Logo

VHP PUBLICATIONS

Hindu Vani
expand_more

ಪ್ರಸ್ತುತ

ಪ್ರಸ್ತುತ

ಮದುವೆ ಅಂದು ಇಂದು

- ಶಾರದಾ ವಿ. ಮೂರ್ತಿ ಮೈಕೋ ಬಡಾವಣೆ, ಬೆಂಗಳೂರು


ಬದಲಾವಣೆ ಜಗದ ನಿಯಮ; ತಲೆಮಾರುಗಳಿಗೆ ಅಂತರವಿರುವಂತೆ ದೃಷ್ಟಿಕೋನವೂ ವಿಭಿನ್ನವಾಗಿರುತ್ತದೆ. ಬದಲಾಗುತ್ತಿರುವ ಕಾಲ, ಪರಿಸ್ಥಿತಿ, ಸನ್ನಿವೇಶಗಳ ಪಾತ್ರವೂ ದೊಡ್ಡದೆ! ಹಾಗೆಯೇ ಆಗಿನ ಮದುವೆಗಳಿಗೂ ಈಗ ನಡೆಯುವ ಮದುವೆಗಳಿಗೂ ಅದರಲ್ಲಿ ಸಂಬಂಧಿಕರ, ನೆಂಟರಿಷ್ಟರ ಒಳಗೊಳ್ಳುವಿಕೆಯಲ್ಲೂ ಮಹತ್ತರವಾದ ಅಂತರವಿದ್ದೇ ಇದೆ. ಸರಿಸುಮಾರು ನಮ್ಮದೇ ವಯಸ್ಸಿನ ಆಪ್ತಗೆಳತಿಯೊಬ್ಬರ ಬಳಗದ ಮದುವೆಯ ಕುರಿತು ಆಕೆಯ ಅನುಭವದ ಸುತ್ತ ಸುತ್ತುವ ಘಟನಾವಳಿಯಿದು. ಹೆಸರನ್ನು ಮಾತ್ರ ಬದಲಾಯಿಸಲಾಗಿದೆ.


ತಮ್ಮನ ಮಗಳ ಮದುವೆ, ತವರಿನಲ್ಲಿ ಇವರೇ ಹಿರಿಯ ದಂಪತಿಗಳು. ತಮ್ಮನ ಹೆಂಡತಿಯೂ ತೀರಿಕೊಂಡಿರುವುದರಿಂದ ಶಾಸ್ತ್ರ, ಪದ್ಧತಿ ಸಂಪ್ರದಾಯ ಎಂದು ಹೇಳಲು ಇವರೇ ಇರಬೇಕಲ್ಲವೇ. ಹಾಗೆಂದೇ ಲಲಿತಮ್ಮ ಹಾಗೂ ವೆಂಕಟೇಶ ಮೂರ್ತಿಯವರು ಈ ಸಂಪ್ರದಾಯಗಳನ್ನೆಲ್ಲಾ ಒಂದೊಂದಾಗಿ ನೆನಪು ಮಾಡಿಕೊಂಡು ಪಟ್ಟಿಮಾಡಿಕೊಂಡರು.


ಮದುವೆಗೆ ತಿಂಗಳ ಮುಂಚೆಯೇ ತಮ್ಮ ಮನೆಗೆ ತಮ್ಮನ ಮಗ, ಸೊಸೆ ಕರೆಯಲು ಬರುತ್ತಾರೆಂಬ ನಿರೀಕ್ಷೆ.. ಅದರಲ್ಲೂ ತಮ್ಮ ಮನೆಗೇ ಮೊದಲು ಬರಬಹುದೆಂಬ ಯೋಚನೆಯಲ್ಲೇ ದಿನ ಕಳೆಯುತ್ತಿರುವಾಗ ಕೊನೆಗೂ ಅವರು ಅಕ್ಷತೆ ಕೊಡಲು ಬಂದಿದ್ದರು. ತಾವೇ ಖುದ್ದಾಗಿ ಹೋಗಿ ಕರೆದು ಬರಬೇಕಾದವರ ಮನೆಗಳ ಪಟ್ಟಿ ಮಾಡಿಕೊಂಡು ಹೋಗಲು ಮಾರ್ಗದ ಅನುಕೂಲ ನೋಡಿಕೊಂಡು ಅದರಂತೆ ಅವರು ಬಂದಿದ್ದರು.


