲೆಂದು ಪ್ರಾರಂಭವಾದ ಚಿಕ್ಕ ತುಕಡಿಯು ಮುಂದೆ ಕಾಲಾನುಕ್ರಮದಲ್ಲಿ ಬೃಹತ್ ನೌಕಾ ಸೈನ್ಯವಾಗಿ ಮಾರ್ಪಟ್ಟಿತು. ಮೊದಲ ಮಹಾಯುದ್ಧದಲ್ಲಿ ಭಾರತೀಯ ಆಂಗ್ಲ ಸೈನ್ಯವನ್ನು ಮಧ್ಯಪ್ರಾಚ್ಯದ ರಣರಂಗಗಳಿಗೆ ತಲುಪಿಸಲು ಮತ್ತು ಕರಾವಳಿಯ ಗಸ್ತು ಪಡೆಯಾಗಿ ಅದು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಸಣ್ಣ ಸೈನ್ಯವಾಗಿದ್ದ ಈ ನೌಕಾ ಪಡೆಯು 1939ರಲ್ಲಿ ಕಿರಿ ನೌಕೆಗಳು, ಗಸ್ತು ಹಡಗು, ಕಾವಲು ನಾವೆಗಳು ಮತ್ತು ಸ್ವಯಂಚಾಲಿತ ದೋಣಿಗಳಿದ್ದು ಎರಡನೆ ಮಹಾಯುದ್ಧವು ಮುಗಿಯುತಿದ್ದಂತೆ 132 ನೌಕೆಗಳಿದ್ದ ಸೈನ್ಯವಾಗಿ ಮಾರ್ಪಟ್ಟಿತ್ತು. ಹಾಗೆಯೇ 1939 ರಲ್ಲಿ 212 ಬ್ರಿಟಿಷ್ ಅಧಿಕಾರಿಗಳಿದ್ದ ಈ ನೌಕಾ ಸೈನ್ಯವು 28 ಸಾವಿರ ಸೈನಿಕರನ್ನು ಒಳಗೊಂಡಿತು.

ಎರಡನೇಯ ಮಹಾಯುದ್ದವು ಮುಗಿಯುತ್ತಿದ್ದಂತೆ ಯುದ್ಧ ಕಾಲದಲ್ಲಿ ಸೇರ್ಪಡೆಯಾಗಿದ್ದ ಸೈನಿಕರನ್ನು ನಿವೃತ್ತಿಗೊಳಿಸುವ ಪ್ರಕ್ರಿಯೆಯು ಪ್ರಾರಂಭಗೊಂಡಿತು. ಅದಕ್ಕಾಗಿ ವಿಶೇಷ ಶಿಬಿರಗಳಲ್ಲಿ ಅವರನ್ನು ಸೇರಿಸಲು ಮುಂಬಯಿಗೆ ಕಳುಹಿಸಲಾಯಿತು. ಯುದ್ಧವು ಮುಗಿದಾಗ ಅಂತಹ ಶಿಬಿರಗಳಲ್ಲಿ ಈ ಸೈನಿಕರ ದಟ್ಟಣಿಯು ಮಿತಿ ಮೀರಿತು. ಸ್ಥಳಾವಕಾಶದೊಂದಿಗೆ ಆಹಾರದ ಕೊರತೆಯೂ ಪ್ರಾರಂಭವಾಯಿತು. ಮಲಗಲು ಕೂಡಾ ಮಂಚವಿಲ್ಲದೆ ಸೈನಿಕರು ನೆಲದ ಮೇಲೆ ಮಲಗುವ ಪ್ರಮೇಯವು ಬಂದಿತು. ಕೊಡುವ ಅಹಾರದ ಬಗ್ಗೆಯೂ ದೂರುಗಳು ಪ್ರಾರಂಭವಾದವು. ಅನ್ನ ಮತ್ತು ರೊಟ್ಟಿಗಳಲ್ಲಿ ಕಲ್ಲು, ಸರಿಯಾಗಿ ಬೇಯದ ತರಕಾರಿ, ನೀರು ನೀರಾದ ಬೇಳೆಸಾರುಗಳ ಬಗ್ಗೆ ದೂರಿದಾಗೆಲ್ಲ ಅದನ್ನು ದೂರಿದವರನ್ನು ಜಾತಿ ನಿಂದನೆಯಿಂದ ಸುಮ್ಮನಾಗಿಸುವ ಪ್ರಯತ್ನಗಳಾದವು.

