Index
ಕ್ಷೇತ್ರ ದರ್ಶನ
ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಆವಂತಿಕಾ ಕ್ಷೇತ್ರ
ಪಾರಿಜಾತ ಬಿ.ಎಸ್., ಬೆಂಗಳೂರು
ಎಲ್ಲಾ ಕಷ್ಟಗಳ ನಿವಾರಕನಾಗಿ, ಕಲ್ಪವೃಕ್ಷದಂತೆ ಇಷ್ಟಾರ್ಥಪ್ರದಾಯಕನಾಗಿ, ಆನಂದದಾಯಕನಾಗಿ ಇರುವ ಶ್ರೀರಾಮಚಂದ್ರನೇ ನಮ್ಮೆಲ್ಲರನ್ನು ಮುನ್ನಡೆಸುವ ಪರಮಪ್ರಭು ಎಂಬುದು ನಿಸ್ಸಂಶಯವೆಂದು ಬುಧಕೌಶಿಕ ಋಷಿಗಳು ತಮ್ಮ ಶ್ರೀರಾಮರಕ್ಷಾಸ್ತೋತ್ರದಲ್ಲಿ ಹೇಳಿರುತ್ತಾರೆ. ಸೃಷ್ಟಿ ಕರ್ತನಾದ ಬ್ರಹ್ಮನು ಈ ಬ್ರಹ್ಮಾಂಡದಲ್ಲಿ ಸೃಷ್ಟಿಸಿದ ಪ್ರತಿಯೊಂದರ ಸ್ಥಿತಿಯನ್ನು ಮೂರುಲೋಕಕ್ಕೂ ಕಾಪಾಡುವವನು ಭಗವಾನ್ ಶ್ರೀವಿಷ್ಣು, ಲಯಕರ್ತನಾದ ಮಹೇಶ್ವರನು ಉತ್ತಮ ಸದ್ಧತಿಯನ್ನು ದಯಪಾಲಿಸುವನು. ಅಂತೆಯೇ ಇದನ್ನು ಅರಿತಿರುವ ನಾವು ಹುಟ್ಟಿನಿಂದ ನಮ್ಮ ಅವಸಾನದವರೆಗೂ ಶ್ರೀವಿಷ್ಣು, ಮಹೇಶ್ವರರನ್ನು ವಿವಿಧ ರೂಪಗಳಲ್ಲಿ ಬಗೆಬಗೆಯ ರೀತಿಯಲ್ಲಿ ಪೂಜಿಸಿ ಅವರು ನೆಲೆಸಿದ ಪವಿತ್ರ ಕ್ಷೇತ್ರಗಳಲ್ಲಿ ಸೇವೆಯನ್ನು ಕೈಗೊಳ್ಳುತ್ತೇವೆ. ಶ್ರೀವಿಷ್ಣುವಿನ ಅವತಾರಗಳಲ್ಲಿ ಒಂದಾದ ರಾಮಾವತಾರವಾದ ತ್ರೇತಾಯುಗದಲ್ಲಿ ಶ್ರೀರಾಮ ಸೀತೆಯರಿಂದಲೇ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸಲ್ಪಟ್ಟ, ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯವಿರುವ ಪವಿತ್ರ ಕ್ಷೇತ್ರಗಳಲ್ಲಿ ಒಂದು ಆವಂತಿಕಾ (ಆವನಿ)ಕ್ಷೇತ್ರ,
“ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಆವಂತಿಕಾ ಪುರೀದ್ವಾರಾವತಿಚೈವ ಸಮೋಕ್ಷದಾಯಕಾಃ”
ನಮ್ಮ ಭಾರತದ ಈ ಪ್ರಮುಖ ಏಳು ಮೋಕ್ಷ ಸ್ಥಾನಗಳಲ್ಲಿ ಈ (ಆವನಿ)ಆವಂತಿಕಾ ಕ್ಷೇತ್ರವು ಒಂದೆನಿಸಿದೆ. ಇದು ಕರ್ನಾಟಕ ರಾಜ್ಯದ ಕೊಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿಗೆ ಸೇರಿದೆ. ಬೆಂಗಳೂರಿನಿಂದ ಸುಮಾರು 72 ಕಿ.ಮೀ. ಹಾಗೂ ಕೋಲಾರದಿಂದ 32 ಕಿ.ಮೀ. ದೂರದಲ್ಲಿದೆ.