“ಅಂತೂ ಬಂದೆಯಲ್ಲ' ಸ್ವಗತವೆಂಬಂತೆ ಹೇಳಿಕೊಂಡು ಲಲಿತಮ್ಮ ಬರುತ್ತಿದ್ದಂತೆ ಅವರು ಆಹ್ವಾನ ಪತ್ರಿಕೆ, ಉಡುಗೊರೆ ಎಂದು ತೆಗೆದುಕೊಡತೊಡಗಿದಾಗ 'ಇಷ್ಟು ಅವಸರ ಯಾಕೋ ಅನಂತೂ ಊಟ ಮಾಡಿ ತಾನೇ ಹೋಗೋದು” ಎಂದು ಪ್ರೀತಿಯಿಂದ ಆಕ್ಷೇಪಿಸಿದ್ದರು.


ಅತ್ತೆ.. ನಿಮಗೇ ಗೊತ್ತಲ್ಲ. ಬೆಂಗಳೂರಿನಲ್ಲಿ ಓಡಾಡೋದು ಅಂದ್ರೆ ಎಷ್ಟು ಕಷ್ಟ ಅಂತ ಟ್ಯಾಕ್ಸಿ ಮಾಡಿಕೊಂಡು ಬಂದಿರೋದು. ಈ ಅವಾಂತರಕ್ಕಿಂತ ವಾಟ್ಸಪ್‌ನಲ್ಲಿ ಅಹ್ವಾನ ಈ ಪತ್ರಿಕೆ ಹಾಕಿ, ಪೋನ್ ಮಾಡಬಹುದಿತ್ತು. ಮದ್ದೆಗೆ ಬರೋಕೆ ಮನಸ್ಸು ಇರುವವರು ಬಂದೇ ಬತ್ತಾರೆ. ಈಗ ನೀವೇ ಹೇಳಿ ಅತ್ತೆ.. ನಮ್ಮ ಮನೆ ಮಧ್ಯೆಗೆ ಬರೋಕೆ ನಿಮ್ಮೆ ಇನ್ವಿಟೇಷನ್ ಬೇಕಾ? ಎಂಬ ಪ್ರಶ್ನೆಯ ಬಾಣ ಬಿಟ್ಟಾಗ ಲಲಿತಮ್ಮನವರು ಉತ್ತರಕ್ಕಾಗಿ ತಡಕಾಡುವಂತಾಗಿತ್ತು.


“ಇಷ್ಟು ಗಡಿಬಿಡಿ ಮಾಡಿದ್ರೆ ಹೇಗೆ? ಎನ್ನುತ್ತಾ ಒಳಹೋದವರು ಮೈಸೂರಪಾಕ್, ಚಕ್ಕುಲಿಯನ್ನು ತಟ್ಟೆಯಲ್ಲಿ ಹಾಕಿಕೊಂಡು ಬಂದರೆ ಅನಂತ್‌ಗೆ ನಗುವೇನಗು. “ಅತ್ತೆ ಅಕ್ಷತೆ ಕೊಡೋಕೆ ಬಂದವು. ಹೀಗೆ ತಿನ್ನುತ್ತಾ ಕುಳಿತೆ ಕರೆಯುವ ಕೆಲಸ ಮುಗಿಯುತ್ತಾ? ಹಾಗೆ ಹೊಟ್ಟೆಕೆಟ್ಟರೆ ಏನು ಗತಿ ಹೇಳಿ, ಎಂದಾಗ ಮಾತೇ ಹೊರಡಲಿಲ್ಲ ಲಲಿತಮ್ಮನವರಿಗೆ ವೆಂಕಟೇಶ ಮೂರ್ತಿಯವರು ಎಲ್ಲಕ್ಕೂ ಮೂಕಸಾಕ್ಷಿಯಾಗಿದ್ದರು.


ಕೊನೆಗೂ ಗೆಳತಿಗೆ ಮನಸ್ಸು ತಡೆಯದೆ ಒಂದು ಕವರನಲ್ಲಿ ಸಿಹಿ ಹಾಕಿ “ಮನೆಗೆ ಹೋದ ಮೇಲೆ ನಿಧಾನವಾಗಿ ತಿನ್ನಿ, ಸುರಭಿಗೆ ಮೈಸೂರ್ ಪಾಕ್ ಅಂದ್ರೆ ತುಂಬಾ ಇಷ್ಟ. ಬಾಯಲ್ಲಿ ಇಟ್ಟರೆ ಕರಗುವ ಹಾಗಿದೆ. ಮದುಮಗಳು ತಿನ್ನಲಿ.” ಎಂದು ಕೊಟ್ಟಿದ್ದನ್ನು ಅವಸರದಲ್ಲಿ ಬ್ಯಾಗ್‌ಗೆ ಹಾಕಿಕೊಂಡಿದ್ದರು. ಮದುವೆಗೆ ಅಕ್ಷತೆ ಕೊಟ್ಟು, ಅವರು ತಂದ ಉಡುಗೊರೆ ಇವರಿಗೆ ಕೊಟ್ಟು. ನಮಸ್ಕರಿಸಿ, ಇವರು ಅವರಿಗೆ ಉಡುಗೊರೆ ಕೊಟ್ಟಿದ್ದೂ ಆಯಿತು.


