Logo

VHP PUBLICATIONS

Hindu Vani
expand_more

ಸ್ಮರಣೆ

ಸ್ಮರಣೆ

ಡಾ|| ಗೋವಿಂದ ನರೇಗಲ್

ಪರಾವರ್ತನೆಯಿಂದ ಪರಿವರ್ತನೆ


ಅಮೃತ ಜೋಶಿ, ಹುಬ್ಬಳ್ಳಿ ನಮ್ಮನ್ನು ಅಗಲಿದ ಡಾ. ಗೋವಿಂದ ನರೇಗಲ್ ಹುಬ್ಬಳ್ಳಿಯ ಹಿಂದು ಸಮಾಜಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕ. ನಗರದ ಓರ್ವ ವೈದ್ಯರಾಗಿ, ಆರೆಸ್ಸೆಸ ನ ಹುಬ್ಬಳ್ಳಿ ಮಹಾನಗರ ಸಂಘಚಾಲಕರಾಗಿ, ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಾಧ್ಯಕ್ಷ ಸೇರಿದಂತೆ ಹತ್ತು ಹಲವು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು 90 ವರ್ಷದ ಇಳಿವಯಸ್ಸಿನಲ್ಲೂ ನಿತ್ಯ ಶಾಖೆಯ ಉಪಸ್ಥಿತಿಯ ಮೂಲಕ ಒಬ್ಬ ಆದರ್ಶ ಸ್ವಯಂಸೇವಕರಾಗಿದ್ದರು.


ದಶಕಗಳ ಹಿಂದೆ ಅಂಗಡಿಗೆ ಪಾನ್ ತಿನ್ನಲು ಹೋದಾಗ ಅಲ್ಲಿ ನೇತು ಹಾಕಿದ್ದ ದಿನಪತ್ರಿಕೆಯಲ್ಲಿ ದೂರದ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ಹಿಂದುಗಳು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಂಡ ಘಟನೆಯ ಸುದ್ದಿ ಅವರಿಗೆ ತಿಳಿದ ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ಅಂದಿನ ತುರ್ತು ಸಂಪರ್ಕದ ಮಾರ್ಗವಾಗಿದ್ದ ಟೆಲಿಗ್ರಾಮ ಹಾಗೂ ಟ್ರಂಕ್ ಕಾಲ್ ಮೂಲಕ ಅಂದಿನ ಸಂಘದ ಹಿರಿಯರಾಗಿದ್ದ ದಿ. ಹೊ.ವೆ. ಶೇಷಾದ್ರಿ ಹಾಗೂ ದಿ. ಕೃ. ಸೂರ್ಯನಾರಾಯಣರಾವ್ ಅವರ ಗಮನಕ್ಕೆ ತಂದರು. ಪ್ರಧಾನಿ ಇಂದಿರಾಗಾಂಧಿಯವರಿಗೂ ಕೂಡ ಸೂಕ್ತ ಕ್ರಮಕ್ಕಾಗಿ ಪತ್ರ ವ್ಯವಹಾರ ಮಾಡಿದ್ದಲ್ಲದ್ದೇ ಸೂಕ್ತ ಕ್ರಮದ ಭರವಸೆಯ ಪತ್ರವನ್ನು ಕೂಡ ಪ್ರಧಾನಿಯಿಂದ ಪಡೆದಿದ್ದರು.


ಮೀನಾಕ್ಷಿಪುರಂ ಘಟನೆಯ ನಂತರ ಈ ರೀತಿ ಅನ್ಯಾನ್ಯ ಕಾರಣಗಳಿಂದ ಮತಾಂತರ ಹೊಂದುವ ಹಿಂದುಗಳನ್ನು ಮನಪರಿವರ್ತನೆ ಮಾಡಿ ಅವರನ್ನು ವಾಪಸ್ ಮರಳಿ ಮಾತೃ ಧರ್ಮಕ್ಕೆ ಕರೆತರುವ ಸಂಕಲ್ಪ ತೊಟ್ಟರು. ಇದನ್ನೇ ತಮ್ಮ ಜೀವನದ ವ್ರತವಾಗಿಸಿಕೊಂಡರು. ಈವರೆಗೆ ಸುಮಾರು 6000ಕ್ಕೂ ಹೆಚ್ಚು ಜನರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಕಾರ್ಯವನ್ನು ಏಕಾಂಗಿಯಾಗಿಯೇ ನಡೆಸುತ್ತ ಬಂದಿದ್ದರು. ಕೇವಲ ಪರಾವರ್ತನೆ ಅಷ್ಟೇ ಅಲ್ಲ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದು, ಅವರ ಮದುವೆ ಮುಂತಾದ ಕಾರ್ಯಗಳನ್ನು ಸ್ವತಃ ಮುಂದೆ ನಿಂತು ನೆರೆವೇರಿಸುವುದು - ಹೀಗೆ ಆ ಎಲ್ಲಾ ಪರಾವರ್ತಿತ ಪರಿವಾರಗಳಿಗೆ ಇವರೊಬ್ಬ ಹಿರಿಯ ಮಾರ್ಗದರ್ಶಕರಂತೆ ಜೀವನ ನಡೆಸಿದರು.


ಕೋಮುಗಲಭೆಯಿಂದ ಪೀಡಿತ ಅಂದಿನ ಹುಬ್ಬಳ್ಳಿ ನಗರದಲ್ಲಿ ಡಾ ನರೇಗಲ್ ಅವರ ಸಲಹೆ, ಮಾರ್ಗದರ್ಶನ ಎಲ್ಲ ಸಮಾಜ ಬಂಧುಗಳಿಗೆ, ಪೊಲೀಸರಿಗೆ ಸರ್ವಾನುಮತದಿಂದ ಮಾನ್ಯವಾಗುತ್ತಿತ್ತು. ಅಷ್ಟು ಪ್ರಬುದ್ಧ ಚಿಂತಕರಾಗಿದ್ದರು ಡಾ ಗೋವಿಂದ ನರೇಗಲ್, ಡಾ. ಗೋವಿಂದ ನರೇಗಲ್ ಅವರ ನೆನಪುಗಳು ಹಾಗೂ ಅವರ ಕಾರ್ಯ ಸದಾ ನಮಗೆ ಪ್ರೇರಣೆಯ ರೂಪದಲ್ಲಿ ಮಾರ್ಗದರ್ಶನ ನೀಡುತ್ತಿರಲಿ.