Index
ಪರಿಚಯ
ಸಾಮಾಜಿಕ ಮಾಧ್ಯಮದ ಸಂದರ್ಭಗಳಲ್ಲಿ ಇಂತಹ ವಿಚಾರಗಳು ಸುಂದರವಾಗಿ ಒಡ ಮೂಡುತ್ತಿರುತ್ತವೆ. ಹಲವು ಮಹಡಿಗಳ ಕಟ್ಟಡದ ಮೇಲಿನ ಮಹಡಿಗೆ ಹೋಗಲು ಲಿಫ್ಟ್ ಮುಂದೆ ಬಹಳ ದೊಡ್ಡ ಗುಂಪು ಕಾಯುತ್ತಾ ನಿಂತಿತ್ತು. ಬಂದಿಳಿದ ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆ ಇಡೀ ಗುಂಪು ಲಿಫ್ಟ್ ಒಳಗೆ ನುಗ್ಗಿತು. ಆದರೆ ಲಿಪ್ಪನೊಳಗೆ ಸೇರಿದ ಜನರ ಭಾರವನ್ನು ತಡೆಯಲಾಗದೆ ಅದು ಮೇಲೇರಲಾಗದೆ ನಿಂತೇ ಬಿಟ್ಟಿತು. ಎಲ್ಲರಿಗೂ ಆದಷ್ಟು ಬೇಗ ಹತ್ತಿ ಹೋಗುವ ಆತುರ. ಯಾರಾದರೂ ಒಬ್ಬರೋ ಇಬ್ಬರೋ ಹೊರ ಬಂದರೆ ಲಿಫ್ಟ್ ಮೇಲೆ ಹತ್ತಿ ಹೋಗುತ್ತದೆ. ಇದು ಕೂಡ ಎಲ್ಲರಿಗೂ ಗೊತ್ತು. ಆದರೆ ಯಾರಿಗೂ ತಮ್ಮ ಅವಕಾಶವನ್ನು ಬಿಟ್ಟುಕೊಡಲು ಮನಸ್ಸಿಲ್ಲ. ಎಲ್ಲರೂ ಇನ್ನೊಬ್ಬನು ಹೊರ ಹೋಗಲಿ ಎಂದು ನಿರೀಕ್ಷಿಸುವವರೇ! ಆ ನಡುವೆ ಆ ಗುಂಪಿನ ನಡುವಿನಿಂದ ದಾರಿ ಮಾಡಿಕೊಂಡು ಒಬ್ಬ ತರುಣಿ ಅಪ್ಪನಿಂದ ಹೊರ ಬಂದಳು. ಆಗ ಲಿಫ್ಟ್ ಸದ್ದು ಮಾಡಿಕೊಂಡು ಮೇಲೆ ಹತ್ತಲು ಪ್ರಾರಂಭಿಸಿತು. ಸಿಕ್ಕಿದ ಅವಕಾಶವನ್ನು ಬಿಡಬಾರದೆಂದು ಅದರಲ್ಲೇ ಉಳಿದುಕೊಂಡು ಮೇಲೆ ಹೋಗುತ್ತಿದ್ದ ಗುಂಪು, ತನ್ನ ಅವಕಾಶವನ್ನು ಬಿಟ್ಟು ಉಳಿದವರಾದರೂ ಮೇಲೆ ಹೋಗಲಿ ಎಂದುಕೊಂಡ ತರುಣಿಯನ್ನು ನೋಡುತ್ತಿದ್ದರೆ ಆಕೆ ತನ್ನ ಕಂಕುಳಲ್ಲಿ ಊರುಗೋಲನ್ನು ಹಿಡಿದುಕೊಂಡ ಅಂಗವಿಕಲೆಯಾಗಿದ್ದಳು.