ಅದೇ ಸಮಯದಲ್ಲಿ ಪ್ರಾರಂಭವಾದ ನೇತಾಜಿಯವರ ಅಜಾದ್‌ಹಿಂದ್ ಫೌಜ್ ಸೈನ್ಯದ ವಿಚಾರಣೆಯ ನಡೆಯುತ್ತಿದ್ದುದ್ದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಕ್ರಾಂತಿಯ ವಿಚಾರವನ್ನು ಹರಡಿಸಲು ಪಕ್ವವಾದ ವಾತಾವರಣವು ಸಿದ್ಧವಾಗಿದ್ದಿತು. ಈ ಶಿಬಿರಗಳಲ್ಲಿದ್ದ ವಿಚಾರವಂತ ಸೈನಿಕರು ಐ.ಎನ್.ಎ ವಿಚಾರಣೆಯ ಪ್ರತಿ ಹಂತವನ್ನು ತಮ್ಮ ಶಿಬಿರಗಳಲ್ಲಿ ಪ್ರಚಾರಮಾಡಲು ಪ್ರಾರಂಭಿಸಿದರು.

ಐ.ಎನ್.ಎ ಮತ್ತು ಸುಭಾಷ್ ಬೋಸರು ಸ್ಥಾಪಿಸಿದ ಸ್ವತಂತ್ರ ಹಂಗಾಮಿ ಸರ್ಕಾರದ ಸ್ಮರಣಿಗಾಗಿ ಈ ಸೈನಿಕರು ತಮ್ಮನ್ನು ಆಜಾದ್ ಹಿಂದಿ ಎಂದು ಕರೆದುಕೊಂಡರು. ನೌಕಾದಿನ ವಾಗಿದ್ದ ಡಿಸೆಂಬರ್ ರಂದು ತಮ್ಮ ಕ್ರಾಂತಿಯ ದಿನವೆಂದು ಆರಿಸಿಕೊಂಡರು. 1945ರಲ್ಲಿ ಆ ನೌಕಾ ದಿನದ ಸರ್ಕಾರಿ ಸಮಾರಂಭಕ್ಕೆ ಹಿರಿಯ ಸೇನಾಧಿಕಾರಿಗಳೊಂದಿಗೆ ಸರಕಾರಿ ಅಧಿಕಾರಿಗಳೂ ಪ್ರಮುಖ ಸಾರ್ವಜನಿಕರೂ ಆಹ್ವಾನಿತರಾಗಿದ್ದರು. ಮುಂಬಯಿ ಕೊಲಬಾದಲ್ಲಿ ಲಂಗರು ಹಾಕಿದ ಸಿಗ್ನಲ್ ತುಕಡಿಯ ತರಬೇತಿಗೆಂದು ಇದ್ದ ನೌಕೆ ಹೆಚ್.ಐ.ಎಸ್. ತಲ್ವಾರ್‌ನಲ್ಲಿ ಈ ಸಮಾರಂಭವು ನಿಗದಿಯಾಗಿದ್ದಿತು.