ನಾಂದಿ ಯಾವಾಗ ಇಡ್ಕೊಂಡಿದ್ದೀರಿ ಮನೆಯಲ್ಲೇ ತಾನೆ? ಸೋದರತ್ತೆಯ ಕುತೂಹಲದ ಪ್ರಶ್ನೆಗೆ ಮದುವೆಗೆ ಒಂದು ವಾರಕ್ಕೆ ಮೊದಲೇ ಒಂದು ನಾಂದಿ ಶಾಸ್ತ್ರ ಅಂತ ಮಾಡಿ ಮುಗಿಸ್ತೀನಿ ಅತ್ತೆ. ಅದನ್ನೆಲ್ಲಾ ದೊಡ್ಡದಾಗಿ ಹಚ್ಚಿಕೊಳ್ಳೋಲ್ಲ. ನಾವು ಕರೆದರೂ ಯಾರು ಅಷ್ಟು ಬೇಗ ಮನೆ ಬಿಟ್ಟು ಬಂದುಕೊಳ್ಳುತ್ತಾರೆ. ಹೇಳಿ. ಅವರವರ ಮನೆ ಕೆಲಸ ಅವರವರಿಗೆ,” ಎಂಬ ಉತ್ತರ ಬಂದಿತ್ತು. ಗಂಟಲಲ್ಲಿ ಉಸಿರು ಸಿಕ್ಕಿಕೊಂಡಂತಾಗಿತ್ತು. ಲಲಿತಮ್ಮನವರಿಗೆ ಶಾಸ್ತ್ರ ಪದ್ಧತಿ ಎಲ್ಲಾ ಹೇಳೋಕೆ ಅಮ್ಮ ಬಾರಾ ಸುನೀತಾ? ತಮ್ಮನ ಸೊಸೆಗೆ ತಡೆಯಲಾರದೆ ಪ್ರಶ್ನೆ ಹಾಕಿದ್ದರು.


“ಅಮ್ಮ ನಾಂದಿಗೆ ಮೊದಲೇ ಬಾರೆ ಅತ್ತೆ. ಅಮ್ಮ ಬಂದಿಟ್ಟರೆ ನನ್ನೆ ಟೆನ್ಸನ್ ಎಷ್ಟೋ ಕಡಿಮೆ ಆಗತ್ತೆ ಅಲ್ಲವೆ ಅತ್ತೆ, ನನ್ನ ಗೆಳತಿಯ ಮುಖದ ಚಹರೆಯೇ ಬದಲಾಗಿದ್ದರೂ ತೋರಿಸಿಕೊಳ್ಳುವಂತಿರಲಿಲ್ಲ.


ಇದೀಗ ನಾಂದಿಗೆ ಹೋಗುವ ಪ್ರಸ್ತಾಪ ಬಿಟ್ಟು ಹೋಗಿದ್ದು 'ಒಳ್ಳೆಯದೇ ಆಯಿತು. ಎನಿಸಿತ್ತು ವೆಂಕಟೇಶ ಮೂರ್ತಿಯವರಿಗೆ.


“ನಿನಗೇ ಎಲ್ಲಾ ಗೊತ್ತಿರೋದು ನೀನೇ ಶಾಸ್ತ್ರ ಎಲ್ಲಾಹೇಳಿ ಮಾಡಿಸೋಕು ಅನ್ನೋ ಅಪೇಕ್ಷೆ ಬೇಡ' ಎಂದ ಪತಿಯ ಮಾತು ಅರಗಿಸಿಕೊಳ್ಳಲು ಕಠೋರವಾಗಿದ್ದರೂ ಅದು ಸರಿಯೇ ಎಂದೆನಿಸಿತ್ತು ಲಲಿತಮ್ಮನವರಿಗೆ.


