Index
ಮುಖ್ಯ ಲೇಖನ - ಡಾ.ವಿಜಯಲಕ್ಷ್ಮಿ ದೇಶಮನೆ
ಡಾ|| ವಿಜಯಲಕ್ಷ್ಮಿ ದೇಶಮಾನೆ 313 ಪದ್ಮಪ್ರಶಸ್ತಿಯನ್ನು ಗೆದ್ದ ವಾತ್ಸಲ್ಯಲಕ್ಷ್ಮೀ
- ಬಿ.ಎಲ್. ರಮಾರತ್ನ, ಬೆಂಗಳೂರು
ತುಂಬು ನಗೆಯ ಪ್ರಫುಲ್ಲ ಮುಖ, ವಾತ್ಸಲ್ಯ ಸೂಸುವ ಕಣ್ಣುಗಳು. ಕಿರಿಯರೊಡನೆ ಮಾತನಾಡುವಾಗ ಅಪ್ಪಟ ಮಮತೆ ತುಂಬಿದ ದನಿ, ಇವೆಲ್ಲವೂ ಡಾ|| ವಿಜಯಲಕ್ಷ್ಮೀ ದೇಶಮಾನೆಯವರದ್ದೇ ಬ್ರಾಂಡ್‌ಗಳು. ಅವರು ಸ್ಪೆತೊಸ್ಕೋಪ್ ಹಿಡಿದು ರೌಂಡ್‌ಗೆ ಹೊರಟರೆಂದರೆ, ಆಸ್ಪತ್ರೆಯಿಂದ ಮನೆಗೆ ಮರಳಲಾರೆನೇನೋ ಎಂದುಕೊಳ್ಳುವ ರೋಗಿಗಳಲ್ಲೂ ಮರುಕಳಿಸುವ ಭರವಸೆಯ ಬೆಳಕು. ಇವೆಲ್ಲವೂ ಸೇರಿ ಕ್ಯಾನ್ಸರ್ ರೋಗಿಗಳ ಪಾಲಿಗೆ ಧನ್ವಂತರಿಯಾಗಿ ಬಂದವರು. ಡಾ|| ವಿಜಯಲಕ್ಷ್ಮೀ ದೇಶಮಾನೆ ಎಂ.ಬಿ.ಬಿ.ಎಸ್., ಎಂ.ಎಸ್., ಎಫ್.ಎ.ಐ.ಎಸ್. ಎನ್ನುವ ವಾತ್ಸಲ್ಯದ ಪ್ರತಿರೂಪ.
ಈಗ ಪದ್ಮಶ್ರೀ ಪ್ರಶಸ್ತಿಗೆ ನಡೆದ ಉತ್ಕೃಷ್ಟ ಆಯ್ಕೆಗಳಲ್ಲಿ ಒಬ್ಬರಾದವರು, ಡಾ|| ದೇಶಮಾನೆಯವರು. ಮಂಕರಿಯಲ್ಲಿ ತರಕಾರಿಯನ್ನು ಇಟ್ಟು ಮಾರುತ್ತಿದ್ದ ಮಿಲ್ ಕಾರ್ಮಿಕರೊಬ್ಬರ ಮಗಳು ವೈದ್ಯೆಯಾಗಿ, ಪ್ರಾಧ್ಯಾಪಕಿಯಾಗಿ, ವಿಶ್ವವಿಖ್ಯಾತ ವೈದ್ಯಕೀಯ ಸಂಸ್ಥೆಯ ನಿರ್ದೇಶಕಿಯಾಗಿ ಯಶಸ್ವಿಯಾದುದು ಒಂದು ದಂತಕಥೆಯಂತೆ ರೋಚಕ.