ಸಾಮಾನ್ಯವಾಗಿ ನೌಕೆಯಲ್ಲಿ ಮಧ್ಯರಾತ್ರಿಯಿಂದ ಮುಂಜಾವಿನ 4 ಘಂಟೆಯ ಪಾಳಿಯ ಕಾವಲು ಕೆಲಸವನ್ನು ಯಾರೂ ಆರಿಸಿಕೊಳ್ಳುತ್ತಿರಲಿಲ್ಲ. ಆಜಾದ್ ಹಿಂದಿ ಕ್ರಾಂತಿಕಾರಿಗಳು ತಮ್ಮದೆ ಗುಂಪನ್ನು ಆ ಸಮಯದ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿದರು. ಅವರಲ್ಲಿನ ಸಣ್ಣ ಗುಂಪು ತಲ್ವಾರ್ ನೌಕೆಯೊಳಗೆ ಪ್ರವೇಶಿಸಿತು. ಈ ಗುಂಪು ನೌಕೆಯನ್ನು ಮತ್ತು ಸೇನೆಯ ಕಟ್ಟಡವನ್ನು ಕ್ವಿಟ್ ಇಂಡಿಯಾ' 'ಈಗಿನ್ನು ಕ್ರಾಂತಿ' 'ಸಾಮ್ರಾಜ್ಯ ಶಾಹಿಗಳಿಗೆ ಧಿಕ್ಕಾರ' 'ಬ್ರಿಟಿಷರನ್ನು ಮುಗಿಸಿ' ಮೊದಲಾದ ಘೋಷಣೆಗಳ ಬರಹದಿಂದ ಅಲಂಕರಿಸಿದರು. ಸೈನ್ಯದ ಶಿಸ್ತು ನಗೆಪಾಟಲಿನ ವಿಚಾರವಾಯಿತು. ಈ ಆಶಿಸ್ತು, ಕರ್ತವ್ಯದ ಉಲ್ಲಂಘನೆಗೆ ಕಾರಣವಾದ ಗುಂಪನ್ನು ಶಿಕ್ಷಿಸಲು ಖಡಕ್ ಅಧಿಕಾರಿಯೆನಿಸಿ ವರ್ಣನಿಂದನೆಯ ಬೈಗುಳಗಳ ವಿಶೇಷ ಪರಿಣಿತನಾಗಿದ್ದ ಕಮಾಂಡರ್ ಆರ್ಥರ್ ಫ್ರೆಡರಿಕ್ ಕಿಂಗ್ ಎನ್ನುವ ಬಿಳಿಯ ಅಧಿಕಾರಿಯನ್ನು ತಲ್ವಾ‌ ನೌಕೆಯ ಅಧಿಕಾರಿಯನ್ನಾಗಿ ಕಳುಹಿಸಿದರು. ನೇರಸಾಕ್ಷ್ಯಗಳಿಲ್ಲದಿದ್ದರೂ ಕೆಲವರನ್ನು ಗುರುತಿಸಿ ಅವರನ್ನು ವಜಾಗೊಳಿಸಿದರು.