ಮದುವೆಯ ಹಿಂದಿನ ದಿನ ಬೆಂಗಳೂರಿನಿಂದ ಐದಾರು ಗಂಟೆಗಳ ಪ್ರಯಾಣ ಮಾಡಿ ಪತಿಯೊಂದಿಗೆ ಸೀದಾ ತಮ್ಮನ ಮನೆಗೆ ಹೋಗಿದ್ದರು ಲಲಿತಮ್ಮ ಮನೆಗೆ ಮುಂದೆ ಅದ್ದೂರಿ ಅಲಂಕಾರದ ಚಪ್ಪರ ನೋಡಿದವರೇ ಲಲಿತಮ್ಮ” ಐದು ಮುತ್ತೈದೆಯರು ಸೇರಿ ಚಪ್ಪರಕ್ಕೆ ಪೂಜೆ ಮಾಡಿದ್ದಾರೋ ಇಲ್ಲವೋ ಸುನೀತಾಳ ತಾಯಿಗೆ ಪೂಜೆ ಅಂದ್ರೆ ಅಷ್ಟಕ್ಕಷ್ಟೇ! ಇನ್ನು ತಾಯಿಯೇ ಹಾಗಿದ್ದ ಮೇಲೆ ಸುನೀತಾ ಏನು ಮಾಡಿಯಾಳು ಎಂದು ಕೊಂಡೇ ಒಳಗಡಿಯಿಟ್ಟಿದ್ದರು.


ಎಲ್ಲರೂ ಮದುವೆಯ ಗಡಿಬಿಡಿಯಲ್ಲಿರಬಹುದು. ಮದುವೆಗೆ ಬೇಕಾದ ಪರಿಕರಗಳನ್ನು ಸೇರಿಸುತ್ತಿರಬಹುದು. ಎಂದು ಕೊಂಡರೆ ಎಲ್ಲರೂ ಪೋಟೋ ಸೆಟಪ್‌ನಲ್ಲಿರುವುದು ನೋಡಿ ದಂಗಾಗಿ ಹೋಗಿದ್ದರು. ಸ್ವತಃ ಮದುಮಗಳ ತಾಯಿಯೂ ಕೂಡಾ ಪೋಟೋ ತೆಗೆಯುತ್ತಿರುವವರ ಸೂಚನೆಗಳನ್ನು ಪಾಲಿಸುತ್ತಾ ನಿರಾತಂಕವಾಗಿದ್ದಾಳೆ. ತಂದ ಲಗೇಜ್, ಬ್ಯಾಗ್‌ಗಳನ್ನು ಒಂದು ಮೂಲೆಯಲ್ಲಿಟ್ಟು ಅಚ್ಚರಿಯಿಂದ ಸುತ್ತ ಕಣ್ಣಾಡಿಸತೊಡಗಿದ್ದರು. ಆಗಲೇ ತಮ್ಮ ಮತ್ತು ತಮ್ಮನ ಮಗ ಇಬ್ಬರೂ ಬಂದು ಕುಶಲ ವಿಚಾರಿಸಿಕೊಂಡರು. ಮದುವೆಯ ಕೆಲಸ ಕಾರ್ಯಗಳ ನೆರವಿಗೆಂದು ಬಂದ ಯುವತಿಯರಿರಬೇಕು. ಆಕೆ ಇವರಿಬ್ಬರಿಗೂ ಕುಡಿಯಲು ಬಿಸಿಯಾದ ಹಾಲು ತಂದು ಕೊಟ್ಟಳು.


“ಅತ್ತೆ ಮಾವಾ, ಪ್ರಯಾಣ ಆರಾಮವಾಗಿತ್ತಾ, ಹಾಲು ಕುಡಿದಿರಾ. ಇಲ್ಲೇ ಹತ್ತಿರದಲ್ಲೇ ರೂಮ್ ಮಾಡಿದ್ದೀವಿ. ಫ್ರೆಶ್ ಅಫ್ ಆಗಿ. ಕಲ್ಯಾಣ ಮಂಟಪವೂ ಹತ್ತಿರವೇ ಇದೆ. ಅಲ್ಲಿಗೇ ಊಟಕ್ಕೆ ಬಂದ್ವಿಡಿ” ಎಂದಾಗ ಲಲಿತಮ್ಮ, ವೆಂಕಟೇಶ ಮೂರ್ತಿಯವರ ಮುಖ ನೋಡಿದ್ದರು. “ಈಗ ರೂಮ್‌ಗೆ ಯಾಕೆ ಕಳಿಸುತ್ತಿದ್ದಾರೆ. ಎಲ್ಲರೂ ಒಟ್ಟಿಗೇ ಇಲ್ಲಿಂದಲೇ ಊಟಕ್ಕೆ ಹೋಗಬಹುದಲ್ಲ. ಹಾಗಾದರೆ ಇಲ್ಲಿ ಯಾರಿಗೂ ತಮ್ಮ ಸಲಹೆ ಸೂಚನೆಗಳ ಅಗತ್ಯವಿಲ್ಲ. ವಯಸ್ಸಾದವರು ಬಂದಿದ್ದಾರೆಂದು ಸಂತೋಷದಿಂದ ಗೌರವದಿಂದ ಇಲ್ಲಿ ಮಾತನಾಡಿಸಿ, ಆದರಿಸುವವರೂ ಅಷ್ಟಿಲ್ಲ. ಹೀಗೇ ಏನೇನೋ ಯೋಚನೆಗಳು. “ರೂಮ್ ತೋರಿಸಲಾ ಬದ್ದೀರಾ” ಎನ್ನುತ್ತಾ ಇವರ ಒಂದೆರೆಡು ಲಗೆಜ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಬೀಗದ ಕೀಯೊಂದಿಗೆ ಆ ಯುವತಿ ಬಂದು ಕೇಳಿದಾಗ ಇವರು ಅನಿವಾರ್ಯವಾಗಿ ಅಲ್ಲಿಂದ ಹೊರಡಲೇಬೇಕಾಯಿತು.