ಸ್ಥಳಪುರಾಣ: ಶ್ರೀನಾರದ ಮಹರ್ಷಿಗಳಿಗೆ ಚತುರ್ಮಖ ಬ್ರಹ್ಮನು ಬ್ರಹ್ಮಾಂಡ ಪುರಾಣದಲ್ಲಿ (ಶತಕವಾಟಪುರಿ) ಹೇಳಿದ ಮುಳುಬಾಗಿಲ ಮಹತ್ಯೆಯಲ್ಲಿ ಆವಂತೀಕ್ಷೇತ್ರದ ವಿವರಣೆಯಿದೆ.
ಇಲ್ಲಿ ಸಾಕ್ಷಾತ್ ಶ್ರೀರಾಮನೇ ಶಿವನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು, ತ್ರೇತಾಯುಗದಲ್ಲಿ ಉತ್ತರ ರಾಮಾಯಣದ ಕರ್ಮಭೂಮಿಯಾಗಿ, “ವಾಲ್ಮೀಕಾಶ್ರಮ” ಎನಿಸಿ ಪ್ರಸಿದ್ಧವಾಗಿರುವ ಕ್ಷೇತ್ರವಾಗಿದೆ. ಆದರ್ಶ ಪುರುಷ ಶ್ರೀರಾಮನು ರಜಕನ ನಿಂದನೆಗೆ ಒಳಗಾದ ತನ್ನ ಪೂರ್ಣಗರ್ಭಿಣಿಯಾದ ಪತ್ನಿ ಸೀತೆಯನ್ನು ವನವಾಸಕ್ಕೆ ತಮ್ಮ ಲಕ್ಷ್ಮಣನೊಂದಿಗೆ ಕಳುಹಿಸಿದನು. ನಂತರ ಸೀತಾಮಾತೆಯನ್ನು ಲಕ್ಷ್ಮಣನು ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯಕ್ಕಾಗಿ ಬಿಟ್ಟು ಬರಲು ಅಲ್ಲಿ ಲವಕುಶರ ಜನನವಾಯಿತು. ಆ ಪವಿತ್ರ ಕ್ಷೇತ್ರವೇ ಈ ಆವಂತಿಕಾ ಕ್ಷೇತ್ರವಾಗಿದೆ. ನಂತರದ ಕಾಲದಲ್ಲಿ ಶ್ರೀರಾಮನು ಆಶ್ವಮೇಧಯಾಗವನ್ನು ಕೈಗೊಂಡು, ತಂದೆಯ ಆಶ್ವವೆಂದು ಅರಿಯದ ಲವಕುಶರು ಅದನ್ನು ತಡೆದು ಬೆಟ್ಟದ ಒಂದು ಕಲ್ಲು ಗುಂಡಿಗೆ ಕಟ್ಟಿ ಯುದ್ಧಕ್ಕೆ ನಿಲ್ಲಲು, ಈ ಪುಟ್ಟ ಬಾಲಕರ ಪೂರ್ವಾಪರ ತಿಳಿಯದ ರಾಮನ ಪರಿವಾರ ಅವರೊಂದಿಗೆ ಕಾದು ಸೋತರು. ಕೊನೆಗೆ ರಾಮನೇ ಯುದ್ಧಕ್ಕೆ ಬರಲು ವಿಷಯ ತಿಳಿದ ವಾಲ್ಮೀಕಿ ಮಹರ್ಷಿಯು ಸತ್ಯಾಂಶವನ್ನು ತಿಳಿಸಲು, ಶ್ರೀರಾಮನು ತನ್ನ ಪರಿವಾರದೊಂದಿಗೆ ಪತ್ನಿ ಪುತ್ರರ ಸಮೇತ ಈ ಸ್ಥಳದಲ್ಲಿ ನೂರು ಲಿಂಗಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಈ ಘಟನೆಗೆ ಇಂದಿಗೂ ಇಲ್ಲಿರುವ ಅನೇಕ ದೇವಾಲಯಗಳು ಸಾಕ್ಷಿಯಾಗಿವೆ. ಸೀತಾದೇವಿಯು ಇಲ್ಲಿ ನೆಲೆಸಿದ್ದಳೆಂಬುದಕ್ಕೆ ಆಕೆಯು ಪೂಜಿಸುತ್ತಿದ್ದ ಪಾರ್ವತಿ ದೇವಾಲಯ, ಅಗ್ನಿತೀರ್ಥ, ಹೊರಳುಗುಂಡು, ಲವಕುಶರು ಕುದುರೆ ಕಟ್ಟದ್ದ ಕುದುರೆ ಗುಂಡು, ವಾಲ್ಮೀಕಾಶ್ರಮ, ಅನೇಕ ಗುಹೆಗಳು, ರಾಮಸೀತೆಯರು ಪ್ರತಿಷ್ಠಾಪಿಸಿ ಪೂಜಿಸಿದ ಶ್ರೀರಾಮಲಿಂಗೇಶ್ವರ ದೇವಾಲಯ ಇತ್ಯಾದಿಗಳು ಇಲ್ಲಿ ಸಾಕ್ಷಿಯಾಗಿವೆ.
ಐತಿಹಾಸಿಕ ಹಿನ್ನೆಲೆ: ಗಂಗರು, ಪಲ್ಲವರು,ಚೋಳರು, ವಿಜಯನಗರದ ಅರಸರ ಕಾಲದಲ್ಲಿ ಈ ಕ್ಷೇತ್ರವು ಪ್ರಗತಿ ಕಂಡಿದ್ದು ಅನೇಕ ದೇವಾಲಯಗಳು, ಕೆರೆಕುಂಟೆಗಳ ನಿರ್ಮಾಣದ ಕಾರ್ಯಗಳನ್ನು ಕೈಗೊಂಡ ಬಗ್ಗೆ ಅನೇಕ ಐತಿಹಾಸಿಕ ಶಾಸನಗಳು ವೀರಗಲ್ಲುಗಳು ಇಲ್ಲಿ ದೊರೆತಿವೆ.
ಇಲ್ಲಿನ ಪ್ರಮುಖ ದೇವಾಲಯಗಳು:
ಶ್ರೀರಾಮೇಶ್ವರ ದೇವಾಲಯ: ಈ ದೇವಾಲಯವು ಸುಂದರ ಹಾಗು ಭವ್ಯವಾಗಿದ್ದು, ಸುಂದರ ಕೆತ್ತನೆಯ ಕಂಬಗಳನ್ನೊಳಗೊಂಡಿದೆ. ಭವ್ಯವಾದ ಗೋಪುರ ಹೊಂದಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮಚಂದ್ರರಿಂದ ಪ್ರತಿಷ್ಠಾಪಿಸಲ್ಪಟ್ಟ ಲಿಂಗ ರೂಪಿಯಾದ ಶ್ರೀರಾಮಲಿಂಗೇಶ್ವರ ಸ್ವಾಮಿಯು ವಿರಾಜಿಸಿದ್ದಾನೆ. ಇಲ್ಲಿ ಸಪ್ತ ಮಾತೃಕೆಯರು, ಚಂಡಿಕೇಶ್ವರ ವಿಗ್ರಹವು ಹಾಗು ಸುಖನಾಶಿಯಲ್ಲಿ ಕಾಮಾಕ್ಷಿಯ ವಿಗ್ರಹವು ಇದೆ.