ಬ್ರಿಟಿಷ್ ಸೇನೆಯ ಉಚ್ಚ ಸೇನಾಪತಿ ಮಾರ್ಷಲ್ ಚೌಚಿನ್‌ಕ್ 1946 ಫೆಬ್ರವರಿಯಲ್ಲಿ ಭಾರತ ಭೇಟಿ ನೀಡಲಿದ್ದರು. ನವಂಬರಿನಲ್ಲಿ ನಡೆದ ಘಟನೆಯ ಮುಖಭಂಗವನ್ನು ಹೋಗಲಾಡಿಸಲು ಅದೇ ನೌಕೆ ತಲ್ವಾರಿನಲ್ಲಿ ಆತನ ಭಾಷಣವನ್ನು ನಿಶ್ಚಯಿಸಲಾಯಿತು. ಫೆಬ್ರವರಿ 2ರ ಕಾರ್ಯಕ್ರಮಕ್ಕೆ ಕಟ್ಟಡಗಳನ್ನು ಮತ್ತೆ ಸುಣ್ಣ ಬಣ್ಣದಿಂದ ಸಿಂಗರಿಸಲಾಯಿತು. ಎಲ್ಲಾ ಕಡೆ ಭದ್ರತೆಯನ್ನು ಬಿಗಿಯಾಗಿಸಲಾಯಿತು. ಆದರೆ ಆಶ್ಚರ್ಯ! ಉಚ್ಚ ದಂಡನಾಯಕನು ಅಲಂಕರಿಸುವ ವೇದಿಕೆಯು ರಾತ್ರಿ ಹಗಲಾಗುವುದರೊಳಗೆ 'ಜೈಹಿಂದ್' ಎನ್ನುವ ಘೋಷಣೆಯ ಬರಹಗಳೊಂದಿಗೆ ಸಿದ್ಧಗೊಂಡಿತು. ಇಡೀ ಸೈನ್ಯದ ಕವಾಯತಿನ ಅಂಗಳವಿಡೀ ವಿವಿಧ ಘೋಷಣೆಗಳ ಬರಹದಿಂದ ತುಂಬಿತು. ಭಾಷಣದ ಕಾರ್ಯಕ್ರಮಕ್ಕೆ ಕೆಲವೇ ಘಂಟೆಗಳಿವೆ ಎಂದಾಗಲೇ ನಡೆದ ಈ ಪ್ರಸಂಗದಿಂದ ಎಲ್ಲಾ ಕಡೆಯೂ ಗುಲ್ಲುಗದ್ದಲಗಳು ತುಂಬಿದವು.

ದತ್ತ ಎನ್ನುವ ಸಿಗ್ನಲ್ ತಂತ್ರಜ್ಞ ಸೈನಿಕರೊಬ್ಬರು ಈ ಎರಡು ಸಂದರ್ಭಗಳಲ್ಲೂ ಸಂಚು ಹೂಡಿದವರು ಪ್ರಮುಖರಾಗಿದ್ದರು. ಅವರು ವೈರ್‌ಲೆಸ್‌ ಕೋಣೆಯಿಂದ ಅಂಟು ತುಂಬಿದ ಬಾಟ್ಲಿಯನ್ನು ಕೊಂಡೊಯ್ಯುವುದನ್ನು ನೋಡಿದವರಿದ್ದರು. ಈ ಸುಳಿವನ್ನು ಹಿಡಿದ ಪೊಲೀಸರು ಅವರು ಕೆಲಸ ಮಾಡುವ ಮೇಜನ್ನು ತಪಾಸಣೆ ಮಾಡಿದರು. ಅಲ್ಲಿ ಸರ್ಕಾರದ ವಿರುದ್ಧ ಹಲವು ಪತ್ರಗಳು ಮತ್ತು ಪುಸ್ತಕಗಳು ದೊರಕಿದವು. ಅವರನ್ನು ಕೂಡಲೇ ಬಂಧಿಸಿ ಏಕಾಂಗಿ ಸೆರೆಮನೆಯ ಕೋಣೆಯಲ್ಲಿಟ್ಟರು. ಪತ್ರಗಳು ಕ್ರಾಂತಿಕಾರಿಗಳ ಮನಃಸ್ಥಿತಿಯನ್ನು ಬಿಂಬಿಸುತ್ತಿದ್ದವು. ಕಾಂಗ್ರೆಸ್ ಪಕ್ಷವು ಕ್ರಾಂತಿಕಾರಿಗಳ ಬಗ್ಗೆ ಅಲಕ್ಷದ ಧೋರಣೆಯನ್ನು ತಳೆದಿದ್ದಿತು. ಅದರಲ್ಲೂ ಸಹಾನುಭೂತಿ ತೋರಿಸುವ ಹಿರಿಯ ಕ್ರಾಂತಿಕಾರಿಗಳೆಲ್ಲರೂ ಬಂಧನದಲ್ಲೋ ಅಥವಾ ಅದಾಗಲೇ ಮೃತ್ಯುವಶರಾಗಿದ್ದರು. ಹಾಗಾಗಿ ನೌಕಾಸೇನೆಯ ತರುಣರಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಂತೂ ಕಾಣುತ್ತಿದ್ದಿತು.

