Hindu Vani
Index
ಪರಿಚಯ
ಬಯ್ಯಪ್ಪನಹಳ್ಳಿ ಈಶ್ವರಯ್ಯ ಸುರೇಶ
ಶ್ರೀ ಬಿ.ಈ ಸುರೇಶ ಎಂದು ನಾವು ಕರೆಯುವ ಬಯ್ಯಪ್ಪನಹಳ್ಳಿ ಈಶ್ವರಯ್ಯ ಸುರೇಶ ಈಗಿನ್ನು ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯದರ್ಶಿ, ಹೆಸರಿನ ಕೊನೆಯ ಅಕ್ಷರವನ್ನು ಪೂರ್ಣ ವ್ಯಂಜನಾಕ್ಷರವಾಗಿ ಉಚ್ಚರಿಸುವುದು ನಮ್ಮ ಪದ್ಧತಿ. ಅದನ್ನು ಸಂಯುಕ್ತಾಕ್ಷರವಾಗಿ 'ಸುರೇಶ'ವನ್ನು ಸುರೇಶ್ ಎನ್ನುವುದು ನಮ್ಮ ದಾಕ್ಷಿಣಾತ್ಯ ರೀತಿಯಲ್ಲಿ ಸರಿಯಲ್ಲ. ಆದರೆ ಹಾಗೆ ಕರೆಯುವುದು ಫ್ಯಾಷನ್ ಆಗಿಬಿಟ್ಟಿದೆ. ಸರಿಯಾದುದನ್ನು ತಮ್ಮಿಂದ ಪ್ರಾರಂಭಿಸುವುದು, ಸ್ವಂತ ಹೆಸರಿನಿಂದಲೇ ಶುರುಗಟ್ಟುವುದನ್ನು ಪ್ರಾಂತ ಕಾರ್ಯದರ್ಶಿಗಳು ಬಹಳ ಹಿಂದೆಯೇ ಮಾಡಿಬಿಟ್ಟರುವರು.
ಸುರೇಶರವರು ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರಾಗಿ ಬಂದಾಗ ಅವು ದಟ್ಟವಾದ ಸಂಘರ್ಷದ ದಿನಗಳಾಗಿದ್ದವು. ಒಂದರ ಹಿಂದೊಂದು ದೇಶವ್ಯಾಪಿ ಆಂದೋಲನಗಳೇ ಬರುತ್ತಲಿದ್ದವು. ಅಂತಹ ದಿನಗಳಲ್ಲಿ ಜನ ಸಂಗ್ರಹ, ಜನ ಸಂಘಟನೆ ಜನ ಶಿಕ್ಷಣಗಳ ನಮ್ಮ ಮಾದರಿಯನ್ನು ಪ್ರತಿಷ್ಟಾಪಿಸಬೇಕಾಗಿದ್ದಿತು. ಆಗ ಕರ್ನಾಟಕ ಪ್ರಾಂತ ಕಾರ್ಯದರ್ಶಿಗಳಾದ ಬಿ.ನ್. ಮೂರ್ತಿಯವರು ಪ್ರಾರಂಭಿಸಿದುದು ರಾಮಾಯಣ ಮತ್ತು ಮಹಾಭಾರತಗಳ ಉಪನ್ಯಾಸಕರಿಗಾಗಿ 2 ವಾರಗಳ ನಿವಾಸೀವರ್ಗಗಳು, ಒಂದು ದಶಕ ಕಾಲ ನಡೆದ ಈ 40ಕ್ಕೂ ಹೆಚ್ಚು ಶಿಬಿರಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರವಚನಕಾರರು ಸಿದ್ಧರಾದರು.
ನಾಡಿನ ದಿಗ್ಗಜರೆಲ್ಲರೂ ಈ ವರ್ಗಗಳ ಸಂಪನ್ಮೂಲ ವ್ಯಕ್ತಿಗಳಾಗಿ, ಮಾರ್ಗದರ್ಶಕರಾಗಿ ಬರುತ್ತಿದ್ದರು. ಈ ಶಿಬಿರಗಳ ವ್ಯವಸ್ಥೆ, ಅಚ್ಚುಕಟ್ಟುತನದಲ್ಲಿ ಸುರೇಶರ ಪಾತ್ರ ವಿಶೇಷವಾದುದು. ಕಾರ್ಯಕರ್ತರ ನಡುವಿನ ಸಂಬಂಧ ವಿಶ್ವಾಸಗಳನ್ನು ಭದ್ರಪಡಿಸಿದ ಈ ವರ್ಗಗಳಿಂದ ಸಂಘಟನೆಯ ಪ್ರಾಥಮಿಕ ಸೂತ್ರಗಳನ್ನು ಅವರು ಕರಗತ ಮಾಡಿಕೊಂಡರು. ಅದು ಈ ಕಾಲಕ್ಕೆ ಅನುವಾಗುವಂತೆ ಹೊಸ ನಡಾವಳಿಗಳಾಗಿ, ಅವುಗಳ ರೂಪುರೇಷೆಗಳೀಗ ಸಿದ್ಧವಾಗಬೇಕು. ಕಾರ್ಯಕರ್ತರ ಜ್ಞಾನಗಳಿಕೆಯ ಹೊಸ ಹಾದಿಗಳೀಗ ಸಿದ್ಧವಾಗಬೇಕು.