ನಾವು ವಿಶ್ವ ಹಿಂದು ಪರಿಷತ್ತಿನಲ್ಲಿ ಮಹಿಳೆಯರ ಮತ್ತು ತರುಣಿಯರ ನಡುವೆ ಕೆಲಸ ಮಾಡುತ್ತಿರುವಾಗ ನಮ್ಮ ಪ್ರಾಂತದ ಅಧ್ಯಕ್ಷರಾಗಿ ಡಾ|| ದೇಶಮಾನೆಯವರು ಬಂದರು. ಸಮಾಜದ ಉಳಿವು ಮತ್ತು ಉತ್ಕರ್ಷಗಳು ಸಾಧ್ಯವಾಗುವುದು ಸೇವೆ, ಸಂಘರ್ಷ ಮತ್ತು ಸಂಸ್ಕಾರಗಳ ಮುಪ್ಪುರಿ ಸಂಗಮದಿಂದ ಎನ್ನುವುದು ಪರಿಷದ್ ಬುನಾದಿ ಸಿದ್ಧಾಂತವೇ ಆಗಿದ್ದಿತು. ಡಾ|| ದೇಶಮಾನೆಯವರಿಂದಾಗಿ ನಮಗೆ, ಸೇವೆ ಮತ್ತು ಸಾಂತ್ವನಗಳು ಸಂಘರ್ಷದ ಹಾದಿಯನ್ನು ಪ್ರಶಸ್ತಗೊಳಿಸುತ್ತವೆ ಎನ್ನುವ ಪ್ರತ್ಯಕ್ಷ ಅರಿವು ದೊರಕಿತು.
ಕೊಟ್ಟಾಯಂನ ಸನ್ಮಾನ ಸಭೆಯಲ್ಲಿ ನಿರ್ಮಲಾ ಸೀತಾರಾಮನ್
ಕಳೆದ ಫೆಬ್ರವರಿ 9ರಂದು ಬೆಂಗಳೂರು ಮಹಾನಗರ ಹಲಸೂರು ಜಿಲ್ಲೆಯ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ವಿಭಾಗಗಳು ಸೇರಿ 200ಕ್ಕೂ ಹೆಚ್ಚು ಗಣವೇಷಧಾರಿ ದುರ್ಗೆಯರ ಪಥ ಸಂಚಲನವನ್ನು ನಡೆಸಿದವು. ಅದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಉತ್ಕೃಷ್ಟ ಆಯ್ಕೆ ಎಂದು ತಮ್ಮ ಪ್ರಾಂತ ಅಧ್ಯಕ್ಷೆ ಡಾ|| ದೇಶಮಾನೆಯವರನ್ನು ಸನ್ಮಾನಿಸಲಾಯಿತು. ದೇಶಾದ್ಯಂತ ಮುಂದಿನ ದಿನಗಳಲ್ಲಿ ಅವರಿಗೆ ನಡೆಯಲಿರುವ ನೂರಾರು ಸನ್ಮಾನ ಸಭೆಗಳಿಗೆ ಹಲಸೂರಿನ ಸಭೆಯು ನಾಂದಿಹಾಡಿತು.
ದುರ್ಗಾವಾಹಿನಿ ಧ್ವಜಹೊತ್ತ ತೆರೆದ ಜೀಪಿನಲ್ಲಿ ಡಾ|| ವಿಜಯಲಕ್ಷ್ಮೀ ದೇಶಮಾನೆಯವರ ಮೆರವಣಿಗೆಯೂ ನಡೆಯಿತು. ಆ ಮೂಲಕ ಹಲಸೂರಿನ ನಾಗರಿಕರು ತಮ್ಮ ನಡುವಿನ ಅಸಾಮಾನ್ಯ ಸಾಧಕಿಯನ್ನು ಸ್ವಾಗತಿಸಿ ಸಂಭ್ರಮಿಸಿದರು.