ದತ್ತರವರಿಂದ ವಶಪಡಿಸಿಕೊಂಡ ಒಂದು ಕರಪತ್ರದ ವಕ್ಕಣೆಯು ನಿರಾಶೆಯ ಧಾಟಿಯಲ್ಲಿದ್ದಿತು. “ಈ 25ವರ್ಷಗಳಿಂದ ನಾವು ಈ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಕೊಂಡು ಅದರಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್‌ನ ಬಹ್ವಂಶ ಜನರು ನಮಗೆ ಆಂಗ್ಲರನ್ನು ಸೋಲಿಸುವ ಶಕ್ತಿ ಇಲ್ಲದುದರಿಂದ ಶಾಂತಿಯ ಮಾರ್ಗದಿಂದಲೂ ಸಂವಿಧಾನಿಕ ವಿಧಾನದಿಂದಲೋ ಸ್ವಾತಂತ್ರ್ಯವನ್ನು ಪಡೆಯಬೇಕೆಂದುಕೊಂಡಿರುವರು. ಕಾಂಗ್ರೆಸ್ಸಿನ ಸಿನ್ಹಾ ಸಭೆಯಲ್ಲಿ ಕಾಂಗ್ರೆಸ್ ಎಷ್ಟೊಂದು ಆತುರದಲ್ಲಿ ಇದ್ದಿತು; ಅಂದರೆ, ಹೇಗಾದರಾಗಲಿ ಆಂಗ್ಲಸರ್ಕಾರದೊಡನೆ ರಾಜಿ ಮಾಡಿಯಾದರೂ ಸ್ವಾತಂತ್ರ್ಯವನ್ನು ಪಡೆಯುವ ಆತುರದಲ್ಲಿದ್ದರು. ಹಾಗಾಗಿ 25 ವರ್ಷಗಳ ಸಂಘರ್ಷ ಮತ್ತು ಕಹಿ ಪ್ರಸಂಗಗಳನ್ನು ದಾಟಿದ ಮೇಲೆ ಆಂಗ್ಲರು ಮತ್ತು ಅವರ ಭಾರತದ ಸೇವಕರೇ ಈಗ ಅತ್ಯಂತ ಆರಾಮವಾಗಿರುವರು.

25ವರ್ಷಗಳಿಂದ ಎಂದು ಆ ಕರಪತ್ರದಲ್ಲಿ ಉಲ್ಲೇಖವಾಗಲು ಕಾರಣವೆಂದರೆ ಕರಪತ್ರವು ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟವನ್ನು ಕೈಗೆತ್ತಿಕೊಂಡ ಕಾಲಖಂಡವನ್ನು ಉದಾಹರಿಸುತ್ತಿತ್ತು. ಆಂಗ್ಲರ ಪರವಾಗಿ ಇದ್ದವರು ಪಡೆಯುವ ಲಾಭವನ್ನು ಕಂಡು ಅವರ ಬಗ್ಗೆ ಸಮಾಜದಲ್ಲಿ ವೈಷ್ಯಮ್ಯವೂ ಉಂಟಾಗುತ್ತಿತ್ತು. ಆದರೆ ಕಾಂಗ್ರೆಸ್ಸನ್ನು ಕೈಬಿಡುವುದು ಕೂಡಾ ಆ ಸಂಧಿಕಾಲದಲ್ಲಿ ಅಪಾಯಕಾರಿ ಎನ್ನುವುದೂ ಸ್ವಾತಂತ್ರ್ಯ ಹೋರಾಟಗಾರರಿಗೆ ತಿಳಿದಿರುವ ವಿಚಾರವೇ ಆಗಿದ್ದಿತು.