ಶ್ರೀಲಕ್ಷ್ಮಣೇಶ್ವರ ಸ್ವಾಮಿ ದೇವಾಲಯ: ದಕ್ಷಿಣದಿಂದ ಉತ್ತರಕ್ಕೆ ಮೂರು ದೇವಾಲಯಗಳಿದ್ದು ಅವುಗಳಲ್ಲಿ ಶ್ರೀಲಕ್ಷ್ಮಣೇಶ್ವರ ದೇವಾಲಯವು ಒಂದಾಗಿದೆ. ಸುಂದರ ಶಿಲ್ಪಕಲೆಗಳಿಂದ ಕೂಡಿದ್ದು, ಗರ್ಭಗುಡಿಯಲ್ಲಿ ಲಕ್ಷ್ಮಣನು ಪ್ರತಿಷ್ಠಾಪಿಸಿದ ದೊಡ್ಡದಾದ ಲಿಂಗವಿದ್ದು ಇಲ್ಲಿನ ಎಲ್ಲಾ ದೇವಾಲಯಗಳಲ್ಲಿನ ವಿಗ್ರಹಗಳಿಗಿಂತ ದೊಡ್ಡದಾಗಿದೆ.
ಸೀತಾಪಾರ್ವತಿ ದೇವಾಲಯ: ಶ್ರೀರಾಮಲಿಂಗೇಶ್ವರ ದೇವಾಲಯದ ಪೂರ್ವಕ್ಕೆ ಈ ದೇವಾಲಯವಿದೆ. ಸುಂದರ ಕಂಬಗಳ ಮುಖದ್ವಾರ, ವಿಶಾಲವಾದ ನವರಂಗದಲ್ಲಿ ಬಸದಿ,
ನಂದಿಯಳವಂಜಿರಾಯ, ವಾಸುದೇವರಾಯರ ವಿಗ್ರಹಗಳು, ಸೂರ್ಯದೇವನ ವಿಗ್ರಹಗಳು ಇಲ್ಲಿವೆ. ಗರ್ಭಗುಡಿಯಲ್ಲಿನ ಪಾರ್ವತಿಯ ವಿಗ್ರಹವು ಮನೋಹರವಾಗಿದೆ. ಇಲ್ಲಿ ಮಾತೆ ಸೀತೆಯು ಪಾರ್ವತಿದೇವಿಯನ್ನು ಪ್ರತಿನಿತ್ಯವೂ ಪೂಜಿಸುತ್ತಿದ್ದಳೆಂದು ಸ್ಥಳಪುರಾಣವು ತಿಳಿಸುತ್ತದೆ.
ಶ್ರೀಭರತೇಶ್ವರ ದೇವಾಲಯ: ಚಿಕ್ಕದಾದ ನವರಂಗ, ಚಾವಣಿಯಲ್ಲಿ ಅಷ್ಟದಿಕ್ಷಾಲಕರು, ಮುಂಭಾಗದಲ್ಲಿ ನಂದಿ ವಿಗ್ರಹ ಹೊಂದಿದ್ದು, ಗರ್ಭಗುಡಿಯಲ್ಲಿ ಚಿಕ್ಕದಾದ ಭರತೇಶ್ವರ ಸ್ವಾಮಿಯ ವಿಗ್ರಹವಿದೆ.
ಇತರ ದೇವಾಲಯಗಳು: ಹನುಮಂತನಿಂದ ಪ್ರತಿಷ್ಠಾಪಿಸಲ್ಪಟ್ಟ ಹನುಮಂತೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ, ಅಂಗದೇಶ್ವರ ಮತ್ತು ಸುಗ್ರೀವೇಶ್ವರ ದೇವಾಲಯ, ಕಾಮಾಕ್ಷಿ ದೇವಾಲಯ ಇತ್ಯಾದಿ.
ಇಲ್ಲಿನ ಇತರ ಪ್ರಮುಖ ಸ್ಥಳಗಳು: ವಾಲ್ಮೀಕಪರ್ವತ ಗುಡ್ಡದ ಮೇಲಿನ ವಾಲ್ಮೀಕಾಶ್ರಮ, ಲವಕುಶರ ಜನ್ಮಸ್ಥಳವಾದ ಗುಹೆ; ಇಲ್ಲಿನ ಆಶ್ರಮದಲ್ಲಿ ಸೀತಾದೇವಿಯು ಆಶ್ರಯ ಪಡೆದಿದ್ದು, ಪಕ್ಕದ ಗುಹೆಯಲ್ಲಿ ಲವಕುಶರಿಗೆ ಜನ್ಮ ನೀಡಿದಳಂತೆ. ಇಲ್ಲಿಗೆ ಬರುವ ಭಕ್ತರು ಸಂತಾನಾಪೇಕ್ಷೆಯಿಂದ ಚೂರು ಕಲ್ಲುಗಳನ್ನು ಜೋಡಿಸಿ ಗೋಪುರದಂತೆ ಮಾಡಿ ಹರಕೆ ಹೊರುತ್ತಾರಂತೆ.