ಬಡತನ ಮತ್ತು ಸಾತ್ವಿಕ ಜೀವನ: ಹಸಿವು ಮತ್ತು ಬಡತನಗಳೆರಡು ಮನುಷ್ಯನನ್ನು ಅಪರಾಧಗಳ ಜಗತ್ತಿಗೆ ಸೆಳೆಯುತ್ತವೆ ಎನ್ನುವುದು ಪ್ರಚಲಿತವಾಗಿದ್ದರೆ; ಡಾ|| ದೇಶಮಾನೆಯವರದ್ದು ಧನಾತ್ಮಕವಾದ ಸಾಮಾಜಿಕ ದೃಷ್ಟಿ. ಹತ್ತು ಮಂದಿಯ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ರೊಟ್ಟಿ ತಟ್ಟಲು ಮನೆಯಲ್ಲಿ ಹಿಟ್ಟೆಲ್ಲಿಯದು? ಇದ್ದರೆ ಅದು ಅಮ್ಮ ಮಾರಲು ತಂದು ಉಳಿದು ಬಿಟ್ಟ ತರಕಾರಿ ಮತ್ತು ಹಣ್ಣುಗಳು ಮಾತ್ರ. ಹಸಿವಿನಲ್ಲಿ ಸಿಕ್ಕಿದುದೇ ಅಮೃತವಾಗುವ ಕಾಲ. ಇಡೀ ದಿನ ತಿನ್ನುತ್ತಿದ್ದುದು ಹಣ್ಣು ಮತ್ತು ಹಸಿತರಕಾರಿಗಳು. ಅಂತಹ ಸಾತ್ವಿಕ ಆಹಾರವನ್ನು ತಿನ್ನುತ್ತಿದ್ದುದರಿಂದ ಅದು ತಮ್ಮಲ್ಲಿ ಸಾತ್ವಿಕತೆಯನ್ನೇ ಬೆಳೆಸಿತು ಎನ್ನುತ್ತಾರೆ ಡಾಕ್ಟರ್ ದೇಶಮಾನೆಯವರು.
ಡಾ||ದೇಶಮಾನೆಯವರು ಮನುಷ್ಯನ ಆರೋಗ್ಯವನ್ನು ಪರೀಕ್ಷಿಸಿದರಷ್ಟೇ ಅಲ್ಲ ಸಮಾಜದ ಆರೋಗ್ಯವನ್ನೂ ಗಮನಿಸಿದರು. ಬಡತನವನ್ನು ಅವರು ಸಾಮಾಜಿಕ ರೋಗವೆಂದು ಪರಿಗಣಿಸಿದರು. ಅವರ ಪ್ರಕಾರ ಬಡವರು ಅನುಭವಿಸುವ ಅವಮಾನಗಳು ಆ ರೋಗದ ಲಕ್ಷಣಗಳು. ತನ್ನ ಕಾಲೇಜು ಫೀಸು ಕಟ್ಟಲು ಹಣವಿಲ್ಲದಾಗ ಅವರ ಅಮ್ಮ ತಮ್ಮ ತಾಳಿಯನ್ನು ಬಿಚ್ಚಿ ಕೊಟ್ಟದುದನ್ನು ಡಾ|| ದೇಶಮಾನೆಯವರು ನೆನಪಿಸಿಕೊಳುತ್ತಾರೆ. ಅಮ್ಮನೇ ಬಡತನದಲ್ಲಿರುವಾಗ ಅವರಿಗಿಂತ ಕಷ್ಟದಲ್ಲಿದ್ದವರು ಸಾಲ ಕೇಳಲು ಬರುತ್ತಿದ್ದುದಿತ್ತು. ಅಂತಹ ಸಂದರ್ಭವನ್ನು ಗಮನಿಸುತ್ತಿದ್ದ ತಂದೆ ಬಾಬುರಾವ್ ತಮ್ಮ ಪತ್ನಿಗೆ ಕಟ್ಟುನಿಟ್ಟಾಗಿ ಹೇಳುತ್ತಿದ್ದುದು “ನಿನ್ನ ಬಳಿ ಹಣವಿದ್ದರೆ ಸಾಲಕೊಟ್ಟು ಬಿಡು. ಆದರೆ ಎಂದೂ ಕೂಡಾ ಅವರ ಬಳಿ ಇರುವ ಒಂದೇ ಒಂದು ಅಮೂಲ್ಯ ವಸ್ತುವಾದ ತಾಳಿಯನ್ನು ಅಡವಿಟ್ಟುಕೊಳ್ಳುವ ಪಾಪವನ್ನು ಮಾಡಬೇಡ” ಎಂದು. ಬಡತನವೆಂದರೆ ಧನಹೀನತೆ ಮಾತ್ರ. ಹೃದಯ ಹೀನತೆಯಾಗಬಾರದು!