ಚಕ್ರಗಳು ದತ್ತಾರವರ ಬಂಧನದ ನಂತರ ಅಲ್ಲಲ್ಲಿ ಎಡೆಬಿಡದೆ ಸಣ್ಣ ಪುಟ್ಟ ವಿದ್ರೋಹ ಕಾರ್ಯಗಳು ನಡೆಯುತ್ತಲೇ ಇದ್ದವು. ಕಮಾಂಡರ್ ಕಿಂಗ್‌ನ ಕಾರಿನ ಒಂದು ದಿನ ಸ್ಪೋಟಗೊಂಡವು. ಮತ್ತೊಂದು ದಿನ ಅವನ ವಾಹನದ ಮೇಲೆ 'ಕ್ವಿಟ್ ಇಂಡಿಯಾ' ಎನ್ನುವ ಘೋಷಣೆ ಬರೆದಿದ್ದಿತು. ಮಹಾನ್ ಸ್ಫೋಟಕ್ಕೆ ಒಂದು ಕಿಡಿಯು ಬೇಕಾಗಿದ್ದಿತು ಅಷ್ಟೇ. ಅದಕ್ಕೂ ಹೆಚ್ಚು ಸಮಯ ಬೇಕಾಗಲಿಲ್ಲ. 1946ರ ಫೆಬ್ರವರಿ 18ರ ಬೆಳಗ್ಗೆ 4.45ಕ್ಕೆ ಕವಾಯತಿನ ಕಹಳೆ ಕೂಗಿತು. ಆದರೆ ತಲ್ವಾರ್ ನೌಕೆಯ ಯಾವೊಬ್ಬ ಸೈನಿಕನೂ ಮೈದಾನಕ್ಕೆ ಇಳಿಯಲಿಲ್ಲ. ಆ ದಿನದ ಬೆಳಗ್ಗಿನ ಉಪಾಹಾರವನ್ನು ಯಾರೂ ತಿನ್ನಲಿಲ್ಲ. ಅದು ತಿನ್ನುವಂತೆಯೂ ಇರಲಿಲ್ಲ ಎಂದು ಎಲ್ಲರೂ ಹೇಳಿದರು. ನೌಕೆಯ ಕಮಾಂಡರ್ ಕಿಂಗ್ ಅಲ್ಲಿಗೆ ಬಂದನು. ಬರುತ್ತಿದ್ದಂತೆ ಸೈನಿಕರ ಕಡೆಯಿಂದ ದೇಶ ಭಕ್ತಿಯ ಘೋಷಣೆಗಳು ಎದ್ದವು ಭಾಗವಹಿಸಿದ ಸೈನಿಕರೆಲ್ಲರೂ ಸಿಗ್ನಲ್ ವಿಭಾಗದವರಾಗಿದ್ದರಿಂದ ಅವರು ತಲ್ವಾರ್‌ನಲ್ಲಿ ನಡೆದ ವಿಚಾರವನ್ನು ಕ್ಷಣ ಕ್ಷಣಕ್ಕೂ ಉಳಿದ ನೌಕೆಗಳಿಗೂ ಸೈನ್ಯದ ವಿವಿಧ ವಿಭಾಗಗಳಿಗೂ ನಿರಂತರವಾಗಿ ಕಳುಹಿಸಲು ಪ್ರಾರಂಭಿಸಿದರು. ಸಂಜೆಯ ಹೊತ್ತಿಗೆ ಬ್ರಿಟಿಷ್ ನೌಕಾ ಸೈನ್ಯದಲ್ಲಿಡೀ ಬಂಡೆದ್ದ ವಾರ್ತೆಯು ತಲುಪಿತು.