“ಎಷ್ಟೋ ವಿಷಯ ಮಾತನಾಡುವುದಿತ್ತು. ನಾವು ಮನೆಯಲ್ಲಿದ್ದರೆ ಇವರಿಗೇನು ಕಷ್ಟವಾಗುತ್ತಿತ್ತು. ಮುಖ ತೊಳೆಯಲು ಎಷ್ಟು ಹೊತ್ತು ಬೇಕು? ಎಲ್ಲಿಯಾದರೂ ಮರೆಯಲ್ಲಿ ಐದು ನಿಮಿಷ ಸೀರೆ ಬದಲಾಯಿಸಿದರೆ ಆಗುತ್ತಿತ್ತು”. ಮನದಲ್ಲೇ ಮಥಿಸುತ್ತಾ ರೂಮ್ ಸೇರಿದ್ದರು. ಆತ್ಮೀಯತೆಯೊಂದನ್ನು ಬಿಟ್ಟು ಮತ್ತೆಲ್ಲಾ ಅನುಕೂಲಗಳೂ ಆ ರೂಮಿನಲ್ಲಿದ್ದ ಅನುಭವವಾಗಿತ್ತು.


ಮದುವೆಯ ವಿಷಯವಾಗಿ ತಾವು ಏನೂ ಮಾತನಾಡಲೇ ಇಲ್ಲವಲ್ಲ ಎಂಬ ಬೇಸರದೊಂದಿಗೆ ಊಟದ ಸಮಯವೆಂದು ಛತ್ರದತ್ತ ಹೆಜ್ಜೆ ಹಾಕಿದ್ದರು.


“ಮದುವೆ ಕೆಲಸ, ಸಿದ್ಧತೆ ಎಲ್ಲಾ ಮುಗಿದಿದೆಯೇನೆ ಮಹಾರಾಯಿತಿ”, ನಿರಾಳವಾಗಿ ತಾಯಿಯೊಂದಿಗೆ ಹರಡುತ್ತಿರುವ ತಮ್ಮನ ಸೊಸೆಯನ್ನು ತುಸು ಗಂಭೀರ ದನಿಯಲ್ಲಿಯೇ ವಿಚಾರಿಸಿದ್ದರು ಲಲಿತಮ್ಮ.


“ನಿಶ್ಚಿತಾರ್ಥದಿಂದ ಹಿಡಿದು ಮದುವೆಯ ಚಪ್ಪರ, ಓಲಗ, ಪುರೋಹಿತರು, ಪೂಜೆ ಎಲ್ಲಾ ಸಂಪ್ರದಾಯ ಪದ್ಧತಿ, ಶಾಸ್ತ್ರವನ್ನು ನೋಡಿಕೊಳ್ಳುವುದಕ್ಕೆ ಕಂಟ್ರಾಕ್ಟ್ ಕೊಟ್ಟಿದ್ದೇವಲ್ಲ. ಹೆಣ್ಣು ಒಪ್ಪಿಸಿ ಮನೆಗೆ ಹೋದಾಗಲೂ ಅವರದೇ ಊಟದ ತಯಾರಿ, ಬ್ಯೂಟಿಷಿಯನ್ ಕೂಡಾ ಅವರೇ ಕಳುಹಿಸುತ್ತಾರೆ. ನಾವು ಹಣ ಕೊಟ್ಟರಾಯಿತು. ಬಟ್ಟೆ ಒಡವೆಯ ಜವಾಬ್ದಾರಿ ಮಾತ್ರ ನಮ್ಮದು. ಇಲ್ಲ ಅಂದ್ರೆ ಯಾರು ಹೇಳಿ ಈಗ ಅಷ್ಟು ಒದ್ದಾಡುವವರು”. ಎಂದು ತಮ್ಮನ ಮಗ ಹೇಳಿದಾಗ ಆ ಸೋದರತ್ತೆಗೆ ಮತ್ತಷ್ಟು ಅಚ್ಚರಿ. ಮದುಮಕ್ಕಳ ತಾಯ್ತಂದೆಯರಿಗೆ ಇಂತಹ ನಿರಾಳತೆಯೂ ಈ ಕಾಲದಲ್ಲಿ ಸಾಧ್ಯ ಎಂದು ನಂಬುವಂತಾಗಿತ್ತು.


ಮದುಮಕ್ಕಳ ಕಡೆಯವರು ಸಂಜೆಯ ಗೆಟ್‌ಟುಗೆದರ್‌ಗೆ ಭರ್ಜರಿಯಾಗಿ ಹಾಡು ನೃತ್ಯದ ತಯಾರಿಯಲ್ಲಿದ್ದರು. ಚಪ್ಪರದ ಸಿಂಗಾರ, ಮುಂದೆ ಅಂದವಾದ ರಂಗೋಲಿ, ಹೂವಿನ ಅಲಂಕಾರ ಎಲ್ಲದಕ್ಕೂ ವ್ಯವಸ್ಥೆಯಾಗಿತ್ತು.


ಸ್ವಲ್ಪ ಹೊತ್ತಿನಲ್ಲೇ ಬಂದವರ ಆತಿಥ್ಯಕ್ಕೆಂದು ಯುವಕ ಹಾಗೂ ಯುವತಿಯರ ತಂಡ ಸಿದ್ಧರಾಗಿ ಬಂದಿದ್ದರು. ಉದ್ದಕ್ಕೂ ಹೂವಿನ, ವಿದ್ಯುದೀಪಗಳ ಅಲಂಕಾರ ಝಗ ಮಗಿಸುವ ವರ್ಣಮಯ ಬೆಳಕು. ಆಡಂಬರ, ವೈಭವ.


ಸಂಭ್ರಮದ ಕೇಂದ್ರ ಬಿಂದುಗಳಾದ ಮದುಮಕ್ಕಳು ಹಾಗೂ ಮನೆಯವರು ತಾವೂ ಒಂದು ಚಂದದ ಕಾರ್ಯಕ್ರಮಕ್ಕೆ ಹೋಗಿ ಭಾಗವಹಿಸುವಂತಹ ನಿರುಮ್ಮಳ ಭಾವದಿಂದ ಇರುವುದು ಸಾಧ್ಯ ಎಂದು ಪ್ರತ್ಯಕ್ಷ ಅನುಭವವಾಗಿತ್ತು ಲಲಿತಮ್ಮನಿಗೆ.


ಇತ್ತೀಚೆಗೆ ಅಷ್ಟಾಗಿ ಸಮಾರಂಭಗಳಿಗೆ ಹೋಗುತ್ತಿರಲಿಲ್ಲವಾದ್ದರಿಂದ ಈ ಹತ್ತಿರದ ಬಳಗದ ಮದುವೆಯಲ್ಲಿ ಅವರಿಗೆ ಸೋಜಿಗದ ಸರಮಾಲೆಯೇ ದರ್ಶನವಾದಂತಿತ್ತು. ಹಿಂದೆಲ್ಲಾ ಮದುಮಕ್ಕಳ ಮನೆಗೆ ನೆಂಟರಿಷ್ಟರು ಬರುತ್ತಿದ್ದು, ಹಾಲ್‌ನಲ್ಲಿ, ರೂಮ್‌ಗಳಲ್ಲಿ, ಕೊನೆಗೆ ಅಡಿಗೆ ಮನೆಯಲ್ಲಿ. ಅಕ್ಕ ಪಕ್ಕದ ಮನೆಗಳಲ್ಲಿ ರಾತ್ರಿ ಸಾಲಾಗಿ ಹಾಸಿಕೊಂಡು ಮಲಗುತ್ತಿದ್ದುದು; ದೊಡ್ಡ ದೊಡ್ಡ ಜಮಖಾನ, ಕಂಬಳಿ ಹಾಸಿಬಿಟ್ಟರೆ ಸಾಕಾಗುತ್ತಿತ್ತು. ಈಗ ಎಲ್ಲರಿಗೂ ಖಾಸಗಿತನ (ಪ್ರೈವೆಸಿ) ಹೆಚ್ಚಾಗಿರುವುದರಿಂದ ಉಳಿದುಕೊಳ್ಳಲು ರೂಮ್‌ಗಳೇ ಬೇಕು. ಇಲ್ಲವಾದರೇ ನಿದ್ದೆ, ವಿಶ್ರಾಂತಿ ಎಲ್ಲವೂ ಖೋತವಾಗಿ ಮದುವೆಗೆ ಭಾಗವಹಿಸುವಾಗ ಉತ್ಸಾಹವೇ ಇರದೆ ಆಯಾಸವಾಗುತ್ತದೆ. ಎಂಬ ನಂಬಿಕೆ ಬೇರೂರಿಬಿಟ್ಟದೆ. ಮೊದಲಿನಂತೆ ಒಬ್ಬರಿಗೊಬ್ಬರು ಬಿಡುವು ಮಾಡಿಕೊಂಡು ಹೋಗಿ ನೆರವಾಗುವುದಕ್ಕೂ ಅವರವರದೇ ಆದ ತೊಂದರೆಗಳು ಎದುರಾಗುತ್ತವೆ. ಮುಖ್ಯವಾಗಿ ಮನಃಸ್ಥಿತಿಯೂ ಬದಲಾಗಿದೆ.