ಶಸ್ತ್ರ ಚಿಕಿತ್ಸಕನಿಗೆ ಇರಬೇಕಾದುದು ಕ್ಲಾರಿಟಿ ಮಾತ್ರ: ಸರ್ಜನ್ ಆಗಲು ಬೇಕಾದುದು ದೃಢವಾದ ಬುದ್ಧಿ ಮನಸ್ಸುಗಳು. ಎಂದೂ ಕೂಡಾ ಅಲ್ಲಿ ಗೊಂದಲಕ್ಕೆ ಎಡೆಕೊಡಬಾರದು. ಡಾ| ದೇಶಮಾನೆಯವರು ಬಾಲ್ಯದಿಂದಲೂ ಸ್ಥಿರಚಿತ್ತವನ್ನು ಬೆಳಸಿಕೊಂಡರು. ಅದುವೆ ಅವರ ಜೀವನ ದೃಷ್ಟಿಯಾಗಿಬಿಟ್ಟಿತು. ಅಮ್ಮ ನಡೆಸುವ ತರಕಾರಿಯ ಗೂಡಂಗಡಿಯಲ್ಲಿ ತರಕಾರಿ ಮತ್ತು ಹಣ್ಣಿನ ಮಂಕರಿಯ ಮುಂದೆ ಕೂತಾಗ ಅಂಗಡಿಯನ್ನು ಹಾದು ಹೋಗುತ್ತಿದ್ದ ಶಾಲೆಯ ಮೇಷ್ಟ್ರು 'ಮಗುವನ್ನು ತರಕಾರಿ ಮಾರಲು ಬಿಟ್ಟು ಬಿಡಬೇಡಿರಿ. ಬುದ್ಧಿವಂತೆ ಮಗು ಅದು, ಮುಂದೆ ಓದಲು ಬಿಡಿ' ಎಂದು ಹೇಳುತ್ತಿದ್ದರು. ಆಕೆ ಐದನೇ ತರಗತಿಯಲ್ಲಿರುವಾಗ ಅಪ್ಪ ಬಾಬುರಾವ್ ನೀನು ಸರ್ಜನ್ ಆಗಬೇಕು. ಮನೆಯ ಮುಂದೆ ನಿನ್ನ ಹೆಸರು ಮತ್ತು ಪದವಿಯ ಬೋರ್ಡ್ ಹಾಕಬೇಕು' ಎಂದು ಹೇಳುತ್ತಲೇ ಇರುತ್ತಿದ್ದರು. ಹೀಗೆ ಓದು ಮಾತ್ರವೇ ಚಿತ್ರದಲ್ಲಿ ಅಷ್ಟೊತ್ತಿ ಬಿಟ್ಟಿತು. ಶಸ್ತ್ರ ಚಿಕಿತ್ಸೆಯ ಕೊಠಡಿಯನ್ನು ಪ್ರವೇಶಿಸುವ
ಮೊದಲ ಕೆಲವು ಕ್ಷಣಗಳ ಕಾಲವೂ ಚಿಕಿತ್ಸೆಯ ಕುರಿತು ಓದಿ ಗಟ್ಟಮಾಡಿಕೊಳ್ಳುವ ಸ್ವಭಾವವು ಜೀವನದಲ್ಲೂ ದಾರಿಯ ದೃಷ್ಟಿಯನ್ನು ಸ್ಪಷ್ಟಗೊಳಿಸುವಲ್ಲಿ ನೆರವಾಯಿತು.