ಪಂಚಪಾಂಡವರ ಗುಡಿ: ದ್ವಾಪರ ಯುಗದಲ್ಲಿ ಇಲ್ಲಿಗೆ ಪಾಂಡವರು ಭೇಟಿ ನೀಡಿದ್ದು ಇಲ್ಲಿನ ದೇವಾಲಯವನ್ನು ನಿರ್ಮಿಸಿದ್ದಾರೆಂದು ತಿಳಿದು ಬಂದಿದೆ.
ತೊಟ್ಟಿಲ ಗುಂಡು: ಗುಡ್ಡದ ಮೇಲೆ ಬೃಹದಾಕಾರದ ಬಂಡೆಗಳು ಇದ್ದು, ಇಲ್ಲಿಂದ ಸೀತಾಮಾತೆಯು ರಾಮ ಲವಕುಶರು ನಡೆಸಿದ ಕಾಳಗವನ್ನು ವೀಕ್ಷಿಸಿದಳೆಂದು ನಂಬಿಕೆ.
ಲವಕಶರ ಗುಡಿ, ಏಕಾಂತ ರಾಮಸ್ವಾಮಿಯ ದೇವಾಲಯ, ಧನಷೋಟಿ, ಹೊರಳುಗುಂಡು, ಅಗ್ನಿ ತೀರ್ಥ, ಕುದುರೆಗುಂಡು, ಆವನಿ ಶೃಂಗೇರಿ ಶಂಕರಚಾರ್ಯಮಠ, ಅಂತರಗಂಗೆ ಇತ್ಯಾದಿ ಪ್ರಮಖವಾದವು. ಹೀಗೆ ಬೆಟ್ಟದ ತಪ್ಪಲಿನಲ್ಲಿರುವ ವಿಶಾಲವಾದ ಪ್ರದೇಶದಲ್ಲಿ ಅನೇಕ ದೇವಾಲಯಗಳಿದ್ದು, ಬಾಣನ ಶಾಸನದಲ್ಲೂ ಈ ಕ್ಷೇತ್ರದ ಬಗ್ಗೆ ವಿಶ್ಲೇಷಣೆ ಇದ್ದು ನಂತರದ ಕಾಲದ ಶಾಸನದಲ್ಲಿ “ದಕ್ಷಿಣಗಯಾ” ಎನಿಸಿದೆ.
ಇಲ್ಲಿನ ಉತ್ಸವಗಳು, ವಿಶೇಷ ಪೂಜೆಗಳು: ಮಹಾಶಿವರಾತ್ರಿಯ ಕಾಲದಲ್ಲಿ ಹತ್ತುದಿನಗಳ ಕಾಲ ಜಾತ್ರೆಯ ಬ್ರಹ್ಮರಥೋತ್ಸವವು ನೆರವೇರುತ್ತದೆ.
ಯಾತ್ರಿಕರಿಗೆ ವಿಶೇಷ ಮಾಹಿತಿ:
* ಇಲ್ಲಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಇದೆ.
* ಮಠದ ಮೂಲಕ ಸ್ಥಳ ವಿಶೇಷತೆಯನ್ನು ತಿಳಿಯ ಬಹುದಾಗಿದೆ.
* ಇಲ್ಲಿಗೆ ಕೂಡುಮಲೆ ಗಣಪ, ಮುಳುಬಾಗಿಲು, ಕೋಲಾರ, ಅಂತರಗಂಗೆ, ಬಂಗಾರ ತಿರುಪತಿ, ಕೋಟಿಲಿಂಗೇಶ್ವರ ಇತ್ಯಾದಿ ಸಮೀಪದ ಪ್ರೇಕ್ಷಣೀಯ ಸ್ಥಳಗಳು.