ಆದರೆ ನಮ್ಮ ಬಳಗದವರ ಮನೆಯ ಮದುವೆಯೆಂದು ಹತ್ತಿರದವರೆಲ್ಲಾ ಒಟ್ಟು ಸೇರಿ ಮಾತನಾಡಿಕೊಂಡು ನಗೆ ಚಟಾಕಿ ಹಾರಿಸಿಕೊಂಡು ಪರಸ್ಪರರ ಕಷ್ಟ ಸುಖಗಳನ್ನು ಹಂಚಿಕೊಂಡು ಉಂಡೆ, ಚಕ್ಕುಲಿ, ತಿಂಡಿಗಳ ತಯಾರಿ, ಮದುವೆಯ ಸಾಮಾನು ಸರಂಜಾಮುಗಳನ್ನು ಅಣಿಗೊಳಿಸುವಿಕೆ. ಎಲ್ಲರ ಆತ್ಮೀಯತೆಯನ್ನು ಹೆಚ್ಚಿಸುತ್ತಿತ್ತು. ಆ ಸಂಭ್ರಮದಲ್ಲಿ ನಾವೂ ಒಂದಾಗಿ ಆಯಾಸವಾದರೂ ಅದರಲ್ಲೂ ತೃಪ್ತಿ, ಸಂತೋಷ, ನೆಮ್ಮದಿ ಇರುತ್ತಿತ್ತು. ಬೇರೆಯವರ ಹಂಗೇಕೆ ಎಂಬ ಭಾವನೆ ಹಣದಿಂದ ಕೆಲಸ ಪಡೆದುಕೊಳ್ಳುವ ದುಡಿಸಿಕೊಳ್ಳುವ ಸಿರಿವಂತಿಕೆ ಎಲ್ಲವೂ ಮದುವೆಯಂತಹ ಸಮಾರಂಭಗಳನ್ನು ಆತ್ಮೀಯತೆ, ಆಪ್ತತೆಯ ಬಳಗದಿಂದ ದೂರವೇ ಮಾಡುತ್ತದೆ.


'ಮದುವೆಯ ಓಡಾಟ, ಶಾಸ್ತ್ರ, ಪದ್ಧತಿಯನ್ನಂತೂ ಏನೂ ಹೇಳಬೇಕಾಗಿಲ್ಲ. ಮದುವೆಯನ್ನು ಎಲ್ಲಾ ವೈಭವವನ್ನು ಕಣ್ಣುಂಬಿಸಿಕೊಳ್ಳೋಣವೆಂದುಕೊಂಡ ಲಲಿತಮ್ಮ ನವರು ಪತಿಯೊಂದಿಗೆ ಮುಂದಿನ ಸಾಲಿನಲ್ಲೇ ಕುಳಿತುಕೊಂಡಿದ್ದರು.