ಕೆಲವೊಮ್ಮೆ 14-15 ಘಂಟೆಗಳ ದೀರ್ಘಕಾಲ ಶಸ್ತ್ರಚಿಕಿತ್ಸೆಯಲ್ಲಿ ತೊಡಗುವಾಗ ಅದೊಂದು ತಪಶ್ಚರ್ಯೆಯಾಗಿ ಬಿಡುತ್ತಿತ್ತು ಎನ್ನುತ್ತಾರೆ ಡಾ|| ದೇಶಮಾನೆ. ಕವಿ ಅಡಿಗರು ಹೇಳುವ 'ಚಿತ್ತವು ಹುತ್ತ' ವಾಗುವುದೆಂದರೆ ಇದೇ ಇರಬಹುದೇನೋ? ಇಂತಹ ತಪಸ್ಸಿನಲ್ಲೇ ಜೀವನ ದರ್ಶನವು ಮೂಡುವುದು. “ನಿಮಗೆ ನಿಮ್ಮದೇ ಕುಟುಂಬ ನಿಮ್ಮದೇ ಮನೆ ಬೇಕೆಂದು ಅನಿಸಲೇ ಇಲ್ಲವೇ?” ಎಂದೊಮ್ಮೆ ಅವರಿಗೆ ಕೇಳಿದ ಪ್ರಶ್ನೆಗೆ “ಇನ್ನೊಂದು ಮನೆಯನ್ನು ನನ್ನ ಮನೆಯೆಂದುಕೊಂಡು ನಡೆಸಬಹುದು ಎನ್ನುವ ದೊಡ್ಡ ಮನಸ್ಸು ನನಗಿಲ್ಲ ಎಂದೆನಿಸಿತು” ಎಂದು ಡಾ|| ದೇಶಮಾನೆಯವರು ಆ ಪ್ರಶ್ನೆಗೆ ಉತ್ತರಿಸಿದರು. ಇಂತಹ 'ದೊಡ್ಡಮನಸ್ಸು' ಇಲ್ಲದವರೇ ಸಮಾಜದ ಇತಿಹಾಸದಲ್ಲಿ ಬುದ್ಧರಾಗಿ ಬೆಳಗಿದರು. 24 ಗಂಟೆಯೂ ಕ್ಯಾನ್ಸರ್ ರೋಗಿಯು ಗುಣಮುಖನಾಗಿ ಮನೆಗೆ ಮರಳಲಿ ಎಂದು ಚಿಂತಿಸುವ ಮನಸ್ಸಿಗಿಂತ ಮಿಗಿಲಾದ ಲೋಕಚಿಂತನೆ ಬೇರೆ ಉಂಟೇ?
ಅಂದು ಮತ್ತು ಇಂದಿನ ದಿನಗಳು: ಡಾ|| ದೇಶಮಾನೆಯವರು ವೈದ್ಯಕೀಯ ಕ್ಷೇತ್ರದಲ್ಲಿ ಸರ್ಜನ್ ಆಗಿ ಕಾಲಿಡುವ ಕಾಲದಲ್ಲಿ ಕ್ಯಾನ್ಸರ್ ಸಾವಿನ ಪ್ರಮಾಣವು ಹಿಡಿತದಲ್ಲಿರಲಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳು ಮನೆಗೆ ಮರಳುವುದೇ ನಿಶ್ಚಿತವಿರಲಿಲ್ಲ. ಎಷ್ಟೆಂದರೆ; ಸಂಜೆಯೆಲ್ಲಾ ಸರ್ಟಿಫಿಕೇಟ್ ತಯಾರಿಸುವುದೇ ಶ್ರಮದ ಕೆಲಸವೆನಿಸುವಷ್ಟು ಸಾವುಗಳು ಸಂಭವಿಸುತ್ತಿದ್ದವು. ಈಗ ದಿನಗಳು ಬದಲಾಗಿವೆ. ಅಂತಹ ಕಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಕಿಯರ ಮೊದಲ ಐದು ಮಂದಿಯ ತಂಡದಲ್ಲಿ ನಾನು ಒಬ್ಬಳಾಗಿದ್ದೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ. ರೋಗಿಗಳು ನೋವಿನಿಂದ ತಮ್ಮನ್ನು ಕರೆಯುತ್ತಿದ್ದ 'ಅಮ್ಮ' ಎನ್ನುವ ಕರೆಯಲ್ಲಿ ಅಸಾಧಾರಣ ಸೆಳೆತವಿದೆ ಎಂದು ಹೇಳುವ ಡಾ|| ವಿಜಯಲಕ್ಷ್ಮೀಯವರು ಅದು ತಮಗೆ 'ಎನರ್ಜಿ' ನೀಡುವ ಶಬ್ದ ಎನ್ನುತ್ತಾರೆ. ರೋಗಿಗಳೆಲ್ಲರಿಗೂ ಅಮ್ಮನಾಗುವ ಯೋಗ್ಯತೆಗಳಿಸಿದವರು ಮಾತ್ರವೇ ಇಂತಹ ಸೆಳೆತವನ್ನು ತಮ್ಮ ಮನಸ್ಸಿನಲ್ಲಿ ಅನುಭವಿಸಬಲ್ಲರು.