ಕ್ರಾಂತಿ

ಮರುದಿನ ಸೂರ್ಯೋದಯವಾಗುತ್ತಲೇ ತಮ್ಮ ವಿರುದ್ಧ ಬಹುದೊಡ್ಡ ದಂಗೆಯ ಎದ್ದಿದೆ ಎನ್ನುವುದು ಬ್ರಿಟಿಷರಿಗೆ ಮನದಟ್ಟಾಯಿತು. 10ಸಾವಿರ ನೌಕಾ ಸೈನಿಕರು ಮತ್ತು ನಿವೃತ್ತಿಯ ಶಿಬಿರಗಳ ನಾವಿಕರು ಅವರ ಸಾಲು ಮನೆಗಳಿಂದ ಬಂದರಿನ ದಡದ ಕಡೆಗೆ ಹೊರಟರು. ಕೆಲವೇ ಗಂಟೆಗಳಲ್ಲಿ ಅವರು ನೌಕಾ ಸೇನೆಗೆ ಸೇರಿದ ಹಲವು ಕಾರ್ಯಲಯದ ಕಟ್ಟಡಗಳನ್ನು ಕೈವಶಮಾಡಿಕೊಂಡರು. ನಂತರ ಒಂದರ ನಂತರ ಒಂದಾಗಿ ಯುದ್ಧ ನೌಕೆಗಳನ್ನು ವಶಪಡಿಸಿಕೊಂಡರು. ಬಿರಾದ್, ಮೋತಿ, ನೀಲಂ, ಜಮುನಾ ಮೊದಲಾದ ನೌಕೆಗಳು ಸೈನ್ಯದ ಕೈಬಿಟ್ಟವು. ಅದರಲ್ಲಿದ್ದ ಎಲ್ಲಾ ಅಧಿಕಾರಿಗಳೂ ಉಳಿದವರೂ ಅಕ್ಷರಶಃ ಬಂಡುಗಾರರ ಬಂಧಿಗಳಾದರು. ನೌಕೆಗಳ ಮೇಲೂ ಕಟ್ಟಡಗಳ ಮೇಲೂ ಹಾರುತ್ತಿದ್ದ ಯೂನಿಯನ್ ಜಾಕ್ ಕೆಳಗಿಳಿಯಿತು. ಅಲ್ಲೆಲ್ಲ ಕಾಂಗ್ರೆಸ್ಸಿನ ಧ್ವಜವು ಹಾರಿತು. ಆದರೆ ಅಷ್ಟಕ್ಕೇನೆ ನಿಂತಿತು ಕ್ರಾಂತಿಯ ಉರುಬು. ಅದಕ್ಕಿದ್ದ ಕಾರಣಗಳು ಹಲವಾರು.

ರೈತನ ಆತ್ಮ ಆಕಳು

ಭಾರತದಲ್ಲಿ ಆಕಳು ಮತ್ತು ಎಲ್ಲಾ ಜಾನುವಾರುಗಳು ರೈತನ ಆತ್ಮವಾಗಿರುತ್ತವೆ. ಭೂ ಸಾಗುವಳಿಗೆ ಅತ್ಯವಶ್ಯಕವಾಗಿ ಬೇಕಾದ ಎತ್ತುಗಳಿಗೆ ಜನ್ಮ ನೀಡುವುದು ಆಕಳು. ನಾವು ಮಾಂಸಕ್ಕಾಗಿ ಆಕಳನ್ನು ಕೊಂದರೆ ನಾವು ನಮ್ಮ ಕೃಷಿಯ ಅಭ್ಯುದಯವನ್ನು ಗಂಡಾಂತರಕ್ಕೆ ಸಿಲುಕಿಸಿದಂತಾಗುತ್ತದೆ. ಆದುದರಿಂದಲೇ ಪ್ರಾಚೀನ ಹಿಂದುಗಳು ಸಂಪೂರ್ಣ ದೂರದೃಷ್ಟಿಯನ್ನು ಇಟ್ಟುಕೊಂಡು ಆಕಳನ್ನು ಪವಿತ್ರವೆಂದು ತಿಳಿದು ಅದರ ಮಾಂಸಭಕ್ಷಣೆಯನ್ನು ನಿಷೇಧಿಸಿದರು ಮತ್ತು ಅದರಿಂದ ಗೋಹತ್ಯೆಯನ್ನು ಪ್ರತಿಬಂಧಿಸಿದರು.

- ಡಾ. ಅಂಬೇಡ್ಕ‌ರ್