Logo

VHP PUBLICATIONS

Hindu Vani
expand_more

ಕತೆಕತೆ ಕಾರಣ

ವಿದ್ಯೆಯಿಂದ ಬರಬೇಕು ವಿನಯ


ಚೈತನ್ಯ ಮಹಾಪ್ರಭುಗಳ ಶಿಷ್ಯರಾದ ಸಂತಾನ ಗೋಸ್ವಾಮಿಯವರು ವೃಂದಾವನದಲ್ಲಿದ್ದ ದೊಡ್ಡ ವಿದ್ವಾಂಸರು. ಅವರ ತಂಗಿಯ ಮಗ ಜೀವ ಗೋಸ್ವಾಮಿಯವರೂ ಅವರೊಂದಿಗೆ ಇರುತ್ತಿದ್ದರು. ಅವರು ಕೂಡಾ ತಮ್ಮ ಸೋದರಮಾವನಂತೆ ಸಮರ್ಥರು ಮತ್ತು ಖ್ಯಾತ ಪಂಡಿತರು. ಈ ಇಬ್ಬರು ಗುರುಶಿಷ್ಯರು ವೃಂದಾವನದ ಎಲ್ಲ ಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದವರು.


ಒಂದು ದಿನ ಉತ್ತರ ದೇಶದಿಂದ ಒಬ್ಬರು ಪಂಡಿತರು ವೃಂದಾವನಕ್ಕೆ ಬಂದರು. ಅವರಿಗೆ ತಾವು ವೃಂದಾವನದ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ಹೆಸರು ಗಳಿಸಬೇಕೆಂದು ಇಚ್ಛೆ ಅದಕ್ಕಾಗಿ ನಿಮ್ಮಲ್ಲಿ ನನ್ನ ಬಳಿ ವಾದ ಮಾಡಬಲ್ಲ ವಿದ್ವಾಂಸರು ಯಾರಿರುವರು! ಅವರ ಬಳಿ ನನ್ನನ್ನು ಕರೆದೊಯ್ಯರಿ, ಅವರ ಬಳಿ ನನಗೆ ವಾದ, ತರ್ಕ ಮಾಡಬೇಕೆಂದಿದೆ. ಯಾರೂ ಇಲ್ಲವೆಂದಾದರೆ ಹಾಗೆಯೇ, ಒಂದು ಪತ್ರವನ್ನು ಬರೆದುಕೊಟ್ಟು ಸೋಲನ್ನು ಒಪ್ಪಿಕೊಳ್ಳಿ' ಎಂದರು.


ಹೀಗೆ ವಿಚಾರಿಸುತ್ತಿದ್ದ ಆ ಪಂಡಿತರನ್ನು ಕರೆದುಕೊಂಡು ಕೆಲವರು ಸಂತಾನ ಗೋಸ್ವಾಮಿಯವರ ಬಳಿ ಬಂದರು. ಗೋಸ್ವಾಮಿಯವರನ್ನು ನೋಡುತ್ತಿದ್ದಂತೆ ಪಂಡಿತರು “ನಿಮ್ಮ ಬಳಿ ನನಗೆ ವಾದ ಮಾಡಲಿಕ್ಕಿದೆ. ನಾನು ನೂರಾರು ನಗರಗಳ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ ಬಂದವನು. ನೀವು ನನ್ನ ಬಳಿ ತರ್ಕ ಮಾಡಿ ಗೆಲ್ಲಿರಿ, ಅಥವಾ ಸೋಲನ್ನು ಒಪ್ಪಿಕೊಂಡು, ನಾನು ಗೆದ್ದವನೆಂದು ಪ್ರಮಾಣ ಪತ್ರವನ್ನು ಬರೆದುಕೊಡಿ” ಎಂದರು.