“ಮಹಿಳೆಯರು ಮೌನವಾಗಿ ಅನುಭವಿಸುವ ನೋವಿನ ಬಗ್ಗೆ ಪರಿಹಾರವೇನು ಎನ್ನುವುದನ್ನು ನಾನು ಕಂಡುಕೊಳ್ಳಲು ಪ್ರಯತ್ನಿಸಿದೆ. ಪಿತ್ತಕೋಶ, ಶ್ವಾಸನಾಳ ಕ್ಯಾನ್ಸರ್‌ಗಳ ಶಸ್ತ್ರಚಿಕಿತ್ಸೆಯ ಮೋಹವನ್ನು ಬಿಟ್ಟು ಸಾಮಾನ್ಯ ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ಗಮನಹರಿಸಬೇಕು ಎಂದುಕೊಂಡೆ. ಸ್ತನಕ್ಯಾನ್ಸರ್ ಜೀವವನ್ನು ಹಿಂಡಿ ಬಿಡುತ್ತದೆ ಎನ್ನುವ ಸಾಮಾನ್ಯ ಅಭಿಪ್ರಾಯವನ್ನು ಹೋಗಲಾಡಿಸಲು ಈಗ ಸಾಧ್ಯವಾಗಿದೆ. ಇಂತಹ ನೋವನ್ನು ಪರಿಹರಿಸಲು ಆಸ್ಪತ್ರೆಯ ಆಡಳಿತವು ಕೂಡಾ ನೆರವಾಗಬಲ್ಲುದು. ಕಿದ್ವಾಯಿ ಸಂಸ್ಥೆಯ ನಿರ್ದೇಶಕಿಯಾಗಿದ್ದ ಕಾಲದಲ್ಲಿ ಈ ಕುರಿತು ಪ್ರಯತ್ನಿಸಿದೆ. ಹಲವು ಆಡಳಿತಾತ್ಮಕ ಕ್ರಮಗಳಿಗೆ ತ್ವರಿತಗತಿ ಬರುವಂತೆ ಮಾಡಲಾಯಿತು. ರೋಗವು ಉಲ್ಬಣಗೊಳ್ಳುವ ಮೊದಲು ಚಿಕಿತ್ಸೆ ಆರಂಭಗೊಳ್ಳುವುದು ಕ್ಯಾನ್ಸರ್ ಹತೋಟಿಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ”.