ಹೀಗೆ ತಮ್ಮ ಅನಾನುಕೂಲವನ್ನು ಗಣಿಸದೆ ತಮ್ಮ ಸಹಜ ವರ್ತನೆಯಿಂದ ಪರರು ಒಂದಿಷ್ಟು ಸುಖಿಗಳಾಗಲಿ ಎಂದು ಭಾವಿಸುವವರಿರುತ್ತಾರೆ. ಬೇರೆಯವರಿಗಾಗಿ ತೋರುವ ಈ ಅನುಕಂಪವೇ ಜಗತ್ತು ಸುಂದರವಾಗಲು ಕಾರಣವಾಗುತ್ತದೆ. ವಾಲ್ಮೀಕಿ ಋಷಿ ತಮ್ಮ ರಾಮಾಯಣ ಕಾವ್ಯದಲ್ಲಿ ಇಂತಹ ಸದ್ವರ್ತನೆಯ ದೃಷ್ಟಾಂತಗಳನ್ನು ಚಿತ್ರಿಸುತ್ತಾ ಹೋಗುತ್ತಾರೆ. ಶ್ರೀರಾಮನು ತನ್ನ ಬಾಲ್ಯದಲ್ಲೇನೆ ಇಂತಹ ಗುಣಗಳನ್ನು ತೋರ್ಪಡಿಸುತ್ತಿದ್ದ ಎಂದು ಅವರು ಹೇಳುತ್ತಾರೆ. ನಾಲ್ವರು ಸೋದರರಲ್ಲಿ ಶ್ರೀ ರಾಮನೇ ಹಿರಿಯವನು. ಆಟೋಟಗಳಲ್ಲಿ ಸ್ವಾಭಾವಿಕವಾಗಿ ಅವನೇ ಗೆಲ್ಲುತ್ತಿದ್ದುದು. ಆದರೆ ರಾಮನ ರೀತಿಯೇ ಬೇರೆಯಾಗಿದ್ದಿತು ಎಂದು ವಾಲ್ಮೀಕಿ ಹೇಳುತ್ತಾರೆ. ಭರತನ ಜೊತೆ ಆಡುತ್ತಾ ಇರುವಾಗ ತಾನಿನ್ನು ಗೆಲ್ಲುವ ಹಂತದಲ್ಲಿ ಇರುವೆ ಎಂದು ಶ್ರೀರಾಮನು ತಿಳಿಯುತ್ತಿದ್ದಂತೆ ಉದ್ದೇಶಪೂರ್ವಕವಾಗಿ ಸೋತು ಬಿಡುತ್ತಿದ್ದನಂತೆ. ಭರತನು ಗೆಲ್ಲಲಿ ಮತ್ತು ಅವನಿಗೆ ಆಟದಲ್ಲಿ ಗೆದ್ದೆ ಎನ್ನುವ ಸಂತೋಷ ಉಂಟಾಗಲಿ ಎಂದುಕೊಳ್ಳುತ್ತಿದ್ದನಂತೆ.
ಶ್ರೀ ರಾಮನ ಇಂತಹ ಉದಾತ್ತ ಗುಣಗಳ ಪರಿಚಯವಿದ್ದುದ್ದರಿಂದಲೇ ಆ ದಿನ ಅವನು ವನವಾಸಕ್ಕೆ ಹೊರಡಲಿರುವನೆಂದು ಕೇಳಿದ ಪ್ರಜೆಗಳು ದುಃಖಿತರಾಗಿದ್ದರು. ಎಷ್ಟೆಂದರೆ, ಅಂದು ಚೊಚ್ಚಲ ಮಗುವಿಗೆ ಜನ್ಮ ಕೊಟ್ಟ ತಾಯಂದಿರು ಅತೀವ ಬೇಸರದಿಂದ ತಮ್ಮ ಮಗು ಹುಟ್ಟಿದ ಘಳಿಗೆಯಲ್ಲಿ ರಾಮನು ಕಾಡಿಗೆ ಹೋಗುವಂತಾಯಿತಲ್ಲ ಎಂದು ಮಗುವಿಗೆ ಎದೆ ಹಾಲು ನೀಡಲಿಲ್ಲವಂತೆ. ಹೀಗೆ ಉದಾತ್ತರು ಸಹಜವಾಗಿ ಎಂಬಂತೆ ನಡೆದುಕೊಳ್ಳುವಷ್ಟರಿಂದಲೇ ಸುತ್ತ ಇದ್ದವರು ಸುಖ ಸಂತೋಷಗಳನ್ನು ಅನುಭವಿಸುತ್ತಾರೆ. ಈ ಮೂಲಕ ಜಗತ್ತು ಸುಂದರವಾಗಿ ಕಾಣುತ್ತದೆ. ಅಷ್ಟೇ ಸಾಕು. ಇಲ್ಲಿ ಬದುಕಬಹುದು ಎಂದು ಅನಿಸುತ್ತದೆ.