ಸಂತಾನ ಸ್ವಾಮಿಯವರು ಅವರು ಹೇಳಿದುದನ್ನೆಲ್ಲ ಕೇಳಿ ಸಮಾಧಾನದಿಂದ “ಸ್ವಾಮೀ ನಿಮ್ಮನ್ನು ನೋಡಿದೊಡನೆ ನನಗೆ ನೀವು ಮಹಾಜ್ಞಾನಿಗಳೆಂದು ತಿಳಿಯಿತು. ನಿಮ್ಮ ಜೊತೆ ವಾದ ಮಾಡುವುದೆಂದರೇನು? ನೀವೇ ಗೆದ್ದವರೆಂದು ಈಗಲೇ ಪ್ರಮಾಣ ಪತ್ರವನ್ನು ಬರೆದು ಸಹಿಮಾಡಿ ಕೊಡುವೆ” ಎಂದು ಹಾಗೆಯೇ ಕೊಟ್ಟರು ಕೂಡಾ. ಪಂಡಿತರ ಆನಂದಕ್ಕೆ ಪಾರವೇ ಇಲ್ಲ. ಅವರು ಆ ಪತ್ರವನ್ನು ತೆಗೆದುಕೊಂಡು ಪಲ್ಲಕ್ಕಿಯಲ್ಲಿ ಕೂತು ಹೊರಟರು. ದಾರಿಯಲ್ಲಿ ಅವರಿಗೆ ಜೀವ ಗೋಸ್ವಾಮಿಯವರು ಎದುರಾದರು. ಅವರು ಪಲ್ಲಕ್ಕಿಯಲ್ಲಿ ಕೂತ ಪಂಡಿತರಿಗೆ ನಮಸ್ಕರಿಸಿ ತಮ್ಮ ಪರಿಚಯವನ್ನು ಹೇಳಿದರು.


ಪಂಡಿತರು ಕೂಡಲೇ “ನಾನೀಗ ಸಂತಾನ ಗೋಸ್ವಾಮಿಯವರನ್ನು ತರ್ಕದಲ್ಲಿ ಸೋಲಿಸಿ ಬರುತ್ತಿದ್ದೇನೆ. ನೋಡಿ ಅವರು ನನಗೆ ಕೊಟ್ಟ ಗೆಲುವಿನ ಪತ್ರ” ಎಂದು ಆ ಪ್ರಮಾಣಪತ್ರವನ್ನು ತೋರಿಸಿದರು. ಜೀವ ಗೋಸ್ವಾಮಿಯವರಿಗೆ ಆಶ್ಚರ್ಯ. ಆದರೆ ಅದನ್ನು ತೋರಿಸಿಕೊಳ್ಳದೆ ಅವರು “ಇರಲಿ ಈಗ ನನ್ನ ಬಳಿಯೂ ವಾದ ಮುಂದುವರಿಯಲಿ ಯಾರು ಗೆದ್ದು ಬರುವರು ಎಂದು ನೋಡೋಣ” ಎನ್ನುತ್ತಾ ವಾದ ಮಾಡಲು ಆ ಪಂಡಿತರನ್ನು ಕರೆದರು. 'ಇದೇನು ಮಹಾ' ಎಂದುಕೊಂಡ ಪಂಡಿತರು ಅದೇ ಊರಲ್ಲಿ ಚರ್ಚೆಗೆ ಕುಳಿತೇಬಿಟ್ಟರು.


ಅಲ್ಲಿರುವ ಜನರು ಮತ್ತು ಊರಿನ ವಿದ್ವಾಂಸರ ಸಭೆಯಲ್ಲಿ ಚರ್ಚೆ ನಡೆಯಿತು. ಬಹಳ ದೀರ್ಘವಾಗಿ ನಡೆದ ಚರ್ಚೆಯಲ್ಲಿ ಪಂಡಿತರ ವಾದ ಸರಣಿಯು ಸೋಲುತ್ತ ಬಂದಿತು. ಕೊನೆಕೊನೆಗೆ ಗೋಸ್ವಾಮಿಯವರ ಯಾವ ಪ್ರಶ್ನೆಗಳಿಗೂ ಅವರಿಗೆ ಉತ್ತರಿಸಲು ಸಾಧ್ಯವಾಗಲೇ ಇಲ್ಲ.