ಪ್ರಸ್ತುತ

ಆದರೆ ಕುಳಿತವರಿಗೆ ಸ್ವಲ್ಪವೂ ಕಾಣದಂತೆ ವೀಡಿಯೋ ಕ್ಯಾಮರಾದವರು ಮುತ್ತಿಕೊಂಡು ಕೋಟೆಕಟ್ಟಿ ಬಿಟ್ಟಿದ್ದರು. ಪಕ್ಕಕ್ಕೆ ಸರಿಯುವಂತೆ ಹೇಳಿದರೆ, “ನೋಡಮ್ಮ ಇದು ನಮ್ಮ ಡ್ಯೂಟಿ. ಶಾಶ್ವತವಾಗಿರುವಂತಹುದು, ನೀವು ಯಾವಾಗ ಬೇಕಾದರೂ ಕುಳಿತು ನೋಡಬಹುದು ಎಂಬ ಉತ್ತರ. ಎರಡು ಕಡೆಗಳಲ್ಲಿ ಟಿ.ವಿ. ಪರದೆಗಳಲ್ಲಿ ಮದುವೆ ಶಾಸ್ತ್ರಗಳು ಬಿತ್ತರಗೊಳ್ಳುತ್ತಿದ್ದವು.


“ಪ್ರತ್ಯಕ್ಷ ನೋಡಲು ಅಸ್ಪದವಿರಬಾರದೆ. ಹಾಗಾದರೆ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲೇ ನೋಡಬಹುದಲ್ಲ ಎಂಬ ಅನಿಸಿಕೆಗೆ ಉತ್ತರವೆಲ್ಲಿ?


ಅರಿಶಿಣ ಕುಂಕುಮ, ಹೂವಿನ ಹರಿವಾಣಗಳನ್ನಿಟ್ಟುಕೊಂಡು ಪಾನೀಯ ಕೊಡಲು ನಿಂತಿರುವವರು. ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು (ಹೆಚ್ಚಿನವರು) ನಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಇನ್ನೂ ಊಟಕ್ಕೆಂದು ಮೊದಲನೇ ಪಂಕ್ತಿಗೆ ಸ್ಥಳ ಗಿಟ್ಟಿಸಿಕೊಳ್ಳುವ ಕಾತರ, ಇಲ್ಲವಾದರೆ ಬೇರೆಯವರು ಊಟದಿಂದ ಏಳುವ ಮುಂಚೆಯೇ ಅವರ ಹಿಂದೆ ನಿಂತು ಸ್ಥಳ ಹಿಡಿಯುವ ಪರಿಸ್ಥಿತಿ, ಮಾಡಿದ ವ್ಯಂಜನಗಳು, ಭಕ್ಷಗಳು ಒಂದಾದ ಮೇಲೊಂದರಂತೆ ಸಾಲಾಗಿ ಬರತೊಡಗುತ್ತವೆ. ಜನರು ಕಾಯುತ್ತಿರುವುದರಿಂದ ಬೇಗ ಊಟ ಮುಗಿಸಲೇ ಬೇಕಾದ ಅನಿವಾರ್ಯತೆ, ಮೊಸರು ಬಂದೊಡನೆ ಎಲೆ ಎತ್ತುವವರು ಜಾಗೃತರಾಗಿರುತ್ತಾರೆ. ಅದಕ್ಕೆಂದೇ ಕೈಊಟ (ಬಫೆಟ್) ಕೂಡಾ ಇರುತ್ತದೆ. ಅಲ್ಲಿಯೂ ನಿಲ್ಲಲು, ಕುಳಿತುಕೊಳ್ಳಲು ಜಾಗದ ಆಡಚಣೆ, ಅದಕ್ಕೆಂದೇ ಮದುವೆಗೆ, ಆರತಕ್ಷತೆಗೆ ಎಂದು ಕೆಲವರು ಪ್ರತ್ಯೇಕವಾಗಿಯೇ ಕರೆಯುತ್ತಾರೆ. ಸಮಾರಂಭ ನಡೆಸುವ ಕುಟುಂಬದವರಿಗೆ ಎಲ್ಲರನ್ನೂ ಸ್ವತಃ ಹೆಚ್ಚು ಮಾತನಾಡಿಸಲು ಸಾಧ್ಯವಾಗದು. ಅವರ ಹತ್ತಿರದ ಬಳಗದವರು, ಸ್ನೇಹಿತೆಯರು, ಬಂದ ಎಲ್ಲರನ್ನೂ ಆಪ್ತವಾಗಿ ವಿಚಾರಿಸಿಕೊಂಡರೆ ಬಂದವರಿಗೂ ಸಂತಸವಾಗುತ್ತದೆ.


ಲಲಿತಮ್ಮ ದಂಪತಿಗೆ ಈ ಮದುವೆಯ ಅನುಭವ. “ಕಾಲಾಯ ತಸ್ಯೆ ನಮಃ” ಎಂಬ ವಾಸ್ತವಕ್ಕೆ ಒಗ್ಗಿಕೊಳ್ಳಲೇಬೇಕಾದ ಪಾಠವನ್ನು ಕಲಿಸಿತ್ತು.