“ಸಾತ್ವಿಕ ಆಹಾರ ಮತ್ತು ಚಿಂತನೆಗಳು ಜೀವನವನ್ನು ಆರೋಗ್ಯಶಾಲಿಯಾಗಿಸುತ್ತವೆ” ಎಂದು ನಂಬುವ ಡಾ|| ದೇಶಮಾನೆಯವರು ಈ ದಿಶೆಯಲ್ಲೂ ಪ್ರಯತ್ನ ನಡೆಸುತ್ತಿರುವರು. ಬನಶಂಕರಿಯ ಬಳಿ ಶ್ರೀಕೃಷ್ಣ ಮಂದಿರವನ್ನು ನಿರ್ಮಿಸಿ ಸುತ್ತಲಿನ ಹಳ್ಳಿಗಳ ಜನರನ್ನು
ಸೇರಿಸಿ ಅಲ್ಲಿ ಭಗವದ್ಗೀತೆಯ ಜೀವನ ಸೂತ್ರಗಳಿಗೆ ಅನುಗುಣವಾದ ಬದುಕನ್ನು ಕಟ್ಟುವ ಪ್ರಯೋಗಕ್ಕೆ ಅನುವು ಮಾಡಬೇಕೆಂದಿರುವರು. ನಮ್ಮ ವಿಶ್ವ ಹಿಂದು ಪರಿಷದ್‌ನ ಹಲವು ಅಂತಾರಾಷ್ಟ್ರೀಯ ಮಹಿಳಾ ಕಾರ್ಯಕ್ರಮಗಳಲ್ಲಿ ಅವರ ಸಹಭಾಗಿತ್ವವೂ ಸಲಹೆಸೂಚನೆಗಳೂ ಅವುಗಳನ್ನು ಯಶಸ್ವಿಯಾಗಿಸಿದುದು ಇಂದಿಗೂ ನೆನಪಾಗುತ್ತವೆ.
ಏನೂ ಇಲ್ಲದೆ ಬಂದವಳಿಗೆ ಈಗ ಎಲ್ಲವೂ ಸಿಕ್ಕಿದೆ ಎನ್ನುವ ಸಂತೃಪ್ತಿಯ ಭಾವವನ್ನು ಬೆಳೆಸಿಕೊಂಡ ಡಾ|| ದೇಶಮಾನೆಯವರು ಸುತ್ತಲಿನ ವಾಸ್ತವವನ್ನೂ ಒಪ್ಪಿಕೊಳ್ಳುವರು. ಅವರು, ಸರ್ಜನ್ ಆದವರಿಗೆ ಬಡವರ ಹಸಿವಿನ ಅನುಭವವೂ ಇರಬೇಕು ಎನ್ನುತ್ತಾರೆ. ವಿಶ್ವ ಹಿಂದು ಪರಿಷದ್‌ನ ಹೊಣೆಯನ್ನು ಹೊತ್ತಾಗ ಅವರ ತಂದೆ ಬಾಬೂರಾವ್ ನಿನ್ನ ಆಲೋಚನೆಗಳಿಗೆ ಸಮನಾದ ಸಂಘಟನೆ ದೊರಕಿದೆ ಎಂದು ಆಶೀರ್ವದಿಸಿರುವುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈ ಸಮಾಜವು ಸುಂದರ, ಅದ್ಭುತ, ಅದನ್ನು ಕಟ್ಟಲು ಪ್ರಯತ್ನಿಸಿದ ಎಲ್ಲ ಹಿರಿಯರ ಋಣವನ್ನು ತೀರಿಸಲು ನಮಗೆ ಈ ಜೀವನ ಅವಕಾಶ ನೀಡುತ್ತದೆ ಎಂದುಕೊಳ್ಳುವ ಡಾ|| ವಿಜಯಲಕ್ಷ್ಮೀ ದೇಶಮಾನೆಯವರ ಜೊತೆಗೂಡಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವುದೇ ಸುಂದರ ಅನುಭವ. ಅವರು ಈಗ ನಮ್ಮ ವಿಶ್ವ ಹಿಂದು ಪರಿಷದ್ ಕೇಂದ್ರೀಯ ಉಪಾಧ್ಯಕ್ಷರು. ಅವರ ಅನುಭವ, ಚಿಂತನೆ, ಮಾರ್ಗದರ್ಶನಗಳು ನಮಗೂ ಮತ್ತು ವೈದ್ಯಕೀಯ ಕ್ಷೇತ್ರಕ್ಕೂ ಬಹುಕಾಲ ಸಿಗುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ತುಂಬು ಮನಸ್ಸಿನಿಂದ ಯಶಸ್ಸನ್ನು ಕೋರುವೆ.
(ಲೇಖಕಿ ಮಾತೃಶಕ್ತಿ ಪ್ರಾಂತ ಸಂಯೋಜಕಿಯಾಗಿದ್ದರು)