ಗೆದ್ದ ಮೇಲೆ ಜೀವ ಗೋಸ್ವಾಮಿಯವರು ಪಂಡಿತರ ಬಳಿ ತನ್ನ ಗೆಲುವಿನ ಪ್ರಮಾಣ ಪತ್ರವನ್ನು ಬರೆಸಿಕೊಂಡರು. ಅಷ್ಟೇ ಅಲ್ಲ, ಪಂಡಿತರು ಬೇರೆ ಬೇರೆ ಕಡೆಗಳಲ್ಲಿ ಗೆದ್ದ ಪ್ರಮಾಣ ಪತ್ರಗಳನ್ನೆಲ್ಲಾ ಅವರಿಂದ ಪಡೆದು ಅವರನ್ನು ಬರಿಗೈಲಿ ಕಳುಹಿಸಿದರು. ಗೆದ್ದ ಉತ್ಸಾಹದಿಂದ ಬಂದು ಮಾವನ ಬಳಿ ನಿಂತರು. “ಯಾರೋ ಪಂಡಿತರೆಂದು ಬಂದರೆ ಅವರ ಬಳಿ ಮಾತಿಲ್ಲದೆ ಸೋತೆ ಎಂದು ಪತ್ರ ಬರೆದುಕೊಟ್ಟಿರಿ. ನಾನು ನೋಡಿ! ಅವರನ್ನು ಸೋಲಿಸಿ ಅವರಿಂದಲೇ ನಾನೇ ಗೆದ್ದವನೆಂದು ಬರೆಸಿಕೊಂಡು ಬಂದಿದ್ದೇನೆ ನೋಡಿ” ಎಂದರು.


ಸಂತಾನ ಗೋಸ್ವಾಮಿಯವರು “ಹೌದೇನು? ಒಳ್ಳೆಯದು ಈಗಿನ್ನು ನಾನು ಇಲ್ಲಿರುವ ಅಗತ್ಯವಿಲ್ಲ. ನಾನು ಹೊರಟೆ” ಎಂದು ತಮ್ಮ ಗ್ರಂಥಗಳನ್ನು ಜೋಳಿಗೆಯಲ್ಲಿಟ್ಟಕೊಂಡು ಅವರು ವೃಂದಾವನವನ್ನು ಬಿಟ್ಟು ಹೊರಟರು. ಹೊರಡುತ್ತಲೇ ಒಂದು ಕಿವಿ ಮಾತನ್ನು ಅಳಿಯನಿಗೆ ಹೇಳಿದರು. “ಪಾಂಡಿತ್ಯವು ಪ್ರಮಾಣ ಪತ್ರಗಳಿಂದ ಪ್ರಶಸ್ತಿಗಳಿಂದ ನಿರ್ಧಾರವಾಗುವುದಲ್ಲ. ಜ್ಞಾನವು ಮುನುಷ್ಯನ ನಡವಳಿಕೆಯಿಂದ, ವಿನಯದಿಂದ ಬೆಳಗುತ್ತದೆ. ಪ್ರಮಾಣ ಪತ್ರವು ಗೆಲುವಿನ ಅಹಂಕಾರಕ್ಕೆ ಸಾಕ್ಷಿಯಾಗುತ್ತದೆ ಅಷ್ಟೆ, ಅದು ನಿನ್ನ ಸಣ್ಣತನವನ್ನು ಎಲ್ಲರಿಗೂ ತಿಳಿಸುತ್ತದೆ. ನಾವೆಲ್ಲರೂ ಸಾಧನೆಯ ದಾರಿಯಲ್ಲಿರುವವರು, ನಾವು ಸಾಧಕರಾದೆವು ಎಂದುಕೊಂಡೊಡನೆ ನಮ್ಮ ಬೆಳವಣಿಗೆಯು ಅಲ್ಲಿಗೆ ನಿಂತುಹೋಗುತ್ತದೆ. ನೀನೀಗ ಸಾಧಕನಾದೆ ಎಂದುಕೊಂಡೆ. ಅಹಂಕಾರಿಯಾದೆ. ಇನ್ನು ನಿನ್ನ ಬಳಿ ನನಗೇನು ಕೆಲಸ? ನಾನು ಹೊರಟೆ” ಎಂದರು ಸಂತಾನ ಗೋಸ್ವಾಮಿಯವರು.


ವಿದ್ಯೆಯು ಬೇಕೆನಿಸಿದಾಗ ಪ್ರಕಟಗೊಳ್ಳುವ ಗುಪ್ತನಿಧಿ. ಅದನ್ನು ಪ್ರದರ್ಶನಕ್ಕೆ ಇಡುವ ಅಹಂಕಾರ ನಮ್ಮದಾಗಬಾರದು. ವಿನಯವು ವಿದ್ಯೆಯ ಜೊತೆ ಸೇರಿದಾಗ ಅದು ಹೂವಿನ ಸೌಂದರ್ಯಕ್ಕೆ ಸುಗಂಧದ ಮೆರಗು ಸೇರಿದಂತೆ.

ಕತೆಕತೆ ಕಾರಣ

ಚಂದಾದಾರರಾಗಿ