ಕರ್ನಾಟಕದಲ್ಲಿ ಅನ್ವೇಷಿಸಿದ ರಾಮಾಯಣ ಮಹಾಭಾರತ ಪರೀಕ್ಷೆಗಳೀಗ ಜನ ಜನಿತವಾಗಿ ನೆಲೆನಿಂತ ಪರಿಷತ್ತಿನ ಯೋಜನೆ. ಸುರೇಶರು ಉದ್ಯೋಗದಲ್ಲಿದ್ದುದು ಬ್ಯಾಂಕಿನಲ್ಲಿ. ಅದೂ ಅತಿ ದೊಡ್ಡ ಬ್ಯಾಂಕಿನ ದೊಡ್ಡ ಶಾಖೆ. ಅವರಿದ್ದಲ್ಲಿ ನೂರಾರು ಶಾಲೆಗಳ ಅಧ್ಯಾಪಕರ ಸಂಬಳ ಬಟವಾಡೆಯಾಗುತ್ತಿತ್ತು. ಅವರೆಲ್ಲರನ್ನೂ ಸಂಪರ್ಕಿಸಿ ಹತ್ತಿರದ ಎಲ್ಲಾ ಶಾಲೆಗಳು ಈ ಪರೀಕ್ಷೆಗಳನ್ನು ನಡೆಸುವಂತೆ ಅವರು ಮಾಡಿದ್ದರು.
ಪರಿಷತ್ತಿನಲ್ಲಿ ಆಗಿನ್ನೂ ಸತ್ಸಂಗ ವಿಭಾಗವಿರಲಿಲ್ಲ. ಕೇಂದ್ರದಿಂದ ಸೂಚನೆ ಬಂದರೆ ಮಾತ್ರ ಎನ್ನುವ ರೀತಿ ಆಗ ಇರಲಿಲ್ಲ. ಬೆಂಗಳೂರು ಮಹಾನಗರ ಒಂದರಲ್ಲೇ ಆಗ ನಮ್ಮ ಕಾರ್ಯಕರ್ತರು ನೂರಕ್ಕೂ ಹೆಚ್ಚು ಸತ್ಸಂಗಗಳನ್ನು ನಡೆಸುತ್ತಿದ್ದರು. ಭಗವದ್ಗೀತೆ ಭಜನೆ, ಉಪನ್ಯಾಸಗಳು, ರಾಮಾಯಣ ಮಹಾಭಾರತ ಪ್ರವಚನಗಳು, ಸಂಗೀತ ಪಾಠಗಳೆಲ್ಲವೂ ಸತ್ಸಂಗ ಮಾರ್ಗಗಳೇ ಆಗಿದ್ದವು. ಬಾಲಸಂಸ್ಕಾರವೂ ಕರ್ನಾಟಕದ ಹಿರಿತನದಲ್ಲೇ ನಡೆಯಿತು. ಅದಕ್ಕಾಗಿ ಕೈಪಿಡಿಗಳೂ ಇಲ್ಲಿ ಸಿದ್ಧವಾದವು. ಇವೆಲ್ಲವೂ ಸುರೇಶರವರ ಕಲ್ಪನೆಗಳಿಗೆ ಗರಿಗಟ್ಟಿಸಿದವು.
ಸುರೇಶರವರ ಕುಟುಂಬ ದೊಡ್ಡದು. ಅವರೆಲ್ಲರ ಅನುಬಂಧವೂ ಅಂತಹುದೇ. ಪರಿಷತ್ತಿನ ಕಾರ್ಯಕ್ರಮವೆಂದರೆ ಕುಟುಂಬದ ಸದಸ್ಯರೆಲ್ಲರೂ ಬರಬೇಕು ಎನ್ನುವುದು ಅವರೆಲ್ಲರ ಪರಿಪಾಠಿಯಾಗಿದ್ದಿತು. ಅವರ ಸಂಖ್ಯೆಯೇ ಆ ದಿನಗಳಲ್ಲಿ ಕಾರ್ಯಕ್ರಮದ ಸಂಖ್ಯಾ ಗೌರವವನ್ನು ಹೆಚ್ಚಿಸುತ್ತಿತ್ತು.
ಸಂಘಟನೆಯು ತನ್ನ ಹುಟ್ಟಿನ ದಿನಗಳ ಐತಿಹಾಸಿಕ ನಿಲುವನ್ನು ಗಟ್ಟಿಗೊಳಿಸುತ್ತಿರಬೇಕು. ಅದಕ್ಕಾಗಿ ವೈಚಾರಿಕ ದೃಢತೆಯ ಕಾರ್ಯಕರ್ತರು ಹೆಚ್ಚಬೇಕು. ಮುಂದಿನ ವರ್ಷಗಳಲ್ಲಿ ಈ ಕುರಿತು ಚಿಂತನೆಯಾಗಲಿ. ಸುರೇಶರು ಅದರ ಹಿರಿತನವನ್ನು ವಹಿಸಲಿ. ಅವರಿಗೆ ಶುಭಾಶಯಗಳು.
ಕೃಪೆ: ಟ್ಯಾಪ್ಸ
ಧರ್ಮ ಪ್ರಸಾರ, ಅಭ್ಯಾಸ ವರ್ಗ, ಬೆಂಗಳೂರು